ನಿನ್ ಬಿನ್.. ಜಾಂವೂ ಕಹಾಂ...!
ವಿಯೆಟ್ನಾಮ್ ನಲ್ಲಿ ಹಿಂದಿ ಸೀರಿಯಲ್ ಗಳು ಕೂಡ ಭಾರಿ ಜನಪ್ರಿಯ! ವಿಯೆಟ್ನಾಮೀಸ್ ಭಾಷೆಗೆ ಡಬ್ ಆಗಿ ಪ್ರಸಾರವಾಗುತ್ತವೆ. 'ನನ್ನ ಹೆಂಡತಿ ಮತ್ತು ಅಮ್ಮ ಇಬ್ಬರೂ ಸಹಮತದಿಂದ ಇರುವುದು' ಬಾಲಿಕಾ ವಧು' ಸೀರಿಯಲ್ ನೋಡುವಾಗ ಎಂದು ನಕ್ಕ ನಮ್ಮ ಡ್ರೈವರ್ ವಿಯೆಟ್ನಾಮ್ ನ ಇನ್ನೊಂದು ಮುಖ ಪರಿಚಯಿಸಿದ.
- ರಂಗಸ್ವಾಮಿ ಮೂಕನಹಳ್ಳಿ
ಒಮ್ಮೊಮ್ಮೆ ಅನಿಸುತ್ತೆ.. ಆಕಸ್ಮಾತ್ ನಾನಿಲ್ಲಿಗೆ ಬಂದಿಲ್ಲದಿದ್ದರೂ, ನಾನು ಕೂತ ಟ್ಯಾಕ್ಸಿ ಗಳು, ಉಂಡ ಹೊಟೇಲ್ ಗಳು, ಕಂಡ ಮಾನ್ಯೂಮೆಂಟ್ ಗಳು ಎಲ್ಲ ಹಾಗೆಯೇ ಇರುತ್ತಿದ್ದವು. ಅವೇನೂನು ನನ್ನ ಬರುವಿಗೆ ಕಾಯುತ್ತಿರಲಿಲ್ಲ! ಹಾಗಾದರೆ ಇಲ್ಲಿ ಕಳೆದುಕೊಳ್ಳುತ್ತಿರುವವರು ಯಾರು? ಈ ಪ್ರಶ್ನೆ, ಈ ರೀತಿಯ ಭಾವನೆ ಉಂಟಾಗಿದ್ದು ನಿನ್ಹ್ ಬಿನ್ಹ್ ಹಳ್ಳಿಯನ್ನು ನೋಡಿದ ನಂತರ. ಹೌದು, ಆಕಸ್ಮಾತ್ ಇಲ್ಲಿಗೆ ಬರದೆ ಹೋಗಿದ್ದರೆ ನಿಶ್ಚಿತವಾಗಿ ನಷ್ಟವಂತೂ ನನ್ನದೇ.
ನಿನ್ಹ್ ಬಿನ್ಹ್ (Ninh binh) ಹಳ್ಳಿ ದಕ್ಷಿಣ ವಿಯೆಟ್ನಾಂ ನ ಕೊನೆಯಲ್ಲಿದೆ. ಉತ್ತರ ವಿಯೆಟ್ನಾಮ್ ಪ್ರಾರಂಭದಲ್ಲಿ ರೆಡ್ ರಿವರ್ ಡೆಲ್ಟಾ ತಪ್ಪಲಿನಲ್ಲಿ ನೆಲೆಯಾಗಿದೆ. ಇದನ್ನು ವಿಯೆಟ್ನಾಂ ಪ್ರವಾಸಿತಾಣಗಳ ರಾಜ ಎಂದು ಕರೆಯಲು ಅಡ್ಡಿಯಿಲ್ಲ. ಇದನ್ನು ಇಲ್ಲಿಯ ಟ್ರಾವೆಲ್ ಏಜೆಂಟ್ ಗಳು ಪರ್ಲ್ ಆಫ್ ವಿಯೆಟ್ನಾಂ , ಜೆಮ್ ಆಫ್ ವಿಯೆಟ್ನಾಂ .. ಹೀಗೆ ಇನ್ನೂ ಹತ್ತಾರು ಹೆಸರಿನಿಂದ ಕರೆಯುತ್ತಾರೆ. ಹನೋಯಿ ನಗರದಿಂದ ಇಲ್ಲಿಗೆ ಬಸ್, ಟ್ರೇನ್ ಅಥವಾ ಕಾರು ಮಾಡಿಕೊಂಡು ಬರಬಹುದು. ನೂರು ಕಿಲೋಮೀಟರ್ ಗಿಂತ ಸ್ವಲ್ಪ ಕಡಿಮೆ ಅಂತರದಲ್ಲಿದೆ. ಎರಡರಿಂದ ಎರಡೂವರೆ ಗಂಟೆಯಲ್ಲಿ ಇಲ್ಲಿಗೆ ಬಂದು ತಲುಪಬಹುದು. ಬಸ್ ಅಥವಾ ಟ್ರೇನ್ ಬಜೆಟ್ ಟ್ರಾವೆಲರ್ ಗಳಿಗೆ ಹೇಳಿ ಮಾಡಿಸಿದಂತಿದೆ. ಹಣದ ಉಳಿತಾಯದ ಜೊತೆಗೆ ಹೊಸ ಅನುಭವ ಕೂಡ ಪಡೆಯಬಹುದು. ಮೂರು ಕಡೆ ಕಡಿದ ಶಿಲೆಗಳಂತೆ ಕಾಣುವ ಪರ್ವತದ ನಡುವೆ ಸೀಳಿ ಕೊಂಡು ಹರಿಯುವ ನೀರಿನಲ್ಲಿ ಎರಡು ಗಂಟೆ ಹುಟ್ಟುಹಾಕುತ್ತ ಹೋಗುವುದು ಅನುಭವಿಸಿಯೇ ತೀರಬೇಕು. ಆಸ್ಟ್ರಿಯಾ , ಸ್ವಿಸ್ , ಲಿಚೆನ್ಸ್ಟೈನ್, ದಕ್ಷಿಣ ಫ್ರಾನ್ಸ್ ನ ನೈಸರ್ಗಿಕ ಸೌಂದರ್ಯ ಸವಿದ ಮೇಲೆ ಹುಬ್ಬೇರುವಂಥ ಸ್ಥಳಗಳು ನನಗೆ ಸಿಕ್ಕಿದ್ದೇ ಕಡಿಮೆ ಅಥವಾ ಬೇಡದ ತುಲನೆ ಮಾಡುವ ಮನಸ್ಸಿನ ಮೌಢ್ಯವೂ ಇರಬಹುದು.

ನಿನ್ಹ್ ಬಿನ್ಹ್ ನಿಸ್ಸಂದೇಹವಾಗಿ ಕಡಿಮೆ ದುಡ್ಡಿನಲ್ಲಿ ಮೇಲೆ ಹೇಳಿದ ಎಲ್ಲಾ ದೇಶಗಳಿಗೆ ಸೆಡ್ಡು ಹೊಡೆಯುವಂಥ ಪ್ರಕೃತಿ ಸೌಂದರ್ಯದ ಗಣಿ. ಕೆಲವೊಮ್ಮೆ ನಾವು ತೆಗೆದ ಫೊಟೋಗಳೇ ಇರಬಹುದು, ಬರೆದ ಸಾಲುಗಳೇ ಇರಬಹುದು, ಅವು ಪೂರ್ಣವಾಗಿ ಅಲ್ಲಿಯ ಪ್ರಕೃತಿಯನ್ನು ಹಿಡಿದಿಡುವಲ್ಲಿ ಖಂಡಿತ ಯಶಸ್ವಿಯಾಗುವುದಿಲ್ಲ. ಇದಕ್ಕೆ ಒಂದೇ ಮದ್ದು ಅಂದ್ರೆ, ಸಮಯ ಮಾಡಿಕೊಂಡು ಈ ಸೌಂದರ್ಯವನ್ನು ಸವಿಯುವುದು. ಪ್ರತಿ ಮೂವರು ಅಥವಾ ನಾಲ್ಕು ಜನರಿಗೆ ಒಂದು ಸಣ್ಣ ದೋಣಿಯನ್ನು ಕೊಡುತ್ತಾರೆ. ಹುಟ್ಟು ಹಾಕಲು ಸ್ಥಳೀಯ ನಾವಿಕರು ನಮ್ಮ ಜೊತೆಯಲ್ಲಿ ಇರುತ್ತಾರೆ. ಜೊತೆಗೆ ಇಷ್ಟ ಪಟ್ಟು ನಾವೇ ಹುಟ್ಟು ಹಾಕುತ್ತೇವೆ ಎಂದರೆ ಅದೂ ಕೂಡ ಮಾಡಬಹುದು. ನಮ್ಮದು ಏಳು ಜನರ ತಂಡ. ನಾಲ್ಕು ಜನ ಒಂದರಲ್ಲಿ ಉಳಿದ ಮೂವರು ಒಂದರಲ್ಲಿ ಕುಳಿತೆವು. ಸ್ವಂತ ಹುಟ್ಟು ಹಾಕುತ್ತ ಹೀಗೆ ಗಂಟೆಗಟ್ಟಲೆ ನೀರಿನ ಮೇಲೆ ಪ್ರಯಾಣಿಸಿದ್ದು ಇದೇ ಮೊದಲು.
ಎರಡು ಗಂಟೆಗೂ ಮೀರಿದ ಪ್ರಯಾಣದಲ್ಲಿ ಒಂದೆರಡು ಗವಿಗಳು (ಕೇವ್) ಎದುರಾದವು. ಹಾಡಹಗಲೇ ರಾತ್ರಿಯ ಅನುಭವ ಕಟ್ಟಿಕೊಟ್ಟವು. ಜೊತೆಗೆ ಸಣ್ಣದಾಗಿ ಜಿನುಗುವ ನೀರಿನ ಹನಿಗಳು ನಮ್ಮ ಮೇಲೆ ಬೀಳುತ್ತಿದ್ದವು! ಅದೊಂದು ಅನುಭವಿಸಿಯೇ ತೀರಬೇಕಾದ ಅನುಭವ! ಕೊನೆಯ ಗವಿಯ ಬಳಿ ತಮ್ಮ ಸಣ್ಣ ಪುಟ್ಟ ದೋಣಿಗಳಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುವ ವಿಯೆಟ್ನಾಮಿ ಮಹಿಳೆಯರು ಸಿಕ್ಕರು. ಬಾಯಾರಿದೆಯೇ? ಕೋಕಾಕೋಲಾ ತಗೊಳ್ಳಿ. ನೀರು ಬೇಕೇ? ಹೀಗೆ ನಯವಿನಯದಿಂದ ಮಾತನಾಡಿ ತಮ್ಮ ಬಳಿ ಇದ್ದ ವಸ್ತುವನ್ನು ತಮಗೆ ಬಂದ ಭಾಷೆಯಲ್ಲಿ ಮಾರಲು ಪ್ರಯತ್ನಿಸುತ್ತಿದ್ದರು. ಇದಕ್ಕೆ ಬಗ್ಗದ ಜನರಿಗೆ 'ನೋಡಿ ಪಾಪ ನಿಮ್ಮ ಭಾರವನ್ನೆಲ್ಲ ಕೇವಲ ತಾನೊಬ್ಬಳೇ ಹುಟ್ಟು ಹಾಕುತ್ತಿದ್ದಾಳೆ. ಅವಳು ದಣಿದಿದ್ದಾಳೆ. ಅವಳಿಗಾದರೂ ಒಂದು ಎನರ್ಜಿ ಡ್ರಿಂಕ್ ಕೊಡಿಸಿ' ಎಂದು ದಂಬಾಲು ಬೀಳುತಿದ್ದರು.

ಈ ಮಧ್ಯೆ ನಮ್ಮ ವೇಗಕ್ಕೆ ತಕ್ಕಂತೆ ನಮ್ಮ ಹಿಂದೆ ಮುಂದೆ ನಮ್ಮ ಫೋಟೋ ತೆಗೆಯುವ ನುರಿತ ಫೊಟೋಗ್ರಾಫರ್ ಗಳ ದಂಡು ಬೇರೆ! ಹೌದು ನಿಮ್ಮ ಹಿಂದೆಯೇ ಅವರೂ ಹುಟ್ಟು ಹಾಕುತ್ತ ಬಂದು ಉತ್ತಮ ಸ್ಥಳಗಳಲ್ಲಿ ನಮಗರಿವಿಲ್ಲದೆ ಕೆಲವೊಮ್ಮೆ ಅನುಮತಿ ಪಡೆದು ಫೋಟೋ ತೆಗೆಯುತ್ತಾರೆ. ಪ್ರಯಾಣ ಮುಗಿಸಿ ದಡ ತಲುಪುವ ವೇಳೆಗೆ ನಮ್ಮ ಫೋಟೋ ಆಲ್ಬಮ್ ಸಿದ್ಧವಿರುತ್ತದೆ!
ಒಂದು ದಿನ ಎನ್ನುವುದು ಅದೆಷ್ಟು ಕಡಿಮೆ ಅವಧಿ ಎನ್ನುವ ಅರಿವು ನಿನ್ಹ್ ಬಿನ್ಹ್ ಮಾಡಿಸಿತು. ಎರಡೂವರೆ ಗಂಟೆ ಹುಟ್ಟು ಹಾಕಿಯೂ ಕೈಕಾಲಿನಲ್ಲಿ ನೋವಿನ ಛಾಯೆಯೂ ಇರಲಿಲ್ಲ. ನೀವು ವಿಯೆಟ್ನಾಮಿನಲ್ಲಿ ಏನನ್ನಾದರೂ ನೋಡಿ ಅಥವಾ ಬಿಡಿ ನಿನ್ಹ್ ಬಿನ್ಹ್ ನೋಡಲು ಮರೆತರೆ ಅರ್ಥ ನೀವು ವಿಯೆಟ್ನಾಮ್ ಪ್ರವಾಸಿ ತಾಣಗಳ ಮುಕುಟಮಣಿಯನ್ನು ನೋಡದ ಹಾಗೆ! ನನ್ನ ಮಟ್ಟಿಗಂತೂ ವಿಯೆಟ್ನಾಮ್ ಅಂದರೆ ನಿನ್ಹ್ ಬಿನ್ಹ್ !
ಹಿಂದಿ ಚಲಚಿತ್ರಗಳು ಮೊರಾಕ್ಕೋನಿಂದ ಹಿಡಿದು ಜಪಾನ್, ಜರ್ಮನಿ, ರಷ್ಯಾ, ಫ್ರಾನ್ಸ್, ಮಲೇಷ್ಯಾದಲ್ಲಿ ಪ್ರಸಿದ್ಧಿ ಎನ್ನುವುದು ಗೊತ್ತಿತ್ತು. ಆದರೆ ವಿಯೆಟ್ನಾಮ್ ನಲ್ಲಿ ಹಿಂದಿ ಸೀರಿಯಲ್ ಗಳು ಕೂಡ ಭಾರಿ ಜನಪ್ರಿಯ! ವಿಯೆಟ್ನಾಮೀಸ್ ಭಾಷೆಗೆ ಡಬ್ ಆಗಿ ಪ್ರಸಾರವಾಗುತ್ತವೆ. 'ನನ್ನ ಹೆಂಡತಿ ಮತ್ತು ಅಮ್ಮ ಇಬ್ಬರೂ ಸಹಮತದಿಂದ ಇರುವುದು' ಬಾಲಿಕಾ ವಧು' ಸೀರಿಯಲ್ ನೋಡುವಾಗ ಎಂದು ನಕ್ಕ ನಮ್ಮ ಡ್ರೈವರ್ ವಿಯೆಟ್ನಾಮ್ ನ ಇನ್ನೊಂದು ಮುಖ ಪರಿಚಯಿಸಿದ.
ನಾವೆಲ್ಲಾ ಮೂಲದಲ್ಲಿ ಒಂದೇ ಎನ್ನುವ ವಿಷಯ ಪ್ರತಿ ದೇಶ ಭೇಟಿ ಕೊಟ್ಟ ನಂತರ ನನಗೆ ಮತ್ತಷ್ಟು ಮನದಟ್ಟಾಗುತ್ತೆ. ಇಲ್ಲಿ ಆಮೆಯನ್ನು (ಕೂರ್ಮಾವತಾರ?) ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಇಲ್ಲಿನ ಬುದ್ಧನ ದೇವಾಲಯದಲ್ಲಿ ಇರುವ ಆಮೆಯ ತಲೆಯನ್ನು ಮುಟ್ಟುವುದರಿಂದ ಅದೃಷ್ಟ ಜೊತೆಯಾಗುತ್ತೆ ಎನ್ನುವುದು ಇಲ್ಲಿನ ಜನರ ನಂಬಿಕೆ! ಕೇಳೋದಿನ್ನೇನು ಆಮೆಯ ತಲೆ ಸವರಿ ಸವರಿ ಅದರ ಬಣ್ಣವೇ ಬದಲಾಗಿದೆ. ದೇವಾಲಯದ ಹೊರಗೆ ಇದನ್ನೇ ಬಂಡವಾಳ ಮಾಡಿಕೊಂಡ ಮಹಿಳೆ ಆಮೆ ಮರಿಗಳನ್ನು ಬಕೆಟ್ ನಲ್ಲಿ ಹಾಕಿಕೊಂಡು ಕೂತಿರುತ್ತಾಳೆ. ಜನ ಎರಡು ಡಾಲರ್ ತೆತ್ತು ಅದನ್ನು ಕೊಂಡು ಕೊಳಕ್ಕೆ ಬಿಡುತ್ತಾರೆ. ಹೀಗೆ ಬಿಡುವ ಮುನ್ನ ಮನದಲ್ಲಿನ ಆಸೆ ಹೇಳಿಕೊಂಡರೆ ಅದು ಈಡೇರುತ್ತಂತೆ!
ವಿಯೆಟ್ನಾಂ ದೇಶದ ಜನಸಂಖ್ಯೆ 9.5 ಕೋಟಿ. ಅದರಲ್ಲಿ ಹತ್ತು ಪ್ರತಿಶತಕ್ಕೂ ಹೆಚ್ಚು ಸೀನಿಯರ್ ಸಿಟಿಜನ್ಸ್! ಇನ್ನೆರಡು ದಶಕದಲ್ಲಿ ಇಲ್ಲಿಯ ಜನಸಂಖ್ಯೆಯ 35 ಪ್ರತಿಶತ ಸೀನಿಯರ್ ಸಿಟಿಜನ್ ಪಟ್ಟಿಗೆ ಸೇರುತ್ತಾರೆ. ಈಗಾಗಲೇ ಹಲವು ಹಳ್ಳಿಗಳಲ್ಲಿ ಯುವ ಜನತೆ ಹುಡುಕಿದರೂ ಸಿಗುವುದಿಲ್ಲ. ಇಲ್ಲಿಯ ಹಳ್ಳಿಗಳ ರಸ್ತೆಯ ಮಧ್ಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ನೃತ್ಯದಂಥ ಹಲವು ಕಾರ್ಯಗಳನ್ನು ವಯೋವೃದ್ಧರು ನಡೆಸುವುದು ಸಾಮಾನ್ಯ ದೃಶ್ಯವಾಗಿದೆ. ಹನೋಯಿ ಈ ದೇಶದ ರಾಜಧಾನಿ. ಇಲ್ಲಿ ಫ್ರೆಂಚ್ ಮಾತನಾಡುವರ ಸಂಖ್ಯೆ ಬಹಳವಿದೆ. ಫ್ರೆಂಚರ ವಸಾಹತು ಆಗಿದ್ದರ ನೆನಪು ತರುವ ಫ್ರೆಂಚ್ ಶೈಲಿಯ ವಾಸ್ತುಶಿಲ್ಪ ಉಳ್ಳ ಕಟ್ಟಡಗಳು ಕೂಡ ಹೇರಳವಾಗಿವೆ.
ಎಲ್ಲ ಅನುಭವಗಳೂ ಒಳ್ಳೆಯವೇ! ಕೆಲವು ನೆನಪಿನ ಬುತ್ತಿ ಹಿಗ್ಗಿಸುತ್ತವೆ. ಕೆಲವೊಂದು ಅನುಭವಗಳು ಪಾಠ ಕಲಿಸುತ್ತವೆ. ಹೀಗೆ ಪಾಠ ಕಲಿಸುವ ಅನುಭವವೂ ಆಯಿತು. ಹನೋಯಿ ನಗರ ಅತ್ಯಂತ ಜನನಿಬಿಡ. ಸಾಯಂಕಾಲವಾದರಂತೂ ಹೊರಗೆ ಕಾಲಿಡುವುದೇ ಬೇಡ ಅನ್ನುವಷ್ಟು ಜನಸಂದಣಿ. ಸಂಸಾರ ಸಮೇತ ಇಂಡಿಯನ್ ರೆಸ್ಟೋರಂಟ್ ನಲ್ಲಿ ಊಟ ಮುಗಿಸಿ ಟ್ಯಾಕ್ಸಿ ಗಾಗಿ ಕಾಯುತ್ತ ನಿಂತಿದ್ದೆವು. ಮೋಟಾರ್ ಬೈಕ್ ನಲ್ಲಿ ಬಂದ ವ್ಯಕ್ತಿ ಹೆಲ್ಮೆಟ್ ತೆಗೆದು ಕಣ್ಣು ಹೊಡೆದು 'ಮಸಾಜ್ ಮಸಾಜ್' ಎಂದು ಮುಖ ನೋಡಿದ. ನಾನು ಬೇಡವೆನ್ನುವಂತೆ ಕೈ ಆಡಿಸಿದರೂ ಬಿಡದೆ ವ್ಯಾಪಾರ ಕುದುರಿಸಿಯೇ ಸಿದ್ಧ ಎನ್ನುವಂತಿತ್ತು ಅವನ ಹಾವಭಾವ. ಅವನನ್ನು ಸಾಗು ಹಾಕುವುದರಲ್ಲಿ ಮತ್ತೊಬ್ಬ ಪ್ರತ್ಯಕ್ಷ! ಮತ್ತದೇ ರಿಪೀಟ್. ಊರೆಂದ ಮೇಲೆ ಹೊಲಸು ಇರಲೇಬೇಕಲ್ಲವೆ? ಜಗತ್ತಿನ ಅತ್ಯಂತ ಹಳೆಯ ವೃತ್ತಿ ಇಲ್ಲೂ ಅಭಾದಿತ.
ನೀವು ವಿಯೆಟ್ನಾಮ್ ಗೆ ಪ್ರಯಾಣಿಸುವರಿದ್ದರೆ ಇಲ್ಲಿ ಟಿಪ್ಸ್ ಕೊಡುವುದು ಅತ್ಯಂತ ಮುಖ್ಯವಾಗಿ ಮಾಡಲೇಬೇಕಾದ ಕೆಲಸ. ಭಾಷೆಯ ತೊಂದರೆ, ಸಂಕೋಚ ಹೀಗೆ ಹಲವು ಕಾರಣದಿಂದ ಬಹಳ ಜನ ನಿಮ್ಮ ಟಿಪ್ಸ್ ಕೇಳದೆ ಇರಬಹುದು. ಇಲ್ಲಿನ ಸಾಮಾನ್ಯನ ಸಂಭಾವನೆ ಅತ್ಯಂತ ಕಡಿಮೆ. ಹೀಗಾಗಿ ಟಿಪ್ಸ್ ಕೊಡುವುದು ಇಲ್ಲಿಯ ಸಂಪ್ರಾಯದವಾಗಿ ಹೋಗಿದೆ. ಅವರು ಕೇಳಲಿ ಬಿಡಲಿ ಒಂದಷ್ಟು ಟಿಪ್ಸ್ ಕೊಟ್ಟರೆ ಕಳೆದುಕೊಳ್ಳುವುದು ಏನೂ ಇಲ್ಲ. ಬದಲಿಗೆ ಹಸನ್ಮುಖದಿಂದ ಅರೆಬಾಗಿ ನಿಮಗೆ ವಂದಿಸುತ್ತಾರೆ. ಆ ನಗುವಿಗೆ ಆ ಪ್ರೀತಿ ಗೌರವಕ್ಕೆ ಬೆಲೆ ಕಟ್ಟಲಾದೀತೆ? ವಿಯೆಟ್ನಾಮ್ ಗೆ ಪ್ರಯಾಣಿಸಲು ಇದು ಸೂಕ್ತ ಸಮಯ. ತಡವಿನ್ನೇಕೆ ಹೊರಡಿ. ಶುಭ ಪ್ರಯಾಣ .