ನಾರ್ವೆ ರೈಲಿನಲ್ಲೊಂದು ಸೌಂದರ್ಯ ಸಮರ
ಅಲ್ಲಿ ಏಪ್ರಿಲ್ ತಿಂಗಳಲ್ಲಿ ಆಗಷ್ಟೇ ಚಳಿಗಾಲ ಮುಗಿದು ವಸಂತ ಶುರುವಾಗುವ ಹೊತ್ತು. ದಿನಗಳು ದೀರ್ಘ. ಸೂರ್ಯಾಸ್ತಕ್ಕೆ ರಾತ್ರಿ ಎಂಟು ಅಥವಾ ಒಂಬತ್ತು ಗಂಟೆಗೆ. ಬರ್ಗನ್ ಮಾರ್ಗದುದ್ದಕ್ಕೂ ಕಾಣುವುದು ಎತ್ತರದ ಗುಡ್ಡಗಳು, ಹಳದಿ, ಕಂದು ಬಣ್ಣದ, ಹಸಿರಾಗಲು ಹಾತೊರೆಯುತ್ತಿರುವ ಗಿಡಮರಗಳು, ತಳ ಕಾಣುವಷ್ಟು ಶುದ್ಧವಾದ ಹಿಮನದಿಗಳು ಮತ್ತು ದೊಡ್ಡದೊಡ್ಡ ಸರೋವರಗಳು.
- ಶ್ರೀ ತಲಗೇರಿ
ಮಲೆನಾಡು, ಕರಾವಳಿ ಕಡೆಯವರಾದರೆ ಊರಲ್ಲಿ ಝರಿ, ಹಳ್ಳ, ನದಿಗಳನ್ನು ನೋಡದೇ ಇರುವುದಕ್ಕೆ ಸಾಧ್ಯವೇ ಇಲ್ಲ. ತೋಟಗಳ ಮಧ್ಯವೇ ಹಳ್ಳ ತೊರೆಗಳು ಹರಿದುಹೋಗುತ್ತವೆ. ಮಳೆಗಾಲದಲ್ಲಂತೂ ಬೆಟ್ಟದ ತುದಿಗಳಿಂದ ಸಣ್ಣಸಣ್ಣ ಜಲಪಾತಗಳು ಹುಟ್ಟಿಕೊಂಡಂತೆ ಭಾಸವಾಗುತ್ತದೆ ಹಾಗೂ ಎಲ್ಲಾ ಕಡೆಯೂ ಜುಳುಜುಳು ನಿನಾದ ಕೇಳುತ್ತಲೇ ಇರುತ್ತದೆ. ಬೆಟ್ಟಗುಡ್ಡಗಳು, ಚಾರಣ ಇದ್ಯಾವುದೂ ಹೊಸತಲ್ಲ ಇಲ್ಲಿನವರಿಗೆ. ರಸ್ತೆಯ ಅಕ್ಕಪಕ್ಕ ಮರಗಿಡಗಳು, ದೂರದಲ್ಲಿ ಕಾಣುವ ದಟ್ಟ ಕಾಡು, ಎತ್ತರದಿಂದ ಜಾರುಬಂಡೆ ಆಡುವುದಕ್ಕೆಂದೇ ಇರುವಂತೆ ಕಾಣುವ ಹಸಿರು ಗುಡ್ಡಗಳ ಜಾಗದಿಂದ ಬಂದವರಿಗೆ ಇನ್ನೆಂಥ ದೃಶ್ಯವೈಭವವನ್ನು ತೋರಿಸುವುದಕ್ಕೆ ಸಾಧ್ಯ?
ಹಾಗಂದುಕೊಂಡಿದ್ದ ನಮಗೆ, ಬರ್ಗನ್ ಮಾರ್ಗ ತೋರಿಸಿದ್ದು ಬೇರೆಯದೇ ಜಗತ್ತನ್ನು. ಅದರಲ್ಲೇನು ವಿಶೇಷ ಉಂಟು, ಊರಲ್ಲಿ ನೋಡಿದ ಅದೇ ನೀರಿನ ಹರಿವು ಇಲ್ಲೂ ಇದೆ ಅಂತನ್ನಿಸದ ಹಾಗೆ ಮಾಡುವ ಚಮತ್ಕಾರಿ ರೈಲು ಮಾರ್ಗ ಅದು.

ಬರ್ಗನ್ ಒಂದು ಕಾಲದಲ್ಲಿ ನಾರ್ವೆಯ ರಾಜಧಾನಿಯೂ ಆಗಿದ್ದ ನಗರ. ಈಗ ಓಸ್ಲೋ ನಾರ್ವೆಯ ರಾಜಧಾನಿ. ಓಸ್ಲೋದಿಂದ ಬರ್ಗನ್ ನಗರಕ್ಕೆ ಇರುವ ರೈಲುಮಾರ್ಗವನ್ನು 'ಬರ್ಗನ್ ಲೈನ್’ ಅಂತ ಕರೆಯುತ್ತಾರೆ. ಸುಮಾರು ಆರೇಳು ತಾಸುಗಳ ರೈಲು ಪ್ರಯಾಣ ಅದು. ಆದರೆ, ಈ ರೈಲು ಪ್ರಯಾಣ, ಮಾರ್ಗದುದ್ದಕ್ಕೂ ಕಾಣುವ ನಾರ್ವೆಯ ಪ್ರಾಕೃತಿಕ ಸೌಂದರ್ಯದಿಂದಾಗಿ ಜಗತ್ತಿನ ಅತ್ಯುತ್ತಮ ರೈಲು ಪ್ರಯಾಣಗಳಲ್ಲಿ ಒಂದೆಂಬ ಖ್ಯಾತಿಯನ್ನೂ ಹೊಂದಿದೆ. ನಗರದ ಗದ್ದಲಗಳಿಂದ ನಿಧಾನವಾಗಿ ದೂರವಾಗುತ್ತಾ, ಬಂಡೆಗಳನ್ನು ಕೊರೆದು ಮಾಡಿರುವ ಹಾದಿಗಳಲ್ಲಿ ಪಯಣಿಸುತ್ತಾ ಕೂತವರಿಗೆ ರೈಲಿನ ಎರಡೂ ಪಕ್ಕದ ಕಿಟಕಿಗಳಲ್ಲಿ ಕಾಣುವ ಜಗತ್ತು 'ಸೌಂದರ್ಯ ಸಮರ'ಕ್ಕೆ ನಿಂತಂತೆ ಗೋಚರಿಸುತ್ತದೆ.
ಇದು ಮೂರು ದಿನದ ಪ್ರವಾಸ. ಮೊದಲ ದಿನ ಬರ್ಗನ್ ನಗರದಲ್ಲಿ, ಎರಡನೇ ದಿನ ಫ್ಲ್ಯಾಮ್ ಅನ್ನುವ ಹಳ್ಳಿಯಲ್ಲಿ ವಾಸ್ತವ್ಯ. ಅದಕ್ಕೆ ಮುಂಗಡ ಬುಕಿಂಗ್ ಅನಿವಾರ್ಯ. ಗೋಥೆನ್‍ಬರ್ಗ್ ನಿಂದ (ಸ್ವೀಡನ್) ಓಸ್ಲೋಗೆ ಬಸ್ಸಿನಲ್ಲೂ, ಆಮೇಲೆ ಓಸ್ಲೋದಿಂದ ಹೋಗುವ ಮತ್ತು ಬರುವ ರೈಲು ಟಿಕೆಟ್ಟುಗಳನ್ನು ಕೂಡಾ ಮುಂಗಡವಾಗಿ ಕಾಯ್ದಿರಿಸಬೇಕು. ಬರ್ಗನ್ ನಿಂದ ಫ್ಲ್ಯಾಮಿಗೆ ಹೋಗುವ ಮಾರ್ಗಕ್ಕಾಗಿ ಅಂತರ್ಜಾಲದಲ್ಲಿ ಹುಡುಕಿದರೆ, ಸರಿಯಾದ ಮಾಹಿತಿ ಸಿಗದಿರಬಹುದು. ಅಲ್ಲಿ ಏಪ್ರಿಲ್ ತಿಂಗಳಲ್ಲಿ ಆಗಷ್ಟೇ ಚಳಿಗಾಲ ಮುಗಿದು ವಸಂತ ಶುರುವಾಗುವ ಹೊತ್ತು. ದಿನಗಳು ದೀರ್ಘ. ಸೂರ್ಯಾಸ್ತಕ್ಕೆ ರಾತ್ರಿ ಎಂಟು ಅಥವಾ ಒಂಬತ್ತು ಗಂಟೆಗೆ. ಬರ್ಗನ್ ಮಾರ್ಗದುದ್ದಕ್ಕೂ ಎತ್ತರದ ಗುಡ್ಡಗಳು, ಹಳದಿ, ಕಂದು ಬಣ್ಣದ ಹಸಿರಾಗಲು ಹಾತೊರೆಯುತ್ತಿರುವ ಗಿಡಮರಗಳು, ತಳ ಕಾಣುವಷ್ಟು ಶುದ್ಧವಾದ ಹಿಮನದಿಗಳು, ದೊಡ್ಡದೊಡ್ಡ ಸರೋವರಗಳು, ಎತ್ತರದ ಗುಡ್ಡಗಳಿಂದ ನೊರೆಹಾಲು ಇಳಿದು ಬರುವಂತೆ ಕಾಣುವ ಪುಟ್ಟ ಪುಟ್ಟ ಜಲಪಾತಗಳು. ಜೊತೆಗೆ, ಬಹಳಷ್ಟು ಕಡೆಗಳಲ್ಲಿ ದಪ್ಪದಪ್ಪಗೆ ಇನ್ನೂ ಹಾಸಿಕೊಂಡಿರುವ ಹಿಮ.

ಇದು ಸ್ಕೀಯಿಂಗ್ ಮಾಡಲು ಉತ್ತಮ ಜಾಗ. ಮನುಷ್ಯನಿನ್ನೂ ಹಾಳುಮಾಡದ ಪ್ರಕೃತಿ ಎಷ್ಟು ಚೆಂದ ಅನ್ನುವುದಕ್ಕೆ ನಾರ್ವೆ ಒಂದು ಒಳ್ಳೆಯ ಉದಾಹರಣೆ. ಅದರಲ್ಲೂ ಬರ್ಗನ್ ಮತ್ತು ಫ್ಲ್ಯಾಮ್ ಪ್ರವಾಸೋದ್ಯಮದ ಮೇಲೆ ಬಹಳಷ್ಟು ಅವಲಂಬಿತವಾಗಿವೆ.
ಬ್ರಿಗೆನ್ - ಯುನೆಸ್ಕೋ ಹೆರಿಟೇಜ್ ತಾಣ
ಬ್ರಿಗೆನ್ ಅನ್ನುವ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಒಂದಾದ ಜಾಗ ಇದೆ. ಪದೇಪದೆ ಅಗ್ನಿ ಅವಘಡಗಳು ಸಂಭವಿಸಿದರೂ ಹಳೆಯ ಮರದ ಮನೆಗಳಿಂದ ಕೂಡಿದ ಹಿಂದಿನ ಬಂದರು ನಗರವನ್ನು ಹಾಗೂ ಅದರ ಇತಿಹಾಸವನ್ನು ಈಗಿನ ಜನಸಮೂಹಕ್ಕೆ ತಿಳಿಸುವ ಸಲುವಾಗಿ ಈಗಲೂ ಸಂರಕ್ಷಿಸಿಡಲಾಗಿದೆ. ಬರ್ಗನ್ ನಗರದಲ್ಲಿ ಸಂಜೆಯ ಸೂರ್ಯಾಸ್ತದ ಆಹ್ಲಾದಕರ ವಾತಾವರಣದಲ್ಲಿ ಸುತ್ತಾಡುವುದು ಒಂಥರ ಚೆಂದ. ಬಹುತೇಕ ಯುರೋಪಿನ ನಗರಗಳಲ್ಲಿ ಅಂಥದ್ದೇ ಅನುಭವವಾಗುತ್ತದೆ.
ಬರ್ಗನ್ ನಿಂದ ಫ್ಲ್ಯಾಮ್ ಕಡೆಗೆ ಹೊರಡಲು ವೋಸ್ ಮಾರ್ಗವಾಗಿ ಹೋಗಬೇಕು. ವೋಸ್ ನಿಂದ ಗುಡ್ ವಾಂಗನ್ ಅನ್ನುವ ಜಾಗಕ್ಕೆ ಬಸ್ಸಲ್ಲಿ ಹೋಗಬೇಕು. ಗುಡ್ ವಾಂಗನ್ ನಲ್ಲಿ ಬಂದಿಳಿದು ಅಲ್ಲಿಂದ ಹಡಗಿನಲ್ಲಿ ನಾರಾಯ್ ಫ್ಯೋರ್ಡ್ ಮೂಲಕ ಫ್ಲ್ಯಾಮ್ ತಲುಪಬೇಕು.
ಫ್ಯೋರ್ಡ್ ಅಂದ್ರೇನು ಗೊತ್ತಾ?
ಫ್ಯೋರ್ಡ್ ಅನ್ನುವುದಕ್ಕೆ ಬಹುಶಃ ಕನ್ನಡದಲ್ಲಿ ಒಂದೇ ಪದದಲ್ಲಿ ಹೇಳಬಹುದಾದ ಸಾಧ್ಯತೆ ಕಡಿಮೆ ಅನಿಸುತ್ತದೆ. ಇದು ಹಿಮದ ಮಡಿಲಲ್ಲಿ ನಿರ್ಮಿತವಾದ ಕಣಿವೆ. ಇಲ್ಲಿ ಹಿಮನದಿಗಳು ಹರಿಯುತ್ತವೆ. ಹಿಮ ಕರಗಿದಾಗ ಉಂಟಾಗುವ ಜಲಪಾತಗಳು ಕಾಣಸಿಗುತ್ತವೆ. ಪ್ರಶಾಂತವಾದ ಈ ನದಿಯಲ್ಲಿ ಸುತ್ತಲೂ ಇರುವ ಎತ್ತರದ ಪರ್ವತಗಳ ನೆರಳು ಒಂದಿನಿತೂ ಅಲ್ಲಾಡದ ಹಾಗೆ ಕಾಣುತ್ತದೆ. ಸ್ಕ್ಯಾಂಡಿನೇವಿಯಾದ ಪ್ರಾಚೀನ ಸಂಸ್ಕೃತಿಯಾದ ವೈಕಿಂಗ್ ಜನಾಂಗದ ದಾರಿ ಇದು. ಈಗಲೂ ಇಲ್ಲಿ ವರ್ಷದ ಕೆಲವು ತಿಂಗಳುಗಳ ಕಾಲ ಆ ಹಳೆಯ ವೈಕಿಂಗ್ ಸಂಸ್ಕೃತಿಯನ್ನು ಜೀವಿಸುವ, ಅವರ ಬದುಕಿನ ಶೈಲಿಯನ್ನು ಅನುಕರಿಸುವ ಪರಿಪಾಠವಿದೆ.

ಜಗತ್ತಿನ ಬೆಸ್ಟ್ ಟ್ರೇನ್ ಜರ್ನಿ!
ಫ್ಲ್ಯಾಮ್ ಏಕಾಂತದಲ್ಲಿರುವ ಹಾಗೂ ಬಹುತೇಕ ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ಒಂದು ಪುಟ್ಟ ಹಳ್ಳಿ. ಮನೆಯ ಕಿಟಕಿ ತೆರೆದರೆ ಹಿಮ ಕರಗಿ ಹರಿವ ಜಲಪಾತ ಕಾಣುತ್ತದೆ. ಒಂದೆರಡು ತಾಸುಗಳಲ್ಲಿ ನಡೆದೇ ಇಡೀ ಹಳ್ಳಿಯನ್ನು ಸುತ್ತಿಬಿಡಬಹುದು. ಪ್ರವಾಸಿಗರನ್ನು ಬಿಟ್ಟರೆ ಅಲ್ಲಿಯವರೇ ಕಾಣಸಿಗುವುದು ಬಹಳ ಅಪರೂಪ. ಇಡೀ ಹಳ್ಳಿಯಲ್ಲಿ ಮುನ್ನೂರರಿಂದ ನಾನೂರು ಜನರಿರಬಹುದಷ್ಟೇ. ಫ್ಲ್ಯಾಮ್ ಇಂದ ಮಿರ್ದಾಲ್ ನಿಲ್ದಾಣಕ್ಕೆ ಬರುವ ಒಂದು ಗಂಟೆಯ ರೈಲು ಪ್ರಯಾಣ ಈ ಎಲ್ಲ ಪ್ರಯಾಣಗಳ ಕಳಸ ಹಾಗೂ ಇದು ಫ್ಲ್ಯಾಮ್ ನ ಅಸ್ಮಿತೆಯೂ ಹೌದು. ಫ್ಲ್ಯಾಮ್ಸಬ್ಯಾನಾ ಅನ್ನುವುದು ಈ ಪಾರಂಪರಿಕ ರೈಲಿನ ಹೆಸರು. ಫ್ಲ್ಯಾಮ್ ನಿಂದ ಮಿರ್ದಾಲ್ ಕಡೆಗೆ ಬರುವಾಗ ಮಧ್ಯದಲ್ಲೊಂದು ಸುಮಾರು ಒಟ್ಟು 225 ಮೀಟರ್ ಎತ್ತರದ ಜಲಪಾತ ಸಿಗುತ್ತದೆ. ಅದರ ಹೆಸರು ಕ್ಯೂಸ್ ಫೊಸೆನ್. ರೈಲನ್ನು ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಅಲ್ಲಿ ನಿಲ್ಲಿಸಲಾಗುತ್ತದೆ. ಈ ಜಾಗದಲ್ಲಿ ಬೇಸಿಗೆಯಲ್ಲಾದರೆ, ಹ್ಯೂಲ್ದ್ರಾ ಅನ್ನುವ ವೇಷ ಧರಿಸಿ, ನಾರ್ವೆಯ ಜನಪದ ನೃತ್ಯವನ್ನು ಕಲ್ಲು ಬಂಡೆಗಳ ಮೇಲೆ ನಿಂತು ಮಾಡುತ್ತಾರಂತೆ.
ಮಿರ್ದಾಲ್ ನಿಲ್ದಾಣವೂ ಅಷ್ಟೇ ಚೆಂದ. ಪುಟಾಣಿ ರೈಲು ನಿಲ್ದಾಣ, ಅದರ ಸುತ್ತಲೂ ಹಿಮಾವೃತ ಪರ್ವತಗಳು. ಬಹುಶಃ ಅದಕ್ಕೇ ಇರಬೇಕು ಎಲ್ಲರೂ ಹೇಳುವುದು; ಪರ್ವತಗಳ ಮಡಿಲಿಗೆ ಹೋದವರು ಊರಿಗೆ ತಿರುಗಿ ಬರುವುದು ಬಹಳ ಕಷ್ಟ ಎಂದು. ಪರ್ವತಗಳ ಅಗಾಧತೆ ಮನುಷ್ಯನ ಕ್ಷಣಿಕತೆಯನ್ನು ನೆನಪಿಸುವ ರೀತಿಗೆ ಪ್ರಕೃತಿಯೆದುರು ಮಂಡಿಯೂರಲೇಬೇಕು. ಅದೊಂದು ದಿವ್ಯ ಭಾವ. ಗೊತ್ತೇ ಆಗದೇ ಅಹಂಕಾರ ಕುಗ್ಗಿ, ಮನಸ್ಸು ವಿಶಾಲವಾಗುವ ಪ್ರಕ್ರಿಯೆ. ಕೆಲವೊಮ್ಮೆ ಬದುಕಿನಲ್ಲಿ ಒದಗಿ ಬರುವ ಅವಕಾಶಗಳಿಗೆ ನಾವು ಕೃತಜ್ಞರಾಗಿರಬೇಕಷ್ಟೇ.