ವಯನಾಡಿನ ಎಲ್ಲೆಲ್ಲೂ ವನಸಿರಿಯ ಛಾಪು
ಮೀನ್ಮುಟ್ಟಿ ಜಲಪಾತವು ಬಾಣಾಸುರ ಸಾಗರ ಅಣೆಕಟ್ಟಿಗೆ ಸಮೀಪದಲ್ಲಿ ಇದೆ. ಪ್ರವೇಶ ದ್ವಾರದವರೆಗೂ ನಮ್ಮದೇ ಖಾಸಗಿ ವಾಹನದಲ್ಲಿ ಅಲ್ಲಿಗೆ ಸಾಗಬಹುದು. ನಂತರ ಅಲ್ಲಿಂದ ಸುಮಾರು ಎರಡು ಕಿಲೋ ಮೀಟರ್ ಚಾರಣ ಮಾಡಲೇಬೇಕು. ಆದರೆ, ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಚಾರಣದ ಆಯಾಸಗಳು ಹತ್ತಿರಕ್ಕೂ ಸುಳಿಯುವುದಿಲ್ಲ. ಈ ಚಾರಣದ ಮೂಲಕ ನೀವು ಜಲಪಾತ ಅಡಿಯಲ್ಲಿ ಮುಡಿಯನ್ನು ಸೇರಿರುತ್ತೀರಿ. ಅಂದರೆ ಜಲಪಾತದ ನೀರು ಧುಮುಕಲು ಆರಂಭಿಸುವ ಸ್ಥಳಕ್ಕೆ ಸೇರಿರುತ್ತೀರಿ. ಮೈಮರೆತರೆ ಇನ್ನೂ ಮೇಲಕ್ಕೆ ಹೋಗಿಬಿಡಬಹುದು!
-ಸುನಿತ. ಎಚ್.ಎಸ್
ನಮ್ಮದೊಂದು ಪುಟ್ಟ ಗೆಳೆಯರ ಬಳಗ. ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಿಗಳಾಗಿರುವ ನಮಗೆ ಜೂನ್ ಮಾಸಾಂತ್ಯದಲ್ಲಿ ಪ್ರವಾಸಕ್ಕೆ ಕೆಲವುದಿನಗಳ ಬಿಡುವು ಸಿಕ್ಕಿತ್ತು. ಇನ್ನೇನು, ಎಲ್ಲರೂ ಸೇರಿ ಒಂದಷ್ಟು ದಿನಗಳ ಕಾಲ ಪ್ರವಾಸ ಮಾಡಲು ನಿರ್ಧರಿಸಿದೆವು. ಸುತ್ತುವ ಖಯಾಲಿ ಉಳ್ಳವರೇ ಗುಂಪಿನಲ್ಲಿದ್ದಿದ್ದರಿಂದ ನಮ್ಮ ನಾಡಿನ ಸಾಕಷ್ಟು ಕಡೆಗಳಲ್ಲಿ ನಾವು ಈಗಾಗಲೇ ಪ್ರವಾಸ ಮಾಡಿದ್ದೆವು. ಹಾಗಾಗಿ ಹೊಸತನ್ನು ನೋಡುವ ಗುಂಗಿನೊಂದಿಗೆ ಕೇರಳದ ಕಡೆ ಪ್ರವಾಸ ಹೋಗಲು ನಿಶ್ಚಯಿಸಿದೆವು. ಈ ಯೋಜನೆಯೆಲ್ಲ ಸಿದ್ಧವಾಗಿದ್ದು ಕೇವಲ ಒಂದೆರಡು ಗಂಟೆಗಳಲ್ಲೇ! ನಾವು ಮುಂದೆ ನೋಡಲಿರುವ ತಾಣ, ಅಲ್ಲಿನ ವಾತಾವರಣ, ಜನ ಹೀಗೆ ಯಾವ ಪರಿಚಯವೂ ನಮಗಿರಲಿಲ್ಲ! ಅಂದೇ ಅಂದುಕೊಂಡಂತೆ ನಾನು ಮತ್ತು ನನ್ನ ಸ್ನೇಹಿತರಾದ ವಿನೋದ್, ಮೋಹನ್, ಪಲ್ಲವಿ, ಧನರಾಜ್ ಒಟ್ಟಾಗಿ, ಕೇರಳದೆಡೆಗೆ ಗೆಳೆಯ ವಿನೋದ್ ಅವರದ್ದೇ ಕಾರ್‌ನಲ್ಲಿ ಪ್ರಯಾಣ ಶುರು ಮಾಡಿದೆವು.
ಇದನ್ನೂ ಓದಿ: ಆ ಕಿಬ್ಬಲ್ ಪ್ಯಾಲೇಸ್ ಈ ಗಾಜಿನ ಮನೆಗೆ ಸ್ಫೂರ್ತಿ!
ಕೇರಳ ದೇವರ ನಾಡು ಎಂದು ಪ್ರಸಿದ್ಧವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇಲ್ಲಿನ ವಾತಾವರಣ ನೋಡುವಾಗ ಮಾತ್ರ ಎಂಥವರಿಗೂ ಇದು ನಿಜಕ್ಕೂ ದೇವರ ನಾಡು ಎಂಬುದು ಕಣ್ಣಿಗೆ ಹೊಳೆಯುತ್ತದೆ, ಮನಸಿಗೆ ಗೋಚರವಾಗುತ್ತದೆ. ನೆನಪಿರಲಿ ಇತ್ತೀಚೆಗೆ ಇಲ್ಲಿನ ಪ್ರವಾಸೋದ್ಯಮ ನಿಗಮ ಕೇರಳವನ್ನು ವಿವಾಹ ಪ್ರವಾಸದ ಕೇಂದ್ರವಾಗಿಸಲೂ ಪ್ರಯತ್ನಿಸುತ್ತಿದೆ. ದೇಶ-ವಿದೇಶಗಳಿಂದ ಮದುವೆಯಾಗಲು, ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಲಿಕ್ಕಾಗಿಯೇ ಜನರು ಇಲ್ಲಿಗೆ ಬರುತ್ತಿದ್ದಾರೆ. ಬ್ಯಾರಿಯರ್ ಫ್ರೀ ಕೇರಳ ಟೂರಿಸಂ ಪ್ರಾಜೆಕ್ಟ್ ಮೂಲಕ ಆಕ್ಸೆಸಿಬಲ್ ಟೂರಿಸಂ ಅನ್ನು ಭಾರತದಲ್ಲಿ ಯಶಸ್ವಿಯಾಗಿ ಅಳವಡಿಸಿಕೊಂಡಿರುವ ಮೊದಲ ರಾಜ್ಯ ಕೇರಳ. ನಮಗಿಂತಲೂ ಇಲ್ಲಿನ ಪ್ರವಾಸೋದ್ಯಮ ಒಂದೂವರೆ ದಶಕಗಳಷ್ಟು ಮುಂದೆ ಆಲೋಚಿಸುತ್ತದೆ ಎನ್ನುವುದು ಹಲವರ ಮಾತು.
ಬಾಣಾಸುರ ಸಾಗರ ಅಣೆಕಟ್ಟು

ಬಾಣಾಸುರ ಅಣೆಕಟ್ಟು, ಬಾಣಾಸುರ ಬೆಟ್ಟಗಳ ತಪ್ಪಲಿನಲ್ಲಿದೆ. ವಾಮನ ರೂಪದಲ್ಲಿ ವಿಷ್ಣು ಮಹಾಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದ್ದನ್ನು ನೀವು ಕೇಳಿಯೋ ಅಥವಾ ಓದಿಯೋ ತಿಳಿದಿರಬಹುದು. ಈ ಬಲಿ ಚಕ್ರವರ್ತಿಯ ಮಗನ ಹೆಸರು ಬಾಣಾಸುರ. ಅವನ ಹೆಸರನ್ನು ಈ ಅಣೆಕಟ್ಟಿಗೆ ಇಡಲಾಗಿದೆ. ವಯನಾಡಿನಲ್ಲಿ ಈ ಅಣೆಕಟ್ಟು ಇದ್ದು, ಭಾರತದ ಅತಿದೊಡ್ಡ ಮಣ್ಣಿನ ಅಣೆಕಟ್ಟು ಮತ್ತು ಏಷ್ಯಾದ ಎರಡನೆಯ ಅತಿದೊಡ್ಡ ಅಣೆಕಟ್ಟು ಎಂದೂ ಇದು ಗುರುತಿಸಿಕೊಂಡಿದೆ. ವಿಶೇಷವೆಂದರೆ ಈ ಅಣೆಕಟ್ಟಿನ ಮೇಲೆ ಓಡಾಡಲು ಸಾರ್ವಜನಿಕರಿಗೆ ಅವಕಾಶವಿದೆ. ಹಾಗಾಗಿ ಇಲ್ಲಿಗೆ ಸಾಕಷ್ಟು ಪ್ರವಾಸಿಗರೂ ನಮ್ಮಂತೆ ದಂಡು ಕಟ್ಟಿಕೊಂಡು ಬರುತ್ತಾರೆ. ಇಲ್ಲಿನಿಂದ ಜಲಾಶಯದ ನೀಲ ನೀರು ಆಕಾಶದ ನೀಲಿಯೊಂದಿಗೆ ಕೂಡಿಕೊಳ್ಳುವುದನ್ನು ನೋಡಲು ರಮಣೀಯವಾಗಿರುತ್ತದೆ. ಹಾಗಾಗಿಯೇ ಇದು ಫೊಟೋಗ್ರಾಫರ್ ಮತ್ತು ಪ್ರಕೃತಿ ಪ್ರಿಯರ ನೆಚ್ಚಿನ ತಾಣ. ಉತ್ತಮ ರಸ್ತೆ ಮತ್ತು ಸಾರಿಗೆ ಸಂಪರ್ಕವೂ ಇದೆ. ಮಾಹಿತಿಗಳ ಪ್ರಕಾರ ನವೆಂಬರ್‌ನಿಂದ ಮೇವರೆಗಿನ ಸಮಯ ಭೇಟಿಗೆ ಉತ್ತಮ ಸಮಯ ಎನ್ನಲಾಗಿದೆ.
ಮೀನ್ಮುಟ್ಟಿ ಜಲಪಾತ
ಮೀನ್ಮುಟ್ಟಿ ಜಲಪಾತವು ಬಾಣಾಸುರ ಸಾಗರ ಅಣೆಕಟ್ಟಿಗೆ ಸಮೀಪದಲ್ಲೇ ಇದೆ. ಪ್ರವೇಶ ದ್ವಾರದವರೆಗೂ ನಮ್ಮದೇ ಖಾಸಗಿ ವಾಹನದಲ್ಲಿ ಅಲ್ಲಿಗೆ ಸಾಗಬಹುದು. ನಂತರ ಅಲ್ಲಿಂದ ಸುಮಾರು ಎರಡು ಕಿಲೋ ಮೀಟರ್ ಚಾರಣ ಮಾಡಲೇಬೇಕು. ಆದರೆ, ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಚಾರಣದ ಆಯಾಸಗಳು ಹತ್ತಿರಕ್ಕೂ ಸುಳಿಯುವುದಿಲ್ಲ. ಈ ಚಾರಣದ ಮೂಲಕ ನೀವು ಜಲಪಾತ ಅಡಿಯಲ್ಲಿ ಮುಡಿಯನ್ನು ಸೇರಿರುತ್ತೀರಿ. ಅಂದರೆ ಜಲಪಾತದ ನೀರು ಧುಮುಕಲು ಆರಂಭಿಸುವ ಸ್ಥಳಕ್ಕೆ ಸೇರಿರುತ್ತೀರಿ. ಮೈಮರೆತರೆ ಇನ್ನೂ ಮೇಲಕ್ಕೆ ಹೋಗಿಬಿಡಬಹುದು! ಹಾಗಾಗಿ ಎಚ್ಚರದಿಂದಿರಿ. ಮಾಹಿತಿಗಳ ಪ್ರಕಾರ ಈ ಜಲಪಾತ ಸುಮಾರು 300 ಮೀಟರ್ ಎತ್ತರವಿದೆ. ಇದು ಕೇರಳದ ಎರಡನೆಯ ದೊಡ್ಡ ಜಲಪಾತ. ಬಾಣಸುರ ಜಲಾಶಯದ ಹತ್ತಿರದಲ್ಲಿದೆ, ಚಾರಣಕ್ಕೂ ಅವಕಾಶವಿದೆ, ಹಚ್ಚಹಸಿರಿನ ಸುತ್ತಲಿನ ನೋಟ ಎಂಬ ವಿಷಯ ಕೇಳಿಯೇ ಅಲ್ಲಿಗೆ ಹೋಗಲು ಮನಸು ಹಾತೊರೆಯುತ್ತದೆ ಅಲ್ಲವೇ? ನಾವು ಅಲ್ಲಿಗೆ ಹೋದಾಗ ತೆಗೆದ ಫೊಟೋಗಳಿಗಿಂತ ಅಲ್ಲಿ ಆದ ಅನುಭವಗಳೇ ನನ್ನಲ್ಲಿ ಇನ್ನೂ ಅಚ್ಚಳಿಯದೇ ಉಳಿದಿವೆ. ನೀವೂ ಅಷ್ಟೆ ಅಲ್ಲಿಗೆ ಹೋದಾಗ ನಿಮ್ಮ ಸ್ವಂತ ಕಣ್ಣಿನಲ್ಲಿ ಪ್ರಕೃತಿಯನ್ನು ನೋಡಿ ಆನಂದಿಸಿ. ನಂತರ ಬೇಕಾದರೆ ಕ್ಯಾಮೆರಾ ಕಣ್ಣಿಗೆ ಕೆಲಸ ಕೊಡಿ.
ಕರಾಪುಝಾ ಅಣೆಕಟ್ಟು

ಕರಾಪುಝಾ ಅಣೆಕಟ್ಟು, ಕೇರಳದ ಸುಂದ ವಯನಾಡಿನಲ್ಲಿನ ಮತ್ತೊಂದು ಸುಂದರ ಪ್ರವಾಸಿತಾಣ. ಈ ಅಣೆಕಟ್ಟಿನ ಸುತ್ತಲೂ ಹಚ್ಚಹಸುರಿ ಬನಸಿರಿಯ ಬಾಣಾಸುರ ಬೆಟ್ಟಗಳಿವೆ. ವಿಸ್ತಾರವಾದ ನೀರಿನ ಪ್ರದೇಶ ಮತ್ತು ನಿಶಬ್ಧ ವಾತಾವರಣವು ಮನಸಿಗೆ ಶಾಂತಿ ನೀಡುತ್ತದೆ. ನಮಗೆ ಶಾಂತಿ ಬೇಕು ಎನ್ನುವವರು, ಸಾಹಸ ಚಟುವಟಿಕೆಗಳು ಬೇಕು ಎನ್ನವವರೂ ಈ ತಾಣಕ್ಕೆ ಬರುಬಹುದು. ಇಲ್ಲಿ ಶಾಂತಿ ನೀಡುವ ಹಸಿರೂ ಇದೆ, ಸಾಹಸ ಅನುಭವಗಳಿಗೆ ಜಿಪ್‌ಲೈನ್, ವಾಟರ್ ಆಕ್ಟವಿಟಿಗಳೂ ಇವೆ. ಬೆಟ್ಟಗಳ ನಡುವೆ ಹರಡಿರುವ ನೀಲ ಪ್ರದೇಶ ನೋಡುವುದಕ್ಕೆ ತುಂಬಾ ಆಕರ್ಷಕವಾಗಿರುತ್ತದೆ.
ವಯನಾಡಿನ ಚಹಾ ತೋಟ – ಪ್ರಕೃತಿಯ ಹಸಿರು ಹಾಸಿಗೆ

ಜೂನ್ ತಿಂಗಳ ಕೊನೆಯ ಸಮಯದಲ್ಲಿ ನಾವು ಅಲ್ಲಿ ಹೋಗಿದ್ದರಿಂದ, ಮಳೆ ಮತ್ತು ಮಂಜು ತುಂಬಿದ ವಾತಾವರಣ ಇತ್ತು. ಮೋಡಗಳು ನಮ್ಮ ಹತ್ತಿರವೇ ಇದ್ದಂತೆ ಕಾಣುತ್ತಿತ್ತು. ನೋಚರ್ ಪಿಯರಿಗೆ ಇದೊಂದು ಕನಸಿನ ಲೋಕ ಅನಿಸುತ್ತದೆ. ಬೆಳಗಿನ ಸಮಯದಲ್ಲಿ ಚಹಾ ಗಿಡದ ಎಲೆಗಳ ಮೇಲೆ ಇದ್ದ ಇಬ್ಬನಿ ನೋಡಿ, ಸುಮ್ಮನಿರುವುದುಂಟೇ? ನಾನು ಮತ್ತು ನನ್ನ ಸ್ನೇಹಿತರು ಗಿಡಗಳಲ್ಲಿನ ಇಬ್ಬನಿ ಎರಚಾಡಿದ್ದೇವೆ. ಇಬ್ಬನಿಯ ಆ ತಣ್ಣನೆಯ ಸ್ಪರ್ಶಗಳಿಂದ ಪುಳಕಿತರಾಗಿದ್ದೇವೆ. ಅದು ನಮಗೆ ಎಂದಿಗೂ ಮರೆಯದ ನೆನಾಪಾಗಿ ಉಳಿಯುವಂತೆಯೂ ಮಾಡಿದೆ.
ದಾರಿ ಹೇಗೆ?
ವಯನಾಡು ಉತ್ತಮ ಸಾರಿಗೆ ಸಂಪರ್ಕ ಹೊಂದಿದೆ. ಇಲ್ಲಿ ರೈಲು ನಿಲ್ದಾಣ ಇಲ್ಲ. ಆದರೆ, ಕೋಝಿಕೋಡ್ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಿದ್ದು, ಕೋಝಿಕೋಡ್ನಿಂದ ವಯನಾಡಿಗೆ ಕೇವಲ 65 ಕಿಮೀ ದೂರವಿದೆ. ಕೋಝಿಕೋಡ್‌ನಿಂದ ಟ್ಯಾಕ್ಸಿ ಮತ್ತು ಬಸ್‌ಗಳ ಮೂಲಕ ವಯನಾಡಿಗೆ ತಲುಪಬಹುದು. ವಯನಾಡಿನಿಂದ ಸ್ಥಳೀಯ ಸಾರಿಗೆ ವ್ಯವಸ್ಥೆ ಉತ್ತಮವಾಗಿದೆ. ವಿವಿಧ ಪ್ರವಾಸಿ ತಾಣಗಳನ್ನು ಆರಾಮವಾಗಿ ನೋಡಿಕೊಂಡು ಬರಬಹುದು.