ಪ್ರವಾಸವೆಂದರೆ ಅದೊಂದು ಸುಂದರ ಅನುಭವ. ಪ್ರವಾಸವೇ ಇಲ್ಲವಾದರೆ ಜೀವನ ಮುಂದಕ್ಕೆ ಹೋಗುವುದಿಲ್ಲ. ಅದು ಜೀವನದ ಬಂಡಿಯಂತೆ. ಆ ಬಂಡಿ ಯಾವಾಗಲೂ ಸಾಗುತ್ತಲೇ ಇರಬೇಕು. ಅಗಾಗ ಪಂಚರ್‌ ಆಗುತ್ತಿರುತ್ತದೆಯಾದರೂ ಅದನ್ನು ಸರಿಮಾಡಿಕೊಂಡು ಪ್ರವಾಸಿ ಬದುಕನ್ನು ಮುಂದಕ್ಕೆ ನಡೆಸಬೇಕು ಎಂಬುದು ಕಲಾತ್ಮಕ ಸಿನಿಮಾಗಳಲ್ಲಿ ಹೆಸರು ಮಾಡಿರುವ ನಟಿ ಅಕ್ಷತಾ ಪಾಂಡವಪುರ ಅವರ ಮಾತು. ಅವರ ಪ್ರವಾಸಿ ಜೀವನದ ಪರಿಚಯ ಇಲ್ಲಿದೆ.

ಕಲೆಗಾಗಿ ಪ್ರವಾಸ

ನನಗೆ ಪ್ರವಾಸವೆಂದರೆ ನಾಟಕ, ರಂಗಭೂಮಿ. ನಾಟಕವೆಂದರೆ ನಗರ ಪ್ರದೇಶದ ನಾಲ್ಕು ಗೋಡೆಯ ನಡುವೆ ಸಿದ್ಧಪಡಿಸಿದ ನಾಟಕದ ಪ್ರದರ್ಶನವಲ್ಲ. ಬೆಂಗಳೂರಿನ ಆಚೆಗೆ ಗೊತ್ತೇ ಇರದ ಹಳ್ಳಿಗಾಡುಗಳ ಪರಿಚಿತರೇ ಆಗಿರದ ಅನೇಕ ಮುಖಗಳಿಗೆ ಸಾಮಾಜಿಕ ಚಿಂತನೆಗಳನ್ನು ಬಿತ್ತುವ, ಸಂದೇಶಗಳನ್ನು ಸಾರುವ ಪ್ರಕ್ರಿಯೆ ಅದು. ನನ್ನ ನಾಟಕದ ಉದ್ದೇಶವೇ ದೇಶದ ಪ್ರತಿ ಹಳ್ಳಿಗಳಿಗೆ ತಲುಪಬೇಕು ಎನ್ನುವುದು. ಈ ಕಾರಣಕ್ಕಾಗಿಯೇ ನಾನು ಹಳ್ಳಿಗಳಿಗೆ ಹೋಗುತ್ತೇನೆ, ನಾಟಕ ಮಾಡುತ್ತೇನೆ, ಜನರನ್ನು ತಿಳಿಯುತ್ತೇನೆ, ಅಲ್ಲಿನ ಆಹಾರ, ಉಡುಗೆ ಎಲ್ಲವನ್ನೂ ಅರಿತುಕೊಳ್ಳುತ್ತೇನೆ. ಅದರ ಜತೆಗೆ ನನ್ನ ಬರವಣಿಗೆಗೂ ಒಂದಷ್ಟು ವಿಚಾರಗಳನ್ನು ಕಲೆ ಹಾಕುತ್ತೇನೆ. ನಾನೂ ಬೆಳೆಯುತ್ತಾ, ಕಲಿಯುತ್ತಾ ಹೋಗುವುದಕ್ಕೆ ಪ್ರವಾಸ ಒಳ್ಳೆಯ ಮಾಧ್ಯಮ.

ಅದಿತಿ ಪ್ರಭುದೇವ ಟ್ರಾವೆಲ್‌ ಲೈಫ್‌

ರಂಗಭೂಮಿಯಿಂದಲೇ ಎಲ್ಲವೂ ಸಾಧ್ಯ

ನನಗೆ ನಟನೆಯಿಂದಲೇ ಕಿಕ್‌ ಸಿಗುತ್ತದೆ. ಜೀವನದಲ್ಲಿ ಯಾವುದನ್ನು ಬೇಕಾದರೂ ತ್ಯಜಿಸಬಹುದು. ಆದರೆ, ನಟನೆಯನ್ನಲ್ಲ. ನಟನೆಯ ಮೂಲಕವೇ ಹೆಸರು, ಆದಾಯ, ಪ್ರೀತಿ, ಪ್ರವಾಸಿ ಜೀವನ ಎಲ್ಲವೂ ಸಿಗುವಾಗ ಬಣ್ಣದ ಬದುಕನ್ನು ಬಿಡುವ ಮಾತೇ ಬರುವುದಿಲ್ಲ. ಪರಿಚಿತವಲ್ಲದ ಊರುಗಳಲ್ಲಿ, ಅನ್ಯ ಭಾಷೆಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ಮಾಡಬೇಕು ಎನ್ನುವ ಆಸೆಯಿರುವುದರಿಂದ ಸುತ್ತಾಡುತ್ತಲೇ ಕಲಾ ಜೀವನವನ್ನು ಕಟ್ಟಿಕೊಳ್ಳುವುದು ನನಗಿಷ್ಟ.

New Project (7)

ಪಾಂಡವಪುರವೆಂದರೆ ಬರಿಯ ಊರಷ್ಟೇ ಅಲ್ಲ

ಪಾಂಡವಪುರ ಎಂದರೆ ಮೊದಲು ನೆನಪಾಗುವುದು ರೈತರು. ಹಸಿರು ಟವೆಲ್‌, ಪುಟ್ಟಣ್ಣಯ್ಯ, ಜಾತ್ರೆ, ಬಾಡು..ನಮ್ಮ ಇಡೀ ಕುಟುಂಬದಲ್ಲಿ ಎಲ್ಲರೂ ರೈತರು. ಅದರ ಜತೆಗೆ ಅಪ್ಪನಿಗೆ ಕಲಾ ಜೀವನದಲ್ಲಿರುವ ಆಸಕ್ತಿಯೂ ನನಗೆ ವರವಾಗಿತ್ತು. ನಂತರ ನಾಟಕಗಳು, ಕುವೆಂಪು ಅವರ ಆಶಯವಾದ ಮಂತ್ರ ಮಾಂಗಲ್ಯ ಇವೆಲ್ಲವೂ ನಮ್ಮೂರಿನಲ್ಲಿ ಅಸ್ತಿತ್ವಕ್ಕೆ ಬಂತು. ನಮ್ಮೂರು ಎಂದರೆ ನನಗೆ ಬದುಕಿನ ಬುನಾದಿ ಹಾಕಿದ ತಾಣ..ಅನೇಕ ನೆನಪುಗಳನ್ನು ಕಟ್ಟಿಕೊಟ್ಟ ಪರಿಸರ.

ನೆನಪುಗಳನ್ನು ನೀಡಿದ ಅಸ್ಸಾಂನ ದಿನಗಳು

ನಾನು ಕೈಗೊಳ್ಳುವ ಪ್ರತಿ ಪ್ರವಾಸವೂ ನನಗೆ ಬೆಸ್ಟ್‌ ಆಗಿರುತ್ತದೆ. ಇದರ ನಡುವೆ ನಾಟಕ ಪ್ರದರ್ಶನಕ್ಕಾಗಿಯೇ ನಾನು ಅಸ್ಸಾಂನ ಬೋಡೋ ಲ್ಯಾಂಡ್‌ಗೆ ಹೋಗಿದ್ದೆ. ಅಲ್ಲಿ ಪವಿತ್ರ ರಾಬಾ ಎಂಬುವರಿದ್ದಾರೆ. ಅವರು ಕುಬ್ಜರ ತಂಡ ಕಟ್ಟಿ ಬೆಳಗ್ಗೆ ಎಲ್ಲ ಗದ್ದೆ ಕೆಲಸ, ಸಂಜೆಯಾದರೆ ನಾಟಕ ಪ್ರದರ್ಶನ ಮಾಡುತ್ತಾರೆ. ಅಲ್ಲಿ ಬಿದಿರಿನ ಸುಂದರವಾದ ವಾಸ್ತವ್ಯವನ್ನೂ ಮಾಡಿಕೊಂಡಿದ್ದಾರೆ. ಒಂದಷ್ಟು ದಿನಗಳ ಕಾಲ ಅಲ್ಲಿರುವ ಅವಕಾಶ ನನಗೆ ಲಭ್ಯವಾಗಿತ್ತು. ನನ್ನ ನಾಟಕ ಪ್ರದರ್ಶನದ ಪ್ರಚಾರಕ್ಕಾಗಿ ಸುತ್ತೂರಲೆಲ್ಲಾ ಕರೆದುಕೊಂಡು ಹೋಗಿದ್ದರು. ಅಲ್ಲಿನ ಆಹಾರ ಪದ್ಧತಿಯೇ ವಿಭಿನ್ನವಾದುದು. ಅಲ್ಲಿನ ಹೆಂಗಸರ ಸೀರೆ, ನೇಕಾರಿಕೆಯ ಬದುಕು, ಬುಟ್ಟಿ ಮಾಡುವವರು ..ಎಲ್ಲವೂ ಸುಂದರ ಅನುಭವ ನೀಡಿದೆ.

ಕಲಾವಿದನ ಪ್ರವಾಸಿ ಬದುಕು

ಒಬ್ಬ ಕಲಾವಿದನೆಂದರೆ ಅಭಿನಯ ಮಾಡಿದ್ದು, ಹೋಗಿದ್ದು ಅಷ್ಟೇ ಅಲ್ಲ. ರವಿ ಕಂಡದ್ದನ್ನು ಕವಿ ಕಂಡ ಎನ್ನುವ ಮಾತು ಮುಂದಿನ ಹಂತದಲ್ಲಿ ಕವಿಯೂ ಕಾಣದಿರುವುದನ್ನು ಒಬ್ಬ ಕಲಾವಿದನಿಂದ ಕಾಣಲು ಸಾಧ್ಯ ಎಂಬಂತಾಗಿದೆ. ಕವಿ ಬರೆಯುವದಷ್ಟೇ, ಆದರೆ ಕಲಾವಿದನಾದವು ಕಾಣುವುದರ ಜತೆಗೆ ಅದನ್ನು ಅರಿತು, ಅನುಭವಿಸಿ ಇತರಿಗೂ ಕಾಣುವಂತೆ ಮಾಡುವ ಸಾಮರ್ಥ್ಯ ಹೊಂದಿದ್ದಾನೆ. ಕಾರಣಕ್ಕಾಗಿಯೇ ಕಲಾವಿದನಿಗೆ ಪ್ರವಾಸಿ ಜೀವನ ಅತಿಮುಖ್ಯವಾಗುತ್ತದೆ.

ಅಕ್ಷತಾ ಕಿಚನ್‌ ಜತೆಗೆ ಜನಮನ ಅಂಗಡಿ

ಪ್ರವಾಸಿ ಬದುಕಿನಿಂದ ನನಗಾದ ಲಾಭವೇನು ಎಂದು ಅನೇಕರು ಪ್ರಶ್ನೆ ಮಾಡುತ್ತಾರೆ. ಕಲಾ ಜೀವನದ ಜತೆಗೆ ಪ್ರವಾಸದಲ್ಲಿ ನಾನು ಕಂಡು, ಕಲಿತ ಆಹಾರ ಪದ್ಧತಿಗಳನ್ನು ಎಲ್ಲರಿಗೂ ತಿಳಿಸುವುದಕ್ಕಾಗಿ ಅಕ್ಷತಾ ಕಿಚನ್‌ ಎಂಬ ಯೂಟ್ಯೂಬ್‌ ಚಾನೆಲ್‌ ಮಾಡಿಕೊಂಡಿದ್ದೇನೆ. ಇದರಲ್ಲಿ ನನ್ನ ರುಚಿಯನ್ನು ಅತಿಥಿಗಳಿಗೆ ನೀಡಿ, ಅವರ ಅಭಿರುಚಿಯನ್ನು ತಿಳಿಯುವ ಪ್ರಯತ್ನ ಮಾಡುತ್ತೇನೆ. ಇನ್ನು ನಾನು ದೆಹಲಿ, ಅಸ್ಸಾಂನಂಥ ಜಾಗಗಳಲ್ಲಿ ಕಂಡ ಬಟ್ಟೆಗಳನ್ನು ಬೆಂಗಳೂರಿಗರಿಗೆ ಪರಿಚಯಿಸುವುದಕ್ಕಾ ʻಜನಮನʼ ಎಂಬ ಬಟ್ಟೆ ಅಂಗಡಿಯನ್ನೂ ತೆರೆದಿದ್ದೇನೆ.

New Project (8)

ಕೊಚ್ಚಿಯ ಫಿಲ್ಮ್‌ಫೇರ್‌ ವೇದಿಕೆಯಲ್ಲಿ…

70ನೇ ಫಿಲ್ಮ್ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ಕೇರಳದ ಕೊಚ್ಚಿನ್‌ನಲ್ಲಿ ಅದ್ದೂರಿಯಾಗಿ ನಡೆದಿತ್ತು. ಮೊದಲ ಬಾರಿಗೆ ಕೊಚ್ಚಿಗೆ ಪ್ರಯಾಣ ಬೆಳೆಸಿದ್ದೆ. ಚಂಪಾ ಶೆಟ್ಟಿ ನಿರ್ದೇಶನದ ‘ಕೋಳಿ ಎಸ್ರು’ ಸಿನಿಮಾದಲ್ಲಿನ ನನ್ನ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದ ಕ್ಷಣವನ್ನು ಮರೆಯಲಾಗದು.ಇದು ಕಲಾತ್ಮಕ ಸಿನಿಮಾಗಳಿಗೆ ಸಿಕ್ಕದ ಗೌರವ. ಇಂಥ ಸಿನಿಮಾಗಳಲ್ಲಿ ಅಭಿನಯಿಸಲು ಬಯಸುವವರಿಗೆ ಸ್ಪೂರ್ತಿ.

ರೀಲ್ಸ್‌ ನೋಡಿ ಪ್ರವಾಸ ಮಾಡದಿರಿ

ಸೋಶಿಯಲ್‌ ಮೀಡಿಯಾ ಬುದ್ಧಿವಂತರಿಗೆ ಒಳ್ಳೆಯದು..ಎಮೋಶನಲ್‌ ಜೀವಿಗಳಿಗೆ ಸೂಕ್ತವಲ್ಲ. ಇದು ರೀಲ್ಸ್‌ ಜಮಾನ. ಆದರೆ ಅದನ್ನೇ ನಂಬಿಕೊಂಡು ಜೀವನ ನಡೆಸುವುದಲ್ಲ. ಪ್ರವಾಸಿ ತಾಣಗಳ ಬಗೆಗೂ ರೀಲ್ಸ್‌ನಲ್ಲಿ ತಪ್ಪು ಮಾಹಿತಿಗಳು ಹರಿದಾಡುವುದನ್ನು ಅನೇಕ ಬಾರಿ ನೋಡಿದ್ದೇನೆ. ರೀಲ್ಸ್‌ ನೋಡಿಕೊಂಡು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಬದಲು ಸರಿಯಾದ ಮಾಹಿತಿ ಪಡೆದು ಪ್ರವಾಸ ಮಾಡಬೇಕು.

ಪ್ರವಾಸದಲ್ಲಿ ಹೊಂದಾಣಿಕೆಯಿರಲಿ

ಗೂಗಲ್‌ ರಿವ್ಯೂಗಳನ್ನು ಆಧಾರವಾಗಿಸಿ ನಾನು ಟ್ರಾವೆಲ್‌ ಪ್ಲಾನ್‌ ಮಾಡಿಕೊಳ್ಳುವುದಿಲ್ಲ. ನಾಟಕಗಳಿಗಾಗಿ ಟ್ರಾವೆಲ್‌ ಮಾಡಿದರೂ ಆಹಾರ ಕ್ರಮಗಳು, ಕಾಲಕ್ಕೆ ತಕ್ಕಂತೆ ಸ್ಥಳಗಳ ಆಯ್ಕೆ ಮಾಡಿಕೊಳ್ಳುತ್ತೇನೆ. ಪ್ರವಾಸದಲ್ಲೂ ಅದ್ಧೂರಿತನ ಬಯಸುವುದಿಲ್ಲ. ಇತ್ತೀಚೆಗಷ್ಟೇ ಉತ್ತರ ಕರ್ನಾಟಕದಲ್ಲೊಂದು ನಾಟಕ ಪ್ರದರ್ಶನಕ್ಕೆ ಹೋದಾಗ ಮನೆಯ ತಾರಸಿಯಲ್ಲಿ ಮಲಗಿದ್ದೆ, ಓಪನ್‌ ಬಾತ್‌ ರೂಮ್‌ ಬಳಕೆ ಮಾಡಿದ್ದೆ. ಪ್ರವಾಸಿಗನಿಗೆ ಬೇಕಾಗರುವುದೇ ಹೊಂದಾಣಿಕೆಯ ಮನೋಭಾವ. ಟ್ಯಾನ್‌ ಬಗ್ಗೆ, ಡಯಟ್‌ ಬಗ್ಗೆ ಪ್ರಯಾಣದ ವೇಳೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.

New Project (5)

ಡಿಫರೆಂಟ್‌ ಟ್ರಾವೆಲ್‌ ಬ್ಯಾಗ್

ನನ್ನ ಟ್ರಾವೆಲ್‌ ಬ್ಯಾಗ್‌ ತುಂಬಾ ಆಹಾರ ಪದಾರ್ಥಗಳೇ ತುಂಬಿಕೊಂಡಿರುತ್ತವೆ. ನಾನು ಫುಡ್ಡಿ. ಟ್ರಾವೆಲ್‌ ಮಾಡುವಾಗಲಂತೂ ಆಹಾರ ಜತೆಗಿರಲೇ ಬೇಕು. ಅಲ್ಲದೆ ಮಗ್‌ ಒಂದನ್ನು ಜತೆಗಿಟ್ಟುಕೊಳ್ಳುತ್ತೇನೆ ಬಿಸಿ ನೀರು, ಗ್ರೀನ್‌ ಟೀ, ಮಾತ್ರವಲ್ಲದೆ ನನ್ನಿಷ್ಟದ ಫಿಲ್ಟರ್‌ ಕಾಫಿ ಬೇಕೆನಿಸಿದಾಗೆಲ್ಲ ಆ ಮಗ್‌ ಬಳಕೆ ಮಾಡುತ್ತೇನೆ. ಹೀಗೆ ನಾಟಕ ಪ್ರದರ್ಶನ ಮುಗಿಸಿ ಮನೆಗೆ ಬಂದಮೇಲೆ ವಾರದ ಕಾಲ ಡಯೆಟ್, ಯೋಗ, ಜಿಮ್‌ ಮಾಡಿ ಆರೋಗ್ಯ ಕಾಪಾಡಿಕೊಳ್ಳುತ್ತೇನೆ.

ಉತ್ತರ ಕರ್ನಾಟಕದ ಆಹಾರ ನನಗಿಷ್ಟ

ಮಂಗಳೂರು, ಮಲೆನಾಡಿನ ಭಾಗದಲ್ಲಿ ಪ್ರದರ್ಶನಗಳಿಗಾಗಿ ಹೋದರೆ ನನಗೆ ಆಹಾರದ ಸಮಸ್ಯೆಯಾಗುತ್ತದೆ. ಅಲ್ಲಿ ಬಾಯಿಲ್ಡ್‌ ರೈಸ್‌, ಸಪ್ಪೆಯಾಗಿರುವ ಮಜ್ಜಿಗೆ ಹುಳಿಯನ್ನೇ ಮಾಡುವುದರಿಂದ ಖಾರಕ್ಕಾಗಿ ಅಲ್ಲೇ ಸಿಗುವ ಸೂಜಿ ಮೆಣಸನ್ನು ಸೇರಿಸಿಕೊಳ್ಳುತ್ತೇನೆ. ಆಹಾರದ ವಿಚಾರದಲ್ಲಿ ಉತ್ತರ ಕರ್ನಾಟಕ ಬೆಸ್ಟ್. ಖಾರದ ಜತೆಗೆ ಬ್ಯಾಲೆನ್ಸ್ಡ್‌ ಫುಡ್ ಆಗಿರುವುದರಿಂದ ನನಗೆ ನಾಲಿಗೆ ರುಚಿ ಹೆಚ್ಚಿಸುತ್ತದೆ.

ಪ್ರವಾಸದ ನಡುವೆಯೂ ಆರೋಗ್ಯ ಕಾಳಜಿ

ನನ್ನ ಪ್ರವಾಸ ಎಲ್ಲರಂತಲ್ಲ. ಹೆಚ್ಚಿಗೆ ನಾಟಕದ ಪ್ರದರ್ಶನಗಳಿಗಾಗಿ ಪ್ರವಾಸ ಮಾಡುತ್ತಿರುತ್ತೇನೆ. ಆದರೆ ಪ್ರಯಾಣದ ವೇಳೆ ಆರೋಗ್ಯ ಕಾಳಜಿ ಅತಿ ಮುಖ್ಯ. ಅದಕ್ಕಾಗಿಯೇ ಸಮಯ ಸಿಕ್ಕಾಗ ನಿದ್ದೆ ಮಾಡುತ್ತೇನೆ. ಇದು ನನ್ನೊಳಗಿನ ಒತ್ತಡವನ್ನು ಕಡಿಮೆ ಮಾಡಿ ಹೆಚ್ಚಿನ ಚೈತನ್ಯವನ್ನು ನೀಡುತ್ತದೆ. ಜತೆಗೆ ನಿತ್ಯವೂ ಹರಳೆಣ್ಣೆಯನ್ನು ಕೈ, ಕಾಲು, ನಾಭಿ, ಮುಖ ಹಾಗೂ ನೆತ್ತಿಗೆ ಹಚ್ಚಿಕೊಳ್ಳುತ್ತೇನೆ. ಇದರಿಂದ ಈ ಬೇಸಿಗೆಯಲ್ಲೂ ದೇಹ ತಂಪಾಗಿರುತ್ತದೆ.