Friday, March 6, 2026
Friday, March 6, 2026

ಅದಿತಿ ಪ್ರಭುದೇವ ಟ್ರಾವೆಲ್‌ ಲೈಫ್‌

ಕನ್ನಡ ಕಿರುತೆರೆ ನಟಿಯಾಗಿ, ಚಂದನವನದ ಬಹು ಬೇಡಿಕೆಯ ನಟಿಯಾಗಿಯೂ ಗುರುತಿಸಿಕೊಂಡಿರುವ ಉತ್ತರ ಕರ್ನಾಟಕದ ಬೆಡಗಿ ಅದಿತಿ ಪ್ರಭುದೇವ ತಾಯ್ತನದ ಸಂಭ್ರಮದ ನಡುವೆಯೂ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್‌ಗಾಗಿ ಅನೇಕ ಪ್ರವಾಸ ಕೈಗೊಂಡಿರುವ ಅದಿತಿ, ಪತಿ ಯಶಸ್ ಪಟ್ಲ ಜತೆಗೂ ಅನೇಕ ಪ್ರವಾಸಿ ತಾಣಗಳನ್ನು ಸುತ್ತಾಡಿ ಬಂದಿದ್ದಾರೆ. ಅವರ ಪ್ರವಾಸಿ ಜೀವನ ಹೇಗಿದೆ ? ಇಲ್ಲಿದೆ ಮಾಹಿತಿ.

ಶಾಲಾ ಪ್ರವಾಸಕ್ಕೆ ಹೋಗಿಯೇ ಇಲ್ಲ

ನನ್ನ ಬಾಲ್ಯದಲ್ಲಿ ಅಷ್ಟಾಗಿ ಸ್ಕೂಲ್‌ ಟ್ರಿಪ್‌ಗಳಿಗೆ ಹೋದ ಅನುಭವವೂ ನನಗಿಲ್ಲ. ಆದರೆ ಪ್ರತಿ ವರ್ಷವೂ ತಂದೆ, ತಾಯಿ ಹಾಗೂ ತಮ್ಮನೊಂದಿಗೆ ಕರ್ನಾಟಕದೊಳಗೆ ಅನೇಕ ಪ್ರವಾಸಗಳನ್ನು ಮಾಡಿದ್ದೇನೆ. ಬೇಲೂರು, ಹಳೆಬೀಡು, ಶ್ರವಣಬೆಳಗೊಳ, ಹಂಪಿ ಸುತ್ತಾಡಿ ಬಂದಿದ್ದೇನೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಂಥ ಪ್ರಮುಖ ಧಾರ್ಮಿಕ ಸ್ಥಳಗಳನ್ನೂ ನೋಡಿಬಂದಿದ್ದೇನೆ. ಕಾಲೇಜು ವಿದ್ಯಾಭ್ಯಾಸವೆಂಬ ಬದುಕಿನ ಘಟ್ಟದಲ್ಲಿ ಓದುವುದು, ಕುಟುಂಬದೊಂದಿಗೆ ಕಳೆದುಹೋಗಿದ್ದೆ. ಸಿನಿಮಾ ಇಂಡಸ್ಟ್ರಿಗೆ ಬಂದ ಮೇಲೆಯೇ ನನ್ನ ಬದುಕಿನಲ್ಲಿ ಪ್ರಯಾಣವೆಂಬುದು ಪ್ರಾರಂಭವಾಗಿದ್ದು.

ಶೂಟಿಂಗ್‌ ಪ್ರವಾಸವೇ ಹೆಚ್ಚು

aditi (3)

ʻಅಂದೊಂದಿತ್ತು ಕಾಲʼ, ʻಗಜಾನನ ಆಂಡ್‌ ಗ್ಯಾಂಗ್‌ʼ ಸಿನಿಮಾ ಚಿತ್ರೀಕರಣದ ಬಹುಪಾಲು ಶಿವಮೊಗ್ಗದ ಸುಂದರ ತಾಣಗಳ ನಡುವೆಯೇ ನಡೆದಿತ್ತು. ಅಲ್ಲಿನ ಹಚ್ಚಹಸಿರಿನ ಪ್ರದೇಶಗಳು, ಪರ್ವತ ಶಿಖರಗಳಂತೂ ಮೋಡಿಮಾಡುವಂತಿವೆ. ಆಗುಂಬೆಯಂಥ ಜಾಗಗಳಿಗೆ ಚಿಕ್ಕವಳಿದ್ದಾಗ ಹೋದ ನೆನಪಿತ್ತು. ಆದರೆ ಅಲ್ಲಿಗೆ ಮತ್ತೆ ಭೇಟಿ ನೀಡುವ ಅವಕಾಶ ಚಿತ್ರರಂಗದಿಂದಲೇ ಸಿಕ್ಕಿದೆ. ಅಲ್ಲದೆ ಚಿತ್ರೀಕರಣದ ನೆಪದಲ್ಲಿ ಥೈಲ್ಯಾಂಡ್‌ ಪ್ರವಾಸ ಹೋಗುವುದಕ್ಕೂ ಸಾಧ್ಯವಾಗಿದೆ. ಆದರೆ ಅನೇಕ ಕಡೆ ಚಿತ್ರೀಕರಣ ಮುಗಿಸುವಷ್ಟರಲ್ಲೇ ದಣಿವಾಗಿ, ಸುತ್ತಾಡುವ ಶಕ್ತಿ ದೇಹದಲ್ಲಿರುವುದೇ ಇಲ್ಲ.

ಪ್ರವಾಸಪ್ರಿಯ ಪತಿರಾಯ

aditi (1)

ವಿವಾಹವಾದ ನಂತರ ನನ್ನ ಬದುಕೇ ಬದಲಾಗಿದೆ. ಪ್ರವಾಸಿ ಜೀವನವನ್ನು ನಾನು ನೋಡುವ ರೀತಿಯೇ ಭಿನ್ನವಾಗಿತ್ತು. ಪ್ರವಾಸ, ಪ್ರಯಾಣದಲ್ಲಿ ನನಗೆ ಆಸಕ್ತಿಯಿರಲಿಲ್ಲ. ಆದರೆ ನನ್ನ ಪತಿಗೆ ಪ್ರವಾಸಿ ಜೀವನವೆಂದರೆ ಬಹಳ ಇಷ್ಟ. ನ್ಯೂಸ್‌, ಸ್ಪೋರ್ಟ್ಸ್‌ ಗಿಂತಲೂ ಹೆಚ್ಚಿಗೆ ಪ್ರವಾಸಿ ತಾಣಗಳ ಬಗೆಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಇತ್ತೀಚೆಗೆ ನಾನೂ ಅವರ ಹಾದಿಗೆ ಬಂದಿದ್ದೇನೆ ಅನಿಸುತ್ತದೆ.

ಮೊದಲ ಚಾರಣ ಕುಮಾರಪರ್ವತಕ್ಕೆ

ಜೀವನದಲ್ಲಿ ಚಾರಣವನ್ನೇ ಮಾಡದ ನಾನು, ಕುಮಾರ ಪರ್ವತದಿಂದಲೇ ಚಾರಣಕ್ಕೆ ಮುಂದಾಗಿದ್ದೆ. ಪತಿ ಹಾಗೂ ಕುಟುಂಬದ 15-20 ಮಂದಿಯ ತಂಡ ಕುಮಾರ ಪರ್ವತವೇರಿದ್ದೆವು. ಆ ಚಾರಣ ನನ್ನಲ್ಲಿ ಪ್ರವಾಸಿ ಜೀವನ, ಚಾರಣದ ಬಗೆಗೆ ಹೊಸ ಕನಸುಗಳನ್ನು ಹುಟ್ಟುಹಾಕಿತ್ತು. ಅಲ್ಲಿಂದ ನಂತರ ಅನೇಕ ಕಡೆಗಳಲ್ಲಿ ಆನೆ ಶಿಬಿರ, ಅರಣ್ಯ ಸುತ್ತಾಟ, ಮ್ಯಾಂಗ್ರೋವ್‌ ಫಾರೆಸ್ಟ್, ಕ್ಯಾಂಪ್‌ ಫೈರ್‌ ಹೀಗೆ ಅನೇಕ ಪ್ರಯತ್ನಗಳನ್ನು ಮಾಡಿದ್ದೇನೆ. ದೇಶ ಸುತ್ತುವ ಆಸೆ ಹೊಂದಿದ್ದೇನೆ.

ಮನಾಲಿ ಶುಚಿತ್ವದ ಬಗ್ಗೆ ಗಮನಹರಿಸಲಿ

aditi (4)

ಭಾರತದ ಅತ್ಯಂತ ಸುಂದರವಾದ ಪ್ರದೇಶಗಳ ಪೈಕಿ ಮನಾಲಿ ಪ್ರಮುಖವಾದುದು. ಅಲ್ಲಿಗೆ ಪತಿ ಜತೆಗೆ ಹೋಗಿ ಬಂದಿದ್ದೆ. ಅಲ್ಲಿರುವ ಪ್ರಾಚೀನ ದೇವಾಲಯಗಳ ಹಿನ್ನೆಲೆ, ಇತಿಹಾಸಗಳನ್ನು ತಿಳಿದುಕೊಳ್ಳುವ ಅವಕಾಶ ನನಗೆ ಸಿಕ್ಕಿತ್ತು. ಅವರ ಆಹಾರ ಪದ್ಧತಿ, ಉಡುಗೆ- ತೊಡುಗೆಗಳೆಲ್ಲವೂ ಅಲ್ಲಿನ ವಾತಾವರಣಕ್ಕೆ ತಕ್ಕಂತೆ ವಿಭಿನ್ನವಾಗಿದೆ. ಆ ಪ್ರವಾಸದಲ್ಲಿ ನಾನು ಜ್ವರದಿಂದ ಬಳಲುತ್ತಿದ್ದೆನಾದರೂ, ಅದ್ಯಾವುದನ್ನೂ ಲೆಕ್ಕಿಸದೇ ನನ್ನನ್ನೇ ಮರೆತುಬಿಟ್ಟಿದೆ. ಆದರೆ ಶುಚಿತ್ವದ ವಿಚಾರದಲ್ಲಿ ಮನಾಲಿ ಬಹಳ ಹಿಂದಿದೆ.

ಕೇರಳಿಗರ ಆತಿಥ್ಯಕ್ಕೆ ಮನಸೋತೆ

ದೇವರ ನಾಡು ಎಂದೇ ಹೆಸರಾಗಿರುವ ಕೇರಳದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ವಯನಾಡಿಗೆ ಹೋಗುವ ಅವಕಾಶ ನನಗೆ ಸಿಕ್ಕಿತ್ತು. ಅಲ್ಲಿ ಸಿಗುವ ಪುಟ್ಟು ನನಗೆ ಬಹಳ ಇಷ್ಟ. ಆರೋಗ್ಯಕರವೆಂಬ ಕಾರಣಕ್ಕೆ ಎಲ್ಲ ಆಹಾರ ತಯಾರಿಕೆಯಲ್ಲೂ ಕೊಬ್ಬರಿ ಎಣ್ಣೆಯನ್ನೇ ಬಳಕೆ ಮಾಡುತ್ತಾರೆ. ವಿಶೇಷವಾಗಿ ಹೇಳುವುದಾದರೆ ಅಲ್ಲಿನವರ ಆತಿಥ್ಯವನ್ನು ಮೆಚ್ಚಿಕೊಳ್ಳಲೇಬೇಕು. ಶುಚಿತ್ವದಲ್ಲಂತೂ ನಂಬರ್‌ ಒನ್.‌

ಅತಿಥಿಗಳನ್ನು ಗೌರವಿಸಿ, ಆದರಿಸಿ

ದೇಶ ಭಕ್ತಿ ಎನ್ನುವುದು ಯಾವುದೋ ಒಂದು ಸಿನಿಮಾ ನೋಡಿ, ಕೆಲವು ಕ್ಷಣದ ಅವೇಶದಿಂದ ಹುಟ್ಟಿಕೊಳ್ಳುವುದಲ್ಲ. ಬೇರೆ ದೇಶಗಳಿಂದ ಬಂದ ಅತಿಥಿಗಳನ್ನು ನಾವು ಹೇಗೆ ನೋಡಿಕೊಳ್ಳುತ್ತೇವೆ ಎಂಬುದರ ಮೇಲಿರುತ್ತದೆ. ಆಗ ಅವರು ತಮ್ಮ ದೇಶದಲ್ಲಿ ನಮ್ಮ ದೇಶದ ಆತಿಥ್ಯ, ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಮಾತನಾಡುತ್ತಾರೆ. ಅದುವೇ ದೇಶಕ್ಕೆ, ಭೂಮಿತಾಯಿಗೆ ನಾವು ಕೊಡುವ ಗೌರವ. ಅತಿಥಿ ದೇವೋಭವ ಎಂಬುದು ಬರೀ ಬಾಯಿ ಮಾತಿನಲ್ಲಿರುವುದಲ್ಲ.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಸ್ಮಶಾನವನ್ನೂ ಬಿಟ್ಟಿಲ್ಲ

aditi (2)

ಪತಿಯ ಜತೆ ಸ್ವಿಟ್ಜರ್‌ಲ್ಯಾಂಡ್‌ ಗೆ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದೆ. ಯಾವುದೇ ಏಜೆನ್ಸಿಗಳನ್ನು ಅವಲಂಬಿಸದೇ ನಾವೇ ಪ್ಲಾನ್ ಮಾಡಿಕೊಂಡು 21 ದಿನಗಳ ಪ್ರವಾಸ ಮಾಡಿದ್ದೆವು. ಇಷ್ಟೊಂದು ದಿನಗಳ ಪ್ರವಾಸ ಕೈಗೊಂಡಿದ್ದು ಜೀವನದಲ್ಲಿ ಇದೇ ಮೊದಲು. ಯುಂಫು ಪರ್ವತ ಶ್ರೇಣಿ, ಅಲ್ಲಿ ಮಾಡಿದ್ದ ಸ್ಕೈ ಡೈವಿಂಗ್‌, ಪ್ಯಾರಿಸ್‌ ಟವರ್‌ ವಿಸಿಟ್‌, ಗಿಮ್ಮೆಲ್ವಾಲ್ಡ್ ಎಂಬ ಪ್ರಪಂಚದ ಸುಂದರವಾದ ಹಳ್ಳಿ ಹೀಗೆ ಅನೇಕ ಪ್ರದೇಶಗಳಿಗೆ ಭೇಟಿ ನೀಡಿದ್ದೆವು. ಸ್ಮಶಾನವನ್ನೂ ಬಿಡದೆ ಪ್ರತಿಯೊಂದರ ಅನುಭವವನ್ನೂ ಪಡೆದುಕೊಂಡಿದ್ದೆವು. ಅಲ್ಲಿನ ಜನರ ಮನಸ್ಥಿತಿ, ಪದ್ಧತಿ ಹಾಗು ಸಂಸ್ಕೃತಿಯನ್ನು ಹತ್ತಿರದಿಂದ ತಿಳಿಯುವುದಕ್ಕೆ ಸಾಧ್ಯವಾಯಿತು. ಅಲ್ಲಿನ ಸಾರಿಗೆ ವ್ಯವಸ್ಥೆ ಬಹಳ ಅದ್ಭುತವಾಗಿದೆ. ಕಳೆದ ಬಾರಿಯ ಪ್ರವಾಸದಲ್ಲಿ ಅನೇಕ ಪ್ರದೇಶಗಳಿಗೆ ಹೋಗಲು ಆಗಿಲ್ಲ. ಆದ್ದರಿಂದ ಈ ವರ್ಷ ಮತ್ತೊಮ್ಮೆ ಸ್ವಿಸ್‌ ಗೆ ಹೋಗುವ ಪ್ಲಾನ್ ಮಾಡಿದ್ದೇವೆ.

ಟ್ರಾವೆಲ್‌ ಲೈಫ್‌ ನಿಂತೇಹೋಗಿತ್ತು

aditi (6)

ಮಕ್ಕಳು ಹುಟ್ಟಿದ ಮೇಲೆ ಟ್ರಾವೆಲ್‌ ಲೈಫ್ ಬದಲಾಗುತ್ತದೆ ಎನ್ನುವವರಿದ್ದಾರೆ. ಆದರೆ ನನ್ನ ವಿಚಾರದಲ್ಲಿ ಟ್ರಾವೆಲ್‌ ಲೈಫ್‌ ನಿಂತೇಹೋಗಿದೆ. ಈವರೆಗೆ ಮಡಿಕೇರಿ, ಮೈಸೂರಿನ ಹೊರತು ಮಗಳ ಜತೆಗೆ ದೂರದ ಪ್ರಯಾಣ ಮಾಡಿಯೇ ಇಲ್ಲ. ಅವಳಿಗೆ 2 ವರ್ಷ ತುಂಬಲಿ ಎಂದು ಕಾಯುತ್ತಿದ್ದೆ. ಈ ಬಾರಿ ಏಪ್ರಿಲ್‌ನಲ್ಲಿ ಅವಳ ಎರಡನೇ ವರ್ಷದ ಹುಟ್ಟುಹಬ್ಬವನ್ನು ಸ್ವಿಟ್ಜರ್‌ಲ್ಯಾಂಡ್‌ನಲ್ಲೇ ಮಾಡಬೇಕೆಂದುಕೊಂಡಿದ್ದೇವೆ. ಅವಳ ಜತೆಗೆ ನಮಗೂ ಇದು ವಿಶೇಷ ಅನುಭವ.

ಪ್ರವಾಸ ವರವೂ ಹೌದು, ಶಾಪವೂ ಹೌದು

ಒಮ್ಮೆ ಸೆಲೆಬ್ರಿಟಿಗಳು ಎನಿಸಿಕೊಂಡಮೇಲೆ ಪ್ರವಾಸಿ ಜೀವನ ಸುಲಭದ ಮಾತಲ್ಲ. ಅದರಲ್ಲೂ ಕರ್ನಾಟಕದಲ್ಲಿ ಸುತ್ತಾಡಬೇಕೆಂದರೆ ಬಹಳ ಕಷ್ಟ. ಇದು ಕಲಾವಿದನಾದವನಿಗೆ ವರವೂ ಹೌದು, ಶಾಪವೂ ಹೌದು. ಮೊದಲೆಲ್ಲಾ ಅಭಿಮಾನಿಗಳು ಫೊಟೋ, ಸೆಲ್ಫೀ ಅಂದಾಗ ಆರಾಮಾಗಿಯೇ ರಿಯಾಕ್ಟ್‌ ಮಾಡುತ್ತಿದ್ದೆ. ಆದರೆ ಈಗ ಮಗಳು ಹುಟ್ಟಿದ ಮೇಲೆ ಅದು ಕಷ್ಟವೆನಿಸುತ್ತದೆ. ಮಗು ಅಳುವಾಗ, ಊಟ ಮಾಡಿಸುವಂಥ ಸಂದರ್ಭದಲ್ಲಿ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರೆ ಹೇಗೆ ಪ್ರತಿಕ್ರಿಯಿಸಬೇಕೆಂಬ ಗೊಂದಲವಾಗುತ್ತದೆ. ನನ್ನಂತೆ ಇನ್ನೂ ಅನೇಕ ಸೆಲೆಬ್ರಿಟಿಗಳಿಗೂ ಇದೇ ಅನುಭವವಾಗಿರುತ್ತದೆ.

ಯುರೋಪಿನಲ್ಲಿ ಸರ್ಪ್ರೈಸ್ ಗಿಫ್ಟ್

ನಮ್ಮದು ಅರೇಂಜ್‌ ಮ್ಯಾರೇಜ್‌ ಆಗಿದ್ದರಿಂದ ಮೀಟ್‌ ಮಾಡುವುದಕ್ಕೊಂದು ಪ್ರವಾಸ, ಪ್ರಪೋಸ್‌ ಮಾಡುವುದಕ್ಕೆ ಇನ್ನೊಂದು ಪ್ರವಾಸವೆಂದೇನಿಲ್ಲ. ಮಾತುಕತೆಯೆಲ್ಲವೂ ಬೆಂಗಳೂರಿನಲ್ಲೇ ಆಯ್ತು. ಆದರೆ ಮದುವೆ ನಂತರ ಯುರೋಪ್‌ ಪ್ರವಾಸ ಮಾಡಿದ್ದ ವೇಳೆ ಯುರೋಪ್‌ನ ಅತ್ಯಂತ ಎತ್ತರದ ಜಾಗವಾದ ಯುಂಗ್ಫ್ರೂನಲ್ಲಿ ನಾನು ಮೊದಲೇ ನೋಡಿ, ದುಬಾರಿಯೆಂದು ಕೈಬಿಟ್ಟ ಆಂಟಿಕ್‌ ಚೈನ್‌ ಒಂದನ್ನು ಸರ್ ಪ್ರೈಸ್‌ ಆಗಿ ಗಿಫ್ಟ್‌ ಮಾಡಿದ್ದರು. ಅದು ನನಗೆ ಮರೆಯಲಾಗದ ಉಡುಗೊರೆ.

ಟ್ರಾವೆಲ್‌ ಬ್ಯಾಗ್‌ ತುಂಬೆಲ್ಲಾ ಇವೇ ತುಂಬಿರುತ್ತವೆ..

aditi (5)

ನಾನು ವ್ಲಾಗ್ಸ್‌ ಮಾಡುವವಳಾಗಿರುವುದರಿಂದ ನನ್ನ ಟ್ರಾವೆಲ್‌ ಬ್ಯಾಗ್‌ ನಲ್ಲಿ ಟ್ರೈ ಪಾಡ್‌, ಮೊಬೈಲ್‌, ಪುಟ್ಟದಾದ ಲೈಟ್ಸ್‌, ಮೈಕ್‌ ಜತೆಗಿರುತ್ತದೆ. ಬಟ್ಟೆ ಇಲ್ಲವೆಂದರೆ ಹೋದಲ್ಲಿ ಕೊಂಡುಕೊಳ್ಳಬಹುದು. ವ್ಲಾಗ್‌ ಶೂಟ್‌ ಮಾಡಲು ಈ ಅಗತ್ಯ ವಸ್ತುಗಳು ಜತೆಗಿರಲೇಬೇಕು .

ಪ್ರವಾಸದಲ್ಲಿ ಆಹಾರವೇ ಮುಖ್ಯವಲ್ಲ..

ಯಾವುದೇ ಚಿತ್ರೀಕರಣದ ಸಂದರ್ಭಗಳಲ್ಲೂ ನಾನು ಮನೆಯಲ್ಲೇ ತಯಾರಿಸಿದ ಆಹಾರವನ್ನು ಜತೆಗೆ ಕೊಂಡೊಯ್ಯುತ್ತೇನೆ. ನನಗಿಷ್ಟವಾದ ಚಪಾತಿ, ರೊಟ್ಟಿ, ಕಾಳುಪಲ್ಯ ತರಕಾರಿಗಳನ್ನು ಬಾಕ್ಸ್‌ನಲ್ಲಿಟ್ಟುಕೊಂಡಿರುತ್ತೇನೆ. ಆದರೆ ಪ್ರವಾಸದ ವೇಳೆ ಹಾಗಲ್ಲ. ಸುತ್ತಾಡುವುದಕ್ಕೆ ಹೋಗಿರುವುದರಿಂದ ಅಲ್ಲಿ ಸ್ಥಳೀಯ ಆಹಾರವನ್ನೇ ಸೇವಿಸುತ್ತೇನೆ. ನನಗೆ ಆಹಾರಕ್ಕಿಂತ, ಪ್ರವಾಸವೇ ಮುಖ್ಯ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್