Wednesday, February 4, 2026
Wednesday, February 4, 2026

ಹಸಿರು ಸಿರಿಗೆ ಮನಸೋಲುವ ಸಿರಿ

ನಾನು ನಟಿಸಿದ ಮೊದಲ ಧಾರಾವಾಹಿಯ ಹೆಸರು ಅಂಬಿಕಾ.‌ ಅದರ ಚಿತ್ರೀಕರಣಕ್ಕೆಂದು ನಮ್ಮನ್ನು ಊಟಿಗೆ ಕರೆದೊಯ್ಯಲಾಗಿತ್ತು. ಅಲ್ಲಿಯೇ ನಾನು ದರ್ಶನ್‌ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದು‌. ನನಗೆ ಆ ಧಾರಾವಾಹಿಯಲ್ಲಿ ದರ್ಶನ್‌ ಅವರೇ ಜೋಡಿಯಾಗಿದ್ದರು. ಅಂದು ಊಟಿಯ ಶೂಟಿಂಗ್ ಪ್ರವಾಸ, ದರ್ಶನ್ ಅವರ ಜತೆಗಿನ ಶೂಟಿಂಗ್ ಅನುಭವ ಇವೆರಡರಿಂದಾಗಿ ಈ ಪ್ರವಾಸ ನನಗೆ ಮರೆಯಲಾಗದ ಸಂದರ್ಭವಾಗಿ ಉಳಿದುಕೊಂಡಿದೆ.

  • ಶಶಿಕರ ಪಾತೂರು

ಕನ್ನಡ ಕಿರುತೆರೆಯನ್ನು ದಶಕಗಳ ಕಾಲ ಆಳಿದ ಜನಪ್ರಿಯ ನಟಿ ಸಿರಿ. ಅವರ ಅಭಿನಯದ ರಂಗೋಲಿ ಧಾರಾವಾಹಿ ಇಂದಿಗೂ ಮನೆ ಮಾತು. ಇಂದಿನ ಜನರೇಶನ್ ಸಿರಿಯನ್ನು ನೆನಪಿಸಿಕೊಳ್ಳುವುದು ಬಿಗ್ ಬಾಸ್ ಮೂಲಕ. ವಿಶೇಷವೆಂದರೆ ಸಿನಿಮಾ, ಕಿರುತೆರೆಗಳಲ್ಲಿ ದರ್ಶನ್ ಹಾಗೂ ಸುದೀಪ್ ಗೆ ನಾಯಕಿಯಾಗಿ ಮೆರೆದವರು ನಟಿ ಸಿರಿ. ಇಂದಿಗೂ ಅವರು ಕನ್ನಡ, ತಮಿಳು ಧಾರಾವಾಹಿಗಳಲ್ಲಿ ಪ್ರಮುಖ‌ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸುಖಸಂಸಾರ ಸಾಗಿಸುತ್ತಿರುವ ಸಿರಿಗೆ ಹಸಿರು ಸಿರಿ ಮತ್ತು ನೀರು ತುಂಬಿದ ತಾಣಗಳಿಗೆ ಭೇಟಿ ನೀಡುವುದು ಮೆಚ್ಚಿನ ಹವ್ಯಾಸ. ತಮ್ಮ ಪ್ರವಾಸಾಸಕ್ತಿಯ ಬಗ್ಗೆ ಇಲ್ಲಿ ನಮ್ಮೊಂದಿಗೆ ಮಾತನಾಡಿದ್ದಾರೆ.

ಮೊದಲ‌ ಬಾರಿ ಪ್ರವಾಸ ಹೋದಂಥ ನೆನಪು ಯಾವುದು?

ಮೊದಲ ಟೂರ್‌ ಅಂದರೆ, ಸ್ಕೂಲ್ ನಿಂದ ಪಿಕ್‌ನಿಕ್‌ ಗೆ ಎಂದು ಕರೆದುಕೊಂಡು ಹೋಗಿರುವಂಥದ್ದು. ನಾನು ಹುಟ್ಟಿ ಬೆಳೆದಿದ್ದೆಲ್ಲ ಚಿಕ್ಕಬಳ್ಳಾಪುರದಲ್ಲಿ. ನಮ್ಮನ್ನು ಅಲ್ಲಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ರು. ಆಗ ಬಂದು ಮ್ಯೂಸಿಯಂ ಎಲ್ಲ ನೋಡಿಕೊಂಡು‌ ಹೋಗಿದ್ದೆವು.‌ "ಅಬ್ಬಾ ಬೆಂಗಳೂರು ಎಷ್ಟು ದೊಡ್ಡದಲ್ವಾ" ಅಂತ ಅನಿಸಿತ್ತು.

ಇದನ್ನೂ ಓದಿ: ಖುಲ್ಲಂಖುಲ್ಲ ಟೂರ್ ಮಾಡು... ಆರ್ ಯೂ ರೆಡಿ...?

ಆನಂತರದಲ್ಲಿ ಮತ್ತೆ ಪ್ರವಾಸ ಹೋಗಿರುವಂಥದ್ದು ಎಲ್ಲಿಗೆ?

ಆಮೇಲೆ ಕಾಲೇಜ್ ಜೀವನ‌ ಅಂತ ನನಗೆ ಇರಲಿಲ್ಲ. ಕರೆಸ್ಪಾಂಡೆನ್ಸ್ ನಲ್ಲೇ ಕಾಲೇಜ್ ವಿದ್ಯಾಭ್ಯಾಸ ಮಾಡಿಕೊಂಡಿದ್ದೆ. ಯಾಕೆಂದರೆ ಅದಾಗಲೇ ಶೂಟಿಂಗ್‌ಗೆ ಹೋಗಲು ಆರಂಭಿಸಿದ್ದೆ.

ಹಾಗಾಗಿ ಕಾಲೇಜ್ ಪ್ರವಾಸವಾಗಲೀ, ಫ್ರೆಂಡ್ಸ್ ಜತೆ ತಿರುಗಾಟ ಮಾಡಿದ್ದಾಗಲೀ ಇಲ್ಲ. ಇತ್ತೀಚೆಗೆ ಹೆಚ್ಚಾಗಿ ಫ್ಯಾಮಿಲಿ ಜೊತೆಯೇ ನಾನು ಹೆಚ್ಚು ಟೂರ್‌ ಹೋಗಿದ್ದೇನೆ‌. ಅದರ ಹೊರತಾಗಿ ಶೂಟಿಂಗ್ ಜಾಗಗಳೇ ನನಗೆ ಪ್ರವಾಸದ ಕೇಂದ್ರಗಳ ಹಾಗಿದ್ದವು.

Untitled design (74)

ಶೂಟಿಂಗ್ ಸಂದರ್ಭದಲ್ಲಿನ ಪ್ರವಾಸವನ್ನು ಎಂಜಾಯ್ ಮಾಡುವಷ್ಟು ಅವಕಾಶ ಸಿಗುತ್ತದೆಯೇ?

ಹಾಗೆ ನೋಡಿದರೆ ಶೂಟಿಂಗ್‌ ಗೆ ಎಂದು ಹೋದಾಗಲೇ ನಾವು ಅಪರೂಪದ ಜಾಗಗಳನ್ನು ನೋಡಲು ಸಾಧ್ಯವಾಗುವುದು. ಉದಾಹರಣೆಗೆ ನಂದಿಹಿಲ್ಸ್‌ ನಮಗೆ ಬಹಳ ಹತ್ತಿರದಲ್ಲೇ ಇದೆ. ಆದರೆ ನಾನು ಶೂಟಿಂಗ್‌ಗೆ ಹೋದಾಗಲೇ ನೋಡಿದ್ದು! ಕೆಲವೊಂದು ಅಪರೂಪದ ಜಾಗಗಳು ಶೂಟಿಂಗ್ ಸಂದರ್ಭದಲ್ಲಿ ಮಾತ್ರ ನೋಡುವ ಅವಕಾಶ ಸಿಗುವುದು ಕೂಡ ಇದೆ. ಮುಳ್ಳಯ್ಯನಗಿರಿ ಬೆಟ್ಟದಿಂದ ಹಿಡಿದು ಕೇರಳದ ತನಕ ನನ್ನ ಪ್ರವಾಸ ಶೂಟಿಂಗ್ ಸಂದರ್ಭದಲ್ಲೇ ಆಗಿದೆ. ಒಂದು ರೀತಿಯಲ್ಲಿ ಇದು ಹೆಚ್ಚು ಸುರಕ್ಷೆಯಿಂದ ಕೂಡಿದ ಪ್ರವಾಸವೂ ಹೌದು.

ಆರಂಭ ಕಾಲದ ಶೂಟಿಂಗ್ ನಲ್ಲಿ ಮರೆಯಲಾಗದ ಜಾಗ ಯಾವುದು?

ನಾನು ನಟಿಸಿದ ಮೊದಲ ಧಾರಾವಾಹಿಯ ಹೆಸರು ಅಂಬಿಕಾ.‌ ಅದರ ಚಿತ್ರೀಕರಣಕ್ಕೆಂದು ನಮ್ಮನ್ನು ಊಟಿಗೆ ಕರೆದೊಯ್ಯಲಾಗಿತ್ತು. ಅಲ್ಲಿಯೇ ನಾನು ದರ್ಶನ್‌ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದು‌. ನನಗೆ ಆ ಧಾರಾವಾಹಿಯಲ್ಲಿ ದರ್ಶನ್‌ ಅವರೇ ಜೋಡಿಯಾಗಿದ್ದರು. ಅಂದು ಊಟಿಯ ಶೂಟಿಂಗ್ ಪ್ರವಾಸ, ದರ್ಶನ್ ಅವರ ಜತೆಗಿನ ಶೂಟಿಂಗ್ ಅನುಭವ ಇವೆರಡರಿಂದಾಗಿ ಈ ಪ್ರವಾಸ ನನಗೆ ಮರೆಯಲಾಗದ ಸಂದರ್ಭವಾಗಿ ಉಳಿದುಕೊಂಡಿದೆ.

ಧಾರಾವಾಹಿಗಳಿಂದಾಗಿ ನೀವು ಇದುವರೆಗೆ ಅದೆಷ್ಟು ಜಾಗಗಳಿಗೆ ಭೇಟಿ ನೀಡಿರಬಹುದು?

ರಂಗೋಲಿ ಧಾರಾವಾಹಿ ಚಿತ್ರೀಕರಣದ ವೇಳೆ ಮುಳ್ಳಯ್ಯನ ಗಿರಿ ಬೆಟ್ಟ, ನಂದಿ ಹಿಲ್ಸ್, ಕೊಚ್ಚಿನ್ , ಸಕಲೇಶಪುರದ ಅಬ್ಬಿ ಜಲಪಾತ..ಹೀಗೆ ತುಂಬಾ ಜಾಗಗಳನ್ನು ನೋಡುವ ಅವಕಾಶ ಲಭಿಸಿತು. ತಮಿಳು ಧಾರಾವಾಹಿ ಶೂಟಿಂಗ್ ವೇಳೆ ತಮಿಳುನಾಡಿನ‌ ಪ್ರೇಕ್ಷಣೀಯ ಸ್ಥಳಗಳನ್ನು ಕೂಡ ನೋಡುವ ಅವಕಾಶ ಲಭಿಸಿತ್ತು.

ನೀವು ಕುಟುಂಬ ಸಮೇತ ಭೇಟಿ ನೀಡಿದ ತಾಣಗಳು ಯಾವುವು?

ನನ್ನ ತಾಯಿಗೆ ದೇವಸ್ಥಾನಗಳಿಗೆ ಟ್ರಿಪ್‌ ಹೋಗುವುದು ಅಂದರೆ ತುಂಬಾ ಇಷ್ಟ. ಹಾಗಾಗಿ ತಿರುಪತಿಗೆ ಹೋಗುತ್ತಾ ಇರುತ್ತೇವೆ. ಮೈಸೂರು ನಂಜನಗೂಡು, ಚಾಮುಂಡಿ ಬೆಟ್ಟ, ಅರುಣಾಚಲೇಶ್ವರನ ದರ್ಶನ ಮಾಡುತ್ತಾ ಇರುತ್ತೇವೆ. ಕೇರಳದ ಅನಂತ ಪದ್ಮನಾಭ ದೇವಸ್ಥಾನ, ತಮಿಳುನಾಡಿನ ತಿರುವಣ್ಣಾಮಲೈ ದೇವಸ್ಥಾನ ಹಾಗೆ ರಾಮೇಶ್ವರಕ್ಕೂ ಹೋಗಿದ್ದೇನೆ. ವಿಶೇಷವಾಗಿ ಚಾಮುಂಡಿ ಬೆಟ್ಟಕ್ಕೆ ಹೋದಾಗ, ನಂಜನಗೂಡು ನಂಜುಂಡೇಶ್ವರನ ದೇವಸ್ಥಾನ ಸಂದರ್ಶಿಸಿದಾಗ ಏನೋ‌ ಒಂದು ವೈಬ್ ಸಿಕ್ಕಂಥ ಅನುಭವವಾಗುತ್ತದೆ. ಚಿಕ್ಕಬಳ್ಳಾಪುರದ ನಂದಿಗ್ರಾಮದ ಭೋಗ ನಂದೀಶ್ವರ ದೇವಸ್ಥಾನವಂತೂ ನನಗೆ ತುಂಬಾನೇ ಇಷ್ಟ. ನನ್ನ ಮದುವೆ ಕೂಡ ಅಲ್ಲೇ ಆಗಿದ್ದು.

Untitled design (75)

ನಿಮ್ಮ ವಿದೇಶ ಪ್ರವಾಸ ಅನುಭವಗಳ ಬಗ್ಗೆ ಹೇಳಿ.

ವಿದೇಶ ಪ್ರವಾಸಗಳಲ್ಲಿ ನನಗೆ ಇಂಡೋನೇಷ್ಯಾದ ಬಾಲಿ ತುಂಬ ಇಷ್ಟ ಆಯ್ತು. ಅಲ್ಲಿನ ನೀರು ತುಂಬ ಪ್ಯೂರ್. ದಟ್ಟ ನೀಲಿಯಾಗಿ ಕಾಣಿಸುತ್ತದೆ. ಇನ್ನೊಂದು ಕಪ್ಪು ಬೀಚ್ ಕೂಡ ಇದೆ. ಅವುಗಳು ಸಾಮಾನ್ಯ ಹಳ್ಳಿಗಳಾದ್ರೂ ಬಹಳ ಶಿಸ್ತಾಗಿ ಇರಿಸಿಕೊಂಡಿದ್ದಾರೆ. ಟ್ರಾಫಿಕ್‌ ರೂಲ್ಸ್‌ ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಟೂರಿಸಂನಲ್ಲೇ ಬದುಕುವ ದೇಶವಾದರೂ ಚೆನ್ನಾಗಿ ಉಳಿಸಿಕೊಂಡಿರುವುದು ಮಾದರಿಯ ವಿಚಾರ‌. ಉಳಿದಂತೆ ಸಿಂಗಾಪುರ ಕೂಡ ಇಷ್ಟವಾಗುತ್ತದೆ. ಆದರೆ ಬಿಸಿಲು ಮಾತ್ರ ಕಷ್ಟ. ಇನ್ನು ವಾಟರ್ ಗೇಮ್ಸ್ ವಿಚಾರಕ್ಕೆ ಬಂದರೆ ಥೈಲ್ಯಾಂಡ್‌ ಚೆನ್ನಾಗಿದೆ. ಅಗ್ಗದಲ್ಲಿ ಒಳ್ಳೆಯ ಬಟ್ಟೆಗಳು ಸಿಗುತ್ತವೆ. ಶೂಟಿಂಗ್ ಗೆ ಅಲ್ಲಿಂದಲೇ ಬಟ್ಟೆ ತಂದಿದ್ದೇನೆ. ಮೆಟಿರೀಯಲ್‌ ಕೂಡ ಚೆನ್ನಾಗಿರುತ್ತವೆ. ವಿಗ್‌ ಹೇರ್‌ ಗೆ ಸಂಬಂಧಪಟ್ಟಂತೆ ಹಾಗೂ ಬಹಳಷ್ಟು ಉತ್ತಮ ಆಕ್ಸೆಸರೀಸ್‌ ಸಿಗುತ್ತವೆ. ಸಿಂಗಾಪುರದಲ್ಲಿನ ಯೂನಿವರ್ಸಲ್ ಸ್ಟುಡಿಯೋ ಆ ದೇಶದೊಳಗೆ ಮತ್ತೊಂದು ಜಗತ್ತನ್ನೇ ಕಟ್ಟಿಕೊಟ್ಟಂತಿದೆ. ನಮ್ಮ ಬೆಂಗಳೂರಿನ 'ಜಾಲಿವುಡ್ ಸ್ಟುಡಿಯೋ'ದಲ್ಲೂ ಇದರ ಸಣ್ಣದೊಂದು ಮಾದರಿಯನ್ನು ಕಾಣಬಹುದಾಗಿದೆ.‌

ಮುಂದೆ ಎಲ್ಲಿಗೆ ಪ್ರವಾಸ ಹೋಗಬೇಕು ಅನ್ನುವ ಕನಸಿದೆ?

ಕಾಶ್ಮೀರಕ್ಕೆ ಹೋಗಬೇಕು. ಅಲ್ಲಿ ಹಿಮದಲ್ಲಿ ಆಟ ಆಡಬೇಕು ಎನ್ನುವುದು ನನ್ನ ಆಸೆ. ನನಗೆ ಹಿಲ್‌ ಸ್ಟೇಷನ್‌ಗಳಿಗೆ ಭೇಟಿ ಕೊಡುವುದು ಅಂದರೆ ತುಂಬಾನೇ ಇಷ್ಟ. ಕರ್ನಾಟಕದಲ್ಲಿ ದಾಂಡೇಲಿ, ಆಗುಂಬೆ ಎಲ್ಲ ಸುತ್ತಾಡಿದ್ದೇನೆ. ದುಬೈಗೆ ಹೋಗಿ ಬಂದ ನನ್ನ ಗಂಡ ಅಲ್ಲಿನ ಕ್ಲೀನ್ಲಿನೆಸ್ ಬಗ್ಗೆ, ಟ್ರಾಫಿಕ್ ರೂಲ್ಸ್ ಬಗ್ಗೆ ತುಂಬಾನೇ ಹೊಗಳಿದ್ದಾರೆ. ಆದರೆ ನನಗೆ ಡ್ರೈ ಜಾಗಗಳು, ಬಿಸಿಲು ಇಷ್ಟ ಇಲ್ಲ. ಹಾಗಾಗಿ ಅಂಥ ಪ್ರದೇಶಗಳಿಗೆ ಹೋಗುವುದನ್ನು ಅವಾಯ್ಡ್ ಮಾಡುತ್ತೇನೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್