ಕಲ್ಲು ಕಲ್ಲೆನುತಾವ್ ಹೆಜ್ಜೆ..
ಇಂಗ್ಲೆಂಡಿನ ವಿಲ್ಟಶೈರ್ ಎಂಬ ಜಾಗದಲ್ಲಿ ಇರುವ ಈ ಸ್ಟೋನ್ ಹೆಂಜ್ ಎಂಬುದು ಒಂದು ವಿಸ್ಮಯವೇ ಸರಿ. ವೃತ್ತಾಕಾರದಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಹೂತಿರುವ ಮತ್ತು ವಿಚಿತ್ರ ವಿನ್ಯಾಸದಲ್ಲಿ ಕಲ್ಲುಗಳನ್ನು ಜೋಡಿಸಿರುವ ಈ ಜಾಗದ ಹಿಂದೆ ಅನೇಕ ಕತೆಗಳು, ಕಟ್ಟು ಕತೆಗಳು, ಕಲ್ಪನೆಗಳು ಹೆಣೆದುಕೊಂಡಿವೆ.
- ಸಂಜೋತಾ ಪುರಾಹಿತ್
ಇಂಗ್ಲೆಂಡಿನ ಬರ್ಮಿಂಗ್‌ಹ್ಯಾಮಿಗೆ 2016ರಲ್ಲಿ ಒಂದು ವರ್ಷದ ಮಟ್ಟಿಗೆ ಕೆಲಸದ ಮೇಲೆ ಹೋಗಿದ್ದಾಗ ಕಣ್ಣ ತುಂಬ ಕನಸುಗಳು. ಮೊದಲ ಬಾರಿಗೆ ವಿಮಾನಯಾನ, ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಕಾಲಿಟ್ಟ ಆತಂಕದ ಘಳಿಗೆ, ಮೊದಲ ಬಾರಿಗೆ ಮನೆಯವರನ್ನೆಲ್ಲ ತೊರೆದು ಸಾವಿರಾರು ಮೈಲಿಗಳಷ್ಟು ದೂರಕ್ಕೆ ಹೋಗಿದ್ದು.. ಹೀಗೆ ಹಲವಾರು ಮೊದಲ ಸಲದ ಪುಳಕಗಳು. ನಾನು ಹೋಗಿದ್ದು ಆಗಸ್ಟ್ ತಿಂಗಳಿನಲ್ಲಿ ಆದರೂ ತಣ್ಣಗಿನ ಚಳಿ ಏರಪೋರ್ಟಿನಲ್ಲಿಯೇ ಸ್ವಾಗತಿಸಿತ್ತು. ಇಂಗ್ಲಿಷ್ ಚೆನ್ನಾಗಿಯೇ ಬರುತ್ತಿದ್ದರೂ ಬ್ರಿಟನ್ನಿನ ಜನ ಕೆಲವೊಂದು ಪದಗಳನ್ನು ಜೋಡಿಸಿಯೂ ಇನ್ನು ಕೆಲವು ಪದಗಳನ್ನು ತೀರಾ ಎಳೆದು ಮಾತನಾಡಿದಾಗ ಏನೋ ಅಸ್ಪಷ್ಟತೆ. ನಿತ್ಯ ಕೆಲಸ ಮಾಡುವ ಟೀಮಿನ ಪರಿಚಯ ಮತ್ತು ಸ್ನೇಹಿತರು ಜತೆಗಿದ್ದರೂ ಹೊಸ ಜಾಗಕ್ಕೆ ಹೊಂದಿಕೊಳ್ಳಲು ಬಹಳವೇ ಸಮಯ ಬೇಕಾಯಿತು. ಇಂಗ್ಲೆಂಡಿಗೆ ಈಗಾಗಲೇ ಹೋಗಿ ಬಂದಿದ್ದ ನಮ್ಮ ಟೀಮಿನ ಸದಸ್ಯರೆಲ್ಲ ಅಲ್ಲಿಗೆ ಹೋದಾಗ ಯಾವಾವ ಜಾಗಕ್ಕೆ ಹೋಗಬೇಕು, ಹೇಗೆ ಆ ಒಂದು ವರ್ಷವನ್ನು ಪ್ರವಾಸದ ದೃಷ್ಟಿಯಿಂದ ಸದುಪಯೋಗ ಪಡಿಸಿಕೊಳ್ಳಬೇಕು ಎಂದೆಲ್ಲ ಕಿವಿಮಾತು ಹೇಳಿದ್ದರು. ತಾವು ಹೋಗಿದ್ದ ಯುರೋ ಟ್ರಿಪ್ ಅನ್ನು ನೆನೆಯುತ್ತ ಸ್ವಿಟ್ಜರಲ್ಯಾಂಡ್, ಪ್ಯಾರಿಸ್, ರೋಮ್ ಎಂದೆಲ್ಲ ಅವರು ಬಣ್ಣಮಯವಾಗಿ ಮಾತನಾಡುತ್ತಿದ್ದಾಗ ಅಲ್ಲಿಗೆ ಒಮ್ಮೆಯಾದರೂ ಹೋಗಿ ಬರಬೇಕು ಎಂಬ ಆಸೆ ಗಟ್ಟಿಯಾಗುತ್ತಿತ್ತು.
ಇದನ್ನೂ ಓದಿ: ಸಂಸ್ಕೃತಿಯ ಹೆಜ್ಜೆಗಳಲ್ಲಿ ಸಾಗುವ ಪ್ರಯಾಣ ನೃತ್ಯ ಪ್ರವಾಸೋದ್ಯಮ
ನಾವು ಇರಬೇಕಾಗಿದ್ದ ಬರ್ಮಿಂಗಹ್ಯಾಮ ಸುತ್ತಮುತ್ತಲೂ ನೋಡಬಹುದಾದಂಥ ಬಹಳ ಸ್ಥಳಗಳಿದ್ದವು. ವಿಶ್ವಪ್ರಸಿದ್ಧ ನಗರ ಲಂಡನ್ ಕೇವಲ ಎರಡು ಗಂಟೆಗಳ ದಾರಿ. ಅಲ್ಲಿನ ಅರಮನೆ, ಅರಮನೆಯ ಮುಂದೆ ನಡೆಯುತ್ತಿದ್ದ ‘ಚೆಂಜಿಂಗ್ ಆಫ್ ಗಾರ್ಡ್ಸ್' ಎಂಬ ಖ್ಯಾತ ಐತಿಹಾಸಿಕ ಆಚರಣೆ, ಹಾರ್ವರ್ಡ್ ವಿಶ್ವವಿದ್ಯಾಲಯ, ಕ್ಯಾಡಬರಿ ವರ್ಡ್.. ಬಹುತೇಕರ ಹೇಳುತ್ತಿದ್ದ ಪಟ್ಟಿಯಲ್ಲಿ ಈ ಹೆಸರುಗಳೇ ಖಾಯಂ ಆಗಿರುತ್ತಿದ್ದವು. ಅದರಲ್ಲಿ ಒಂದು ಪ್ರಮುಖವಾಗಿ ಎಲ್ಲರನ್ನು ಆಕರ್ಷಿಸುತ್ತಿದ್ದುದು ಎಂದರೆ ವಿಶ್ವದ ಅದ್ಭುತಗಳಲ್ಲಿ ಸ್ಥಾನ ಪಡೆದ ಸ್ಟೋನ್ ಹೆಂಜ್ ಎಂಬ ಹೆಸರಿನ ಜಾಗ!
ಸ್ಟೋನ್ ಹೆಂಜ್ ವಿಸ್ಮಯ
ಇಂಗ್ಲೆಂಡಿನ ವಿಲ್ಟಶೈರ್ ಎಂಬ ಜಾಗದಲ್ಲಿ ಇರುವ ಈ ಸ್ಟೋನ್ ಹೆಂಜ್ ಎಂಬುದು ಒಂದು ವಿಸ್ಮಯವೇ ಸರಿ. ವೃತ್ತಾಕಾರದಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಹೂತಿರುವ ಮತ್ತು ವಿಚಿತ್ರ ವಿನ್ಯಾಸದಲ್ಲಿ ಕಲ್ಲುಗಳನ್ನು ಜೋಡಿಸಿರುವ ಈ ಜಾಗದ ಹಿಂದೆ ಅನೇಕ ಕತೆಗಳು, ಕಟ್ಟು ಕತೆಗಳು, ಕಲ್ಪನೆಗಳು ಹೆಣೆದುಕೊಂಡಿವೆ. ಇದು ಹೇಗೆ ಸೃಷ್ಟಿಯಾಯಿತೆಂದು ಇಲ್ಲಿಯವರೆಗೂ ಸ್ಪಷ್ಟವಾದ ನೆಲೆಗಟ್ಟು ಸಿಕ್ಕಿಲ್ಲ. ಒಂದು ಮೂಲದ ಪ್ರಕಾರ - ಕ್ರಿ.ಪೂ 3000 ಸಮಯದಲ್ಲಿ ವೃತ್ತಾಕಾರದಲ್ಲಿ ಕಲ್ಲುಗಳನ್ನು ಜೋಡಿಸಿದರಂತೆ. ಈಜಿಪ್ಟಿನ ಪಿರಾಮಿಡ್‌ಗಳಿಗಿಂತಲೂ ಹಳೆಯದಾದ, ನಾಗರಿಕತೆಯ ಹುಟ್ಟಿಗೆ ಸಾಕ್ಷಿಯಾಗಿರುವ ಈ ಬೃಹತ ಗಾತ್ರದ ಕಲ್ಲುಗಳಲ್ಲಿ ಮಾಂತ್ರಿಕತೆಯಂತೂ ಇದೆ. ಪುರಾತತ್ತ್ವ ಇಲಾಖೆಯ ಪ್ರಕಾರ ಆ ಸಮಯದಲ್ಲಿ ಈ ಜಾಗದಲ್ಲಿ ಹೆಣಗಳನ್ನು ಸುಡುತ್ತಿದ್ದರಂತೆ. ಸುಮಾರು ನೂರೈವತ್ತಕ್ಕೂ ಹೆಚ್ಚು ಹೆಣಗಳನ್ನು ಇಲ್ಲಿ ಸುಟ್ಟಿದ್ದಾರಂತೆ ಮತ್ತು ಆಗಿನ ಕಾಲಕ್ಕೆ ಒಂದೇ ಜಾಗದಲ್ಲಿ ಇಷ್ಟೊಂದು ಹೆಣಗಳನ್ನು ಸುಟ್ಟಿದ್ದು ಅದೇ ಮೊದಲಂತೆ. ಕೆಲವು ಕಲ್ಲುಗಳು ಈ ಜಾಗಕ್ಕೆ ಅದು ಹೇಗೆ ಬಂದು ಸೇರಿದವು ಎಂಬುದು ಇವತ್ತಿಗೂ ಪ್ರಶ್ನೆಯಾಗಿಯೇ ಉಳಿದಿದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ.
ಇನ್ನೊಂದು ಮೂಲದ ಪ್ರಕಾರ ಈ ಜಾಗವನ್ನು ಸೂರ್ಯ, ಚಂದ್ರ ಮತ್ತು ಗ್ರಹಗಳ ಚಲನೆಯನ್ನು ಅಭ್ಯಾಸ ಮಾಡಲು ಬಳಸುತ್ತಿದ್ದರಂತೆ. ಮೋಡಗಳೇ ತುಂಬಿರುವ ದೇಶ ಇಂಗ್ಲೆಂಡ್. ಗಾಳಿಪಟ ಸಿನಿಮಾದಲ್ಲಿ ಮುಗಿಲುಪೇಟೆಗೆ ಬಂದಾಗ ಗಣಿ ಅಪ್ಪ ಹೇಳ್ತಾರಲ್ಲ ಏನಯ್ಯ ಇದು ಬಚ್ಚಲು ಮನೆ ಆಗಿದೆ ಅಂತ. ಹಾಗೆ ಬಚ್ಚಲು ಮನೆಯಲ್ಲಿ ನಿಂತಿದ್ದೆವೇನೋ ಎಂಬಂತೆ ಸದಾಕಾಲ ಸೋನೆಮಳೆ ಜಿನುಗುತ್ತಲೇ ಇರುತ್ತದೆ. ಹೀಗೆ ಮೋಡಗಳಿಂದ ಆವೃತವಾಗಿರುವ ಆಗಸದಲ್ಲಿ ಸೂರ್ಯ ಚಂದ್ರರನ್ನು ಬ್ಯಾಟರಿ ಹಾಕಿ ಹುಡುಕಿದರೂ ಪತ್ತೆ ಮಾಡುವುದು ಕಷ್ಟ. ಹಾಗಾಗಿ ಆಗಿನ ಜನರು ಈ ಜಾಗವನ್ನು ನಿರ್ಮಿಸಿ ಅದರ ಮೂಲಕ ಗ್ರಹಣ, ಆಯನ್ ಸಂಕ್ರಾಂತಿ, ವಿಷುವತ್ ಸಂಕ್ರಾಂತಿ ಇತ್ಯಾದಿಗಳನ್ನು ಗುರುತು ಮಾಡುತ್ತಿದ್ದರಂತೆ. ಇದರ ಮೂಲಕ ವರ್ಷಕ್ಕೊಮ್ಮೆ ಬರುವ ದೊಡ್ಡ ಹಗಲು ಮತ್ತು ದೊಡ್ಡ ರಾತ್ರಿಯನ್ನು ಅಭ್ಯಸಿಸಿ ಅದರ ಮೂಲಕ ದಿನಗಳನ್ನು ಗುರುತು ಮಾಡುತ್ತಿದ್ದರು ಎಂಬ ಕತೆಯಿದೆ. ಹೀಗೆ ಸ್ಟೋನ್ ಹೆಂಜ್ ಇತಿಹಾಸವನ್ನು ಹುಡುಕುತ್ತ ಹೋದರೆ ಹಲವಾರು ಕತೆಗಳು ಕಾಣಸಿಗುತ್ತವೆ.

ಅಚ್ಚರಿ ಕಲ್ಲುಗಳು
ಈ ಜಾಗದಲ್ಲಿರುವ ಬೃಹತ ಗಾತ್ರದ ಕಲ್ಲುಗಳು ಮತ್ತು ಶತಮಾನಗಳು ಕಳೆದರೂ ಅವು ಕಿಂಚಿತ್ತೂ ಅಲುಗಾಡದೇ, ಸವೆಯದೇ ನಿಂತಿರುವ ಪರಿ ಇನ್ನೊಂದು ಅಚ್ಚರಿ. ಒಂದೊಂದು ಕಲ್ಲನ್ನು ಅಭ್ಯಸಿಸುತ್ತ ಹೋದರೆ ಅವುಗಳ ನಿಖರತೆ ಬೆರಗುಗೊಳಿಸಿ ಇದೊಂದು ಅದ್ಭುತ ಎಂದೆನ್ನಿಸುವಂತೆ ಮಾಡುತ್ತದೆ. ಇದನ್ನು ನೋಡಲು ಪ್ರತಿ ವರ್ಷ ಲಕ್ಷಗಟ್ಟಲೇ ಜನರು ಬರುತ್ತಾರೆ. ನೂರಾರು ಪುಸ್ತಕಗಳಲ್ಲಿ, ಸಿನಿಮಾಗಳಲ್ಲಿ ಇದು ದಾಖಲಾಗಿದೆ. ಒಂದು ಕಾಲಕ್ಕೆ ಖಾಸಗಿ ಒಡೆತನದಲ್ಲಿದ್ದ ಈ ಜಾಗ, ಮೊದಲ ಮಹಾಯುದ್ಧದಲ್ಲಿ ಆ ಕುಟುಂಬದವರೆಲ್ಲ ತೀರಿ ಹೋಗಿ, ಇನ್ನೊಬ್ಬರ ಪಾಲಾಗಿ ಕೊನೆಗೆ ಅವರು ಇದನ್ನು ಬ್ರಿಟಿಷ್ ಸರಕಾರಕ್ಕೆ ದೇಣಿಗೆಯಾಗಿ ನೀಡಿದರಂತೆ. ಈಗ ಬ್ರಿಟಿಷ್ ಸರಕಾರ ಈ ಜಾಗಕ್ಕೆ ಫೀಸ್ ಮಾಡಿ ಪ್ರತಿಯೊಬ್ಬರನ್ನು ಟಿಕೆಟ್ ಆಧಾರದ ಮೇಲೆ ಒಳಗೆ ಬಿಡುತ್ತದೆ.
ನಮ್ಮೂರೇ ಬೆಸ್ಟ್
ಹತ್ತು ವರ್ಷಗಳ ಹಿಂದೆ ಸ್ಟೋನ್ ಹೆಂಜ್ ಅನ್ನು ನೋಡಲು ಹೋಗುವಾಗ ನನಗೆ ಅದರ ಹಿಂದಿರುವ ಭಿನ್ನ ಕತೆಗಳಾಗಲಿ, ಇತಿಹಾಸವಾಗಲಿ, ವಿಸ್ಮಯವಾಗಲಿ ತಿಳಿದಿರಲಿಲ್ಲ. ನನ್ನ ಪಾಲಿಗೆ ಅದೊಂದು ವಿಶ್ವದ ಅದ್ಭುತವಾಗಿತ್ತು ಮತ್ತು ವಿಶ್ವದ ಅದ್ಭುತ ಹೇಗಿರುತ್ತದೆ ಎಂದು ಮೊದಲ ಬಾರಿಗೆ ನೋಡಲಿಕ್ಕೆ ನಾನು ಕಾತರದಿಂದಿದ್ದೆ. ಆದರೆ ಆ ಜಾಗಕ್ಕೆ ಹೋದ ಕೂಡಲೇ ನನ್ನ ಉತ್ಸಾಹ ಜರ್ ಎಂದು ಇಳಿಯಿತು. ಸುತ್ತ ಹಸಿರು ಹಾಸು ಮತ್ತು ಮಧ್ಯದಲ್ಲಿ ನಿಂತಿರುವ ದೊಡ್ಡ ಕಲ್ಲುಗಳು. ಇಷ್ಟೇ ಆ ಜಾಗದಲ್ಲಿ ಕಂಡಿದ್ದು. ಇದು ವಿಶ್ವದ ಅದ್ಭುತ ಹೇಗಾಯಿತು ಎಂದು ಆ ಸಮಯದಲ್ಲಿ ಉತ್ತರ ಸಿಕ್ಕಿರಲಿಲ್ಲ. ಈಗ ಉತ್ತರ ಸಿಕ್ಕಿದೆಯಾದರೂ ಅದು ಸಮಾಧಾನಕರವಾಗಿಲ್ಲ. ಯಾಕೆಂದರೆ ಅದನ್ನು ನೋಡಿದ ಕೂಡಲೇ ನೆನಪಾಗಿದ್ದು ನಮ್ಮೂರಿನ ದೇವಾಲಯಗಳು. ಕಲ್ಲಿನಲ್ಲಿ ಕಡೆದ ಅದ್ಭುತ ಕೆತ್ತನೆಗಳು. ರಾಜ, ರಾಣಿ, ಅರಮನೆ, ನೃತ್ಯ, ಅಪೂರ್ವ ಸುಂದರಿಯರು, ಅರಮನೆಯ ದರ್ಬಾರು ಇನ್ನೂ ಅನೇಕ ಕತೆಗಳನ್ನು ಕಲ್ಲಿನ ಮೇಲೆಯೇ ನೋಡಬಹುದು. ಅನೇಕ ಜಾಗಗಳಲ್ಲಿ ಒಂದೇ ಕಲ್ಲಿನಲ್ಲಿ ಕಡೆದ ಅದ್ಭುತ ಮೂರ್ತಿಗಳಿವೆ. ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸಂಕ್ರಾಂತಿಯ ದಿನ ಸೂರ್ಯನ ಕಿರಣ ನಂದಿಯ ಕೊಂಬುಗಳ ಮಧ್ಯದಿಂದ ಹಾಯ್ದು ನೇರವಾಗಿ ಶಿವಲಿಂಗದ ಮೇಲೆ ಬೀಳುತ್ತದೆ. ಇಂಥ ಸಮೃದ್ಧ ನಾಡಿನಿಂದ ಅಲ್ಲಿಗೆ ಹೋದ ನನಗೆ ಅದು ಸಪ್ಪೆಯಾಗಿ ಕಂಡಿತ್ತು.
ಇದನ್ನು ಕಲಿಯಬೇಕು
ಜತೆಗೆ ಮನಸಿಗೆ ತಾಕಿದ ಇನ್ನೊಂದು ವಿಷಯವೆಂದರೆ ವಿದೇಶಿಗರು ಅವರ ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳುವ ಪರಿ. ಅದು ಒಂದೇ ಒಂದು ಕಲ್ಲಾದರೂ ಸರಿ ಅದನ್ನು ಶತಮಾನಗಳವರೆಗೆ ರಕ್ಷಿಸಿಕೊಂಡು ಅದಕ್ಕೆ ವಿಸ್ಮಯ, ಅದ್ಭುತ ಎಂದೆಲ್ಲ ಹೊಗಳಿ ಅದಕ್ಕೆ ಪ್ರಾಮುಖ್ಯ ನೀಡುತ್ತಾರೆ. ಬರಿ ತಮ್ಮದಷ್ಟೇ ಅಲ್ಲ ಬೇರೆ ದೇಶಗಳಿಂದ ಎತ್ತಿಕೊಂಡು ಹೋಗಿದ್ದನ್ನು ಸಹ ಸಂಗ್ರಹಾಲಯಗಳಲ್ಲಿ ಗ್ಲಾಸಿನ ಒಳಗಿಟ್ಟು ಅದರ ಮೇಲೆ ಬಣ್ಣದ ಲೈಟನ್ನು ತೂಗು ಬಿಟ್ಟು ಹೆಮ್ಮೆಯಿಂದ ತೋರಿಸಿಕೊಳ್ಳುತ್ತಾರೆ. ಹೀಗೆ ವಿದೇಶದ ಸಂಗ್ರಹಾಲಗಳಲ್ಲಿ 'From India' ಎಂಬ ಫಲಕಗಳನ್ನು ನೋಡಿದಾಗಲೆಲ್ಲ ಮನಸು ಮುರುಟುತ್ತದೆ. ಯಾವುದೋ ದ್ವೇಷಕ್ಕೆ ದೇವಸ್ಥಾನಗಳನ್ನು ಧ್ವಂಸ ಮಾಡುತ್ತ, ನಮ್ಮಲ್ಲಿರುವ ಕಲಾ ಸಂಪತ್ತಿನ ಬಗ್ಗೆ ಅರಿವೇ ಇಲ್ಲದೇ ಕಾಲಕಸವಾಗಿ ಕಾಣುತ್ತ, ನೈಸರ್ಗಿಕ ಸಂಪನ್ಮೂಲಗಳನ್ನು ನಾಶ ಮಾಡಿ ಸ್ವಾರ್ಥಿಗಳಾಗಿ ಹೋಗಿರುವ ನಮಗೆ ಹೀಗೆ ರಕ್ಷಿಸುವ, ಕಾಪಾಡಿಕೊಳ್ಳುವ ಸ್ವಭಾವ ಯಾವಾಗ ಬರುತ್ತದೋ.. ಈಗಿರುವ ವಿಸ್ಮಯಗಳನ್ನು ಕಾಪಾಡಿಕೊಂಡು ಹೋಗುವುದಲ್ಲದೇ ಅವುಗಳ ಬಗ್ಗೆ ಹೆಮ್ಮೆಯಿಂದ ಎಲ್ಲ ಕಡೆಗೂ ಹೇಳಿಕೊಳ್ಳುತ್ತ ಹೋದರೆ ನಮ್ಮ ದೇಶದ ಶ್ರೀಮಂತಿಕೆಯ ಬಗ್ಗೆ ವಿಶ್ವಮಟ್ಟದಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಿಸಲು ಸಾಧ್ಯ.
ಲೇಖಕರು: ಬರಹಗಾರರು