Tuesday, August 25, 2026
Tuesday, August 25, 2026

ಬರೀ ಪ್ರವಾಸಕಥನವಲ್ಲ, ಇದು ಕ್ರಾಂತಿಯ ಮುನ್ನುಡಿ!

ತಮ್ಮ ಬೈಕ್ ಕೈಕೊಟ್ಟಾಗ ಗುವಾರ ಮತ್ತು ಆಲ್ಬರ್ಟೊ ಅದನ್ನು ಅಲ್ಲಿಯೇ ಬಿಟ್ಟು ಕಾಲ್ನಡಿಗೆಯಲ್ಲಿ ದಿನವಿಡೀ ನಡೆಯುತ್ತಿದ್ದರು. ಒಂದೊಂದು ದಿನ ಒಂದೊಂದು ರೀತಿಯಲ್ಲಿ ಅವರ ಪ್ರಯಾಣದ ಸ್ವರೂಪವೇ ಬದಲಾಗುತ್ತಿತ್ತು. ಆದರೆ ನಿಧಾನಗತಿಯ ಪಯಣ ಅರ್ನೆಸ್ಟೊ ಚೆ ಗುವಾರನ ಕಣ್ಣುಗಳನ್ನು ತೆರೆಸಿತು. ಅಲ್ಲಿಯವರೆಗೆ ಕೇವಲ ಹೊಳಪಿನ ಪ್ರವಾಸಿ ತಾಣಗಳನ್ನು ನೋಡುತ್ತಿದ್ದ ಆತ, ರಸ್ತೆಬದಿಯ ಸಾಮಾನ್ಯ ಜನರ ನೈಜ ಬದುಕಿನತ್ತ ದೃಷ್ಟಿ ಹರಿಸಿದ.

ಒಂದು ಬೈಕ್ ಪ್ರವಾಸವೂ…ಕ್ರಾಂತಿಗೆ ಕಿಡಿ ಹೊತ್ತಿಸಿದ ಪ್ರಸಂಗವೂ…

ಅರ್ನೆಸ್ಟೊ ಚೆ ಗುವಾರ ಅರ್ಜೆಂಟೀನಾದ ಮಾರ್ಕ್ಸ್‌ವಾದಿ ಕ್ರಾಂತಿಕಾರಿ, ವೈದ್ಯ ಗೆರಿಲ್ಲಾ ನಾಯಕ, ರಾಜತಾಂತ್ರಿಕ ಮತ್ತು ಮಿಲಿಟರಿ ಸಿದ್ಧಾಂತಿ ಎಂಬುದು ಅನೇಕರಿಗೆ ಗೊತ್ತು. ಕ್ಯೂಬನ್ ಕ್ರಾಂತಿಯ ಪ್ರಮುಖ ವ್ಯಕ್ತಿಯಾಗಿದ್ದ ಗುವಾರ ಅವರ ಶೈಲೀಕೃತ ನೋಟವು ದಂಗೆಯ ಸರ್ವತ್ರ ಪ್ರತಿ-ಸಾಂಸ್ಕೃತಿಕ ಸಂಕೇತವಾಗಿತ್ತು ಮತ್ತು ಜನಪ್ರಿಯ ಸಂಸ್ಕೃತಿಯಲ್ಲಿ ಜಾಗತಿಕ ಚಿಹ್ನೆಯಾಗಿತ್ತು ಎಂಬುದು ಸರ್ವವಿಧಿತ. ತನ್ನ ಜೀವನದುದ್ದಕ್ಕೂ ಅಸ್ತಮ ರೋಗದಿಂದ ಬಳಲುತ್ತಿದ್ದರೂ ಆತ ಒಬ್ಬ ಉತ್ತಮ ಕ್ರೀಡಾಪಟು, ಈಜುಗಾರ, ಫುಟ್ಬಾಲ್, ಗಾಲ್ಫ್ ಹಾಗು ಅತ್ಯುತ್ತಮ ಸೈಕಲ್ ಸವಾರನಾಗಿದ್ದ. ‘ಟೈಮ್’ ನಿಯತಕಾಲಿಕವು ಆತನನ್ನು ಇಪ್ಪತ್ತನೇ ಶತಮಾನದ ನೂರು ಅತ್ಯಂತ ಪ್ರಭಾವಿಶಾಲಿ ವ್ಯಕ್ತಿಗಳಲ್ಲಿ ಒಬ್ಬ ಎಂದು ಪ್ರಕಟಿಸಿತ್ತು. ಆತನ ಚಿತ್ರವನ್ನು ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಛಾಯಾಚಿತ್ರ ಎಂದು ಈಗಲೂ ಕರೆಯಲಾಗುತ್ತದೆ. ಕ್ರಾಂತಿಕಾರಿಗಳಿಗೆ ಗುವಾರ ಇಂದಿಗೂ ಪೋಸ್ಟರ್ ಬಾಯ್!

ಆತ ಬರೆದ ‘ದಿ ಮೋಟಾರ್ ಸೈಕಲ್ ಡೈರೀಸ್’ ಪುಸ್ತಕವನ್ನು ಓದಬೇಕೆಂದು ನಾನು ಮೂರ್ನಾಲ್ಕು ತಿಂಗಳುಗಳಿಂದ ಎತ್ತಿಟ್ಟುಕೊಂಡಿದ್ದೆ. ಆದರೆ ಆಗಿರಲಿಲ್ಲ. ಮೊನ್ನೆ ನಾನು ಬೆಂಗಳೂರಿನಿಂದ ಲಂಡನ್ ಮಾರ್ಗವಾಗಿ ಅಮೆರಿಕದ ಶಿಕಾಗೋಗೆ ಬರುವಾಗ ವಿಮಾನ ಪ್ರಯಾಣದಲ್ಲಿ ಓದಿಗಾಗಿ ‘ದಿ ಮೋಟಾರ್ ಸೈಕಲ್ ಡೈರೀಸ್’ ಎಂಬ ಪುಸ್ತಕವನ್ನು ಇಟ್ಟುಕೊಂಡಿದ್ದೆ. ಇಬ್ಬರು ಯುವಕರ ಮೋಟಾರ್ ಸೈಕಲ್ ಪ್ರಯಾಣದ ಕಥನವಿದ್ದಿರಬಹುದು ಎಂಬ ಭಾವನೆಯಿಂದ ಓದಲಾರಂಭಿಸಿದರೆ, ಶಿಕಾಗೋ ವಿಮಾನ ನಿಲ್ದಾಣದಲ್ಲಿ ಇಳಿಯುವ ಹೊತ್ತಿಗೆ ನನ್ನ ಮುಂದೆ ತೆರೆದುಕೊಂಡ ಅನುಭವವೇ ಭಿನ್ನವಾಗಿತ್ತು. ಈ ಪುಸ್ತಕವನ್ನು ಇಷ್ಟು ತಡವಾಗಿ ಓದಿದ್ದಕ್ಕೆ ನನಗೆ ಬೇಸರವೂ ಆಯಿತು.

ಇದನ್ನೂ ಓದಿ: 'ಚಿಕ್ಕ'ಮಗಳೂರ ಬಗ್ಗೆ ನಮ್ಮ ಧೋರಣೆ 'ದೊಡ್ಡ'ದಾಗಬೇಕು!

ರಸ್ತೆಯೆಂದರೆ ಕೇವಲ ಕಲ್ಲು-ಮಣ್ಣುಗಳ ಹಾಸಲ್ಲ. ಅದು ನಮ್ಮೊಳಗಿನ ಇನ್ಯಾರನ್ನೋ ಮುಖಾಮುಖಿ ಮಾಡಿಸುವ ಒಂದು ನಿಗೂಢ ಜಾದೂ. ಅರ್ಜೆಂಟೀನಾದ ಇಬ್ಬರು ತರುಣರು—ಒಬ್ಬ ಇಪ್ಪತ್ತೂರರ ಉಮೇದಿನ ವೈದ್ಯಕೀಯ ವಿದ್ಯಾರ್ಥಿ ಅರ್ನೆಸ್ಟೊ ಚೆ ಗುವಾರ, ಇನ್ನೊಬ್ಬ ಅವನ ಗೆಳೆಯ ಆಲ್ಬರ್ಟೊ ಗ್ರಾನಾಡೋ—ತಮ್ಮ ಹಳೆಯ ‘ಲಾ ಪೋಡೆರೋಸಾ’ ಮೋಟಾರ್ ಸೈಕಲ್ ಏರಿ ಹೊರಟಾಗ, ಅವರ ಮುಂದಿದ್ದದ್ದು ಕೇವಲ ಲ್ಯಾಟಿನ್ ಅಮೆರಿಕದ ಭೂಪಟವಾಗಿರಲಿಲ್ಲ. ಅದು ಇಡೀ ಖಂಡದ ದಣಿವರಿಯದ ಅದಮ್ಯ ಜೀವತುಡಿತ. ಜೇಬಿನಲ್ಲಿ ಅದ್ದೂರಿ ಕಾಸಿಲ್ಲದಿದ್ದರೂ, ಕಣ್ಣುಗಳಲ್ಲಿ ಜಗತ್ತನ್ನು ಆವಾಹಿಸಿಕೊಳ್ಳುವ ಅದಮ್ಯ ಹಸಿವು. ಗಾಳಿಯ ವೇಗಕ್ಕೆ ಮುಖವೊಡ್ಡಿ, ಮಂಜಿನ ಕಣಿವೆಗಳನ್ನು ದಾಟುತ್ತಾ, ಅವರು ಹೊರಟ ಆ ಪ್ರಯಾಣ ಕೇವಲ ನಕ್ಷೆಯ ಮೇಲಿನ ದೂರವನ್ನು ಅಳೆಯುವುದಾಗಿರಲಿಲ್ಲ, ಬದಲಿಗೆ ಒಳಗಿನ ಹರೆಯದ ಹಟವೊಂದು ತನಗೆ ತಾನೇ ಬರೆದುಕೊಂಡ ಪ್ರೇಮಪತ್ರದಂತಿತ್ತು.

Untitled design (13)

ಆರಂಭದಲ್ಲಿ ಈ ಡೈರಿಯ ಪುಟಗಳು ಬೈಕ್ ಸವಾರಿಯ ತಮಾಷೆ, ಹಾದಿಹೋಕರ ಸಣ್ಣಪುಟ್ಟ ಕಥೆಗಳು ಮತ್ತು ಗೆಳೆಯರ ನಡುವಿನ ತುಂಟ ನಗುಗಳನ್ನೇ ಉಸಿರಾಡುತ್ತವೆ. ಆದರೆ, ರಸ್ತೆ ಸಾಗಿದಂತೆಲ್ಲ ಬದುಕಿನ ದಾರುಣ ವಾಸ್ತವಗಳು ಅವರ ಕಣ್ಣೆದುರು ಅನಾವರಣಗೊಳ್ಳುತ್ತಾ ಹೋಗುತ್ತವೆ. ಕಲ್ಲಿದ್ದಲು ಗಣಿಯ ಕಾರ್ಮಿಕರ ಕಣ್ಣೊಳಗಿನ ಶೂನ್ಯ, ಅಮೆಜಾನ್ ತೀರದ ಕುಷ್ಠರೋಗಿಗಳ ಹರಿದ ಬದುಕು, ಹಸಿವು ಮತ್ತು ಹತಾಶೆಗಳು ಗುವಾರನ ಎದೆಯೊಳಗೆ ಸದ್ದಿಲ್ಲದೇ ಹೊಸದೊಂದು ಕಂಪನವನ್ನು ಸೃಷ್ಟಿಸುತ್ತವೆ. ಬೈಕ್ ಹಾದಿಯಲ್ಲೇ ಎಲ್ಲೋ ಬಿದ್ದು ಹೋದಾಗ, ಕೇವಲ ಯಂತ್ರವಷ್ಟೇ ನಿಲ್ಲುವುದಿಲ್ಲ, ಬದಲಿಗೆ ಭ್ರಮೆಗಳೂ ಕಳಚಿಬೀಳುತ್ತವೆ. ಅಲ್ಲಿಯವರೆಗೆ ಕೇವಲ ಪ್ರಕೃತಿಯ ಸೌಂದರ್ಯಕ್ಕೆ ಮಾರುಹೋಗುತ್ತಿದ್ದ ಆ ತರುಣನ ಮನಸ್ಸು, ನಿಧಾನವಾಗಿ ಮನುಷ್ಯನ ನೋವಿನ ತೇವಕ್ಕೆ ಕರಗತೊಡಗುತ್ತದೆ. ಆ ಹಾದಿಯೇ ಅವನಿಗೆ ಅರಿಯದಂತೆ ಒಂದು ದೀಕ್ಷೆಯಾಗಿ ಬದಲಾಗುತ್ತದೆ.

ಅಷ್ಟಕ್ಕೂ ಇದೊಂದು ಪ್ರವಾಸಕಥನ ಎಂದು ಭಾವಿಸಿದರೆ ಅದರ ಮಹತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದೇ ಹೇಳಬಹುದು. ಇದು ಒಬ್ಬ ತರುಣ ತನ್ನ ಆರಾಮದಾಯಕ ಬದುಕಿನ ಗೂಡಿನಿಂದ ಹೊರಬಂದು, ಜಗತ್ತಿನ ಕಡುಗತ್ತಲನ್ನು ಅಪ್ಪಿಕೊಳ್ಳುವ ಮೂಲಕ ತನ್ನೊಳಗಿನ ಮಹಾತ್ಮನನ್ನು ಕಂಡುಕೊಂಡ ಕಥೆ. ಇಲ್ಲಿರುವ ಪ್ರತಿಯೊಂದು ಸಾಲಿನಲ್ಲೂ ಹರೆಯದ ನಿಷ್ಕಲ್ಮಶ ಹುಡುಕಾಟವಿದೆ, ಬಡತನದ ಎದುರು ಮಿಡಿಯುವ ಆರ್ದ್ರತೆಯಿದೆ. ಈ ಡೈರಿಯ ಕೊನೆಯ ಪುಟವನ್ನು ಮುಚ್ಚುವಾಗ ನಮ್ಮೆದುರು ಉಳಿಯುವುದು ಬೈಕ್ ಏರಿ ಹೊರಟ ಆ ಚೇಷ್ಟೆಯ ಹುಡುಗ ಇಡೀ ಖಂಡದ ನೋವಿಗೆ ತನ್ನ ರಕ್ತವನ್ನೇ ಶಾಯಿಯಾಗಿಸಲು ಹೊರಟು, ಇತಿಹಾಸದ ದಾರಿದೀಪವಾಗಿದ್ದು ಈ ಕೃತಿಯ ಅನುಪಮ ಕಾಣ್ಕೆ.

1952ರ ಜನವರಿಯ ಆ ಚಳಿಗಾಲದಲ್ಲಿ, ಬ್ಯೂನಸ್ ಐರಿಸ್‌ನ ಸುಸಂಸ್ಕೃತ ಕುಟುಂಬದ ಹಿನ್ನೆಲೆಯಿಂದ ಬಂದ 23 ವರ್ಷದ ವೈದ್ಯಕೀಯ ವಿದ್ಯಾರ್ಥಿ ಅರ್ನೆಸ್ಟೊ ಚೆ ಗುವಾರ ಮತ್ತು ಆತನ ಆಪ್ತ ಗೆಳೆಯ, 29 ವರ್ಷದ ಜೈವಿಕ ರಸಾಯನಶಾಸ್ತ್ರಜ್ಞ ಆಲ್ಬರ್ಟೊ ಗ್ರಾನಾಡೊ ಇಬ್ಬರೂ ಒಂದು ಅಸಾಧಾರಣ ಕನಸನ್ನು ಹೊತ್ತು ಹೊರಟರು. ಅವರ ಕಣ್ಣುಗಳಲ್ಲಿದ್ದದ್ದು ಇಡೀ ದಕ್ಷಿಣ ಅಮೆರಿಕ ಖಂಡವನ್ನು ಕಣ್ಣಾರೆ ನೋಡಬೇಕೆಂಬ ತೀವ್ರ ಹಂಬಲ. ಈ ಮಹಾನ್ ಸಾಹಸಕ್ಕಾಗಿ ಅವರು ಆರಿಸಿಕೊಂಡಿದ್ದು ‘ಲಾ ಪೊಡೆರೋಸಾ’ (ಅಂದರೆ ಶಕ್ತಿಶಾಲಿ) ಎಂದು ಪ್ರೀತಿಯಿಂದ ಹೆಸರಿಟ್ಟಿದ್ದ, 1939ರ ಮಾಡೆಲ್‌ನ, ಹೆಚ್ಚು-ಕಮ್ಮಿ ಸವೆದುಹೋಗಿದ್ದ ಹಳೆಯ 'ನಾರ್ಟನ್ 5೦೦ ಸಿಸಿ' ಮೋಟಾರ್ ಸೈಕಲ್.

ಕೊರೆಯುವ ಚಳಿ, ಜೇಬಿನಲ್ಲಿ ಅಷ್ಟಾಗಿ ಹಣವಿಲ್ಲದ ಸ್ಥಿತಿ, ದಾರಿಯ ಸರಿಯಾದ ನಕ್ಷೆಯೂ ಇಲ್ಲದ ಅನಿಶ್ಚಿತತೆ—ಇವು ಯಾವುದೂ ಅವರ ಉತ್ಸಾಹವನ್ನು ಕುಗ್ಗಿಸಲಿಲ್ಲ. ಅರ್ಜೆಂಟೀನಾದಿಂದ ಆರಂಭವಾದ ಅವರ ಯೋಜನೆ ಸರಳವಾಗಿತ್ತು - ಚಿಲಿ, ಪೆರು, ಕೊಲಂಬಿಯಾವನ್ನು ದಾಟಿ ವೆನೆಜುವೆಲಾವನ್ನು ತಲುಪುವುದು. ಆದರೆ, ಪ್ರಯಾಣದ ಆರಂಭಿಕ ದಿನಗಳು ಯಾವುದೇ ಸುಲಭವಾಗಿರಲಿಲ್ಲ. ಅದು ಕೇವಲ ಇಬ್ಬರು ಚುರುಕುಬುದ್ಧಿಯ ಯುವಕರ ಮೋಜು, ಮಸ್ತಿ ಮತ್ತು ಸಾಹಸದ ಹಾದಿಯಾಗಿತ್ತು.

ದಾರಿಯುದ್ದಕ್ಕೂ ಹಳೆಯ ಬೈಕ್ ಪದೇಪದೆ ಕೈಕೊಡುವುದು, ರಸ್ತೆಯ ತಿರುವುಗಳಲ್ಲಿ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗುವುದು, ಆಶ್ರಯಕ್ಕಾಗಿ ಅಪರಿಚಿತರ ಮನೆ ಬಾಗಿಲು ತಟ್ಟುವುದು ಮತ್ತು ಸುಂದರ ಹುಡುಗಿಯರ ಗಮನ ಸೆಳೆಯಲು ಪ್ರಯತ್ನಿಸುವುದು—ಹೀಗೆ ಪ್ರತಿಯೊಬ್ಬ ಸಾಮಾನ್ಯ ಯುವಕರು ಮಾಡುವ ಎಲ್ಲ ತರಲೆಗಳೂ ಆ ಪ್ರವಾಸದಲ್ಲಿದ್ದವು. ಉಚಿತ ಊಟ ಮತ್ತು ವಸತಿ ಪಡೆಯುವುದಕ್ಕಾಗಿ ತಾವು ಜಗತ್ಪ್ರಸಿದ್ಧ ವೈದ್ಯಕೀಯ ತಜ್ಞರೆಂದು ಸುಳ್ಳು ಹೇಳಿ ಸ್ಥಳೀಯ ಪತ್ರಿಕೆಗಳಲ್ಲಿ ಸುದ್ದಿ ಮಾಡಿಸಿಕೊಳ್ಳುವಷ್ಟು ಚಾಣಾಕ್ಷತನವೂ ಅವರಲ್ಲಿತ್ತು. ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ, ಸಿಕ್ಕಸಿಕ್ಕ ಜಾಗಗಳಲ್ಲಿ ಮಲಗುತ್ತಾ ಸಾಗುತ್ತಿದ್ದ ಆ ದಿನಗಳು ಇಬ್ಬರು ಯುವಕರ ಅಲೆಮಾರಿ ಬದುಕಿನ ರೋಚಕ ಪುಟಗಳು.

ಆದರೆ, ಪ್ರಯಾಣ ಮುಂದುವರಿದಂತೆ ಮತ್ತು ಅವರು ಕ್ರಮಿಸಿದ ಧೂಳಿನ ರಸ್ತೆಗಳು ಹೆಚ್ಚಾದಂತೆ, ಈ ಪ್ರವಾಸದ ಸ್ವರೂಪವೇ ಬದಲಾಗತೊಡಗಿತು. ಆಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದರೂ ಅರ್ನೆಸ್ಟೊ ಅವಲೋಕನ ಶಕ್ತಿ ಅದ್ಭುತವಾಗಿತ್ತು. ಬೈಕ್ ಸಂಪೂರ್ಣವಾಗಿ ಕೆಟ್ಟುಹೋದ ನಂತರ ಕಾಲ್ನಡಿಗೆ ಮತ್ತು ಲಾರಿಗಳ ಮೂಲಕ ಸಾಗುವಾಗ, ಪ್ರವಾಸಿ ತಾಣಗಳ ಹೊಳಪಿನ ಆಚೆಗಿದ್ದ ದಕ್ಷಿಣ ಅಮೆರಿಕದ ಕರಾಳ ಮುಖ ಅವರಿಗೆ ದರ್ಶನವಾಯಿತು. ಬಡತನ, ಹಸಿವು, ವಸಾಹತುಶಾಹಿಯ ಗಾಯಗಳು ಮತ್ತು ಬಂಡವಾಳಶಾಹಿಗಳ ಕ್ರೂರ ಶೋಷಣೆಗೆ ಒಳಗಾಗಿದ್ದ ಸ್ಥಳೀಯರ ಬದುಕು ಚೆ ಗುವಾರ ಕಣ್ಣಿಗೆ ಬಿದ್ದಿತು.

ರಸ್ತೆಯ ಧೂಳು ತಲೆಯ ಮೇಲೆ ಕೂರುತ್ತಿದ್ದಂತೆ, ಆತನ ದಿನಚರಿಯ ಪುಟಗಳಲ್ಲಿದ್ದ ಭಾಷೆ ತರಲೆ-ಮೋಜಿನಿಂದ ಗಂಭೀರತೆಯ ಕಡೆಗೆ ತಿರುಗಿತು. ಆರಂಭದಲ್ಲಿ ಕೇವಲ ಭೌಗೋಳಿಕ ಗಡಿಗಳನ್ನು ದಾಟುವ ಹಂಬಲದಲ್ಲಿದ್ದ ಅವರಿಬ್ಬರು, ಜನರ ಕಣ್ಣೀರನ್ನು ನೋಡುತ್ತಾ ತಮ್ಮೊಳಗಿನ ಆರಾಮದಾಯಕ ವಲಯದಿಂದ ಹೊರಬಂದರು. ಮೋಟಾರ್ ಸೈಕಲ್‌ನ ಆ ಧೂಳಿನ ಪ್ರಯಾಣ ಮತ್ತು ದಾರಿಯಲ್ಲಿ ಸಿಕ್ಕ ಮನುಷ್ಯರ ಸಂಕಟಗಳು, ಅರ್ನೆಸ್ಟೊ ಚೆ ಗುವಾರನ ಮುಗ್ಧ ವೈದ್ಯಕೀಯ ವಿದ್ಯಾರ್ಥಿಯನ್ನು ಸದ್ದಿಲ್ಲದೇ ಕೊಂದು, ಇಡೀ ಜಗತ್ತು ನೆನಪಿಟ್ಟುಕೊಳ್ಳುವ ಕ್ರಾಂತಿಕಾರಿ 'ಚೆ ಗುವಾರ'ನ ಜನನಕ್ಕೆ ಭದ್ರ ಬುನಾದಿ ಹಾಕಿದವು.

ತಮ್ಮ ಬೈಕ್ ಕೈಕೊಟ್ಟಾಗ ಗುವಾರ ಮತ್ತು ಆಲ್ಬರ್ಟೊ ಅದನ್ನು ಅಲ್ಲಿಯೇ ಬಿಟ್ಟು ಕಾಲ್ನಡಿಗೆಯಲ್ಲಿ ದಿನವಿಡೀ ನಡೆಯುತ್ತಿದ್ದರು. ಒಂದೊಂದು ದಿನ ಒಂದೊಂದು ರೀತಿಯಲ್ಲಿ ಅವರ ಪ್ರಯಾಣದ ಸ್ವರೂಪವೇ ಬದಲಾಗುತ್ತಿತ್ತು. ಆದರೆ ನಿಧಾನಗತಿಯ ಪಯಣ ಅರ್ನೆಸ್ಟೊ ಚೆ ಗುವಾರನ ಕಣ್ಣುಗಳನ್ನು ತೆರೆಸಿತು. ಅಲ್ಲಿಯವರೆಗೆ ಕೇವಲ ಹೊಳಪಿನ ಪ್ರವಾಸಿ ತಾಣಗಳನ್ನು ನೋಡುತ್ತಿದ್ದ ಆತ, ರಸ್ತೆಬದಿಯ ಸಾಮಾನ್ಯ ಜನರ ನೈಜ ಬದುಕಿನತ್ತ ದೃಷ್ಟಿ ಹರಿಸಿದ. ವಿಶ್ವವಿದ್ಯಾಲಯದ ಕ್ಲಾಸ್‌ರೂಮ್‌ಗಳಲ್ಲಿ ಹಾಗೂ ಪುಸ್ತಕದ ಪುಟಗಳಲ್ಲಿ ಆತ ಓದಿದ್ದ ಮಾರ್ಕ್ಸ್‌ವಾದ, ಸಮಾಜವಾದ ಮತ್ತು ಶೋಷಣೆಯ ಸಿದ್ಧಾಂತಗಳು ಕೇವಲ ಅಕ್ಷರಗಳಾಗಿ ಉಳಿಯದೇ, ಧೂಳಿನ ರಸ್ತೆಗಳಲ್ಲಿ ಜೀವಂತ ವಾಸ್ತವದ ರೂಪದಲ್ಲಿ ಆತನ ಕಣ್ಣೆದುರು ಬಂದು ನಿಂತಾಗ ಆತ ಕಲ್ಲವಿಲಗೊಂಡ.

ಈ ಆಂತರಿಕ ಬದಲಾವಣೆಗೆ ದಾರಿಯಾದ ಅತ್ಯಂತ ಪ್ರಭಾವಶಾಲಿ ಘಟನೆ ನಡೆದದ್ದು ಚಿಲಿಯ ಅಟಕಾಮಾ ಮರುಭೂಮಿಯಲ್ಲಿ. ಅತ್ಯಂತ ಒಣ ಹಾಗೂ ತೀವ್ರ ಚಳಿಯ ಆ ನಿರ್ಜನ ಭೂಭಾಗದಲ್ಲಿ ಇಬ್ಬರು ಗೆಳೆಯರಿಗೆ ಒಂದು ಕಮ್ಯುನಿಸ್ಟ್ ದಂಪತಿ ಮುಖಾಮುಖಿಯಾಗುತ್ತಾರೆ. ಅವರು ಕೇವಲ ತಮ್ಮ ರಾಜಕೀಯ ಸಿದ್ಧಾಂತದ ಕಾರಣಕ್ಕಾಗಿ ಅಂದಿನ ದಬ್ಬಾಳಿಕೆಯ ಸರಕಾರದಿಂದ ಮತ್ತು ಸಮಾಜದಿಂದ ಬಹಿಷ್ಕೃತರಾಗಿದ್ದರು. ತಲೆಗೊಂದು ಸೂರಿಲ್ಲದೇ, ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದೇ, ಬದುಕಲು ಒಂದು ಇಂಚು ಜಾಗವೂ ಇಲ್ಲದೇ ಅಲೆಯುತ್ತಿದ್ದ ಆ ದಂಪತಿಯ ಕಣ್ಣುಗಳಲ್ಲಿದ್ದ ಹಸಿವು, ವಿಷಾದ, ಬಳಲಿಕೆ, ತೀವ್ರ ಅಸಹಾಯಕತೆ ಮತ್ತು ವ್ಯವಸ್ಥೆಯ ವಿರುದ್ಧದ ಆಕ್ರೋಶ ಅರ್ನೆಸ್ಟೊನ ಸಂವೇದನಾಶೀಲ ಮನಸನ್ನು ತೀವ್ರವಾಗಿ ಕಲಕಿತು.

Untitled design (12)

ಅಟಕಾಮಾದ ರಕ್ತ ಹೆಪ್ಪುಗಟ್ಟಿಸುವ ಕಡುಚಳಿಯ ಆ ರಾತ್ರಿ, ಗುವಾರ ಆ ಬಡ ದಂಪತಿಯೊಂದಿಗೆ ತನ್ನಲ್ಲಿದ್ದ ಏಕೈಕ ಕಂಬಳಿಯನ್ನು ಹಂಚಿಕೊಂಡು ಮಲಗುತ್ತಾನೆ. ಮಾನವೀಯತೆಯ ಆ ಗಾಢ ಕ್ಷಣದಲ್ಲಿ ಗುವಾರನಿಗೆ ಒಂದು ಸತ್ಯ ಜ್ಞಾನೋದಯವಾಗುತ್ತದೆ. ಬಡತನ ಎಂಬುದು ಕೇವಲ ಭಾಷಣಗಳಲ್ಲಿ ಬಳಸುವ ಶಬ್ದವಲ್ಲ ಅಥವಾ ಅಂಕಿ-ಅಂಶಗಳ ಆಟವಲ್ಲ; ಅದೊಂದು ಜೀವಂತ ನರಕ ಹಾಗೂ ಮನುಷ್ಯನ ಘನತೆಯನ್ನೇ ಹೊಸಕಿ ಹಾಕುವ ಕ್ರೂರ ವ್ಯವಸ್ಥೆ ಎಂಬುದು ಆತನಿಗೆ ಮನವರಿಕೆಯಾಗುತ್ತದೆ. ಶೋಷಿತರ ನೋವಿಗೆ ಮಿಡಿದ ಆ ರಾತ್ರಿಯೇ, ಒಬ್ಬ ಮುಗ್ಧ ವೈದ್ಯಕೀಯ ವಿದ್ಯಾರ್ಥಿಯ ಅಂತರಂಗದಲ್ಲಿ ಜಗತ್ತನ್ನೇ ಬದಲಾಯಿಸಬೇಕೆಂಬ ಕ್ರಾಂತಿಯ ಮೊದಲ ಕಿಡಿ ಹೊತ್ತಿಕೊಳ್ಳಲು ಕಾರಣವಾಗುತ್ತದೆ.

ಚಿಲಿಯ ತಾಮ್ರದ ಗಣಿಗಳಿಗೆ, ವಿಶೇಷವಾಗಿ ಜಗತ್ಪ್ರಸಿದ್ಧ ಚುಕ್ವಿಕಮಾಟಾ ಗಣಿಗೆ ಭೇಟಿ ನೀಡಿದಾಗ ಅರ್ನೆಸ್ಟೊ ಚೆ ಗುವಾರನಿಗೆ ಬಂಡವಾಳಶಾಹಿ ವ್ಯವಸ್ಥೆಯ ಅತ್ಯಂತ ಕ್ರೂರ ಮುಖ ಪರಿಚಯವಾಯಿತು. ಅಮೆರಿಕದ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಆ ಭಾಗದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದ ಸತ್ಯ ಆತನಿಗೆ ಮನವರಿಕೆಯಾಯಿತು. ಅಲ್ಲಿನ ಸ್ಥಳೀಯ ಕಾರ್ಮಿಕರನ್ನು ಕೇವಲ ಲಾಭ ಗಳಿಸುವ ಯಂತ್ರಗಳಂತೆ ನೋಡಲಾಗುತ್ತಿತ್ತು.

ಗಣಿಯ ಆಳದಲ್ಲಿ, ಧೂಳು ಮತ್ತು ವಿಷಗಾಳಿಯ ನಡುವೆ ಯಾವುದೇ ಸುರಕ್ಷತಾ ಸಾಧನಗಳಿಲ್ಲದೇ ಕಾರ್ಮಿಕರು ದುಡಿಯುತ್ತಿದ್ದರು. ಕನಿಷ್ಠ ಮಾಸ್ಕ್ ಅಥವಾ ಗ್ಲೌಸ್‌ಗಳೂ ಇಲ್ಲದೇ, ದಿನದ 24 ಗಂಟೆಯೂ ಸಿಲಿಕಾಸಿಸ್‌ನಂಥ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಎದುರಿಸುತ್ತಾ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದರು. ಇಷ್ಟೆಲ್ಲ ಕಷ್ಟಪಟ್ಟರೂ ಅವರಿಗೆ ಸಿಗುತ್ತಿದ್ದ ಕೂಲಿ ಅತ್ಯಂತ ನಗಣ್ಯವಾಗಿತ್ತು. ಆ ಕಡಿಮೆ ಹಣದಲ್ಲಿ ಅವರ ಕುಟುಂಬಗಳಿಗೆ ಒಪ್ಪತ್ತಿನ ಗಂಜಿಗೂ ಪರದಾಡುವ ಸ್ಥಿತಿ ಇತ್ತು.

ತಮ್ಮದೇ ಮಣ್ಣಿನ ಸಂಪತ್ತನ್ನು ಪರಕೀಯ ಕಂಪನಿಗಳು ದೋಚುತ್ತಿರುವುದನ್ನು ಮತ್ತು ಅದಕ್ಕಾಗಿ ಸ್ವದೇಶದ ಬಡವರು ರಕ್ತ ಬಸಿಯುತ್ತಿರುವುದನ್ನು ಕಂಡ ಗುವಾರ ತೀವ್ರ ಆಕ್ರೋಶಗೊಂಡ. ಶ್ರಮಿಕರ ಈ ಅಮಾನವೀಯ ಶೋಷಣೆ ಆತನಿಗೆ ಕೇವಲ ಆರ್ಥಿಕ ಅಸಮಾನತೆಯಾಗಿ ಕಾಣದೇ, ಮಾನವ ಹಕ್ಕುಗಳ ಘೋರ ಉಲ್ಲಂಘನೆಯಾಗಿ ಕಂಡಿತು. ಪುಸ್ತಕಗಳಲ್ಲಿ ಓದಿದ್ದ 'ಬಂಡವಾಳಶಾಹಿ ಕ್ರೂರತೆ' ಕಣ್ಣೆದುರೇ ರಕ್ತ ಮಾಂಸಗಳ ರೂಪದಲ್ಲಿ ನಿಂತಾಗ, ಆತನಲ್ಲಿದ್ದ ವೈದ್ಯ ಕರಗಿ, ಬಂಡಾಯಗಾರ ಜಾಗೃತನಾದ. ವ್ಯವಸ್ಥೆಯ ವಿರುದ್ಧ ಸಿಡಿದೇಳಲು ಆತನಿಗೆ ಸಿಕ್ಕ ಮೊದಲ ಗಂಭೀರ ಪಾಠ ಇದಾಗಿತ್ತು.

ಪೆರುವಿನ ಆಂಡಿಸ್ ಪರ್ವತ ಶ್ರೇಣಿಗಳ ಮಡಿಕೆಯಲ್ಲಿ ಅಡಗಿರುವ, ಮೋಡಗಳ ನಡುವೆ ತೇಲುವ ಇಂಕಾ ಸಾಮ್ರಾಜ್ಯದ ವೈಭವದ ಸಂಕೇತವಾದ 'ಮಾಚು ಪಿಚು' ತಲುಪಿದಾಗ ಗುವಾರನಲ್ಲಿದ್ದ ಇತಿಹಾಸಜ್ಞ ಹಾಗೂ ವಿಚಾರವಾದಿ ಸಂಪೂರ್ಣವಾಗಿ ಜಾಗೃತನಾದ. ಕೇವಲ ಪ್ರಕೃತಿಯ ಸೌಂದರ್ಯವನ್ನು ಸವಿಯುವ ಪ್ರವಾಸಿಯಾಗಿ ಆತ ಅಲ್ಲಿಗೆ ಹೋಗಲಿಲ್ಲ. ಬದಲಿಗೆ, ಆ ಭವ್ಯ ಕಲ್ಲಿನ ಶಿಲ್ಪಗಳ ಆಳದಲ್ಲಿದ್ದ ಇತಿಹಾಸದ ಗಾಯಗಳನ್ನು ಆತ ತಡಕಾಡಿದ. ಅಷ್ಟು ಸುಂದರವಾದ, ಖಗೋಳ ಮತ್ತು ವಾಸ್ತುಶಿಲ್ಪದಲ್ಲಿ ಜಗತ್ತಿಗೇ ಮಾದರಿಯಾಗಿದ್ದ ಸಮೃದ್ಧ ಇಂಕಾ ನಾಗರಿಕತೆಯನ್ನು ಸ್ಪ್ಯಾನಿಷ್ ವಸಾಹತುಶಾಹಿಗಳು ತಮ್ಮ ದುರಾಶೆಗಾಗಿ ಹೇಗೆ ಧ್ವಂಸ ಮಾಡಿದರು ಎಂಬುದನ್ನು ನೆನೆದು ಆತನ ಮನಸು ಮರುಗಿತು.

ಚಿನ್ನ ಮತ್ತು ಅಧಿಕಾರದ ಆಸೆಗಾಗಿ ಬಂದ ವಿದೇಶಿ ಆಕ್ರಮಣಕಾರರು ಅಲ್ಲಿನ ಭವ್ಯ ಅರಮನೆಗಳನ್ನು, ಕೃಷಿ ಪದ್ಧತಿಯನ್ನು ನಾಶ ಮಾಡಿದ್ದಷ್ಟೇ ಅಲ್ಲದೆ, ಆ ಮಣ್ಣಿನ ಮೂಲ ನಿವಾಸಿಗಳನ್ನು ತಮ್ಮದೇ ತಾಯ್ನಾಡಿನಲ್ಲಿ ಅತ್ಯಂತ ಕ್ರೂರವಾಗಿ ಗುಲಾಮರನ್ನಾಗಿ ಪರಿವರ್ತಿಸಿದ್ದರು. ಇತಿಹಾಸದ ಈ ರಕ್ತಸಿಕ್ತ ಅಧ್ಯಾಯ ಅರ್ನೆಸ್ಟೊ ಚೆ ಗುವಾರನನ್ನು ತೀವ್ರವಾಗಿ ಕಾಡಿತು. ಎಲ್ಲಕ್ಕಿಂತ ಹೆಚ್ಚಾಗಿ ಆತನಿಗೆ ಆಘಾತ ನೀಡಿದ ಸಂಗತಿಯೆಂದರೆ, ಶತಮಾನಗಳು ಉರುಳಿದರೂ ಪರಿಸ್ಥಿತಿ ಬದಲಾಗಿರಲಿಲ್ಲ. ಇಂದಿಗೂ ಆ ಇಂಕಾ ವಂಶಸ್ಥರು, ಮೂಲ ನಿವಾಸಿಗಳು ತಮ್ಮದೇ ನೆಲದಲ್ಲಿ ಅತ್ಯಂತ ಕೀಳಾಗಿ, ಬಡತನದ ನರಕದಲ್ಲಿ ದ್ವಿತೀಯ ದರ್ಜೆಯ ಪ್ರಜೆಗಳಾಗಿ ಬದುಕುತ್ತಿರುವುದನ್ನು ಆತ ಕಣ್ಣಾರೆ ಕಂಡ.

ಭವ್ಯ ಇತಿಹಾಸವನ್ನು ಹೊಂದಿದ್ದ ಜನಾಂಗವೊಂದು ಇಂದು ಹೊಟ್ಟೆಪಾಡಿಗಾಗಿ ಪ್ರವಾಸಿಗರ ಮುಂದೆ ಕೈಚಾಚುವ ಸ್ಥಿತಿಗೆ ತಲುಪಿರುವುದನ್ನು ಕಂಡು, ಜಗತ್ತಿನ ಇತಿಹಾಸ ಮತ್ತು ನ್ಯಾಯದ ಮೇಲಿದ್ದ ಆತನ ನಂಬಿಕೆಯೇ ಸಡಿಲವಾಯಿತು. ಬಲಿಷ್ಠರು ದುರ್ಬಲರನ್ನು ತುಳಿಯುವ ಇತಿಹಾಸದ ಕ್ರೂರ ನಿಯಮದ ವಿರುದ್ಧ ಆತನಲ್ಲಿ ಆಕ್ರೋಶ ಮೂಡಿತು. ಅದಕ್ಕಾಗಿಯೇ ಆತ ತನ್ನ ಪ್ರವಾಸ ಕಥನದ ಪುಟಗಳಲ್ಲಿ ಅತ್ಯಂತ ಮಾರ್ಮಿಕವಾಗಿ ಬರೆಯುತ್ತಾನೆ - ‘ಒಂದು ಕಾಲದಲ್ಲಿ ಜಗತ್ತಿಗೇ ಮಾದರಿಯಾಗಿದ್ದ ಸಂಸ್ಕೃತಿಯನ್ನು ಇಂದು ಪ್ರವಾಸಿಗರು ಬಂದು ಫೊಟೋ ಕ್ಲಿಕ್ಕಿಸುವ ಕೇವಲ ಕಲ್ಲುಗಳ ರಾಶಿಯನ್ನಾಗಿ ಮಾಡಲಾಗಿದೆ.’

ಈ ಸಾಲುಗಳು ಕೇವಲ ಭಾವುಕ ಉದ್ಗಾರಗಳ ಮಾತುಗಳಾಗಿರಲಿಲ್ಲ. ಬದಲಿಗೆ ಪಾಶ್ಚಾತ್ಯರ ಆಕ್ರಮಣಶೀಲತೆ ಮತ್ತು ಇಂದಿನ ಬಂಡವಾಳಶಾಹಿ ಪ್ರವಾಸೋದ್ಯಮವು ಮೂಲ ಸಂಸ್ಕೃತಿಯೊಂದರ ಜೀವಂತಿಕೆಯನ್ನು ಹೇಗೆ ಕಸಿದುಕೊಂಡು ಅದನ್ನು ಕೇವಲ ಒಂದು ವಸ್ತುಪ್ರದರ್ಶನದಂತೆ ಮಾಡಿದೆ ಎಂಬ ವಾಸ್ತವದ ಆಳವಾದ ಕಟು ವಿಮರ್ಶೆಯಾಗಿದೆ. ಮಾಚು ಪಿಚುವಿನ ಆ ಕಲ್ಲುಗಳ ನಡುವೆ ನಿಂತಾಗ ಗುವಾರನಿಗೆ ಅರ್ಥವಾಗಿದ್ದು ಒಂದೇ—ಕಳೆದುಹೋದ ಅಮೆರಿಕದ ಘನತೆಯನ್ನು ಮರಳಿ ತರಬೇಕಾದರೆ, ಶೋಷಿತ ಮೂಲ ನಿವಾಸಿಗಳ ಹಕ್ಕುಗಳಿಗಾಗಿ ಹೋರಾಡುವುದು ಅನಿವಾರ್ಯ ಎಂಬ ಸತ್ಯ.

'ದಿ ಮೋಟಾರ್ ಸೈಕಲ್ ಡೈರೀಸ್' ಪ್ರವಾಸ ಕಥನದ ಅತ್ಯಂತ ಭಾವನಾತ್ಮಕ ಮತ್ತು ಆಂತರಿಕ ಬದಲಾವಣೆಗೆ ಕಾರಣವಾದ ರೋಮಾಂಚನಕಾರಿ ಘಟ್ಟ ಬರುವುದು ಪೆರುವಿನ ಅಮೆಜಾನ್ ನದಿಯ ದಂಡೆಯಲ್ಲಿದ್ದ ‘ಸ್ಯಾನ್ ಪ್ಯಾಬ್ಲೊ ಕುಷ್ಠರೋಗಿಗಳ ಆಶ್ರಮ’ದಲ್ಲಿ. ಅಂದಿನ ಕಾಲದಲ್ಲಿ ಕುಷ್ಠರೋಗವನ್ನು ಕೇವಲ ಕಾಯಿಲೆಯಾಗಿ ನೋಡದೇ ಒಂದು ಸಾಮಾಜಿಕ ಶಾಪವೆಂಬಂತೆ ನೋಡಲಾಗುತ್ತಿತ್ತು. ಹೀಗಾಗಿ, ರೋಗಿಗಳನ್ನು ಸಮಾಜದಿಂದ ಸಂಪೂರ್ಣವಾಗಿ ದೂರ ಇಡಲಾಗಿತ್ತು. ಆ ಆಶ್ರಮದ ಭೌಗೋಳಿಕತೆಯೇ ಆ ತಾರತಮ್ಯವನ್ನು ಎದ್ದು ತೋರಿಸುತ್ತಿತ್ತು. ನದಿಯ ಒಂದು ದಂಡೆಯಲ್ಲಿ ವೈದ್ಯರು, ನರ್ಸ್‌ಗಳು ಹಾಗೂ ಸನ್ಯಾಸಿನಿಯರು ಐಷಾರಾಮಿಯಾಗಿ ವಾಸಿಸುತ್ತಿದ್ದರೆ, ನದಿಯ ಮತ್ತೊಂದು ದಂಡೆಯಲ್ಲಿ ರೋಗಿಗಳು ನರಕಯಾತನೆ ಅನುಭವಿಸುತ್ತಿದ್ದರು. ಅಲ್ಲಿನ ಕಠಿಣ ನಿಯಮದ ಪ್ರಕಾರ, ವೈದ್ಯರು ರೋಗಿಗಳನ್ನು ತಪಾಸಣೆ ಮಾಡುವಾಗ ಕಡ್ಡಾಯವಾಗಿ ರಬ್ಬರ್ ಗ್ಲೌಸ್‌ಗಳನ್ನು ಧರಿಸಬೇಕಾಗಿತ್ತು.

ಆದರೆ, ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಅರ್ನೆಸ್ಟೊ ಚೆ ಗುವಾರ ಅಲ್ಲಿಗೆ ತಲುಪಿದ ತಕ್ಷಣ ಆ ಕೃತಕ ಮತ್ತು ಅಮಾನವೀಯ ನಿಯಮವನ್ನು ಮುರಿದು ಎಸೆದ! ಆತ ಯಾವುದೇ ಗ್ಲೌಸ್ ಧರಿಸದೇ ನೇರವಾಗಿ ರೋಗಿಗಳ ಬಳಿ ಹೋಗಿ ಅವರ ಹುಣ್ಣುಗಳಿದ್ದ ಕೈಗಳನ್ನು ತನ್ನ ಬರಿಗೈಯಿಂದಲೇ ಕುಲುಕಿದ. ಅವರ ಜತೆ ಕುಳಿತು ಸುಖ-ದುಃಖದ ಕಥೆಗಳನ್ನು ಕೇಳಿದ. ಅಷ್ಟೇ ಅಲ್ಲ, ಅವರೊಂದಿಗೆ ಫುಟ್‌ಬಾಲ್ ಆಟವಾಡುತ್ತಾ ಅವರಲ್ಲೊಬ್ಬನಾದ. ವೈದ್ಯಕೀಯ ಜ್ಞಾನಕ್ಕಿಂತಲೂ ಮಿಗಿಲಾಗಿ, ಸಮಾಜದಿಂದ ಬಹಿಷ್ಕೃತರಾಗಿದ್ದ ಆ ರೋಗಿಗಳಿಗೆ ಆ ಕ್ಷಣದಲ್ಲಿ ಬೇಕಾಗಿದ್ದು ತಾವೂ ಮನುಷ್ಯರು ಎಂದು ಸಾಬೀತುಪಡಿಸುವ ಗೌರವ ಮತ್ತು ಆತ್ಮೀಯತೆಯ ಪ್ರೀತಿ. ಅರ್ನೆಸ್ಟೊ ಅದನ್ನು ಧಾರೆ ಎರೆದ.

ಅರ್ನೆಸ್ಟೊ ತೋರಿಸಿದ ಈ ಅಪ್ರತಿಮ ಮಾನವೀಯತೆ ಮತ್ತು ನಿರ್ಭೀತಿ ಅಲ್ಲಿದ್ದ ರೋಗಿಗಳ ಮನಸನ್ನು ಗೆದ್ದಿತು. ತಮಗಾಗಿ ದೇವರಿಂದಲೇ ಕಳುಹಿಸಿದ ರಕ್ಷಕನಂತೆ ಆತನನ್ನು ನೋಡತೊಡಗಿದರು. ಇದು ಗುವಾರಗೆ ಸಮಾಜದಲ್ಲಿ ಮೇಲು-ಕೀಳು ಮತ್ತು ಆರೋಗ್ಯವಂತ-ರೋಗಿ ಎಂದು ಸೃಷ್ಟಿಸಲಾಗಿದ್ದ ಕೃತಕ ಗೋಡೆಗಳನ್ನು ಧ್ವಂಸಗೊಳಿಸುವ ಮೊದಲ ಹೆಜ್ಜೆಯಾಗಿತ್ತು.

ಕುಷ್ಠರೋಗಿಗಳ ಆಶ್ರಮದ ಈ ದಿನಗಳು ಗುವಾರನಲ್ಲಿದ್ದ ಕೇವಲ ಒಬ್ಬ ವೈದ್ಯನನ್ನು ಮಾನವಕುಲದ ವಿಮೋಚಕನನ್ನಾಗಿ ಬದಲಾಯಿಸಲು ಪ್ರೇರೇಪಿಸಿದವು. ಬಡವರ, ನೊಂದವರ ನೋವಿಗೆ ಸ್ಪಂದಿಸುವ ಮತ್ತು ಅವರ ಗೌರವಕ್ಕಾಗಿ ಯಾವುದೇ ನಿಯಮವನ್ನು ಮುರಿಯುವ ಧೈರ್ಯ ಆತನಿಗೆ ಸ್ಯಾನ್ ಪ್ಯಾಬ್ಲೊದ ಮಣ್ಣಿನಲ್ಲಿಯೇ ದಕ್ಕಿತು.

ಅಲ್ಲಿನ ಕುಷ್ಠರೋಗಿಗಳ ಆಶ್ರಮದಲ್ಲಿದ್ದಾಗ ಎದುರಾದ ಗುವಾರನ ಇಪ್ಪತ್ನಾಲ್ಕನೆಯ ಜನ್ಮದಿನದ ಆ ರಾತ್ರಿ, ಆತನ ಬದುಕಿನ ಅತ್ಯಂತ ರೋಮಾಂಚನಕಾರಿ ಹಾಗೂ ಸಾಂಕೇತಿಕ ಘಟ್ಟವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಯಿತು. ಅಂದು ಆಶ್ರಮದ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ನದಿಯ 'ಸುರಕ್ಷಿತ' ದಂಡೆಯಲ್ಲೇ ಆತನಿಗಾಗಿ ಒಂದು ಸಣ್ಣ ಪಾರ್ಟಿಯನ್ನು ಆಯೋಜಿಸಿದ್ದರು. ಆದರೆ, ಅಲ್ಲಿ ನೆರೆದಿದ್ದ ಗಣ್ಯರ ನಡುವೆ ಅರ್ನೆಸ್ಟೊನ ಮನಸು ನೆಮ್ಮದಿಯಾಗಿರಲಿಲ್ಲ. ಆತನ ಆಲೋಚನೆಗಳೆಲ್ಲವೂ ನದಿಯ ಆಚೆ ದಂಡೆಯಲ್ಲಿದ್ದ, ಸಮಾಜದಿಂದ ಬಹಿಷ್ಕೃತರಾಗಿ ಕತ್ತಲಲ್ಲಿ ಕಳೆಯುತ್ತಿದ್ದ ಆ ಬಡ ಒಂಟಿ ರೋಗಿಗಳ ಕಡೆಗೇ ಇತ್ತು. ತನ್ನ ಹುಟ್ಟುಹಬ್ಬವನ್ನು ಅವರ ಜತೆಯೇ ಆಚರಿಸಬೇಕೆಂದು ಆತ ದೃಢವಾಗಿ ನಿರ್ಧರಿಸಿದ.

ತನ್ನ ಜನ್ಮದಿನದ ಭಾಷಣದಲ್ಲಿ ಆತ ಸ್ಪಷ್ಟವಾಗಿ ಹೇಳುತ್ತಾನೆ - ‘ನಾವು ಈ ಇಡೀ ಅಮೆರಿಕ ಖಂಡವನ್ನು ಕೃತಕ ರಾಷ್ಟ್ರೀಯತೆಗಳಾಗಿ ವಿಂಗಡಿಸಿದ್ದೇವೆ. ಆದರೆ ನಾವೆಲ್ಲರೂ ಒಂದೇ ರಕ್ತದ, ಒಂದೇ ಸಂಸ್ಕೃತಿಯ ಜನ. ನಾನು ಅರ್ಜೆಂಟೀನಾದ ಪರವಾಗಿ ಮಾತನಾಡುತ್ತಿಲ್ಲ, ಇಡೀ ದಕ್ಷಿಣ ಅಮೆರಿಕದ ಪರವಾಗಿ ಮಾತನಾಡುತ್ತಿದ್ದೇನೆ.’ ಇಲ್ಲಿ ಆತನಲ್ಲಿದ್ದ ವೈದ್ಯಕೀಯ ದೃಷ್ಟಿಕೋನ ಬದಲಾಗುತ್ತದೆ. ಒಬ್ಬ ವ್ಯಕ್ತಿಗೆ ಬರುವ ಕಾಯಿಲೆಗೆ ಕೇವಲ ಬ್ಯಾಕ್ಟೀರಿಯಾಗಳು ಕಾರಣವಲ್ಲ, ಬದಲಿಗೆ ಆತನನ್ನು ಹಸಿವಿನಲ್ಲಿಡುವ ಭ್ರಷ್ಟ ರಾಜಕೀಯ ವ್ಯವಸ್ಥೆಯೇ ನಿಜವಾದ ಕಾಯಿಲೆ ಎಂದು ಆತನಿಗೆ ಅರಿವಾಗುತ್ತದೆ. ಆ ಕಾಯಿಲೆಯನ್ನು ಗುಣಪಡಿಸಲು ಕೇವಲ ಸ್ಟೆತಸ್ಕೋಪ್ ಸಾಲದು, ಅದಕ್ಕೆ ಕ್ರಾಂತಿಯ ಶಸ್ತ್ರಚಿಕಿತ್ಸೆಯೇ ಬೇಕು ಎಂಬ ತೀರ್ಮಾನಕ್ಕೆ ಆತ ಬರುತ್ತಾನೆ.

ಅದೊಂದು ಕಡುಗತ್ತಲಿನ ರಾತ್ರಿ. ಅಮೆಜಾನ್ ನದಿಯ ಪ್ರವಾಹ ತೀವ್ರವಾಗಿತ್ತು ಮತ್ತು ಆಳವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ಅರ್ನೆಸ್ಟೊ ಚೆ ಗುವಾರ ತೀವ್ರವಾದ ಆಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದರಿಂದ ಆತನಿಗೆ ಸರಾಗವಾಗಿ ಉಸಿರಾಡಲು ಕೂಡ ಕಷ್ಟವಾಗುತ್ತಿತ್ತು. ಆದರೂ ಪ್ರಾಣದ ಹಂಗು ತೊರೆದ ಆತ, ಎಲ್ಲರ ಮಾತನ್ನು ಮೀರಿ ನದಿಗೆ ಧುಮುಕಿದ. ಉಸಿರುಗಟ್ಟಿಸುವ ಆಸ್ತಮಾದ ನೋವಿನ ನಡುವೆಯೂ ಕತ್ತಲ ರಾತ್ರಿಯಲ್ಲಿ ಇಡೀ ಅಮೆಜಾನ್ ನದಿಯನ್ನು ಯಶಸ್ವಿಯಾಗಿ ಈಜಿ ಆಚೆ ದಂಡೆಯನ್ನು ತಲುಪಿದ. ಆತನ ಈ ಸಾಹಸವನ್ನು ಕಂಡು ದಿಗ್ಭ್ರಮೆಗೊಂಡ ರೋಗಿಗಳು ಆಶ್ಚರ್ಯ ಮತ್ತು ತೀವ್ರ ಭಾವುಕತೆಯಿಂದ ಆತನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಕುಣಿದು ಸಂಭ್ರಮಿಸಿದರು.

ಅರ್ನೆಸ್ಟೊ ಚೆ ಗುವಾರ ನಡೆಸಿದ ಈ ನದಿ ದಾಟುವಿಕೆ ಶ್ರೀಮಂತ-ಬಡವ, ಆರೋಗ್ಯವಂತ-ರೋಗಿ ಹಾಗೂ ಮೇಲು-ಕೀಳು ಎಂದು ಸಮಾಜವು ಸೃಷ್ಟಿಸಿದ್ದ ಎಲ್ಲ ಕೃತಕ ಗಡಿಗಳನ್ನು ಧ್ವಂಸಗೊಳಿಸಿದ ಸಾಂಕೇತಿಕ ಕ್ರಿಯೆಯಾಗಿತ್ತು. ನದಿಯ ಆಚೆ ದಂಡೆಗೆ ಈಜುವ ಮೂಲಕ ಆತ ತನ್ನ ಹಳೆಯ ಆರಾಮದಾಯಕ ಬದುಕನ್ನು ಶಾಶ್ವತವಾಗಿ ತೊರೆದು, ಶೋಷಿತರ ಬದುಕಿನೊಂದಿಗೆ ತನ್ನನ್ನು ಸಂಪೂರ್ಣವಾಗಿ ಐಕ್ಯಗೊಳಿಸಿಕೊಂಡ. ಆ ರಾತ್ರಿ ಅಮೆಜಾನ್ ನದಿಯ ನೀರಿನಲ್ಲಿ ಒಬ್ಬ ಮುಗ್ಧ ವೈದ್ಯಕೀಯ ವಿದ್ಯಾರ್ಥಿ ಕರಗಿ ಹೋಗಿ, ಇಡೀ ಮಾನವಕುಲದ ವಿಮೋಚನೆಗಾಗಿ ಪ್ರಾಣವನ್ನೇ ಪಣಕ್ಕಿಡುವ ಮಹಾನ್ ಕ್ರಾಂತಿಕಾರಿ 'ಚೇ' ಜನಿಸಿದ.

ಅರ್ನೆಸ್ಟೊ ಚೆ ಗುವಾರ ಎಂಬ ಹೆಸರನ್ನು ಕೇಳಿದ ತಕ್ಷಣ ಇಡೀ ಜಗತ್ತಿಗೆ ನೆನಪಾಗುವುದು ಮಿಲಿಟರಿ ಉಡುಪು ಧರಿಸಿದ, ಗಡ್ಡ ಬಿಟ್ಟ, ಕ್ರಾಂತಿಕಾರಿ ಕಣ್ಣುಗಳ ಒಬ್ಬ ಗೆರಿಲ್ಲಾ ಹೋರಾಟಗಾರ. ಆದರೆ, ಆ ಜಗತ್ಪ್ರಸಿದ್ಧ ಕ್ರಾಂತಿಕಾರಿಯ ಜನನವಾಗಿದ್ದು ಕ್ಯೂಬಾದ ಕಾಡುಗಳಲ್ಲಲ್ಲ, ಬದಲಿಗೆ ದಕ್ಷಿಣ ಅಮೆರಿಕದ ಧೂಳಿನ ರಸ್ತೆಗಳಲ್ಲಿ!

Untitled design (10)

ಒಬ್ಬ ಇಪ್ಪತ್ಮೂರು ವರ್ಷದ ಮುಗ್ಧ ವೈದ್ಯಕೀಯ ವಿದ್ಯಾರ್ಥಿ 'ಅರ್ನೆಸ್ಟೋ ಗುವಾರ' ತನ್ನ ಆಸ್ತಮಾ ಕಾಯಿಲೆಯನ್ನೂ ಲೆಕ್ಕಿಸದೆ ಗೆಳೆಯನೊಂದಿಗೆ ಹೊರಟ ಒಂದು ಮೋಟಾರ್ ಸೈಕಲ್ ಪ್ರಯಾಣ, ಆತನನ್ನು ಜಗತ್ತು ಆರಾಧಿಸುವ 'ಚೇ' ಎಂಬ ಕ್ರಾಂತಿಕಾರಿಯನ್ನಾಗಿ ಹೇಗೆ ಪರಿವರ್ತಿಸಿತು ಎಂಬುದರ ಜೀವಂತ ದಸ್ತಾವೇಜೇ 'ದಿ ಮೋಟಾರ್ ಸೈಕಲ್ ಡೈರೀಸ್'.

ಅಷ್ಟಕ್ಕೂ 'ದಿ ಮೋಟಾರ್ ಸೈಕಲ್ ಡೈರೀಸ್' ಕೇವಲ ಪ್ರವಾಸದ ವಿವರಣೆಯಲ್ಲ, ಅದೊಂದು 'ಪರಿವರ್ತನೆಯ ಕಥನ'. ಹೀಗಾಗಿ ಆ ಕೃತಿಗೆ ಎಲ್ಲಿಲ್ಲದ ಮಹತ್ವ. ಅರ್ನೆಸ್ಟೊ ಚೆ ಗುವಾರನ ಬರವಣಿಗೆಯಲ್ಲಿ ಅದ್ಭುತ ಕಾವ್ಯಾತ್ಮಕತೆ ಇದೆ. ಪ್ರಕೃತಿಯನ್ನು ವರ್ಣಿಸುವಾಗ ಎಷ್ಟು ಆಪ್ತನಾಗುತ್ತಾನೋ, ಅಷ್ಟೇ ತೀಕ್ಷ್ಣವಾಗಿ ಸಮಾಜದ ಅನ್ಯಾಯಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ತಾನು ಒಬ್ಬ ಬುದ್ಧಿಜೀವಿ ಕುಟುಂಬದಿಂದ ಬಂದವನು, ತನ್ನಲ್ಲಿರುವ ಮಿತಿಗಳೇನು ಎಂಬುದನ್ನು ಆತ ಎಲ್ಲೂ ಮುಚ್ಚಿಡುವುದಿಲ್ಲ. ಈ ಪುಸ್ತಕ ಓದಿದ ಯಾರಿಗೇ ಆದರೂ ಪ್ರವಾಸ ಎಂದರೆ ಕೇವಲ ಐಷಾರಾಮಿ ಹೊಟೇಲ್‌ಗಳಲ್ಲಿ ಉಳಿದುಕೊಳ್ಳುವುದಲ್ಲ, ಬದಲಿಗೆ ಸ್ಥಳೀಯ ಮಣ್ಣಿನ ವಾಸನೆ ಮತ್ತು ಜನರ ಕಣ್ಣೀರನ್ನು ಗ್ರಹಿಸುವುದು ಎಂಬ ಸತ್ಯ ಮನವರಿಕೆಯಾಗುತ್ತದೆ.

ಪ್ರಯಾಣದ ಕೊನೆಯ ಪುಟದಲ್ಲಿ ಅರ್ನೆಸ್ಟೊ ಚೆ ಗುವಾರ ಒಂದು ಮಾತು ಬರೆಯುತ್ತಾನೆ - ‘ಈ ಡೈರಿಯನ್ನು ಬರೆದ ವ್ಯಕ್ತಿ ಇದನ್ನು ಮತ್ತೆ ಓದುತ್ತಿರುವಾಗ ಸತ್ತುಹೋಗಿರುತ್ತಾನೆ. ಯಾಕೆಂದರೆ, ಇಡೀ ಅಮೆರಿಕವನ್ನು ಸುತ್ತಿದ್ದ ಆ ಹಳೆಯ ಅರ್ನೆಸ್ಟೊ ಚೆ ಗುವಾರ ಈಗ ಇಲ್ಲ. ನನ್ನೊಳಗೆ ಈಗ ಹೊಸದೊಂದು ಚೇತನ ಜಾಗೃತವಾಗಿದೆ.’

ಹೌದು, ಆ ಪ್ರಯಾಣ ಮುಗಿದ ಕೆಲವೇ ವರ್ಷಗಳಲ್ಲಿ ಅರ್ನೆಸ್ಟೊ ಚೆ ಗುವಾರ ಮೆಕ್ಸಿಕೋದಲ್ಲಿ ಫಿಡೆಲ್ ಕ್ಯಾಸ್ಟ್ರೋನನ್ನು ಭೇಟಿಯಾಗುತ್ತಾನೆ, ಮುಂದೆ ಕ್ಯೂಬಾದ ಕ್ರಾಂತಿಯ ನೇತೃತ್ವ ವಹಿಸಿ ಜಗತ್ತಿನ ಇತಿಹಾಸವನ್ನೇ ಬದಲಾಯಿಸಲು ಪ್ರಯತ್ನಿಸುತ್ತಾನೆ. ಹೀಗಾಗಿ ನನಗೆ 'ದ ಮೋಟಾರ್ ಸೈಕಲ್ ಡೈರೀಸ್' ಎನ್ನುವುದು ಕೇವಲ ಒಂದು ಮೋಟಾರ್ ಸೈಕಲ್ ಸವಾರಿಯ ಕಥೆ ಎಂದು ಅನಿಸುವುದಿಲ್ಲ. ಅದು ಒಬ್ಬ ಯುವಕ ತನ್ನ ಬದುಕಿನ ಆರಾಮದಾಯಕ ವಲಯದಿಂದ ಹೊರಬಂದು, ಜಗತ್ತಿನ ದುಃಖಕ್ಕೆ ಸ್ಪಂದಿಸುತ್ತಾ, ಜಗತ್ತೇ ನೆನಪಿಡುವ ಮಹಾನ್ ನಾಯಕ 'ಚೆ ಗುವಾರ' ಆಗಿ ರೂಪಾಂತರಗೊಂಡ ರೋಮಾಂಚನಕಾರಿ ಇತಿಹಾಸ.

ಪ್ರತಿಯೊಬ್ಬ ಪ್ರವಾಸ ಪ್ರೇಮಿ ಮತ್ತು ಸಮಾಜಮುಖಿ ಓದಲೇಬೇಕಾದ ಕ್ಲಾಸಿಕ್ ಕೃತಿ ಇದು.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?