ವಲಸೆ ಜೀವಿಗಳ ರಹಸ್ಯ ಮ್ಯಾಪುಗಳು
ಅನೇಕ ಪಕ್ಷಿಗಳು ಮತ್ತು ಕಡಲಾಮೆಗಳ ಕಣ್ಣು ಹಾಗೂ ಮೆದುಳಿನಲ್ಲಿ ವಿಶೇಷ ಪ್ರೋಟೀನ್‌ಗಳಿರುತ್ತವೆ. ಇವು ಭೂಮಿಯ ಕಾಂತೀಯ ವಲಯವನ್ನು ಗುರುತಿಸಿ ದಿಕ್ಸೂಚಿಯಂತೆ ಕೆಲಸ ಮಾಡುತ್ತವೆ. ಹಗಲಿನಲ್ಲಿ ವಲಸೆ ಹೋಗುವ ಪಕ್ಷಿಗಳು ಸೂರ್ಯನ ಸ್ಥಾನ, ರಾತ್ರಿಯಲ್ಲಿ ವಲಸೆ ಹೋಗುವ ಪಕ್ಷಿಗಳು ನಕ್ಷತ್ರ ಪುಂಜಗಳ ವಿನ್ಯಾಸವನ್ನು ನೋಡಿ ದಿಕ್ಕನ್ನು ನಿರ್ಧರಿಸುತ್ತವೆ. ಪರ್ವತ ಶ್ರೇಣಿಗಳು, ನದಿಗಳು, ಮತ್ತು ಸಮುದ್ರ ತೀರಗಳನ್ನು ನೆನಪಿನಲ್ಲಿಟ್ಟುಕೊಂಡೂ ಇವು ಪ್ರಯಾಣಿಸಬಲ್ಲವು.
- ಸ್ವಾಮಿನಾಥನ್
ಪ್ರತಿವರ್ಷ ಪ್ರಕೃತಿಯಲ್ಲಿ ಒಂದು ಅದ್ಭುತ ಸಂಭವಿಸುತ್ತದೆ. ಅದೇ ಪ್ರಾಣಿ- ಪಕ್ಷಿಗಳ ಮಹಾ ವಲಸೆ. ಕೋಟ್ಯಂತರ ಪಕ್ಷಿ- ಪ್ರಾಣಿಗಳು ಯಾವುದೇ ನಕ್ಷೆ ಅಥವಾ ಆಧುನಿಕ ಜಿಪಿಎಸ್ ನೆರವಿಲ್ಲದೆ, ಕೇವಲ ತಮ್ಮ ನೈಸರ್ಗಿಕ ಅಂತಃಪ್ರಜ್ಞೆಯೊಂದಿಗೆ ಸಾವಿರಾರು ಕಿಮೀ ಪಯಣಿಸುತ್ತವೆ. ಭೌಗೋಳಿಕ ಗಡಿಗಳನ್ನು ದಾಟಿ, ಖಂಡದಿಂದ ಖಂಡಕ್ಕೆ ಸಾಗುವ ಈ ವಲಸೆ ಪ್ರಕೃತಿಯ ರೋಚಕ ವಿದ್ಯಮಾನಗಳಲ್ಲೊಂದು.
ವಲಸೆ ಹೋಗುವುದೇಕೆ?
ಜೀವಿಗಳು ಕೇವಲ ವಿಹಾರಕ್ಕಾಗಿ ವಲಸೆ ಹೋಗುವುದಿಲ್ಲ. ಅದರ ಹಿಂದೆ ಪ್ರಮುಖವಾಗಿ ಮೂರು ಜೈವಿಕ ಕಾರಣಗಳಿವೆ. ಚಳಿಗಾಲದಲ್ಲಿ ಉತ್ತರ ಗೋಳಾರ್ಧದ ಹಿಮಪಾತದಿಂದ ಆಹಾರದ ಮೂಲಗಳು ಸಂಪೂರ್ಣವಾಗಿ ಮುಚ್ಚಿಹೋಗುತ್ತವೆ. ಹಾಗಾಗಿ ಜೀವಿಗಳು ಆಹಾರ ಹೇರಳವಾಗಿ ಸಿಗುವ ಬೆಚ್ಚಗಿನ ಪ್ರದೇಶಗಳತ್ತ ಸಾಗುತ್ತವೆ. ವಿಪರೀತ ಚಳಿ ಅಥವಾ ಬಿಸಿಲಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಮಶೀತೋಷ್ಣ ವಲಯಗಳತ್ತ, ಸುರಕ್ಷಿತವಾಗಿ ಮೊಟ್ಟೆಯಿಡಲು, ಮರಿಗಳನ್ನು ಸಾಕಿ ಬೆಳೆಸಲು ಸೂಕ್ತ ವಾತಾವರಣ ಹುಡುಕಿಕೊಂಡು ಜೀವಿಗಳು ವಲಸೆ ಹೊರಡುತ್ತವೆ.
ಇದನ್ನೂ ಓದಿ: ವನ್ಯಜೀವಿ ಛಾಯಾಗ್ರಹಣ ಎಂಬ ವಂಡರ್‌ಫುಲ್ ಪಯಣ
ಜೈವಿಕ ಮಾರ್ಗಸೂಚಿಯೊಂದಿಗೆ ಪ್ರಯಾಣ
ಅನೇಕ ಪಕ್ಷಿಗಳು ಮತ್ತು ಕಡಲಾಮೆಗಳ ಕಣ್ಣು ಹಾಗೂ ಮೆದುಳಿನಲ್ಲಿ ವಿಶೇಷ ಪ್ರೋಟೀನ್‌ಗಳಿರುತ್ತವೆ. ಇವು ಭೂಮಿಯ ಕಾಂತೀಯ ವಲಯವನ್ನು ಗುರುತಿಸಿ ದಿಕ್ಸೂಚಿಯಂತೆ ಕೆಲಸ ಮಾಡುತ್ತವೆ. ಹಗಲಿನಲ್ಲಿ ವಲಸೆ ಹೋಗುವ ಪಕ್ಷಿಗಳು ಸೂರ್ಯನ ಸ್ಥಾನ, ರಾತ್ರಿಯಲ್ಲಿ ವಲಸೆ ಹೋಗುವ ಪಕ್ಷಿಗಳು ನಕ್ಷತ್ರ ಪುಂಜಗಳ ವಿನ್ಯಾಸವನ್ನು ನೋಡಿ ದಿಕ್ಕನ್ನು ನಿರ್ಧರಿಸುತ್ತವೆ. ಪರ್ವತ ಶ್ರೇಣಿಗಳು, ನದಿಗಳು, ಮತ್ತು ಸಮುದ್ರ ತೀರಗಳನ್ನು ನೆನಪಿನಲ್ಲಿಟ್ಟುಕೊಂಡೂ ಇವು ಪ್ರಯಾಣಿಸಬಲ್ಲವು. ಸಲ್ಮಾನ್ ಮೀನುಗಳಂಥ ಜಲಚರಗಳು ತಾವು ಹುಟ್ಟಿದ ನದಿಯ ನೀರಿನ ವಿಶಿಷ್ಟ ವಾಸನೆಯನ್ನು ನೆನಪಿಟ್ಟುಕೊಂಡು ಸಾವಿರಾರು ಮೈಲಿಗಳ ದೂರದಿಂದ ಮರಳಿ ಬರುತ್ತವೆ.

ಪಕ್ಷಿ ಪ್ರಪಂಚದ 10 ರೋಚಕ ವಲಸೆಗಳು
ಆರ್ಕ್ಟಿಕ್ ಟರ್ನ್: ಜಗತ್ತಿನಲ್ಲೇ ಅತ್ಯಂತ ಸುದೀರ್ಘ ವಲಸೆ ಹೋಗುವ ಹಕ್ಕಿ ಇದು. ಪ್ರತಿವರ್ಷ ಆರ್ಕ್ಟಿಕ್‌ನಿಂದ ಅಂಟಾರ್ಕ್ಟಿಕಾಕ್ಕೆ ಮತ್ತು ಅಲ್ಲಿಂದ ವಾಪಸ್ ಬರಲು ಸುಮಾರು 70,000- 90,000 ಕಿಮೀ ಪ್ರಯಾಣಿಸುತ್ತದೆ. ಅಂದರೆ ತನ್ನ ಜೀವಿತಾವಧಿಯಲ್ಲಿ ಭೂಮಿಯಿಂದ ಚಂದ್ರನಿಗೆ ಮೂರು ಬಾರಿ ಹೋಗಿ ಬರುವಷ್ಟು ದೂರ ಹಾರುತ್ತದೆ!
ಅಮುರ್ ಫಾಲ್ಕನ್: ಪೂರ್ವ ಸೈಬೀರಿಯಾದಿಂದ ಹೊರಡುವ ಈ ಸಣ್ಣ ತಳಿಯ ಡೇಗೆಗಳು, ಭಾರತದ ನಾಗಾಲ್ಯಾಂಡ್‌ನ ಮಾರ್ಗವಾಗಿ ಆಫ್ರಿಕಕ್ಕೆ ಸಾಗುತ್ತವೆ. ಅರಬ್ಬೀ ಸಮುದ್ರದ ಮೇಲೆ ತಡೆರಹಿತವಾಗಿ ಸಾವಿರಾರು ಕಿಮೀ ಹಾರುವ ಇವುಗಳ ಸಾಮರ್ಥ್ಯ ವಿಸ್ಮಯಕಾರಿ.
ಬಾರ್ ಹೆಡೆಡ್ ಗೂಸ್: ಮಂಗೋಲಿಯಾ ಮತ್ತು ಟಿಬೆಟ್‌ನಿಂದ ಭಾರತದ ಜಲಮೂಲಗಳಿಗೆ ಬರುವ ಈ ಬಾತುಕೋಳಿಗಳು ಜಗತ್ತಿನ ಅತಿ ಎತ್ತರದಲ್ಲಿ ಹಾರುವ ಹಕ್ಕಿಗಳು. ಇವು ಸುಮಾರು 29,000 ಅಡಿ ಎತ್ತರದ ಹಿಮಾಲಯ ಪರ್ವತ ಶ್ರೇಣಿಗಳ ಮೇಲಿಂದಲೇ ಹಾರಿ ಬರುತ್ತವೆ.
ಬಾರ್ ಟೇಲ್ಡ್ ಗಾಡ್ವಿಟ್: ಇದು ತಡೆರಹಿತ ದೀರ್ಘ ಹಾರಾಟದ ದಾಖಲೆ ಹೊಂದಿದೆ. ಅಲಾಸ್ಕಾದಿಂದ ನ್ಯೂಜಿಲೆಂಡ್‌ಗೆ ಸುಮಾರು 11,000 ಕಿಮೀಗೂ ಹೆಚ್ಚು ದೂರವನ್ನು ತಡೆರಹಿತ, ಆಹಾರ-ನೀರನ್ನು ಸೇವಿಸದೆ ಕೇವಲ 9- 11 ದಿನಗಳಲ್ಲಿ ಕ್ರಮಿಸುತ್ತದೆ.
ಸೈಬೀರಿಯನ್ ಕ್ರೇನ್: ಈ ಭವ್ಯ ಬಿಳಿ ಬಕಪಕ್ಷಿಗಳು ಸೈಬೀರಿಯಾದಿಂದ ಭಾರತದ ಭರತ್‌ಪುರಕ್ಕೆ ಬರುತ್ತಿದ್ದವು. ಪ್ರಸ್ತುತ ಇವುಗಳ ವಲಸೆ ಮಾರ್ಗಗಳು ತೀವ್ರ ಸಂಕಷ್ಟದಲ್ಲಿದ್ದರೂ, ಇವುಗಳ ಹಿಂದಿನ ಪ್ರಯಾಣ ಇತಿಹಾಸ ರೋಚಕವಾಗಿದೆ.
ಗ್ರೇಟರ್ ಫ್ಲೆಮಿಂಗೋ: ಗುಜರಾತ್‌ನ ಕಚ್ ಮತ್ತು ದಕ್ಷಿಣ ಭಾರತದ ಪುಲಿಕಾಟ್ ಸರೋವರಕ್ಕೆ ಇವು ಲಕ್ಷಾಂತರ ಸಂಖ್ಯೆಯಲ್ಲಿ ವಲಸೆ ಬರುತ್ತವೆ.
ರಫ್ ಪಕ್ಷಿ: ಯುರೇಷಿಯಾದ ಆರ್ಕ್ಟಿಕ್ ವಲಯದಿಂದ ಭಾರತದ ಬಯಲು ಸೀಮೆಯ ಕೆರೆಗಳಿಗೆ ಚಳಿಗಾಲದಲ್ಲಿ ಇವು ಸಾವಿರಾರು ಮೈಲಿ ಕ್ರಮಿಸಿ ಬರುತ್ತವೆ.
ಯುರೇಷಿಯನ್ ಸ್ಪೂನ್‌ಬಿಲ್: ಚಳಿಗಾಲದ ಆರಂಭದಲ್ಲಿ ಯುರೋಪ್ ಮತ್ತು ಮಧ್ಯ ಏಷ್ಯಾದಿಂದ ಹೊರಟು ಭಾರತದಾದ್ಯಂತ ಇರುವ ಜಲಮೂಲಗಳಲ್ಲಿ ಉಳಿಯುತ್ತವೆ.
ಪೆರೆಗ್ರಿನ್ ಫಾಲ್ಕನ್: ಇದು ಜಗತ್ತಿನ ವೇಗದ ಬೇಟೆ ಹಕ್ಕಿ. ಆರ್ಕ್ಟಿಕ್‌ನಿಂದ ದಕ್ಷಿಣ ಅಮೆರಿಕ ಅಥವಾ ದಕ್ಷಿಣ ಏಷ್ಯಾದವರೆಗೆ ಸುದೀರ್ಘ ವಲಸೆ ಕೈಗೊಳ್ಳುತ್ತದೆ.
ರೋಸಿ ಪಾಸ್ಟರ್: ಮಧ್ಯ ಏಷ್ಯಾದಿಂದ ಹಿಂಡು ಹಿಂಡಾಗಿ ಭಾರತದ ಕೃಷಿ ಭೂಮಿಗಳಿಗೆ ಬರುತ್ತವೆ.

ಪ್ರಾಣಿ ಪ್ರಪಂಚದ 5 ಮಹಾ ವಲಸೆಗಳು
ವೈಲ್ಡ್‌ಬೀಸ್ಟ್: ಆಫ್ರಿಕದ ಸೆರೆಂಗೆಟಿಯಿಂದ ಮಸಾಯಿ ಮಾರಾ ನಡುವೆ ನಡೆಯುವ ಸುಮಾರು 15 ಲಕ್ಷ ವೈಲ್ಡ್‌ಬೀಸ್ಟ್‌ಗಳ ವಲಸೆಯನ್ನು ʼಜಗತ್ತಿನ ಮಹಾ ಅಚ್ಚರಿʼ ಎನ್ನಲಾಗಿದೆ. ಆಹಾರ ಹರಸಿ ನದಿಗಳಲ್ಲಿ ಮೊಸಳೆಗಳ ದಾಳಿಯನ್ನು ಎದುರಿಸಿ ಸಾಗುತ್ತವೆ.
ಹಂಪ್‌ಬ್ಯಾಕ್ ವೇಲ್: ಸಾಗರ ಜೀವಿಗಳಲ್ಲಿ ಅತಿ ಉದ್ದದ ವಲಸೆ ಇವುಗಳದ್ದಾಗಿದೆ. ಧ್ರುವ ಪ್ರದೇಶದ ತಣ್ಣನೆಯ ನೀರಿನಿಂದ ಸಂತಾನೋತ್ಪತ್ತಿಗಾಗಿ ಸಮಭಾಜಕ ವೃತ್ತದ ಬೆಚ್ಚಗಿನ ನೀರಿಗೆ ಇವು ವರ್ಷಕ್ಕೆ ಸುಮಾರು 8,000 ಕಿಮೀ ಈಜುತ್ತವೆ.
ಮೊನಾರ್ಕ್ ಚಿಟ್ಟೆ: ಕೆಲವು ಗ್ರಾಂ ತೂಕದ ಈ ಚಿಟ್ಟೆಗಳು ಕೆನಡಾದಿಂದ ಮೆಕ್ಸಿಕೋಗೆ ಸುಮಾರು 4,000 ಕಿಮೀ ವಲಸೆ ಹೋಗುತ್ತವೆ.
ಆಲಿವ್ ರಿಡ್ಲೆ ಆಮೆಗಳು: ಒಡಿಶಾದ ಗಹಿರ್‌ಮಾತಾ ತೀರಕ್ಕೆ ಲಕ್ಷಾಂತರ ಆಲಿವ್ ರಿಡ್ಲೆ ಆಮೆಗಳು ಹಿಂದೂ ಮಹಾಸಾಗರದಿಂದ ಸಾವಿರಾರು ಮೈಲಿ ಈಜಿ ಏಕಕಾಲಕ್ಕೆ ಮೊಟ್ಟೆಯಿಡುತ್ತವೆ.
ಕಾರಿಬೌ: ಉತ್ತರ ಅಮೆರಿಕದ ಈ ಜಿಂಕೆ ತಳಿಗಳು ಆಹಾರಕ್ಕಾಗಿ ಹಿಮಭರಿತ ಪ್ರದೇಶಗಳಿಂದ ಬೋರಿಯಲ್ ಕಾಡುಗಳ ಕಡೆಗೆ ವರ್ಷಕ್ಕೆ ಸುಮಾರು 3,000 ಕಿಮೀ ಭೂಮಾರ್ಗದಲ್ಲಿ ಸಂಚರಿಸುತ್ತವೆ.
ಸಮಯ
ಪಕ್ಷಿಗಳ ವಲಸೆಯ ಸಮಯ ಅತ್ಯಂತ ಕಟ್ಟುನಿಟ್ಟಾಗಿರುತ್ತದೆ. ಉತ್ತರ ಗೋಳಾರ್ಧದಲ್ಲಿ ಸೆಪ್ಟೆಂಬರ್- ಅಕ್ಟೋಬರ್ ತಿಂಗಳುಗಳಲ್ಲಿ ಇವು ದಕ್ಷಿಣದತ್ತ ಪ್ರಯಾಣ ಬೆಳೆಸುತ್ತವೆ. ಮಾರ್ಚ್- ಏಪ್ರಿಲ್ ವೇಳೆಗೆ ತಮ್ಮ ತಾಯ್ನಾಡಿಗೆ ಮರಳುತ್ತವೆ. ಇವುಗಳ ಆಗಮನದ ಸಮಯ ಹವಾಮಾನದ ವೈಪರೀತ್ಯಗಳ ನಡುವೆಯೂ ಹೆಚ್ಚೂಕಮ್ಮಿ ನಿಖರವಾಗಿರುತ್ತದೆ.
ವಲಸೆ ಹಕ್ಕಿಗಳನ್ನು ಗುರುತಿಸುವುದು ಹೇಗೆ?
ಋತುಮಾನ: ವರ್ಷಪೂರ್ತಿ ಕಾಣದ ಕೆಲವು ಹಕ್ಕಿಗಳು ಕೇವಲ ಅಕ್ಟೋಬರ್‌ನಿಂದ ಮಾರ್ಚ್ ಅವಧಿಯಲ್ಲಿ ಮಾತ್ರ ಕೆರೆ-ಕಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತವೆ.
ಬಣ್ಣ ಬದಲಾವಣೆ: ವಲಸೆ ಹಕ್ಕಿಗಳು ಸಂತಾನೋತ್ಪತ್ತಿಯ ಅವಧಿಯಲ್ಲಿ ಅತ್ಯಂತ ಗಾಢವಾದ, ಆಕರ್ಷಕ ಬಣ್ಣದ ಗರಿಗಳನ್ನು ಪಡೆದುಕೊಳ್ಳುತ್ತವೆ.
ರಿಂಗಿಂಗ್- ಟ್ರ್ಯಾಕಿಂಗ್: ವಿಜ್ಞಾನಿಗಳು ಹಕ್ಕಿಗಳ ಕಾಲಿಗೆ ಸಣ್ಣ ಲೋಹದ ಬಳೆ ಅಥವಾ ಉಪಗ್ರಹ ಟ್ಯಾಗ್‌ಗಳನ್ನು ಅಳವಡಿಸಿರುತ್ತಾರೆ. ಬೈನಾಕುಲರ್ ಮೂಲಕ ಗಮನಿಸಿ ಅವು ಎಲ್ಲಿಂದ ಬಂದಿವೆ ಎಂಬುದನ್ನು ಪತ್ತೆ ಮಾಡಲಾಗುತ್ತದೆ.
ಕರ್ನಾಟಕದ ಪ್ರಮುಖ ವಲಸೆ ಹಕ್ಕಿ ತಾಣಗಳು
ರಂಗನತಿಟ್ಟು ಪಕ್ಷಿಧಾಮ (ಮಂಡ್ಯ): ಕರ್ನಾಟಕದ 'ಪಕ್ಷಿ ಕಾಶಿ' ಎಂದೇ ಪ್ರಸಿದ್ಧವಾಗಿರುವ ರಂಗನತಿಟ್ಟು, ಕಾವೇರಿ ನದೀದ್ವೀಪಗಳಿಂದ ಕೂಡಿದೆ. ಇಲ್ಲಿಗೆ ಸೈಬೀರಿಯಾ, ಮಧ್ಯ ಏಷ್ಯಾ ಮತ್ತು ಹಿಮಾಲಯದ ವಿವಿಧೆಡೆಯಿಂದ ಬಾರ್ ಹೆಡೆಡ್ ಗೂಸ್, ಸ್ಪೂನ್‌ಬಿಲ್ಸ್, ಪೆಂಟೆಡ್ ಸ್ಟಾರ್ಕ್ ಮತ್ತು ಪೆಲಿಕನ್‌ಗಳು ಸಾವಿರಾರು ಸಂಖ್ಯೆಯಲ್ಲಿ ವಲಸೆ ಬಂದು ಸಂತಾನೋತ್ಪತ್ತಿ ಮಾಡುತ್ತವೆ.
ಮಾಗಡಿ ಪಕ್ಷಿಧಾಮ (ಗದಗ): ಗದಗ ಜಿಲ್ಲೆಯಲ್ಲಿದೆ. ಸೆಂಟ್ರಲ್ ಏಷ್ಯಾದಿಂದ ಬರುವ ಜಗತ್ತಿನ ಅತಿ ಎತ್ತರ ಹಾರುವ ಹಕ್ಕಿಯಾದ 'ಬಾರ್ ಹೆಡೆಡ್ ಗೂಸ್' ಬಾತುಕೋಳಿಗಳಿಗೆ ನೆಚ್ಚಿನ ತಾಣ. ಚಳಿಗಾಲದಲ್ಲಿ ಈ ಕೆರೆಯ ತುಂಬಾ ಬೂದು ಮತ್ತು ಬಿಳಿ ಬಣ್ಣದ ಈ ಹಕ್ಕಿಗಳೇ ತುಂಬಿರುತ್ತವೆ.
ಕೊಕ್ಕರೆ ಬೆಳ್ಳೂರು (ಮಂಡ್ಯ): ಇಲ್ಲಿನ ಗ್ರಾಮಸ್ಥರು ತಮ್ಮ ಮನೆಗಳ ಮುಂದಿರುವ ಮರಗಳಲ್ಲಿ ವಲಸೆ ಬಂದು ಗೂಡು ಕಟ್ಟುವ 'ಪೆಂಟೆಡ್ ಸ್ಟಾರ್ಕ್' ಮತ್ತು 'ಸ್ಪಾಟ್-ಬಿಲ್ಡ್ ಪೆಲಿಕನ್' ಹಕ್ಕಿಗಳನ್ನು ತಮ್ಮ ಮನೆಯ ಸದಸ್ಯರಂತೆ ರಕ್ಷಿಸುತ್ತಾರೆ.
ಅತ್ತಿವೇರಿ ಪಕ್ಷಿಧಾಮ (ಉತ್ತರ ಕನ್ನಡ): ಮುಂಡಗೋಡು ತಾಲೂಕಿನಲ್ಲಿನ ಅತ್ತಿವೇರಿ ಜಲಾಶಯದ ಸುತ್ತಮುತ್ತಲಿನ ಕಾಡು ಮತ್ತು ನೀರು ಸುಮಾರು 22ಕ್ಕೂ ಹೆಚ್ಚು ದೇಶಗಳಿಂದ ಬರುವ ವಲಸೆ ಹಕ್ಕಿಗಳಿಗೆ ಆಶ್ರಯ ತಾಣ.
ಗುಡವಿ ಮತ್ತು ಮಂಡಗದ್ದೆ ಪಕ್ಷಿಧಾಮಗಳು (ಶಿವಮೊಗ್ಗ): ಮಲೆನಾಡಿನ ದಟ್ಟ ಹಸಿರಿನ ಮಧ್ಯೆ ಇರುವ ಈ ತಾಣಗಳು ಮಳೆಗಾಲದ ಅಂತ್ಯ ಹಾಗೂ ಚಳಿಗಾಲದ ಆರಂಭದಲ್ಲಿ ವಿವಿಧ ಜಾತಿಯ ಹೆರಾನ್ ಮತ್ತು ಈಗ್ರೆಟ್ ಪಕ್ಷಿಗಳಿಗೆ ನೆಚ್ಚಿನ ತಾಣ.
ವಲಸೆ ಜೀವಿಗಳು ಎದುರಿಸುವ ಸವಾಲುಗಳು
ನೈಸರ್ಗಿಕ ಅಪಾಯಗಳು: ವಿಪರೀತ ಬಿರುಗಾಳಿ, ಮಳೆ, ಕಡುಚಳಿ ಮತ್ತು ಹಸಿವಿನಿಂದಾಗಿ ಶೇಕಡಾ 40ಕ್ಕೂ ಹೆಚ್ಚು ಸಣ್ಣ ಹಕ್ಕಿಗಳು ದಾರಿಯಲ್ಲೇ ಪ್ರಾಣ ಕಳೆದುಕೊಳ್ಳುತ್ತವೆ.
ಮಾನವ ನಿರ್ಮಿತ ಅಪಾಯಗಳು: ಬಹುಮಹಡಿ ಕಟ್ಟಡಗಳ ಗಾಜುಗಳು, ಮೊಬೈಲ್ ಟವರ್‌ಗಳು ಮತ್ತು ರಾತ್ರಿಯ ಕೃತಕ ಬೆಳಕಿನ ಮಾಲಿನ್ಯದಿಂದ ಹಕ್ಕಿಗಳು ದಾರಿ ತಪ್ಪಿ ಕಟ್ಟಡಗಳಿಗೆ ಡಿಕ್ಕಿ ಹೊಡೆಯುತ್ತವೆ.
ಬೇಟೆ ಮತ್ತು ಜಲಮೂಲಗಳ ನಾಶ: ಕಾನೂನುಬಾಹಿರ ಬೇಟೆ ಮತ್ತು ಕೀಟನಾಶಕಗಳಿಂದ ಕಲುಷಿತಗೊಂಡ ಕೆರೆಗಳು ಇವುಗಳ ಜೀವಕ್ಕೆ ಕಂಟಕವಾಗಿವೆ.
ವಲಸೆ ಹಕ್ಕಿಗಳು ನಮಗೆ ಜಗತ್ತಿನ ಏಕತೆಯನ್ನು ಕಲಿಸುತ್ತವೆ. ಅವುಗಳಿಗೆ ದೇಶಗಳ ಗಡಿ ರೇಖೆಗಳು ತಿಳಿಯುವುದಿಲ್ಲ. ಪ್ರಕೃತಿಯ ಈ ಅದ್ಭುತ ಪಯಣ ನಿರಂತರವಾಗಿ ಸಾಗಬೇಕಾದರೆ, ನಮ್ಮ ಜಲಮೂಲಗಳನ್ನು ಮತ್ತು ಪರಿಸರವನ್ನು ರಕ್ಷಿಸುವುದು ಜಾಗತಿಕವಾಗಿ ನಮ್ಮೆಲ್ಲರ ಕರ್ತವ್ಯ.