Saturday, August 22, 2026
Saturday, August 22, 2026

ಗೌಡಗೆರೆಯ ಶಕ್ತಿ ಧಾಮ

ಗೌಡಗೆರೆ ಕ್ಷೇತ್ರದ ಪ್ರಮುಖ ಆಕರ್ಷಣೆ ಎಂದರೆ ಇಲ್ಲಿ ನಿರ್ಮಿಸಲಾಗಿರುವ ಬೃಹತ್ 61 ಅಡಿ ಎತ್ತರದ ಪಂಚಲೋಹದ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹ. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಕಬ್ಬಿಣ್ಣಗಳ ಸಮ್ಮಿಶ್ರಣವಾದ ಪಂಚಲೋಹದಿಂದ ಈ ವಿಗ್ರಹವನ್ನು ನಿರ್ಮಿಸಲಾಗಿದೆ. ಇದು ವಿಶ್ವದಲ್ಲೇ ಅತಿ ಎತ್ತರದ ಪಂಚಲೋಹದ ದೇವಿ ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

60 ಅಡಿ ಎತ್ತರದ ಪಂಚಲೋಹದ ವಿಗ್ರಹ

ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಕ್ಷೇತ್ರವು ಕಷ್ಟದಲ್ಲಿರುವ ಜೀವಗಳಿಗೆ ಭರವಸೆ ನೀಡುವ, ನಂಬಿದ ಭಕ್ತರಿಗೆ ಅಭಯ ನೀಡುವ ಜೀವಂತ ಶಕ್ತಿಪೀಠದ ಜತೆಗೆ ಒಂದು ಸುಂದರ ಪ್ರವಾಸಿ ತಾಣವೂ ಹೌದು. ಬೃಹತ್ ಪಂಚಲೋಹದ ದೇವಿಯ ವಿಗ್ರಹ, ನಿರಂತರ ದಾಸೋಹ ಮತ್ತು ದೈವಿಕ ಶಕ್ತಿಯ ಅನುಭವ ಪಡೆಯಲು ಪ್ರತಿಯೊಬ್ಬ ಭಕ್ತನೂ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಪವಿತ್ರ ಧಾಮ ಇದು.

ಕರ್ನಾಟಕವು ದೇವ-ದೇವಾಲಯಗಳ ನೆಲೆವೀಡು. ರಾಜ್ಯದ ಮೂಲೆ ಮೂಲೆಗಳಲ್ಲೂ ತನ್ನದೇ ಆದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯನ್ನು ಹೊಂದಿರುವ ಅಪರೂಪದ ಪುಣ್ಯಕ್ಷೇತ್ರಗಳಿವೆ. ಇಂಥ ಪವಿತ್ರ ಧಾರ್ಮಿಕ ತಾಣಗಳ ಸಾಲಿನಲ್ಲಿ ಇತ್ತೀಚಿನ ದಶಕಗಳಲ್ಲಿ ದೇಶಾದ್ಯಂತ ಅಪಾರ ಪ್ರಸಿದ್ಧಿ ಪಡೆಯುತ್ತಿರುವ ಪ್ರಮುಖ ಕ್ಷೇತ್ರ ಎಂದರೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿರುವ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರ, ಗೌಡಗೆರೆ.

ಇದನ್ನೂ ಓದಿ: ಮಲೆನಾಡಿನ ಪ್ರವಾಸೋದ್ಯಮ ಅಭಿವೃದ್ಧಿಯ ಹರಿಕಾರ ಬಿ.ವೈ.ರಾಘವೇಂದ್ರ

ವಿಶ್ವದಲ್ಲೇ ಅತಿ ಎತ್ತರದ ಪಂಚಲೋಹದ ಶ್ರೀ ಚಾಮುಂಡೇಶ್ವರಿ ದೇವಿಯ ಮೂರ್ತಿ, ದೈವಿಕ ಶಕ್ತಿಯ ಸಂಕೇತವಾಗಿರುವ ಬಸವಪ್ಪ, ಮತ್ತು ಪ್ರತಿದಿನ ಸಾವಿರಾರು ಭಕ್ತರಿಗೆ ನೆರವೇರುವ ನಿರಂತರ ಅನ್ನದಾಸೋಹಕ್ಕೆ ಈ ಕ್ಷೇತ್ರ ಪ್ರಸಿದ್ಧಿಯಾಗಿದೆ.

ಕ್ಷೇತ್ರದ ಇತಿಹಾಸ ಮತ್ತು ಉದ್ಭವ

ಗೌಡಗೆರೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಇತಿಹಾಸವು ಅತ್ಯಂತ ಕುತೂಹಲಕಾರಿ ಮತ್ತು ಪವಾಡಸದೃಶವಾಗಿದೆ. ರಾಜಮನೆತನಗಳು ಅಥವಾ ಶಾಸನಗಳ ಆಧಾರದ ಮೇಲೆ ನಿರ್ಮಾಣವಾದ ಪುರಾತನ ದೇವಾಲಯಗಳಿಗಿಂತ ಇದು ವಿಭಿನ್ನವಾಗಿದೆ.

Untitled design (26)

ಕೆಲವು ದಶಕಗಳ ಹಿಂದೆ ಗೌಡಗೆರೆ ಗ್ರಾಮದ ಸಣ್ಣ ಸಣ್ಣ ಮಕ್ಕಳು ಜಮೀನಿನಲ್ಲಿ ಆಟವಾಡುತ್ತಿದ್ದಾಗ, ಇಟ್ಟಿಗೆ ಮತ್ತು ಸಸ್ಯಾಭರಣಗಳಿಂದ ಸಣ್ಣ ಗುಡಿಸಲಿನಂಥ ದೇವಾಲಯವನ್ನು ಕಟ್ಟಿ ಆಟವಾಡಲು ತೊಡಗಿದರು. ಅಲ್ಲಿ ಪೂಜಿಸಲು ವಿಗ್ರಹದ ಅಗತ್ಯವಿದ್ದಾಗ, ಬಾಲಕನೊಬ್ಬನಿಗೆ ಸಣ್ಣ ಲೋಹದ ದೇವಿಯ ವಿಗ್ರಹ ಸಿಕ್ಕಿತು. ಆ ವಿಗ್ರಹವನ್ನು ತಂದು ಮಕ್ಕಳು ಪೂಜಿಸಲು ಪ್ರಾರಂಭಿಸಿದರು. ಕಾಲಕ್ರಮೇಣ ಆ ಬಾಲಕನಲ್ಲಿ ದೈವಾಂಶ ಆವೇಶವಾಗತೊಡಗಿತು ಹಾಗೂ ಭವಿಷ್ಯ ನುಡಿಯುವ ಶಕ್ತಿ ಗೋಚರವಾಯಿತು. ಆ ಬಾಲಕನ ಹೆಸರು ಮಲ್ಲೇಶ್‌.

ಗ್ರಾಮಸ್ಥರ ಕಷ್ಟಕಾರ್ಪಣ್ಯಗಳಿಗೆ ಆ ಹುಡುಗನ ಮೂಲಕ ದೇವಿ ಮತ್ತು ಬಸವಪ್ಪ ಪರಿಹಾರ ಸೂಚಿಸಲು ತೊಡಗಿದರು. ಅಲ್ಲಿಗೆ ತರಲಾದ 'ಬಸವ' ಕ್ಷೇತ್ರದಲ್ಲೇ ನೆಲೆನಿಂತು, ಜನರ ಕಷ್ಟಗಳನ್ನು ನಿವಾರಿಸುವ ಶಕ್ತಿಯಾಗಿ ರೂಪುಗೊಂಡಿತು. ಹೀಗೆ ಸಣ್ಣ ಮಟ್ಟದಲ್ಲಿ ಪ್ರಾರಂಭವಾದ ಈ ಶಕ್ತಿಪೀಠವು, ಭಕ್ತರ ಅನುಭವಕ್ಕೆ ಬಂದ ಪವಾಡಗಳಿಂದಾಗಿ ಇಂದು ಬೃಹತ್ ಕ್ಷೇತ್ರವಾಗಿ ಬೆಳೆದು ನಿಂತಿದೆ.

ವಿಶ್ವದ ಅತಿ ಎತ್ತರದ ಮೂರ್ತಿ

ಗೌಡಗೆರೆ ಕ್ಷೇತ್ರದ ಪ್ರಮುಖ ಆಕರ್ಷಣೆ ಎಂದರೆ ಇಲ್ಲಿ ನಿರ್ಮಿಸಲಾಗಿರುವ ಬೃಹತ್ 61 ಅಡಿ ಎತ್ತರದ ಪಂಚಲೋಹದ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹ. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಕಬ್ಬಿಣ್ಣಗಳ ಸಮ್ಮಿಶ್ರಣವಾದ ಪಂಚಲೋಹದಿಂದ ಈ ವಿಗ್ರಹವನ್ನು ನಿರ್ಮಿಸಲಾಗಿದೆ. ಇದು ವಿಶ್ವದಲ್ಲೇ ಅತಿ ಎತ್ತರದ ಪಂಚಲೋಹದ ದೇವಿ ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಷ್ಟಾದಶ (18) ಕರಗಳನ್ನು ಹೊಂದಿರುವ ಈ ದೇವಿಯು ಪ್ರತಿಯೊಂದು ಕೈಯಲ್ಲೂ ವಿವಿಧ ದಿವ್ಯಾಸ್ತ್ರಗಳನ್ನು ಹಿಡಿದು, ದುಷ್ಟಶಕ್ತಿಗಳ ಸಂಹಾರಕಿಯಾಗಿ ಮತ್ತು ಶಿಷ್ಟರ ರಕ್ಷಕಿಯಾಗಿ ಕಂಗೊಳಿಸುತ್ತಾಳೆ. ವಿಶೇಷ ದಿನಗಳಲ್ಲಿ ಮತ್ತು ಜಾತ್ರಾ ಮಹೋತ್ಸವಗಳ ಸಂದರ್ಭದಲ್ಲಿ ಈ ಬೃಹತ್ ಮೂರ್ತಿಗೆ ನೂರಾರು ಲೀಟರ್ ಕ್ಷೀರಾಭಿಷೇಕ ನೆರವೇರಿಸಲಾಗುತ್ತದೆ. ಈ ಕ್ಷೀರಾಭಿಷೇಕದ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಭಕ್ತರಿಗೆ ಅಪಾರ ಧನ್ಯತೆಯ ಅನುಭವ.

Untitled design (24)

ಇನ್ನೊಂದು ಹೆಮ್ಮೆಯ ವಿಷಯ ಎಂದರೆ ವಿಶ್ವದಲ್ಲೇ ಅತಿ ಎತ್ತರದ ಈ ಚಾಮುಂಡೇಶ್ವರಿ ವಿಗ್ರಹ ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಹಾಗೂ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗಳಲ್ಲಿ ಕೂಡ ದಾಖಲಾಗಿದೆ.

ಬಸವಪ್ಪನವರ ಗದ್ದುಗೆ ಮತ್ತು ಮಹಿಮೆ

ಈ ಕ್ಷೇತ್ರಕ್ಕೆ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಕ್ಷೇತ್ರ ಎಂದು ಹೆಸರು ಬರಲು ಇಲ್ಲಿನ 'ಬಸವಪ್ಪ'ನೇ ಕಾರಣ. ಧಾರ್ಮಿಕ ನಂಬಿಕೆಯಂತೆ, ಶಿವನ ವಾಹನವಾದ ನಂದಿಯ ಸ್ವರೂಪವಾಗಿ ಈ ಬಸವಪ್ಪನನ್ನು ಆರಾಧಿಸಲಾಗುತ್ತದೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಮತ್ತು ಭಕ್ತರ ಕಷ್ಟನಿವಾರಣೆಯಲ್ಲಿ ಬಸವಪ್ಪನ ಪಾತ್ರ ಹಿರಿದಾದುದು. ಬಸವಪ್ಪನು ಭಕ್ತರ ತಲೆ ಮೇಲೆ ಕೋಡನ್ನಿಟ್ಟು ಆಶೀರ್ವದಿಸುವ, ಕಷ್ಟಗಳನ್ನು ಪರಿಹರಿಸುವ ದೈವಿಕ ಪವಾಡಗಳು ಇಲ್ಲಿ ನಡೆದಿವೆ. ಪ್ರಸ್ತುತ ಪೂಜಿಸಲ್ಪಡುವ ಬಸವಪ್ಪನವರ ಗದ್ದುಗೆಯು ಕ್ಷೇತ್ರದಲ್ಲಿ ಪ್ರತ್ಯೇಕ ಆಧ್ಯಾತ್ಮಿಕ ತರಂಗಗಳನ್ನು ಸೃಷ್ಟಿಸುತ್ತದೆ. ಶಿವ ಮತ್ತು ಶಕ್ತಿ (ಬಸವ ಮತ್ತು ಚಾಮುಂಡಿ) ಒಂದೇ ಕ್ಷೇತ್ರದಲ್ಲಿ ಸಮಾಗಮಗೊಂಡಿರುವುದು ಗೌಡಗೆರೆಯ ವಿಶೇಷ.

ಆಧ್ಯಾತ್ಮಿಕ ನಂಬಿಕೆಗಳು

ಗೌಡಗೆರೆ ಕ್ಷೇತ್ರವು ಭಕ್ತರ ಪಾಲಿಗೆ ಅಭಯ ನೀಡುವ ದಿವ್ಯ ಸನ್ನಿಧಿಯಾಗಿದೆ. ಸಮಸ್ಯೆಗಳಿಂದ ಬಳಲುತ್ತಿರುವವರು ಇಲ್ಲಿಗೆ ಬಂದು ದೇವಿಯ ಮತ್ತು ಬಸವಪ್ಪನ ಕೃಪೆಗೆ ಪಾತ್ರರಾಗುತ್ತಾರೆ. ಬ್ಲ್ಯಾಕ್ ಮ್ಯಾಜಿಕ್ (ಮಾಟ-ಮಂತ್ರ), ದೃಷ್ಟಿದೋಷ, ಅಥವಾ ನಕಾರಾತ್ಮಕ ಶಕ್ತಿಗಳ ಬಾಧೆಯಿಂದ ಬಳಲುತ್ತಿರುವವರು ಈ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದರೆ ಮುಕ್ತಿ ಸಿಗುತ್ತದೆ ಎಂಬ ಬಲವಾದ ನಂಬಿಕೆ ಇದೆ. ಕುಲದೇವತಾ ಶಾಪ, ಪಿತೃದೋಷ ಹಾಗೂ ಜಾತಕ ದೋಷಗಳ ನಿವಾರಣೆಗೆ ವಿಶೇಷ ಅರ್ಚನೆಗಳು ನಡೆಯುತ್ತವೆ. ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಮದ್ಯಪಾನದಂಥ ದುರಭ್ಯಾಸಗಳಿಗೆ ಒಳಗಾದವರು ಚೇತರಿಸಿಕೊಳ್ಳಲು ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಉದ್ಯೋಗ, ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿರುವವರು ಮತ್ತು ಕೌಟುಂಬಿಕ ಮನಸ್ತಾಪ ಎದುರಿಸುತ್ತಿರುವ ಭಕ್ತರು ಇಲ್ಲಿಗೆ ಬಂದು ದೇವಿಯ ಮಡಿಲು ಸೇರುತ್ತಾರೆ. ಹಣಕಾಸಿನ ವಿಷಯದಲ್ಲಿ ನಷ್ಟ ಅನುಭವಿಸುತ್ತಿದ್ದರೆ ಇಲ್ಲಿರುವ ವಿಗ್ರಹದ ಮೇಲೆ ನಾಣ್ಯ ಅಂಟಿಸಿ ಪೂರ್ಣ ಮನಸಿನಿಂದ ಪ್ರಾರ್ಥನೆ ಮಾಡಿಕೊಂಡರೆ ಆರ್ಥಿಕವಾಗಿ ಲಾಭ ಕಾಣಬಹುದು ಎನ್ನುವುದು ಇಲ್ಲಿನ ಜನರ ನಂಬಿಕೆ. ಯಾವುದೇ ಕಾಯಿಲೆ ಇದ್ದರೂ ಇಲ್ಲಿನ ಬಸವಪ್ಪನ ತೀರ್ಥಸ್ನಾನ ಮಾಡಿದರೆ ನಿವಾರಣೆ ಆಗುತ್ತದೆ ಎನ್ನಲಾಗಿದೆ. ಹಾಗೆಯೇ ಶ್ರದ್ಧೆ ಹಾಗೂ ಭಕ್ತಿಯಿಂದ ಸತತವಾಗಿ ಏಳು ವಾರ ಕಾಯಿ ಕಟ್ಟಿ ಪ್ರಾರ್ಥನೆ ಮಾಡಿದರೆ ಮಾಡಿಕೊಂಡ ಹರಕೆ ಈಡೇರುತ್ತದೆ ಎನ್ನುವುದು ಇಲ್ಲಿನವರ ಬಲವಾದ ನಂಬಿಕೆ.

Untitled design (25)

ದಿನನಿತ್ಯದ ಪೂಜಾ ಕೈಂಕರ್ಯಗಳು

ದೇವಾಲಯವು ಪ್ರತಿದಿನ ಭಕ್ತರ ದರ್ಶನಕ್ಕಾಗಿ ತೆರೆದಿರುತ್ತದೆ. ದಿನನಿತ್ಯದ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನಡೆಯುತ್ತವೆ. ಬೆಳಗ್ಗೆ 4:00 ರಿಂದ ರಾತ್ರಿ 8:00ಗಂಟೆಯವರೆಗೆ ನಿರಂತರ ದರ್ಶನಕ್ಕೆ ಅವಕಾಶವಿರುತ್ತದೆ. ಬೆಳಗಿನ ಜಾವ ದೇವಿಗೆ ಜಲ ಹಾಗೂ ಕ್ಷೀರಾಭಿಷೇಕ ನೆರವೇರಿಸಿ, ಮಹಾಮಂಗಳಾರತಿ ಮಾಡಲಾಗುತ್ತದೆ. ಮಂಗಳವಾರ, ಶುಕ್ರವಾರ, ಭಾನುವಾರ ಹಾಗೂ ಅಮಾವಾಸ್ಯೆ, ಹುಣ್ಣಿಮೆಯ ದಿನಗಳಲ್ಲಿ ಕ್ಷೇತ್ರದಲ್ಲಿ ವಿಶೇಷ ಪೂಜೆಗಳು ಮತ್ತು ಹೋಮ-ಹವನಗಳು ಜರುಗುತ್ತವೆ. ಈ ದಿನಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ನಿರಂತರ ಅನ್ನದಾಸೋಹ

'ಅನ್ನದಾನವೇ ಮಹಾದಾನ' ಎಂಬ ತತ್ತ್ವದಂತೆ ಗೌಡಗೆರೆ ಕ್ಷೇತ್ರದಲ್ಲಿ ನಿತ್ಯ ನಿರಂತರ ಅನ್ನದಾಸೋಹ ನಡೆಯುತ್ತದೆ. ಧರ್ಮ, ಜಾತಿ, ಭೇದಭಾವವಿಲ್ಲದೆ ಕ್ಷೇತ್ರಕ್ಕೆ ಆಗಮಿಸುವ ಪ್ರತಿಯೊಬ್ಬ ಭಕ್ತಾದಿಗೂ ಮಧ್ಯಾಹ್ನ ಮತ್ತು ರಾತ್ರಿ ಬಿಸಿಬಿಸಿ ಶುಚಿ-ರುಚಿಯಾದ ಪ್ರಸಾದವನ್ನು ಉಣಬಡಿಸಲಾಗುತ್ತದೆ. ಕ್ಷೇತ್ರದಲ್ಲಿ ನಡೆಯುವ ಅನ್ನದಾನ ಸೇವೆಯು ಭಕ್ತರ ದೇಣಿಗೆ ಮತ್ತು ಟ್ರಸ್ಟ್‌ನ ಮುಖಾಂತರ ಅತ್ಯಂತ ಶಿಸ್ತುಬದ್ಧವಾಗಿ ನಿರ್ವಹಿಸಲ್ಪಡುತ್ತದೆ.

ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಉಚಿತ ಆರೋಗ್ಯ ಶಿಬಿರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಸಾಮಾಜಿಕ ಕಾರ್ಯಗಳನ್ನು ಕ್ಷೇತ್ರವು ಹಮ್ಮಿಕೊಳ್ಳುತ್ತಾ ಬಂದಿದೆ.

ಪ್ರಮುಖ ಹಬ್ಬಗಳು

  1. ಆಷಾಢ ಶುಕ್ರವಾರಗಳು

ಆಷಾಢ ಮಾಸದಲ್ಲಿ ದೇವಿಗೆ ವಿಶೇಷ ಪೂಜೆಗಳು ನೆರವೇರುತ್ತವೆ. ಪ್ರತಿ ಆಷಾಢ ಶುಕ್ರವಾರ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಾರೆ.

  1. ನವರಾತ್ರಿ ಮತ್ತು ವಿಜಯದಶಮಿ ದಸರಾ/ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಿಯನ್ನು ನವದುರ್ಗೆಯರ ವಿವಿಧ ಅವತಾರಗಳಲ್ಲಿ ಅಲಂಕರಿಸಲಾಗುತ್ತದೆ. ಈ ಸಂದರ್ಭದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಗಳು ವಿಜೃಂಭಣೆಯಿಂದ ನಡೆಯುತ್ತವೆ.
  2. ಚಾಮುಂಡೇಶ್ವರಿ ವರ್ಧಂತಿ

ದೇವಿಯ ಮೂಲ ದಿನವಾದ ವರ್ಧಂತಿಯಂದು ಕ್ಷೇತ್ರದಲ್ಲಿ ವಿಶೇಷ ಮೂಲಮಂತ್ರ ಹೋಮಗಳು ಮತ್ತು ರಥೋತ್ಸವಗಳು ಜರುಗುತ್ತವೆ.

  1. ಬಸವಪ್ಪನವರ ಗಣಾರಾಧನೆ ವರ್ಷಕ್ಕೊಮ್ಮೆ ಕ್ಷೇತ್ರದಲ್ಲಿ ಬಸವಪ್ಪನವರ ನೆನಪಿನಲ್ಲಿ ಬೃಹತ್ ಗಣಾರಾಧನೆ ಮತ್ತು ಮಹಾಪೂಜೆಯನ್ನು ಏರ್ಪಡಿಸಲಾಗುತ್ತದೆ.

ವಾಸ್ತುಶಿಲ್ಪ ಮತ್ತು ಕ್ಷೇತ್ರದ ಸೌಂದರ್ಯ

ದೇವಾಲಯದ ಆವರಣವು ಅತ್ಯಂತ ವಿಶಾಲವಾಗಿದ್ದು, ನವೀಕೃತ ವಾಸ್ತುಶಿಲ್ಪದೊಂದಿಗೆ ಗ್ರಾಮೀಣ ವಾತಾವರಣದ ಶಾಂತತೆಯನ್ನು ಕಾಯ್ದುಕೊಂಡಿದೆ. ದೇವಾಲಯದ ಪ್ರವೇಶದ್ವಾರ, ಮತ್ತು ಪ್ರದಕ್ಷಿಣೆ ಪಥಗಳು ಸುಂದರವಾದ ಶಿಲ್ಪಕಲೆಗಳಿಂದ ಕೂಡಿವೆ. 61 ಅಡಿ ಎತ್ತರದ ಚಾಮುಂಡೇಶ್ವರಿಯ ಬೃಹತ್ ವಿಗ್ರಹವು ದೂರದಿಂದಲೇ ಕಾಣಿಸಲಿದ್ದು, ಭಕ್ತರಲ್ಲಿ ಭಕ್ತಿಭಾವ ಮತ್ತು ರೋಮಾಂಚನವನ್ನು ಮೂಡಿಸುತ್ತದೆ. ವಿಶಾಲವಾದ ಪ್ರಾಂಗಣ, ಸ್ವಚ್ಛ ವಾತಾವರಣ ಮತ್ತು ಸುತ್ತಲೂ ಹಸಿರಿನಿಂದ ಕೂಡಿದ ಸೌಂದರ್ಯವು ಆಧ್ಯಾತ್ಮಿಕ ಚಿಂತನೆಗೆ ಸೂಕ್ತವಾದ ಸ್ಥಳ ಎನ್ನಬಹುದು.

ಭಕ್ತಾದಿಗಳಿಗೆ ಮುಖ್ಯ ಸೂಚನೆಗಳು

ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಲು ಸಾಂಪ್ರದಾಯಿಕ ಮತ್ತು ಸಭ್ಯ ಉಡುಪುಗಳನ್ನು ಧರಿಸಿ ಹೋಗುವುದು ಸೂಕ್ತ. ದೇವಾಲಯದ ಗರ್ಭಗುಡಿಯ ಒಳಗಡೆ ಮತ್ತು ಪೂಜಾ ಸಮಯದಲ್ಲಿ ಕ್ಯಾಮೆರಾ ಅಥವಾ ಮೊಬೈಲ್ ಬಳಕೆಗೆ ನಿರ್ಬಂಧವಿದ್ದು, ನಿಯಮಗಳನ್ನು ಪಾಲಿಸಬೇಕಾಗಿದೆ. ವಾರಾಂತ್ಯ ಮತ್ತು ಹಬ್ಬದ ದಿನಗಳಲ್ಲಿ ಹೆಚ್ಚಿನ ಜನಸಂದಣಿ ಇರುವುದರಿಂದ ದರ್ಶನಕ್ಕೆ ಸೂಕ್ತ ಸಮಯಾವಕಾಶದೊಂದಿಗೆ ತೆರಳುವುದು ಒಳ್ಳೆಯದು.

ವಿಐಪಿ ಕಲ್ಚರ್ ಇಲ್ಲ

ವಿಶೇಷವೆಂದರೆ ಇಲ್ಲಿ ವಿಐಪಿ ದರ್ಶನದ ವ್ಯವಸ್ಥೆ ಇಲ್ಲ. ತಾಯಿಯ ಮುಂದೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ಎಲ್ಲರೂ ಸಾಲಾಗಿ ಬಂದು ದರ್ಶನ ಪಡೆಯಬೇಕು.

ಗಮನ ಸೆಳೆಯುವ ಮ್ಯೂಸಿಯಂ

ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ಭಾರತದ ಭವ್ಯ ಪರಂಪರೆಯನ್ನು ಪ್ರತಿಬಿಂಬಿಸುವ ಮ್ಯೂಸಿಯಂ. ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಮಾಡಿದ ಅನೇಕ ಪೂರ್ವಸೂರಿಗಳ ಪ್ರತಿಕೃತಿ ಇಲ್ಲಿ ಕಾಣಬಹುದು. ನಮ್ಮ ದೇಶದ ಪ್ರಮುಖ ನದಿಗಳು, ಕುಲಕಸುಬುಗಳು ಹೀಗೆ ಅನೇಕ ಗಮನ ಸೆಳೆಯುವ ವಿಷಯಗಳು ಇಲ್ಲಿ ನೋಡಬಹುದು. ಇದಕ್ಕೆ 'ನಮ್ಮ ಪರಂಪರೆ' ಎಂದೇ ಹೆಸರಿಡಲಾಗಿದೆ.

ತಲುಪುವ ಮಾರ್ಗ

ಬೆಂಗಳೂರಿನಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಯ ಮೂಲಕ ಸುಲಭವಾಗಿ ತಲುಪಬಹುದು. ಚನ್ನಪಟ್ಟಣ ಅಥವಾ ಮದ್ದೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಗಳಿಂದ ಗೌಡಗೆರೆಗೆ ನಿರಂತರವಾಗಿ ಖಾಸಗಿ ಮತ್ತು ಸರಕಾರಿ ಬಸ್ಸುಗಳು, ಆಟೋ ಹಾಗೂ ಟ್ಯಾಕ್ಸಿ ಸೌಲಭ್ಯಗಳು ಲಭ್ಯವಿವೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ