Tuesday, October 6, 2026
Tuesday, October 6, 2026

ಮನಸು ಹಗುರಾಗಲು ಆಗಾಗ ಪ್ರವಾಸ ಮಾಡಬೇಕು

ನಾನು ಡೆಸ್ಟಿನೇಷನ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ದಾರಿಯೇ ಮುಖ್ಯ. ಎಲ್ಲೇ ಹೋದರೂ ಏನೋ ಒಂದು ಕಲಿಯುವುದು ಇರುತ್ತದೆ. ಒಟ್ಟಿನಲ್ಲಿ ಓಡಾಡುತ್ತಿರಬೇಕಷ್ಟೆ. ಕೆಲವೊಮ್ಮೆ ಫ್ರೆಂಡ್ಸ್‌ ಜತೆಗೆ ಕೆಲವೊಮ್ಮೆ ಸೋಲೋ ಟ್ರಿಪ್‌ ಇಷ್ಟ ಆಗುತ್ತದೆ. ಅದರಲ್ಲೂ ಯಾವುದೇ ಪ್ಲ್ಯಾನ್‌ ಇಲ್ಲದೇ ಹೋಗುವುದು ಮಜ ಕೊಡುತ್ತದೆ ಎನ್ನುತ್ತಾರೆ ನಟ ಪ್ರಮೋದ್‌ ಪಂಜು.

ಸದ್ಯ ಲೆನಿನ್‌ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ಪ್ರಮೋದ್‌ ʼಹಲ್ಕಾ ಡಾನ್‌ʼ ಚಿತ್ರದಲ್ಲೂ ಬ್ಯುಸಿಯಾಗಿದ್ದಾರೆ. ಇನ್ನು 25 ದಿನಗಳ ಶೂಟ್‌ ಮುಗಿದರೆ ಸಿನಿಮಾ ಪೂರ್ತಿಯಾಗುತ್ತದೆ. ಹಾಗೆಯೇ ಇನ್ನೊಂದು ಸಿನಿಮಾ ʼಪ್ರಿಮಿಯರ್‌ ಪದ್ಮಿನಿʼ ಸಿನಿಮಾ ಖ್ಯಾತಿಯ ರಮೇಶ್‌ ಇಂದಿರಾ ಹಾಗೂ ಶ್ರುತಿ ಅವರ ಜತೆಗೆ ಮಾಡಲು ರೆಡಿ ಆಗಿದ್ದಾರೆ. ಹಲವು ಬಗೆಯ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಖ್ಯಾತಿ ಪಡೆದಿರುವ ನಟ ಪ್ರಮೋದ್‌ ಪಂಜು ಇನ್ನೂ ಅನೇಕ ಚಿತ್ರಗಳನ್ನು ಲೈನಪ್‌ನಲ್ಲಿ ಇಟ್ಟುಕೊಂಡಿದ್ದಾರೆ. ಇವೆಲ್ಲದರ ನಡುವೆ ಅವರ ಪ್ರವಾಸ ಜೀವನದ ಬಗ್ಗೆ ಪ್ರವಾಸಿ ಪ್ರಪಂಚದ ಜತೆಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ದೋಣಿ ಸಾಗಲಿ, ಮುಂದೆ ಹೋಗಲಿ ದೂರ ತೀರವ ಸೇರಲಿ…

ನಿಮ್ಮ ಜೀವನಕ್ಕೆ ಟ್ರಾವೆಲ್ ಎಷ್ಟು ಪ್ರಭಾವ ಬೀರಿದೆ?

ಟ್ರಾವೆಲ್‌ ಎನ್ನುವುದು ನನಗೆ ದೊಡ್ಡ ಪ್ರಭಾವ ಬೀರಿದೆ. ಪ್ರತಿ ಬಾರಿ ಟ್ರಾವೆಲ್‌ ಮಾಡಿಗಾಲೂ ಏನೋ ಒಂಉದ ಹೊಸತನ ಸಿಗುತ್ತದೆ. ಅಷ್ಟೇ ಯಾಕೆ, ದಾರಿಯಲ್ಲಿ ಕೆಲವೊಮ್ಮೆ ಯಾರೋ ಹೊಸ ವ್ಯಕ್ತಿ ಸಿಗುತ್ತಾರೆ, ಹೊಸ ಅನುಭವ ಸಿಗುತ್ತದೆ. ಯಾರ ಬಳಿಯೋ ಮಾತನಾಡಿದಾಗ ಅವರ ಹಾವಭಾವ, ಮಾತಿನ ಶೈಲಿ ಎಲ್ಲವೂ ಸುಪ್ತ ಮನಸಿನಲ್ಲಿ ಉಳಿದುಕೊಂಡಿರುತ್ತದೆ. ಅದು ಮುಂದೆ ಸಿನಿಮಾದಲ್ಲಿ ಯಾವುದಾದರೂ ಪಾತ್ರ ಮಾಡುವಾಗ ಖಂಡಿತ ಸಹಾಯ ಆಗುತ್ತದೆ. ನನಗೆ ಅನೇಕ ಬಾರಿ ಹಾಗೆ ಆಗಿದೆ ಕೂಡ. ಬರವಣಿಗೆಯ ಹುಚ್ಚಿದ್ದರೂ ಪ್ರಯಾಣ ಸಹಾಯ ಆಗುತ್ತದೆ. ಎಲ್ಲೋ ಏನೋ ಒಂದು ವಿಷಯ ಹೊಳೆಯುತ್ತದೆ. ಏನೋ ಒಂದು ಸನ್ನಿವೇಶ ಹೊಳೆಯುತ್ತದೆ. ಅದಕ್ಕೆ ಸಂಬಂಧಪಟ್ಟ ಹಾಗೆ ಒಂದು ಮಾತು ಹೊಳೆಯುತ್ತದೆ, ಒಂದು ಭಾವ ಹುಟ್ಟುತ್ತದೆ, ಆ ರೀತಿ ನನಗೆ ಅನೇಕ ಬಾರಿ ಆಗಿದೆ. ಅದೆಲ್ಲದಕ್ಕಿಂತ ಹೆಚ್ಚಾಗಿ ಟ್ರಾವೆಲ್‌ ಎಂದರೆ ಒಂದು ಸಮಾಧಾನ. ಕಾರಲ್ಲಿ ಹಾಡು ಹಾಕಿಕೊಂಡು, ಒಬ್ಬರೇ ಅಥವಾ ಫ್ರೆಂಡ್ಸ್ ಜತೆ ಹೋಗುವುದು ತುಂಬಾ ಖುಷಿ ಕೊಡುತ್ತದೆ. ಮೈಂಡ್‌ ಫ್ರೆಶ್‌ ಆಗುತ್ತದೆ.

ಚಿಕ್ಕ ವಯಸ್ಸಿನಿಂದಲೂ ಟ್ರಾವೆಲ್ ಮಾಡುವ ಅಭ್ಯಾಸ ಇತ್ತಾ?

ನಾನು ಹುಟ್ಟಿ ಬೆಳೆದಿದ್ದೆಲ್ಲ ಹಳ್ಳಿಯಲ್ಲಿ. ಹೀಗಾಗಿ ತುಂಬಾ ದೂರ ಅಂತೆಲ್ಲ ಎಲ್ಲೂ ಹೋಗುತ್ತಿರಲಿಲ್ಲ. ನನ್ನ ಗೆಳೆಯರ ಬಳಗದ ಜತೆಗೆ ನಮ್ಮ ಊರು, ಕೆರೆ, ಕಟ್ಟೆ ಸುತ್ತಾಟವೇ ಹೆಚ್ಚು ಖುಷಿ ಕೊಡುತ್ತಿತ್ತು ಸಿಕ್ಕಾಪಟ್ಟೆ. ಆದರೆ, ಮನೆಯವರ ಜತೆಗೆ ಆಗಾಗ ಧರ್ಮಸ್ಥಳ, ಸುಬ್ರಹ್ಮಣ್ಯ, ಮಾದೇಶ್ವರ ಬೆಟ್ಟ ಹೋಗಿ ಬರುತ್ತಿದ್ದೆವು. ಇಲ್ಲಿ ಬೆಂಗಳೂರಿಗೆ ಬಂದಮೇಲೆ, ಕಾಲೇಜ್ ಸೇರಿದ ಮೇಲೆ, ಇಂಡಸ್ಟ್ರಿಗೆ ಕಾಲಿಟ್ಟಮೇಲೆ ಸುತ್ತಾಟ ಜಾಸ್ತಿಯಾಗಿದೆ.

ಈಗಲೂ ನಾನು ಯಾವ ಕ್ಷಣಕ್ಕಾದರೂ ಹೋಗಬಹುದು ಅಂತನಿಸುವ, ಖುಷಿ ಕೊಟ್ಟಿರುವ ಜಾಗ ಯಾವುದು?

-ಮಂಗಳೂರು ನನಗೆ ತುಂಬಾ ಖುಷಿ ಕೊಟ್ಟ ಜಾಗ. ನಮ್ಮ ಊರು ಬಿಟ್ಟರೆ ನನಗೆ ಮಂಗಳೂರು ಹೆಚ್ಚು ಇಷ್ಟ. ಶ್ರುತಿ ಮೇಡಂ, ರಮೇಶ್ ಇಂದಿರಾ ಸರ್ ಪರಿಚಯ ಆದಮೇಲೆ ಅವರ ಜತೆಗೆ ನನ್ನ ಟ್ರಾವೆಲ್ ಕೂಡ ಜಾಸ್ತಿಯಾಗಿದೆ. ಅವರು ಪ್ರವಾಸ ಪ್ರಿಯರು. ಅವರು ನನಗೆ ಮಂಗಳೂರಿನ ರುಚಿ ತೋರಿಸಿ, ಅಲ್ಲಿ ಫುಡ್, ಅಲ್ಲಿ ವಾತಾವರಣ..ಎಲ್ಲದರ ಮೇಲೆ ಪ್ರೀತಿ ಹುಟ್ಟುವ ಹಾಗೆ ಮಾಡಿದ್ದಾರೆ. ಬೇಸಗೆ ಒಂದು ಬಿಟ್ಟು ಬೇರೆ ಸಮಯದಲ್ಲಿ ಮಂಗಳೂರು ನನಗೆ ಅತ್ಯಂತ ನೆಮ್ಮದಿ ನೀಡುವ ಜಾಗ. ಅಲ್ಲಿನ ಕಡಲ ತೀರ, ಸಮುದ್ರದ ಅಲೆಗಳು ಎಲ್ಲವೂ ಇಷ್ಟ. ಹೀಗಾಗಿ ಒಮ್ಮೊಮ್ಮೆ ಸಡನ್‌ ಆಗಿ ಹೋಗಿಬಿಡುತ್ತೇವೆ.

Untitled design (84)

ಯಾವ ರೀತಿಯ ಜಾಗಗಳು ಹೆಚ್ಚು ಇಷ್ಟವಾಗುತ್ತವೆ?

ಮಾದೇಶ್ವರ ಬೆಟ್ಟ, ಮುತ್ತತ್ತಿ, ಕಾವೇರಿ ನದಿ ತೀರ ಇವೆಲ್ಲ ಹೆಚ್ಚು ಇಷ್ಟವಾಗುತ್ತವೆ. ಅದು ಬಿಟ್ಟರೆ ಕಾಡು ನನಗೆ ಹೆಚ್ಚು ಇಷ್ಟ. ಪ್ರಾಣಿ, ಪಕ್ಷಿ, ನದಿ ಇವೆಲ್ಲಾ ವಿಶೇಷವಾಗಿ ಸೆಳೆಯುತ್ತವೆ. ಕಾಡು ಎನ್ನುವುದು ಬೇರೆಯದೇ ಪ್ರಪಂಚ. ಕಾಡಿಗೆ ಹೋದಾಗ ನಾವು ನಿಜವಾಗಲೂ ಅಲ್ಲಿ ಇರಬೇಕಿತ್ತು ಅಂತನಿಸುತ್ತದೆ. ಅಲ್ಲಿನ ಕಾಡು ಜನರನ್ನು ನೋಡಿದಾಗ ಅವರ ಸರಳತೆ, ದುಡ್ಡು, ಕೆಲಸ ತಲೆಬಿಸಿ ಇಲ್ಲದಿರುವುದನ್ನು ನೋಡಿದಾಗ ನಾವು ಇಲ್ಲೇ ಇರಬಹುದಲ್ಲಾ ಅಂತನಿಸುತ್ತದೆ. ಆಗಾಗ ಕಾಡಿಗೆ ಹೋಗಿಬರುವುದು ಒಂದು ರೀತಿ ರಿಫ್ರೆಶ್‌ಮೆಂಟ್‌ ಫೀಲ್‌ ಕೊಡುತ್ತದೆ.

ನಿಮ್ಮ ಡ್ರೀಮ್ ಡೆಸ್ಟಿನೇಷನ್ ಯಾವುದಾದರೂ ಇದ್ಯಾ?

-ಅದೇನೋ ಚಿಕ್ಕಂದಿನಿಂದ ಯಾವಾಗ ಯಾರೇ ಕೇಳಿದರೂ ನಾನು ಸ್ವಿಟ್ಜರ್ಲ್ಯಾಂಡ್‌ಗೆ ಹೋಗ್ತೀನಿ ಅಂತಿದ್ದೆ. ಈಗಲೂ ಅದೊಂದು ಆಸೆ ಇದೆ. ಅಲ್ಲಿನ ವಿಡಿಯೋಸ್, ಫೊಟೋಸ್ ನೋಡಿದಾಗೆಲ್ಲಾ ಅಲ್ಲಿಗೆ ಹೋಗಬೇಕು ಅನಿಸುತ್ತದೆ. ಅಲ್ಲಿ ಜನರು ಕಡಿಮೆ ಅಂತಲೋ, ಅಲ್ಲಿಯ ಗಾಳಿ ಚೆನ್ನಾಗಿದೆ ಅಂತ ಹೇಳಿದ್ದು ಕೇಳಿದ್ದಕ್ಕೋ, ಅಲ್ಲಿ ಮನೆಗಳ ಅಕ್ಕಪಕ್ಕವೇ ಹಸಿರು ಇದೆ ಎಂಬ ಕಾರಣಕ್ಕೋ ನನಗೆ ಆ ಜಾಗ ಎಂದರೆ ವಿಶೇಷ ಖುಷಿ. ಈಗ ಕಾಶ್ಮೀರ, ಮೇಘಾಲಯ, ಭೂತಾನ್‌, ಮಣಿಪುರ ಎಲ್ಲ ಹೋಗಬೇಕು ಎಂಬ ಆಸೆಯಿದೆ. ಅಲ್ಲಿನ ಸಂಸ್ಕೃತಿಯನ್ನು ನೋಡಬೇಕು ಎಂಬ ಅಸೆಯಿದೆ.

ಯಾವ ರೀತಿಯ ಆಹಾರ ಇಷ್ಟಪಡುತ್ತೀರಿ?

ಎಲ್ಲೇ ಹೋದರೂ ಆದಷ್ಟು ಲೋಕಲ್‌ ಫುಡ್‌ ತಿನ್ನುತ್ತೇನೆ. ಒಂಥರಾ ಸ್ಟ್ರೀಟ್ ಫುಡ್ಡು ಹೆಚ್ಚು ಇಷ್ಟ. ಯಾಕೆಂದರೆ ನಾವು ವಾಪಸ್ ಬಂದಮೇಲೆ ಡಯಟ್ ಶುರು ಮಾಡೋದು ಇದ್ದೇ ಇರುತ್ತದೆ. ಹೋದ ಕಡೆ ಅಲ್ಲಿ ಏನಿರುತ್ತದೆಯೋ ಅದನ್ನೇ ತಿನ್ನಬೇಕು. ಕೊನೇ ಪಕ್ಷ ಚೆನ್ನಾಗಿದೆ ಅಥವಾ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಲಾದರೂ ಲೋಕಲ್‌ ಫುಡ್‌ ತಿನ್ನಬೇಕು.

ನಿಮ್ಮ ಇಷ್ಟದ ಟ್ರಾವೆಲ್ ಸಿನಿಮಾಗಳು ಯಾವುದು?

ನಾನೇ ನಟಿಸಿದ ರತ್ನನ್‌ ಪ್ರಪಂಚ, ಭುವನಂ ಗಗನಂ, ಪ್ರೀಮಿಯರ್‌ ಪದ್ಮಿನಿ ಸಿನಿಮಾಗಳಲ್ಲೂ ಟ್ರಾವೆಲ್‌ ಇದೆ. ಹಾಗಾಗಿ ಅವು ಇಷ್ಟ. ಅದರ ಜತೆಗೆ ಇಂಗ್ಲಿಷ್‌ನ ʼಇಂಟೂ ದ ವೈಲ್ಡ್‌ʼ ಬಹಳ ಇಷ್ಟ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್