ಪ್ರಯಾಸ ನೀಡಿದ ಜಪಾನ್ ಪ್ರವಾಸ!
ವಿದೇಶಿ ಪ್ರವಾಸದ ವೇಳೆ ಬಜೆಟ್ ಪ್ಲ್ಯಾನ್ ಮಾಡಿಕೊಳ್ಳುವ ವಿಧಾನವೇ ಬೇರೆ..ಅದಕ್ಕಾಗಿ ನಮ್ಮ ಆದಾಯದ ಒಂದು ಮೊತ್ತವನ್ನು ನಿಯಮಿತವಾಗಿ ತೆಗೆದಿಟ್ಟುಕೊಳ್ಳಬೇಕಾಗುತ್ತದೆ. ನೀವಂದುಕೊಂಡಂತೆಯೇ ಟೂರ್ ಇರಬೇಕು ಎಂದುಕೊಳ್ಳುವುದಕ್ಕಿಂತ ಡೆಸ್ಟಿನೇಷನ್, ಫುಡ್ ಎಲ್ಲದರಲ್ಲೂ ಬಜೆಟ್ ಫ್ರೆಂಡ್ಲೀ ದೃಷ್ಟಿಕೋನದಿಂದಲೇ ನೋಡಬೇಕಾಗುತ್ತದೆ. ಬಜೆಟ್ ಮೀರಿದರೆ ಆ ತಾಣದ ಬದಲು ಬೇರೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ನಟಿ ದೀಪಾ ಕಟ್ಟೆ.
ದೀಪಾ ಕಟ್ಟೆ…ವೃತ್ತಿಯಲ್ಲಿ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ನಟಿಯಾಗಿರುವ ಇವರು ಜೀ ಕನ್ನಡ ವಾಹಿನಿಯಲ್ಲಿ ಪ್ರವಾಸವಾಗುತ್ತಿದ್ದ ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ನಟಿ ಸುಧಾರಾಣಿಯವರ ಮಗಳು ಸಂಧ್ಯಾ ಪಾತ್ರದ ಮೂಲಕ ಮನೆಮಾತಾದವರು. ಸದ್ಯ ಆದಿಲಕ್ಷ್ಮೀ ಪುರಾಣದಲ್ಲೂ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ, ಪ್ರವಾಸಿ ಪ್ರಿಯೆ. ವಿವಾಹಿತರಾದಮೇಲೆ ಪತಿಯ ಜತೆಗೆ ಪ್ರವಾಸಿ ಜೀವನವನ್ನು ಪ್ರಾರಂಭಿಸಿದ ಇವರು ಬಿಡುವು ಸಿಕ್ಕಾಗಲೆಲ್ಲ ಪ್ರವಾಸಕ್ಕಾಗಿ ಬ್ಯಾಗ್ ಪ್ಯಾಕ್ ಮಾಡಿಬಿಡುತ್ತಾರೆ. ದೀಪಾ ಕಟ್ಟೆಯವರ ಸಿಂಪಲ್ ಟ್ರಾವೆಲ್ ಲೈಪ್ ಇಲ್ಲಿದೆ..
ಇದನ್ನೂ ಓದಿ: ಪ್ರೈವೆಸಿ ಬಯಸುವವರಿಗೆ ಪ್ರವಾಸವಲ್ಲ! - ಸಂಜನಾ ಆನಂದ್
ಬಿಡುವು ಮಾಡಿಕೊಂಡು ಪ್ರವಾಸ..
ನಾನು ಐಟಿ ಉದ್ಯೋಗಿ, ಜತೆಗೆ ಸೀರಿಯಲ್ ಇಂಡಸ್ಟ್ರಿಯಲ್ಲಿಯೂ ತೊಡಗಿಸಿಕೊಂಡಿರುವುದರಿಂದ ಬೇಕೆನಿಸಿದಾಗೆಲ್ಲಾ ಟ್ರಾವೆಲ್ ಮಾಡುವುದು ಕಷ್ಟವಾಗಿದೆ. ಆದರೆ ಮದುವೆಯಾಗಿ ಮೂರೂವರೆ ವರ್ಷಗಳು ಕಳೆದಿವೆ. ವರ್ಷಕ್ಕೊಂದು ವಿದೇಶಿ ಪ್ರವಾಸ ಹೋಗಬೇಕೆಂಬ ಯೋಜನೆ ಮೊದಲ ವರ್ಷದಿಂದಲೇ ಪ್ರಾರಂಭವಾಗಿದೆ. ಜತೆಗೆ ಬಿಡುವು ಮಾಡಿಕೊಂಡು ಪತಿ, ಸ್ನೇಹಿತರು, ಕುಟುಂಬದವರೊಂದಿಗೆ ಸಣ್ಣ ಪುಟ್ಟ ಪ್ರವಾಸಗಳನ್ನು ಮಾಡುತ್ತಿರುತ್ತೇನೆ.

ದುಬೈಗೆ ಬಜೆಟ್ ಫ್ರೆಂಡ್ಲಿ ಪ್ರವಾಸ..
ಮದುವೆಯಾದ ನಂತರ ಪತಿಯ ಜತೆಗೆ ದುಬೈಗೆ ನನ್ನ ಮೊದಲ ವಿದೇಶಿ ಪ್ರವಾಸ ಮಾಡಿದ್ದೆ. ಆದರೆ ವಿಮಾನವೇರಿದ್ದು ಅದು ಎರಡನೆಯ ಬಾರಿ. ಯಾವುದೇ ಟ್ರಾವೆಲ್ ಏಜೆನ್ಸಿಗಳನ್ನು ಅವಲಂಭಿಸದೆಯೇ ನಾವೇ ಟ್ರಾವೆಲ್ ಪ್ಲ್ಯಾನ್ ಮಾಡಿಕೊಂಡಿದ್ದೆವು. ಬಜೆಟ್ ಫ್ರೆಂಡ್ಲೀ ಪ್ರವಾಸವಾಗಿರಬೇಕೆಂಬ ಯೋಜನೆಯೊಂದಿಗೆ ಪ್ರಯಾಣದ ಪ್ರತಿ ಹಂತವನ್ನೂ ಬರೆದಿಟ್ಟುಕೊಂಡಿದ್ದರಿಂದ ಎಲ್ಲವೂ ಅಂದುಕೊಂಡಂತೆ ಆಗಿತ್ತು. ಆದರೆ ಅಲ್ಲಿನ ಸಾರಿಗೆ ವ್ಯವಸ್ಥೆ ಸ್ವಲ್ಪ ದುಬಾರಿಯಾಗಿರುವುದರಿಂದ ದಿನಕ್ಕೆ ಸುಮಾರು 15-20ಕಿಮೀ. ಕಾಲ್ನಡಿಗೆಯ ಮೂಲಕವೇ ಸ್ಥಳಗಳನ್ನು ತಲುಪುತ್ತಿದ್ದೆವು. ಆದರೂ ದುಬೈ ಎಂದರೆ ಫೆರಾರಿ ವರ್ಲ್ಡ್ ಹಾಗೂ ಬುರ್ಜ್ ಕಲೀಫಾ ನೆನಪಾಗುತ್ತದೆ.
ಜಪಾನ್‌ನಲ್ಲಿ ನಿರಾಹಾರ..ಸತ್ಯಾಗ್ರಹವಲ್ಲ..
ಕಳೆದ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಜಪಾನ್‌ನ ಮೌಂಟ್ ಫ್ಯುಜಿಯಲ್ಲಿ ಆಚರಿಸಿಕೊಂಡಿದ್ದೆವು. ಆದರೆ ಜಪಾನ್ ಪ್ರವಾಸ ಪ್ರಯಾಸ ಕೊಟ್ಟಿತ್ತು. ಅಲ್ಲಿನ ಆಹಾರದ ಜತೆ ಹೊಂದಿಕೊಳ್ಳುವುದು ಕಷ್ಟವಾಗಿತ್ತು. ನಾವು ಸಸ್ಯಾಹಾರಿಗಳಾಗಿರುವುದರಿಂದ ಅಲ್ಲಿ ಎಲ್ಲಿ ನೋಡಿದರೂ, ಯಾವುದೇ ಆಹಾರ ಪದಾರ್ಥಗಳಲ್ಲೂ ಮೊಟ್ಟೆ, ಮಾಂಸಾಹಾರದ ಬಳಕೆಯಿರುತ್ತಿತ್ತು. ಜತೆಗೆ ಅಲ್ಲಿ ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿದೆಯೆಂದರೂ ನಮಗೆ ಭಾರತದಷ್ಟು ಫ್ರೆಂಡ್ಲೀ ಅನುಭವವಾಗಿಯೇ ಇಲ್ಲ. 12 ದಿನಗಳ ಪ್ರವಾಸವದು. ಒಸಾಕಾ, ಕ್ಯೋಟೋ ಹಾಗೂ ಟೋಕಿಯೋ ಪ್ರದೇಶಗಳನ್ನು ಸುತ್ತಾಡಿಬಂದಿದ್ದೆವು. ಹೋದ ದಿನವೇ ಆಹಾರಕ್ಕಾಗಿ ಅಲೆದಾಡಿದ ನೆನಪು ಇಂದೂ ಕಾಡುತ್ತದೆ.ಮೊದಲ ನಾಲ್ಕು ದಿನಗಳ ಕಾಲವಂತೂ ಹೊಟ್ಟೆಗೆ ಸರಿಯಾಗಿ ಆಹಾರ ಬಿದ್ದಿರಲೇ ಇಲ್ಲ. ಅಲ್ಲಿನ ಸಾರಿಗೆ ವ್ಯವಸ್ಥೆಯೂ ನಮ್ಮ ಬಜೆಟ್‌ಗೆ ಹೊಂದಿತ್ತಿರಲಿಲ್ಲ. ಆದರೂ ಅಂದುಕೊಂಡಂತೆ ಒಬ್ಬರಿಗೆ 1.45ಲಕ್ಷ ರುಪಾಯಿಯಲ್ಲೇ ಪ್ರವಾಸ ಮಾಡಿ ಬಂದಿದ್ದಾಯ್ತು.

ಚಾಮುಂಡೇಶ್ವರ ಆಶೀರ್ವಾದ
ನನಗೆ ಧಾರ್ಮಿಕ ಪ್ರವಾಸವೆಂದರೆ ಅತಿಯಾದ ಖುಷಿ, ನೆಮ್ಮದಿಯ ಅನುಭವ ಸಿಗುತ್ತದೆ. ಅದರಲ್ಲೂ ಚಾಮುಂಡಿ ಬೆಟ್ಟವೆಂದರೆ ನನಗೆ ತುಂಬಾ ಆಪ್ತವಾದ ದೇವಾಲಯ. ನನ್ನ ಜೀವನದ ಅನೇಕ ಘಟ್ಟಗಳನ್ನು ದಾಟಲು ತಾಯಿ ಚಾಮುಂಡಿಯ ಆಶೀರ್ವಾದವೇ ಮುಖ್ಯ ಕಾರ. ಅನೇಕ ವರ್ಷಗಳಿಂದಲೂ ನನ್ನ ಹುಟ್ಟುಹಬ್ಬದಂದು ಚಾಮುಂಡಿ ತಾಯಿಯ ದರ್ಶನ ಪಡೆಯುವುದು ರೂಢಿ ಮಾಡಿಕೊಂಡಿದ್ದೇನೆ.
ಕುಂಭ ಮೇಳವನ್ನು ಮರೆಯಲಿ ಹೇಗೆ?
ಕುಂಭ ಮೇಳದ ವಿಚಾರ ಎಲ್ಲಿ ಕೇಳಿದರೂ ಆ ದಿನವನ್ನು ನಾನು ನೆನಪಿಸಿಕೊಳ್ಳುತ್ತೇನೆ. 6ಗಂಟೆಗಳ ಪ್ರಯಾಣವನ್ನು ಸುಮಾರು 20 ಗಂಟೆಗಳ ಕಾಲ ಕಾರಿನೊಳಗೆಯೇ ಕುಳಿತುಕೊಂಡ ಆ ದಿನ ಜೀವನದಲ್ಲೇ ಮರೆಯುವುದು ಅಸಾಧ್ಯ. ಕುಂಭ ಮೇಳಕ್ಕೆ ಜನಸಾಗರ ಹರಿದುಬಂದ ಕಾರಣ ವಾಹನ ದಟ್ಟಣೆಗೆ ಸಿಲುಕಿದ ಕತೆಯಲ್ಲೂ ನಾನು ಪಾತ್ರಧಾರಿಯಾಗಿದ್ದೆ. ಸ್ಣೇಹಿತೆಯರ ಜತೆಗೆ ಕುಂಭ ಮೇಳಕ್ಕೆ ಹೋಗಿದ್ದ ವೇಳೆ ಆಗಿದ್ದೆಲ್ಲವೂ ಫಜೀತಿಗಳೇ. ಸುಮಾರು 20 ಕಿಮೀ ದೂರವನ್ನು ಕಾಲ್ನಡಿಗೆಯಲ್ಲಿ ಹೋಗಿದ್ದೆ.ಜನ ದಟ್ಟಣೆ, ಎಲ್ಲಿ ನೋಡಿದರೂ ಮಾಲಿನ್ಯವನ್ನು ನೋಡಿ ಇದಕ್ಕಾಗಿ ನಾವು ಅಷ್ಟೊಂದು ದೂರದಿಂದ ಕಷ್ಟಪಟ್ಟುಕೊಂಡು ಬರಬೇಕಿತ್ತಾ ಎಂಬ ಪ್ರಶ್ನೆ ನಮ್ಮೊಳಗೇ ಮೂಡಿವಂತಾಗಿತ್ತು..ಅಲ್ಲಿಂದ ಕಾಶಿ, ಅಯೋಧ್ಯೆಗೂ ಹೋಗಿದ್ದೆವು.

ಗುರುವಾಯೂರಿನಲ್ಲಿ ಕೃಷ್ಣನ ದರ್ಶನವಾಗಿಲ್ಲ..
ಸೀರಿಯಲ್ ಇಂಡಸ್ಟ್ರಿಯಲ್ಲಿ ನನ್ನ ಪ್ರವಾಸಗಳಲ್ಲಿ ಜತೆಯಾಗುವವಳು ನಟಿ ಭವ್ಯಾ ಪೂಜಾರಿ. ಅವಳೊಂದಿಗೆ ಅನೇಕ ಪ್ರವಾಸವನ್ನು, ಧಾರ್ಮಿಕ ಕ್ಷೇತ್ರಗಳ ಭೇಟಿಯನ್ನೂ ಮಾಡಿದ್ದೇನೆ. ಅವುಗಳಲ್ಲಿ ಗುರುವಾಯೂರು ಕ್ಷೇತ್ರಕ್ಕೆ ಭೇಟಿ ನೀಡಿರುವುದು ನೆನಪಿನಲ್ಲುಳಿಯುವ ಪ್ರವಾಸ. ನಮ್ಮೊಂದಿಗೆ ಬಂದವರಿಗೆ ಮಲಯಾಳ ಭಾಷೆ ಬರುತ್ತಿದ್ದರಿಂದ ಭಾಷೆಯ ವಿಚಾರದಲ್ಲಿ ನಮಗೆ ಯಾವುದೇ ಸಮಸ್ಯೆಯಾಗಿಲ್ಲ. ಆಹಾರವೂ ನನಗೆ ಮೆಚ್ಚುಗೆಯಾಯ್ತು. ನನಗೆ ಬೇಸರವಾದ ವಿಚಾರ, ಅಷ್ಟೊಂದು ದೂರ ಪ್ರಯಾಣ ಮಾಡಿ ಗುರುವಾಯೂರಿಗೆ ಹೋದರೆ, ಆ ಕೃಷ್ಣನನ್ನು ನೆಮ್ಮದಿಯಿಂದ ಒಂದು ಘಳಿಗೆಯೂ ನೋಡುವ ಅವಕಾಶ ಸಿಗಲಿಲ್ಲ.
ಚಾಟ್ಸ್ ಪ್ರಿಯೆ
ನಾನು ಫುಡ್ಡಿ ಎನ್ನುವುದಕ್ಕಿಂತ ಚಾಟ್ಸ್ ಪ್ರಿಯೆ..ಗೋಬಿ ಮಂಚೂರಿ, ಚಾಟ್ಸ್, ಐಸ್‌ಕ್ರೀಮ್ ನಂಥ ಅನೇಕ ಖಾದ್ಯಗಳನ್ನು ಇಷ್ಟಪಟ್ಟು ತಿನ್ನುತ್ತೇನೆ. ಆದರೆ ಅದಕ್ಕಾಗಿ ಪ್ರತ್ಯೇಕ ಅಡ್ಡವನ್ನು ನಿಗದಿಪಡಿಸಿಲ್ಲ. ಎಲ್ಲಿ ಟೇಸ್ಟಿ ಚಾಟ್ಸ್ ಸಿಕ್ಕರೂ ಖುಷಿಯಿಂದ ತಿನ್ನುತ್ತೇನೆ.
ಪ್ರವಾಸಕ್ಕಾಗಿ ಬಜೆಟ್ ಪ್ಲ್ಯಾನ್
ವಿದೇಶಿ ಪ್ರವಾಸದ ವೇಳೆ ಬಜೆಟ್ ಪ್ಲ್ಯಾನ್ ಮಾಡಿಕೊಳ್ಳುವ ವಿಧಾನವೇ ಬೇರೆ..ಅದಕ್ಕಾಗಿ ನಮ್ಮ ಆದಾಯದ ಒಂದು ಮೊತ್ತವನ್ನು ನಿಯಮಿತವಾಗಿ ತೆಗೆದಿಟ್ಟುಕೊಳ್ಳಬೇಕಾಗುತ್ತದೆ. ನೀವಂದುಕೊಂಡಂತೆಯೇ ಟೂರ್ ಇರಬೇಕು ಎಂದುಕೊಳ್ಳುವುದಕ್ಕಿಂತ ಡೆಸ್ಟಿನೇಷನ್, ಫುಡ್ ಎಲ್ಲದರಲ್ಲೂ ಬಜೆಟ್ ಫ್ರೆಂಡ್ಲೀ ದೃಷ್ಟಿಕೋನದಿಂದಲೇ ನೋಡಬೇಕಾಗುತ್ತದೆ. ಬಜೆಟ್ ಮೀರಿದರೆ ಆ ತಾಣದ ಬದಲು ಬೇರೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ತಿರುಮಲನ ದರ್ಶನ ಅದ್ಭುತವಾಗಿತ್ತು..
ನನ್ನ ಮನೆ ದೇವರು ತಿರುಪತಿಯ ವೆಂಕಟರಮಣ. ಆದ್ದರಿಂದಲೇ ಪ್ರತಿ ವರ್ಷವೂ ತಿರುಪತಿಗೆ ಭೇಟಿ ನೀಡುತ್ತೇನೆ. ಕಳೆದ ಬಾರಿ ಗೆಳತಿ, ನಟಿ ಚಂದನಾ ಅವರ ಕುಟುಂಬದ ಜತೆಗೆ ತಿರುಮಲನ ದರ್ಶನಕ್ಕೆ ನನ್ನನ್ನೂ ಕರೆದುಕೊಂಡು ಹೋಗಿದ್ದರು. ಈ ವೇಳೆ ಮೊದಲ ಬಾರಿಗೆ ತಿರುಮಲನನ್ನು ಸಮೀಪದಿಂದ ನೋಡುವ ಅವಕಾಶ ಸಿಕ್ಕಿತ್ತು. ಅಲ್ಲಿ ದೇವರಮುಂದೆ ನಿಂತು ಮ್ಯಾನಿಫೆಸ್ಟ್ ಮಾಡಿದ್ದೆ. ಅಪ್ಪ ಅಮ್ಮನನ್ನೂ ಮುಂದಿನ ಬಾರಿ ಕರೆದುಕೊಂಡುಬರುತ್ತೇನೆ.ಇದೇ ರೀತಿ ಸುಲಭವಾಗಿ, ಸಮೀಪದಿಂದಲೇ ದರ್ಶನಕ್ಕೆ ಅವಕಾಶ ಕೊಡಿಸು ಅಂತ..ಈ ವರ್ಷ ನವೆಂಬರ್‌ನಲ್ಲಿ ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವದ ವೇಳೆ ತಿರುಪತಿಗೆ ಹೋಗುವ ಯೋಜನೆಯಿದೆ.
ಸೆಲೆಬ್ರಿಟಿಯಾಗಿ ಪ್ರವಾಸ ಕಷ್ಟ..
ಸೆಲೆಬ್ರಿಟಿ ಎನಿಸಿಕೊಂಡ ಮೇಲೆ ಪ್ರತಿ ಪ್ರವಾಸವೂ ಸಲೀಸಾಗಿರುವುದಿಲ್ಲ. ಅಭಿಮಾನಿಗಳು ಎಲ್ಲ ಕಂಡರೂ ನಿಲ್ಲಿಸಿ, ಮಾತನಾಡಿಸಿ ಸೆಲ್ಫೀ ತೆಗೆದುಕೊಳ್ಳುತ್ತಾರೆ. ಮಂತ್ರಾಲಯದ ಭೇಟಿಯ ವೇಳೆ ಅಂಥದೇ ಘಟನೆ ನಡೆದಿತ್ತು. ಅಲ್ಲಿ ಹೋದಾಗಲೆಲ್ಲ ನಾನು ಹೆಜ್ಜೆ ನಮಸ್ಕಾರ ಮಾಡುತ್ತೇನೆ. ಅಂಥ ಸಂದರ್ಭದಲ್ಲೂ ನನ್ನನ್ನು ಗುರುತಿಸಿ ಬರುವ ಅಭಿಮಾನಿಗಳು ಸೆಲ್ಫೀ ತೆಗೆಯುವ ತರಾತುರಿಯಲ್ಲಿರುತ್ತಾರೆ.ಅನೇಕ ಬಾರಿ ಕಿರಿಕಿರಿಯೆನಿಸಿದರೂ ಬೇಸರಗೊಳ್ಳುತ್ತಾರೆಂದು ಪ್ರತಿಕ್ರಿಯಿಸದೆ ಉಳಿದುಬಿಡುತ್ತೇನೆ.