Saturday, July 25, 2026
Saturday, July 25, 2026

ತಂಬುಳಿ ಮನೆ... ಅಜ್ಜಿಯ ಕೈರುಚಿ ನೆನಪಿಸುವ ಮನೆ

ಆ ಕಳೆದುಹೋಗುತ್ತಿರುವ 'ಮಲೆನಾಡಿನ ಅಪ್ಪಟ ರುಚಿ' ಮತ್ತು 'ಆರೋಗ್ಯಕರ ಆಹಾರ ಪದ್ಧತಿ'ಯನ್ನು ಮತ್ತೆ ಜೀವಂತವಾಗಿಸುತ್ತಿರುವ ಒಂದು ಅದ್ಭುತ ಜಾಗವೇ ʼತಂಬುಳಿ ಮನೆʼ. ಇದನ್ನು ರಾಜ್ಯವ್ಯಾಪಿ ಬಡಿಸಬೇಕು ಎಂದು ಕನಸು ಕಂಡವರು ಮಲೆನಾಡಿನವರೇ ಅದ ಕಾರ್ತಿಕ್‌ ಎಚ್‌. ಶ್ರೀಧರ್‌ ಹಾಗೂ ಅವರ ಸ್ನೇಹಿತರು.

ಮಲೆನಾಡಿನಲ್ಲಿ ತಂಬುಳಿ ಎನ್ನುವಂಥದ್ದು ಒಂದು ಎಮೋಷನ್‌. ನಿತ್ಯವೂ ಅನ್ನದ ಜತೆಗೆ ಸೇವಿಸಲು ಸಾರು, ಸಾಂಬಾರು ಇಲ್ಲದಿದ್ದರೂ ನಡೆಯುತ್ತದೆ. ಆದರೆ, ತಂಬುಳಿ ಇದ್ದೇ ಇರುತ್ತದೆ. ಮನೆಯಲ್ಲಿ ಸತ್ಯನಾರಾಯಣ ಕಥೆಯಿದ್ದರೂ, ಯಾವುದೋ ದೊಡ್ಡ ಮದುವೆ ಸಂಭ್ರಮವಿದ್ದರೂ ಎಲ್ಲದಕ್ಕಿಂತ ಮೊದಲು ನಿರ್ಧಾರ ಆಗುವ ಪಾನೀಯ ತಂಬುಳಿ. ಯಾವುದೇ ವಿಶೇಷ ಸ್ಥಾನಮಾನವನ್ನು ಬಯಸದೆಯೇ ಇರುವ ಆಹಾರವಿದು. ಮಲೆನಾಡಿನವರಿಗೆ ಕಾಫಿ ಎಷ್ಟು ವಿಶೇಷವೋ ಅಷ್ಟೇ ವಿಶೇಷ ತಂಬುಳಿ. ಅಂಥದ್ದೊಂದು ಆಹಾರವನ್ನೇ ಪ್ರಮುಖವಾಗಿ ಇಟ್ಟುಕೊಂಡು ಬೆಂಗಳೂರಿನಲ್ಲಿ ಶುರುವಾದ ಆಹಾರ ತಾಣ 'ತಂಬುಳಿ ಮನೆ'. ಇದರ ಅಡಿಬರಹ ಕೂಡ ಅಷ್ಟೇ ವಿಶೇಷವಾದದ್ದು. 'ನಮ್ಮಜ್ಜಿ ಹೇಳ್ಕೊಟ್ಟಿದ್ದು'. ಇದನ್ನು ಕೇಳುವಾಗಲೇ ಒಂದು ಆತ್ಮೀಯ ಭಾವ, ನಮ್ಮದು ಎಂಬ ಆಪ್ತತೆ ಬೆಳೆಯುತ್ತದೆ.

ಇದನ್ನೂ ಓದಿ: ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ 40ನೆಯ ಜನ್ಮವರ್ಧಂತಿ

ಈ ತಂಬುಳಿ ಮನೆಯ ವಿಶೇಷ ಎಂದರೆ ಇಲ್ಲಿ ಇವರು 'ಆಹಾರವನ್ನು ಉತ್ಪಾದನೆ ಮಾಡುವುದಿಲ್ಲ. ಪ್ರೀತಿಯಿಂದ ಅಡುಗೆ ಮಾಡುತ್ತಾರೆ'. ಯಾವುದೇ ಆಹಾರವನ್ನು ಪ್ರೀತಿಯಿಂದ ಮಾಡಿ ಬಡಿಸಿದಾಗ ಅದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆಯಂತೆ. ಅದಕ್ಕಿಂತ ಹೆಚ್ಚಾಗಿ ಆರೋಗ್ಯಕರವಾಗಿರುತ್ತದೆ. ಇಂದಿನ ಫಾಸ್ಟ್ ಫುಡ್ ಜಗತ್ತಿನಲ್ಲಿ ನಮ್ಮದೇ ಮಣ್ಣಿನ, ನಮ್ಮದೇ ಸಂಸ್ಕೃತಿಯ ಸಾತ್ವಿಕ ಆಹಾರಗಳು ಎಲ್ಲೋ ಕಳೆದುಹೋಗುತ್ತಿವೆ. ಹೊರಗಡೆ ಊಟ ಮಾಡಿದ ಮೇಲೆ ಹೊಟ್ಟೆ ಉಬ್ಬರ, ಅಸಿಡಿಟಿ, ಸುಸ್ತು ಇವೆಲ್ಲಾ ಈಗ ಬಹುತೇಕರಿಗೆ ಸಾಮಾನ್ಯ ಸಮಸ್ಯೆ. ಆದರೆ, ನಮ್ಮ ಅಜ್ಜಿಯರು ಮಾಡುತ್ತಿದ್ದ ಆ ಜೀರಿಗೆ ಕಷಾಯ, ಬ್ರಾಹ್ಮಿ ತಂಬುಳಿ, ತಾಜಾ ಶಾವಿಗೆಯ ರುಚಿ ಯಾವುದೇ ಯೋಚನೆ ಇಲ್ಲದೇ ಸೇವಿಸಬಹುದಾದ ಆಹಾರಗಳು.

Untitled design - 2026-07-25T182214.182

ಆ ಕಳೆದುಹೋಗುತ್ತಿರುವ 'ಮಲೆನಾಡಿನ ಅಪ್ಪಟ ರುಚಿ' ಮತ್ತು 'ಆರೋಗ್ಯಕರ ಆಹಾರ ಪದ್ಧತಿ'ಯನ್ನು ಮತ್ತೆ ಜೀವಂತವಾಗಿಸುತ್ತಿರುವ ಒಂದು ಅದ್ಭುತ ಜಾಗವೇ 'ತಂಬುಳಿ ಮನೆ'. ಇದನ್ನು ರಾಜ್ಯವ್ಯಾಪಿ ನೀಡಬೇಕು ಎಂದು ಕನಸು ಕಂಡವರು ಮಲೆನಾಡಿನವರೇ ಅದ ಕಾರ್ತಿಕ್‌ ಎಚ್‌. ಶ್ರೀಧರ್‌ ಹಾಗೂ ಅವರ ಸ್ನೇಹಿತರು.

ತಂಬುಳಿ ವಿಶೇಷ

ಮಲೆನಾಡಿನಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರಕನ್ನಡ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಂಬುಳಿ ಎನ್ನುವಂಥದ್ದು ಪರಿಚಿತವಾದ ಪಾನೀಯ. ಇದನ್ನು ಕುಡಿಯಬಹುದು ಮತ್ತು ಅನ್ನಕ್ಕೆ ಕಲೆಸಿಕೊಂಡು ಉಣ್ಣಬಹುದು. ಬೇರೆ ಬೇರೆ ಸೊಪ್ಪನ್ನು ಅರೆದು, ಮಜ್ಜಿಗೆಯೊಂದಿಗೆ ಬೆರೆಸಿ, ಉಪ್ಪು, ಒಗ್ಗರಣೆ ಹಿತಮಿತವಾಗಿ ಹಾಕಿದರೆ ತಂಬುಳಿ ಸಿದ್ಧ. ಹಳ್ಳಿಗಳಲ್ಲಿ ಊಟದ ಹೊತ್ತಿಗೆ ಅತಿಥಿಗಳು ಆಕಸ್ಮಿಕವಾಗಿ ಬಂದರೆ ಹತ್ತು ನಿಮಿಷಗಳಲ್ಲಿ ಸುಲಭವಾಗಿ ತಯಾರಿಸುವ ಪದಾರ್ಥಗಳಲ್ಲಿ ತಂಬುಳಿಯೂ ಒಂದು. ಬೇಸಗೆಯಲ್ಲಿ ಊಟದಲ್ಲಿ ಪದಾರ್ಥವಾಗಿ, ಬಾಯಾರಿ ಬಂದವರಿಗೆ ಪಾನೀಯವಾಗಿ ತಂಬುಳಿ ಜನಪ್ರಿಯ. ತಂಬುಳಿ ಗೊತ್ತಿಲ್ಲದ ಮಲೆನಾಡಿಗರು ಸಿಗಲಿಕ್ಕಿಲ್ಲ.

ತಂಬುಳಿ ಮನೆ ರೂವಾರಿ

ಈ 'ತಂಬುಳಿ ಮನೆ'ಯ ಹಿಂದಿರುವ ರೂವಾರಿ, ಮಲೆನಾಡಿನ ಸಾಗರದವರಾದ ಕಾರ್ತಿಕ್ ಹೆಚ್. ಶ್ರೀಧರ್ ಅವರು. ಮಲೆನಾಡಿನ ಮನೆಗಳಲ್ಲಿ ಪ್ರತಿದಿನದ ಊಟದ ಅವಿಭಾಜ್ಯ ಅಂಗವಾಗಿರುವ 'ತಂಬುಳಿ'ಯನ್ನೇ ಒಂದು ವೇಗವಾಗಿ ಬೆಳೆಯುತ್ತಿರುವ ಹೆಲ್ತ್ ಫುಡ್ ಚೈನ್ ಆಗಿ ಪರಿವರ್ತಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಕಾರ್ತಿಕ್ ಶ್ರೀಧರ್‌ ಬಿಟ್ಸ್ ಪಿಲಾನಿಯಲ್ಲಿ ಓದಿ, ವಿಪ್ರೋದಲ್ಲಿ ಹತ್ತಾರು ವರ್ಷ ಕೆಲಸ ಮಾಡಿ, ನಂತರ ಡ್ಯೂಯಿಷ್ ಬ್ಯಾಂಕ್ ಸೇರಿ, ಕೈತುಂಬಾ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು, ಈಗ ತಮ್ಮ ಸ್ನೇಹಿತ ಪ್ರಶಾಂತ್‌ ಅವರೊಂದಿಗೆ ಸೇರಿ, ‘ತಂಬುಳಿಮನೆ’ ಆರಂಭಿಸಿದ್ದಾರೆ.

Untitled design - 2026-07-25T183212.177

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ವರ್ಕ್ ಫ್ರಂ ಹೋಮ್ ಹಿನ್ನೆಲೆಯಲ್ಲಿ ಊರಿಗೆ ಮರಳಿದ್ದಾಗ, ಸ್ಥಳೀಯವಾಗಿ ಏನಾದರೂ ವಿಭಿನ್ನವಾದದ್ದನ್ನು ಮಾಡಬೇಕೆಂಬ ಆಲೋಚನೆ ಇವರಲ್ಲಿ ಮೂಡಿತು. ಇದರ ಮೊದಲ ಹೆಜ್ಜೆಯಾಗಿ ಗ್ರಾಮೀಣ ಭಾಗದ ಗುಣಮಟ್ಟದ ದಿನಸಿ ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸುವ 'ರಾ ಗ್ರಾನ್ಯುಯಲ್ಸ್' ಎಂಬ ಸಂಸ್ಥೆಯನ್ನು ಆರಂಭಿಸಿದರು. ಸಾಗರದಲ್ಲಿ ಪ್ರಧಾನ ಕಚೇರಿ ಹೊಂದಿದ್ದ ಈ ಸಂಸ್ಥೆಯು ವಾರಕ್ಕೊಮ್ಮೆ ಮಲೆನಾಡಿನ ವಿಶೇಷ ಅಡುಗೆ ತಯಾರಿಸಿ ಮಾರಾಟ ಮಾಡಲು ಶುರುಮಾಡಿತು. ಇದೇ ಪರಿಕಲ್ಪನೆಯು ಗ್ರಾಹಕರಿಂದ ಅದ್ಭುತ ಸ್ಪಂದನೆ ಪಡೆದುಕೊಂಡು, ಮುಂದೆ ಬೃಹತ್ ರೂಪ ತಾಳಿ 'ತಂಬುಳಿ ಮನೆ'ಯಾಗಿ ಮಾರ್ಪಟ್ಟಿತು. ಜನವರಿ 14, 2024ರಂದು ಬೆಂಗಳೂರಿನ ಜೆಪಿ ನಗರದಲ್ಲಿ ಇದರ ಮೊಟ್ಟಮೊದಲ ಔಟ್‌ಲೆಟ್ ಪ್ರಾರಂಭವಾಯಿತು. ಇಂದು ಭಾರತದ ಐಟಿ ರಾಜಧಾನಿ ಬೆಂಗಳೂರಿನ ಬರೋಬ್ಬರಿ 10 ಭಾಗಗಳಲ್ಲಿ ಮತ್ತು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಈ ಹೊಟೇಲ್‌ ತಲೆ ಎತ್ತಿದ್ದು, ಮಲೆನಾಡ ಪ್ರಾಂತ್ಯದ ಸವಿರುಚಿಯನ್ನು ಜನರಿಗೆ ಪರಿಚಯಿಸುತ್ತಿದೆ.

ಈ ಯಶಸ್ವಿ ಉದ್ಯಮದ ಬೆನ್ನೆಲುಬಾಗಿರುವ ಮೂವರ ಕಾರ್ಯವಿಭಜನೆ ಕೂಡ ಅತ್ಯಂತ ಅಚ್ಚುಕಟ್ಟಾಗಿದೆ. ಕಾರ್ತಿಕ್ ಅವರು ಸಂಸ್ಥೆಯ ಸಿಇಒ ಆಗಿ ಮುನ್ನಡೆಸುತ್ತಿದ್ದರೆ, ಅಡುಗೆಮನೆಯಲ್ಲಿ ತಯಾರಾಗುವ ಪ್ರತಿಯೊಂದು ತಂಬುಳಿಯ ಗುಣಮಟ್ಟವನ್ನು ಅನುಷಾ (CQO) ಅವರು ನಿಖರವಾಗಿ ನಿರ್ಧರಿಸುತ್ತಾರೆ. ಇನ್ನು, ಇವುಗಳಿಗೆ ಬೇಕಾದ ಕಚ್ಚಾವಸ್ತುಗಳ ಪೂರೈಕೆ ಹಾಗೂ ಕೆಲಸದ ಸಿಬ್ಬಂದಿಯ ಸಂಪೂರ್ಣ ಉಸ್ತುವಾರಿಯನ್ನು ಪ್ರಶಾಂತ್ (COO) ಅವರು ನೋಡಿಕೊಳ್ಳುತ್ತಾರೆ.

ಗುಣಮಟ್ಟದಲ್ಲಿ ರಾಜಿ ಇಲ್ಲ

ಬೆಂಗಳೂರಿನಂಥ ಮಹಾನಗರದಲ್ಲಿ ದೇಶ-ವಿದೇಶಗಳ ಎಲ್ಲ ಬಗೆಯ ಅಡುಗೆಗಳೂ ಲಭ್ಯವಿದ್ದರೂ, ಸಾಗರ-ಶಿರಸಿ ಭಾಗದ ವೈಶಿಷ್ಟ್ಯವಾದ ತಂಬುಳಿ ಸೇರಿದಂತೆ ಹತ್ತು ಹಲವು ಸಾತ್ವಿಕ ಖಾದ್ಯಗಳು ಒಂದೇ ಸೂರಿನಡಿ ಸಿಗುತ್ತಿರಲಿಲ್ಲ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ತಂಬುಳಿ ಮನೆಯು ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಕ್ಲೀನ್ ಫುಡ್ ಎನ್ನುವುದು ಕೇವಲ ಫ್ಯಾನ್ಸಿ ಪದವಾಗದೆ, ಅದನ್ನು ದಿನನಿತ್ಯ ಗ್ರಾಹಕರು ಅನುಭವಿಸುವಂತೆ ಮಾಡಿದ್ದಾರೆ. ಇಲ್ಲಿ ಯಾವುದೇ ಎಸೆನ್ಸ್, ಕೃತಕ ಬಣ್ಣ ಅಥವಾ ರಾಸಾಯನಿಕಗಳನ್ನು ಬಳಸುತ್ತಿಲ್ಲ. ಅಡುಗೆಗೆ ಕಡಲೆಕಾಯಿ ಅಥವಾ ಕೊಬ್ಬರಿ ಎಣ್ಣೆಯನ್ನೇ ಬಳಸಲಾಗುತ್ತದೆ.

Untitled design - 2026-07-25T182249.371

'ಮಣ್ಣಿನಿಂದ ಮನಸಿಗೆ' ತಲುಪುವ ಈ ಪ್ರಯಾಣದಲ್ಲಿ ಅವರು ಅನುಸರಿಸುವ ಕಠಿಣ ನಿಯಮಗಳು ಎಂಥವರನ್ನೂ ಬೆರಗುಗೊಳಿಸುತ್ತವೆ:

  • ಗಾಣದ ಎಣ್ಣೆ ಮಾತ್ರ: ರಿಫೈನ್ಡ್ ಎಣ್ಣೆ ಅಥವಾ ಪಾಮ್ ಆಯಿಲ್ ಸುಳಿವೂ ಇಲ್ಲಿಲ್ಲ. ಸಾಂಪ್ರದಾಯಿಕ ಗಾಣದ ಎಣ್ಣೆಯನ್ನೇ ಇಲ್ಲಿ ಬಳಸಲಾಗುತ್ತದೆ.
  • ಗಾಂಧಾರಿ ಮೆಣಸಿನ ಬಳಕೆ: ಹೊಟ್ಟೆಯಲ್ಲಿ ಉರಿ, ಅಸಿಡಿಟಿ ತರಿಸುವ ಸಾಮಾನ್ಯ ಹಸಿಮೆಣಸಿನಕಾಯಿ ಬದಲು, ಕರುಳಿನ ಆರೋಗ್ಯಕ್ಕೆ ಅತ್ಯುತ್ತಮವಾದ ಗಾಂಧಾರಿ (ಜೀರಿಗೆ) ಮೆಣಸನ್ನೇ ಇಲ್ಲಿ ಬಳಸಲಾಗುತ್ತದೆ.
  • ಅಡುಗೆ ಸೋಡಾ ನಿಷೇಧ: ರುಚಿ ಹೆಚ್ಚಿಸಲು ಅಥವಾ ಬೇಗ ಬೇಯಿಸಲು ಯಾವುದೇ ಕಾರಣಕ್ಕೂ ಅಡುಗೆ ಸೋಡಾ ಬಳಸುವುದಿಲ್ಲ.
  • ಕೃತಕ ಬಣ್ಣ ಮತ್ತು ಟೇಸ್ಟಿಂಗ್ ಪೌಡರ್ ಇಲ್ಲ: ಆಹಾರಕ್ಕೆ ಬಣ್ಣ ಬರುವುದು ಇಲ್ಲಿನ ಸಾಂಬಾರ ಪದಾರ್ಥಗಳು, ಸೊಪ್ಪು ಮತ್ತು ನೈಸರ್ಗಿಕ ಬೆಲ್ಲದಿಂದ. ರುಚಿ ಬರುವುದು ತಾಜಾ ಸಾಮಗ್ರಿಗಳಿಂದ ಹೊರತು ಕೃತಕ ಟೇಸ್ಟಿಂಗ್ ಪೌಡರ್‌ನಿಂದಲ್ಲ.
  • ಅಪ್ಪಟ ಮಲೆನಾಡು ಬೆಲ್ಲ: ಬಿಳಿ ಸಕ್ಕರೆಯ ಬಳಕೆ ಇಲ್ಲವೇ ಇಲ್ಲ. ಎಲ್ಲದಕ್ಕೂ ಮಲೆನಾಡಿನ ನೈಸರ್ಗಿಕ ಬೆಲ್ಲವೇ ಆಧಾರ.

ಮೆನು ಮತ್ತು ವಿಶೇಷತೆಗಳು

ಮಲೆನಾಡಿನ ಅಡುಗೆಮನೆಗಳಲ್ಲಿ ಹಿತ್ತಲಿನಲ್ಲಿ ಬೆಳೆದ ಸೊಪ್ಪು, ಬೇರು, ಗಡ್ಡೆಗಳಿಂದ ಇನ್ಸ್‌ಟಂಟ್ ಆಗಿ ತಯಾರಿಸುವ ತಂಬುಳಿ, ಆರೋಗ್ಯ ಕಾಪಾಡುವಲ್ಲಿ ಎತ್ತಿದ ಕೈ. ಸ್ವಾರ್ಲೆ ಕುಡಿ, ದಾಳಿಂಬೆ ಕುಡಿ, ಕೊತ್ತಂಬರಿ ಸೊಪ್ಪು ಸೇರಿದಂತೆ ತರಹೇವಾರಿ ಸೊಪ್ಪುಗಳನ್ನು ಬಳಸಿ ತಂಬುಳಿ ತಯಾರಿಸುವ ಕಲೆ ಮಲೆನಾಡಿನಲ್ಲಿ ಜನಜನಿತವಾಗಿದೆ. ತಂಬುಳಿ ಮನೆಗೆ ಒಮ್ಮೆ ಭೇಟಿ ನೀಡಿದರೆ, 50ಕ್ಕೂ ಹೆಚ್ಚು ಬಗೆಯ ಗಿಡಮೂಲಿಕೆಗಳ ತಂಬುಳಿಗಳು ನಿಮ್ಮನ್ನು ಸ್ವಾಗತಿಸುತ್ತವೆ! ಮೆದುಳು ಚುರುಕಾಗಲು ಬ್ರಾಹ್ಮಿ ತಂಬುಳಿ, ಜೀರ್ಣಕ್ರಿಯೆಗೆ ಸಹಾಯವಾಗುವಂತೆ ಜೀರಿಗೆ ತಂಬುಳಿ, ಹೊಸ ರುಚಿ ಲೆಮನ್ ಗ್ರಾಸ್ ತಂಬುಳಿ - ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಅಷ್ಟಕ್ಕೆ ಸೀಮಿತವಾಗುವುದಿಲ್ಲ. ಕೆಲವು ಸೀಸನ್‌ಗೆ ತಕ್ಕಂತೆ ಆಹಾರದ ಮೆನು ಕೂಡ ಬದಲಾವಣೆ ಆಗುತ್ತದೆ. ಉದಾಹರಣೆಗೆ ಮಾವಿನ ಹಣ್ಣಿನ ವಿಶೇಷ, ಹಲಸಿನಕಾಯಿ ಪದಾರ್ಥಗಳು ಅಷ್ಟೇ ಯಾಕೆ, ಕೆಲವೊಮ್ಮೆ ಕಳಲೆ ಸಾಂಬಾರ್‌ ಕೂಡ ಸಿಗುತ್ತದೆ.

Untitled design (61)

ಇಲ್ಲಿ ಸಿಗುವ ವಿವಿಧ ತಂಬುಳಿಗಳು: ಅಂಬೆ ಶುಂಠಿ, ನುಗ್ಗೆ ಸೊಪ್ಪು, ವಾಯು ವಿಳಂಗ, ಅಪ್ಪೆಕಾಯಿ, ಒಂದೆಲಗ, ಬಾಳೆ ದಿಂಡು, ಶ್ರೀಗಂಧ ಸೊಪ್ಪು, ಅರಿಶಿನ ಕೊಂಬು, ಬಸಳೆ ಸೊಪ್ಪು, ಜೀರಿಗೆ, ಮಜ್ಜಿಗೆ ಹುಲ್ಲು, ಹಸಿ ಜಾಯಿಕಾಯಿ, ಸ್ವಾರ್ಲೆ ಸೊಪ್ಪು, ದೊಡ್ಡ ಪತ್ರೆ, ಮಸಾಲಾ ಮಜ್ಜಿಗೆ, ಕ್ಲೋವರ್‌ ಸೊಪ್ಪು, ಬಲಗಣೆ ಚಕ್ಕೆ, ಕಂಚಿಹುಳಿ, ಹುಣಸೆ ಹಣ್ಣು, ನೆಲ ನೆಲ್ಲಿ, ಪಾಲಕ್‌ ಸೊಪ್ಪು, ಸಬ್ಬಸಿಗೆ ಸೊಪ್ಪು, ಶುಂಟಿ, ಸಾಸಿವೆ, ಓಂಕಾಳು, ಜೀರಿಗೆ, ಮೆಂತೆ, ದಾಸವಾಳ ಹೂವು, ಕಾಕೆ ಸೊಪ್ಪು, ಕರಿಬೇವು, ಚಕ್ರಮುನಿ, ಶಂಖಪುಷ್ಪ, ಮಡಿಕೆ ಕಾಳಿನ ಸಲಾಡ್‌ ಜತೆಗೆ ಮಲೆನಾಡಿನ ಆಯ್ದ ತಿನಿಸು ಹಾಗೂ ಇತರ ವಸ್ತುಗಳು ಕೂಡ ಸಿಗುತ್ತವೆ.

* ಎಣ್ಣೆ ರಹಿತ ತಂಬುಳಿ ಪೂರಿ (No-Oil Tambuli Puri): ಇದು ಇಲ್ಲಿನ ಮತ್ತೊಂದು ಅದ್ಭುತ ಆವಿಷ್ಕಾರ. ಎಣ್ಣೆಯಲ್ಲಿ ಕರಿಯದ, ಆದರೆ ಅಷ್ಟೇ ರುಚಿಯಾದ ಬೇಕಿಂಗ್ ಮಾಡಿದ ಪೂರಿ ಇದು! ಯಾವುದೇ ಚಿಂತೆ ಇಲ್ಲದೆ ನೀವು ಇದನ್ನು ಸವಿಯಬಹುದು.

* ಶಾವಿಗೆ ಮತ್ತು ಕಾಯಿಹಾಲು: ಅಪ್ಪಟ ಮಲೆನಾಡಿನ ಶೈಲಿಯಲ್ಲಿ ತಯಾರಾದ ಶಾವಿಗೆಯ ಜತೆ ತಣ್ಣನೆಯ ಕಾಯಿಹಾಲು... ತಿಂದವರೇ ಅದರ ರುಚಿಯನ್ನು ಬಣ್ಣಿಸಬೇಕು!

* ಇತರ ಖಾದ್ಯಗಳು: ಬಾಳೆ ಎಲೆ ಊಟ, ಮುದ್ದೆ ಊಟ, ಅಕ್ಕಿ ರೊಟ್ಟಿ, ಆರೋಗ್ಯಕರ ಚಾಟ್ಸ್, ಕೋಕಂ ಟೀ ಹಾಗೂ ವಿವಿಧ ಬಗೆಯ ಕಷಾಯಗಳು ಇಲ್ಲಿನ ವಿಶೇಷ.

ಎಲ್ಲಿಂದ ಎಲ್ಲಿಯವರೆಗೆ?

ರೈತರ ಹೊಲದಿಂದ ನೇರವಾಗಿ 48 ಗಂಟೆಗಳ ಒಳಗೆ ಅಡುಗೆ ಮನೆಗೆ ಬರುವ ತಾಜಾ ಸಾಮಗ್ರಿಗಳೇ ತಂಬುಳಿ ಮನೆಯ ಜೀವಾಳ. ಸಾಗರದ ಮಣ್ಣಿನಿಂದ ಹುಟ್ಟಿದ 'ತಂಬುಳಿ ಮನೆ' ಈಗ ಹೆಮ್ಮರವಾಗುತ್ತಿದೆ. ಬೆಂಗಳೂರಿನಲ್ಲಿ ಐದು ಡೈನ್‌-ಇನ್‌ ಜಾಗಗಳಿವೆ: ಮಲ್ಲೇಶ್ವರಂ, ಜಯನಗರ 7ನೇ ಬ್ಲಾಕ್, ಬನಶಂಕರಿ 6ನೆಯ ಹಂತ, ಜೆ.ಪಿ. ನಗರ ಹಾಗೂ ಹಂಪಿ ನಗರ. ಕೆಲವು ಎಕ್ಸ್‌ಪ್ರೆಸ್‌ ಪಾಯಿಂಟ್‌ಗಳಿವೆ: ವಿದ್ಯಾರಣ್ಯಪುರ, ರಾಜರಾಜೇಶ್ವರಿ ನಗರ (ಆರ್.ಆರ್. ನಗರ), ಸೀತಾ ಸರ್ಕಲ್. ಆರ್ಗ್ಯಾನಿಕ್‌ ಮಂಡ್ಯ ಜತೆ ಸಹಯೋಗದಲ್ಲಿ ಜಯನಗರ 3ನೆಯ ಬ್ಲಾಕ್‌ನಲ್ಲಿ ಒಂದು ಔಟ್‌ಲೆಟ್‌ ತೆರೆಯಲಾಗಿದೆ. ಈಗ ಮೈಸೂರಿನಲ್ಲೂ ಶಾಖೆ ತೆರೆದಿರುವುದರಿಂದ ಅಲ್ಲಿನ ಜನರಿಗೂ ಈ ಸಾತ್ವಿಕ ಆಹಾರದ ರುಚಿ ಸಿಗುತ್ತಿದೆ. ಇತ್ತೀಚೆಗೆ ಮೈಸೂರಿನ ಈ ಔಟ್‌ಲೆಟ್‌ ಅನ್ನು ಸಂಸದ ಯದುವೀರ್‌ ಒಡೆಯರ್‌ ಉದ್ಘಾಟನೆ ಮಾಡಿದ್ದಾರೆ.

Untitled design - 2026-07-25T183203.148

ತಾರೆಗಳು ಮೆಚ್ಚಿದ ತಾಣ

ಸಾರ್ವಜನಿಕರು ಮಾತ್ರವಲ್ಲ ಅನೇಕ ತಾರೆಯರು ಹಾಗೂ ರಾಜಕಾರಣಿಗಳು ಕೂಡ 'ತುಂಬುಳಿ ಮನೆ'ಯ ಸವಿಯನ್ನು ಸವಿದಿದ್ದಾರೆ. ಶಿವರಾಜ್‌ಕುಮಾರ್‌, ದಿಗಂತ್‌, ಸಂಗೀತಾ ಶೃಂಗೇರಿ, ರಂಜನಿ ರಾಘವನ್‌, ಸಿಹಿಕಹಿ ಚಂದ್ರು, ಯುವ ರಾಜ್‌ಕುಮಾರ್‌, ರಾಜೇಶ್‌ ಧ್ರುವ ಸೇರಿದಂತೆ ಅನೇಕ ತಾರೆಯರು ಭೇಟಿ ನೀಡಿದ್ದಾರೆ. ಹಾಗೆಯೇ ಆರ್‌. ಅಶೋಕ್‌ ಸೇರಿದಂತೆ ಹಲವು ರಾಜಕಾರಣಿಗಳು ಭೇಟಿ ನೀಡಿದ್ದಾರೆ.

ಮುಂದಿನ ಹೆಜ್ಜೆ

ಕೇವಲ ಹೊಟೇಲ್‌ ಉದ್ಯಮಕ್ಕೆ ಮಾತ್ರ ಸೀಮಿತವಾಗದೆ, ತಂಬುಳಿಯನ್ನು ಜಾಗತಿಕ ಮಟ್ಟದಲ್ಲಿ ಒಂದು 'ಮಲೆನಾಡು ಬ್ರಾಂಡ್' ಆಗಿ ರೂಪಿಸುವುದು ಇವರ ಮುಂದಿನ ಬಹುದೊಡ್ಡ ಗುರಿಯಾಗಿದೆ. ಇದರ ಅಂಗವಾಗಿ, ರೆಡಿ ಜ್ಯೂಸ್ ಮಾದರಿಯಲ್ಲಿ ಯಾವುದೇ ರಾಸಾಯನಿಕಗಳಿಲ್ಲದೆ 6 ತಿಂಗಳ ಕಾಲ ಬಾಳಿಕೆ ಬರುವಂಥ 'ಟೆಟ್ರಾ ಪ್ಯಾಕ್'ಗಳಲ್ಲಿ ತಂಬುಳಿಯನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ತರಲು ಸಿದ್ಧತೆ ನಡೆಸಿದ್ದಾರೆ. ಹಳ್ಳಿಗಳಿಂದ ಕೇವಲ ಸೊಪ್ಪುಗಳನ್ನು ಖರೀದಿಸುವುದಷ್ಟೇ ಅಲ್ಲದೆ, ಅವುಗಳನ್ನು ಬೆಳೆಯಲು ರೈತರಿಗೆ ಉತ್ತೇಜನ ನೀಡಿ ಹೊಸ ಮಾರುಕಟ್ಟೆಯನ್ನೇ ಸೃಷ್ಟಿಸುತ್ತಿರುವ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ.

ತಂಬುಳಿ ಮನೆ ಕೇವಲ ಒಂದು ರೆಸ್ಟೋರೆಂಟ್ ಅಲ್ಲ, ಅದೊಂದು 'ಸಂಸ್ಕೃತಿಯ ಉಳಿವು'. ಯಾವತ್ತಾದರೂ ಬೆಂಗಳೂರಿನ ಅಥವಾ ಮೈಸೂರಿನ ಟ್ರಾಫಿಕ್ ನಲ್ಲಿ ಸಿಲುಕಿ, ಆಯಾಸವಾಗಿ, ಹೊಟ್ಟೆಗೆ ತಂಪಾದ, ಆರೋಗ್ಯಕರವಾದ, ಮನೆಯ ಊಟದಂತೆಯೇ ಇರುವ ಸಾತ್ವಿಕ ಊಟ ಬೇಕು ಅನ್ನಿಸಿದರೆ ನೇರವಾಗಿ 'ತಂಬುಳಿ ಮನೆ'ಗೆ ಭೇಟಿ ನೀಡಿ. "ಡಯಟ್ ಫುಡ್ ಎಂದರೆ ಬೋರ್" ಎನ್ನುವ ನಿಮ್ಮ ಕಲ್ಪನೆ ಇಲ್ಲಿ ಖಂಡಿತ ಬದಲಾಗುತ್ತದೆ.

ಒಮ್ಮೆ ಹೋಗಿ, ಬ್ರಾಹ್ಮಿ ತಂಬುಳಿಯನ್ನೋ, ಶಾವಿಗೆ ಕಾಯಿಹಾಲನ್ನೋ ಸವಿದು ಬನ್ನಿ. ನಿಮ್ಮ ಹೊಟ್ಟೆಯಷ್ಟೇ ಅಲ್ಲ, ಮನಸು ಕೂಡ ತುಂಬಿ ಬರುತ್ತದೆ. ಆ ಊಟ ನಿಮ್ಮ ಅಜ್ಜಿಯ ಕೈರುಚಿಯನ್ನು ಖಂಡಿತ ನೆನಪಿಸುತ್ತದೆ!

Untitled design (64)

ಕೊರೊನಾ ಸಮಯದಲ್ಲಿ ನಮ್ಮೂರು ಸಾಗರದಲ್ಲಿ ಇದ್ದಾಗ ಒಂದು ಯೋಚನೆ ಬಂತು. ನಮ್ಮಲ್ಲಿ ತಂಬುಳಿಯಂಥ ಅದ್ಭುತ ಪ್ರಾಡಕ್ಟ್ ಇದೆ. ಅದನ್ನು ಯಾಕೆ ಜನರಿಗೆ ನೀಡಬಾರದು ಅಂತ ಅನಿಸಿತು. ನಂತರ ಅದನ್ನು ಯಾವ ರೀತಿ ಮಾರುಕಟ್ಟೆಗೆ ತರಬಹುದು ಎಂದು ತಯಾರಿ ನಡೆಸಿ ಮೊದಲು ಸಾಗರದಲ್ಲಿ ಸಣ್ಣ ಅಂಗಡಿ ಶುರುಮಾಡಿದೆವು. ಬಳಿಕ ಇದನ್ನು ಹೊರಗೂ ಕೊಂಡೊಯ್ಯಬೇಕು ಅಂತನಿಸಿ ಬೆಂಗಳೂರಿನಲ್ಲಿ ಮೊದಲ ಔಟ್‌ಲೆಟ್ ಶುರು ಮಾಡಿದೆವು. ಈಗ ಜನರ ಪ್ರೀತಿಯಿಂದ ಈ ಮಟ್ಟಕ್ಕೆ ಬೆಳೆದು ನಿಂತಿದೆ.

- ಕಾರ್ತಿಕ್ ಎಚ್. ಶ್ರೀಧರ್

ಸಂಸ್ಥಾಪಕ, ತಂಬುಳಿ ಮನೆ

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ