ಯಾರಿಗ್ರೀ ಬೇಕು ನಿಮ್ಮ ಸರ್ಟಿಫಿಕೇಟು ಎನ್ನುವ ದೇಶಗಳೂ ಇವೆ!
ಮೊನ್ನೆ ತಾನೇ ಮುಗಿದ ವರ್ಷದವರೆಗೂ (2025ರವರೆಗೂ) 170 ದೇಶಗಳ 1248 ಸ್ಥಳಗಳನ್ನು, 952 ಸಂಸ್ಕೃತಿಗಳನ್ನು, 231 ಜೀವ ವೈವಿಧ್ಯವುಳ್ಳ ಕಾಡು ಪ್ರದೇಶಗಳನ್ನು, 40 ಹೆಸರಿಸಲು ಆಗದ ವಿಶೇಷತೆಗಳನ್ನು ಯುನೆಸ್ಕೋ ಪಾರಂಪರಿಕ ಮೌಲ್ಯಗಳು ಎಂದು ಗುರುತಿಸಿದೆ. ಈ ಪಟ್ಟಿಯಲ್ಲಿ ತಮ್ಮ ಹೆಸರನ್ನೂ ಸೇರಿಸಿಕೊಳ್ಳಲು ಇನ್ನೂ ಹಲವಾರು ದೇಶಗಳು ಪೈಪೋಟಿ ನಡೆಸಿವೆ. ಆದರೆ ಅದು ಅಷ್ಟು ಸುಲಭವಲ್ಲ.
- ಅಂಜಲಿ ರಾಮಣ್ಣ
ಬಹಳಷ್ಟು ಬಾರಿ ಹಲವಾರು ವಿಷಯಗಳು ಅವುಗಳ ಶಾರ್ಟ್ ಫಾರ್ಮ್ ನಲ್ಲೇ ಹೆಚ್ಚು ಚಾಲ್ತಿಗೆ ಬಂದಿರುತ್ತವೆ. ಹಾಗಾಗಿ ಮೂಲ ಕಾರಣದ ಅಥವಾ ಸಂಸ್ಥೆಯ, ಸಂಘಟನೆಯ ಮೂಲ ಹೆಸರೇ ಮರೆತು ಹೋಗಿರುತ್ತೇವೆ. ಅದರಲ್ಲಿ ಯುನೆಸ್ಕೋ ಹೆಸರು ಪ್ರಮುಖವಾದದ್ದು. ಬಹುಶಃ ಇದು ಯಾವ ಸಂಸ್ಥೆ, ಯಾಕಾಗಿ ಇದೆ, ಏನು ಕೆಲಸ ಮಾಡುತ್ತಿದೆ ಎನ್ನುವ ಮಾಹಿತಿ ಹೆಚ್ಚಿನ ಜನರಿಗೆ ಇರದು. ಪ್ರವಾಸಿಯೊಬ್ಬ ತಿಳಿದುಕೊಳ್ಳಲೇಬೇಕಾದ್ದು ಆದರೂ ತಿಳಿದುಕೊಳ್ಳದೆಯೇ ಸುಮ್ಮನಾಗುವ ವಿಷಯ UNESCO. ಅಬ್ಬಬ್ಬಾ ಎಂದರೆ ಹೋದೆಡೆಯಲೆಲ್ಲಾ ಯುನೆಸ್ಕೋ ಪಾರಂಪರಿಕ ತಾಣ ಎನ್ನುವ ಫಲಕ ಹೊತ್ತ ಜಾಗಗಳನ್ನು ಭೇಟಿ ಮಾಡಿ ಬಂದಾಗಿರುತ್ತದೆ ಅಷ್ಟೆ. ಆದರೆ ಈ ಸಂಸ್ಥೆಯ ಉದ್ದೇಶ, ಅದು ಮಾಡಿರುವ, ಮಾಡುತ್ತಿರುವ ಕೆಲಸಗಳ ಬಗ್ಗೆ ತಿಳಿದುಕೊಳ್ಳುವುದೂ ಒಂದು ಪ್ರವಾಸದಷ್ಟೇ ಹಿತಾನುಭವ.
ಇದನ್ನೂ ಓದಿ: ಪ್ರವಾಸಿಯಾಗಿ ಹೋಗಿ ರೈತರಾಗಿ ಬನ್ನಿ!
United Nations Educational Scientific Cultural Organisation (UNESCO) ಎನ್ನುವುದು ವಿಶ್ವಸಂಸ್ಥೆಯ ಒಂದು ಅಂಗ ಸಂಸ್ಥೆ. ಅದರ ಹೆಸರನ್ನು ಓದುವಾಗ ಅದರ ಸರ್ವ ಮಾಹಿತಿಯೂ ವಿಧಿತವಾದಂತೆ ಎನಿಸುತ್ತದೆ. ಆದರೆ ಆ ಸಂಸ್ಥೆಯ ರಚನೆ ಮತ್ತು ಉದ್ದೇಶವನ್ನು ತಿಳಿದುಕೊಳ್ಳುವುದೇ ಒಂದು ದೇಶವನ್ನು ವಿವರವಾಗಿ ಸುತ್ತಿ ಬಂದಂತೆ. ’ಯುದ್ಧವು ಮನುಷ್ಯನ ಮನಸ್ಸಿನಲ್ಲಿಯೇ ಮೊದಲು ಆರಂಭವಾಗುವುದರಿಂದ ಶಾಂತಿಯೂ ಮೊದಲು ಅಲ್ಲಿಯೇ ಸ್ಥಾಪಿತಗೊಳ್ಳಬೇಕು’ ಎನ್ನುವ ಚರ್ಚೆ ವಿಶ್ವಸಂಸ್ಥೆಯಲ್ಲಿ ಜೋರಾದಾಗ ಆ ಉದ್ದೇಶವನ್ನು ಸಾಕಾರಗೊಳಿಸಲು 16 ಏಪ್ರಿಲ್ 1945ರಲ್ಲಿ ಯುನೆಸ್ಕೋ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಶಿಕ್ಷಣ, ವಿಜ್ಞಾನ, ಸಂಸ್ಕೃತಿಗಳ ಸಂವಹನ ಮತ್ತು ಪ್ರಚಾರ ಹಾಗೂ ಹಂಚಿಕೆಯ ಮೂಲಕ ಮಾನವೀಯತೆಯನ್ನು ಬಲಪಡಿಸಬೇಕು ಎನ್ನುವ ಆಶಯದಿಂದ ಕೆಲಸ ಮಾಡುತ್ತಿರುವ ಅದರಂತೆಯೇ ಗೌರವವನ್ನು ಉಳಿಸಿಕೊಂಡಿರುವ ವಿಶೇಷ ಸಂಸ್ಥೆ ಯುನೆಸ್ಕೋ.

ಇವತ್ತಿಗೆ ಜಗತ್ತಿನ 194 ದೇಶಗಳು ಈ ಸಂಸ್ಥೆಯ ಸದಸ್ಯತ್ವವನ್ನು ಪಡೆದಿವೆ. ಸರ್ಕಾರ ಸರ್ಕಾರಗಳು ಮಾತುಕತೆಯ ಮೂಲಕ ಒಪ್ಪಂದಗಳ ಮುಖಾಂತರ ತಂದುಕೊಳ್ಳುವ ಶಾಂತಿ ಮತ್ತು ಬೆಳವಣಿಗೆ ಒಂದು ರಾಜಕೀಯ ಅಷ್ಟೇ. ಆದರೆ ಮನುಷ್ಯ ಮನುಷ್ಯನ ನಡುವೆ ಶಾಂತಿ ಸೌಹಾರ್ದತೆ ಏರ್ಪಡಬೇಕು ಎಂದರೆ ಪರಸ್ಪರರ ಬದುಕಿನ ಘನತೆಯನ್ನು ಅರಿತುಕೊಳ್ಳಬೇಕು. ಇಂಥ ಅರಿವು ಮೂಡಿಸುವತ್ತ ಕೆಲಸ ಮಾಡುತ್ತಿದೆ ಯುನೆಸ್ಕೋ. ’ಅರೆ, ಒಂದಷ್ಟು ಕಟ್ಟಡಗಳನ್ನೋ ಕಾಡುಗಳನ್ನೋ ಪಾರಂಪರಿಕ ತಾಣ ಎಂದು ಗುರುತಿಸಿಬಿಟ್ಟರೆ ಸಮಾಜದಲ್ಲಿ ಶಾಂತಿ ಸಮಾಧಾನ ತಂದಂತೆ ಆಗುವುದೇ?’ ಎನ್ನುವ ಅನುಮಾನಕ್ಕೆ ನಿಸ್ಸಂದಿಗ್ಧ ದಿಕ್ಕು ತೋರುತ್ತದೆ ಯುನೆಸ್ಕೋದ ಕೆಲಸ. ಒಬ್ಬರು ಮತ್ತೊಬ್ಬರ ಬದುಕಿನ ಶೈಲಿ, ಆಚರಣೆ, ಪದ್ಧತಿ, ವಿಧಾನಗಳನ್ನು ತಿಳಿಯದೆಯೇ ಇರುವ ಮೌಢ್ಯವೇ ಹಲವು ಕಲಹಗಳ ಹಿಂದಿನ ಅಸಲಿ ಕಾರಣವಾಗಿರುತ್ತದೆ. ಅದಕ್ಕೇ ಒಬ್ಬೊಬ್ಬರದ್ದೇ ಸಂಸ್ಕೃತಿಯನ್ನು ಜಗತ್ತಿಗೇ ಪರಿಚಯ ಮಾಡಿಕೊಟ್ಟು ತನ್ಮೂಲಕ ಸ್ನೇಹಮಯಿ ಸಮಾಜವನ್ನು ನಿರ್ಮಾಣ ಮಾಡುವ ಘನ ಇರಾದೆ ಇಟ್ಟುಕೊಂಡಿದೆ ಈ ಸಂಸ್ಥೆ.
ಗಂಭೀರ ಇತಿಹಾಸವುಳ್ಳ ಅಥವಾ ವಿಶಿಷ್ಟ ವಿನ್ಯಾಸ ಹೊಂದಿರುವ ಮತ್ತು ಸಹಜವಾಗಿ ಉದ್ಭವಿಸಿರುವ ಒಂದಷ್ಟು ಕಟ್ಟಡಗಳನ್ನು ಪಾರಂಪರಿಕ ತಾಣ ಎಂದು ಘೋಷಿಸಿ ಬೋರ್ಡ್ ತಗುಲಿ ಹಾಕುವುದಷ್ಟೇ ಅದರ ಕೆಲಸವಲ್ಲ. ಪ್ರಾಕೃತಿಕ ಅದ್ಭುತಗಳನ್ನು, ಬ್ರಹ್ಮಾಂಡದ ಶಾಂತಿಗೆ ಅಪರಿಮಿತ ಕೊಡುಗೆ ನೀಡಬಲ್ಲ ಸಾಂಸ್ಕೃತಿಕ ಕ್ಯಾನ್ವಾಸ್‍ಗಳನ್ನು ಗುರುತಿಸುವುದು ಕೂಡ ಯುನೆಸ್ಕೋದ ಕೆಲಸ. ಕಟ್ಟಡ, ಕಾಡುಗಳ ಜೊತೆಗೆ ಗಿಡಮೂಲಿಕೆ, ಭಾಷೆ, ವಿಶೇಷ ಆಹಾರ ಪದ್ಧತಿ, ಸಂಗೀತ, ನೃತ್ಯ, ಕಾವ್ಯ ಸಾಹಿತ್ಯ ಪ್ರಕಾರಗಳು, ಕೆಲವು ಹಬ್ಬಗಳನ್ನು ಒಮ್ಮೊಮ್ಮೆ ನಗರಗಳನ್ನೂ ಯುನೆಸ್ಕೋ ಪಾರಂಪರಿಕ ಮೌಲ್ಯ ಉಳ್ಳದ್ದು ಎಂದು ಗುರುತಿಸಿ ಉದ್ಘೋಷಿಸಿದೆ. ಹಿಂದೂ ಮತ್ತು ಇಸ್ಲಾಂ ಶೈಲಿಯ ಅದ್ಭುತ ಸಮ್ಮಿಳಿತವನ್ನು ಹೊಂದಿರುವ ಅಹಮದಾಬಾದ್ ನಗರವನ್ನು 2017ರಲ್ಲಿ ವಿಶ್ವದ ಮೊದಲ ಪಾರಂಪರಿಕ ನಗರ ಎಂದು ಗುರುತಿಸಲಾಗಿದೆ. ಲಖನೌ ನಗರದ ಅವಧಿ ಆಹಾರ ತಯಾರಿಕೆ ವಿಧಾನವನ್ನು, ಕೊಲ್ಕತ್ತಾದ ದುರ್ಗಾ ಪೂಜೆ, ಭಾರತದ ದೀಪಾವಳಿ, ಹಿಮಾಲಯದ ತಪ್ಪಲಿನ ಜನ ಆಚರಿಸುವ ಮುಖವಾಡಗಳ ಹಬ್ಬ, ತಮಿಳು, ಸಂಸ್ಕೃತ ಭಾಷೆಗಳು, ರಾಮಾಯಣ, ಮಹಾಭಾರತ ಕಾವ್ಯಗಳು, ಗುಜರಾತಿ ಗರ್ಬಾ ನೃತ್ಯ ಪ್ರಕಾರ ಮತ್ತು ಈಶಾನ್ಯ ರಾಜ್ಯಗಳ ಜಾನಪದ ನೃತ್ಯಗಳನ್ನು ಹಾಗೂ ಕುಂಭಮೇಳವನ್ನು ಪಾರಂಪರಿಕ ಮಹತ್ವವುಳ್ಳ ಜರುಗುವಿಕೆಗಳು ಎಂದು ಘೋಷಿಸಲಾಗಿದೆ. ಇವುಗಳನ್ನು ತಲೆಮಾರುಗಳಿಗೆ ತಲುಪಿಸುವುದು ವಿಶ್ವದ ನಿರಂತರತೆಗೆ ಕೊಡುವ ಕೊಡುಗೆಯಾಗಿದೆ.

ಮೊನ್ನೆ ತಾನೇ ಮುಗಿದ ವರ್ಷದವರೆಗೂ (2025ರವರೆಗೂ) 170 ದೇಶಗಳ 1248 ಸ್ಥಳಗಳನ್ನು, 952 ಸಂಸ್ಕೃತಿಗಳನ್ನು, 231 ಜೀವ ವೈವಿಧ್ಯವುಳ್ಳ ಕಾಡು ಪ್ರದೇಶಗಳನ್ನು, 40 ಹೆಸರಿಸಲು ಆಗದ ವಿಶೇಷತೆಗಳನ್ನು ಯುನೆಸ್ಕೋ ಪಾರಂಪರಿಕ ಮೌಲ್ಯಗಳು ಎಂದು ಗುರುತಿಸಿದೆ. ಈ ಪಟ್ಟಿಯಲ್ಲಿ ತಮ್ಮ ಹೆಸರನ್ನೂ ಸೇರಿಸಿಕೊಳ್ಳಲು ಇನ್ನೂ ಹಲವಾರು ದೇಶಗಳು ಪೈಪೋಟಿ ನಡೆಸಿವೆ. ಆದರೆ ಅದು ಅಷ್ಟು ಸುಲಭವಲ್ಲ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಆಯ್ಕೆ ಮಾಡಿರುವ 21 ದೇಶಗಳು ಯುನೆಸ್ಕೋವಿನ ಮೂಲ ಸಮಿತಿ, ‘The World Heritage Committee’ಯಾಗಿರುತ್ತದೆ. ದೇಶಗಳು ತಮ್ಮ ಹೆಗ್ಗಳಿಕೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿ ಕೊಡಬೇಕು ಎಂದು ಅರ್ಜಿ ಸಲ್ಲಿಸಿದಾಗ ಆ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ, ಆಳವಾದ ಅಧ್ಯಯನ ನಡೆಸಿ ಯೋಗ್ಯವೆನಿಸಿದಲ್ಲಿ ಪಾರಂಪರಿಕ ಪಟ್ಟ ನೀಡಲಾಗುತ್ತದೆ.
’ಕಷ್ಟಕ್ಕಿಲ್ಲ ಸುಖಕ್ಕಿಲ್ಲ ನೀನೂ ಒಬ್ಬ ನೆಂಟ’ ಎನ್ನುವ ಹಾಗೆ ಇಂಥ ಪದವಿಗಳನ್ನು ಪಡೆದುಕೊಂಡರೆ ಏನು ಮಹಾ ಪ್ರಯೋಜನ ಎಂದುಕೊಳ್ಳುವವರಿಗೆ ’ತಲ್ಲಣಿಸದಿರು ತಾಳು ತಾಳು ಮನವೇ’ ಎನ್ನುತ್ತದೆ World Heritage Fund. ಹೀಗೆ ಪಾರಂಪರಿಕ ತಾಣ ಎಂದು ಗುರುತಿಸಿದರೆ ಯುನೆಸ್ಕೋ ಅಂಥ ಸ್ಥಳಗಳನ್ನು ಹಾಗೂ ಮೌಲ್ಯಗಳನ್ನು ನಶಿಸಿಹೋಗದಂತೆ ರಕ್ಷಿಸಿಕೊಳ್ಳಲು, ತಾಂತ್ರಿಕತೆಗೆ ಹೊಂದುವಂತೆ ಉತ್ತಮಗೊಳಿಸಿಕೊಳ್ಳಲು, ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಿ ಆದಾಯದ ಮೂಲ ಮಾಡಿಕೊಳ್ಳಲು, ಪುನರುಜ್ಜೀವನಗೊಳಿಸಿಕೊಳ್ಳಲು, ಒಟ್ಟಾಗಿ ನಿರ್ವಹಣೆ ಮಾಡಲು ಹಣ ಸಹಾಯ ನೀಡುತ್ತದೆ.
ಮತ್ತಿನ್ನೇನು? ಹಣ ಬೆಂಬಲ ದೊರಕಲಿದೆ ಎಂದಮೇಲೆ ಹೆಚ್ಚು ಹೆಚ್ಚು ಉತ್ಖನನ ನಡೆಸಿ ಇದು ಪರಂಪರೆ ಎಂದು ಗುರುತಿಸಿಕೊಳ್ಳಬಹುದಲ್ಲ ಎಂದು ಆತುರ ತೋರುವ ಮುನ್ನ ಅದಕ್ಕಿರುವ ನಿಯಮಗಳನ್ನು ಗಮನಿಸಲೇಬೇಕು. ಯುನೆಸ್ಕೋ ಒಮ್ಮೆ ಯಾವುದೇ ಸ್ಥಳವನ್ನು ಅಥವಾ ಮೌಲ್ಯವನ್ನು ಪಾರಂಪರಿಕ ಎಂದು ದಾಖಲಿಸಿಬಿಟ್ಟರೆ ಅವುಗಳ ಮೂಲ ದೇಶಗಳು ಅವುಗಳ ಮೇಲೆ ತಮ್ಮ ಸಾರ್ವಭೌಮತ್ವವನ್ನು ಕಳೆದುಕೊಳ್ಳುತ್ತವೆ. ತಮ್ಮ ಮನಸ್ಸಿಗೆ ಬಂದ ಹಾಗೆ ಅವುಗಳನ್ನು ಪರಿವರ್ತಿಸುವ, ರಾಜಕೀಯದಾಟಕ್ಕೆ ಅವುಗಳನ್ನು ಒಳಪಡಿಸುವ ಅಧಿಕಾರವನ್ನು ಕಳೆದುಕೊಳ್ಳುತ್ತವೆ. ಕೆಲವು ಬಾರಿ ಸ್ಥಳೀಯತೆಯನ್ನೂ ಕಳೆದುಕೊಳ್ಳುವ ಅಪಾಯ ಇದೆ. ಆ ಸ್ಥಳಗಳಲ್ಲಿ ಅಥವಾ ವಿಷಯಗಳಲ್ಲಿ ಏನೇ ಮಾಡಬೇಕು ಎಂದರೂ ಯುನೆಸ್ಕೋದ ಲಿಖಿತ ಒಪ್ಪಿಗೆಯ ಅವಶ್ಯಕತೆ ಇರುತ್ತದೆ. ಅದನ್ನು ಪಡೆಯುವುದು ಒಂದು ದೊಡ್ಡ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ. ಅದಕ್ಕಾಗಿ ಒಂದಷ್ಟು ದೇಶಗಳು ತಮಗೆ ಇಂಥ ಗುರುತಿಸುವಿಕೆ ಬೇಡ ಎಂದುಬಿಡುತ್ತಾರೆ. ಅಷ್ಟೇ ಅಲ್ಲ ಯುನೆಸ್ಕೋ ಮೂಲಕ ಪ್ರಚಾರಕ್ಕೆ ಬಂದಾಗ ಪ್ರವಾಸಿಗರ ಸಂಖ್ಯೆ ಮಿತಿಮೀರಿ ಆ ಸ್ಥಳದ ಮೂಲಧಾತುವಿಗೇ ಅಪಾಯ ಬರಬಹುದು ಎನ್ನುವ ಕಾರಣವೂ ಇದೆ.

ಈವರೆಗೂ ಅತ್ಯಂತ ಹೆಚ್ಚು ಪಾರಂಪರಿಕ ತಾಣಗಳನ್ನು ಹೊಂದಿರುವ ದೇಶ ಎನ್ನುತ್ತಾ ಹೆಮ್ಮೆಯಿಂದ ಬೀಗಬಹುದಾಗಿದ್ದ ಇಟಲಿಯು ಇದರ ಬಗ್ಗೆ ಯಾವುದೇ ತುತ್ತೂರಿ ಊದಿಕೊಳ್ಳದೆ ತಣ್ಣಗೆ ಕುಳಿತಿದೆ. ಗರ್ವ ಪಡಲು ಅರ್ಹತೆಯೇ ಇಲ್ಲದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನಗಳಲ್ಲೂ ಕೆಲವು ಸ್ಥಳಗಳನ್ನು ಗುರುತಿಸಲಾಗಿದೆ. ಪ್ರಪಂಚದಲ್ಲಿ ಈವರೆಗೂ ಭಾರತ ಮತ್ತು ನೇಪಾಳ ದೇಶಗಳು ಮಾತ್ರ ‘Heritage Tourism’ ಏರ್ಪಡಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಪಟ್ಟಿಯಲ್ಲಿ ಸೇರುವುದೇ ಅತ್ಯುಚ್ಚ ಗೌರವ ಎಂದು ಭಾವಿಸಿರುವ ಎಲ್ಲ ದೇಶಗಳ ನಡುವೆ ಕತಾರ್ ಮತ್ತು ಜರ್ಮನಿ ದೇಶಗಳು ಮಾತ್ರ ಈಗಾಗಲೇ ತಮಗೆ ಸಿಕ್ಕಿರುವ ’ಪಾರಂಪರಿಕ’ ಎನ್ನುವ ಪುರಸ್ಕಾರವನ್ನು ಹಿಂದಿರುಗಿಸಲು ತುದಿಗಾಲಿನಲ್ಲಿ ನಿಂತಿವೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಳವಣಿಗೆ ಕಂಡುಕೊಳ್ಳಲು ಈ ಪದವಿ ಅಡ್ಡಗಾಲು ಹಾಕುತ್ತಿದೆ ಹಾಗಾಗಿ ತಮ್ಮನ್ನು ಈ ಪಟ್ಟಿಯಿಂದ ಕೈಬಿಡಿ ಎನ್ನುತ್ತಿವೆ. ಅದಕ್ಕಾಗಿ ಯುನೆಸ್ಕೋ ಜೊತೆಗೆ ಪತ್ರ ವ್ಯವಹಾರ ಮಾಡಿ ಕಾದು ಕುಳಿತಿವೆ. ಯುನೆಸ್ಕೋದ ಅಗಾಧ ವ್ಯಾಪ್ತಿಯನ್ನು ತಿಳಿದುಕೊಂಡ ನಂತರ ಲಕ್ಕುಂಡಿಯನ್ನು ಪಾರಂಪರಿಕ ತಾಣವೆಂದು ಗುರುತಿಸಿಕೊಳ್ಳಲು ಯಾಕಾಗಿ ಹೆಣಗುತ್ತಿದ್ದೇವೆ ಮತ್ತು ಪಶ್ಚಿಮಘಟ್ಟದ ಕಾಡುಗಳನ್ನು ಈ ಪಟ್ಟಿಗೆ ಸೇರಿಸಬಾರದೆಂದು ಯಾಕಾಗಿ ಹೋರಾಡಿದೆವು ಎಂದು ಈಗ ಸ್ಪಷ್ಟವಾಗಿ ಅರ್ಥವಾಗುತ್ತಿದೆ.