Saturday, April 18, 2026
Saturday, April 18, 2026

ಒಳ್ಳೆಯದನ್ನು ಅನುಕರಿಸುವುದು ತಪ್ಪಲ್ಲ

ಕೇರಳ ತಿಂಗಳಿಂದ ತಿಂಗಳಿಗೆ, ವರ್ಷದಿಂದ ವರ್ಷಕ್ಕೆ ಪ್ರವಾಸೋದ್ಯಮದಿಂದ ಬರುವ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಹೆಚ್ಚು ಹೆಚ್ಚು ಪ್ರವಾಸಿಗಳನ್ನು ಬರಮಾಡಿಕೊಳ್ಳುತ್ತಲೇ ಇದೆ. ಅದದೇ ಸ್ಥಳಗಳಿಗೆ ಪರರಾಜ್ಯಗಳಿಂದ ಪ್ರವಾಸಿಗಳನ್ನು ಮತ್ತೆ ಮತ್ತೆ ಕರೆಸಿಕೊಳ್ಳಬೇಕು ಅಂದರೆ, ಪ್ರತಿ ಬಾರಿ ಹೊಸತೇನನ್ನೋ ನೀಡುವ ಆಸೆ ಹುಟ್ಟಿಸಲೇಬೇಕು. ಈ ನಿಟ್ಟಿನಲ್ಲಿ ಕೇರಳ ಬಹಳವೇ ಕುಶಾಗ್ರಮತಿ ಅನ್ನಬಹುದು. ಅನುಭವ ಪ್ರವಾಸ ಇತ್ತೀಚಿನ ಹೊಸ ಮಂತ್ರ. ಆ ಮಂತ್ರಕ್ಕೊಂದು ಸ್ಲೋಗನ್ ಕೊಟ್ಟಿದ್ದು ಕೇರಳ ಪ್ರವಾಸೋದ್ಯಮ. ಟ್ರಾವೆಲ್ ನೌ-ಪೋಸ್ಟ್ ಲೇಟರ್- ಇದು ಕೇರಳದ ಅನುಭವ ಪ್ರವಾಸದ ಹೊಸ ಸ್ಲೋಗನ್.

ಪ್ರತಿ ತಂದೆತಾಯಂದಿರೂ ಮಕ್ಕಳನ್ನು ತಿದ್ದುವಾಗ, ನೆರೆಮನೆಯ ಜಾಣನನ್ನು ಉದಾಹರಿಸುವುದು ವಾಡಿಕೆ. ಅದು ತಪ್ಪೋ ಸರಿಯೋ ಎಂಬ ಮನೋವೈಜ್ಞಾನಿಕ ತರ್ಕ ಸದ್ಯಕ್ಕೆ ಬದಿಯಲ್ಲಿಡೋಣ. ಧನಾತ್ಮಕವಾಗಿ ನೋಡುವುದಾದರೆ, ಜಾಣನನ್ನು ಮಾದರಿಯಾಗಿ ತೋರಿಸಿ ಉತ್ತೇಜಿಸುವುದು ತಪ್ಪಂತೂ ಅಲ್ಲ. ಒಳ್ಳೆಯದು ಎಲ್ಲಿಂದ ಬಂದರೂ ಸ್ವೀಕರಿಸೋಣ ಎಂಬ ಮನೋಭಾವ ಇದ್ದಾಗಲೇ ಬೆಳವಣಿಗೆ ಸಾಧ್ಯ. ಕರ್ನಾಟಕ ಮಾತ್ರವಲ್ಲ ಇಡೀ ಭಾರತದ ಪ್ರವಾಸೋದ್ಯಮ, ಭಾರತದ್ದೇ ಭಾಗವಾಗಿರುವ ಕೇರಳದಿಂದ ಕಲಿಯುವುದು ಸಾಕಷ್ಟಿದೆ. ಪ್ರತಿ ದಿನಕ್ಕೊಂದು ಹೊಸ ಮಾರ್ಕೆಟಿಂಗ್ ಐಡಿಯಾ, ಹೊಸ ಮಾದರಿಯ ಪ್ರವಾಸೋದ್ಯಮದ ಪರಿಚಯ, ಸಸ್ಟೇನೆಬಲ್ ಮತ್ತು ಆಕ್ಸೆಸಿಬಲ್ ಟೂರಿಸಂಗಾಗಿ ಅದು ಕೈಗೊಳ್ಳುವ ಕಾರ್ಯಕ್ರಮಗಳು ಎಲ್ಲವೂ ಅನುಕರಣೀಯ. ಪ್ರಕೃತಿಯ ಪ್ರತಿ ಸವಾಲುಗಳನ್ನೂ ಲಾಭವನ್ನಾಗಿ ಪರಿವರ್ತಿಸಿಕೊಳ್ಳುವ ಗುಣ ಕೇರಳ ಪ್ರವಾಸೋದ್ಯಮದ ಮತ್ತೊಂದು ಪ್ಲಸ್ ಪಾಯಿಂಟ್. ಇಂಥವುಗಳನ್ನು ನೋಡಿಯೂ ಮೈಗೂಡಿಸಿಕೊಳ್ಳದಿದ್ದರೆ ಅದಕ್ಕೆ ಕ್ಷಮೆ ಇಲ್ಲ.

ಇದನ್ನೂ ಓದಿ: ಸರಕಾರದ ಸಹಕಾರವಿದೆ. ಕಾಶಿಗೆ ಹೋಗಿಬನ್ನಿ

ಕೇರಳ ತಿಂಗಳಿಂದ ತಿಂಗಳಿಗೆ, ವರ್ಷದಿಂದ ವರ್ಷಕ್ಕೆ ಪ್ರವಾಸೋದ್ಯಮದಿಂದ ಬರುವ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಹೆಚ್ಚು ಹೆಚ್ಚು ಪ್ರವಾಸಿಗಳನ್ನು ಬರಮಾಡಿಕೊಳ್ಳುತ್ತಲೇ ಇದೆ. ಅದದೇ ಸ್ಥಳಗಳಿಗೆ ಪರರಾಜ್ಯಗಳಿಂದ ಪ್ರವಾಸಿಗಳನ್ನು ಮತ್ತೆ ಮತ್ತೆ ಕರೆಸಿಕೊಳ್ಳಬೇಕು ಅಂದರೆ, ಪ್ರತಿ ಬಾರಿ ಹೊಸತೇನನ್ನೋ ನೀಡುವ ಆಸೆ ಹುಟ್ಟಿಸಲೇಬೇಕು. ಈ ನಿಟ್ಟಿನಲ್ಲಿ ಕೇರಳ ಬಹಳವೇ ಕುಶಾಗ್ರಮತಿ ಅನ್ನಬಹುದು. ಅನುಭವ ಪ್ರವಾಸ ಇತ್ತೀಚಿನ ಹೊಸ ಮಂತ್ರ. ಆ ಮಂತ್ರಕ್ಕೊಂದು ಸ್ಲೋಗನ್ ಕೊಟ್ಟಿದ್ದು ಕೇರಳ ಪ್ರವಾಸೋದ್ಯಮ. ಟ್ರಾವೆಲ್ ನೌ-ಪೋಸ್ಟ್ ಲೇಟರ್- ಇದು ಕೇರಳದ ಅನುಭವ ಪ್ರವಾಸದ ಹೊಸ ಸ್ಲೋಗನ್. ಫೊಟೋ,ಸೆಲ್ಫಿ,ವಿಡಿಯೋ,ರೀಲ್ಸ್ ಇವೆಲ್ಲ ಮಾಡ್ತಾ ಕೂತರೆ ಪ್ರವಾಸವನ್ನು, ಬಂದಿರುವ ಜಾಗವನ್ನು ಅನುಭವಿಸುವುದು ಯಾವಾಗ ಎಂದು ಪ್ರಶ್ನಿಸುತ್ತಲೇ, ಇದೆಲ್ಲವನ್ನು ಬದಿಗಿಟ್ಟು ನೆಮ್ಮದಿಯಾಗಿ ಪ್ರವಾಸ ಮಾಡಲು ಹೇಳುತ್ತಿದೆ. ಪ್ರವಾಸದ ಪ್ರತಿ ಸಂತಸ, ಹಿತವಾದ ನೋವು, ಸವಾಲು ಎಲ್ಲವನ್ನೂ ಪೂರ್ತಿಪೂರ್ತಿಯಾಗಿ ಅನುಭವಿಸಿ. ಪ್ರವಾಸ ಮುಗಿಸಿ ಹೋದನಂತರ ನೀವೇನು ಪೋಸ್ಟ್ ಮಾಡಬೇಕೆಂದಿದ್ದೀರೋ ಮಾಡಿ. ಫೊಟೋಗಳಿಗೇನಂತೆ, ಅವು ಗೂಗಲ್ ನಲ್ಲೇ ಸಿಗುತ್ತವೆ ಅನ್ನುತ್ತದೆ ಕೇರಳ ಪ್ರವಾಸೋದ್ಯಮ. ಸತ್ಯದ ಮಾತು. ನಾವು ಫೊಟೋ, ರೀಲ್ಸ್ ಇತ್ಯಾದಿಗಳನ್ನು ಮಾಡಬಹುದು, ಕ್ಷಣಕ್ಷಣದ ಮಾಹಿತಿ ನೀಡುತ್ತಾ ಪೋಸ್ಟ್ ಕೂಡ ಮಾಡಬಹುದು. ಆದರೆ ಅವ್ಯಾವುವೂ ಪೂರ್ಣಾನುಭವ ಆಗಿರುವುದೇ ಇಲ್ಲ. ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾದ ಪ್ರಭಾವದಲ್ಲಿ ಪ್ರವಾಸಾನುಭವ ಕಳೆದುಹೋಗುತ್ತದೆ. ಆದರೆ ಸಂಪೂರ್ಣವಾಗಿ ಪ್ರವಾಸವನ್ನು ಬರಿಗೈಯಲ್ಲಿ, ಬರಿಗಣ್ಣಿನಲ್ಲಿ ಅನುಭವಿಸಿ ಬಂದು ಬರೆಯುವುದು ಒಂದು ಅದ್ಭುತ ಪುಸ್ತಕವಾಗುತ್ತದೆ. ಕೇರಳದ ಈ ಯೋಜನೆಯ ಹಿಂದೆ ಇತರ ಕಾರಣಗಳೂ ಇವೆ. ಓವರ್ ಟೂರಿಸಂ ಆಗಬಾರದು ಎಂಬುದು ಒಂದು ಕಾರಣವಾಗಿದ್ದರೆ, ಜವಾಬ್ದಾರಿಯುತ ಪ್ರವಾಸೋದ್ಯಮ ರೂಪುಗೊಳ್ಳಬೇಕು ಎಂದಾದಲ್ಲಿ ಸೋಷಿಯಲ್ ಮೀಡಿಯಾ ಪ್ರವಾಸಿಗಳಿಗಿಂತ ಗಂಭೀರ ಪ್ರವಾಸಿಗರನ್ನು ಸೆಳೆಯಬೇಕು ಎಂಬುದು ಮತ್ತೊಂದು ಕಾರಣ. ಜತೆಗೆ, ಕೆಲವು ಜಾಗಗಳನ್ನು ಕ್ಯಾಮೆರಾಗಳಲ್ಲಿ ಅಥವಾ ಮಾತುಗಳಲ್ಲಿ ವರ್ಣಿಸಲಾಗುವುದಿಲ್ಲ, ಹೀಗಾಗಿ ಖುದ್ದು ಬಂದು ನೋಡಬೇಕು ಎಂಬ ಪರಿಸ್ಥಿತಿ ನಿರ್ಮಾಣ ಮಾಡುವುದು ಮತ್ತೊಂದು ಜಾಣ ಉದ್ದೇಶ. ಈ ಥರದ್ದೊಂದು ಅನುಭವ ಪ್ರವಾಸ ರೂಪಿಸಿರುವ ಕೇರಳಕ್ಕೆ ಇದರಿಂದಾಗಿ ಶೇಕಡಾವಾರು ಲೆಕ್ಕದಲ್ಲಿ ಭಾರಿ ಲಾಭವಾಗಿದೆ. ಕರ್ನಾಟಕ ಯಾಕೆ ಇಂಥದ್ದೊಂದು ಪ್ರಯತ್ನ ಮಾಡಬಾರದು? ನಾವು ಪ್ರವಾಸೋದ್ಯಮದ ದೃಷ್ಟಿಯಿಂದ ಅಪಾರ ಸಾಧ್ಯತೆಗಳನ್ನು ಹೊಂದಿದ್ದರೂ, ಇನ್ನೂ ಸಂಪೂರ್ಣವಾಗಿ ಆ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ಕಟುಸತ್ಯ. ವೆಲ್ ನೆಸ್ ಟೂರಿಸಂ, ಮಾನ್ಸೂನ್ ಟೂರಿಸಂ, ಗ್ರಾಮೀಣ ಪ್ರವಾಸ, ಸಾಹಸ ಪ್ರವಾಸ ಇವೆಲ್ಲವನ್ನೂ ಅನುಭವ ಪ್ರವಾಸದ ಅಡಿಯಲ್ಲಿ ತರುತ್ತಿರುವ ಕೇರಳವನ್ನು ಕರ್ನಾಟಕ ಕಾಪಿ ಮಾಡಿದರೂ ಸಾಕು, ಇಲ್ಲಿನ ಪ್ರವಾಸೋದ್ಯಮದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ಕೊಡಗು, ಗೋಕರ್ಣ, ಚಿಕ್ಕಮಗಳೂರು, ಹಂಪಿ ಮೊದಲಾದ ಪ್ರದೇಶಗಳು ಜಾಗತಿಕ ಮಟ್ಟದ ಪ್ರವಾಸಿ ಕೇಂದ್ರಗಳಾಗುವ ಸಾಮರ್ಥ್ಯ ಹೊಂದಿವೆ. ಆದರೆ ಇವುಗಳ ಪ್ರಚಾರ, ಪ್ಯಾಕೇಜಿಂಗ್ ಮತ್ತು ಅನುಭವಾಧಾರಿತ ಯೋಜನೆಗಳಲ್ಲಿ ಇನ್ನೂ ಕೊರತೆ ಇದೆ. ಇವುಗಳನ್ನು ಕೇವಲ ಟೂರಿಸ್ಟ್ ಸ್ಪಾಟ್ ಎಂದು ಬಿಂಬಿಸುವ ಬದಲು ಅನುಭವ ಪ್ರವಾಸದಡಿ ತರಬೇಕಿದೆ. ದಾಂಡೇಲಿಯ ರಿವರ್ ರಾಫ್ಟಿಂಗ್, ನಂದಿ ಬೆಟ್ಟದ ಪ್ಯಾರಾಗ್ಲೈಡಿಂಗ್, ಪಶ್ಚಿಮ ಘಟ್ಟಗಳ ಟ್ರೆಕ್ಕಿಂಗ್ ಇವುಗಳನ್ನು ಕೇರಳ ಪ್ರವಾಸೋದ್ಯಮದ ಮಾದರಿಯಲ್ಲಿ ಮಾರ್ಕೆಟ್ ಮಾಡಿದರೆ ಗೆಲುವು ನಿಶ್ಚಿತ.

ಸಂಸ್ಕೃತಿಯ ವಿಚಾರದಲ್ಲಿಯೂ ಕರ್ನಾಟಕ ಮೈಸೂರು ದಸರಾ, ಬಾದಾಮಿ ಉತ್ಸವ, ಹಂಪಿ ಉತ್ಸವಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಭವ ಪ್ರವಾಸವನ್ನಾಗಿ ಪ್ರಚಾರ ಮಾಡಿ ಆಯಾ ಸಮಯದಲ್ಲಿ ಮಾರ್ಕೆಟ್ ಮಾಡಿದರೆ, ಪರರಾಜ್ಯ ಮತ್ತು ವಿದೇಶದ ಪ್ರವಾಸಿಗರನ್ನು ದೊಡ್ಡ ಸಂಖ್ಯೆಯಲ್ಲಿ ಸೆಳೆಯಬಹುದು. ಪ್ರವಾಸಿಗರ ಸುರಕ್ಷತೆ ಮತ್ತು ಡಿಜಿಟಲ್ ಪ್ರಚಾರಕ್ಕೆ ಆದ್ಯತೆ ನೀಡಿ ಪ್ರವಾಸಿಗರಿಗೆ ಸುಲಭವಾಗಿ ಮಾಹಿತಿ ದೊರಕುವಂತೆ, ಉತ್ತಮ ರಸ್ತೆ ಸಂಪರ್ಕ, ಗುಣಮಟ್ಟದ ವಸತಿ ವ್ಯವಸ್ಥೆಗಳನ್ನು ಮಾಡಿದರೆ ಕರ್ನಾಟಕ ಯಾಕೆ ಪ್ರವಾಸಿ ಹಬ್ ಆಗುವುದಿಲ್ಲ?

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!