ಜವಾಬ್ದಾರಿಯುತ ಪ್ರವಾಸೋದ್ಯಮ, ಅತಿಥಿ ದೇವೋಭವ ಎಂಬ ಭಾವದ ಪ್ರವಾಸೋದ್ಯಮ ಬೇಕು ಎಂದು ಹಂಬಲಿಸುವ ದೇಶದಲ್ಲಿ ದೇಶಕ್ಕೆ ಕಪ್ಪು ಚುಕ್ಕೆ ಇಡುವ ಅನಾಗರಿಕರೂ ಹುಟ್ಟುಕೊಳ್ಳುತ್ತಾರೆ. ಅಂಥವರಿಗೆ ಕ್ಷಮೆ ಇರಕೂಡದು. ಈ ಹಾದಿಯಲ್ಲಿ ಗಂಗಾವತಿ ನ್ಯಾಯಾಲಯದ ತೀರ್ಪು ಮಹತ್ವದ್ದೆನಿಸಿದೆ.

ಇದನ್ನೂ ಓದಿ: ನಂಬರ್ ಒನ್ ಪಟ್ಟ ಸುಮ್ಮನೇ ಒಲಿಯುವುದಿಲ್ಲ

ವಿಶ್ವ ಪಾರಂಪರಿಕ ನಗರಿ ಹಂಪಿಯಲ್ಲಿ ಕಳೆದ ವರ್ಷ ನಡೆದಿದ್ದ ಪೈಶಾಚಿಕ ಅತ್ಯಾಚಾರ ಪ್ರಕರಣ ದೇಶಕ್ಕೆ ದೇಶವೇ ತಲೆ ತಗ್ಗಿಸುವಂತೆ ಮಾಡಿತ್ತು. ಇಸ್ರೇಲ್ ಮಹಿಳೆ ಮೇಲಿನ ಅತ್ಯಾಚಾರ ಮತ್ತು ಅಮೆರಿಕದ ಪ್ರವಾಸಿಗನ ಹತ್ಯೆ ಘಟನೆಯಿಂದಾಗಿ ಭಾರತದ ಪ್ರವಾಸೋದ್ಯಮವನ್ನೇ ಕೆಟ್ಟದಾಗಿ ಬಿಂಬಿಸುವ ಪ್ರಯತ್ನವೂ ನಡೆಯಿತು. ಭಾರತ ವಿದೇಶಿಗರಿಗೆ ಸುರಕ್ಷಿತವಲ್ಲ ಎಂಬ ವ್ಯಾಪಕ ಅಪಪ್ರಚಾರಕ್ಕೂ ಇದು ದಾರಿಮಾಡಿಕೊಟ್ಟಿತು.

ಮನುಷ್ಯರಲ್ಲದವರು ಮಾಡಿದ ಕೃತ್ಯಕ್ಕೆ ದೇಶವನ್ನೇ ಹೊಣೆ ಮಾಡುವುದು ಹೇಗೆ ತಪ್ಪೋ ಇಂಥ ಅಪರಾಧಿಗಳನ್ನು ಸುಮ್ಮನೆ ಬಿಡುವುದೂ ಅಥವಾ ಕನಿಷ್ಠ ಶಿಕ್ಷೆಗೆ ಸೀಮಿತಗೊಳಿಸುವುದೂ ಅಷ್ಟೇ ದೊಡ್ಡ ತಪ್ಪು. ಈ ನಿಟ್ಟಿನಲ್ಲಿ ಗಂಗಾವತಿ ನ್ಯಾಯಾಲಯ ಮೂವರು ಆರೋಪಿಗಳನ್ನು ಅಪರಾಧಿಗಳೆಂದು ಪರಿಗಣಿಸಿ ಮರಣದಂಡನೆ ವಿಧಿಸಿದೆ. ಈ ವಿಚಾರ ವಿದೇಶವನ್ನು ತಲುಪಬೇಕು. ದೇಶ ಎಷ್ಟು ಕಟು ನಿರ್ಧಾರ ಕೈಗೊಳ್ಳುತ್ತದೆ ಅವರಿಗೆ ಎಂಬುದು ಗೊತ್ತಾಗಬೇಕು. ಜತೆಗೆ, ಪ್ರವಾಸಿಗರನ್ನು ಮಾತ್ರವಲ್ಲ, ಯಾವುದೇ ವ್ಯಕ್ತಿಯನ್ನು ಹಿಂಸಿಸುವ ದರೋಡೆಮಾಡುವ ಅತ್ಯಾಚಾರ ಎಸಗುವ ರಾಕ್ಷಸರಿಗೆ ಗಲ್ಲುಗಂಬ ಕಾಣುವಂತಾಗಬೇಕು. ಒಟ್ಟಾರೆ ಭಾರತ ಸುರಕ್ಷಿತ ತಾಣವಾಗಬೇಕು.