ಅಂಕೋಲೆಯ ವಿಶಿಷ್ಟ ಕರಡಿ ವೇಷ, ಹಗರಣ, ಸುಗ್ಗಿ ಮತ್ತು ಹೋಳಿ
ಸೊಂಟಕ್ಕೆ ಕಟ್ಟಿರುವ ಠಣ ಠಣ ಘಂಟೆ ಬಾರಿಸುತ್ತ ಅಂಗಳದಲ್ಲೇ ನಿಂತು ಪ್ರತಿಭಟನೆ ಮಾಡುತ್ತಾ, ತಾವು ಬಯಸಿದ ಹಣ ಸಿಕ್ಕ ನಂತರವೇ ಮುಂದಿನ ಮನೆಗೆ ಹೋಗುತ್ತಿದ್ದರು. ಈಗ ಈ ಬೇಡಿಕೆ ಕನಿಷ್ಠ 50 ರಿಂದ 100 ರುಪಾಯಿಗಳವರೆಗೆ ಏರಿದೆ. ಕರಡಿಗಳ ಆಕಾರದ ಮೇಲೆ ಈ ದರ ಅವಲಂಬಿಸುತ್ತದೆ.
- ಡಾ. ಕಿರಣ ಅಂಕ್ಲೇಕರ, ಪುಣೆ
ಹೋಳಿ ಹಬ್ಬದಂದು ದೇಶವಿಡೀ ಬಣ್ಣದಾಟವಾಡುವುದು ಸಾಮಾನ್ಯ. ಆದರೆ, ಕೆಲವು ಪ್ರದೇಶಗಳಲ್ಲಿ ಈ ಬಣ್ಣದ ಹಬ್ಬದ ಜತೆಗೆ ಕೆಲವು ವಿಶಿಷ್ಟ ಸಾಂಪ್ರದಾಯಿಕ ಚಟುವಟಿಕೆಗಳೂ ಆಚರಿಸಲ್ಪಡುತ್ತವೆ. ಅವುಗಳಲ್ಲಿ ಉತ್ತರಕನ್ನಡ ಜಿಲ್ಲೆಯ ಶಿರಸಿಯೂ ಒಂದು. ಈ ಸಂದರ್ಭದಲ್ಲಿ ಒಂದು ವರ್ಷ ಶಕ್ತಿದೇವತೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಇದ್ದು, ಇನ್ನೊಂದು ವರ್ಷ ಬಣ್ಣದ ಹೋಳಿ ಆಟ ಮತ್ತು ಬೇಡರ ನೃತ್ಯ ವಿಶೇಷವಾಗಿರುತ್ತದೆ. ಘಟ್ಟದ ಕೆಳಗಿನ ಕರಾವಳಿಯಲ್ಲಿನ ಆಚರಣೆ ಸ್ವಲ್ಪ ವಿಭಿನ್ನವಾಗಿದೆ.
ಇದನ್ನೂ ಓದಿ: ನಾಗರಾಜ ಅಲ್ಲಿ ಕಾವಲಿಗಿದ್ದಾನೆ
ಅಂಕೋಲಾ, ಕುಮಟಾ ಮತ್ತು ಕಾರವಾರ ತಾಲೂಕಿನಲ್ಲಿ ವಿವಿಧ ಸಮಾಜದವರು ತಮ್ಮ ತಮ್ಮ ಸುಗ್ಗಿ ಮೇಳ ಕಟ್ಟಿಕೊಂಡು, ನವಿಲು ನಾಚುವಂತೆ ತುರಾಯಿ ಶಿರಸೊಬಗು ಧರಿಸಿ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಗುಮಟೆ, ಜಾಗಟೆಯ ತಾಳಕ್ಕೆ ಕುಣಿಯುತ್ತಾರೆ. ಇವೆಲ್ಲದರ ಜತೆಗೆ ಅಂಕೋಲಾದಲ್ಲಿ ಇನ್ನೂ ಎರಡು ವಿಶೇಷ ವಿಷಯಗಳಿವೆ. ಒಂದು ಕರಡಿ ವೇಷಧಾರಿಗಳು ಮತ್ತು ಅಂಕೋಲಾದ ಮುಖ್ಯರಸ್ತೆಯಲ್ಲಿ ನಡೆಯುವ Carnival.

ವೇಷಗಳಲ್ಲೂ ವಿವಿಧತೆ
ಹೋಳಿಯ ದಿನ ಮತ್ತು ಅದರ ಹಿಂದಿನ ದಿನದಂದು ಊರು ಕೇರಿಗಳಲ್ಲೆಲ್ಲ ಚಿಕ್ಕ ಮಕ್ಕಳಿಂದ ಹಿಡಿದು ಯುವ ಉತ್ಸಾಹಿಗಳವರೆಗೂ ಬಗೆ ಬಗೆಯ ಕರಡಿ ವೇಷ ಹಾಕಿ, ಸೊಂಟಕ್ಕೆ ಕಟ್ಟಿದ್ದ ಘಂಟೆಗಳ ಸದ್ದು ಮಾಡುತ್ತಾ ʻಟೊರ್, ಟೊರ್ʼ ಎಂದು ಕೂಗುತ್ತಾ ಮನೆ ಮನೆಗಳಿಂದ ಹಣ ಕೂಡಿಸುತ್ತಾರೆ. ಈ ಕರಡಿ ವೇಷಗಳೂ ಬೇರೆ ಬೇರೆ ರೀತಿಯವು. ಚಿಕ್ಕ ಮಕ್ಕಳು ಕಾಗದದ ಉದ್ದನೆಯ ತುಣುಕುಗಳನ್ನು ಕರಡಿಯ ಕೂದಲಿನಂತೆ ಮೈ ತುಂಬಾ ಅಂಟಿಸಿಕೊಂಡು, ರಟ್ಟಿನಿಂದ ಮಾಡಿದ ಚೂಪನೆಯ ಕರಡಿ ಮುಖ ಧರಿಸಿ ಮನೆ ಮನೆಗೆ ಹೋಗುತ್ತಾರೆ. ಆದರೆ, ಉತ್ಸಾಹಿ ವಯಸ್ಕರು, ನೀಲಿ ಅಥವಾ ಹಸಿರು ಬಣ್ಣದ ಗೋಣಿದಾರ ಅಥವಾ ಒಣ ತೆಂಗಿನಕಾಯಿಯ ಸಿಪ್ಪೆಯಿಂದ ತುಂಬಿದ ಕರಡಿ ಕೂದಲಿನ ದಿರಿಸು ಧರಿಸಿ, ಕಟ್ಟಿಗೆಯಿಂದ ಮಾಡಿದ ಕರಡಿ ಮುಖ ಧರಿಸುತ್ತಾರೆ. ಈ ದೊಡ್ಡ ಕರಡಿ ವೇಷಧಾರಿಗಳನ್ನು ನೋಡಿದರೆ ಭಯವಾಗುತ್ತದೆ.
ಗುರುತು ಹಿಡಿಯದಿದ್ದರೆ
ತಮ್ಮ ಮುಖ ಕಾಣಿಸದೇ ಇರುವ ಇವರು, ತಮ್ಮ ಪರಿಚಯದವರ ಮನೆಗೆ ಹೋಗಿ, ಅಂಗಳದಲ್ಲಿ ನಿಂತು ತಮ್ಮ ಪರಿಚಯ ಹೇಳದೇ, ಮನೆಯವರ ಹೆಸರು ಹೇಳಿ ಹೆಚ್ಚಿನ ಹಣ ಪಡೆಯುತ್ತಾರೆ. ಇಲ್ಲಿ ಕೆಲ ವೇಷಧಾರಿಗಳು, ಮನೆಯವರ ಪರಿಚಯದವರ ಹೆಸರು ಹೇಳಿ, ತಮ್ಮ ಸುಳ್ಳು ಮಾಹಿತಿ ಕೊಟ್ಟು ಹೆಚ್ಚು ಹಣ ಗಿಟ್ಟಿಸುವುದೂ ಉಂಟು. ನಾವು ಚಿಕ್ಕವರಿರುವಾಗ, ಅಂದರೆ 80ರ ದಶಕದಲ್ಲಿ 5 ರುಪಾಯಿಗಿಂತ ಕಡಿಮೆ ಕೊಟ್ಟರೆ, ಅದನ್ನು ತೆಗೆದುಕೊಳ್ಳುತ್ತಲೇ ಇರುತ್ತಿರಲಿಲ್ಲ. ಸೊಂಟಕ್ಕೆ ಕಟ್ಟಿರುವ ಠಣ ಠಣ ಘಂಟೆ ಬಾರಿಸುತ್ತ ಅಂಗಳದಲ್ಲೇ ನಿಂತು ಪ್ರತಿಭಟನೆ ಮಾಡುತ್ತಾ, ತಾವು ಬಯಸಿದ ಹಣ ಸಿಕ್ಕ ನಂತರವೇ ಮುಂದಿನ ಮನೆಗೆ ಹೋಗುತ್ತಿದ್ದರು. ಈಗ ಈ ಬೇಡಿಕೆ ಕನಿಷ್ಠ 50 ರಿಂದ 100 ರುಪಾಯಿಗಳವರೆಗೆ ಏರಿದೆ. ಕರಡಿಗಳ ಆಕಾರದ ಮೇಲೆ ಈ ದರ ಅವಲಂಬಿಸುತ್ತದೆ. ಕರಡಿ ವೇಷವಲ್ಲದೆ ಬೇರೆ ಬೇರೆ ವೇಷ ಧರಿಸಿ ಹಣಕ್ಕಾಗಿ ಮನೆ ಮನೆಗೆ ಹೋಗಿ, ಹಾಡು ಹೇಳಿ, ನೃತ್ಯ ಮಾಡಿ ಮನರಂಜನೆ ಮಾಡುವುದನ್ನು ನೋಡಿ ಜನ ಖುಷಿಪಡುತ್ತಾರೆ. ಇವರೆಲ್ಲರಿಗೆ ಹಣ ಕೊಡುವುದಕ್ಕಾಗಿಯೇ ಪ್ರತಿ ಮನೆಯವರು ಚಿಲ್ಲರೆ ಹಣಗಳನ್ನು ಕೂಡಿಸಿಡುತ್ತಾರೆ.

ಹೋಳಿ ದಿನದ ಹಿಂದಿನ ಸಂಜೆ ಅಂಕೋಲೆ ಪಟ್ಟಣದಲ್ಲಿ ನಡೆಯುವ ವಿವಿಧ ವೇಷ, ಸನ್ನಿವೇಶಗಳ ಪ್ರದರ್ಶನ ಯಾತ್ರೆ ತುಂಬಾ ಜನಪ್ರಿಯವಾದುದು. ಸ್ವಾತಂತ್ರ್ಯ ಪೂರ್ವಕಾಲದಿಂದ ಈ ಪರಂಪರೆ ಸಾಗಿ ಬಂದಿದೆ. ಅಂಕೋಲೆ ತಾಲೂಕಿನ ಬೆಳಂಬಾರ ಗ್ರಾಮದ ನಾಗರಿಕರು ಒಟ್ಟಾಗಿ, ತಮಗೆ ಅನಿಸಿದ ಬೇರೆ ಬೇರೆ ದೃಶ್ಯ ಸನ್ನಿವೇಶಗಳನ್ನು, ಮೆರವಣಿಗೆ ಮೂಲಕ ಪ್ರದರ್ಶಿಸಿ ಜನಮನ ಸೆಳೆಯುತ್ತಾರೆ. ಈ ವೇಷಗಳಲ್ಲಿ ಪೌರಾಣಿಕ, ಐತಿಹಾಸಿಕ ಮತ್ತು ಸದ್ಯದ ಪ್ರಚಲಿತ ಸಂಗತಿಗಳನ್ನುವಿಡಂಬನಾತ್ಮಕವಾಗಿ ಪ್ರದರ್ಶಿಸುವುದು ವಿಶೇಷ. ಕೆಲವೊಂದು ವೇಷಗಳು ಮೋಜಿನವೂ, ವಿನೋದಭರಿತವೂ ಆಗಿರುತ್ತವೆ. ಈ ವರ್ಷದ ವೇಷಗಳಲ್ಲಿ , ರಾಜ್ಯದಾದ್ಯಂತ ಸುದ್ದಿ ಮಾಡಿದ ʼಬುರುಡೆ ಗ್ಯಾಂಗ್ʼ ನವರ ತನಿಖೆಯ ದೃಶ್ಯ, ಕಾಂತಾರ ಚಿತ್ರದ ಸನ್ನಿವೇಶ, ಗಜ ಚರ್ಮಾoಬರ ಶಿವನ ಕಥಾ ನಿರೂಪಣೆ ಜನಮನ್ನಣೆ ಪಡೆಯಿತು. ಸುಮಾರು 3 ತಾಸುಗಳಷ್ಟು ನಡೆಯುವ ಈ ಹಗರಣ ಅಥವಾ ವೇಷ ಮೆರವಣಿಗೆ ಕೊನೆಯಲ್ಲಿ ತಾಲೂಕು ಕಚೇರಿಗೆ ಹೋಗಿ, ಸುಗ್ಗಿ ಕುಣಿತ ಪ್ರದರ್ಶಿಸಿ ಅಧಿಕಾರಿಗಳಿಂದ ಮನ್ನಣೆ, ಉಡುಗೊರೆ ಸ್ವೀಕರಿಸಿ ನಿರ್ಗಮಿಸುತ್ತವೆ.
ದಶಕಗಳ ಮೊದಲು ಅಂಕೋಲೆಯಲ್ಲಿ ಬಣ್ಣದ ಆಟ ಆಡುತ್ತಿರಲಿಲ್ಲ. ಈಗ ಅದೂ ಸೇರ್ಪಡೆಗೊಂಡಿದೆ . ಅಂಕೋಲೆಯ ಈ ಕರಡಿ ವೇಷ ಜಗತ್ತಿನ ಇನ್ನೆಲ್ಲೂ ಕಾಣ ಸಿಗಲಾರದು. ಈ ವಿಶಿಷ್ಟ ಹೋಳಿ, ಕರಡಿ, ಸುಗ್ಗಿ ಮತ್ತು ಹಗರಣಗಳನ್ನು ಕಣ್ತುಂಬ ನೋಡಿ ಸವಿಯಲು ಒಮ್ಮೆ ಅಂಕೋಲೆಗೆ ಬನ್ನಿ. ಹೋಳಿ ಸಮಯದಲ್ಲಿ ಮಾತ್ರ.