Thursday, February 19, 2026
Thursday, February 19, 2026

ಟೂರಿಸಂನಲ್ಲಿ ನಮಗಿಂತ 15 ವರ್ಷ ಮುಂದಿರುವ ಕೇರಳದಿಂದ ಕಲಿಯುವುದೇನು?

2019ರಲ್ಲಿ ಕೇರಳ ಸರಕಾರವು ತನ್ನ ಪ್ರವಾಸಿ ತಾಣಗಳನ್ನು ನೂರಕ್ಕೆ ನೂರು ವಿಕಲಚೇತನಸ್ನೇಹಿಯನ್ನಾಗಿ ಮಾಡಲು ನಿರ್ಧರಿಸಿತು. ಇದಕ್ಕಾಗಿ ಅಲ್ಲಿ ಅಳವಡಿಸಿಕೊಂಡ ಕೆಲವು ಪ್ರಮುಖ ಬದಲಾವಣೆಗಳೆಂದರೆ, ಗುಡ್ಡಗಾಡು ಪ್ರದೇಶಗಳು ಅಥವಾ ಐತಿಹಾಸಿಕ ಸ್ಮಾರಕಗಳ ಪ್ರದೇಶಗಳಲ್ಲಿ ಗಾಲಿಕುರ್ಚಿ (Wheelchair) ಬಳಸುವವರಿಗೆ ಸುಗಮವಾಗಿ ಚಲಿಸಲು ಅಂತಾರಾಷ್ಟ್ರೀಯ ಗುಣಮಟ್ಟದ ರಾಂಪ್‌ಗಳನ್ನು ನಿರ್ಮಿಸಿರುವುದು ಹಾಗೂ ದೃಷ್ಟಿಹೀನ ಪ್ರವಾಸಿಗರಿಗಾಗಿ ನೆಲದ ಮೇಲೆ ವಿಶೇಷ ವಿನ್ಯಾಸದ ಟ್ಯಾಕ್ಟೈಲ್ ಟೈಲ್ಸ್ (Tactile Tiles) ಅಳವಡಿಸಿರುವುದು.

'ಇಂದು ಬೆಂಗಾಲಿಗಳು ಯೋಚಿಸುವುದನ್ನು ನಾಳೆ ದೇಶದ ಇತರ ರಾಜ್ಯಗಳಲ್ಲಿರುವ ಭಾರತೀಯರು ಯೋಚಿಸುತ್ತಾರೆ' ಎಂಬ ಮಾತಿದೆ. ಪ್ರವಾಸೋದ್ಯಮದ ವಿಷಯಕ್ಕೆ ಬಂದರೆ, 'ಇಂದು ಕೇರಳ ಆಚರಣೆಗೆ ತರುವುದನ್ನು ಭಾರತದ ಉಳಿದ ರಾಜ್ಯಗಳು ಹದಿನೈದು ವರ್ಷಗಳ ನಂತರ ಜಾರಿಗೆ ತರುತ್ತವೆ.' ಈ ಮಾತು ಅಕ್ಷರಶಃ ನಿಜ. ಪಶ್ಚಿಮ ಬಂಗಾಳವು ಹೇಗೆ ಬೌದ್ಧಿಕ ಮತ್ತು ಸಾಂಸ್ಕೃತಿಕ ಚಿಂತನೆಗೆ ಹೆಸರಾಗಿದೆಯೋ, ಹಾಗೆಯೇ ಕೇರಳವು ಪ್ರವಾಸೋದ್ಯಮವನ್ನು ಒಂದು ಸುಸ್ಥಿರ ಉದ್ಯಮವನ್ನಾಗಿ ಬೆಳೆಸುವಲ್ಲಿ ಇಡೀ ಭಾರತಕ್ಕೇ ದಾರಿದೀಪವಾಗಿರುವುದು ವಾಸ್ತವ. 1980ರ ದಶಕದ ಅಂತ್ಯದಲ್ಲಿ ಕೇರಳವು ತನ್ನನ್ನು ತಾನು 'God’s Own Country' ಎಂದು ಕರೆದುಕೊಂಡಾಗ, ಭಾರತದ ಇತರ ರಾಜ್ಯಗಳು ಇಂಥ ಮಾರ್ಕೆಟಿಂಗ್ ತಂತ್ರದ ಬಗ್ಗೆ ಯೋಚಿಸಿಯೇ ಇರಲಿಲ್ಲ.

ಇದನ್ನೂ ಓದಿ: ಗೂಗಲ್ ಮ್ಯಾಪ್‌ಗೆ ಸಿಗದ ರಹಸ್ಯ ತಾಣಗಳು: ಇತಿಹಾಸದ ಮೌನ ಸಾಕ್ಷಿಗಳು

ಇಂದು ಪ್ರತಿಯೊಂದು ರಾಜ್ಯವೂ ತನ್ನದೇ ಆದ ಸ್ಲೋಗನ್ ಹೊಂದಿದೆ. ಉದಾಹರಣೆಗೆ, ಕರ್ನಾಟಕ 'One State Many Worlds' ಎಂಬ ಘೋಷವಾಕ್ಯ ಹೊಂದಲು ಕೇರಳವೇ ಪ್ರೇರಣೆ. ಕೇರಳದ 'ಬ್ಯಾಕ್‌ವಾಟರ್ಸ್' ಇಂದು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧ. ಒಂದು ಕಾಲದಲ್ಲಿ ಕೇವಲ ಸರಕು ಸಾಗಿಸಲು ಬಳಸುತ್ತಿದ್ದ ಕೆಟ್ಟುವಲ್ಲಂಗಳನ್ನು ಐಷಾರಾಮಿ ಹೌಸ್‌ಬೋಟ್‌ಗಳಾಗಿ ಪರಿವರ್ತಿಸಿದ ಕೀರ್ತಿ ಕೇರಳದ್ದು. ಈ ಕಲ್ಪನೆಯನ್ನು ನೋಡಿ ಇಂದು ಗೋವಾ, ಕರ್ನಾಟಕ ಮತ್ತು ಕಾಶ್ಮೀರಗಳು ಕೂಡ ತಮ್ಮದೇ ಆದ ಜಲ-ಪ್ರವಾಸೋದ್ಯಮ ಮಾದರಿಗಳನ್ನು ರೂಪಿಸುತ್ತಿವೆ.

Untitled design - 2026-02-19T160444.325

ಇಲ್ಲಿ ಇನ್ನೊಂದು ಸಂಗತಿಯನ್ನು ನೆನಪಿಸಿಕೊಳ್ಳಬೇಕು. ಕೇರಳವು ಕೇವಲ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಗಮನ ನೀಡದೇ, ಸ್ಥಳೀಯ ಸಮುದಾಯಗಳಿಗೆ ಅದರಿಂದ ಲಾಭವಾಗುವಂತೆ ನೋಡಿಕೊಂಡಿತು. 'ರೆಸ್ಪಾನ್ಸಿಬಲ್ ಟೂರಿಸಂ' (ಜವಾಬ್ದಾರಿಯುತ ಪ್ರವಾಸೋದ್ಯಮ) ಮಿಷನ್ ಮೂಲಕ ಹಳ್ಳಿಗಳ ಜೀವನವನ್ನು ಪ್ರವಾಸಿಗರಿಗೆ ಪರಿಚಯಿಸುತ್ತಿರುವುದು (Village Life Experience) ಕೇರಳದ ವಿಶಿಷ್ಟ ಕೊಡುಗೆ. ಇಂದು ಭಾರತದಾದ್ಯಂತ 'ಹೋಮ್ ಸ್ಟೇ' ಸಂಸ್ಕೃತಿ ಜನಪ್ರಿಯವಾಗಲು ಕೇರಳದ ಈ ಮಾದರಿಯೇ ಮೂಲ. ಪ್ರವಾಸ ಎಂದರೆ ಕೇವಲ ತಿರುಗಾಟವಲ್ಲ, ಅದು ಮನಸ್ಸು ಮತ್ತು ದೇಹದ ಶುದ್ಧೀಕರಣ ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದು ಕೇರಳ. ಆಯುರ್ವೇದ ಚಿಕಿತ್ಸೆಯನ್ನು ಪ್ರವಾಸೋದ್ಯಮದ ಅವಿಭಾಜ್ಯ ಅಂಗವಾಗಿಸಿ 'ವೆಲ್ ನೆಸ್ ಟೂರಿಸಂ' ಎಂಬ ಹೊಸ ಆಯಾಮವನ್ನು ಕೇರಳ ಸೃಷ್ಟಿಸಿತು. ಇಂದು ಕರ್ನಾಟಕ ಹಾಗೂ ಉತ್ತರಾಖಂಡದ ಯೋಗ ಕೇಂದ್ರಗಳಾಗಲೀ ಅಥವಾ ಇತರ ರಾಜ್ಯಗಳ ಸ್ಪಾ ರೆಸಾರ್ಟ್‌ಗಳಾಗಲೀ, ಈ ವಿಚಾರದಲ್ಲಿ ಕೇರಳವನ್ನು ಅನುಸರಿಸುತ್ತಿವೆ.

ಕೇರಳ ಪ್ರವಾಸೋದ್ಯಮ ಇಲಾಖೆಯು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಳ್ಳುವಲ್ಲೂ ಯಾವಾಗಲೂ ಮುಂದು. ಕೃತಕ ಬುದ್ಧಿಮತ್ತೆ (ಎಐ) ಚಾಟ್‌ಬಾಟ್‌ಗಳ ಬಳಕೆ, ವರ್ಚುವಲ್ ರಿಯಾಲಿಟಿ ಪ್ರವಾಸಗಳು ಮತ್ತು ಅತ್ಯುತ್ತಮ ವೆಬ್‌ಸೈಟ್‌ಗಳ ಮೂಲಕ ಪ್ರವಾಸಿಗರನ್ನು ಸೆಳೆಯುವುದನ್ನು ಕೇರಳ ಬಹಳ ಹಿಂದೆಯೇ ಆರಂಭಿಸಿದೆ. ಕೇರಳವು ಪ್ರವಾಸೋದ್ಯಮವನ್ನು ಕೇವಲ ವ್ಯಾಪಾರವನ್ನಾಗಿ ನೋಡದೇ ಒಂದು ಸಂಸ್ಕೃತಿಯನ್ನಾಗಿ ಬೆಳೆಸಿದೆ. ಪರಿಸರಕ್ಕೆ ಹಾನಿ ಮಾಡದೇ ಹೇಗೆ ಪ್ರವಾಸೋದ್ಯಮವನ್ನು ಲಾಭದಾಯಕವಾಗಿ ನಡೆಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಈ ಕಾರಣಕ್ಕಾಗಿಯೇ, ಇಂದು ಯಾವುದೇ ರಾಜ್ಯ ಪ್ರವಾಸೋದ್ಯಮ ನೀತಿಯನ್ನು ರೂಪಿಸುವಾಗ ಮೊದಲು ಕೇರಳದ ಮಾದರಿಯನ್ನು ಅಧ್ಯಯನ ಮಾಡುವಂತಾಗಿದೆ.

ಭಾರತದ ಉಳಿದ ರಾಜ್ಯಗಳು ಪ್ರವಾಸಿತಾಣಗಳಲ್ಲಿ ರಸ್ತೆ, ಶೌಚಾಲಯ, ವಸತಿ, ಮಾಹಿತಿ ಫಲಕ ಮತ್ತು ವಿದ್ಯುತ್‌ ಸಂಪರ್ಕದಂಥ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸಲು ಹೆಣಗಾಡುತ್ತಿರುವಾಗ, ಕೇರಳವು 'ಯೂನಿವರ್ಸಲ್ ಡಿಸೈನ್' ಅಥವಾ 'ಅಂತರ್ಗತ ವಿನ್ಯಾಸ'ದ ಮೂಲಕ ಪ್ರವಾಸೋದ್ಯಮವನ್ನು ಮಾನವೀಯ ನೆಲೆಗಟ್ಟಿನಲ್ಲಿ ಮರು ವ್ಯಾಖ್ಯಾನಿಸುತ್ತಿದೆ. ಅಷ್ಟೇ ಅಲ್ಲ, ಪ್ರವಾಸೋದ್ಯಮದ ಪರಿಕಲ್ಪನೆಯನ್ನೇ ಬದಲಿಸುತ್ತಿದೆ. ಜಾಗತಿಕ ಉತ್ತಮ ಪದ್ಧತಿಗಳನ್ನು ತನ್ನ ಮಣ್ಣಿನ ಸಂಸ್ಕೃತಿಗೆ ಒಗ್ಗಿಸಿಕೊಂಡು, ಪ್ರತಿಯೊಬ್ಬರಿಗೂ ಘನತೆಯಿಂದ ಕೂಡಿದ, ಆರಾಮದಾಯಕ ಮತ್ತು ಸ್ವತಂತ್ರ ಪ್ರವಾಸದ ಅನುಭವವನ್ನು ನೀಡುವತ್ತ ಕೇರಳ ದಾಪುಗಾಲಿಡುತ್ತಿದೆ.

ಏನಿದು ಅಂತರ್ಗತ ಪ್ರವಾಸೋದ್ಯಮ (Inclusive Tourism)? ಅಂತರ್ಗತ ಪ್ರವಾಸೋದ್ಯಮ ಎಂದರೆ ಕೇವಲ ಶ್ರೀಮಂತರಿಗೆ ಅಥವಾ ದೈಹಿಕವಾಗಿ ಸಶಕ್ತರಾದವರಿಗೆ ಮಾತ್ರವಲ್ಲದೇ, ವಿಕಲಚೇತನರು, ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಸಣ್ಣ ಮಕ್ಕಳಿರುವ ಕುಟುಂಬಗಳಿಗೂ ಯಾವುದೇ ಅಡೆತಡೆಯಿಲ್ಲದೇ ಪ್ರವಾಸ ಮಾಡುವ ಅವಕಾಶ ಕಲ್ಪಿಸುವುದು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದೈಹಿಕ ಮಿತಿಗಳನ್ನು ಮೀರಿ, ಸ್ವಾಭಿಮಾನದಿಂದ ಮತ್ತು ಸ್ವತಂತ್ರವಾಗಿ ಪ್ರವಾಸಿ ತಾಣಗಳನ್ನು ಆನಂದಿಸುವುದೇ ಇದರ ಮೂಲ ಉದ್ದೇಶ. ನಾವು-ನೀವು ಒಂದು ಪ್ರವಾಸಿತಾಣವನ್ನು ಅನುಭವಿಸುವಂತೆ, ವಿಕಲಚೇತನರು ಸಹ ಆ ಅನುಭವವನ್ನು ಪಡೆಯಬೇಕು ಎಂಬುದು ಇದರ ಮೂಲ ಆಶಯ.

2019ರಲ್ಲಿ ಕೇರಳ ಸರಕಾರವು ತನ್ನ ಪ್ರವಾಸಿ ತಾಣಗಳನ್ನು ನೂರಕ್ಕೆ ನೂರು ವಿಕಲಚೇತನಸ್ನೇಹಿಯನ್ನಾಗಿ ಮಾಡಲು ನಿರ್ಧರಿಸಿತು. ಇದಕ್ಕಾಗಿ ಅಲ್ಲಿ ಅಳವಡಿಸಿಕೊಂಡ ಕೆಲವು ಪ್ರಮುಖ ಬದಲಾವಣೆಗಳೆಂದರೆ, ಗುಡ್ಡಗಾಡು ಪ್ರದೇಶಗಳು ಅಥವಾ ಐತಿಹಾಸಿಕ ಸ್ಮಾರಕಗಳ ಪ್ರದೇಶಗಳಲ್ಲಿ ಗಾಲಿಕುರ್ಚಿ (Wheelchair) ಬಳಸುವವರಿಗೆ ಸುಗಮವಾಗಿ ಚಲಿಸಲು ಅಂತಾರಾಷ್ಟ್ರೀಯ ಗುಣಮಟ್ಟದ ರಾಂಪ್‌ಗಳನ್ನು ನಿರ್ಮಿಸಿರುವುದು ಹಾಗೂ ದೃಷ್ಟಿಹೀನ ಪ್ರವಾಸಿಗರಿಗಾಗಿ ನೆಲದ ಮೇಲೆ ವಿಶೇಷ ವಿನ್ಯಾಸದ ಟ್ಯಾಕ್ಟೈಲ್ ಟೈಲ್ಸ್ (Tactile Tiles) ಅಳವಡಿಸಿರುವುದು. ಇದರಿಂದ ದೃಷ್ಟಿಹೀನರು ಕೋಲಿನ ಸಹಾಯದಿಂದ ತಾವೇ ಹಾದಿ ಕಂಡುಕೊಳ್ಳಬಹುದು. ಅದಲ್ಲದೇ ಶ್ರವಣದೋಷವುಳ್ಳವರಿಗಾಗಿ ಪ್ರೇಕ್ಷಣೀಯ ಸ್ಥಳಗಳ ಮಾಹಿತಿ ನೀಡಲು ಸಂಕೇತ ಭಾಷೆಯ ವಿಡಿಯೋಗಳು ಅಥವಾ ಬ್ರೈಲ್ ಲಿಪಿಯ ಮಾಹಿತಿ ಫಲಕಗಳನ್ನು ಅಳವಡಿಸಿರುವುದು.

Untitled design - 2026-02-19T160433.170

ಕೇರಳವು ಜಾಗತಿಕ ತಂತ್ರಜ್ಞಾನವನ್ನು ತನ್ನ ಮಣ್ಣಿನ ಸಂಸ್ಕೃತಿಗೆ ಒಗ್ಗಿಸಿದ ರೀತಿ ಅದ್ಭುತವಾಗಿದೆ. ಇದಕ್ಕೆ ಉತ್ತಮ ನಿದರ್ಶನವೆಂದರೆ, ಕೋಝಿಕ್ಕೋಡ್‌ನ ಬೈಪೋರ್ ಬೀಚ್. ಇದು ಒಂದು ಪ್ರವಾಸಿ ತಾಣವಲ್ಲ. ಅದು ಭಾರತದ ಪ್ರವಾಸೋದ್ಯಮ ಇತಿಹಾಸದಲ್ಲಿ ಒಂದು ಮಾನವೀಯ ಕ್ರಾಂತಿಯ ಸಂಕೇತ. ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಸಾರ್ವಜನಿಕ ಸ್ಥಳಗಳು, ಅದರಲ್ಲೂ ವಿಶೇಷವಾಗಿ ಸಮುದ್ರ ತೀರಗಳು ತಲುಪಲು ಅಸಾಧ್ಯವಾದ ಜಾಗಗಳು. ಆದರೆ ಬೈಪೋರ್ ಬೀಚ್ ಈ ಮಿತಿಯನ್ನು ಹೋಗಲಾಡಿಸಿ, ಭಾರತದ ಮೊದಲ 'ಸಂಪೂರ್ಣ ಸುಗಮ' (Accessible) ಬೀಚ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಸಾಮಾನ್ಯವಾಗಿ ಸಮುದ್ರ ತೀರದ ಮರಳಿನ ಮೇಲೆ ನಡೆಯುವುದು ಸವಾಲಿನ ಕೆಲಸ, ಇನ್ನು ಗಾಲಿಕುರ್ಚಿ ಬಳಸುವುದು ಅಸಾಧ್ಯವೇ ಸರಿ. ಇದನ್ನು ಮನಗಂಡ ಕೇರಳ ಪ್ರವಾಸೋದ್ಯಮ ಇಲಾಖೆಯು ಬೈಪೋರ್ ಬೀಚ್‌ನಲ್ಲಿ ಸಮುದ್ರದ ಅಲೆಗಳ ತನಕ ತಲುಪುವಂತೆ ವಿಶೇಷವಾದ ಕಾಂಕ್ರೀಟ್ ಅಥವಾ ಮರದ ರಾಂಪ್‌ಗಳನ್ನು ನಿರ್ಮಿಸಿದೆ.

ಈ ಪಾದಚಾರಿ ಮಾರ್ಗವು ಸುಮಾರು 500 ಮೀಟರ್‌ಗಳಿಗಿಂತ ಹೆಚ್ಚು ಉದ್ದವಿದ್ದು, ಗಾಲಿಕುರ್ಚಿಯಲ್ಲಿರುವವರು ಯಾರ ಸಹಾಯವಿಲ್ಲದೆ ಸಮುದ್ರದ ಅಂಚಿನವರೆಗೂ ಹೋಗಲು ಅನುವು ಮಾಡಿಕೊಡುತ್ತದೆ. ಅಲ್ಲಿನ ವಿನ್ಯಾಸವು ಕೇವಲ ವಿಕಲಚೇತನರಿಗಷ್ಟೇ ಸೀಮಿತವಾಗಿಲ್ಲ. ಪುಟ್ಟ ಮಕ್ಕಳನ್ನು ಸ್ಟ್ರೋಲರ್‌ಗಳಲ್ಲಿ ಕರೆತರುವ ಪೋಷಕರಿಗೆ ಮತ್ತು ನಡೆಯಲು ಕಷ್ಟಪಡುವ ಹಿರಿಯ ನಾಗರಿಕರಿಗೆ ಇದು ವರದಾನವಾಗಿದೆ. ಸಮುದ್ರದ ಸೌಂದರ್ಯವನ್ನು ಸವಿಯಲು ಪ್ರತಿಯೊಬ್ಬರಿಗೂ ಸಮಾನ ಹಕ್ಕಿದೆ ಎಂಬುದನ್ನು ಈ ಮೂಲಸೌಕರ್ಯವು ಸಾಬೀತುಪಡಿಸಿದೆ. ಬೈಪೋರ್ ಬೀಚ್‌ನಲ್ಲಿ ಕೇವಲ ರಾಂಪ್ ಮಾತ್ರವಲ್ಲದೇ, ಅಂತರ್ಗತ ವಿನ್ಯಾಸದ ಇತರ ಅಂಶಗಳೂ ಇವೆ. ಉದಾಹರಣೆಗೆ, ಆಕ್ಸೆಸಿಬಲ್ ಶೌಚಾಲಯಗಳು. ವಿಕಲಚೇತನರ ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾದ ವಿಶಾಲವಾದ ಶೌಚಾಲಯಗಳು ಅಲ್ಲಿವೆ. ಸುಲಭವಾಗಿ ಅರ್ಥವಾಗುವ ದೊಡ್ಡ ಅಕ್ಷರಗಳ ಮತ್ತು ಬ್ರೈಲ್ ಲಿಪಿಯ ಮಾಹಿತಿ ಫಲಕಗಳು ಹಾಗೂ ದಾರಿಯುದ್ದಕ್ಕೂ ವಿಶ್ರಾಂತಿ ಪಡೆಯಲು ಅನುಕೂಲಕರವಾದ ಆಸನಗಳು ಸಹ ಅಲ್ಲಿವೆ.

ಈ ಒಂದು ಸಣ್ಣ ಬದಲಾವಣೆಯು ಸಾವಿರಾರು ಜನರ ಬದುಕಿನಲ್ಲಿ ದೊಡ್ಡ ಸಂಭ್ರಮ ತಂದಿದೆ. ಜೀವನದಲ್ಲಿ ಎಂದೂ ಸಮುದ್ರದ ಅಲೆಗಳನ್ನು ಹತ್ತಿರದಿಂದ ನೋಡದಿದ್ದ ಎಷ್ಟೋ ವಿಕಲಚೇತನರು ಇಂದು ಇಲ್ಲಿ ಬಂದು ಅಲೆಗಳೊಂದಿಗೆ ಆಟವಾಡುತ್ತಿದ್ದಾರೆ. ಇದು ಕೇರಳದ ಪ್ರವಾಸೋದ್ಯಮಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿದೆ. ಬೈಪೋರ್ ಬೀಚ್‌ನ ಈ ಮಾದರಿಯು ದೇಶದ ಉಳಿದ ಕರಾವಳಿ ರಾಜ್ಯಗಳಿಗೆ ಒಂದು ಅತ್ಯುತ್ತಮ ಉದಾಹರಣೆ. ಮೂಲಸೌಕರ್ಯ ಎಂದರೆ ಕೇವಲ ಸೌಂದರ್ಯೀಕರಣವಲ್ಲ, ಅದು 'ಸಮಾನ ಪ್ರವೇಶ' ಎಂದು ಬೈಪೋರ್ ಜಗತ್ತಿಗೆ ಸಾರುತ್ತಿದೆ.

ಕೇರಳದ ಪ್ರವಾಸೋದ್ಯಮದ ಯಶಸ್ಸು ಅದರ ಪ್ರಾಕೃತಿಕ ಸೌಂದರ್ಯದಲ್ಲಿ ಮಾತ್ರವಲ್ಲ, ಆ ಸೌಂದರ್ಯವನ್ನು ಪ್ರತಿಯೊಬ್ಬರಿಗೂ ದಕ್ಕುವಂತೆ ಮಾಡುವ ಅದರ 'ಅಂತರ್ಗತ ಮನೋಭಾವ'ದಲ್ಲಿದೆ. ಮುನ್ನಾರ್‌ನ ಮಂಜಿನ ಬೆಟ್ಟಗಳು ಮತ್ತು ಅಲಪ್ಪುಳದ ಶಾಂತ ಹಿನ್ನೀರು ಈಗ ಕೇವಲ ಯುವಕರಿಗಷ್ಟೇ ಅಲ್ಲ, ಹಿರಿಯ ನಾಗರಿಕರು ಮತ್ತು ದೈಹಿಕ ಸವಾಲು ಎದುರಿಸುತ್ತಿರುವವರಿಗೂ ತೆರೆದುಕೊಂಡಿವೆ. ಮುನ್ನಾರ್ ಮತ್ತು ವಯನಾಡ್‌ನ ಚಹಾ ತೋಟಗಳು ಹಾಗೂ ವ್ಯೂ ಪಾಯಿಂಟ್‌ಗಳು ಸಾಮಾನ್ಯವಾಗಿ ಕಡಿದಾದ ಹಾದಿಗಳನ್ನು ಹೊಂದಿವೆ. ಹಿರಿಯ ನಾಗರಿಕರಿಗೆ ಇಲ್ಲಿನ ಸೌಂದರ್ಯವನ್ನು ಸವಿಯುವುದು ದೈಹಿಕವಾಗಿ ಅಸಾಧ್ಯವಾಗಿತ್ತು.

ಇದನ್ನು ನೀಗಿಸಲು ಕೇರಳ ಸರಕಾರ ಮತ್ತು ಖಾಸಗಿ ರೆಸಾರ್ಟ್‌ಗಳು ಎರಡು ಪ್ರಮುಖ ಬದಲಾವಣೆ ತಂದಿವೆ - ಮೊದಲನೆಯದು, ಎಲೆಕ್ಟ್ರಿಕ್ ಬಗ್ಗಿಗಳು. ಬೃಹತ್ ಚಹಾ ತೋಟಗಳ ನಡುವೆ ನಡೆಯಲು ಸಾಧ್ಯವಾಗದವರಿಗಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಾಗಿದೆ. ಇವು ಯಾವುದೇ ಶಬ್ದ ಅಥವಾ ಮಾಲಿನ್ಯ ಮಾಡದೇ ಹಿರಿಯರನ್ನು ತೋಟದ ಆಳ, ಕಡಿದಾದ, ಎತ್ತರದ ಪ್ರದೇಶಗಳಿಗೆ ಕರೆದೊಯ್ಯುತ್ತವೆ. ಎರಡನೆಯದು, ಲಿಫ್ಟ್ ಸೌಲಭ್ಯವಿರುವ ವೀಕ್ಷಣಾ ಗೋಪುರಗಳು. ಈ ಹಿಂದೆ ಬೆಟ್ಟದ ತುದಿಯ ಸೌಂದರ್ಯ ನೋಡಲು ನೂರಾರು ಮೆಟ್ಟಿಲುಗಳನ್ನು ಹತ್ತಬೇಕಿತ್ತು. ಈಗ ಪ್ರಮುಖ ಪ್ರವಾಸಿ ತಾಣಗಳಲ್ಲಿ ಆಧುನಿಕ ಲಿಫ್ಟ್‌ಗಳನ್ನು ಅಳವಡಿಸಲಾಗುತ್ತಿದೆ. ಇದು ಹಿರಿಯರು ಮತ್ತು ಗಾಲಿಕುರ್ಚಿ ಬಳಸುವವರು ಸಹ ಶಿಖರದ ತುದಿಯಿಂದ ಪ್ರಕೃತಿಯನ್ನು ಆನಂದಿಸಬಹುದು.

ಅಲಪ್ಪುಳದ ಹೌಸ್‌ಬೋಟ್ ಪ್ರಯಾಣವು ಪ್ರತಿಯೊಬ್ಬ ಪ್ರವಾಸಿಯ ಕನಸು. ಆದರೆ, ದೋಣಿಯನ್ನು ಏರುವುದು ಮತ್ತು ಇಳಿಯುವುದು ಹಿರಿಯರಿಗೆ ಹಾಗೂ ವಿಕಲಚೇತನರಿಗೆ ದೊಡ್ಡ ಸಾಹಸವೇ ಆಗಿತ್ತು. ದೋಣಿಯ ಅಂಚು ಮತ್ತು ದಡದ ನಡುವಿನ ಅಂತರವು ಅಪಾಯಕಾರಿಯಾಗುವ ಸಾಧ್ಯತೆಯಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಕೇರಳದ ನವೀನ ಹೌಸ್‌ಬೋಟ್‌ಗಳಲ್ಲಿ 'ಹೈಡ್ರಾಲಿಕ್ ಲಿಫ್ಟ್'ಗಳನ್ನು ಅಳವಡಿಸಲಾಗುತ್ತಿದೆ. ಇದು ಗಾಲಿಕುರ್ಚಿಯಲ್ಲಿರುವ ವ್ಯಕ್ತಿಯನ್ನು ಅಥವಾ ನಡೆಯಲು ಕಷ್ಟಪಡುವ ಹಿರಿಯರನ್ನು ದಡದಿಂದ ನೇರವಾಗಿ ದೋಣಿಯ ಒಳಕ್ಕೆ ಸುಗಮವಾಗಿ ಎತ್ತಿರಿಸುತ್ತದೆ. ಹೌಸ್‌ಬೋಟ್‌ಗಳ ಒಳಾಂಗಣವನ್ನು ಕೂಡ ಮರುವಿನ್ಯಾಸಗೊಳಿಸಲಾಗಿದ್ದು, ಗಾಲಿಕುರ್ಚಿಗಳು ಸುಲಭವಾಗಿ ಚಲಿಸುವಷ್ಟು ಸ್ಥಳಾವಕಾಶ ನೀಡಲಾಗಿದೆ. ಶೌಚಾಲಯಗಳಲ್ಲೂ ಹಿರಿಯರಿಗೆ ಪೂರಕವಾದ ಹಿಡಿಕೆಗಳನ್ನು (Grab bars) ಅಳವಡಿಸಲಾಗಿದೆ.

ನಮ್ಮ ದೇಶದಲ್ಲಿ ಹಿರಿಯ ನಾಗರಿಕರು ಪ್ರವಾಸಕ್ಕೆ ಹೋಗುವುದೆಂದರೆ ಅದು ಕೇವಲ ಧಾರ್ಮಿಕ ಸ್ಥಳಗಳಿಗೆ ಮಾತ್ರ ಎಂಬ ನಂಬಿಕೆಯಿತ್ತು. ಆದರೆ ಕೇರಳವು ಈ ನಂಬಿಕೆಯನ್ನು ಬದಲಿಸಿದೆ. ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯುವುದು ಪ್ರತಿಯೊಬ್ಬರ ಹಕ್ಕು. ಈ ಸೌಲಭ್ಯಗಳಿಂದಾಗಿ ಈಗ ಇಡೀ ಕುಟುಂಬ (ಅಜ್ಜ-ಅಜ್ಜಿಯಿಂದ ಮೊಮ್ಮಕ್ಕಳವರೆಗೆ) ಒಟ್ಟಾಗಿ ಪ್ರವಾಸ ಮಾಡುವುದು ಸಾಧ್ಯವಾಗಿದೆ. ಬೇರೆಯವರ ಸಹಾಯ ಬೇಡದೇ, ತಾವೇ ಸ್ವತಂತ್ರವಾಗಿ ಓಡಾಡುವುದು ಹಿರಿಯರಲ್ಲಿ ಒಂದು ರೀತಿಯ ಆತ್ಮತೃಪ್ತಿ ಮತ್ತು ಘನತೆಯನ್ನು ಹೆಚ್ಚಿಸಿದೆ.

ಪ್ರವಾಸ ಎನ್ನುವುದು ದೈಹಿಕ ಚಟುವಟಿಕೆಗಿಂತ ಹೆಚ್ಚಾಗಿ ಮಾನಸಿಕ ನೆಮ್ಮದಿ ನೀಡುವ ಕ್ರಿಯೆ. ಆದರೆ ಅಡೆತಡೆಗಳಿಂದ ಕೂಡಿದ ಪ್ರವಾಸಿ ತಾಣಗಳು ಅನೇಕರಿಗೆ ಈ ನೆಮ್ಮದಿಯನ್ನು ನಿರಾಕರಿಸುತ್ತಿವೆ. ಈ ಕಂದಕವನ್ನು ಮುಚ್ಚಲು ಕೇರಳ ಜಾರಿಗೆ ತಂದಿರುವ 'ಅಡೆ-ತಡೆರಹಿತ ಪ್ರವಾಸೋದ್ಯಮ' (ಬ್ಯಾರಿಯರ್-ಫ್ರೀ ಟೂರಿಸಂ) ಇಡೀ ದೇಶಕ್ಕೆ ದಿಕ್ಸೂಚಿಯಾಗಿದೆ. ಇದು ಕೇವಲ ಕಾಗದದ ಮೇಲಿನ ಯೋಜನೆಯಾಗದೇ, ಪ್ರವಾಸಿ ತಾಣಗಳಲ್ಲಿ ವಾಸ್ತವವಾಗಿ ಬದಲಾವಣೆ ತರುತ್ತಿದೆ. ಈ ಯೋಜನೆಯಡಿ ಕೇರಳವು ಸುಮಾರು 120ಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ಪೂರ್ಣಪ್ರಮಾಣದ ವಿಕಲಚೇತನ ಸ್ನೇಹಿಯನ್ನಾಗಿ ಪರಿವರ್ತಿಸಿದೆ.

Untitled design - 2026-02-19T160454.054

ಇದು ಕೇವಲ ರಾಂಪ್‌ಗಳನ್ನು ನಿರ್ಮಿಸುವುದಕ್ಕೆ ಸೀಮಿತವಾಗಿಲ್ಲ. ಬದಲಾಗಿ ಪ್ರವಾಸಿಗರಿಗೆ ಮನೆಯಿಂದ ವಿಮಾನದವರೆಗೆ, ಹೊಟೇಲ್‌ನಿಂದ ಹಿಡಿದು ಪ್ರೇಕ್ಷಣೀಯ ಸ್ಥಳಗಳವರೆಗೆ ಅಡೆತಡೆಯಿಲ್ಲದ ಪಯಣದ (Seamless Journey) ಭರವಸೆ ನೀಡುತ್ತಿದೆ. ಕೇವಲ ಮೂಲಸೌಕರ್ಯವಲ್ಲದೇ, ಪ್ರವಾಸಿ ತಾಣದ ಸಿಬ್ಬಂದಿಗಳಿಗೆ ದೈಹಿಕ ಸವಾಲುಳ್ಳವರನ್ನು ಗೌರವಯುತವಾಗಿ ಹೇಗೆ ನಡೆಸಿಕೊಳ್ಳಬೇಕು ಎಂಬ ತರಬೇತಿ ನೀಡಲಾಗುತ್ತಿದೆ. ಇದರ ಫಲವಾಗಿ, ವಿಶ್ವಸಂಸ್ಥೆಯು ಕೇರಳದ ಈ ಪ್ರಯತ್ನವನ್ನು ಜಾಗತಿಕ ಮಟ್ಟದ 'ಬೆಸ್ಟ್ ಪ್ರಾಕ್ಟೀಸ್' ಎಂದು ಗುರುತಿಸಿದೆ.

ಕೇರಳವು 'God's Own Country' ಎಂಬ ತನ್ನ ಬಿರುದನ್ನು ಇಂದು ಸಾರ್ಥಕಪಡಿಸಿಕೊಳ್ಳುತ್ತಿದೆ. ಏಕೆಂದರೆ ದೇವರ ನಾಡಿನಲ್ಲಿ ಯಾರಿಗೂ ಪ್ರವೇಶ ನಿರಾಕರಣೆಯಿಲ್ಲ. ಅಂತರ್ಗತ ವಿನ್ಯಾಸದ ಮೂಲಕ ಕೇರಳವು ಇಡೀ ಜಗತ್ತಿಗೆ ಒಂದು ಸಂದೇಶ ನೀಡುತ್ತಿದೆ - ‘ಪ್ರವಾಸೋದ್ಯಮವು ಕೆಲವು ವಿಶೇಷ ವ್ಯಕ್ತಿಗಳ ಸೌಲಭ್ಯವಲ್ಲ, ಅದು ಪ್ರತಿಯೊಬ್ಬ ಮನುಷ್ಯನ ಹಕ್ಕು.’ ಅಡೆತಡೆಗಳಿಲ್ಲದ, ಘನತೆಯಿಂದ ಕೂಡಿದ ಈ ಹೊಸ ಪಯಣವು ಭಾರತದ ಪ್ರವಾಸೋದ್ಯಮದ ಭವಿಷ್ಯಕ್ಕೆ ದಾರಿದೀಪವಾಗಿದೆ. ಕರ್ನಾಟಕ ಪ್ರವಾಸೋದ್ಯಮ ‘ಉತ್ತಮ ಆಚರಣೆ’ಗಾಗಿ ದೂರ ಹೋಗಬೇಕಿಲ್ಲ. ಪಕ್ಕದ ಕೇರಳವನ್ನು ನೋಡಿ ಕಲಿತುಕೊಳ್ಳುವುದು ಬೆಟ್ಟದಷ್ಟಿದೆ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?