ಪ್ರವಾಸವೆಂದರೆ ನೋಡುವುದೊಂದೇ ಅಲ್ಲ, ತಿನ್ನುವುದೂ ಹೌದು !
ಅಡುಗೆಮನೆ ಅಂದ್ರೆ ಒಂದು ಪ್ರಾಂತ್ಯದ ಚರಿತ್ರೆಯ ಕೈಗನ್ನಡಿ. ‘ಹಸಿವು ನೀಗಿಸಿಕೊಳ್ಳುವುದು ಪ್ರಾಣಿ ಸಹಜ ಗುಣ, ಆದರೆ ರುಚಿಯನ್ನು ಅನ್ವೇಷಿಸುವುದು ಮನುಷ್ಯನ ಸಾಂಸ್ಕೃತಿಕ ಹಂಬಲ.’ ಪ್ರವಾಸೋದ್ಯಮದಲ್ಲಿ ಇಂದು ಆಹಾರ ಎಂಬುದು ಕೇವಲ ಹೊಟ್ಟೆ ತುಂಬಿಸಿಕೊಳ್ಳುವ ಮಾರ್ಗವಾಗಿ ಉಳಿದಿಲ್ಲ; ಬದಲಾಗಿ ಅದು ಆಯಾ ಪ್ರದೇಶದ ಇತಿಹಾಸ, ಭೌಗೋಳಿಕತೆ ಮತ್ತು ಜನಜೀವನದ ಸಾರವನ್ನು ತಿಳಿಸಿಕೊಡುವ ಜೀವಂತ ದಾಖಲೆ. ಒಂದು ಊರಿನ ಅಡುಗೆಮನೆಯೊಳಗೆ ಇಣುಕಿದರೆ, ಅಲ್ಲಿನ ಜನರ ಶತಮಾನಗಳ ಬದುಕಿನ ಹೋರಾಟ ಮತ್ತು ಸಂಭ್ರಮದ ಕಥೆಗಳು ತೆರೆದುಕೊಳ್ಳುತ್ತವೆ.
ಹಂಪಿ, ಹಳೆಬೀಡು, ಬೇಲೂರು, ಶ್ರವಣಬೆಳಗೊಳ, ಐಹೊಳೆ-ಪಟ್ಟದಕಲ್ಲು ಮುಂತಾದ ಪ್ರವಾಸಿತಾಣ ಹಾಗೂ ಐತಿಹಾಸಿಕ ತಾಣಗಳಿಗೆ ಭೇಟಿ ನೀಡುವುದೇ ಪ್ರವಾಸ ಎಂಬ ಭಾವನೆ ಅನೇಕರಲ್ಲಿದೆ. ಬೆಟ್ಟ-ಗುಡ್ಡಗಳು, ಕಡಲ ಕಿನಾರೆಗಳು ಅಥವಾ ಹಸಿರು ಪರ್ವತ -ಶಿಖರಗಳಿಗೆ ಹೋಗುವುದೇ ಪ್ರವಾಸ ಎಂದು ಅವರು ಭಾವಿಸಿದಂತಿದೆ. ಆಗಾಗ ಈ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ, ಕ್ಯಾಮೆರಾದಲ್ಲಿ ಸೆರೆಹಿಡಿದು ಬರುವುದನ್ನೇ ಪ್ರವಾಸ ಎಂದು ಭಾವಿಸಿದವರೂ ಇದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮದ ವ್ಯಾಖ್ಯಾನ ಬದಲಾಗುತ್ತಿದೆ. ಪ್ರವಾಸೋದ್ಯಮ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಬರೀ ನೋಡುವುದಷ್ಟೇ ಪ್ರವಾಸ ಎಂಬ ಭಾವನೆ ದೂರವಾಗುತ್ತಿದೆ. ಕಣ್ಣಿಗೆ ಹಬ್ಬ ನೀಡುವ ತಾಣಗಳಷ್ಟೇ ಅಲ್ಲ, ನಾಲಗೆಗೆ ರುಚಿ ನೀಡುವ ಹಾದಿಗಳೂ ಪ್ರವಾಸಿಗರನ್ನು ಸೆಳೆಯುತ್ತಿವೆ. ಪ್ರವಾಸ ಎಂದರೆ ಕೇವಲ ನೋಡುವ ಪ್ರಕ್ರಿಯೆಯಲ್ಲ, ಅದು ಅನುಭವಿಸುವ ಕಲೆ.
ಇದನ್ನೂ ಓದಿ: ಪ್ಯಾರಿಸಿನ ಸೀನ್ ನದಿಯ ದಂಡೆಯ ಮೇಲೆ ಸಾಹಿತ್ಯದ ಧರ್ಮಛತ್ರ!
ಇದನ್ನು 'ಗ್ಯಾಸ್ಟ್ರೋನಮಿ ಟೂರಿಸಂ' ಅಥವಾ 'ಕಲಿನರಿ ಟೂರಿಸಂ' (Culinary Tourism) ಎಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ರುಚಿ ಸವಿಯಲೆಂದೇ ಪ್ರವಾಸ ಹೋಗುವ ಟ್ರೆಂಡ್ ಜನಪ್ರಿಯವಾಗುತ್ತಿದೆ. ಇದು ಒಂದು ನಿರ್ದಿಷ್ಟ ಊರಿನ ಸಾಂಪ್ರದಾಯಿಕ ಆಹಾರದ ರುಚಿ ನೋಡಲೆಂದೇ ಮಾಡುವ ಪ್ರವಾಸ. ಇದು ಕೇವಲ ಹಸಿವು ನೀಗಿಸಿಕೊಳ್ಳಲು ಊಟ ಮಾಡುವುದಲ್ಲ, ಇದೊಂದು ಸಂಸ್ಕೃತಿಯ ಅನ್ವೇಷಣೆ. ಒಂದು ಪ್ರದೇಶದ ಇತಿಹಾಸ, ಭೌಗೋಳಿಕತೆ ಮತ್ತು ಅಲ್ಲಿನ ಜನರ ಬದುಕು ಅವರ ಅಡುಗೆಮನೆಯಲ್ಲಿ ಅಡಗಿರುತ್ತದೆ ಎಂಬ ಸತ್ಯವನ್ನು ಅರಿಯುವುದು. ಇಲ್ಲಿ ಪ್ರವಾಸಿ ತಾಣ ಗೌಣ, ಅಲ್ಲಿನ ರುಚಿಯೇ ಪ್ರಧಾನ. ಮೈಸೂರಿಗೆ ಹೋದಾಗ ಅರಮನೆ ನೋಡುವುದು ಎಷ್ಟು ಮುಖ್ಯವೋ, 'ಮೈಸೂರು ಮೈಲಾರಿ ದೋಸೆ' ಅಥವಾ 'ಮೈಸೂರು ಪಾಕ್' ಸವಿಯುವುದು ಅಷ್ಟೇ ಮುಖ್ಯವಾಗುತ್ತದೆ. ಇಟಲಿಗೆ ಹೋಗುವವನು ಅಲ್ಲಿನ ಪಿಜ್ಜಾ ಮತ್ತು ಪಾಸ್ತಾದ ಮೂಲ ರುಚಿಗಾಗಿ ಹುಡುಕಾಡುವುದು ಅಥವಾ ಜಪಾನ್‌ಗೆ ಹೋಗುವವನು ಸುಶಿಯ ಅನ್ವೇಷಣೆ ಮಾಡುವುದು ಈ ಟ್ರೆಂಡ್‌ನ ಭಾಗ.

ಅಡುಗೆಮನೆ ಅಂದ್ರೆ ಒಂದು ಪ್ರಾಂತ್ಯದ ಚರಿತ್ರೆಯ ಕೈಗನ್ನಡಿ. ‘ಹಸಿವು ನೀಗಿಸಿಕೊಳ್ಳುವುದು ಪ್ರಾಣಿ ಸಹಜ ಗುಣ, ಆದರೆ ರುಚಿಯನ್ನು ಅನ್ವೇಷಿಸುವುದು ಮನುಷ್ಯನ ಸಾಂಸ್ಕೃತಿಕ ಹಂಬಲ.’ ಪ್ರವಾಸೋದ್ಯಮದಲ್ಲಿ ಇಂದು ಆಹಾರ ಎಂಬುದು ಕೇವಲ ಹೊಟ್ಟೆ ತುಂಬಿಸಿಕೊಳ್ಳುವ ಮಾರ್ಗವಾಗಿ ಉಳಿದಿಲ್ಲ; ಬದಲಾಗಿ ಅದು ಆಯಾ ಪ್ರದೇಶದ ಇತಿಹಾಸ, ಭೌಗೋಳಿಕತೆ ಮತ್ತು ಜನಜೀವನದ ಸಾರವನ್ನು ತಿಳಿಸಿಕೊಡುವ ಜೀವಂತ ದಾಖಲೆ. ಒಂದು ಊರಿನ ಅಡುಗೆಮನೆಯೊಳಗೆ ಇಣುಕಿದರೆ, ಅಲ್ಲಿನ ಜನರ ಶತಮಾನಗಳ ಬದುಕಿನ ಹೋರಾಟ ಮತ್ತು ಸಂಭ್ರಮದ ಕಥೆಗಳು ತೆರೆದುಕೊಳ್ಳುತ್ತವೆ.
ಒಂದು ಪ್ರದೇಶದಲ್ಲಿ ಜನರು ಏನು ತಿನ್ನುತ್ತಾರೆ ಎಂಬುದು ಅಲ್ಲಿನ ಮಣ್ಣು ಮತ್ತು ಹವಾಮಾನವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ದಕ್ಷಿಣ ಕರ್ನಾಟಕದ ರಾಗಿ ಮುದ್ದೆ ಕೇವಲ ಆಹಾರವಲ್ಲ, ಅದು ಅಲ್ಲಿನ ಒಣ ಹವಾಮಾನ ಮತ್ತು ಕಠಿಣ ದೈಹಿಕ ಶ್ರಮಕ್ಕೆ ಬೇಕಾದ ಶಕ್ತಿಯ ಮೂಲ. ಅದೇ ರೀತಿ ಕರಾವಳಿಯ ಅಡುಗೆಯಲ್ಲಿ ತೆಂಗಿನಕಾಯಿ ಮತ್ತು ಮೀನಿನ ಬಾಹುಳ್ಯವಿರುವುದು ಅಲ್ಲಿನ ಸಮುದ್ರ ತೀರದ ಭೌಗೋಳಿಕ ಲಕ್ಷಣಕ್ಕೆ ಸಾಕ್ಷಿ. ಹೀಗೆ ಪ್ರತಿಯೊಂದು ತುತ್ತೂ ಆ ಮಣ್ಣಿನ ಗುಣಲಕ್ಷಣಗಳನ್ನು ನಾಲಗೆಯ ಮೇಲೆ ಪರಿಚಯಿಸುತ್ತದೆ. ನಮ್ಮ ಅಡುಗೆಯಲ್ಲಿ ಬಳಕೆಯಾಗುವ ಆಲೂಗಡ್ಡೆ, ಟೊಮ್ಯಾಟೊ ಅಥವಾ ಮೆಣಸಿನಕಾಯಿಗಳ ಹಿಂದೆ ವಿದೇಶಿ ಪ್ರವಾಸಿಗರ ಮತ್ತು ಆಕ್ರಮಣಕಾರರ ಕಥೆಗಳಿವೆ. ಲಖನೌದ ಕಬಾಬ್‌ಗಳು ಮೊಘಲರ ವೈಭವವನ್ನು ನೆನಪಿಸಿದರೆ, ಹಳೇ ಮೈಸೂರು ಭಾಗದ ಅಡುಗೆಗಳು ಅರಮನೆಯ ಸೊಗಡನ್ನು ಸಾರುತ್ತವೆ. ಪ್ರತಿಯೊಂದು ಸಾಂಬಾರ ಪದಾರ್ಥವೂ ಯಾವುದೋ ಒಂದು ಕಾಲಘಟ್ಟದ ವ್ಯಾಪಾರ, ಜನಜೀವನ, ಜೀವನವಿಧಾನ, ಸಂಸ್ಕೃತಿ, ಪರಂಪರೆ, ಜಾನಪದ ಮತ್ತು ಯುದ್ಧಗಳ ನೆನಪನ್ನು ಹೊತ್ತು ತಂದಿರುತ್ತದೆ.
ಆಹಾರ ತಯಾರಿಸುವ ವಿಧಾನವು ಜನರ ಜೀವನಶೈಲಿಯ ಪ್ರತಿಬಿಂಬ. ಹಳ್ಳಿಗಳಲ್ಲಿ ಇಂದಿಗೂ ಬಳಕೆಯಾಗುವ ಒಲೆ, ಮಣ್ಣಿನ ಮಡಕೆ ಮತ್ತು ಕಲ್ಲಿನ ಕುಟ್ಟಾಣಿಗಳು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಹಬಾಳ್ವೆಯ ಪ್ರತೀಕ. ಹಬ್ಬಗಳಲ್ಲಿ ಮಾಡುವ ವಿಶೇಷ ಖಾದ್ಯಗಳು ಆ ಪ್ರಾಂತ್ಯದ ನಂಬಿಕೆ ಮತ್ತು ಆಚರಣೆಗಳನ್ನು ತಿಳಿಸುತ್ತವೆ. ಹೀಗೆ, ‘ಗ್ಯಾಸ್ಟ್ರೋನಮಿ ಟೂರಿಸಂ’ ಎನ್ನುವುದು ಕೇವಲ ರುಚಿಯ ಹುಡುಕಾಟವಲ್ಲ; ಅದು ನಮ್ಮ ಹಿರಿಯರು ಪ್ರಕೃತಿಯ ಜತೆ ನಡೆಸಿದ ಸಂವಾದವನ್ನು ಅರಿಯುವ ಪ್ರಕ್ರಿಯೆ. ಒಂದು ಊರಿನ ಅಪ್ಪಟ ರುಚಿ ಸವಿಯುವುದು ಎಂದರೆ, ಆ ಊರಿನ ಇತಿಹಾಸವನ್ನು ಒಂದು ತುತ್ತಿನಲ್ಲಿ ಅನುಭವಿಸುವುದು ಎಂದೇ ಅರ್ಥ. ಜಗತ್ತು ಇಂದು ಈ ಸತ್ಯವನ್ನು ಒಪ್ಪಿಕೊಳ್ಳುತ್ತಿದ್ದು, ಅಡುಗೆಮನೆಯನ್ನು 'ಸಾಂಸ್ಕೃತಿಕ ವಸ್ತುಸಂಗ್ರಹಾಲಯ' ಎಂದು ಪರಿಗಣಿಸುತ್ತಿದೆ. ಅಡುಗೆಮನೆ ಒಂದು ಪ್ರಾಂತ್ಯದ ಇತಿಹಾಸದ ಜೀವಂತ ದಾಖಲೆ. ಒಂದು ಪ್ರದೇಶದ ಸಂಸ್ಕೃತಿಯನ್ನು ಅರಿಯಲು ನಾಲಗೆಗಿಂತ ಮಿಗಿಲಾದ short cut ಇಲ್ಲ. ಸ್ಥಳೀಯ ಆಹಾರ ಪದಾರ್ಥಗಳನ್ನು ಸವಿಯದೇ ಒಂದು ಊರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಹೆಚ್ಚು ಸ್ವೀಕೃತವಾಗುತ್ತಿದೆ. ಇಂದಿನ ಪ್ರವಾಸಿಗ ಕಣ್ಣಿಂದ ಮಾತ್ರವಲ್ಲ, ಉದರದಿಂದಲೂ ಒಂದು ಊರನ್ನು ಅರಿಯುವ ಜ್ಞಾನದ ಹುಡುಕಾಟದಲ್ಲಿದ್ದಾನೆ.

ಇಂದು ನಗರದ ಪಂಚತಾರಾ ಹೊಟೇಲ್‌ಗಳಿಗಿಂತ ಹೆಚ್ಚಾಗಿ ಜನರು ಗ್ರಾಮೀಣ ಪ್ರದೇಶಗಳತ್ತ, ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ. ನಗರದ ಕಾಂಕ್ರೀಟ್ ಕಾಡಿನಲ್ಲಿ ಸಿಗದ 'ಮಣ್ಣಿನ ಮಡಕೆಯ ರುಚಿ' ಹಳ್ಳಿಯ ಒಲೆಯಲ್ಲಿ ಸಿಗುತ್ತದೆ. ರೈತನ ಮನೆಯಲ್ಲಿ ಕುಳಿತು ಬಿಸಿಬಿಸಿ ರಾಗಿಮುದ್ದೆ ಉಣ್ಣುವುದು ಅಥವಾ ಕೊಡಗಿನ ತೋಟದ ಮಧ್ಯೆ ಕುಳಿತು 'ಕಡುಬು ಮತ್ತು ಪಾಂಡಿ ಕರಿ' ಸವಿಯುವುದರಲ್ಲಿ ಇರುವ ಆನಂದವೇ ಬೇರೆ. ಪ್ರವಾಸಿಗರು ಇಂದು ‘ಫಾರ್ಮ್ ಟು ಟೇಬಲ್’ (ಹೊಲದಿಂದ ಊಟದ ಪ್ಲೇಟಿಗೆ) ಎಂಬ ಕಲ್ಪನೆಯನ್ನು ಇಷ್ಟಪಡುತ್ತಿದ್ದಾರೆ. ತಾಜಾ ತರಕಾರಿಗಳು, ಸ್ಥಳೀಯವಾಗಿ ಬೆಳೆದ ಧಾನ್ಯಗಳು ಮತ್ತು ಸಾಂಪ್ರದಾಯಿಕ ಮಸಾಲೆಗಳ ಬಳಕೆ ಈ ಪ್ರವಾಸದ ಜೀವಾಳ.
ಇಸ್ರೇಲ್ - ಗಾಜಾ ಯುದ್ಧಕ್ಕಿಂತ ಮುನ್ನ, ಇಸ್ರೇಲಿ ಪ್ರವಾಸೋದ್ಯಮ ತನ್ನ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಪರಿಚಯಿಸಲೆಂದೇ, ಇಸ್ರೇಲಿನ ಬೀದಿ ಬದಿಯ ಆಹಾರ (Street Food Fest) ಮೇಳವನ್ನು ಸಂಘಟಿಸಿ ವಿದೇಶಿ ಪತ್ರಕರ್ತರನ್ನು ಆಹ್ವಾನಿಸಿದ್ದು ನೆನಪಾಗುತ್ತದೆ. ಇದು ವಿಶ್ವದಾದ್ಯಂತ ಭಾರಿ ಜನಪ್ರಿಯತೆ ಗಳಿಸಿತ್ತು. ಆಗ ಕೇವಲ ರುಚಿಗಾಗಿಯೇ ಸಾವಿರಾರು ಪ್ರವಾಸಿಗರು ಟೆಲ್ ಅವಿವ್ ಮತ್ತು ಜೆರುಸಲೆಮ್‌ನ ಗಲ್ಲಿಗಳಿಗೆ ಲಗ್ಗೆ ಇಟ್ಟಿದ್ದರು. ‘ನಮ್ಮ ದೇಶವನ್ನು ನೋಡಲು ಬನ್ನಿ, ಅದಕ್ಕಿಂತ ಹೆಚ್ಚಾಗಿ ನಿಮ್ಮ ಬಾಯಿ ಚಪಲ ತೀರಿಸಿಕೊಳ್ಳಲು ಬನ್ನಿ’ ಎಂದು ಪ್ರಚಾರ ಮಾಡಿತ್ತು.
‘ನಾಲಗೆಯ ಮೇಲೆ ಪ್ರಪಂಚವಿದೆ’ ಎಂಬ ಮಾತು ಹಿಂದೆಂದಿಗಿಂತ ಈಗ ಸತ್ಯವಾಗಿದೆ. ಭೂಪಟದಲ್ಲಿ ದೇಶಗಳನ್ನು ನೋಡುತ್ತೇವೆ, ಆದರೆ ಆ ದೇಶದ ನಿಜವಾದ ಸಾರವನ್ನು ರುಚಿಯ ಮೂಲಕ ತಿಳಿಯುತ್ತೇವೆ. ಐತಿಹಾಸಿಕ ತಾಣಗಳು ನಮಗೆ ಕಾಲದ ಅರಿವು ಮೂಡಿಸಿದರೆ, ಆಹಾರವು ನಮಗೆ ಮನುಷ್ಯ ಸಂಕುಲದ ಬಾಂಧವ್ಯವನ್ನು ನೆನಪಿಸುತ್ತದೆ. ಆಹಾರ ಎನ್ನುವುದು ಕೇವಲ ಶಕ್ತಿಯ ಮೂಲವಲ್ಲ, ಅದು ಮನುಷ್ಯ ಮತ್ತು ಪ್ರಕೃತಿಯ ನಡುವೆ ಶತಮಾನಗಳಿಂದ ನಡೆಯುತ್ತಿರುವ ಸಂವಾದದ ಫಲಿತಾಂಶ. ‘ಗ್ಯಾಸ್ಟ್ರೋನಮಿ ಟೂರಿಸಂ’ನ ಮೂಲ ಆಶಯವೂ ಇದೇ. ನಾವು ಪ್ರವಾಸ ಹೋದಾಗ ಸವಿಯುವ ಒಂದು ತುತ್ತು ಅನ್ನದ ಹಿಂದೆ ಆ ಮಣ್ಣಿನ ಗುಣ, ಅಲ್ಲಿನ ಹವಾಮಾನ ಮತ್ತು ನಮ್ಮ ಹಿರಿಯರು ಕಂಡುಕೊಂಡ ಬದುಕಿನ ದರ್ಶನ ಅಡಗಿರುತ್ತದೆ. ಅದಕ್ಕಾಗಿಯೇ ಇಂದಿನ ಜಗತ್ತು ಅಡುಗೆಮನೆಯನ್ನು ಕೇವಲ ಅಡುಗೆ ಮಾಡುವ ಜಾಗವೆಂದು ನೋಡದೆ, ಒಂದು 'ಸಾಂಸ್ಕೃತಿಕತೆಯ ಅನಾವರಣ' ಎಂದು ಪರಿಗಣಿಸುತ್ತಿದೆ.
ನಮ್ಮ ಹಿರಿಯರು ಸಿಕ್ಕಿದ್ದನ್ನೆಲ್ಲ ತಿನ್ನಲಿಲ್ಲ. ಬದಲಾಗಿ ಆಯಾ ಹವಾಮಾನಕ್ಕೆ ತಕ್ಕಂತೆ ಪ್ರಕೃತಿಯನ್ನು ಅರಿತು ತಮ್ಮ ಆಹಾರ ಪದ್ಧತಿಯನ್ನು ರೂಪಿಸಿಕೊಂಡರು. ಮಲೆನಾಡಿನ ಕಡು ಮಳೆಗೆ ಮೈ ಬಿಸಿಯಾಗಿಸಲು ಬಳಸುವ 'ಕಷಾಯ' ಅಥವಾ 'ತಂಬುಳಿ', ಉತ್ತರ ಕರ್ನಾಟಕದ ಸುಡುವ ಬಿಸಿಲಿಗೆ ತಂಪು ನೀಡುವ 'ಸಜ್ಜೆ ರೊಟ್ಟಿ' ಮತ್ತು 'ಮೊಸರು'—ಇವೆಲ್ಲವೂ ಪ್ರಕೃತಿಯೊಂದಿಗೆ ನಡೆಸಿದ ಸಂಧಾನ ಫಲಗಳು. ಗ್ಯಾಸ್ಟ್ರೋನಮಿ ಪ್ರವಾಸಿಗ ಈ ರುಚಿಗಳನ್ನು ಸವಿಯುವಾಗ, ಆ ಮಣ್ಣಿನ ತತ್ವವನ್ನು ಅರಿಯುತ್ತಾನೆ. ಒಂದು ಪ್ರದೇಶದ ಇತಿಹಾಸವನ್ನು ಪುಸ್ತಕಗಳಲ್ಲಿ ಓದುವುದಕ್ಕಿಂತ, ಅಲ್ಲಿನ ಸಾಂಪ್ರದಾಯಿಕ ಆಹಾರದ ಮೂಲಕ ಅನುಭವಿಸುವುದು ಹೆಚ್ಚು ಪರಿಣಾಮಕಾರಿ. ಅಪ್ಪಟ ರುಚಿ ಎಂದರೆ ಅದು ಕಾಲಚಕ್ರದಲ್ಲಿ ಹರಿದುಬಂದ ಅನುಭವದ ಸಾರ. ರುಚಿಯ ಅನ್ವೇಷಣೆ ಎಂಬುದು ಕೇವಲ ಜಿಹ್ವಾ ಚಾಪಲ್ಯವಲ್ಲ. ಅದು ಮನುಷ್ಯನ ವಿಕಾಸದ ಹಾದಿಯನ್ನು ಅರಿಯುವ ಪ್ರಕ್ರಿಯೆ. ನಾವು ಒಂದು ಪ್ರದೇಶದ ಆಹಾರವನ್ನು ಗೌರವಿಸಿದಾಗ, ಆ ಪ್ರದೇಶದ ಇತಿಹಾಸ ಮತ್ತು ಜನರ ಬದುಕನ್ನು ಗೌರವಿಸಿದಂತೆ.
‘ಗ್ಯಾಸ್ಟ್ರೋನಮಿ ಟೂರಿಸಂ’ನ ರೋಚಕ ಅಂಶವೆಂದರೆ ಫುಡ್ ಫೆಸ್ಟಿವಲ್‌ಗಳು, ಕುಕರಿ ಕ್ಲಾಸ್‌ಗಳು ಮತ್ತು ಬೀದಿ ಬದಿಯ ಆಹಾರದ ಅನ್ವೇಷಣೆ. ಈ ಮೂರು ಅಂಶಗಳು ಒಬ್ಬ ಪ್ರವಾಸಿಯನ್ನು ಆ ಊರಿನ ಸಂಸ್ಕೃತಿಯೊಂದಿಗೆ ಬೆಸೆಯುತ್ತವೆ. ಅನೇಕ ದೇಶಗಳಲ್ಲಿ ಆಹಾರವೇ ಒಂದು ಹಬ್ಬ. ಬೆಲ್ಜಿಯಂನ ಮಾದಕ ಚಾಕೊಲೇಟ್ ಫೆಸ್ಟಿವಲ್ ಇರಲಿ ಅಥವಾ ಸ್ಪೇನ್‌ನ ಟೊಮ್ಯಾಟೋ ಹಬ್ಬ (ಲಾ ಟಮಾಟಿನ) ಇರಲಿ, ಇವುಗಳು ಜಗತ್ತಿನ ಮೂಲೆ ಮೂಲೆಗಳಿಂದ ಪ್ರವಾಸಿಗರನ್ನು ಸೆಳೆಯುತ್ತವೆ. ಭಾರತದಲ್ಲೂ ಇದು ಹೊರತಾಗಿಲ್ಲ. ಕರಾವಳಿ ತೀರದ ಮತ್ಸ್ಯೋತ್ಸವಗಳು, ದೆಹಲಿಯ ಪರಾಟಾ ಗಲ್ಲಿಯ ಉತ್ಸವಗಳು ಅಥವಾ ಕರ್ನಾಟಕದ ಅವರೆಬೇಳೆ ಮೇಳ, ಉಪ್ಪಿನಕಾಯಿ ಮೇಳ, ಮಾವಿನ ಹಣ್ಣಿನ ಮೇಳ, ಹಲಸಿನ ಹಣ್ಣಿನ ಮೇಳ – ಇವೆಲ್ಲವೂ ಒಂದು ನಿರ್ದಿಷ್ಟ ಪದಾರ್ಥದ ಸುತ್ತ ಬೆಳೆದು ಬಂದ ಸಂಸ್ಕೃತಿಯನ್ನು ಆಚರಿಸುತ್ತವೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಕೇವಲ ಆಹಾರವಷ್ಟೇ ಅಲ್ಲ, ಆ ಆಹಾರದ ಹಿನ್ನೆಲೆಯಲ್ಲಿರುವ ಜಾನಪದ ಕಲೆ ಮತ್ತು ಸಂಗೀತದ ರಸದೌತಣವೂ ಸಿಗುತ್ತದೆ.

ಆಧುನಿಕ ಪ್ರವಾಸಿಗ ಕೇವಲ 'ಗ್ರಾಹಕ'ನಾಗಿ ಉಳಿಯಲು ಬಯಸುವುದಿಲ್ಲ, ಆತ ಒಬ್ಬ 'ಕಲಿಯುವವ'ನಾಗಲು ಇಷ್ಟಪಡುತ್ತಾನೆ. ಹೀಗಾಗಿಯೇ ಇತ್ತೀಚೆಗೆ ಕುಕರಿ ಕ್ಲಾಸ್‌ಗಳು ಪ್ರವಾಸೋದ್ಯಮದ ಅವಿಭಾಜ್ಯ ಅಂಗವಾಗಿವೆ. ಉದಾಹರಣೆಗೆ, ಕೇರಳದ ಹಿನ್ನೀರಿನ ರೆಸಾರ್ಟ್‌ಗಳಿಗೆ ಬರುವ ವಿದೇಶಿ ಪ್ರವಾಸಿಗರು ಅಲ್ಲಿನ ಸಾಂಪ್ರದಾಯಿಕ ಆಪ್ಪಂ, ಸ್ಟ್ಯೂ ಅಥವಾ ಕೇರಳ ಸಾಂಬಾರ್ ಮಾಡುವುದನ್ನು ಸ್ಥಳೀಯರಿಂದಲೇ ಕಲಿಯುತ್ತಾರೆ. ಮಣ್ಣಿನ ಒಲೆಯ ಮೇಲೆ ಮಡಕೆಯಲ್ಲಿ ಅಡುಗೆ ಮಾಡುವ ಈ ಪ್ರಕ್ರಿಯೆ ಅವರಿಗೆ ಒಂದು ರೀತಿಯ ಹೊಸ ಅನುಭವದಂತೆ ಭಾಸವಾಗುತ್ತದೆ. ತಾವು ಕಲಿತ ಅಡುಗೆಯನ್ನು ತಮ್ಮ ದೇಶಕ್ಕೆ ಹೋಗಿ ತಯಾರಿಸಿದಾಗ, ಆ ಪ್ರವಾಸದ ನೆನಪುಗಳು ಮತ್ತೆ ಮರುಕಳಿಸುವುದು ಸಹಜ.
ಯಾವುದೇ ಒಂದು ಊರಿನ ಅಸಲಿ ರುಚಿ ಇರುವುದು ಅಲ್ಲಿನ ಐಷಾರಾಮಿ ಹೊಟೇಲ್‌ಗಳಲ್ಲಲ್ಲ, ಬದಲಾಗಿ ಆ ಊರಿನ ಗಲ್ಲಿಗಳಲ್ಲಿ ಸಿಗುವ ಬೀದಿ ಬದಿಯ ಆಹಾರದಲ್ಲಿ. ಲಖನೌದ ಹಜರತ್‌ಗಂಜ್‌ನ ಗಲ್ಲಿಗಳಲ್ಲಿ ಸಿಗುವ ಗಲೌಟಿ ಕಬಾಬ್‌ಗಳು, ಮುಂಬಯಿಯ ಚೌಪಾತಿಯಲ್ಲಿನ ಪಾವ್ ಭಾಜಿ, ಅಥವಾ ಬ್ಯಾಂಕಾಕ್‌ನ ರಾತ್ರಿ ಮಾರುಕಟ್ಟೆಗಳಲ್ಲಿ ಸಿಗುವ ಪ್ಯಾಡ್ ಥಾಯ್, ಇಸ್ರೇಲಿನ ಟೆಲ್ ಅವಿವ್‌ನ 'ಕಾರ್ಮೆಲ್ ಮಾರ್ಕೆಟ್' ಮತ್ತು ಜೆರುಸಲೆಮ್‌ನ 'ಮಹಾನೆ ಯೆಹೂದಾ ಮಾರ್ಕೆಟ್' ನಲ್ಲಿ ಸಿಗುವ ಶಕ್ಷೂಕಾ – ಟೊಮ್ಯಾಟೊ ಸಾಸ್‌ನಲ್ಲಿ ಬೇಯಿಸಿದ ಮೊಟ್ಟೆಯ ಖಾದ್ಯ, ಮಾಂಸಾಹಾರಿಗಳ ನೆಚ್ಚಿನ ಶವರ್ಮಾ ಮತ್ತು ಸಸ್ಯಾಹಾರಿಗಳ ಪಾಲಿನ ಅದ್ಭುತ ರುಚಿ ಸಾಬಿಚ್ ಪ್ರವಾಸಿಗರನ್ನು ಸೆಳೆಯುವ ಕಾಂತೀಯ ಶಕ್ತಿಗಳು. ಸ್ಟ್ರೀಟ್ ಫುಡ್ ಎಂಬುದು ಆ ಊರಿನ ಜನರ ನಾಡಿಮಿಡಿತ.
‘ಗ್ಯಾಸ್ಟ್ರೋನಮಿ ಟೂರಿಸಂ’ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿ ಹೊರಹೊಮ್ಮುತ್ತಿದೆ. ಇಂದು ಪ್ರವಾಸಿಗರು ಪಂಚತಾರಾ ಹೊಟೇಲ್‌ಗಳ ವೈಭವಕ್ಕಿಂತ ಹೆಚ್ಚಾಗಿ, ಹಳ್ಳಿಯ ಸೊಗಡಿನ ‘ಮನೆ ಊಟ’ದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಈ ಬದಲಾವಣೆಯು ಸ್ಥಳೀಯ ಸಮುದಾಯಗಳಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡುತ್ತಿದೆ. ದೊಡ್ಡ ಹೊಟೇಲ್‌ಗಳಲ್ಲಿ ಹಣವು ಕಾರ್ಪೊರೇಟ್ ಸಂಸ್ಥೆಗಳ ಪಾಲಾದರೆ, ಗ್ಯಾಸ್ಟ್ರೋನಮಿ ಟೂರಿಸಂನಲ್ಲಿ ಪ್ರವಾಸಿಗರು ವ್ಯಯಿಸುವ ಪ್ರತಿ ರುಪಾಯಿಯೂ ನೇರವಾಗಿ ಸ್ಥಳೀಯ ಅಡುಗೆಯವರು ಮತ್ತು ಸಣ್ಣ ಹೊಟೇಲ್ ಮಾಲೀಕರ ಕೈಸೇರುತ್ತದೆ. ಇದು ಮಧ್ಯವರ್ತಿಗಳ ಹಾವಳಿಯಿಲ್ಲದ ನೇರ ಆರ್ಥಿಕ ವ್ಯವಸ್ಥೆಯನ್ನು ಸೃಷ್ಟಿಸಿದೆ.
ಇದನ್ನೂ ಓದಿ: ಟೂರಿಸಂನಲ್ಲಿ ನಮಗಿಂತ 15 ವರ್ಷ ಮುಂದಿರುವ ಕೇರಳದಿಂದ ಕಲಿಯುವುದೇನು?
ಈ ಟ್ರೆಂಡ್‌ನಿಂದ ಅತಿ ಹೆಚ್ಚು ಲಾಭ ಪಡೆದಿರುವುದು ಮಹಿಳಾ ಸ್ವಸಹಾಯ ಸಂಘಗಳು. ಹಳ್ಳಿಗಳಲ್ಲಿ ಮಹಿಳೆಯರು ಒಗ್ಗೂಡಿ ನಡೆಸುವ ಖಾನಾವಳಿ ಅಥವಾ ಮನೆ ಊಟದ ಕೇಂದ್ರಗಳು ಇಂದು ಬ್ರಾಂಡ್ ಆಗಿ ಬೆಳೆಯುತ್ತಿವೆ. ಅಜ್ಜಿಯ ಕಾಲದ ಕೈರುಚಿ, ಸಾಂಪ್ರದಾಯಿಕ ಮಸಾಲೆಗಳು ಮತ್ತು ಮನೆಯವರೇ ಬಡಿಸುವ ಪ್ರೀತಿಯ ಊಟಕ್ಕೆ ಪ್ರವಾಸಿಗರು ಮಾರುಹೋಗಿದ್ದಾರೆ. ಇದು ಗ್ರಾಮೀಣ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಬೆಳೆಸಿದ್ದು, ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದೆ. ಆಹಾರದ ಕಾರಣಕ್ಕಾಗಿ ಜನರು ಹಳ್ಳಿಗಳಿಗೆ ಭೇಟಿ ನೀಡುತ್ತಿರುವುದರಿಂದ, ಹಳ್ಳಿಗಳ ಮೂಲಸೌಕರ್ಯಗಳು ಸುಧಾರಿಸುತ್ತಿವೆ. ಇದು ಕೇವಲ ಆಹಾರಕ್ಕೆ ಸೀಮಿತವಾಗದೇ, ಗ್ರಾಮೀಣ ಸಂಸ್ಕೃತಿ, ಕಲೆ ಮತ್ತು ಜೀವನಶೈಲಿಯನ್ನು ಜಗತ್ತಿಗೆ ಪರಿಚಯಿಸುವ ವೇದಿಕೆಯಾಗಿದೆ. ‘ಗ್ಯಾಸ್ಟ್ರೋನಮಿ ಟೂರಿಸಂ’ ಎಂಬುದು ಹಳ್ಳಿಯ ಉಪ್ಪಿನಕಾಯಿಯಿಂದ ಹಿಡಿದು ರೈತನ ಹೊಲದವರೆಗೆ ಎಲ್ಲರಿಗೂ ಬದುಕು ನೀಡುತ್ತಿರುವ 'ಅಕ್ಷಯ ಪಾತ್ರೆ'ಯಾಗಿದೆ.
ದಿನದಿಂದ ದಿನಕ್ಕೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಟ್ರೆಂಡ್‌ಗಳನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ಸನ್ನದ್ಧರಾಗುವುದು ಈ ಕ್ಷಣದ ಅಗತ್ಯ.