Thursday, May 28, 2026
Thursday, May 28, 2026

ಕ್ವಾಂಟಿಟಿ Vs ಕ್ವಾಲಿಟಿ

ಈಗ ನಮಗೆ ಎಲ್ಲವೂ ಕೆಲವೇ ಸೆಕೆಂಡುಗಳಲ್ಲೇ ಚೇಂಜ್ ಆಗ್ತಾ ಇರೋದು ಸಹಜವಾಗಿಬಿಟ್ಟಿದೆ. ಇದುವೇ ಈ ಟ್ರಿಪ್ಪುಗಳಲ್ಲಿ ಸ್ಪೀಡಿನ ಮೇಲಿನ ಒತ್ತಿಗೆ ಕಾರಣವಾಗುತ್ತಿದೆ. ಹತ್ತು ನಿಮಿಷದಲ್ಲಿ ಮೂವತ್ತು ರೀಲ್ಸ್‌ ಕವರ್‌ ಮಾಡುವವರಿಗೆ ಒಂದು ದಿನದಲ್ಲಿ ಹತ್ತು ಡೆಸ್ಟಿನೇಶನ್‌ ಕವರ್‌ ಮಾಡುವುದು ತುಂಬಾ ನಿಧಾನ ಅನಿಸಿಬಿಡುತ್ತದೋ ಏನೋ!

  • ಬಡೆಕ್ಕಿಲ ಪ್ರದೀಪ

ಜಗತ್ತು ತುಂಬಾ ದೊಡ್ಡದು. ಇಲ್ಲಿ ಕಂಡಷ್ಟೂ ಇನ್ನಷ್ಟು ಬಾಕಿ ಉಳಿದಿರುತ್ತದೆ. ಮೊಗೆದಷ್ಟೂ ಇನ್ನಷ್ಟು ತೆಗೆಯುವುದು ಬಾಕಿ ಇರುತ್ತದೆ. ಹಾಗಿದ್ದರೆ ನಮ್ಮ ಟ್ರಿಪ್‌ನಲ್ಲಿ ನಾವು ಎಷ್ಟು ಸಾಧ್ಯವೋ ಅಷ್ಟನ್ನೂ ಕಂಡು, ನಾವು ನೋಡಿದ ಜಾಗಗಳ ಪಟ್ಟಿಯನ್ನು ದೊಡ್ಡದಾಗಿಸುವುದೇ ಸಾಧನೇನಾ?

ಹೆಚ್ಚಿನ ಟ್ರಿಪ್ಪುಗಳಲ್ಲಿ ಇದೇ ದೊಡ್ಡ ಚಾಲೆಂಜಾಗಿ ಪರಿಣಮಿಸುತ್ತದೆ. ನಾವು ನಾಳೆ ಟ್ರಿಪ್‌ ಹೊರಟ್ವಿ. ಒಂದೇ ದಿನ ಇರೋದು, ಬೆಳಗ್ಗೆ ನಾಲ್ಕು ಗಂಟೆಗೆ ಹೊರಟು, ರಾತ್ರಿ ಬರುವುದರೊಳಗೆ ನಾಲ್ಕೈದು ಸ್ಪಾಟ್‌ಗಳನ್ನು ಮುಗಿಸಿ ಬರಬೇಕು ಅನ್ನೋ ಪ್ಲಾನ್‌ ಮಾಡಿದ್ದೇವೆ! ಅಥವಾ ನಾನು ಈ ಸಲ ಮಲೇಷಿಯಾ ಟ್ರಿಪ್‌ ಮಾಡ್ತಿದೀನಿ, ನಾಲ್ಕು ದಿನದಲ್ಲಿ ಎಷ್ಟಾಗತ್ತೋ ಅಷ್ಟು ಡೆಸ್ಟಿನೇಶನ್‌ಗಳನ್ನು ಮುಗಿಸೋದು ಪ್ಲಾನು!

ಠೀವಿಯಿಂದ ಇವಿ ಟ್ರಾವೆಲ್‌ ಮಾಡೋದು ಹೇಗೆ?

ಈ ರೀತಿಯ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಇದನ್ನು ನೋಡುವಾಗ ಅಥವಾ ಇಂಥ ಮಾತುಗಳನ್ನು ಕೇಳುವಾಗ ತಲೆಗೆ ಬರುವ ಒಂದೇ ಒಂದು ಮಾತು, ಇಲ್ಲಿ ಕ್ವಾಲಿಟಿ ಮುಖ್ಯಾನಾ ಅಥವಾ ಕ್ವಾಂಟಿಟೀನಾ ಅನ್ನೋದು!

ಹೋಗಿ ನೋಡಿದ ಸ್ಥಳಗಳ ಲಿಸ್ಟು ಎಷ್ಟೇ ದೊಡ್ಡದಿದ್ದರೂ, ಅವುಗಳನ್ನು ಬರೀ ನೋಡಿ ನೆಕ್ಸ್ಟ್‌ ಡೆಸ್ಟಿನೇಶನ್‌ ತಲುಪೋದೇ ನಮ್ಮ ತಲೇಲಿದ್ದರೆ ಅಷ್ಟೂ ಜಾಗಗಳನ್ನು ನೋಡಿ ಬಂದರೇನು ಫಲ. ಅದರ ಬದಲು, ನಾವು ರೀಲುಗಳಲ್ಲೋ, ಯೂಟ್ಯೂಬ್‌ ವಿಡಿಯೋಗಳಲ್ಲೋ ಅವುಗಳನ್ನು ಇನ್ನಷ್ಟು ಡೀಟೇಲಾಗಿ ನೋಡಬಹುದಲ್ಲ. ಖರ್ಚೂ ಕಡಿಮೆ!

Untitled design (19)

ಕ್ವಾಂಟಿಟಿ ಹಿಂದೇಕೆ ಓಡೋದು?

ಒಂದು ಕ್ರಿಕೆಟ್‌ ಟೀಮ್‌ ಆದರೆ ದೊಡ್ಡ ಸ್ಕೋರ್‌ ಮಾಡೋದು, ಹೆಚ್ಚು ವಿನ್‌ಗಳನ್ನು ಕಾಣೋದು ಅದರ ಗುರಿಯಾಗಿರುತ್ತದೆ. ಲೈಫು ಬರೀ ದೊಡ್ಡ ಸ್ಕೋರ್‌ಗಳ ಮೇಲೆ ನಿಂತಿಲ್ಲ. ಇಲ್ಲಿ ಕ್ವಾಲಿಟಿ ಅಷ್ಟೇ ಮುಖ್ಯ ಅನ್ನೋದು ನಮಗ್ಯಾಕೆ ಮರೆತು ಹೋಗುತ್ತಿದೆ.

ನಮ್ಮ ಸ್ಕೂಲುಗಳಲ್ಲೇ ಇದರ ಆರಂಭವಾಗುತ್ತದೆ ಅನಿಸುತ್ತೆ ನನಗೆ. ಅಲ್ಲೂ ಅಷ್ಟೇ ಎಷ್ಟು ಹೆಚ್ಚು ಸ್ಕೋರ್‌ ಮಾಡುತ್ತೀರೋ ಅಷ್ಟು ನಿಮ್ಮ ವ್ಯಾಲ್ಯೂ ಹೆಚ್ಚಿರುತ್ತದೆ. ಗುಣಮಟ್ಟದ ಶಿಕ್ಷಣಕ್ಕೂ, ಸ್ಕೋರ್‌ ಆಧಾರಿತ ಶಿಕ್ಷಣಕ್ಕೂ ಇರುವ ವ್ಯತ್ಯಾಸ ನಮಗೆಲ್ಲಾ ಗೊತ್ತಾಗಿದ್ದರೂ, ಓಡುತ್ತಿರುವ ಕುದುರೆಯನ್ನೇ ನಾವೆಲ್ಲರೂ ಏರಬೇಕಾಗಿರುವುದು ಅನಿವಾರ್ಯ ಅನ್ನುವುದೂ ಸತ್ಯ. ಆದರೆ ನಮ್ಮ ಟ್ರಾವೆಲ್‌ ಪ್ಲಾನುಗಳಲ್ಲೂ ಲೆಕ್ಕ ಜಾಸ್ತಿ ಆಗೋದಕ್ಕಿಂತ ಹೆಚ್ಚು, ಕ್ವಾಲಿಟಿ ಬಗ್ಗೆ ಗಮನ ಹರಿಸುವ ಮನಸು ಮಾಡಬೇಕಾಗಿದೆ.

Untitled design (20)

ರೀಲ್ಸು ಮತ್ತು ಮನ್ಸು

ಈಗ ನಮಗೆ ಎಲ್ಲವೂ ಕೆಲವೇ ಸೆಕೆಂಡುಗಳಲ್ಲೇ ಚೇಂಜ್ ಆಗ್ತಾ ಇರೋದು ಸಹಜವಾಗಿಬಿಟ್ಟಿದೆ. ಇದುವೇ ಈ ಟ್ರಿಪ್ಪುಗಳಲ್ಲಿ ಸ್ಪೀಡಿನ ಮೇಲಿನ ಒತ್ತಿಗೆ ಕಾರಣವಾಗುತ್ತಿದೆ ಅನ್ನುವುದು ನಿಜ ಇರಬೇಕು. ಹತ್ತು ನಿಮಿಷದಲ್ಲಿ ಮೂವತ್ತು ರೀಲ್ಸ್‌ ಕವರ್‌ ಮಾಡುವವರಿಗೆ ಒಂದು ದಿನದಲ್ಲಿ ಹತ್ತು ಡೆಸ್ಟಿನೇಶನ್‌ ಕವರ್‌ ಮಾಡುವುದು ತುಂಬಾ ನಿಧಾನ ಅನಿಸಿಬಿಡುತ್ತದೋ ಏನೋ!

ಬೇಲೂರಿನ ಶಿಲ್ಪರಾಶಿಯನ್ನು ನೋಡಿ ಒಂದಿಷ್ಟು ಫೊಟೋ ಕ್ಲಿಕ್ಕಿಸಿಕೊಂಡು ಮುಂದೆ ಹೋಗುವ ಬದಲು, ಒಂದೋ ಎರಡೋ ಕಂಬಗಳಲ್ಲಿ ಕೆತ್ತನೆಯ ಸೌಂದರ್ಯವನ್ನು ಆಸ್ವಾದಿಸಲು ನಿಂತು, ಅದಕ್ಕೆ ಸಮಯ ನೀಡಿದರೆ, ನೀವು ಎಲ್ಲವನ್ನೂ ನೋಡಿದರೆ ನಿಮಗೆ ಏನನ್ನೂ ನೋಡಿದ ಅನುಭವ ಸಿಗದೇ ಹೋದೀತು. ಆ ಒಂದೇ ಶಿಲ್ಪ, ಆ ಒಂದೇ ಕಂಬ, ಇಡೀ ದೇವಾಲಯದ ಕೆತ್ತನೆಯ ಕೆಲಸದ ಕಥೆ ಹೇಳೀತು, ಜೊತೆಗೆ, ಯಾವುದೋ ಒಂದು ಸ್ಥಳದಲ್ಲಿ ಕುಳಿತು ಅದರ ಸೌಂದರ್ಯವು ನಿಮ್ಮೊಳಗೆ ಇಳಿಯುವುದಕ್ಕೆ ಅವಕಾಶ ಕೊಟ್ಟರೆ, ಅದು ಪ್ರಕೃತಿಯ ವಿಸ್ಮಯಕ್ಕೆ ಕಿಂಡಿಯಾದೀತು.

ಯಾಕಂದರೆ, ಲೋಕದ ಅಗಾಧತೆಯ ಅನುಭೂತಿ ಅದರ ಅಷ್ಟೂ ವ್ಯಾಪ್ತಿ-ವಿಸ್ತಾರವನ್ನು ಅಳೆಯುವುದರಲ್ಲಲ್ಲ, ಅದು ಸೃಷ್ಟಿಯ ಪ್ರತಿಯೊಂದು ಅಣುವಿನಲ್ಲೂ ಪ್ರಕೃತಿಯ ವಿಸ್ಮಯದ ವ್ಯಾಪ್ತಿಯನ್ನು ಹೇಗೆ ಹುದುಗಿಟ್ಟುಕೊಂಡಿದೆ ಎನ್ನುವ ಸತ್ಯವನ್ನು ನಮಗೆ ಹೇಳೀತು.

ಪ್ರಕೃತಿಯನ್ನು ನೋಡುವುದಕ್ಕೆ ಹೋಗುವುದು ಮಾಹಿತಿಯನ್ನು ಕಲೆಹಾಕುವುದಕ್ಕಲ್ಲ ಅಥವಾ ಎಷ್ಟು ಸ್ಪಾಟ್‌ಗಳಿವೆ ಅನ್ನುವ ವ್ಯಾಪ್ತಿಯನ್ನು ತಿಳಿದುಕೊಳ್ಳುವುದಕ್ಕಲ್ಲ. ಅದಕ್ಕೆ ಇಂಟರ್ ನೆಟ್‌ ಇದೆ. ನೀವು ಸರ್ವೇಯರ್‌ ಆಗಿ ಹೋದರೆ, ನಿಮಗೆ ಕಲೆಹಾಕುವ ಮಾಹಿತಿಯ ವ್ಯಾಪ್ತಿ ಮುಖ್ಯವಾದೀತು, ಆದರೆ ನೀವು ಪ್ರಕೃತಿಯನ್ನು ನೋಡಿ ಸಂಭ್ರಮಿಸುವುದಕ್ಕೆ ಹೋಗುತ್ತಿದ್ದೀರಿ ಎನ್ನುವುದು ನೆನಪಿದ್ದರೆ, ಈ ಲೆಕ್ಕಾಚಾರಗಳೆಲ್ಲ ಗೌಣವಾಗುತ್ತದೆ. ನೀವು ನೋಡುವುದನ್ನು ಪೂರ್ಣವಾಗಿ ಎಂಜಾಯ್‌ ಮಾಡುವುದರ ಮೇಲೇ ಗಮನ ಇಡುತ್ತೀರಿ.

ಯಾವುದೋ ಸ್ಮಾರಕದ ಮುಂದೆ ನಿಂತು ಅದರ ಬಗ್ಗೆ ಬರೆದಿರುವ ಮಾಹಿತಿಯನ್ನು ಓದುತ್ತಾ ಕುಳಿತರೆ ಅದರ ಮಾಹಿತಿಯೇನೋ ಸಿಕ್ಕೀತು, ಆದರೆ ಅದರ ಅನುಭೂತಿ ನಿಮಗಾಗಬೇಕು ಅಂದರೆ ಅದನ್ನು ಪುಟ್ಟ ಮಗು ಹೇಗೆ ಬೆರಗುಗಣ್ಣುಗಳಿಂದ ನೋಡುತ್ತದೋ, ಅದೇ ರೀತಿ ನೋಡುವುದನ್ನು ನಾವೂ ಕಲಿತುಕೊಳ್ಳೋಣ.

ನಿಮ್ಮ ಟ್ರಿಪ್‌ ಹೇಗಿದ್ದರೆ ಚೆಂದ?

  • ಎಷ್ಟು ದೇವಾಲಯಗಳನ್ನು ನೋಡಿದ್ದೇವೆ ಅನ್ನುವುದಕ್ಕಿಂತ, ದೇವರಿಗೆ ಎಷ್ಟು ಕನೆಕ್ಟ್‌ ಆಗಿದ್ದೇವೆ ಅನ್ನುವುದರ ಬಗ್ಗೆ ಗಮನಹರಿಸೋಣ.
  • ನಮ್ಮ ಚೆಕ್‌ಲಿಸ್ಟ್‌ ಅಥವಾ ಮ್ಯಾಪ್‌ನ ಮೇಲೆ ನಮ್ಮ ಗಮನ ಇಡೋದಕ್ಕಿಂತ ಹೆಚ್ಚು, ನಮ್ಮ ಪಂಚೇಂದ್ರಿಯಗಳು ಸ್ಥಳಗಳ ಸೌಂದರ್ಯದ ಅನುಭೂತಿಯನ್ನು ಎಷ್ಟು ಮಾಡಿದೆ ಎನ್ನುವುದರ ಬಗ್ಗೆ ಫೋಕಸ್‌ ಮಾಡೋಣ.
  • ಒಂದು ಟ್ರಿಪ್‌ ಮುಗಿಸಿದಾಗ ನಮ್ಮ ಗ್ಯಾಲರಿ ಫುಲ್‌ ಆಗಿರಬಹುದು, ನಾವು ಫುಲ್‌ ಸುಸ್ತೂ ಆಗಿರ್ತೀವಿ, ಆದರೆ ನಮ್ಮ ಹೃದಯ ಎಷ್ಟು ತುಂಬಿದೆ, ನಾವು ಎಷ್ಟು inspire ಆಗಿ ಬಂದಿರ್ತೀವಿ ಅನ್ನೋದು ಮುಖ್ಯವಾಗುತ್ತದೆ.
  • ಏನನ್ನೋ ಮಿಸ್‌ ಮಾಡ್ಕೋತೀವಿ ಅನ್ನುವುದರ ಬಗ್ಗೆ ಫೋಕಸ್‌ ಮಾಡುವುದಕ್ಕಿಂತ ಹೆಚ್ಚು, ಎಷ್ಟು ಎಂಜಾಯ್‌ ಮಾಡ್ತೀವಿ ಎನ್ನುವುದು ನಮ್ಮ ಗಮನದ ಕೇಂದ್ರಬಿಂದುವಾಗಿರಲಿ.

ಪಂಚ್‌-ರ್‌ ಶಾಪ್‌

ಒಂದಾದ್‌ ಮೇಲೊಂದು ಸೈಟ್‌ಗಳನ್ನು ವಿಸಿಟ್‌ ಮಾಡ್ತಾ ಇದ್ದ ಪಯಣಿಗನನ್ನು ನೋಡಿ ಅನ್ಸೋದು, ಇವರು ಟ್ರಾವೆಲರ್‌ ಅಲ್ಲ, ಸೈಟ್‌ಗಳ ಆಡಿಟರ್‌ ಇರ್ಬೇಕು ಅಂತ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?