Thursday, May 28, 2026
Thursday, May 28, 2026

ನ್ಯೂಯಾರ್ಕ್‌ ನಗರದಲ್ಲಿ ವಿಶಿಷ್ಟ ರೆಸ್ಟೋರೆಂಟ್

ಅಜ್ಜಿಯ ಕೈರುಚಿ ಉಂಡವಿರಿಗಷ್ಟೇ ಗೊತ್ತು ಅದೆಷ್ಟು ಅದ್ಭುತವಾಗಿರುತ್ತೆ ಎಂಬುದು. ಸಾಂಪ್ರದಾಯಿಕ ಶೈಲಿಯ ಅವರ ಅಡುಗೆಯಲ್ಲಿ ಪ್ರೀತಿಯ ಮಿಶ್ರಣವೇ ಬಹುಪಾಲು. ಅಮೆರಿಕದ ನ್ಯೂಯಾರ್ಕ್‌ ಸಿಟಿಯಲ್ಲಿ ಕಳೆದ 18ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿರುವ ʻಎನೋಟೆಕಾ ಮರಿಯಾʼ ಎಂಬ ರೆಸ್ಟೋರೆಂಟ್‌ನಲ್ಲಿ ಪ್ರಸಿದ್ಧ ಶೆಫ್‌ಗಳು ಅಡುಗೆ ತಯಾರಿಸಿ ಉಣಬಡಿಸುವುದಿಲ್ಲ. ಬದಲಾಗಿ ವಿವಿಧ ದೇಶಗಳ ಅಜ್ಜಿಯರ ಕೈರುಚಿಯೇ ಇಲ್ಲಿನ ಪ್ರಮುಖ ಆಕರ್ಷಣೆ.

ಅಮೆರಿಕದ ಅಚ್ಚರಿಯ ನಗರಗಳಲ್ಲಿ ನ್ಯೂಯಾರ್ಕ್‌ ನಗರ ಪ್ರಮುಖವಾದುದು. ವಿಶ್ವದ ರಾಜಧಾನಿಯೆಂಬ ಹೆಗ್ಗಳಿಗೆ ಪಾತ್ರವಾಗಿರುವ ಈ ನಗರ ಸ್ಟ್ಯಾಚ್ಯೂ ಆಫ್ ಲಿಬರ್ಟಿ, ಟೈಮ್ಸ್ ಸ್ಕ್ವೇರ್, ಬ್ರಾಡ್‌ವೇ ಥಿಯೇಟರ್, ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಸೇರಿದಂತೆ ಅನೇಕ ವಿಚಾರಗಳಿಗಾಗಿ ಗುರುತಿಸಿಕೊಂಡಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಈ ನಗರದಲ್ಲಿ ಆಹಾರಪ್ರಿಯರಿಗೇನೂ ಕಮ್ಮಿಯಿಲ್ಲ. ಜನರ ಆಹಾರದ ಆಸಕ್ತಿಗೆ ತಕ್ಕಂತೆ ಇಲ್ಲಿ ಲೆಕ್ಕವಿಲ್ಲದಷ್ಟು ರೆಸ್ಟೋರೆಂಟ್‌ಗಳು ತಲೆಯೆತ್ತಿವೆಯಾದರೂ ಇಲ್ಲಿ ದಶಕಗಳ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಲೇ ಬರುತ್ತಿರುವ ವಿಶೇಷ ರೆಸ್ಟೋರೆಂಟ್‌ ಒಂದರ ಬಗ್ಗೆ ತಿಳಿಯಲೇಬೇಕು.

ಇದನ್ನೂ ಓದಿ: ಥಾಯ್ ರೆಸ್ಟೋರೆಂಟ್‌ನಲ್ಲಿ ಜಿಪ್ ಲೈನ್ ಫುಡ್‌ ಸರ್ವಿಸ್…!

ನಾನೀಸ್ ರೆಸ್ಟೋರೆಂಟ್‌

ನ್ಯೂಯಾರ್ಕ್‌ ನಗರದ ಸ್ಟೇಟನ್ ದ್ವೀಪದಲ್ಲಿರುವ ‌ʻಎನೋಟೆಕಾ ಮರಿಯಾʼ ಎಂಬ ರೆಸ್ಟೋರಂಟ್ ವಿಶ್ವದಾದ್ಯಂತ ಗಮನ ಸೆಳೆದಿದೆ. ಈ ರೆಸ್ಟೋರಂಟ್‌ನ ವಿಶೇಷತೆಯೆಂದರೆ ಇಲ್ಲಿ ಅಡುಗೆ ಮಾಡುವವರು ಯಾರೂ ಹೆಸರುಮಾಡಿರುವ ಶೆಫ್‌ಗಳಲ್ಲ, ವಿವಿಧ ದೇಶಗಳ ಬಂದಿರುವ ಅಜ್ಜಿಯರು. ಅಜ್ಜಿಯ ಕೈರುಚಿಯನ್ನು ಸವಿಯುವ ಅವಕಾಶವನ್ನು ಜನರಿಗೆ ನೀಡುವ ಉದ್ದೇಶದಿಂದ ಈ ರೆಸ್ಟೋರಂಟ್ ಆರಂಭಿಸಲಾಯಿತು.

Untitled design (37)

ಜೋಯ್ ಸ್ಕಾರವೆಲ್ಲಾ ಎಂಬ ವ್ಯಕ್ತಿ 2007ರಲ್ಲಿ ತನ್ನ ತಾಯಿಯ ನೆನಪಿಗಾಗಿ ಅವರ ಹೆಸರಿನ ಈ ರೆಸ್ಟೋರಂಟನ್ನು ಆರಂಭಿಸಿದರು. ತಮ್ಮ ತಾಯಿ, ಅಜ್ಜಿ ಮತ್ತು ಕುಟುಂಬದ ಇನ್ನೂ ಅನೇಕ ಹಿರಿಯರನ್ನು ಕಳೆದುಕೊಂಡ ದುಃಖದಿಂದ ಹೊರಬರಲು ಅವರು ಈ ವಿಶಿಷ್ಟ ಕಲ್ಪನೆಯನ್ನು ರೂಪಿಸಿದರು. ತಮ್ಮ ಬಾಲ್ಯದ ನೆನಪುಗಳಲ್ಲಿ ಅಜ್ಜಿಯ ಅಡುಗೆಗೆ ಇದ್ದ ಸ್ಥಾನವನ್ನು ಮತ್ತೆ ಜೀವಂತಗೊಳಿಸುವ ಉದ್ದೇಶದಿಂದ ಅವರು ಮೊದಲಿಗೆ ಇಟಾಲಿಯನ್ ಅಜ್ಜಿಯರನ್ನು ಅಡುಗೆ ಮಾಡಲು ರೆಸ್ಟೋರೆಂಟ್‌ಗೆ ಆಹ್ವಾನಿಸಿದ್ದರು. ನಂತರ ವಿಶ್ವದ ವಿವಿಧ ದೇಶಗಳ ಅಜ್ಜಿಯರನ್ನು ಕರೆಸಿ, ಅವರ ಆಹಾರಗಳ ಪ್ರಯೋಗಕ್ಕೂ ಮುಂದಾಗಿರುವುದು ವಿಶೇಷ.

ಇಂದು ಇಲ್ಲಿ ಇಟಲಿ, ಗ್ರೀಸ್, ಜಪಾನ್, ಪಾಕಿಸ್ತಾನ, ಶ್ರೀಲಂಕಾ, ಲಿಬೇರಿಯಾ ಸೇರಿದಂತೆ ಅನೇಕ ದೇಶಗಳ ಅಜ್ಜಿಯರು ತಮ್ಮ ದೇಶದ ಪಾರಂಪರಿಕ ಆಹಾರವನ್ನು ತಯಾರಿಸುತ್ತಾರೆ. ನಿತ್ಯವೂ ಅದೇ ಮೆನುವಿರುವುದಿಲ್ಲ, ಪ್ರತಿದಿನವೂ ಮೆನು ಬದಲಾಗುತ್ತಲೇ ಇರುತ್ತದೆ. ಒಂದು ದಿನ ಗ್ರೀಕ್ ಆಹಾರ ಸಿದ್ಧವಾದರೆ, ಮತ್ತೊಂದು ದಿನ ಜಪಾನೀಸ್ ಅಥವಾ ದಕ್ಷಿಣ ಏಷ್ಯಾದ ವಿಶೇಷ ಆಹಾರಯನ್ನು ಸವಿಯಬಹುದು. ಇದರಿಂದ ಗ್ರಾಹಕರಿಗೆ ಪ್ರತಿ ಬಾರಿಯೂ ಹೊಸ ರುಚಿಯ ಅನುಭವ ಸಿಕ್ಕಂತಾಗುತ್ತದೆ.

Untitled design (36)

ಅಜ್ಜಿಯ ನೆನಪುಗಳೊಂದಿಗೆ…

ʻಎನೋಟೆಕಾ ಮರಿಯಾʼ ಕೇವಲ ರೆಸ್ಟೋರಂಟ್ ಮಾತ್ರವಲ್ಲ, ಇದು ಸಂಸ್ಕೃತಿ ಮತ್ತು ಕುಟುಂಬ ಮೌಲ್ಯಗಳ ಸಂಕೇತವಾಗಿದೆ. ಇಲ್ಲಿ ಬರುವ ಜನರು ತಮ್ಮ ಅಜ್ಜಿ ಅಥವಾ ತಾಯಿಯೊಂದಿಗೆ ನೆನಪುಗಳತ್ತ ಮತ್ತೆ ಮರಳುತ್ತಾರೆ. ಒಮ್ಮೆ ಭೇಟಿ ನೀಡಿದ ಮಂದಿ ಮತ್ತೆ ಮತ್ತೆ ಹೊಸ ರುಚಿಯನ್ನರಸಿ ಬರುತ್ತಲೇ ಇರುತ್ತಾರೆ. ಈ ರೆಸ್ಟೋರಂಟ್‌ನಲ್ಲಿ ಅಡುಗೆ ಮಾಡುವ ಅಜ್ಜಿಯರೂ ಅಡುಗೆ ತಯಾರಿಕೆಗಷ್ಟೇ ಸೀಮಿತವಾಗಿರದೆ ಬಂದಿರುವ ಗ್ರಾಹಕರೊಂದಿಗೆ ಆಪ್ತವಾಗಿ, ಪ್ರೀತಿಯಿಂದ ಬೆರೆತು, ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ತಾವು ಸಿದ್ಧಪಡಿಸಿರುವ ರುಚಿಕರ ಆಹಾರಗಳ ತಯಾರಿಕ ಹಂತವಂತೂ ತಿಳಿಸಿಕೊಡುತ್ತಾರೆ. ಅವರ ಅಡುಗೆಯಲ್ಲಿ ಪ್ರೀತಿ, ನೆನಪು ಮತ್ತು ಕುಟುಂಬದ ಬಾಂಧವ್ಯ ಬೆರೆತಿರುತ್ತದೆ.

ರೆಸ್ಟೋರಂಟ್‌ನ ಕಥೆ ಹೇಳುವ ʻNonnasʼ ಸಿನಿಮಾ

ಇತ್ತೀಚೆಗೆ ಈ ರೆಸ್ಟೋರಂಟ್‌ನ ಕಥೆಯನ್ನು ಆಧರಿಸಿ ನೆಟ್‌ಫ್ಲಿಕ್ಸ್‌ ʻNonnasʼ ಎಂಬ ಸಿನಿಮಾ ನಿರ್ಮಾಣ ಮಾಡಿದೆ. ಈ ಚಿತ್ರ ಬಿಡುಗಡೆಯಾಗುತ್ತಲೇ ʻಎನೋಟೆಕಾ ಮರಿಯಾʼ ರೆಸ್ಟೋರೆಂಟ್‌ ವಿಶ್ವದಾದ್ಯಂತ ಚಿರಪರಿಚಿತವಾಗಿದ್ದು, ಇಲ್ಲಿನ ಅಜ್ಜಿಯರ ಕೈರುಚಿ ಸವಿಯಲು ಹೆಚ್ಚಿನ ಸಂಖ್ಯೆಯಲ್ಲಿ ಆಹಾರ ಪ್ರಿಯರು ಭೇಟಿ ನೀಡುತ್ತಿದ್ದಾರೆ. ಅಜ್ಜಿಯ ಅಡುಗೆಯನ್ನು ಅಗ್ಗದ ಬೆಲೆಯಲ್ಲಿ ಸವಿಯಲು ಜೋಯ್ ಸ್ಕಾರವೆಲ್ಲಾ ಅನುವು ಮಾಡಿಕೊಟ್ಟಿದ್ದು, ಕಾರ್ಡ್‌ಗಳಿಗೆ ಬದಲಾಗಿ ಗರಿ ಗರಿಯಾದ ನೋಟುಗಳಿದ್ದರಷ್ಟೇ ನಿಮಗಿಲ್ಲಿ ಆಹಾರವನ್ನು ಟೇಸ್ಟ್‌ ಮಾಡಬಹುದು.

ಒಟ್ಟಿನಲ್ಲಿ ಇಂದಿನ ಬ್ಯುಸಿ ಲೈಫ್‌ನಲ್ಲಿ ಅಮ್ಮ, ಅಜ್ಜಿ ತಯಾರಿಸುವ ಮನೆ ಊಟ, ಕುಟುಂಬದೊಂದಿಗೆ ಆತ್ಮೀಯ ಕ್ಷಣಗಳನ್ನು ಮಿಸ್‌ ಮಾಡಿಕೊಳ್ಳುವವರಿಗೆ ʻಎನೋಟೆಕಾ ಮರಿಯಾʼ ಸೂಕ್ತ ಆಯ್ಕೆ. ನೀಔಏನಾದರೂ ನ್ಯೂಯಾರ್ಕ್‌ ನಗರದ ಸ್ಟೇಟನ್ ದ್ವೀಪಕ್ಕೆ ಭೇಟಿ ಕೊಟ್ಟಿದ್ದೇ ಆದರೆ ತಪ್ಪದೇ ಈ ರೆಸ್ಟೋರೆಂಟ್‌ ಗೆ ಭೇಟಿ ನೀಡಿ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ