Monday, January 19, 2026
Monday, January 19, 2026

ಪಿರಮಿಡ್ ಎಂಬುದು ಸಾವಿನ ನಂತರದ ಬದುಕಿನ ಸಿದ್ಧತೆ!

ಇತ್ತೀಚೆಗೆ ಹಲವಾರು ಪಾಶ್ಚಾತ್ಯ ದೇಶಗಳಲ್ಲಿ ಸತ್ತ ನಂತರ ಯಾವ ರೀತಿ ಪ್ರೇಯರ್ ಮೀಟ್ ಇರಬೇಕು, ಯಾರನ್ನೆಲ್ಲಾ ಕರೆಯಬೇಕು. ದೇಹವನ್ನು ದಾನ ಮಾಡಬೇಕೇ? ಹೀಗೆ ಎಲ್ಲವನ್ನೂ ಪ್ಲಾನ್ ಮಾಡುತ್ತಿದ್ದಾರೆ. ಸಾವಿರಾರು ವರ್ಷದ ಹಿಂದೆಯೇ ಸತ್ತ ನಂತರದ ಜೀವನದ ಕಲ್ಪನೆಯನ್ನು ಹೊಂದಿದ್ದ ಈಜಿಪ್ಟ್ ದೇಶದ ಚರಿತ್ರೆಯನ್ನು ನಾವು ಹತ್ತು ದಿನದಲ್ಲಿ ಅಥವಾ ಹದಿನೈದು ದಿನದಲ್ಲಿ ಕಟ್ಟಿಕೊಳ್ಳಲು ಸಾಧ್ಯವೇ ಇಲ್ಲ.

  • ರಂಗಸ್ವಾಮಿ ಮೂಕನಹಳ್ಳಿ

ಈಜಿಪ್ಟ್ ಪ್ರವಾಸ ತಿಂಗಳುಗಟ್ಟಲೆ ಪ್ಲಾನ್ ಮಾಡಿದ್ದಲ್ಲ. ಇಬ್ಬರು ಗೆಳೆಯರು ಸಿನಿಮಾಗೆ ಹೋಗೋಣವೇ? ಎಂದು ಫೋನಿನಲ್ಲಿ ಮಾತಾಡಿಕೊಂಡು ಹೋದಷ್ಟು ಸರಾಗವಾಗಿ ಪ್ರವಾಸ ಫಿಕ್ಸ್ ಆಗಿದ್ದು. ಅಲ್ಲಿಗೆ ಹೋಗಬೇಕು ಎಂದ ಮೇಲೆ ಅಲ್ಲಿನ ಬಹಳಷ್ಟು ವಿಷಯಗಳ ಬಗ್ಗೆ ತಿಳಿವಳಿಕೆ ಮೂಡುತ್ತಾ ಹೋಯ್ತು. ಆದರೆ ಯಾವ ಕಸರತ್ತು ಕೂಡ ಮಾಡದೆ ಮಸ್ತಕದಲ್ಲಿ ಕುಳಿತದ್ದು ಪಿರಮಿಡ್ಡು! ಹೌದು ಬಾಲ್ಯದಿಂದ ಪಿರಮಿಡ್ಡುಗಳ ಬಗ್ಗೆ ಕೇಳಿದ ಕಾರಣ ಈಜಿಪ್ಟ್ ಎಂದರೆ ಪಿರಮಿಡ್ಡು ಎನ್ನುವುದು ಮನಸ್ಸಿನಲ್ಲಿ ಅಚ್ಚಾಗಿ ಹೋಗಿದೆ. ನನಗೊಬ್ಬನಿಗೇ ಅಲ್ಲ, ಅದು ನಮ್ಮೆಲ್ಲರ ಕಥೆಯೂ ಹೌದು. ಆದರೆ ನಿಮಗೆಲ್ಲಾ ಗೊತ್ತಿರಲಿ ಸುಡಾನ್ ದೇಶದಲ್ಲಿ ಈಜಿಪ್ಟ್ ಗಿಂತ ಹೆಚ್ಚು ಪಿರಮಿಡ್ಡುಗಳಿವೆ. ಸುಡಾನಿನಲ್ಲಿ 220-225 ಪಿರಮಿಡ್ಡುಗಳಿವೆ ಎನ್ನಲಾಗಿದೆ. ಈಜಿಪ್ಟಿನಲ್ಲಿ 118 ಪಿರಮಿಡ್ಡುಗಳಿವೆ ಆದರೆ ಇವುಗಳ ಸಂಖ್ಯೆ 130ರ ತನಕವೂ ಹೋಗಬಹುದು ಎನ್ನುತ್ತದೆ ಅಂಕಿಅಂಶ. ಇಷ್ಟೊಂದು ವ್ಯತ್ಯಾಸವೇಕೆ? ಕೆಲವೊಂದು ಪಿರಮಿಡ್ಡುಗಳು ಜಗತ್ತಿಗೆ ತಿಳಿಯುವುದು ಬೇಡ ಎನ್ನುವುದು ಅಂದಿನ ಫಾರೋ ನಿರ್ಧರಿಸಿದ ಕಾರಣ ಅವುಗಳು ಬೆಳಕಿಗೆ ಬಂದಿಲ್ಲ.

ಇದನ್ನೂ ಓದಿ: ಅಲೆಗ್ಸಾಂಡ್ರಿಯದಲ್ಲಿ ಹುಡುಕಾಡಿದರೂ ಸಿಗದ ಕ್ಲಿಯೋಪಾತ್ರಾ!

ಸುಡಾನ್ ದೇಶದಲ್ಲಿರುವ ಪಿರಮಿಡ್ಡುಗಳು ಗಾತ್ರದಲ್ಲಿ ಈಜಿಪ್ಟಿನ ಪಿರಮಿಡ್ಡುಗಳಿಗಿಂತ ಚಿಕ್ಕವು. ಅಲ್ಲದೆ ಇತಿಹಾಸದಲ್ಲಿ ಇವುಗಳನ್ನು ವರ್ಣರಂಜಿತವಾಗಿ ಎಲ್ಲೂ ಬರೆದಿಟ್ಟಿಲ್ಲ. ಇವುಗಳ ಜೊತೆಗೆ ಸುಡಾನ್ ಪ್ರವಾಸಿಗರಿಗೆ ಬೇಕಾಗುವ ಮೂಲಭೂತ ಸೌಲಭ್ಯವನ್ನು ಕೂಡ ಹೊಂದಿಲ್ಲ. ಹೀಗಾಗಿ ಸುಡಾನ್ ಎಂದರೆ ಅದೊಂದು ರಾಜಕೀಯ ಅಸ್ಥಿರತೆಯುಳ್ಳ, ಸದಾ ಆಂತರಿಕ ಕಲಹಗಳಿಂದ ಬೇಯುತ್ತಿರುವ ದೇಶ ಎಂದು ಪ್ರಸಿದ್ಧವಾಗಿದೆ. ತನ್ನ ಒಡಲಲ್ಲಿ ಜಗತ್ತಿನ ಅತಿ ಹೆಚ್ಚು ಪಿರಮಿಡ್ಡುಗಳನ್ನು ಅದರ ಜತೆಗಿನ ಇತಿಹಾಸವನ್ನು ಇಟ್ಟುಕೊಂಡು ಕೂಡ ಸುಡಾನ್ ಬಡದೇಶವಾಗಿ ಉಳಿದುಕೊಂಡಿದೆ.

Great Pyramid of Khufu (1)

ನಾವು ಈಜಿಪ್ಟಿಗೆ ಹೋದ ಉದ್ದೇಶಗಳಲ್ಲಿ ಪ್ರಥಮವಾದ ಪಿರಮಿಡ್ಡು ನೋಡುವ ದಿವಸ ಬಂದೇಬಿಟ್ಟಿತ್ತು. ಅಲೆಗ್ಸಾಂಡ್ರಿಯ ನಗರಕ್ಕೆ ಬೈ ಹೇಳಿ ನಾವು ಗೀಸಾ ನಗರದ ಕಡೆಗೆ ಪ್ರಯಾಣ ಹೊರಟೆವು. ಸಹಪಯಣಿಗ, ಸಹೋದರ ನಾಗೇಂದ್ರ ಬೆಳಿಗ್ಗೆ ಬೇಗ ಎದ್ದು ಹೊರಟು ಬಿಡೋಣ ಎಂದಿದ್ದರು. ಹೇಳಿದಂತೆ ಸಮಯಕ್ಕೆ ಸರಿಯಾಗಿ ನಾವು ಹೊರಟೆವು. ಗೀಸಾ ನಗರಕ್ಕೆ ಇನ್ನೂ 20/30 ಕಿಲೋಮೀಟರ್ ದೂರವಿರುವಂತೆಯೇ ಪಿರಮಿಡ್ಡುಗಳು ಕಾಣಿಸ ತೊಡಗಿದವು. ಮನಸ್ಸು ಗಾಳಿಯಲ್ಲಿ ತೇಲಿದ ಅನುಭವ. ಬಹಳಷ್ಟು ವರ್ಷಗಳು ಕೇಳುತ್ತಾ ಬಂದ ಐತಿಹಾಸಿಕ ಪಿರಮಿಡ್ಡು ಕಂಡಾಗ ಹೀಗಾಗುವುದು ಸಹಜ. ಪ್ರಥಮಬಾರಿಗೆ ಲಂಡನ್ ನಗರದಲ್ಲಿ ಥೇಮ್ಸ್ ನದಿಯನ್ನು, ಲಂಡನ್ ಬ್ರಿಡ್ಜನ್ನು ಕಂಡಾಗ ಕೂಡ ಇದೇ ಅನುಭವಾಗಿತ್ತು. ಗಾಳಿಯಲ್ಲಿ ಧೂಳು ಮತ್ತು ಮುಂಜಾನೆಯ ಸಣ್ಣಪ್ರಮಾಣದ ಮಂಜು ಸೇರಿಕೊಂಡು ಬಹಳ ಮಸುಕಾಗಿ ಕಾಣುತ್ತಿದ್ದ ಪಿರಮಿಡ್ಡು ಕಂಡು ಮೈ ಮನಸ್ಸು ಪುಳಕಗೊಂಡಿತು.

ಪಿರಮಿಡ್ಡು ಇದ್ದ ಜಾಗವನ್ನು ತಲುಪಿದೆವು. ಆದರೆ ನಮ್ಮ ಕಾರ್ ಪಾರ್ಕ್ ಮಾಡುವುದು ಎಲ್ಲಿ? ಒಂದಷ್ಟು ಪರದಾಟದ ನಂತರ ಪಾರ್ಕಿಂಗ್ ಮಾಡಿ ಪಿರಮಿಡ್ಡು ನೋಡಲು ಟಿಕೆಟ್ ಕೊಳ್ಳಲು ಕೌಂಟರ್ ಬಳಿ ಹೋದೆವು. ಅಲ್ಲಿ ಸರದಿಯಿಲ್ಲ, ಜನ ಗುಂಪಾಗಿ ಹೇಗೆಂದರೆ ಹಾಗೆ ನಿಂತಿದ್ದಾರೆ. ಯಾರು ಮೊದಲು ಯಾರು ನಂತರ ಎನ್ನುವ ವ್ಯವಸ್ಥೆ ಅಲ್ಲಿರಲಿಲ್ಲ. ನುಗ್ಗುವ ಶಕ್ತಿಯಿದ್ದವರು ನುಗ್ಗಿ ಬೇಗ ಟಿಕೆಟ್ ಕೊಳ್ಳಬಹುದು. ಬಹಳಷ್ಟು ಜನ ಪಾಶ್ಚಾತ್ಯರು ಮೊದಲೇ ಆನ್ ಲೈನ್ ಮೂಲಕ ಕೊಂಡಿದ್ದರು. ನಾವು ಕೊಂಡಿರದ ಕಾರಣ ಕಷ್ಟಪಟ್ಟು ಟಿಕೆಟ್ ಕೊಂಡು ಹೊಳಹೊಕ್ಕೆವು. ಎಲ್ಲಾ ಸರಕಾರಿ ಸ್ಥಳಗಳಲ್ಲಿ ಕಡ್ಡಾಯವಾಗಿ ಕ್ರೆಡಿಟ್ ಕಾರ್ಡ್ ಮೂಲಕ ಅಥವಾ ಡೆಬಿಟ್ ಕಾರ್ಡ್ ಮೂಲಕ ಮಾತ್ರ ಹಣ ಪಾವತಿಸಬೇಕಾಗುತ್ತದೆ. ಎಲ್ಲಿಯೂ ನಗದು ಸ್ವೀಕರಿಸುವುದಿಲ್ಲ. ನಮ್ಮ ಜೇಬಿನಲ್ಲಿ ಹಣವಿತ್ತು. ಆದರೆ ಕಾರ್ಡ್ ಪಾವತಿ ಕಡ್ಡಾಯವಾದ ಕಾರಣ, ಅದರಲ್ಲೇ ಪಾವತಿಸಿದೆವು.

ಧೂಳು, ಧೂಳು ಮತ್ತು ಧೂಳು ಎನ್ನುವುದು ಪಿರಮಿಡ್ ಎಂದ ತಕ್ಷಣ ಮೊದಲಿಗೆ ನೆನಪು ಬರುವ ಅಂಶ. ಎಲ್ಲವೂ ಅವ್ಯವಸ್ಥೆಯ ಆಗರ. ಹೊಳಹೊಕ್ಕ ಕೂಡಲೇ ಪಿರಮಿಡ್ಡಿನ ಬಳಿಗೆ ಒಂಟೆಯ ಮೇಲೆ ಕರೆದುಕೊಂಡು ಹೋಗುತ್ತೇವೆ, ಇಷ್ಟು ಹಣ, ಕುದುರೆಯಾದರೆ ಇಷ್ಟು ಹೀಗೆ ವ್ಯಾಪಾರಕ್ಕೆ ಹಿಂದೆ ಬೀಳುತ್ತಾರೆ. ಒಮ್ಮೆ ಹೇಳಿ ಸುಮ್ಮನಾಗುವುದಿಲ್ಲ. ನಕ್ಷತ್ರಿಕರಂತೆ ಹಿಂದೆ ಬೀಳುತ್ತಾರೆ. ನಾವು ಕೊಂಡ ಪ್ರವೇಶ ದರದಲ್ಲಿ ಬಸ್ ಮೂಲಕ ಪಿರಮಿಡ್ಡುಗಳ ಬಳಿಗೆ ಹೋಗಬಹುದು. ಅದಕ್ಕೆಂದು ಹೆಚ್ಚಿನ ಹಣ ನೀಡುವ ಅವಶ್ಯಕತೆಯಿಲ್ಲ. ನಾಗೇಂದ್ರ ಬನ್ನಿ ಕುದುರೆ ಸವಾರಿ ಮಾಡೋಣ ಆಮೇಲೆ ಮತ್ತೆ ಬಸ್ಸಿನಲ್ಲಿ ಹೋಗೋಣ ಎಂದರು. ನಾಗೇಂದ್ರ ಅವರಿಗೆ ಪಿರಮಿಡ್ಡುಗಳನ್ನು ಮನಸಿನಲ್ಲಿ ಇಳಿಸಿಕೊಳ್ಳಬೇಕಿತ್ತು. ಈ ವಿಷಯದಲ್ಲಿ ನಾಗೇಂದ್ರ ನನಗಿಂತ ಹೆಚ್ಚು ವೃತ್ತಿಪರ ಪ್ರವಾಸಿಗನಂತೆ ಕಂಡರು. ಮೂರು ಅಥವಾ ನಾಲ್ಕ ತಾಸು ಅಲ್ಲಿರಬೇಕು ಎನ್ನುವುದು ನಮ್ಮ ಪ್ಲಾನ್ ಆಗಿತ್ತು. ಆದರೆ ನನಗೂ ಮತ್ತು ನಾಗೇಂದ್ರ ಅವರಿಗೂ ಪ್ರವೇಶ ನೋಡುತ್ತಿದಂತೆ ಉತ್ಸಾಹ ಅರ್ಧ ಇಳಿದು ಹೋಯ್ತು.

GIZa

ಪಿರಮಿಡ್ ಎಂದರೆ ಹೀಗಿರುತ್ತದೆ, ಹಾಗಿರುತ್ತದೆ ಎನ್ನುವ ಕನಸು ಹೊತ್ತು ಬಂದಿದ್ದೆವು. ಇಲ್ಲಿ ನೋಡಿದರೆ ಧೂಳು ಜತೆಗೆ ಹೆಜ್ಜೆ ಹೆಜ್ಜೆಗೂ ಎದುರಾಗುವ ಸ್ಕ್ಯಾಮರ್ಸ್. ಯಾರು ನಿಜವಾದ ಗೈಡ್ ಯಾರು ಡುಪ್ಲಿಕೇಟ್ ಎನ್ನುವುದು ಗೊತ್ತಾಗುವುದಿಲ್ಲ. ಮೊದಲ ನೋಟದಲ್ಲಿ ಭ್ರಮನಿರಸನವಾದದ್ದು ನಿಜ. ಆದರೆ ನಾಗೇಂದ್ರ ತಮ್ಮ ಹಿಂದಿನ ಕೆಲವು ಅನುಭವಗಳನ್ನು ಹೇಳಿದರು. ಮೊದಲಿಗೆ ಗುಟ್ಟು ಬಿಟ್ಟುಕೊಡದೆ ಹಿಮ್ಮೆಟ್ಟಿಸುತ್ತೇವೆ ನಿಜ, ಆದರೆ ಒಂದಷ್ಟು ವೇಳೆ ಕಳೆಯುತ್ತಾ, ಅವುಗಳ ಇತಿಹಾಸ ಕೆದಕುತ್ತಾ ಹೋದಂತೆ ಅವು ಮಾತಾಡುತ್ತವೆ, ಬನ್ನಿ ಫೀಲ್ ಬರುವವರೆಗೂ ಸುತ್ತಾಡೋಣ ಎಂದರು. ನೀವು ನಂಬುವುದಿಲ್ಲ, ನಾವು ಎಲ್ಲಾ ಪ್ರವಾಸಿಗರಂತೆ ಅಲ್ಲಿ ಫೊಟೋ ತೆಗೆದುಕೊಂಡು ಮೂರು ತಾಸಿನಲ್ಲಿ ಬೇರೆಡೆಗೆ ಹೋಗೋಣ ಎಂದುಕೊಂಡಿದ್ದವರು, ಪೂರ್ತಿ ದಿನ, ಅಂದರೆ ಬೆಳಿಗ್ಗೆ ಒಂಬತ್ತರಿಂದ ರಾತ್ರಿ ಒಂಬತ್ತರವರೆಗೆ ಅಲ್ಲಿದ್ದೆವು. ಲೈಟ್ ಅಂಡ್ ಸೌಂಡ್ ಶೋ ಕೂಡ ನೋಡಿಕೊಂಡು ಹೊರಟೆವು. ನಾಗೇಂದ್ರ ಅವರು ಹೇಳಿದಂತೆ ಒಂದಷ್ಟು ಸಮಯದ ನಂತರ ಪಿರಮಿಡ್ಡುಗಳು ನಮ್ಮೊಡನೆ ಸಂವಾದಕ್ಕೆ ಇಳಿದವು. ಹೌದು ಇಲ್ಲಿನ ಜನರಿಗೆ, ಸರಕಾರಕ್ಕೆ ಇಂಥ ಐತಿಹ್ಯವುಳ್ಳ ಜಾಗವನ್ನು ಹೇಗೆ ಇಟ್ಟುಕೊಳ್ಳಬೇಕು ಎನ್ನುವ ಅರಿವಿಲ್ಲ. ಈ ವಿಚಾರಕ್ಕೆ ಬೇಸರ ಪಟ್ಟುಕೊಂಡರೆ ನಷ್ಟ ನಮಗೆ ತಾನೇ? ಇಂಥ ಸಣ್ಣಪುಟ್ಟ ವಿಚಾರಗಳನ್ನು ಬದಿಗಿಟ್ಟು ಪಿರಮಿಡ್ ಎನ್ನುವ ಅಗಾಧ ಮಾನವ ನಿರ್ಮಿತ ಅದ್ಭುತದ ಜೊತೆಗೆ ಸಂವಹನ ನಡೆಸಲು ಮಾನಸಿಕ ಸಿದ್ಧತೆ ಮಾಡಿಕೊಂಡೆವು.

ಗಾತ್ರದಲ್ಲಿ ಮನುಷ್ಯ ಅದೆಷ್ಟು ನಿಕೃಷ್ಟ ಪ್ರಾಣಿ, ಆದರೆ ಇದೇ ನಿಕೃಷ್ಟ ಪ್ರಾಣಿಯ ಆಲೋಚನೆ ಅದೆಷ್ಟು ದೊಡ್ಡದು. ಇಂಥ ಕಟ್ಟಡಗಳ ಊಹೆ, ಕಲ್ಪನೆ ಹೇಗೆ ಶುರುವಾಗಿರಬಹುದು? ಎನ್ನುವ ಅಂಶಗಳು ನಮ್ಮನ್ನು ನಿಧಾನವಾಗಿ ಕಾಮನ್ ಎರಾ ಗಿಂತ ಮುಂಚಿನ 2610ರ ಸಮಯಕ್ಕೆ ಕರೆದೊಯ್ದವು. ಈಜಿಪ್ಟ್ ದೇಶವನ್ನು ಆಳುತ್ತಿದ್ದ ನಾಯಕರನ್ನು ಫಾರೋ ಎಂದು ಕರೆಯಲಾಗುತ್ತಿತ್ತು. Pharaoh Djoser ಎನ್ನುವ ರಾಜ 2610ರ ಸಮಯದಲ್ಲಿ ಇಂಥ ಪಿರಮಿಡ್ಡು ಪ್ರಥಮವಾಗಿ ಕನಸು ಕಂಡವನು ಎನ್ನಲಾಗುತ್ತದೆ. ಅದು ಇಂದಿನ ಪಿರಮಿಡ್ಡಿನ ಗಾತ್ರದಲ್ಲಿ ಮತ್ತು ಆಕಾರದಲ್ಲಿ ಇರಲಿಲ್ಲ. ಆದರೆ ಅದು ಮುಂದಿನ ತಲೆಮಾರಿಗೆ ಇನ್ನಷ್ಟು ಉನ್ನತ ಕಲ್ಪನೆಗೆ ದಾರಿ ಮಾಡಿಕೊಟ್ಟಿತು. ಇವತ್ತು ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು ಎನ್ನಲಾಗಿರುವ ಪಿರಮಿಡ್ಡು ನಿರ್ಮಿಸಿದವನು Pharaoh Khufu ಎನ್ನುವ ಫಾರೋ.

ಗೀಸಾ ನಗರದಲ್ಲಿ ಮೂರು ಪಿರಮಿಡ್ಡುಗಳಿವೆ.
Great Pyramid of Khufu (Cheops): ಇದು ಅತ್ಯಂತ ಪುರಾತನವಾದದ್ದು ಮತ್ತು ಅತ್ಯಂತ ದೊಡ್ಡದು ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. 481 ಅಡಿ ಎತ್ತರವಾಗಿದೆ, ಇದು ಫಾರೋ ಖುಫುನ ಸಮಾಧಿ ಅನ್ನಲಾಗುತ್ತದೆ.

Great Pyramid of Khufu

Pyramid of Khafre (Chephren): ಇದನ್ನು ಖುಫು ಮಗ ಖಾಫ್ರೆ ಹೆಸರಿನಲ್ಲಿ ಕಟ್ಟಲಾಗಿದೆ. ನೋಡುವುದಕ್ಕೆ ಇದೇ ಅತ್ಯಂತ ಎತ್ತರವಾಗಿದೆ ಅನಿಸುತ್ತದೆ. ಇದು ಕಟ್ಟಿರುವ ಜಾಗ ಒಂದಷ್ಟು ಎತ್ತರದಲ್ಲಿರುವ ಕಾರಣ ನೋಡುವುದಕ್ಕೆ ಹಾಗೆ ಕಾಣಿಸುತ್ತದೆ. ಇದು ಎರಡನೇ ಅತಿ ದೊಡ್ಡ ಪಿರಮಿಡ್ಡು ಎನಿಸಿಕೊಂಡಿದೆ.

Pyramid of Khafre

Pyramid of Menkaure (Mykerinus): ಫಾರೊ ಖುಫು ಮೊಮ್ಮಗ ಮೈಕೆರೀನೂಸ್ ಹೆಸರಿನಲ್ಲಿ ಈ ಪಿರಮಿಡ್ಡು ಕಟ್ಟಲಾಗಿದೆ. ಇಲ್ಲಿನ ಮೂರು ಪಿರಮಿಡ್ಡುಗಳಲ್ಲಿ ಗಾತ್ರದಲ್ಲಿ ಸಣ್ಣದು ಎನಿಸಿಕೊಂಡಿದೆ.

Pyramid of Menkaure (1)

ಸತ್ತ ನಂತರದ ಬದುಕಿನ ಬಗ್ಗೆ ಪುರಾತನ ಈಜಿಪ್ಟಿಶಿಯನ್ ರಲ್ಲಿ ಇದ್ದ ಭಾವನೆಗಳು ಈ ಪಿರಮಿಡ್ಡುಗಳ ಹುಟ್ಟಿಗೆ ಕಾರಣವಾಗಿದೆ. ಫಾರೋ ಆಗಿ ಅಧಿಕಾರಕ್ಕೆ ಬಂದು, ಆಡಳಿತದ ಮೇಲೆ ಒಂದಷ್ಟು ಹಿಡಿತ ಬಂದ ತಕ್ಷಣ ತಮ್ಮ ಸಾವಿನ ನಂತರದ ಜೀವನಕ್ಕೆ ಬೇಕಾಗುವ ಸಿದ್ಧತೆಯನ್ನು ಅವರು ಮಾಡಿಕೊಳ್ಳಲು ಶುರು ಮಾಡುತ್ತಿದ್ದರು. ಅಂದರೆ ಸಾಯುವುದಕ್ಕೆ ಬಹಳ ಮುಂಚೆ 20-30 ವರ್ಷಗಳ ಮುಂಚೆಯೇ ಜಾಗವನ್ನು ನಿರ್ಧರಿಸುವುದು, ಪಿರಮಿಡ್ಡು ಹೇಗೆ ಕಟ್ಟಬೇಕು, ಹೇಗಿರಬೇಕು ಎನ್ನುವ ವಿನ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ತಮಗಿಷ್ಟವಾದ ವಸ್ತುಗಳನ್ನು ಸಹ ಪಿರಮಿಡ್ಡಿನಲ್ಲಿ ಇಡುವ ಬಗ್ಗೆ ಕೂಡ ಅವರಿಗೆ ಸ್ಪಷ್ಟವಾದ ಅರಿವಿರುತ್ತಿತ್ತು.

ಇತ್ತೀಚೆಗೆ ಹಲವಾರು ಪಾಶ್ಚಾತ್ಯ ದೇಶಗಳಲ್ಲಿ ಸತ್ತ ನಂತರ ಯಾವ ರೀತಿ ಪ್ರೇಯರ್ ಮೀಟ್ ಇರಬೇಕು, ಯಾರನ್ನೆಲ್ಲಾ ಕರೆಯಬೇಕು. ದೇಹವನ್ನು ದಾನ ಮಾಡಬೇಕೆ? ಹೀಗೆ ಎಲ್ಲವನ್ನೂ ಪ್ಲಾನ್ ಮಾಡುತ್ತಿದ್ದಾರೆ. ಸಾವಿರಾರು ವರ್ಷದ ಹಿಂದೆಯೇ ಸತ್ತ ನಂತರದ ಜೀವನದ ಕಲ್ಪನೆಯನ್ನು ಹೊಂದಿದ್ದ ಈಜಿಪ್ಟ್ ದೇಶದ ಚರಿತ್ರೆಯನ್ನು ನಾವು ಹತ್ತು ದಿನದಲ್ಲಿ ಅಥವಾ ಹದಿನೈದು ದಿನದಲ್ಲಿ ಕಟ್ಟಿಕೊಳ್ಳಲು ಸಾಧ್ಯವೇ ಇಲ್ಲ. ನಾವೆಷ್ಟೇ ಇಂಟರ್ ನೆಟ್ ಜ್ಞಾನ ಪಡೆದುಕೊಂಡರೂ ಅಗಾಧ ಪಿರಮಿಡ್ಡಿನ ಮುಂದೆ ನಿಂತು ಅದನ್ನು ಕಟ್ಟಿಸಲು ಮುಂದಾದ ಆ ಫಾರೋ ಇಲ್ಲೇ ಎಲ್ಲೋ ಓಡಾಡಿದ್ದ, ನಾವೀಗ ಅಲ್ಲೇ ಎಲ್ಲೂ ನಿಂತಿದ್ದೇವೆ ಎನ್ನುವ ಕಲ್ಪನೆ ಇದೆಯಲ್ಲ, ಅದು ಅಲ್ಲಿನ ಧೂಳು, ಜನರ ನಡವಳಿಕೆ ಎಲ್ಲವನ್ನೂ ಮರೆಸಿಬಿಟ್ಟಿತು. ಒಂದು ದಿನ ಪೂರ್ತಿ ಪಿರಮಿಡ್ಡುಗಳ ನಡುವೆ ಕಳೆದೆವು. ಅಲ್ಲಿ ಸಿಕ್ಕ ಇನ್ನಷ್ಟು ಅನುಭವವನ್ನು ಮುಂದಿನವಾರ ಹೇಳುವೆ. ಅಲ್ಲಿಯವರೆಗೆ ಕಾಯುವಿರಲ್ಲ!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?