Wednesday, January 14, 2026
Wednesday, January 14, 2026

ಅಲೆಗ್ಸಾಂಡ್ರಿಯದಲ್ಲಿ ಹುಡುಕಾಡಿದರೂ ಸಿಗದ ಕ್ಲಿಯೋಪಾತ್ರಾ!

ಅಲ್ಲಿನ ಪುರಾತನ ಮೂರ್ತಿಗಳ ಅಕ್ಕಪಕ್ಕದಲ್ಲಿ ಇರುವ ಅಂದರೆ ಅದೇ ಮೂರ್ತಿಯ ಒಂದು ತುಂಡಾದ ಕಲ್ಲನ್ನು ಬೇಕಾದರೆ ತೆಗೆದುಕೊಂಡು ಹೋಗು ಎಂದು ಅಲ್ಲಿ ಪಹರೆ ಕಾಯುವ ಗಾರ್ಡ್ ಹೇಳುತ್ತಾರೆ ಮತ್ತು ಕೈ ಮುಂದೆ ಒಡ್ಡುತ್ತಾರೆ ಎಂದರೆ ನೀವು ಇಲ್ಲಿನ ಜನರಿಗೆ ಇಲ್ಲಿನ ಮಾನ್ಯುಮೆಂಟ್‌ಗಳ ಬಗ್ಗೆ ಅದೆಷ್ಟು ಅಕ್ಕರೆ ಇರಬಹುದು ಎನ್ನವುದನ್ನು ನೀವು ಊಹಿಸಿಕೊಳ್ಳಬಹುದು.

-ರಂಗಸ್ವಾಮಿ ಮೂಕನಹಳ್ಳಿ

ಅಲೆಗ್ಸಾಂಡ್ರಿಯ ನಗರದಲ್ಲಿ ನಡೆದಾಡುತ್ತಾ ನಮಗೆ ಒಂದಂಶ ಸ್ಪಷ್ಟವಾಗಿ ಅರಿವಾಯ್ತು. ಇಲ್ಲಿನ ಜನರಿಗೆ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಐತಿಹ್ಯಗಳ ಬಗ್ಗೆ ಅವುಗಳನ್ನು ಕಾಪಿಡಬೇಕು ಎನ್ನುವ ಬಗ್ಗೆ ತಿಳಿವಳಿಕೆ ಬಂದಿರುವುದು ತೀರಾ ಇತ್ತೀಚೆಗೆ. ಈಜಿಪ್ಟಿನ ಕೊನೆಯ ಫೆರೋ ಕ್ಲಿಯೋಪಾತ್ರಾ ಬಗ್ಗೆ, ಆಕೆಯ ಸಮಾಧಿಯ ಬಗ್ಗೆ ಆಕೆಯ ರಾಜಧಾನಿಯಲ್ಲೇ ನಮಗೆ ನೋಡಲು ಸಿಗಲಿಲ್ಲ ಎನ್ನುವುದು ಆಶ್ಚರ್ಯ ತರಿಸಿತು. ಸಿತಾದೆಲ್ ಆಫ್ ಕೈಟ್ಬೆ (ಇದನ್ನು ಸಿಟಾಡೆಲ್ ಆಫ್ ಕೈಟ್ಬೈ ಎಂದೂ ಉಚ್ಚಾರಣೆ ಮಾಡುತ್ತಾರೆ) ಎನ್ನುವ ಜಾಗದಲ್ಲಿ ಇರುವ ಒಂದೆರಡು ಕಂಬಗಳು ಆಕೆ ಕಟ್ಟಿಸಿದ್ದು ಎಂದು ಹೇಳುತ್ತಾರೆ. ಆಕೆಯ ಸಮಾಧಿ ಕೂಡ ಪಶ್ಚಿಮ ಅಲೆಗ್ಸಾಂಡ್ರಿಯದಲ್ಲಿರುವ ಪುರಾತನ ದೇವಾಲಯ Taposiris Magna ಎನ್ನುವಲ್ಲಿ ಸಿಕ್ಕಿದೆ ಎನ್ನುತ್ತಾರೆ. ಅದರ ಬಗ್ಗೆ ಅಲ್ಲಿನ ಸ್ಥಳೀಯರಿಗೆ ಗೊತ್ತಿಲ್ಲ. ಕ್ಲಿಯೋಪಾತ್ರಾಳ ಬಗ್ಗೆ ಏನಾದರೂ ಕುರುಹುಗಳು ಸಿಗಬಹುದೇ? ಯಾವುದಾದರೂ ಪ್ರವಾಸಿ ಸ್ಥಳವಿದೆಯೇ ಎಂದು ನಾಗೇಂದ್ರ ಬಹಳವಾಗಿ ಹುಡುಕಾಡಿದರೂ ನಮಗೇನೂ ಸಿಗಲಿಲ್ಲ. ಆಕೆಯ ಹೆಸರಿನ ಒಂದು ಖಾಸಗಿ ರೆಸಾರ್ಟ್ ಮತ್ತು ಶೂಟಿಂಗ್ ಸೆಂಟರ್ ಸಿಕ್ಕಿತು ಎನ್ನುವುದು ಬಿಟ್ಟರೆ, ಚರಿತ್ರೆಯಲ್ಲಿ ಅಷ್ಟೊಂದು ಸದ್ದು ಮಾಡಿದ ಮಹಿಳೆಯ ಬಗ್ಗೆ ಅಲ್ಲಿ ನಮಗೆ ಬೇರೇನೂ ಸಿಗಲಿಲ್ಲ. ಅಂದಿಗೆ ನಮಗೆ ಹೊಸ ಈಜಿಪ್ಟಿನ ಜನರ ಬಗ್ಗೆ ತಕ್ಷಣಕ್ಕೆ ಯಾವುದೇ ರೀತಿಯ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗಿರಲಿಲ್ಲ. ನಮ್ಮ ಪ್ರವಾಸ ಮುಗಿಯುವ ವೇಳೆಗೆ ಅವರ ಬಗ್ಗೆ ಮರುಕ ಬರಲು ಶುರುವಾಯ್ತು.

rangasthala

ತನ್ನ ಒಡಲಲ್ಲಿ ಜಗತ್ತಿಗೆ ಜಗತ್ತೇ ಅಚ್ಚರಿಪಡುವಂಥ ಇತಿಹಾಸವನ್ನು ಇಟ್ಟುಕೊಂಡೂ ಈ ದೇಶ ಇನ್ನು ಬಡವಾಗಿ ಉಳಿದಿದೆ. ತನ್ನ ನಾಗರಿಕರು ಟಿಪ್ಸ್‌ಗೆ ಕೈ ಒಡ್ಡುವಂತೆ ಮಾಡಿಕೊಂಡಿದೆ ಎನ್ನುವುದು ಬೇಸರ ತರಿಸಿತು. ಇಲ್ಲಿನ ಇತಿಹಾಸವನ್ನು ಕೆದಕುತ್ತಾ ಹೋದಂತೆ ಯುರೋಪಿಯನ್ನರು ಇಲ್ಲಿಯ ಜನಗಳಿಗೆ ಇವುಗಳ ಬಗ್ಗೆ ತಿಳಿಯುವುದಕ್ಕೆ ಮುಂಚೆ ಬಹಳಷ್ಟು ಇಂಥ ಇತಿಹಾಸದ ತುಣುಕುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನುವುದು ತಿಳಿದು ಬರುತ್ತದೆ. ಬ್ರಿಟಿಷರು , ರೋಮನ್ನರು , ಫ್ರೆಂಚರು ಇಲ್ಲಿನ ಬಹಳಷ್ಟು ಇತಿಹಾಸದ ಭಾಗವನ್ನು ಇಲ್ಲಿಂದ ತೆಗೆದುಕೊಂಡು ಹೋಗಿದ್ದಾರೆ. ಆದರೆ ಪಿರಮಿಡ್ಡುಗಳು ಅಥವಾ ಲೈಟ್ ಹೌಸ್ ಮತ್ತು ಇತಿಹಾಸದ ಘಟನೆಗಳಿಗೆ ಸಾಕ್ಷಿಯಾದ ನಗರವನ್ನು, ಸ್ಥಳಗಳನ್ನು ಅವರು ಕೊಂಡೊಯ್ಯಲು ಸಾಧ್ಯವಾಗಿಲ್ಲ. ಅವುಗಳನ್ನು ಹೇಗೆ ಪ್ರವಾಸಿಗರಿಗೆ ಉಣಬಡಿಸಬೇಕು ಎನ್ನುವ ಸಾಮಾನ್ಯ ಜ್ಞಾನ ಕೂಡ ಇಲ್ಲಿನ ಜನರಿಗೆ, ಸರಕಾರಕ್ಕೆ ಇಲ್ಲ. ಲಕ್ಸರ್ ನಗರದಲ್ಲಿ ಅನೇಕ ಪ್ರಸಿದ್ಧ ದೇವಾಲಯಗಳಿವೆ. ಅವುಗಳಲ್ಲಿ ಕಾರ್ನಾಕ್ ಸೂರ್ಯ ದೇವಾಲಯ ಜಗತ್ ಪ್ರಸಿದ್ದಿ ಪಡೆದುಕೊಂಡಿದೆ. ಅಲ್ಲಿನ ಪುರಾತನ ಮೂರ್ತಿಗಳ ಅಕ್ಕಪಕ್ಕದಲ್ಲಿ ಇರುವ ಅಂದರೆ ಅದೇ ಮೂರ್ತಿಯ ಒಂದು ತುಂಡಾದ ಕಲ್ಲನ್ನು ಬೇಕಾದರೆ ತೆಗೆದುಕೊಂಡು ಹೋಗು ಎಂದು ಅಲ್ಲಿ ಪಹರೆ ಕಾಯುವ ಗಾರ್ಡ್ ಹೇಳುತ್ತಾರೆ ಮತ್ತು ಕೈ ಮುಂದೆ ಒಡ್ಡುತ್ತಾರೆ ಎಂದರೆ ನೀವು ಇಲ್ಲಿನ ಜನರಿಗೆ ಇಲ್ಲಿನ ಮಾನ್ಯುಮೆಂಟ್‌ಗಳ ಬಗ್ಗೆ ಅದೆಷ್ಟು ಅಕ್ಕರೆ ಇರಬಹುದು ಎನ್ನವುದನ್ನು ನೀವು ಊಹಿಸಿಕೊಳ್ಳಬಹುದು.

kliopatra

ನಿಲ್ಲದ ಓಡಾಟದಲ್ಲಿ ನಾನು ಮತ್ತು ನಾಗೇಂದ್ರ ಆಹಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹಸಿವಾದಾಗ ಒಂದು ಸೇಬು ಹಣ್ಣು ಅಥವಾ ಸೀಬೆಕಾಯಿ ತಿಂದು ಮುಗಿಸುತ್ತಿದ್ದೆವು. ತಿಂದು ಉಳಿದ ಭಾಗವನ್ನು ಎಸೆಯಲು ನಮಗೆ ಕಸದ ಬುಟ್ಟಿಗಳು ಸಿಗುತ್ತಿರಲಿಲ್ಲ. ಏನು ಮಾಡುವುದು? ಎಲ್ಲಿ ಎಸೆಯುವುದು ಎಂದು ಅಲ್ಲಿದ್ದ ಸೆಕ್ಯುರಿಟಿಯನ್ನು ಕೇಳಿದರೆ ಎಲ್ಲಿ ಬೇಕಾದರೂ ಎಸೆಯಿರಿ ಅದನ್ನೇನು ಕೇಳುವುದು ಎಂದರು. ಇವೆಲ್ಲವೂ ಪುರಾತನ ದೇವಾಲಯಗಳು. ನಮ್ಮ ದೃಷ್ಟಿ ತಲುಪುವವರೆಗೂ ಶಿಥಿಲಗೊಂಡ ಭಗ್ನಮೂರ್ತಿಗಳು, ಕಟ್ಟಡಗಳು ಕಾಣಸಿಗುತ್ತವೆ. ಇವರಿಗೆ ಅನ್ನ ನೀಡುತ್ತಿರುವ ಇವುಗಳ ಬಗ್ಗೆ ಇವರಿಗೆ ಯಾವ ಗೌರವ ಭಾವವೂ ಇಲ್ಲ. ತಕ್ಷಣಕ್ಕೆ ನನಗೆ ನೆನಪಾದದ್ದು ನಮ್ಮ ಹಂಪಿ. ನಾವೇನೂ ಇವರಿಗಿಂತ ಕಡಿಮೆಯಿಲ್ಲ, ಸ್ವಲ್ಪವಾಸಿ ಅಷ್ಟೇ. ಏಕೆಂದರೆ ಇಟಲಿಯ ರೋಮ್ ನಗರದಲ್ಲಿ ಇದೇ ರೀತಿಯ ಹಾಳು ಬಿದ್ದಿರುವ ಜಾಗಗಳನ್ನು ಜತನದಿಂದ ಕಾಪಿಟ್ಟಿದ್ದಾರೆ. ಅವುಗಳನ್ನು ನೋಡಲು ವಿಧಿಸುವ ಶುಲ್ಕ ಬೆಚ್ಚಿ ಬೀಳಿಸುತ್ತದೆ. ಎಲ್ಲವೂ ಇದ್ದು ಅದರ ಬೆಲೆ ತಿಳಿಯದ ಜನರಿವರು ಎನ್ನುವುದು ಮಾತ್ರ ವೇದ್ಯ.

ಇದನ್ನೂ ಓದಿ: ಫೀನಿಕ್ಸ್‌ನಂತೆ ಎದ್ದು ಬಂದ ಅಲೆಗ್ಸಾಂಡ್ರಿಯದ ಗ್ರಂಥಾಲಯ!

ಅಲೆಗ್ಸಾಂಡ್ರಿಯ ಎನ್ಸಿಯೆಂಟ್ ರೋಮನ್ ಥಿಯೇಟರ್‌ನಲ್ಲಿ ನಡೆದಾಡುತ್ತಿದ್ದರೆ ರೋಮ್ ನಗರದಲ್ಲಿದ್ದೇವೆ ಎನ್ನುವ ಭಾವನೆ ಖಂಡಿತ ಬರುತ್ತದೆ. ಅಲ್ಲಿನ ಆಂಪಿ ಥಿಯೇಟರ್‌ನಲ್ಲಿ ನಾನು ನಾಗೇಂದ್ರ ಬಹಳಷ್ಟು ವಿಡಿಯೋ ಮಾಡಿಕೊಂಡೆವು. ಈ ಜಾಗದಲ್ಲಿ ಅಂದಿನ ದಿನಗಳಲ್ಲಿ ಅದೆಷ್ಟು ನಾಟಕ ನಡೆದಿರಬಹುದು? ಇಲ್ಲಿ ಯಾರೆಲ್ಲ ಕುಳಿತಿದ್ದಿರಬಹುದು? ಇಷ್ಟು ದೊಡ್ಡ ಕಂಬಗಳನ್ನು ಯಾರು ಕೆತ್ತಿರಬಹುದು? ಹೇಗೆ ತಂದು ನಿಲ್ಲಿಸಿರಬಹುದು ಎನ್ನುವ ಮಾತುಗಳನ್ನು ಆಡಿಕೊಂಡೆವು. ಇವತ್ತಿಗೆ ನಾವು ಇಲ್ಲಿ ನಿಂತಿದ್ದೇವೆ! ಹೀಗಾಗಿ ಇಲ್ಲಿ ಈ ಥಿಯೇಟರ್ ಉಗಮದ ಬಗ್ಗೆ, ಕಟ್ಟಿಸಿದವರ ಬಗ್ಗೆ, ಅದು ಎಷ್ಟು ಸಮಯ ತನ್ನ ವೈಭವವನ್ನು ಉಳಿಸಿಕೊಂಡಿತ್ತು? ಮತ್ತು ಏಕೆ ಮತ್ತು ಹೇಗೆ ತನ್ನ ವೈಭವವನ್ನು ಕಳೆದುಕೊಳ್ಳುತ್ತಾ ಹೋಯ್ತು ಇತ್ಯಾದಿಗಳ ಬಗ್ಗೆ ಮಾತಾಡಿದೆವು. ಅವುಗಳನ್ನು ವಿಡಿಯೋ ಕೂಡ ಮಾಡಿಕೊಂಡೆವು. ಅಲ್ಲಿನ ಇತಿಹಾಸ ಇತ್ಯಾದಿಗಳನ್ನು ನಿಮಗೆ ಹೇಳಿ ಬೋರ್ ಹೊಡೆಸುವುದಿಲ್ಲ. ಅವುಗಳನ್ನು ನೀವು ಗೂಗಲ್ ಮಾಡಿದರೂ ಸಿಗುತ್ತದೆ.

igypt

ಇಲ್ಲಿ ನೋಡಲೇ ಬೇಕಾದ ಐದಾರು ಸ್ಥಳಗಳಿವೆ ಅವುಗಳಲ್ಲಿ ಇನ್ನೊಂದು ಪ್ರಮುಖವಾದದ್ದು ಲೈಟ್ ಹೌಸ್! ಸಂಜೆ ವೇಳೆಗೆ ಇಲ್ಲಿ ಲೈಟ್ ಅಂಡ್ ಸೌಂಡ್ ಶೋ ನಡೆಯುತ್ತದೆ. ಸಂಜೆಯ ಚಳಿಯಲ್ಲಿ ನೈಲ್ ನದಿಯ ಬದಿಯಲ್ಲಿ ಕುಳಿತು ಗಾಢವಾದ ಧ್ವನಿಯಲ್ಲಿ ಮೂಡಿಬರುವ ಡಾಕ್ಯುಮೆಂಟರಿ ಅದರ ಜೊತೆಗೆ ಬೆಳಕಿನ ಆಟ ಮೈನವಿರೇಳುವಂತೆ ಮಾಡುತ್ತದೆ. ನೀವು ಅಲೆಗ್ಸಾಂಡ್ರಿಯದಲ್ಲಿ ನೋಡಬೇಕಾದ ಸ್ಥಳಗಳನ್ನು ಎರಡು ದಿನದಲ್ಲಿ ನೋಡಿ ಮುಗಿಸಬಹುದು. ನೀವು ಪ್ಯಾಕೇಜ್ ಟ್ರಿಪ್ಪಿನಲ್ಲಿ ಬಂದವರಾದರೆ ಒಂದು ದಿನದಲ್ಲಿ ಎಲ್ಲವನ್ನೂ ಮುಗಿಸಿ ಬಿಡುತ್ತಾರೆ. ಆದರೆ ನಿಜವಾದ ಅನುಭವ ಸಿಗುವುದು ಇಲ್ಲಿನ ಸ್ಥಳೀಯರು ಓಡಾಡುವ ರಸ್ತೆಗಳಲ್ಲಿ ಎನ್ನುವುದು ಕೂಡ ಅನುಭವ ಕಲಿಸಿದ ಪಾಠ. ನಾಗೇಂದ್ರ ಕೂಡ ಮೂವತ್ತಾರು ದೇಶವನ್ನು ಈಗಾಗಲೇ ಕಂಡುಬಂದವರು. ಹೀಗಾಗಿ ನಾವು ಅಲೆಗ್ಸಾಂಡ್ರಿಯ ನಗರದ ಗಲ್ಲಿಗಳನ್ನು ಸುತ್ತಲು ಕೂಡ ಮೀಸಲಿಟ್ಟಿದ್ದೆವು.

ನಮ್ಮ ಅಂದಾಜು ಸುಳ್ಳಾಗಲಿಲ್ಲ. ಗಲ್ಲಿಗಳ ಸುತ್ತಾಟ ನಮಗೊಂದು ಹೊಸ ಲೋಕವನ್ನು ಸೃಷ್ಟಿಸಿಕೊಟ್ಟಿತು. ಕಾರು ಪಾರ್ಕ್ ಮಾಡಲು ಹೋದ ತಕ್ಷಣ ಅಲ್ಲೊಬ್ಬ ವ್ಯಕ್ತಿ ಪ್ರತ್ಯಕ್ಷನಾಗುತ್ತಾನೆ. ನೀವು ಕೇಳದಿದ್ದರೂ ಹೀಗೆ ಪಾರ್ಕ್‌ಮಾಡು, ಹಿಂದೆ ಬಂದು ಮುಂದೆ ಹೋಗು, ಇತ್ಯಾದಿ ಅವನದೇ ನಿರ್ದೇಶನಗಳನ್ನು ಕೊಡಲು ಶುರು ಮಾಡುತ್ತಾನೆ. ಆತ ಯಾರೂ ಅಲ್ಲ. ಅಲ್ಲಿ ಮಾಡುವ ಪಾರ್ಕಿಂಗಿಗೆ ಶುಲ್ಕ ಕೂಡ ಇಲ್ಲ. ಆದರೆ ತಮ್ಮ ಸರಹದ್ದುಗಳನ್ನು ಸೃಷ್ಟಿಸಿಕೊಂಡು ಹೀಗೆ ಪಾರ್ಕಿಂಗ್ ಸಹಾಯ ಮಾಡುವ ನಂತರ ಹಣ ಕೇಳುವ ವ್ಯಕ್ತಿಗಳನ್ನು ನಾವು ನಂತರದ ದಿನಗಳಲ್ಲಿ ಈಜಿಪ್ಟಿನಲ್ಲಿ ಬಹಳ ಕಂಡೆವು. ನಿಜ ಹೇಳಬೇಕೆಂದರೆ ಇಂಥ ಜಾಗಗಳಲ್ಲಿ ಯಾವುದೇ ಪಾರ್ಕಿಂಗ್ ಫೀಸ್ ಇರುವುದಿಲ್ಲ. ಆದರೆ ಕೊಡಬೇಕಾಗುತ್ತದೆ. ನಿಗದಿತ ಪಾರ್ಕಿಂಗ್ ಜಾಗಗಳನ್ನು ಹುಡುಕಿ ಪಾರ್ಕ್ ಮಾಡುವುದನ್ನು ನಂತರದ ದಿನಗಳಲ್ಲಿ ಕಲಿತೆವು. ಇಲ್ಲಿ ಪಾರ್ಕಿಂಗ್ ಎಷ್ಟು ಕೊಡಬೇಕು ಎಂದು ಕೇಳುವ ಅವಶ್ಯಕತೆಯಿಲ್ಲ. ಗಂಟೆಗೆ ಇಷ್ಟು ಎನ್ನುವ ಫಲಕವನ್ನು ತೂಗಿ ಹಾಕಿರುತ್ತಾರೆ.

koshari

ನಮ್ಮಲ್ಲಿ ಗೂಡಂಗಡಿಯಲ್ಲಿನ ಇಡ್ಲಿ ಶಾಪುಗಳು, ತಿಂಡಿ ಅಂಗಡಿಗಳು ಪ್ರಸಿದ್ಧವಾಗಿದ್ದಂತೆ ಇಲ್ಲಿ ಫಲಾಫಲ್ ಮಾರುವ ಅಂಗಡಿಗಳು ಬಹಳಷ್ಟಿವೆ. ಇದರ ಜತೆಗೆ ಕೋಶಾರಿ ಎನ್ನುವ ಸಸ್ಯಾಹಾರದ ಖಾದ್ಯ ಕೂಡ ಮಾರುವ ಅಂಗಡಿಗಳನ್ನು ಕಾಣಬಹುದು. ರಸ್ತೆ ಬದಿಯಲ್ಲಿ ಒಂದು ಫಲಾಫಲ್ ಸ್ಯಾಂಡ್ ವಿಚ್ ಗೆ ಹತ್ತು ಈಜಿಪ್ಷಿಯನ್ ಡಾಲರ್ ಎನ್ನುವುದು ಅಚ್ಚರಿ ತರಿಸಿತು. ಒಂದು ಸ್ಯಾಂಡ್ ವಿಚ್ ಹೊಟ್ಟೆ ತುಂಬಿಸಿಕೊಳ್ಳಲು ಸಾಕು. ನಾಗೇಂದ್ರ ಊಟದ ವಿಚಾರದಲ್ಲಿ ನನಗಿಂತ ಸ್ವಲ್ಪ ಕಟ್ಟುನಿಟ್ಟು. ಎರಡು ದಶಕದ ಯೂರೋಪು ಜೀವನ ನನಗೆ ಅಡ್ಜಸ್ಟ್ ಮಾಡಿಕೊಳ್ಳುವುದು ಕಲಿಸಿದೆ. ಆದರೆ ನಾಗೇಂದ್ರ ಪಕ್ಕಾ ಎಂದರೆ ಪಕ್ಕಾ ಸಸ್ಯಾಹಾರಿ. ಕರ್ಮಠ ಸಸ್ಯಾಹಾರಿ. ಫಲಾಫಲ್ ನಲ್ಲಿ ಹಾಕುವ ನಮ್ಮ ಬೇಳೆಯಿಂದ ಮಾಡಿದ ಫಲಾಫಲ್ ಹೆಸರಿನ ಆಂಬೊಡೆಯನ್ನು ಯಾವ ಎಣ್ಣೆಯಲ್ಲಿ ಕರಿದಿದ್ದಾರೆ ಬಲ್ಲವರಾರು ? ನನಗಂತೂ ಬೇಡಪ್ಪ ಎಂದರು. ಅದ್ಯಾವ ಎಣ್ಣೆಯಲ್ಲಿ ಕರಿದಿದ್ದರೇನು ಹೊಟ್ಟೆಯಲ್ಲಿನ ರಸಗಳು ಅವುಗಳನ್ನು ಅರಗಿಸಿ ಬಿಡುತ್ತವೆ ಎನ್ನುವ ಧೈರ್ಯದ ಮೇಲೆ ಅವುಗಳನ್ನು ಸ್ವಾಹಾ ಮಾಡಿದೆ. ನಂತರ ಇದೇ ರೀತಿಯ ಫಲಾಫಲ್ ಫೈನ್ ಡೈನಿಂಗ್‌ನಲ್ಲೂ ಸೇವಿಸಿದೆ. ಅದಕ್ಕೆ ತೆತ್ತದ್ದು 440 ಈಜಿಪ್ಷಿಯನ್ ಡಾಲರ್ !

ಅದೊಂದು ಜನನಿಬಿಡ ರಸ್ತೆ. ರಸ್ತೆಯಲ್ಲಿ ನಮ್ಮ ಬೇಕರಿಯಲ್ಲಿ ಮಾಡುವ ತಿಂಡಿಗಳನ್ನು ಹೋಲುವ ಅನೇಕ ಪದಾರ್ಥಗಳನ್ನು ಇಟ್ಟು ಕೊಂಡು ಮಾರುತ್ತಿದ್ದರು. ರಸ್ತೆಯ ಅರ್ಧ ಭಾಗವನ್ನು ಹೊಟೇಲಿನ ಚೇರುಗಳು ಆಕ್ರಮಿಸಿದ್ದವು. ಇದು ಕೂಡ ಇಲ್ಲಿ ಸಾಮಾನ್ಯ ಎನ್ನುವುದು ಆ ನಂತರದ ದಿನಗಳು ಕಲಿಸಿದವು. ವಿಶಾಲವಾದ ರಸ್ತೆಯಲ್ಲಿ ವಾಹನ ಓಡಾಡಕ್ಕೆ ಮೀಸಲಾದ ಜಾಗದಷ್ಟು ಹೊಟೇಲಿನ ಚೇರುಗಳು ಕೂಡ ಆಕ್ರಮಿಸುವುದು ಮೊದಲ ಬಾರಿಗೆ ಅಚ್ಚರಿ ಮೂಡಿಸಿತ್ತು. ಯುರೋಪಿನಲ್ಲಿ ಕೂಡ ಹೊರಗೆ ಕೂರುವುದು ಸಾಮಾನ್ಯ. ಆದರೆ ರಸ್ತೆಯನ್ನು ಆಕ್ರಮಿಸುವುದು ಊಹಿಸಲಾಗದು. ಹುಕ್ಕಾ ಸೇದುತ್ತಾ, ತೀರಾ ಸ್ಟ್ರಾಂಗ್ ಕಾಫಿ ಹೀರುತ್ತಾ ಜಗತ್ತಿನ ಪರಿವೆಯಿಲ್ಲದೆ ಅದ್ಯಾವುದೋ ಚೌಕಾಬಾರದ ರೀತಿಯ ಆಟವನ್ನು ಆಡುತ್ತ ಕುಳಿತ ಹದಿಹರೆಯದವರನ್ನು ಮಾತಿಗೆಳೆದೆವು. ಇಂಗ್ಲಿಷ್ ಬಾರದ ಅವರು, ಅರೇಬಿಕ್ ಬಾರದ ನಾವು ಸಂವಹನದಲ್ಲಿ ಗೆದ್ದೆವು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?