Saturday, May 9, 2026
Saturday, May 9, 2026

ಹೊಲ ಮೇಯುವ ಬೇಲಿಯಾದ ಹೋಮ್‌ಸ್ಟೇ !

ಹೋಮ್‌ಸ್ಟೇ ಮಾಲೀಕನ ನೈತಿಕ ಮತ್ತು ವೃತ್ತಿಪರ ನಿರ್ಲಕ್ಷ್ಯ. ಕೇವಲ ನೌಕರನ ಕೃತ್ಯವಷ್ಟೇ ಅಲ್ಲದೆ, ಪ್ರವಾಸಿಗರಿಗೆ ನೀಡಲಾಗಿದ್ದ ವೈಫೈ ಸಂಪರ್ಕವನ್ನು ಕಡಿತಗೊಳಿಸಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದು, ಆತಿಥ್ಯ ಕ್ಷೇತ್ರದ ಮಾಲೀಕತ್ವದ ಹೊಣೆಗಾರಿಕೆಯನ್ನು ಗಂಭೀರವಾಗಿ ಪ್ರಶ್ನಿಸುತ್ತದೆ.

ಕೊಡಗಿನ ಕುಟ್ಟ ಗ್ರಾಮದ ಹೋಮ್ ಸ್ಟೇಯಲ್ಲಿ ಅಮೆರಿಕ ಮಹಿಳೆಯ ಮೇಲೆ ನಡೆದಿದೆ ಎನ್ನಲಾಗಿರುವ ಅತ್ಯಾಚಾರ ಪ್ರಕರಣ ಕೇವಲ ಕರ್ನಾಟಕದ ಪ್ರವಾಸೋದ್ಯಮದ ಮೇಲೆ ಮಾತ್ರವಲ್ಲ ಭಾರತದ ಪ್ರವಾಸೋದ್ಯಮದ ಮೇಲೆ ಭಾರಿ ಪರಿಣಾಮ ಬೀರುವುದು ಖಚಿತ. ನಿಜ, ಈ ಘಟನೆಯನ್ನು ಪ್ರವಾಸೋದ್ಯಮದ ದೃಷ್ಟಿಕೋನದಿಂದ ಮಾತ್ರವೇ ನೋಡುವಂಥದ್ದಲ್ಲ. ಇದು ಮಾನವೀಯತೆ ಮತ್ತು ನಾಗರೀಕತೆಯ ದೃಷ್ಟಿಯಿಂದ ನೋಡಬೇಕು. ಇದೊಂದು ಘಟನೆ ಅಮೆರಿಕದ ರಾಯಭಾರಿ ಕಚೇರಿ ಮೂಲಕ ಅಮೆರಿಕವನ್ನು ತಲುಪುತ್ತದೆ. ಜಗತ್ತಿನಾದ್ಯಂತ ಹರಡುತ್ತದೆ. ಕೊನೆಗೆ ಷರಾ ಬರೆಯುವುದೇನು? ವಿದೇಶಿಯರಿಗೆ ಭಾರತ ಸುರಕ್ಷಿತವಲ್ಲ. ಭಾರತ ಪ್ರವಾಸಕ್ಕೆ ಯೋಗ್ಯವಲ್ಲ. ಎತ್ತಿಗೆ ಜ್ವರ ಎಮ್ಮೆಗೆ ಬರೆ ಅನ್ನುವುದು ಇದಕ್ಕೇ ಅಲ್ಲವೇ? ಅಯೋಗ್ಯ ಮೃಗೀಯ ವಿಕೃತರ ಕೃತ್ಯಕ್ಕೆ ಇಡೀ ದೇಶ ಕಳಂಕ ಹೊರಬೇಕಾ? ಅತಿಥಿ ದೇವೋಭವ ಎಂಬ ಹೆಮ್ಮೆಯ ಘೋಷವಾಕ್ಯ ಹುಟ್ಟುಹಾಕಿದ ದೇಶದಲ್ಲಿ ಅತಿಥಿಗಳನ್ನು ನಡೆಸಿಕೊಳ್ಳುವ ರೀತಿಯೇ ಇದು? ನಿಸರ್ಗದ ಮಡಿಲಲ್ಲಿ ಪ್ರವಾಸಿಗರಿಗ ಆಶ್ರಯ ಮತ್ತು ಭದ್ರತೆ ನೀಡಬೇಕಿದ್ದ ಸ್ಥಳವೇ ಅಸುರಕ್ಷಿತ ತಾಣವಾಗಿ ಬದಲಾಗುತ್ತದೆ ಅಂದರೆ ನಮ್ಮ ಆತಿಥ್ಯದ ನೈತಿಕತೆಯನ್ನೇ ಪ್ರಶ್ನಿಸಬೇಕಾಗಿದೆ.

ಇದನ್ನೂ ಓದಿ: ಎಐ ಕೈ ಹಿಡಿದು ಪ್ರವಾಸ ಹೊರಟಾಗ..

ವಿದೇಶಿ ಮಹಿಳೆ ಅಂದಾಕ್ಷಣ ಆಕೆ ದೈಹಿಕ ಸಂಪರ್ಕಕ್ಕೆ ಸಲೀಸಾಗಿ ಸಿಗುತ್ತಾಳೆ ಅಂತ ಅರ್ಥವಾ? ಅಥವಾ ಆಕೆಯ ಮೇಲೆ ಅತ್ಯಾಚಾರ ಎಸಗಿದರೂ ಆಕೆ ಅಸಹಾಯಕತೆಯಿಂದ ಸುಮ್ಮನಿದ್ದುಬಿಡುತ್ತಾಳೆಂದು ಭಾವಿಸಿದ್ದಾರಾ? ಅಷ್ಟೊಂದು ವಿದೇಶಿ ದೇಹದ ಮೇಲೆ ಆಸೆ ಇದ್ದರೆ, ಅದಕ್ಕೋಸ್ಕರ ಥೈಲ್ಯಾಂಡ್ ಬ್ಯಾಂಕಾಕ್ ಗೆ ಹೋಗಿಬರಲಿ. ಇಷ್ಟಕ್ಕೂ ಒಂಟಿ ಮಹಿಳೆ ಸಿಕ್ಕ ಕೂಡಲೇ ಸೆಕ್ಸ್ ಹೊರತಾಗಿ ಬೇರೆ ಸಂಗತಿಗಳು ಸಾಧ್ಯವೇ ಇಲ್ಲವೇ? ಒಬ್ಬ ವಿದೇಶಿ ವ್ಯಕ್ತಿ ಸಿಕ್ಕಾಗ ಆಕೆಯೊಂದಿಗೆ ಎಷ್ಟೋ ವಿಶೇಷ ಸಂಗತಿಗಳ ವಿನಿಮಯ ಆಗಬಹುದು. ನಮ್ಮ ವ್ಯಕ್ತಿತ್ವವನ್ನೂ ದೇಶದ ಇಮೇಜನ್ನೂ ಹೆಚ್ಚಿಸುವ ಹಲವು ಸಂಗತಿಗಳನ್ನು ನಾವು ಹಂಚಿಕೊಳ್ಳಬಹುದು. ಅದರಲ್ಲೂ ಒಂದು ಹೋಮ್ ಸ್ಟೇ ಅಥವಾ ರೆಸಾರ್ಟ್ ಅಥವಾ ಡ್ರೈವರ್ ಮುಂತಾದವರಿಗೆ ತಮ್ಮ ಸೇವಾಗುಣವೇ ಟ್ರಂಪ್ ಕಾರ್ಡ್ ಆಗಬೇಕು. ಸುರಕ್ಷತೆ ಭಾವ ಒದಗಿಸುವುದೇ ಅವರ ಉದ್ಯೋಗದ ಮೂಲದ್ರವ್ಯ ಆಗಬೇಕು. ಹೀಗಿದ್ದಾಗ ಅತ್ಯಾಚಾರಕ್ಕೆ ಮುಂದಾಗುವುದರ ಮೂಲಕ ತಮ್ಮ ಭವಿಷ್ಯಕ್ಕೂ ಕಲ್ಲು ಹಾಕಿಕೊಳ್ಳುವುದರ ಜತೆಗೆ ದೇಶದ ಇಮೇಜನ್ನೂ ಹಾಳುಮಾಡುತ್ತಾರೆ. ಹೋಮ್ ಸ್ಟೇಯಲ್ಲಿ ನಡೆದಿದೆ ಎನ್ನಲಾಗಿರುವ ಈ ಪ್ರಕರಣ ತೀರಾ ರಾಯಭಾರಿ ಕಚೇರಿಗೆ ದೂರು ಕೊಡುವ ತನಕ ಹೋಗಿರುವುದು ನಮ್ಮ ರಾಜ್ಯದ ಗೃಹ ಇಲಾಖೆಯ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯವನ್ನೂ ಎತ್ತಿ ತೋರಿಸುತ್ತಿದೆ. ಆಕೆಗೆ ಸ್ಥಳೀಯ ಪೊಲೀಸರೇ ಅಭಯ ನೀಡಿ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದರೆ ಈ ಸುದ್ದಿ ದೇಶದಿಂದ ಹೊರ ಹೋಗದಂತೆಯೂ ತಡೆಯಬಹುದಿತ್ತು.

ಒಟ್ಟಾರೆ ಈಗಾಗಲೇ ಒಂದಲ್ಲ ಒಂದು ಕಾರಣಕ್ಕೆ ಪ್ರವಾಸೋದ್ಯಮ ಏಟು ತಿನ್ನುತ್ತಿದೆ. ಕಳೆದ ವರ್ಷ ಇದೇ ಸಮಯಕ್ಕೆ ಪಹಲ್ಗಾಮ್ ಉಗ್ರದಾಳಿ ಮಾಡಿದ ಅನಾಹುತದಿಂದ ಭಾರತ ಸೇಫ್ ಇಲ್ಲ ಎಂಬ ಭಾವ ಮೂಡಿತ್ತು. ಇಂಥ ಅತ್ಯಾಚಾರ ಪ್ರಕರಣಗಳು ಭಾರತದ ಪ್ರವಾಸೋದ್ಯಮಕ್ಕೆ ಇನ್ನಷ್ಟು ಹಿನ್ನಡೆ ಉಂಟು ಮಾಡುತ್ತವೆ.

ಪ್ರಸ್ತುತ ಪ್ರಕರಣದಲ್ಲಿ ಅತ್ಯಂತ ಆತಂಕಕಾರಿ ವಿಷಯವೆಂದರೆ, ಹೋಮ್‌ಸ್ಟೇ ಮಾಲೀಕನ ನೈತಿಕ ಮತ್ತು ವೃತ್ತಿಪರ ನಿರ್ಲಕ್ಷ್ಯ. ಕೇವಲ ನೌಕರನ ಕೃತ್ಯವಷ್ಟೇ ಅಲ್ಲದೆ, ಪ್ರವಾಸಿಗರಿಗೆ ನೀಡಲಾಗಿದ್ದ ವೈಫೈ ಸಂಪರ್ಕವನ್ನು ಕಡಿತಗೊಳಿಸಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದು, ಆತಿಥ್ಯ ಕ್ಷೇತ್ರದ ಮಾಲೀಕತ್ವದ ಹೊಣೆಗಾರಿಕೆಯನ್ನು ಗಂಭೀರವಾಗಿ ಪ್ರಶ್ನಿಸುತ್ತದೆ.

ಹೆಚ್ಚುತ್ತಿರುವ ಹೋಮ್‌ಸ್ಟೇಗಳ ಸಂಖ್ಯೆಗೆ ಅನುಗುಣವಾಗಿ, ಅವುಗಳ ಮೇಲೆ ಸೂಕ್ತ ನಿಗಾ ವಹಿಸುವಲ್ಲಿ ಪ್ರವಾಸೋದ್ಯಮ ಇಲಾಖೆ ಸೋತಿದೆ ಎಂಬುದರಲ್ಲಿ ಅನುಮಾನವೆ ಇಲ್ಲ.. ಕೇವಲ ನೋಂದಣಿ ಮಾಡಿಸಿಕೊಳ್ಳುವುದು ಅಥವಾ ಲೈಸೆನ್ಸ್ ನೀಡುವುದಷ್ಟೇ ಪ್ರವಾಸೋದ್ಯಮ ಇಲಾಖೆಯ ಕೆಲಸವಲ್ಲ. ಬದಲಿಗೆ, ಹೋಮ್‌ಸ್ಟೇಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿಯ ಹಿನ್ನೆಲೆ ಪರಿಶೀಲನೆ ಕಡ್ಡಾಯವಾಗಿ ಆಗಬೇಕು. ಪೊಲೀಸ್ ಪರಿಶೀಲನೆ ಪತ್ರವನ್ನು ಇಲಾಖೆ ಪಡೆಯಬೇಕು.

ಪ್ರತಿ ವರ್ಷ ಹೋಮ್‌ಸ್ಟೇಗಳಿಗೆ ಭದ್ರತಾ ಆಡಿಟ್ ನಡೆಸಿ, ಅಲ್ಲಿ ತುರ್ತು ಅಲಾರ್ಮ್, ಸಿಸಿಟಿವಿ ಮತ್ತು ತುರ್ತು ಸಂಪರ್ಕ ವ್ಯವಸ್ಥೆಗಳಿವೆಯೇ ಎಂದು ಖಾತರಿಪಡಿಸಬೇಕು.ಇಂಥ ಪ್ರಕರಣಗಳಲ್ಲಿ ಮಾಲೀಕರನ್ನು ನೇರ ಹೊಣೆಗಾರರನ್ನಾಗಿ ಮಾಡುವ ಕಠಿಣ ಕಾನೂನುಗಳು ಜಾರಿಯಾಗಬೇಕು. ಈ ಘಟನೆಯು ಒಂದು ಸಣ್ಣ ವಿಷಯವಲ್ಲ. ಆತಿಥ್ಯ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸಿಕ್ಕಿರುವ ತುರ್ತು ಸಂದೇಶ ಇದು. ಕಠಿಣ ಕ್ರಮಗಳು ಮತ್ತು ಪಾರದರ್ಶಕ ನಿಯಮಗಳಿಲ್ಲದಿದ್ದರೆ, ಪ್ರವಾಸೋದ್ಯಮದ ಮೇಲಿರುವ ವಿಶ್ವಾಸ ಮಣ್ಣಾಗುವುದರಲ್ಲಿ ಸಂಶಯವಿಲ್ಲ. ಪ್ರವಾಸಿಗರ ಸುರಕ್ಷತೆಯೇ ಪ್ರವಾಸೋದ್ಯಮದ ಮೊದಲ ಆದ್ಯತೆಯಾಗಬೇಕು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?