Sunday, July 12, 2026
Sunday, July 12, 2026

ಹುಟ್ಟಿದರೆ ಯಾಕೆ ಕನ್ನಡ ನಾಡಲ್ಲಿ ಹುಟ್ಟಬೇಕು? ಈ ಸೌಂದರ್ಯ ಆಕಸ್ಮಿಕವಲ್ಲ

ಆಕಸ್ಮಿಕ ಸಿನಿಮಾ ನೋಡಿದವರಿಗೆ ಈಗಲೂ ನೆನಪಿರುವುದು ಹುಬ್ಬಳ್ಳಿ ಮತ್ತು ಆಗುಂಬೆ. ಈ ಎರಡು ತಾಣಗಳು ಜನರಿಗೆ ಇನ್ನಷ್ಟು ಆಪ್ತವಾಗಲು ಕಾರಣವೇ ಈ ಸಿನಿಮಾ. ಈ ಚಿತ್ರದಲ್ಲಿ ತೋರಿಸಿದ ಜಾಗಗಳಿಗೆ ಜನರು ಪ್ರವಾಸಿಗರಾಗಿ ಮಾತ್ರವಲ್ಲದೆ ಅಣ್ಣಾವ್ರನ್ನು ನೆನಪಿಸಕೊಳ್ಳುವ ಉದ್ದೇಶದಿಂದಲೂ ಭೇಟಿ ನೀಡುತ್ತಾರೆ.

ಆಗುಂಬೆಯಾ..ಪ್ರೇಮ ಸಂಜೆಯಾ..ಈ ಹಾಡು ಯಾರಿಗೆ ತಾನೆ ನೆನಪಿಲ್ಲ ಹೇಳಿ. ಈಗಲೂ ಈ ಹಾಡು ಕೇಳಿದಾಗ ಆಗುಂಬೆ ಆ ಮಂಜು ಕವಿದ ವಾತಾವರಣ, ಸುಂದರ ಪರಿಸರ ಕಣ್ಣಮುಂದೆ ಬರುತ್ತದೆ. 1997ರಲ್ಲಿ ತೆರೆಕಂಡ ಟಿ.ಎಸ್. ನಾಗಾಭರಣ ನಿರ್ದೇಶನದ 'ಆಕಸ್ಮಿಕ' ಚಲನಚಿತ್ರದಲ್ಲಿ ಡಾ. ರಾಜ್‌ಕುಮಾರ್‌ ನಟಿಸಿರುವ ಸಿನಿಮಾ ʼಆಕಸ್ಮಿಕʼ. ತ.ರಾ.ಸು. ಅವರ ಕಾದಂಬರಿಗಳ ತ್ರಿವಳಿಯನ್ನು ಆಧರಿಸಿದ ಈ ಚಿತ್ರವಿದು. ಈ ಚಿತ್ರದ ಒಂದು ಸುಂದರ ಪ್ರೇಮಗೀತೆ ಎಂದರೆ ಈ ಹಾಡು. ಹಾಡಿನ ಸಾಲಿನಲ್ಲೇ ಒಂದು ಪ್ರದೇಶವನ್ನು ಪ್ರಸ್ತಾಪಿಸಿದ್ದರಿಂದ ಆ ಜಾಗವು ತಾನಾಗಿಯೇ ಆಪ್ತವಾಗುತ್ತದೆ. ಈ ಹಾಡಿನಲ್ಲು ಆಗುಂಬೆ ಮತ್ತು ಪ್ರೇಮ ಎರಡೂ ಒಟ್ಟೊಟ್ಟಿಗೆ ಬಂದ ಹಾಗೆ. ಆಗುಂಬೆ ಎಂದರೆ ಪ್ರೇಮ ಸಂಜೆ ಎಂಬಷ್ಟು ಎನ್ನುವಷ್ಟು ಹಾಡು ಮತ್ತು ಜಾಗ ಜನರಿಗೆ ಆಪ್ತವಾಗಿತ್ತು. ಇದರ ಜತೆಗೆ ಇನ್ನೂ ಒಂದಿಷ್ಟು ಸ್ಥಳಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಸಂಗೀತ ನಿರ್ದೇಶಕ ಹಂಸಲೇಖ ಅವರ ಗೀತೆಗಳು ಈ ಚಿತ್ರದಲ್ಲಿ ಕರ್ನಾಟಕದ ಸುಂದರ ತಾಣಗಳನ್ನು ಎಷ್ಟು ಅದ್ಭುತವಾಗಿ ಚಿತ್ರಿಸಿವೆಯೆಂದರೆ, ಅವು ಪ್ರೇಕ್ಷಕರಲ್ಲಿ ಆ ಪ್ರದೇಶಗಳ ಬಗ್ಗೆ ಹೊಸದೊಂದು ದೃಷ್ಟಿಕೋನವನ್ನೇ ಹುಟ್ಟುಹಾಕಿದವು.

Untitled design (80)

ಮುಂಗಾರು ಮಳೆಯಂಥ ಚಿತ್ರಗಳು ಬರುವ ದಶಕಗಳಿಗೂ ಮುನ್ನವೇ ಆಕಸ್ಮಿಕ ಚಿತ್ರವು ಆಗುಂಬೆಯ ಮಂಜು ಮುಸುಕಿದ ಘಾಟ್‌ಗಳು, ಹಸಿರು ಕಾನನ ಮತ್ತು ಪ್ರಶಾಂತತೆಯನ್ನು ಕಾಂಟೆಸ್ಸಾ ಕಾರಿನಲ್ಲಿ ಡಾ. ರಾಜ್‌ಕುಮಾರ್ ಮತ್ತು ಮಾಧವಿ ಸಾಗುವ ದೃಶ್ಯದ ಮೂಲಕ ಅತ್ಯಂತ ರೋಮ್ಯಾಂಟಿಕ್ ಆಗಿ ಸೆರೆಹಿಡಿದಿತ್ತು. ಈ ಹಾಡು ಅಲ್ಲಿನ ಸಂಜೆಯ ಸೌಂದರ್ಯವನ್ನು ಆರಾಧಿಸಿದರೆ, ಕಥೆಯ ತಿರುವಿನಲ್ಲಿ ಮಾಧವಿ ಅವರ ಪಾತ್ರವು ಇದೇ ಆಗುಂಬೆಯ ವ್ಯೂ ಪಾಯಿಂಟ್‌ನಿಂದ ಕೆಳಗೆ ಬಿದ್ದು ದುರಂತ ಅಂತ್ಯ ಕಾಣುವ ದೃಶ್ಯಕ್ಕೂ ಸಾಕ್ಷಿಯಾಯಿತು. ಈ ಹಾಡು ಬಿಡುಗಡೆಯಾದ ನಂತರ ಕನ್ನಡಿಗರಲ್ಲಿ ಆಗುಂಬೆಯ ಸೂರ್ಯಾಸ್ತವನ್ನು ನೋಡುವ ಮತ್ತು ಅಲ್ಲಿಗೆ ರಸ್ತೆ ಪ್ರವಾಸ ಕೈಗೊಳ್ಳುವ ಒಂದು ದೊಡ್ಡ ಅಲೆಯೇ ಸೃಷ್ಟಿಯಾಯಿತು.

ಇದನ್ನೂ ಓದಿ: ಗಾಳಿಪಟ ಸಿನಿಮಾದಲ್ಲಿ ಮಲೆನಾಡೇ ಸೆರೆಯಾಗಿದೆ

ಮಲೆನಾಡಿದ ತಂಪು, ಹಸಿರು ಒಂದು ಕಡೆಯಾದರೆ ಇನ್ನೊಂದೆಡೆ ಚಿತ್ರದಲ್ಲಿ ಹುಬ್ಬಳ್ಳಿ ನಗರವನ್ನು ತೋರಿಸಿರುವ ರೀತಿ ಕೂಡ ಅಷ್ಟೇ ಅದ್ಭುತವಾಗಿದೆ. ಜನ ಈಗಲೂ ಹುಬ್ಬಳಿಯ ರಾಣಿ ಚೆನ್ನಮ್ಮ ವೃತ್ತ ಮತ್ತು ಪ್ರಸಿದ್ಧ ಸಿದ್ದಾರೂಢ ಮಠದ ಆವರಣದ ಬಳಿ ಹೋದಾಗ ʼಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..ʼ ಹಾಡನ್ನು ಒಮ್ಮೆಯಾದರೂ ನೆನಪು ಮಾಡಿಕೊಳ್ಳುತ್ತಾರೆ. ಡಾ. ರಾಜ್‌ಕುಮಾರ್ ಅವರು ಎಸಿಪಿ ನರಸಿಂಹಮೂರ್ತಿಯಾಗಿ ಖಳನಾಯಕರ ಜಾಲವನ್ನು ಭೇದಿಸುವ ಪ್ರಮುಖ ಭಾಗಗಳು ಇಲ್ಲಿಯೇ ನಡೆಯುತ್ತವೆ. ಈ ಹಾಡಿನ ಚಿತ್ರೀಕರಣವೇ ಒಂದು ಐತಿಹಾಸಿಕ ಘಟನೆ. ಅಣ್ಣಾವ್ರನ್ನು ನೋಡಲು ಲಕ್ಷಾಂತರ ಜನ ಹುಬ್ಬಳ್ಳಿಯ ಬೀದಿಗಳಲ್ಲಿ ನೆರೆದಿದ್ದರು. ಈ ಗೀತೆಯು ಕಾಲಾನಂತರದಲ್ಲಿ ಕರ್ನಾಟಕದ ಅನಧಿಕೃತ ಪ್ರಾದೇಶಿಕ ಗೀತೆಯಾಗಿ ಬದಲಾಯಿತು ಮತ್ತು ಹುಬ್ಬಳ್ಳಿ ನಗರವನ್ನು ಸಾಂಸ್ಕೃತಿಕ ಹೆಮ್ಮೆಯ ಪ್ರತೀಕವಾಗಿ ಇತಿಹಾಸದಲ್ಲಿ ದಾಖಲಿಸಿತು. ಇನ್ನೊಂದು ವಿಶೇಷ ಎಂದರೆ ʼಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕುʼ ಹಾಡಿನಲ್ಲಿ ಇಡೀ ರಾಜ್ಯದಲ್ಲಿ ಏನೆಲ್ಲಾ ನೋಡಬಹುದು, ಯಾವ್ಯವಾ ಜಾಗಗಳಿಗೆ ಭೇಟಿ ಕೊಡಬಹುದು ಎನ್ನುವುದನ್ನು ಅಣ್ಣಾವ್ರೇ ನಮ್ಮ ಪಕ್ಕ ಬಂದು ನಿಂತು ಹೆಗಲ ಮೇಲೆ ಕೈ ಹಾಕಿ ಗೈಡ್‌ ಮಾಡಿದಂತಿದೆ.

Untitled design (82)

ಹುಬ್ಬಳ್ಳಿ ಮತ್ತು ಆಗುಂಬೆಯಷ್ಟೇ ಅಲ್ಲದೆ, ಚಿತ್ರದ ಕಥೆಯ ಆಳವನ್ನು ಹಿಡಿದಿಡಲು ಚಿತ್ರತಂಡವು ಶಿವಮೊಗ್ಗ ಮತ್ತು ಸಾಗರ ಭಾಗದ ಇತರ ನೈಜ ತಾಣಗಳಿಗೂ ಪ್ರಯಾಣ ಬೆಳೆಸಿತ್ತು. ಸಾಗರ ಮತ್ತು ತಾಳಗುಪ್ಪ ರೈಲ್ವೇ ನಿಲ್ದಾಣಗಳ ಹಳೆಯ ಗ್ರಾಮೀಣ ಸೊಗಡನ್ನು ಚಿತ್ರದ ಮೊದಲ ಭಾಗದಲ್ಲಿ ನಾಯಕ ಮತ್ತು ಇಂದಿರಾ ಪಾತ್ರಗಳ ಪ್ರಯಾಣದ ಸಮಯದಲ್ಲಿ ಅತ್ಯಂತ ಆಪ್ತವಾಗಿ ಬಳಸಿಕೊಳ್ಳಲಾಗಿದೆ. ಸಮಯದಲ್ಲಿ ಅನೇಕರು ರಾಜ್‌ಕುಮಾರ್‌ ಅವರನ್ನು ಭೇಟಿಮಾಡಲು ಹೋಗಿದ್ದರಂತೆ. ಇಂದಿಗೂ ಈ ರೈಲ್ವೇ ನಿಲ್ದಾಣಗಳ ಹಳೆಯ ವೀಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತವೆ. ಇದರೊಂದಿಗೆ ಜೋಗ ಜಲಪಾತದ ಭವ್ಯ ನೋಟಗಳು ಮತ್ತು ಕೊಡಚಾದ್ರಿ ಬೆಟ್ಟಗಳ ಮಂಜಿನ ಶಿಖರಗಳು ಚಿತ್ರದ ಕಥೆಯ ಒಂದು ಭಾಗವಾಗಿದೆ.

ಇಂದಿಗೂ ಯಾವುದೇ ರಾಜ್ಯೋತ್ಸವ ಅಥವಾ ಸಾಂಸ್ಕೃತಿಕ ಸಮಾರಂಭಗಳಿರಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹಾಡಿನ ಧ್ವನಿ ಕೇಳದಿದ್ದರೆ ಆ ಹಬ್ಬವೇ ಅಪೂರ್ಣ ಎನಿಸುತ್ತದೆ. ಒಟ್ಟಾರೆಯಾಗಿ ಆಕಸ್ಮಿಕ ಚಿತ್ರವು ಕೇವಲ ಒಂದು ಸಿನಿಮಾವಾಗಿ ಉಳಿಯದೆ, 90ರ ದಶಕದ ಕರ್ನಾಟಕದ ನೈಸರ್ಗಿಕ ಸೌಂದರ್ಯವನ್ನು ಮತ್ತು ಅಣ್ಣಾವ್ರ ಅಮೋಘ ಚಲನಚಿತ್ರ ಯಾನವನ್ನು ಕಣ್ಣಿಗೆ ಕಟ್ಟುವಂತೆ ಕಾಪಿಟ್ಟಿರುವ ಒಂದು ದೃಶ್ಯ ಭಂಡಾರವಾಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?