Saturday, August 22, 2026
Saturday, August 22, 2026

ಗ್ರಹಣದಿಂದ ನಕ್ಷತ್ರಗಳವರೆಗೆ ಆಕಾಶವೇ ಪ್ರವಾಸದ ತಾಣ

ಪ್ರವಾಸ ಎಂದರೆ ಹೊಸ ಊರು, ಹೊಸ ತಾಣಗಳನ್ನು ನೋಡುವುದಷ್ಟೇ ಅಲ್ಲ, ಕೆಲವೊಮ್ಮೆ ಆಕಾಶದ ಅದ್ಭುತಗಳನ್ನು ಬೆನ್ನಟ್ಟುವುದೂ ಹೌದು. ಕೆಲವೇ ನಿಮಿಷಗಳ ಕತ್ತಲೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಕಿಲೋಮೀಟರ್‌ಗಳಷ್ಟು ದೂರ ಸಾಗುವವರಿದ್ದಾರೆ. ಗ್ರಹಣ, ಉಲ್ಕಾಪಾತ, ಅರೋರಾ, ನಕ್ಷತ್ರಗಳ ಲೋಕ ಇವೆಲ್ಲವೂ ಪ್ರವಾಸಿಗರ ಕುತೂಹಲಕ್ಕೆ ಹೊಸ ಆಯಾಮ ನೀಡಿವೆ. ನಗರದ ಬೆಳಕಿನಿಂದ ದೂರ, ಕತ್ತಲೆಯ ಆಕಾಶದಡಿ ಬ್ರಹ್ಮಾಂಡವನ್ನು ನೋಡುವ ಅನುಭವವೇ ‘ಆಸ್ಟ್ರೋ ಪ್ರವಾಸೋದ್ಯಮ’. ಹೀಗಾಗಿ ಪ್ರವಾಸದ ಗಮ್ಯಸ್ಥಾನ ಈಗ ಭೂಮಿಯ ಮೇಲಷ್ಟೇ ಅಲ್ಲ; ಅನಂತ ಆಕಾಶವೂ ಆಗಿದೆ.

- ಅಂಜಲಿ ರಾಮಣ್ಣ

ಹಣದ ಮುಗ್ಗಟ್ಟು, ಅನಾರೋಗ್ಯ, ಜವಾಬ್ದಾರಿಗಳು, ಸಮಯದ ಕೊರತೆ ಇವೆಲ್ಲ ಪ್ರವಾಸಕ್ಕೆ ಅಡ್ಡಿಯಾಗಬಹುದು. ಆದರೆ, ಆಕಾಶದ ಅಪರೂಪದ ಅದ್ಭುತಗಳನ್ನು ಕಣ್ತುಂಬಿಕೊಳ್ಳಲು ಜನರು ದೂರದೂರಿಗೆ ಪ್ರಯಾಣಿಸುವುದು ಈಗ ಹೊಸ ಪ್ರವಾಸ ಸಂಸ್ಕೃತಿಯಾಗಿದೆ. ಕೆಲವೇ ನಿಮಿಷಗಳ ಕತ್ತಲೆಯನ್ನು ಕಾಣಲು ಸಾವಿರಾರು ಕಿಲೋಮೀಟರ್‌ಗಳ ಪ್ರಯಾಣ ಮಾಡುವ ‘ಗ್ರಹಣ ಪ್ರವಾಸ’ದಿಂದ ಹಿಡಿದು ನಕ್ಷತ್ರಗಳ ಲೋಕದಲ್ಲಿ ಕಳೆದುಹೋಗುವ ‘ಆಸ್ಟ್ರೋ ಪ್ರವಾಸೋದ್ಯಮ’ದವರೆಗೆ ಆಕಾಶವೇ ಈಗ ಪ್ರವಾಸಿಗರ ಹೊಸ ತಾಣವಾಗಿದೆ.

ಹಣದ ಮುಗ್ಗಟ್ಟು, ಅನಾರೋಗ್ಯ, ಹಿರಿಕಿರಿಯರ ಜವಾಬ್ದಾರಿ, ಒದಗಿ ಬರದ ಸಮಯದ ಹೊಂದಾಣಿಕೆಯು ನಮ್ಮ ಪ್ರವಾಸಕ್ಕೆ ಗ್ರಹಣ ಹಿಡಿಸಬಹುದು. ಆದರೆ, ಗ್ರಹಣಕ್ಕಾಗಿಯೇ ಪ್ರವಾಸ ಮಾಡುವ ವಿಚಿತ್ರ ಪ್ರಪಂಚದಲ್ಲಿದೆ. ಮಧ್ಯಾಹ್ನದ ಬಿಸಿಲು ಇದ್ದಕ್ಕಿದ್ದಂತೆ ತಣ್ಣಗಾಗುತ್ತದೆ, ಆಕಾಶದಲ್ಲಿ ಚಿನ್ನದ ಉಂಗುರದಂತೆ ಸೂರ್ಯನ ಕಿರೀಟವು ಮಿನುಗುತ್ತದೆ. ಹಕ್ಕಿಗಳು ತಮ್ಮ ಗೂಡು ಸೇರುತ್ತವೆ. ಗಾಳಿಯಲ್ಲಿ ಮೌನವೊಂದು ಸ್ತಬ್ಧವಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಹಗಲು ರಾತ್ರಿಯಾಗುವ ಮಾಯೆಗೆ “ಗ್ರಹಣ ಪ್ರವಾಸ” ಎಂದು ಹೆಸರಿಟ್ಟು ಇಂದು ಲಕ್ಷಾಂತರ ಕಾಲುಗಳು ಜಗತ್ತಿನ ಮೂಲೆಮೂಲೆಗಳಿಗೆ ಹೋಗುತ್ತಿವೆ.

ಇದನ್ನೂ ಓದಿ: ನಾಲಗೆ ತಿರುಗಿಸುವ ದೇಶಗಳತ್ತ ಒಂದು ಪ್ರವಾಸ!

ಆಕಾಶದಲ್ಲಾಗುವ ಈ ನಾಟಕವನ್ನು ನೋಡಲು ಜನರು ವರ್ಷಗಳ ಮುಂಚೆಯೇ ಟಿಕೆಟ್ ಕಾಯ್ದಿರಿಸುತ್ತಾರೆ. ಅವರು ವಿಜ್ಞಾನಿಗಳಲ್ಲ, ಅಧ್ಯಾಪಕರುಗಳಲ್ಲ, ಸನ್ಯಾಸಿಗಳೂ ಅಲ್ಲ. ಕೇವಲ ಕುತೂಹಲಿ ಪ್ರವಾಸಾಸಕ್ತರು. ನಾಸಾದ ಲೆಕ್ಕಾಚಾರವು ಯಾವ ದಿನ, ಯಾವ ಊರಿನಲ್ಲಿ, ಎಷ್ಟು ಗಂಟೆಗೆ ಸೂರ್ಯನು ಕಣ್ಮರೆಯಾಗುವನು ಎಂದು ನಿಖರವಾಗಿ ಹೇಳುತ್ತದೆ. ಆ ಕ್ಷಣವನ್ನು ಕಣ್ಣಾರೆ ಕಂಡು ಎದೆ ಝಲ್ಲೆನಿಸಿಕೊಳ್ಳಬೇಕು ಎನ್ನುವುದು ಮನುಷ್ಯನ ಸೋಜಿಗದ ಅಭಿರುಚಿಗಳಲ್ಲಿ ಒಂದು. ಒಂದು ಛಾಯಾಚಿತ್ರ, ಒಂದು ವಿಡಿಯೋ ಆ ಅನುಭವದ ತೂಕವನ್ನು ಹೊರಲಾಗದು. ಅದಕ್ಕಾಗಿಯೇ ಚಿಲಿಯ ಅಟಕಾಮಾ ಮರುಭೂಮಿಯಿಂದ ಐಸ್ಲೆಂಡ್‌ನ ಹಿಮಗಪ್ಪಿದ ಕಣಿವೆಗಳವರೆಗೆ, ಮೆಕ್ಸಿಕೋದ ಕಡಲತೀರದಿಂದ ಅಮೆರಿಕದ ನದಿ ತೀರಗಳವರೆಗೆ ಮನುಷ್ಯ ನೆರಳನ್ನು ಬೆನ್ನಟ್ಟುತ್ತಾನೆ.

Untitled design (13)

ಇತ್ತೀಚಿನ ವರ್ಷಗಳಲ್ಲಿ ಜಗತ್ತು ಇದನ್ನು ಅಚ್ಚರಿಯಂತೆ ಕಂಡಿದೆ. 2017ರಲ್ಲಿ ಅಮೆರಿಕದಾದ್ಯಂತ ಹಾದುಹೋದ ಗ್ರಹಣವು ಸಣ್ಣ ಪಟ್ಟಣಗಳನ್ನು ರಾತೋರಾತ್ರಿ ಜನಜಂಗುಳಿಯ ನಗರಗಳನ್ನಾಗಿ ಮಾಡಿತು. ಹೊಟೇಲ್ ಕೊಠಡಿಗಳು ಒಂದೂವರೆ ವರ್ಷದ ಮುಂಚೆಯೇ ಬುಕಿಂಗ್ ಆಗಿದ್ದವು. ವಿಮಾನದ ಬೆಲೆಗಳು ಮೂರು ಪಟ್ಟು ಏರಿದ್ದವು. ನಾಲ್ಕು ನಿಮಿಷದ ಕತ್ತಲೆಯನ್ನು ನೋಡಬೇಕು ಎನ್ನುವ ಮಾನವನಾಸೆಯಿಂದ ಸ್ಥಳೀಯರು ಕೋಟಿಗಟ್ಟಲೆ ಹಣ ಗಳಿಸಿದರು. 2024ರಲ್ಲಿ ಮೆಕ್ಸಿಕೋದ ಮಜ಼ಟ್ಲಾನ್ ಕಡಲತೀರದಲ್ಲಿ ಅಲೆಗಳ ಸದ್ದಿನ ನಡುವೆ ಸಾವಿರಾರು ಜನರು ಆಕಾಶ ನೋಡತ್ತಾ ನಿಂತದ್ದು ಗ್ರಹಣ ಪ್ರವಾಸದ ಆಕರ್ಷಣೆ.

ಮುಂದಿನ ದಿನಗಳಲ್ಲಿ ಗ್ರಹಣ ಪ್ರವಾಸವು ಇನ್ನೂ ದೊಡ್ಡದಾಗಲಿದೆ. 2026ರ ಆಗಸ್ಟ್ 12ರಂದು ಐಸ್ಲೆಂಡ್ ಮತ್ತು ಸ್ಪೇನ್‌ನಲ್ಲಿ ಕಾಣಿಸಿಕೊಂಡ ಗ್ರಹಣ ಸಾವಿರಾರು ಅಸಕ್ತರ ಪ್ರವಾಸಕ್ಕೆ ಕಾರಣವಾಗಿದೆ. 2027ರ ಆಗಸ್ಟ್ 2ರಂದು ಮೊರಾಕೊದಿಂದ ಈಜಿಪ್ಟ್‌ವರೆಗೆ ಆರು ನಿಮಿಷ ಇಪ್ಪತ್ಮೂರು ಸೆಕೆಂಡ್‌ಗಳ ಅತಿ ಉದ್ದದ ಗ್ರಹಣ ಬರಲಿದೆ. ಇದನ್ನು ಶತಮಾನದ ಗ್ರಹಣ ಎನ್ನುತ್ತಿದ್ದಾರೆ. 2035ರಲ್ಲಿ ಭಾರತದಲ್ಲೂ ಭಾಗಶಃ ಗ್ರಹಣ ಕಾಣಲಿದೆ. ಈಗಾಗಲೇ ಪ್ರವಾಸ ಕಂಪನಿಗಳು ಪ್ಯಾಕೇಜ್‌ಗಳನ್ನು ತಯಾರಿಸುತ್ತಿವೆ.

ಒಂದು ದೊಡ್ಡ ಸಂಪೂರ್ಣ ಗ್ರಹಣವು ಜಗತ್ತಿಗೆ ನೂರಾರು ಕೋಟಿ ಡಾಲರ್ ತರುತ್ತದೆ. ಹೊಟೇಲ್, ವಿಮಾನ, ಮಾರ್ಗದರ್ಶಿ, ದೂರದರ್ಶಕ, ಗ್ರಹಣ ಕನ್ನಡಕ, ಸ್ಥಳೀಯ ಆಹಾರ, ಜಾನಪದ ಕಥೆಗಳು, ನಂಬಿಕೆ ಆಚರಣೆಗಳು ಎಲ್ಲವೂ ಒಂದೇ ವಾರದಲ್ಲಿ ಮಾರಾಟವಾಗುತ್ತವೆ. 2025ರಲ್ಲಿ ಜಗತ್ತಿನ ಪ್ರವಾಸೋದ್ಯಮವು ಎರಡು ಟ್ರಿಲಿಯನ್ ಡಾಲರ್ ದಾಟಿದೆ. ಅದರಲ್ಲಿ ಗ್ರಹಣದ ಪಾಲು ಚಿಕ್ಕದೇ ಆದರೂ ಅದು ತರುವ ಅನುಭವದ ಶ್ರೀಮಂತಿಕೆ ಅಪಾರ. ಜನರು ಈಗ ವಸ್ತುಗಳನ್ನು ಕೊಳ್ಳುವುದಕ್ಕಿಂತ ಅನುಭವಗಳನ್ನು ಸಂಗ್ರಹಿಸಲು ಇಷ್ಟಪಡುತ್ತಾರೆ. ಗ್ರಹಣವು ಅದಕ್ಕೆ ಪರಿಪೂರ್ಣ ಉತ್ತರವಾಗಿ ಸಿಕ್ಕಿದೆ.

ಭಾರತದಲ್ಲಿ ಗ್ರಹಣ ಪ್ರವಾಸಕ್ಕೆ ಬೇರೆಯದೇ ಬಣ್ಣವಿದೆ. ಇಲ್ಲಿ ಆಕಾಶದಲ್ಲಿನ ಘಟನೆಯು ಕೇವಲ ಖಗೋಳಶಾಸ್ತ್ರದ ಪುಟದಲ್ಲಿ ನಿಲ್ಲುವುದಿಲ್ಲ. ಅದು ನಮ್ಮ ದೇವಾಲಯದ ಗಂಟೆಗಳ ಸದ್ದಿನೊಂದಿಗೆ, ನದಿಯ ನೀರಿನ ಸ್ಪರ್ಶದೊಂದಿಗೆ ಬೆರೆತುಕೊಳ್ಳುತ್ತದೆ. ಭಾರತದಲ್ಲಿ ಗ್ರಹಣವು ವಿಜ್ಞಾನ ಮತ್ತು ಭಕ್ತಿಯ ಸಂಗಮ.

22 ಜುಲೈ 2009ರಂದು ಗುಜರಾತಿನಿಂದ ಬಿಹಾರದವರೆಗೆ ಹಬ್ಬಿ 21ನೆಯ ಶತಮಾನದ ಅತಿ ಉದ್ದದ ಗ್ರಹಣವಾಗಿತ್ತು. ನಾಸಾ ಬಿಹಾರದ ತಾರೇಗನಾ ಎಂಬ ಚಿಕ್ಕ ಗ್ರಾಮವನ್ನು ಜಗತ್ತಿನ ಅತ್ಯುತ್ತಮ ವೀಕ್ಷಣಾ ಸ್ಥಳವೆಂದು ಗುರುತಿಸಿತು. ಅದೇ ದಿನ ವಿಜ್ಞಾನಿಗಳು ದೂರದರ್ಶಕ ಇಟ್ಟು ಸೂರ್ಯನ ಕಿರೀಟವನ್ನು ವಿವರಿಸುತ್ತಿರುವಾಗ ವಾರಣಾಸಿಯ ಗಂಗಾ ತೀರದಲ್ಲಿ ಸಾವಿರಾರು ಭಕ್ತರು ಪವಿತ್ರ ಸ್ನಾನಕ್ಕಾಗಿ ನೀರಿಗೆ ಇಳಿದಿದ್ದರು. ಕುರುಕ್ಷೇತ್ರದಲ್ಲಿ ನೆರೆದಿದ್ದ ಹತ್ತು ಲಕ್ಷಕ್ಕೂ ಹೆಚ್ಚು ಜನರು ಹಿಂದಿರುಗುವಾಗ ತಮ್ಮ ನಂಬಿಕೆಯ ಪುಣ್ಯದೊಂದಿಗೆ ಆಕಾಶದ ಅದ್ಭುತವನ್ನೂ ಜೊತೆಯಲ್ಲಿ ಕೊಂಡೊಯ್ದರು.

ಭಾರತದಲ್ಲಿ ಮಾರ್ಗದರ್ಶಿಯು ಮೊದಲು ಗ್ರಹಣ ಎಂದರೇನು ಎಂದು ಹೇಳುತ್ತಾನೆ, ಐದು ನಿಮಿಷದ ನಂತರ ರಾಹು ಕೇತುವಿನ ಕಥೆಯನ್ನು ಹೇಳುತ್ತಾನೆ. ಪ್ರವಾಸಿಗನು ಒಂದು ಕೈಯಲ್ಲಿ ಗ್ರಹಣ ಕನ್ನಡಕ ಹಿಡಿದು ನೋಡುತ್ತಾನೆ, ಇನ್ನೊಂದು ಕೈಯಲ್ಲಿ ಜಪಮಾಲೆ ತಿರುಗಿಸುತ್ತಾನೆ. ವೀಕ್ಷಣೆಗೆ ವಿಜ್ಞಾನಿಗಳು ಬರುತ್ತಾರೆ. ಧರ್ಮಾತೀತರಾಗಿ ಸನ್ಯಾಸಿಗಳು ಧ್ಯಾನ ಮಾಡುತ್ತಾರೆ.

ಈಶಾನ್ಯ ಭಾರತದಲ್ಲಿ ಚಂದ್ರಗ್ರಹಣವು ಅತೀ ಸುಂದರ. ಶಿಲ್ಲಾಂಗ್‌ನ ಬೆಟ್ಟಗಳ ಮೇಲೆ ಚಂದ್ರನು ಕೆಂಪು ಬಣ್ಣದಲ್ಲಿ (ಬ್ಲಡ್ ಮೂನ್) ಉದಯಿಸುತ್ತಾನೆ. ಅದನ್ನು ನೋಡಿ ನಂತರ ಕಾಮಾಖ್ಯಾ ದೇವಿಯ ದರ್ಶನ ಮಾಡುವುದು ಪಾಪಗಳನ್ನು ನಿವಾರಣೆ ಮಾಡುತ್ತದೆ ಎನ್ನುತ್ತಾರೆ. ಗ್ರಹಣದಲ್ಲಿ ಭಾರತದ ಪ್ರಕೃತಿಯು ದೇವರ ಮನೆಯ ಬಾಗಿಲಾಗುತ್ತದೆ. ಸೂರ್ಯನು ಏಕೆ ಮರೆಯಾಗುತ್ತಾನೆ ಎನ್ನುವುದಕ್ಕೆ ವಿಜ್ಞಾನ ಉತ್ತರಿಸಿದರೆ ಆ ಕತ್ತಲೆಯಲ್ಲಿ ನಮ್ಮ ಹೃದಯ ಏಕೆ ಬೆಚ್ಚಗಾಗುತ್ತದೆ, ಕಣ್ಣಲ್ಲಿ ನೀರು ಏಕೆ ಬರುತ್ತದೆ ಎಂದು ಆಧ್ಯಾತ್ಮ ಉತ್ತರಿಸುತ್ತದೆ. ಭಾರತದಲ್ಲಿ ಈ ಎರಡೂ ಉತ್ತರಗಳು ಒಂದೇ ಸಾಲಿನಲ್ಲಿ ನಿಲ್ಲುತ್ತವೆ.

ಗ್ರಹಣ ಪ್ರವಾಸವು ಆಸ್ಟ್ರೋ ಪ್ರವಾಸೋದ್ಯಮ ಎನ್ನುವ ಆಲದ ಮರದ ಒಂದ ಬಿಳಿಲು ಅಷ್ಟೇ. ಆಸ್ಟ್ರೋ ಪ್ರವಾಸೋದ್ಯಮವು ಒಂದು ಜವಾಬ್ದಾರಿಯುತ ಪ್ರವಾಸ. ಸ್ವಚ್ಛ ಬೆಳಕಿನ ಮೇಲೆ ಆಗುತ್ತಿರುವ ಹಾನಿಯನ್ನು ತಡೆಗಟ್ಟಬೇಕು, ಸ್ಥಳೀಯ ಜನರಿಗೆ ಉದ್ಯೋಗ ಕೊಡಬೇಕು, ಆಕಾಶವನ್ನು ಸ್ವಚ್ಛವಾಗಿಡಬೇಕು ಮತ್ತು ಮುಂದಿನ ತಲೆಮಾರಿಗೂ ಆಕಾಶದಲ್ಲಿ ನಕ್ಷತ್ರಗಳನ್ನು ಉಳಿಸಬೇಕು ಎನ್ನುವುದು ಈ ಪ್ರವಾಸದ ಉದ್ದೇಶ.

ರಾತ್ರಿಯಾದರೆ ನಗರದ ದೀಪಗಳು ಆಕಾಶವನ್ನು ನುಂಗಿಬಿಡುತ್ತವೆ. ನಮಗೆ ನೆನಪಿರುವುದು ಕೇವಲ ಒಂದೆರಡು ಮಿನುಗುವ ನಕ್ಷತ್ರಗಳು. ಆದರೆ, ಭೂಮಿಯ ಮೇಲೆ ಇನ್ನೂ ಕೆಲವು ಜಾಗಗಳಿವೆ, ಅಲ್ಲಿ ರಾತ್ರಿ ಬಂದರೆ ಆಕಾಶವೇ ಕೆಳಗಿಳಿದು ಬಂದಂತೆ ಇರುತ್ತದೆ. ಲಕ್ಷಾಂತರ ನಕ್ಷತ್ರಗಳು, ಹಾಲು ದಾರಿ, ಉಲ್ಕೆಗಳು, ಗ್ರಹಗಳು ಎಲ್ಲವೂ ಕಣ್ಣ ಮುಂದೆ. ಅದಕ್ಕಾಗಿ ಮನುಷ್ಯ ಆಸ್ಟ್ರೋ ಪ್ರವಾಸ ಹೊರಡುತ್ತಿದ್ದಾನೆ. ಇದು ಕೇವಲ ಗ್ರಹಣ ನೋಡಲು ಹೋಗುವುದಲ್ಲ, ಆಕಾಶವನ್ನೇ ತಾಣವನ್ನಾಗಿ ಮಾಡಿಕೊಳ್ಳುವ ಪ್ರಯಾಣ. ಅರೋರಾ ನೋಡಲು ನಾರ್ವೆಗೆ ಹೋಗುವವರು ಇರುವಂತೆ ಮರುಭೂಮಿಯಲ್ಲಿ ಮಲಗಿ ಉಲ್ಕಾ ಮಳೆ ನೋಡುತ್ತಾರೆ. ಪರ್ವತದ ಮೇಲೆ ಟೆಲಿಸ್ಕೋಪ್ ಇಟ್ಟು ಶನಿಯ ಉಂಗುರ ನೋಡಿ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾರೆ.

Untitled design (14)

ಇದು ಶಾಂತಿಯನ್ನು ಕಂಡುಕೊಳ್ಳುವ ಹೊಸ ವಿಧಾನವಾಗಿದೆ. ದಿನವಿಡೀ ಯಂತ್ರಗಳ ಶಬ್ದದ ನಡುವೆ ಓಡುವ ನಮಗೆ, ರಾತ್ರಿ ಒಂದು ಬೆಟ್ಟದ ಮೇಲೆ ಕಂಬಳಿ ಹೊದ್ದು ಮಲಗಿ ಆಕಾಶ ನೋಡುವುದಕ್ಕಿಂತ ದೊಡ್ಡ ಐಷಾರಾಮಿ ಬೇರೊಂದಿಲ್ಲ. ಅಲ್ಲಿ ವೈಫೈ ಇಲ್ಲದೆಯೂ ಕೋಟಿಕೋಟಿ ನಕ್ಷತ್ರಗಳೊಡನೆ ಸಂಪರ್ಕವಾಗುತ್ತದೆ. ಭಾರತವು ಈ ಕ್ಷೇತ್ರದಲ್ಲಿ ಈಗಷ್ಟೇ ಎಚ್ಚರಗೊಂಡಿದೆ.

ಲಡಾಖ್‌ನ ಹಾನ್ಲೆಯಲ್ಲಿ ಭಾರತದ ಮೊದಲ ಡಾರ್ಕ್ ಸ್ಕೈ ರಿಸರ್ವ್ ಇದೆ. 4500 ಮೀಟರ್ ಎತ್ತರದಲ್ಲಿರುವ ಇದು ಪ್ರಪಂಚದ ಅತ್ಯಂತ ಎತ್ತರದ ವೀಕ್ಷಣಾಲಯಗಳಲ್ಲಿ ಒಂದಾಗಿದೆ. ರಾತ್ರಿಗಳಲ್ಲಿ ಉಸಿರಿನದ್ದೇ ದೊಡ್ಡ ಸದ್ದು. ವಿಜ್ಞಾನಿಗಳು, ಛಾಯಾಗ್ರಾಹಕರು ಮತ್ತು ಸಾಮಾನ್ಯ ಪ್ರವಾಸಿಗರು ಇಲ್ಲಿಗೆ ಬಂದು ರಾತ್ರಿ ಇಡೀ ಆಕಾಶದೊಂದಿಗೆ ಇರುಳು ಸಂಭಾಷಣೆ ಮಾತನಾಡುತ್ತಾರೆ.

ಹಿಮಾಚಲದ ಸ್ಪಿಟಿ ಕಣಿವೆಯ ಲಾಂಗ್ಜಾ, ಕೊಮಿಕ್, ಕಾಜಾ ಗ್ರಾಮಗಳು ಆಸ್ಟ್ರೋ ಗ್ರಾಮಗಳಾಗಿ ಬದಲಾಗುತ್ತಿವೆ. ಸ್ಥಳೀಯರು ರಾತ್ರಿಯಲ್ಲಿ ನಮ್ಕೀನ್ ಚಹಾದೊಂದಿಗೆ ಟೆಲಿಸ್ಕೋಪ್ ಇಟ್ಟು ಪ್ರವಾಸಿಗರಿಗೆ ಗುರು, ಶುಕ್ರ, ಮಂಗಳ ಗ್ರಹಗಳನ್ನು ತೋರಿಸುತ್ತಾ, ಬೆಚ್ಚಗಿನ ಚಹಾ ಕೈಗಿತ್ತು ಮತ್ತು ಸ್ಥಳೀಯ ಕಥೆಗಳನ್ನು ಹೇಳುತ್ತಾರೆ. ಗುಜರಾತ್‌ನ ಕಛ್ನ ರಣ್ ಬಿಳಿ ಉಪ್ಪಿನ ಮರುಭೂಮಿ. ಹುಣ್ಣಿಮೆಯ ರಾತ್ರಿಯಲ್ಲಿ ಇಲ್ಲಿನ ನೆಲವೇ ಬೆಳ್ಳಿಯಂತೆ ಹೊಳೆಯುತ್ತದೆ. ಆ ದೃಶ್ಯದಲ್ಲಿ ಪ್ರತಿಬಿಂಬವಾಗಲು ಲಕ್ಷ ಜನರು ರಣ್ ಉತ್ಸವಕ್ಕೆ ಬರುತ್ತಾರೆ.

ಉತ್ತರಾಖಂಡ್‌ನ ಮುನ್ಸಿಯಾರಿ ಮತ್ತು ರಾಜಸ್ಥಾನದ ಜೈಸಲ್ಮೇರ್ ಮರುಭೂಮಿಯೂ ಈಗ ಆಸ್ಟ್ರೋ ಪ್ರವಾಸದ ಪಟ್ಟಿಗೆ ಸೇರಿವೆ. ಅಲ್ಲಿ ಸ್ಥಳೀಯ ಗೈಡ್‌ಗಳು ನಕ್ಷತ್ರಗಳ ಹೆಸರು ಹೇಳುತ್ತಾರೆ, ಪುರಾಣದ ಕಥೆಯ ಜತೆಗೆ ವಿಜ್ಞಾನವನ್ನೂ ವಿವರಿಸುತ್ತಾರೆ. ಆಸ್ಟ್ರೋ ಪ್ರವಾಸ ಅಚ್ಚರಿಯ ರೀತಿಯಲ್ಲಿ ನಗರದಲ್ಲಿ ನಾವು ಮರೆತುಹೋದ ಬ್ರಹ್ಮಾಂಡವನ್ನು ನೆನಪಿಸುತ್ತದೆ. ಕೆಲವು ಕಂಪನಿಗಳು ಈಗ ಆಸ್ಟ್ರೋ-ಯೋಗ, ಆಸ್ಟ್ರೋ-ಧ್ಯಾನದಂಥ ಕಾರ್ಯಕ್ರಮಗಳನ್ನು ಕೂಡ ಮಾಡುತ್ತಿವೆ.

ಆಸ್ಟ್ರೋ ಪ್ರವಾಸೋದ್ಯಮವು ’ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ’ ಎನ್ನುವುದನ್ನು ಅಕ್ಷರಶಃ ಸಾಕ್ಷಾತ್ಕಾರಗೊಳಿಸಿ ಕೊಡುತ್ತದೆ. ನಕ್ಷತ್ರಗಳ ಕೆಳಗೆ ಮಲಗಿದಾಗ ತಿಳಿಯುತ್ತದೆ ಪ್ರಯಾಣ ಎಂದರೆ ಹೊಸ ಜಾಗ ನೋಡುವುದಲ್ಲ, ಹೊಸ ರೀತಿಯಲ್ಲಿ ನೋಡುವುದು ಎಂದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?