Tuesday, August 18, 2026
Tuesday, August 18, 2026

ನಾಲಗೆ ತಿರುಗಿಸುವ ದೇಶಗಳತ್ತ ಒಂದು ಪ್ರವಾಸ!

ಪ್ರವಾಸವೆಂದರೆ ಹೊಸ ತಾಣಗಳನ್ನು ನೋಡುವುದಷ್ಟೇ ಅಲ್ಲ, ಹೊಸ ಭಾಷೆ ಮತ್ತು ಪದಗಳನ್ನು ಪರಿಚಯಿಸಿಕೊಳ್ಳುವುದೂ ಹೌದು. ಕೆಲವು ದೇಶ– ತಾಣಗಳ ಹೆಸರುಗಳನ್ನು ಉಚ್ಚರಿಸುವುದೇ ನಾಲಗೆಗೆ ದೊಡ್ಡ ಸವಾಲು! ಒಂದೆರಡು ಬಾರಿ ಹೇಳುತ್ತಾ ನಾಲಗೆ ತಿರುಚಿದರೂ, ಅದರ ಹಿಂದೆ ಅಡಗಿರುವ ಕಥೆ ತಿಳಿದಾಗ ಕುತೂಹಲ ಮತ್ತಷ್ಟು ಹೆಚ್ಚುತ್ತದೆ. ಪ್ರತಿ ಕಷ್ಟದ ಹೆಸರಿನ ಹಿಂದೆ ಒಂದು ಭೂಗೋಳ, ಇತಿಹಾಸ, ಸಂಸ್ಕೃತಿ ಅಥವಾ ಪ್ರಕೃತಿಯ ವೈಶಿಷ್ಟ್ಯ ಅಡಗಿದೆ. ನಾಲಿಗೆಗೆ ತಿರುವು ಕೊಟ್ಟು ಮನಸಿಗೆ ಮುದ ನೀಡುವ ಈ ರೋಚಕ ತಾಣಗಳತ್ತ ಒಂದು ಪ್ರವಾಸ ಹೋಗೋಣವೇ?

  • ಅಂಜಲಿ ರಾಮಣ್ಣ

ʼಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆʼ ಅಂತ ದಾಸರೇನೋ ಹೇಳಿಬಿಟ್ಟರು. ಆದರೆ, ಅದು ಅಷ್ಟು ಸುಲಭ ಸಾಧ್ಯವೇ? ಕೆಲವು ದೇಶಗಳಿಗೆ ಪ್ರವಾಸ ಹೋದಾಗ ಆ ದೇಶಗಳ ಹೆಸರುಗಳನ್ನು ಹೇಳಲು ನಾಲಗೆಯನ್ನು ಅದೆಷ್ಟು ತಿರುಚಬೇಕು ಎಂದರೆ ಬಹುಶಃ ನಾಲಗೆ ತಾನೇ ಸ್ವಚ್ಛವಾಗಿ ಬಿಡುವುದರ ಜತೆಗೆ ಬುದ್ಧಿಯನ್ನು ನೇರ ಮಾಡಿ ಹೃದಯವನ್ನು ಹದುಳ ಮಾಡುತ್ತದೆ ಎನ್ನಿಸುತ್ತದೆ.

ವಿಮಾನದ ಟಿಕೆಟ್ ಬುಕ್ ಮಾಡಲು ಹೋಗಿ, ಉಚ್ಚರಿಸಲೇ ಆಗದ ದೇಶದ ಹೆಸರನ್ನು ಕಂಡು ಪದೇ ಪದೆ ಆ ಹೆಸರನ್ನು ಹೇಳಿಕೊಳ್ಳುವ, ಹಾರುವ ಮೊದಲು ಆ ದೇಶದ ಪೂರ್ಣ ಹೆಸರನ್ನು ಬೇರೆಯವರಿಗೆ ಜೋರಾಗಿ ಹೇಳುವ ರೋಮಾಂಚನವೇ ನಿಜವಾದ ರೋಮಾಂಚನ. ಈ ದೇಶಗಳ ಹೆಸರುಗಳು ನಾಲಿಗೆಗೆ ತಿರುವು ಕೊಡುವಂಥವು, ನಿಜ. ಆದರೆ, ಆ ಹೆಸರಿನ ಹಿಂದೆ ಅಡಗಿರುವ ಭೂಗೋಳ ಶಾಸ್ತ್ರ, ಇತಿಹಾಸ, ಸಂಸ್ಕೃತಿ, ಅನುಭವಗಳು ನಾಲಗೆಯ ಪ್ರತಿ ತಿರುಚಿಗೂ ತಪ್ಪಾದರೂ ಸರಿ ಅದರಿಂದ ಹೊರಡುವ ಪ್ರತಿ ಉಚ್ಚಾರಕ್ಕೂ ಯೋಗ್ಯವಾದವು. ಬ್ಯಾಗ್ ಪ್ಯಾಕ್ ಮಾಡಿಕೊಂಡು ಫೋನ್‍ನಲ್ಲಿ ಉಚ್ಚಾರಣಾ ಮಾರ್ಗದರ್ಶಿ ~ಆಪ್‍ಅನ್ನು ಹಾಕಿಕೊಂಡು ಪ್ರವಾಸ ಹೊರಡುವುದಷ್ಟೇ ಬಾಕಿ.

ಇದನ್ನೂ ಓದಿ: ಸುಳ್ಳಲ್ಲ.. ನಂಬಿ..! ಇದು ಸೊಳ್ಳೆ ಬಿಡುಗಡೆಯ ಪ್ರವಾಸೋದ್ಯಮ!

Trinidad ಮತ್ತು Tobago ಉತ್ತರ ಮತ್ತು ದಕ್ಷಿಣ ಅಮೆರಿಕದ ನಡುವೆ ಕೆರಿಬಿಯನ್ ಸಮುದ್ರದಲ್ಲಿ ಇರುವ ಈ ಎರಡು ದ್ವೀಪಗಳದ್ದು ಭಾರೀ ಖದರ್. ವರ್ಷದ ಅಷ್ಟೂ ದಿನಗಳಲ್ಲೂ ಜಾತ್ರೆಯದ್ದೇ ಸಂಭ್ರಮ. ಟ್ರಿ-ನಿ-ಡಾಡ್ ಮತ್ತು ಟೊ-ಬೇ-ಗೋ ಎಂದು ಹೇಳುವಾಗ ಉಂಟಾಗುವ ಧ್ವನಿ ಲಯವೇ ದ್ವೀಪಗಳ ಲಯಕ್ಕೆ ಹೊಂದಿಕೊಂಡಂತಿದೆ. ಸ್ಟೀಲ್ ಡ್ರಮ್‍ನಿಂದ ಮೊದಲು ನಾದವನ್ನು ಹೊರಡಿಸಿದ ಹೆಗ್ಗಳಿಕೆ ಟ್ರಿನಿಡಾಡ್ ಮತ್ತು ಟೊಬೇಗೋ ದ್ವೀಪಗಳದ್ದು. ʼSteelpan ಸಂಗೀತʼ ಇಂದು ಜಗತ್ತಿನಲ್ಲಿ ಪ್ರಸಿದ್ಧಿ. ಆದರೆ, ಅದು ಹುಟ್ಟಿದ ಕಥೆ ಬಲು ರೋಚಕ. ಆಕಾಶದೆತ್ತರಕ್ಕೆ ಹಾರುವ ಕೆಸರು ಜ್ವಾಲಾಮುಖಿಗಳು, ಜೀವಂತ ರತ್ನಗಳಂತೆ ಮಿಂಚುವ ಹಮಿಂಗ್‌ಬರ್ಡ್‌ಗಳು ಮತ್ತೆಲ್ಲೂ ಕಾಣಸಿಗವು. ಇನ್ನೂ ಹೆಚ್ಚು ಜನರ ಹೆಜ್ಜೆಗಳು ಕಾಣಿಸಿಕೊಳ್ಳದ ಪಿಜನ್ ಪಾಯಿಂಟ್‍ನ ಕಡಲ ತೀರಗಳು ಮತ್ತು ಜಗತ್ತಿನ ಅತ್ಯಂತ ಹಳೆಯ ಸಂರಕ್ಷಿತ ಮಳೆಕಾಡಾದ ಮೇನ್ ರಿಡ್ಜ್‍ನಲ್ಲಿ ಸಿಗುವ ತೊರೆಗಳಲ್ಲಿ ಮೋಡಗಳನ್ನೇ ಮರೆಸುವಷ್ಟು ನಿರ್ಮಲ ನೀರು ಇರುವ ಟೊಬೇಗೋಗೆ ಕಾಲಿಟ್ಟರೆ ಮನಸೇ ಬದಲಾಗುತ್ತದೆ. ಅಲ್ಲಿನ ಸ್ಥಳೀಯರು ʼಟ್ರಿನಿ ಟು ದಿ ಬೋನ್ʼ ಎಂದು ಹೆಮ್ಮೆಯಿಂದ ಹೇಳುವಾಗ ಉಕ್ಕಿನ ನಾದವು ಕಿವಿಗಳನ್ನು ಸೋಕಿದಂತೆ ಎನಿಸುತ್ತದೆ. ಕೆರಿಬಿಯನ್ ಸಮುದ್ರದಲ್ಲಿ ಇರುವ ದ್ವೀಪಗಳೇ ಆದರೂ ’ನಾವೇ ಬೇರೆ’ ಎನ್ನುತ್ತಾ ಎತ್ತರಕ್ಕೆ ನಿಂತಿವೆ Trinidad ಮತ್ತು Tobago.

Untitled design - 2026-08-18T163958.591

Independent State of Papua New Guinea. ಪ-ಪು-ಆ ನ್ಯೂ ಗಿ-ನಿ. ಆಸ್ಟ್ರೇಲಿಯಾದ ಉತ್ತರಕ್ಕೆ ಇರುವ ಈ ದೇಶದ ಹೆಸರು ಹೇಳುವುದೇ ಕಟ್ಟ ಕಡೆಯ ಸಾಹಸದಂತೆ. ಹೆಸರು ದೊಡ್ಡದಾಗಿರುವುದಕ್ಕೆ ಕಾರಣ ಈ ದೇಶವೇ ದೊಡ್ಡದು. ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚಿನ ಪ್ರದೇಶವನ್ನು ಆವರಿಸಿಕೊಂಡಿರುವ ಕಾಡು. ಆದಕ್ಕೇ ಈ ದೇಶ ಸಾಮಾನ್ಯ ಪ್ರವಾಸಿಗಳಿಂದ ದೂರವುಳಿದಿರುವುದು. ಈ ದೇಶಕ್ಕೆ ಹೋಗುವುದು ಎಂದರೆ ಅದೊಂದು ರಜೆ ಮೇಲಿನ ರೆಸಾರ್ಟ್ ಪ್ರವಾಸವಲ್ಲ, ಜಗತ್ತಿನ ಅತ್ಯಂತ ವೈವಿಧ್ಯಮಯ ಸಾಂಸ್ಕೃತಿಕ ಧಾರೆಗೆ ಧುಮುಕುವುದೇ ಆಗಿದೆ. 800ಕ್ಕೂ ಹೆಚ್ಚು ಭಾಷೆಗಳು, ಶತಮಾನಗಳ ಹಿಂದಿನಂತೆಯೇ ಬದುಕುವ ಬುಡಕಟ್ಟುಗಳು, ಜಗದ್ವಿಖ್ಯಾತ ಮೌಂಟ್ ಹ್ಯಾಗೆನ್ ಉತ್ಸವ, ಕೊಲ್ಲಿಯ ಎರಡನೆಯ ಮಹಾಯುದ್ಧದ ಹಡಗುಗಳ ಅವಶೇಷಗಳು, ಫೊಟೋಶಾಪ್ ಮಾಡಿದಂತೆ ಕಾಣುವ ಹವಳದ ಬಂಡೆಗಳು ಪ್ರವಾಸಿಯನ್ನು ಒಂದು ಕಾಲಯಂತ್ರದಲ್ಲಿ ಕರೆದುಕೊಂಡು ಹೋಗಿಬಿಡುತ್ತದೆ. ಚಾರಣ ಪ್ರಿಯರ ಎಲ್ಲ ಮಿತಿಗಳನ್ನು ಪರೀಕ್ಷೆ ಮಾಡುವ ಈ ದೇಶಕ್ಕೆ ಹೊರಡುವ ಮೊದಲು ಹೆಸರನ್ನು ಉಚ್ಚಾರಿಸಲು ನಾಲಿಗೆಗೆ ತಿರುಚು ತರಬೇತಿಕೊಡಬೇಕು ಅಷ್ಟೇ.

Principality of Liechtenstein, ರಾಜನಿಂದ ಅಲ್ಲ ರಾಜಕುಮಾರನ ಆಳ್ವಿಕೆಗೆ ಒಳಪಟ್ಟಿರುವ ಪುಟ್ಟ ದೇಶ ಲೀ-ಖೆನ್-ಸ್ಟೈನ್. ಪುಟ್ಟ ಹೆಸರು, ಪುಟ್ಟ ದೇಶ ಆದರೆ ಬೃಹತ್ ದೃಶ್ಯಗಳನ್ನು ಹೊಂದಿರುವ ಈ ದೇಶ ಪ್ರವಾಸಿಗನ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ. ಆಸ್ಟ್ರಿಯಾ ಮತ್ತು ಸ್ವಿಟ್ಜರ್‌ಲ್ಯಾಂಡ್ ನಡುವೆ ಸಿಲುಕಿರುವ ಈ 25 ಕಿಮೀ. ಉದ್ದದ ಪ್ರಭುತ್ವ, ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ ಕೆತ್ತಿದ ಪುಟ್ಟ ಕನಸಿನ ಮನೆಯಂತೆ ಕಾಣುತ್ತದೆ. ಪ್ರಪಾತದಲ್ಲಿ ಇರುವ ಈ ದೇಶವನ್ನು ಸುತ್ತಲೂ ಬೆಟ್ಟಗಳ ಮೇಲಿನ ದ್ರಾಕ್ಷಿತೋಟಗಳು ಕೋಟೆಯಂತೆ ಕಾಯುತ್ತವೆ. ರಾಜಕುಮಾರನ ಕಲಾ ಸಂಗ್ರಹ ದೊಡ್ಡ ನಗರಗಳ ವಸ್ತುಸಂಗ್ರಹಾಲಯಗಳನ್ನೇ ಮೀರಿಸಿ ನಿಂತಿದೆ. ಚಳಿಗಾಲದಲ್ಲಿ ಇದು ಶಾಂತ ಸ್ಕೀ (ಹಿಮದ ಮೇಲೆ ಜಾರುವ ಕ್ರೀಡೆ) ತಾಣವಾಗುತ್ತದೆ. ಬೇಸಗೆಯಲ್ಲಿ ಅಷ್ಟೇ ಬಿರುಸಿನ ಹೈಕ್ ಮಾಡಲು ತಯಾರಾಗಿ ನಿಂತುಬಿಡುತ್ತದೆ. ಇಡೀ ದೇಶವನ್ನು ಒಂದು ದಿನದಲ್ಲಿ ಕಾಲ್ನಡಿಗೆಯಲ್ಲೇ ದಾಟಬಹುದು, ಜತೆಗೆ ಸ್ವಿಸ್ ಚಾಕೊಲೆಟ್‌ ತಿನ್ನಲು, ಕೊಳ್ಳಲು ಬೇಕಾದಷ್ಟು ಸಮಯ ಉಳಿಯುತ್ತದೆ. ಅತ್ಯುತ್ತಮವಾದುದು ಚಿಕ್ಕ, ಉಚ್ಚರಿಸಲು ಕಷ್ಟವಾದ ಪ್ಯಾಕೇಜ್‌ನಲ್ಲಿಯೂ ಬರುತ್ತದೆ ಎಂಬುದಕ್ಕೆ ಸಾಕ್ಷಿ ಲೀಖೆನ್‍ಸ್ಟೈನ್.

Kingdom of Eswatini ಆಫ್ರಿಕದ ಗುಪ್ತ ಸಾಮ್ರಾಜ್ಯ ಎಂದೇ ಪರಿಚಿತ ಎಸ್-ಸ್ವಾ-ತೀ-ನೀ ಪ್ರವಾಸಿಗರು ಇನ್ನೂ ಕಂಡುಕೊಳ್ಳಬೇಕಾದ ದೇಶ. ದೊಡ್ಡ ಜೀಪುಗಳಲ್ಲಿ ಹ್ಲಾನೆ ರಾಯಲ್ ನ್ಯಾಷನಲ್ ಪಾರ್ಕ್‌ನಲ್ಲಿ ಸಫಾರಿ ಮಾಡುತ್ತಾ ಭಾರಿ ಗಾತ್ರದ ಖಡ್ಗಮೃಗಗಳನ್ನು ನೋಡುವ ಭರ್ಜರಿ ಅವಕಾಶ, ಅಷ್ಟು ಮಾತ್ರವಲ್ಲ ಆಫ್ರಿಕ ಖಂಡದ ಅತ್ಯಂತ ಶಕ್ತಿಶಾಲಿ ಸಾಂಸ್ಕೃತಿಕ ಘಟನೆ ಎಂದು ಗುರುತಿಸಿಕೊಂಡಿರುವ ’Umkhosi woMhlanga’ ಅರ್ಥಾತ್ ’ರೀಡ್ ಡ್ಯಾನ್ಸʼ ಸಮಾರಂಭ ನೋಡುವುದು ಎಂದರೆ ಪ್ರವಾಸ ಹವ್ಯಾಸದ ಉತ್ತುಂಗವನ್ನು ಏರಿದಂತೆ. ʼSawubonaʼ ಎಂದರೆ ಅಲ್ಲಿನವರ ಭಾಷೆಯಲ್ಲಿ ನಮಸ್ಕಾರ ಮತ್ತು ಶುಭಾಶಯಕ್ಕೆ ಸಮ. ಇದೊಂದು ಪದದ ಉಚ್ಚಾರಣೆ ತಿಳಿದುಕೊಂಡಿದ್ದರೆ ಸಾಕು ಅಲ್ಲಿನವರೆಲ್ಲಾ ಸ್ನೇಹಿತರೇ ಆದಂತೆ.

Untitled design - 2026-08-18T164004.323

ಈಗ ನಾಲಿಗೆಯನ್ನು ಚೂಕ್ಕಟಗೊಳಿಸಿಕೊಳ್ಳಲು ಮೊದಲು ಎಲ್ಲಿಗೆ ಹೋಗುವುದು ಎಂದು ಯೋಚಿಸುವಾಗ ಧ್ವನಿಪೆಟ್ಟಿಗೆಯನ್ನು ಶುಚಿಗೊಳಿಸುತ್ತೇನೆ ಎನ್ನುತ್ತಾ ಕರೆಯುತ್ತಿದೆ ಮತ್ತೊಂದು ಪ್ರದೇಶ ಅದು ಪ್ರಪಂಚದಲ್ಲೇ ಅತಿ ಉದ್ದದ ಹೆಸರಿನ ಬೆಟ್ಟ. ನ್ಯೂಜಿಲೆಂಡ್‌ನ ಹಸಿರು ಬೆಟ್ಟಗಳ ಮಡಿಲಲ್ಲಿ ಒಂದು ವಿಚಿತ್ರವಾದ ಆದರೆ ಅದ್ಭುತವಾದ ಕಥೆ ನಿದ್ರಿಸುತ್ತಿದೆ. ಅದು ಕೇವಲ ಒಂದು ಬೆಟ್ಟವಲ್ಲ, ಅದು ಒಂದು ಭಾವನೆ, ಒಂದು ನೆನಪು, ಒಂದು ಹಾಡು. ಆ ಬೆಟ್ಟದ ಹೆಸರು ಕೇಳಿದರೆ ನಾಲಿಗೆ ತೊದಲುತ್ತದೆ, ಆದರೆ ಹೃದಯ ತುಂಬಿ ಹೋಗುತ್ತದೆ.

ʼTaumatawhakatangihangakoauotamateaturipukakapikimaungahoronukupokaiwhenuakitanatahuʼ ಈ ಒಂದು ಪದವನ್ನು ಕೇಳಿದಾಗ ಅಥವಾ ಲಿಪಿ ನೋಡಿದಾಗ ಇಂಗ್ಲಿಷ್ ಅಕ್ಷರಮಾಲೆಯ ಎಲ್ಲ ಅಕ್ಷರಗಳನ್ನು ಇಷ್ಟಬಂದಂತೆ ಅಕ್ಕಪಕ್ಕ ಜೋಡಿಸಿದ್ದಾರೇನೋ ಎನ್ನುವ ಅನುಮಾನ ಮೂಡದಿರಲು ಸಾಧ್ಯವಿಲ್ಲ. ಹೌದು, 85 ಅಕ್ಷರಗಳ ಈ ಉದ್ದನೆಯ ಮಾಓರಿ ಭಾಷೆಯ ಪದವು ಪ್ರಪಂಚದಲ್ಲೇ ಅತಿ ಉದ್ದದ ಸ್ಥಳದ ಹೆಸರುಗಳಲ್ಲಿ ಒಂದಾಗಿದೆ.

ಮಾವೋರಿ ಭಾಷೆಯಲ್ಲಿ ಈ ಹೆಸರಿಗೆ ಒಂದು ಕಣ್ಣೀರಿನ ಕಥೆಯಿದೆ. ʼದೊಡ್ಡ ಮೊಣಕಾಲಿನ ತಮತೇಯ ಎಂಬ ವೀರನು, ಬೆಟ್ಟಗಳನ್ನು ಹತ್ತಿ ಇಳಿದು, ತನ್ನ ಪ್ರಿಯತಮೆಗಾಗಿ ಕೊಳಲು ಊದಿದ ಸ್ಥಳʼ ಎನ್ನುವ ಅರ್ಥವಿದೆ ಈ ಪದಕ್ಕೆ. ಪ್ರೀತಿಗಾಗಿ, ನೋವಿಗಾಗಿ, ನೆನಪಿಗಾಗಿ ಅಳುತ್ತಾ ನಿಂತ ಆ ವೀರನ ಕಥೆಯನ್ನು ಈ ಬೆಟ್ಟ ಇಂದಿಗೂ ತನ್ನ ಎದೆಯಲ್ಲಿ ಹೊತ್ತುಕೊಂಡಿದೆ. ಸ್ಥಳೀಯರು ಮಾತ್ರ ಈ ಉದ್ದನೆಯ ಹೆಸರನ್ನು ಪೂರ್ಣವಾಗಿ ಹೇಳುವುದಿಲ್ಲ. ಪ್ರೀತಿಯಿಂದ ಅದನ್ನು ಸರಳವಾಗಿ ʼTaumataʼ ಎಂದು ಕರೆಯುತ್ತಾರೆ. ಏಕೆಂದರೆ ಕೆಲವು ಕಥೆಗಳು ಉದ್ದವಾಗಿದ್ದರೂ, ಅವುಗಳ ಸಾರಾಂಶ ಒಂದು ಉಸಿರಿನಲ್ಲಿ ಹೇಳಿಬಿಡಬಹುದಾದಷ್ಟು ಸುಂದರವಾಗಿರುತ್ತದೆ, ಉತ್ಸಾಹ ತುಂಬುತ್ತದೆ.

ನೀವು ಕೂಡ ಇಂಥ ʼನಾಲಿಗೆತಿರುಚುʼ ಸ್ಥಳಗಳಿಗೆ ಈಗಾಗಲೇ ಹೋಗಿರಬಹುದು, ಇಲ್ಲಿ ನೀಡಿರದ ಅಂಥ ಜಾಗಗಳ ಪಟ್ಟಿ ಪ್ರವಾಸಿಗಳಿಂದ ದೊಡ್ಡದಾಗುತ್ತಿರಲಿ. ಎಲ್ಲ ತಿರುವುಗಳೂ ಪ್ರವಾಸವೇ ಆಗಲಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?