Tuesday, November 17, 2026
Tuesday, November 17, 2026

‘ಹಂಟೇರಿಯನ್ ಮ್ಯೂಸಿಯಂ’: ಇಲ್ಲಿ ಶವಗಳು ಕಥೆ ಹೇಳುತ್ತವೆ!

ಜಾನ್ ಹಂಟರ್ ದಿನಚರಿಯೇ ಒಂದು ಅದ್ಭುತ ಕಥೆ. ಲಂಡನ್‌ನ ಲೀಸೆಸ್ಟರ್ ಸ್ಕ್ವೇರ್‌ನಲ್ಲಿದ್ದ ತನ್ನ ಮನೆಯನ್ನು ಈತ ವಿಜ್ಞಾನ ಪ್ರಯೋಗಾಲಯವೋ ಅಥವಾ ಸಾರ್ವಜನಿಕ ಕಟುಕರ ಅಂಗಡಿಯೋ ಎನ್ನುವ ಮಟ್ಟಿಗೆ ಪರಿವರ್ತಿಸಿಕೊಂಡಿದ್ದ. ಮನೆಯ ಮುಂಭಾಗದಲ್ಲಿ ಶ್ರೀಮಂತ ರೋಗಿಗಳಿಗೆ ಚಿಕಿತ್ಸೆ ನೀಡುವ ಅತಿ ಸುಂದರವಾದ ಕ್ಲಿನಿಕ್ ಇರುತ್ತಿತ್ತು. ಆದರೆ ಮನೆಯ ಹಿಂಬದಿಯ ರಹಸ್ಯ ಬಾಗಿಲಿನ ಮೂಲಕ ದಿನವೂ ಅಪರಿಚಿತ ಗಾಡಿಗಳಲ್ಲಿ ಶವಗಳು, ಕೊಳೆತ ಪ್ರಾಣಿಗಳ ದೇಹಗಳು ಒಳಬರುತ್ತಿದ್ದವು. ಇವನ ಮನೆಯಲ್ಲಿ ಸಿಂಹ, ಚಿರತೆ, ಕರಡಿ ಮತ್ತು ಅಪರೂಪದ ಪ್ರಾಣಿಗಳ ಮೂಳೆಗಳ ರಾಶಿಯೇ ಬಿದ್ದಿರುತ್ತಿತ್ತು.

ಸತ್ತ ಮೇಲೂ ಪಾರಾಗದ ಹೆಣಗಳು ಮತ್ತು ಒಬ್ಬ ಸರ್ಜನ್‌ನ ಚಪಲ!

ಲಂಡನ್ ಹೃದಯದಲ್ಲೊಂದು ಹೆಣಗಳ ಸಂಗ್ರಹಾಲಯ

ಲಂಡನ್‌ನ ಲಿಂಕನ್ಸ್ ಇನ್ ಫೀಲ್ಡ್ಸ್‌ನಲ್ಲಿರುವ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನ ಕಟ್ಟಡದ ಹೊಸ್ತಿಲು ದಾಟಿದರೆ, ಸಾಮಾನ್ಯವಾಗಿ ಜನ ಮ್ಯೂಸಿಯಂಗಳಲ್ಲಿ ನಿರೀಕ್ಷಿಸುವ ಮೊನಾಲಿಸಾಳಂಥ ನಿಗೂಢ ನಗುವಿನ ಚಿತ್ರಕಲೆಗಳಾಗಲೀ, ಬ್ರಿಟಿಷ್ ಸಾಮ್ರಾಜ್ಯದ ವಜ್ರ-ಖಚಿತ ಕಿರೀಟಗಳಾಗಲೀ, ಇಲ್ಲವೇ ವಿಕ್ಟೋರಿಯನ್ ಕಾಲದ ರೇಷ್ಮೆ ಗೌನುಗಳಾಗಲಿ ಕಾಣಸಿಗುವುದಿಲ್ಲ. ಬದಲಿಗೆ, ಅಲ್ಲಿ ಪ್ರವೇಶಿಸುತ್ತಿದ್ದಂತೆಯೇ ನಿಮ್ಮನ್ನು ಸ್ವಾಗತಿಸುವುದು ಅಚ್ಚುಕಟ್ಟಾಗಿ ಸಾಲುಗಟ್ಟಿ ಜೋಡಿಸಲಾದ ನೂರಾರು ಗಾಜಿನ ಭರಣಿಗಳು ಮತ್ತು ಅವುಗಳಲ್ಲಿ ರಾಸಾಯನಿಕ ದ್ರವದೊಳಗೆ ತೇಲುತ್ತಾ ನಿಮ್ಮನ್ನೇ ದಿಟ್ಟಿಸಿ ನೋಡುವ ವಿಲಕ್ಷಣ ಕಣ್ಣುಗುಡ್ಡೆಗಳು, ಕತ್ತರಿಸಿದ ನಾಲಗೆಗಳು ಹಾಗೂ ವಿಚಿತ್ರ ಅಂಗಾಂಗಗಳು! ನಾನು ನೋಡಿದ ಅತ್ಯಂತ ವಿಚಿತ್ರ ಮತ್ತು ಭೀಕರ ಮ್ಯೂಸಿಯಂಗಳಲ್ಲಿ ಇದಕ್ಕೆ ಮೊದಲ ಸ್ಥಾನವನ್ನು ಕೊಡುತ್ತೇನೆ. ಹೌದು, ಇದುವೇ ಲಂಡನ್ನಿನ ಅತ್ಯಂತ ವಿಚಿತ್ರ ಹಾಗೂ ಪ್ರಸಿದ್ಧ ‘ಹಂಟೇರಿಯನ್ ಮ್ಯೂಸಿಯಂ’ (ಜಗತ್ತಿನ ವೈದ್ಯಕೀಯ ಇತಿಹಾಸದ ವಿಕಾಸವನ್ನು ಇಷ್ಟು ರೋಮಾಂಚಕವಾಗಿ, ಬೆನ್ನುಮೂಳೆಯಲ್ಲಿ ಕೊಂಚ ನಡುಕ ಹುಟ್ಟಿಸುತ್ತಲೇ ಮುಖದಲ್ಲಿ ನಗು ತರಿಸುವಂತೆ ಪ್ರದರ್ಶಿಸುವ ಮತ್ತೊಂದು ಜಾಗ ಇಡೀ ಭೂಮಂಡಲದಲ್ಲೇ ಸಿಗುವುದು ತೀರಾ ವಿರಳ.

ಇದನ್ನೂ ಓದಿ: ಇದು ನೋಡುವ ಜಾಗವೊಂದೇ ಅಲ್ಲ, ಅನುಭವಕ್ಕೆ ಇಳಿಯಬೇಕಾದ ಊರು!

ಈ ಇಡೀ ‘ವಿಚಿತ್ರಗಳ ಅರಮನೆ’ಗೆ ಕಾರಣೀಭೂತನಾದ ವ್ಯಕ್ತಿಯ ಹೆಸರು ಜಾನ್ ಹಂಟರ್. ಹದಿನೆಂಟನೆಯ ಶತಮಾನದ ಈ ಸ್ಕಾಟಿಷ್ ಸರ್ಜನ್ ಮತ್ತು ಅಂಗರಚನಾಶಾಸ್ತ್ರಜ್ಞ (Anatomist) ನಿಜಕ್ಕೂ ಒಬ್ಬ ಅಸಾಮಾನ್ಯ ಪ್ರತಿಭಾವಂತ, ಆದರೆ ಅಷ್ಟೇ ತಿರಸಟ್ಟು ಮತ್ತು ವಿಚಿತ್ರ ಗೀಳಿನ ಮನುಷ್ಯ. ಆ ಕಾಲದ ಲಂಡನ್ ನಗರದಲ್ಲಿ ಜನರಿಗೆ ಬೆಳ್ಳಂಬೆಳಗ್ಗೆ ಎದ್ದು ಚಹಾ ಕುಡಿಯುವ ಅಭ್ಯಾಸವಿದ್ದರೆ, ಈ ಭೂಪನಿಗೆ ಮಾತ್ರ ಕಣ್ಣಿಗೆ ಬಿದ್ದ ಪ್ರತಿಯೊಂದು ಜೀವಿಯ ಒಳಗೇನಿದೆ ಎಂದು ಕುಯ್ದು, ಬಿಡಿಸಿ ನೋಡುವ ರೋಗಗ್ರಸ್ತ ಚಪಲ. ಪ್ರಾಣಿಗಳಾಗಲೀ, ಪಕ್ಷಿಗಳಾಗಲೀ, ಕೀಟಗಳಾಗಲೀ ಅಥವಾ ಸ್ವತಃ ಮನುಷ್ಯರೇ ಆಗಿರಲಿ—ಪ್ರಾಣ ಪಕ್ಷಿ ಹಾರಿಹೋದ ತಕ್ಷಣ ಇವನ ಶಸ್ತ್ರಚಿಕಿತ್ಸೆಯ ಚಾಕುವಿನಿಂದ ಪೋಸ್ಟ್‌ಮಾರ್ಟಮ್ ಆಗಿ, ಫಾರ್ಮಾಲಿನ್ ದ್ರವ ತುಂಬಿದ ಗಾಜಿನ ಬಾಟಲಿಗೆ ಸೇರಿಕೊಳ್ಳುವುದು ಗ್ಯಾರಂಟಿ ಆಗಿತ್ತು.

Untitled Design (29)

ಜಾನ್ ಹಂಟರ್ ದಿನಚರಿಯೇ ಒಂದು ಅದ್ಭುತ ಕಥೆ. ಲಂಡನ್‌ನ ಲೀಸೆಸ್ಟರ್ ಸ್ಕ್ವೇರ್‌ನಲ್ಲಿದ್ದ ತನ್ನ ಮನೆಯನ್ನು ಈತ ವಿಜ್ಞಾನ ಪ್ರಯೋಗಾಲಯವೋ ಅಥವಾ ಸಾರ್ವಜನಿಕ ಕಟುಕರ ಅಂಗಡಿಯೋ ಎನ್ನುವ ಮಟ್ಟಿಗೆ ಪರಿವರ್ತಿಸಿಕೊಂಡಿದ್ದ. ಮನೆಯ ಮುಂಭಾಗದಲ್ಲಿ ಶ್ರೀಮಂತ ರೋಗಿಗಳಿಗೆ ಚಿಕಿತ್ಸೆ ನೀಡುವ ಅತಿ ಸುಂದರವಾದ ಕ್ಲಿನಿಕ್ ಇರುತ್ತಿತ್ತು. ಆದರೆ ಮನೆಯ ಹಿಂಬದಿಯ ರಹಸ್ಯ ಬಾಗಿಲಿನ ಮೂಲಕ ದಿನವೂ ಅಪರಿಚಿತ ಗಾಡಿಗಳಲ್ಲಿ ಶವಗಳು, ಕೊಳೆತ ಪ್ರಾಣಿಗಳ ದೇಹಗಳು ಒಳಬರುತ್ತಿದ್ದವು. ಇವನ ಮನೆಯಲ್ಲಿ ಸಿಂಹ, ಚಿರತೆ, ಕರಡಿ ಮತ್ತು ಅಪರೂಪದ ಪ್ರಾಣಿಗಳ ಮೂಳೆಗಳ ರಾಶಿಯೇ ಬಿದ್ದಿರುತ್ತಿತ್ತು. ಲಂಡನ್ ಮೃಗಾಲಯದಲ್ಲಿ ಯಾವುದಾದರೂ ಅಪರೂಪದ ಮೃಗ ಸತ್ತಿದೆ ಎಂಬ ಸುದ್ದಿ ಸಿಕ್ಕರೆ ಸಾಕು, ಹಂಟರ್ ತನ್ನ ಚಾಕು-ಕತ್ತರಿಗಳ ಪೆಟ್ಟಿಗೆ ಹಿಡಿದು ಓಡುತ್ತಿದ್ದ!

ಹಂಟೇರಿಯನ್ ಮ್ಯೂಸಿಯಂನ ಇತಿಹಾಸದ ಪುಟಗಳನ್ನು ತಿರುವಿದರೆ ಅಂದಿನ ಕಾಲದ ಶವಗಳ ಕಳ್ಳತನದ ರೋಚಕ ಕಥೆಗಳು ಸಿಗುತ್ತವೆ. ಆ ಕಾಲದಲ್ಲಿ ಶಸ್ತ್ರಚಿಕಿತ್ಸೆಯನ್ನು ಕಲಿಯಲು ಮಾನವ ದೇಹಗಳು ಸುಲಭವಾಗಿ ಸಿಗುತ್ತಿರಲಿಲ್ಲ. ಅದಕ್ಕಾಗಿ ‘ರಿಸರೆಕ್ಷನಿಸ್ಟ್ಸ್’ (Resurrectionists) ಅಥವಾ ಸ್ಮಶಾನದ ಶವಗಳನ್ನು ರಾತ್ರೋರಾತ್ರಿ ಅಗೆದು ಕದಿಯುವ ಕಳ್ಳರ ದೊಡ್ಡ ಗ್ಯಾಂಗ್‌ಗಳೇ ಲಂಡನ್‌ನಲ್ಲಿ ಕಾರ್ಯಾಚರಿಸುತ್ತಿದ್ದವು. ಜಾನ್ ಹಂಟರ್ ಈ ಶವಗಳ್ಳರ ಪ್ರಮುಖ ಗ್ರಾಹಕನಾಗಿದ್ದ. ರಾತ್ರಿಯ ಕತ್ತಲಿನಲ್ಲಿ ತಾಜಾ ಹೆಣಗಳನ್ನು ತಂದುಕೊಟ್ಟರೆ ಹಂಟರ್ ಕೈತುಂಬಾ ನಾಣ್ಯಗಳನ್ನು ಎಣಿಸಿಕೊಡುತ್ತಿದ್ದ. ಅಂದರೆ, ಅಂದಿನ ಕಾಲದ ಕಳ್ಳರಿಗೆ ಇವನು ಅತ್ಯಂತ ಪ್ರಿಯವಾದ ‘ಹೋಲ್‌ಸೇಲ್ ಡೀಲರ್’ ಆಗಿಬಿಟ್ಟಿದ್ದ!

ಈ ಮ್ಯೂಸಿಯಂನ ಅತ್ಯಂತ ಪ್ರಸಿದ್ಧ ಹಾಗೂ ಚರ್ಚಿತ ಆಕರ್ಷಣೆಯೆಂದರೆ ಬರೋಬ್ಬರಿ 7 ಅಡಿ 7 ಇಂಚು ಎತ್ತರದ ‘ಐರಿಶ್ ದೈತ್ಯ’ ಎಂದೇ ಕುಖ್ಯಾತನಾಗಿದ್ದ ಚಾರ್ಲ್ಸ್ ಬೈರ್ನ್‌ನ ಅಸ್ಥಿಪಂಜರ. ಪಾಪ, ಬದುಕಿದ್ದಾಗ ತನ್ನ ವಿಪರೀತ ಎತ್ತರದಿಂದಾಗಿ ಸರ್ಕಸ್‌ಗಳಲ್ಲಿ ಪ್ರದರ್ಶನ ವಸ್ತುವಾಗಿದ್ದ ಈ ಮನುಷ್ಯನಿಗೆ, ತಾನು ಸತ್ತ ಮೇಲೆ ಈ ವಿಚಿತ್ರ ಸರ್ಜನ್ ಹಂಟರ್ ತನ್ನ ಶವವನ್ನು ಬಿಡುವುದಿಲ್ಲ ಎಂಬ ಘೋರ ಭಯವಿತ್ತು. 'ನನ್ನ ಮೂಳೆಗಳನ್ನು ಮ್ಯೂಸಿಯಂನಲ್ಲಿ ಇಡಬಾರದು, ನಾನು ಸತ್ತ ತಕ್ಷಣ ನನ್ನ ಶವವನ್ನು ಭಾರವಾದ ಸೀಸದ ಪೆಟ್ಟಿಗೆಯಲ್ಲಿ ಹಾಕಿ ಸಮುದ್ರದ ಆಳದಲ್ಲಿ ಮುಳುಗಿಸಿ' ಎಂದು ಸ್ನೇಹಿತರ ಬಳಿ ಅಂಗಲಾಚಿ, ಹಣವನ್ನೂ ಕೊಟ್ಟು ಕಣ್ಣುಮುಚ್ಚಿದ್ದ.

ಆದರೆ ಜಾನ್ ಹಂಟರ್ ಅಷ್ಟು ಸುಲಭವಾಗಿ ಸೋಲೊಪ್ಪುವ ಅಸಾಮಿಯೇ? ಬೈರ್ನ್ ಸತ್ತ ಸುದ್ದಿ ತಿಳಿಯುತ್ತಿದ್ದಂತೆಯೇ ಹಂಟರ್ ತನ್ನ ಬೇಹುಗಾರರನ್ನು ಛೂ ಬಿಟ್ಟ. ಶವವನ್ನು ಸಮುದ್ರಕ್ಕೆ ಕೊಂಡೊಯ್ಯುತ್ತಿದ್ದ ಆಪ್ತರು ದಾರಿಯ ಪಬ್‌ನಲ್ಲಿ ಮದ್ಯ ಕುಡಿಯಲು ಹೋದ ಸಂದರ್ಭವನ್ನು ಹೊಂಚುಹಾಕಿ, ಶವ ಕಾಯುವವನಿಗೆ ಭಾರಿ ಮೊತ್ತದ ಲಂಚ ನೀಡಿ, ಪೆಟ್ಟಿಗೆಯೊಳಗಿನ ದೈತ್ಯ ಶವವನ್ನು ಹೊರತೆಗೆದು, ಬದಲಿಗೆ ಕಲ್ಲುಬಂಡೆಗಳನ್ನು ತುಂಬಿಸಿ ಕಳುಹಿಸಿಯೇಬಿಟ್ಟ! ಅತ್ತ ನಕಲಿ ಶವ ಸಮುದ್ರದ ತಳ ಸೇರಿದರೆ, ಇತ್ತ ಹಂಟರ್ ತನ್ನ ರಹಸ್ಯ ಕೊಠಡಿಯಲ್ಲಿ ಆ ಬೃಹತ್ ಶವವನ್ನು ಬಿಸಿನೀರಿನ ದೊಡ್ಡ ಕೊಪ್ಪರಿಗೆಯಲ್ಲಿ ಕುದಿಸಿ, ಮಾಂಸವೆಲ್ಲವನ್ನೂ ಕರಗಿಸಿ, ಎಲುಬುಗಳನ್ನು ಜೋಡಿಸಿ ತನ್ನ ಮ್ಯೂಸಿಯಂನ ಕೇಂದ್ರಭಾಗದಲ್ಲಿ ತಂದು ನಿಲ್ಲಿಸಿದ. ಸತ್ತ ಮೇಲೂ ಜಾನ್ ಹಂಟರ್‌ನಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿರಲಿಲ್ಲ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ?

ಇನ್ನು ಮ್ಯೂಸಿಯಂನ ಗ್ಯಾಲರಿಯ ಒಳಗೆ ಹೆಜ್ಜೆ ಹಾಕಿದರೆ, ಗಾಜಿನ ಜಾರ್‌ಗಳಲ್ಲಿ ಸಂರಕ್ಷಿಸಿಡಲಾದ ವಿವಿಧ ರೋಗಗಳ ಮಾದರಿಗಳನ್ನು ನೋಡಿ ನಿಮ್ಮ ಕಣ್ಣುಗಳು ಅರಳುತ್ತವೆ. ಬೃಹತ್ ಗಾತ್ರದ ಗಡ್ಡೆಗಳು, ವಿಚಿತ್ರವಾಗಿ ಊದಿಕೊಂಡ ಪಿತ್ತಕೋಶಗಳು, ಅಂಡಾಶಯದ ಗಂಟುಗಳು ಮತ್ತು ವಿಚಿತ್ರ ಕಾಯಿಲೆಗಳಿಂದ ನರಳಿದ ಅಂಗಾಂಗಗಳು ಅಲ್ಲಿ ನೂರಾರು ವರ್ಷಗಳಿಂದ ಹಾಗೆಯೇ ವಿಶ್ರಾಂತಿ ಪಡೆಯುತ್ತಿವೆ. ಯಾವುದೇ ವೈದ್ಯಕೀಯ ಹಿನ್ನೆಲೆಯಿಲ್ಲದ ಸಾಮಾನ್ಯ ಪ್ರವಾಸಿಗನೂ ಸಹ ಆ ಜಾರ್‌ಗಳನ್ನು ನೋಡಿದಾಗ, 'ನನ್ನ ಹೊಟ್ಟೆಯೊಳಗೂ ಇಂಥದ್ದೇನಾದರೂ ಇದೆಯಾ?' ಎಂದು ಭಯದಿಂದ ತನ್ನ ಹೊಟ್ಟೆಯನ್ನು ತಡವಿ ನೋಡಿಕೊಳ್ಳುವುದು ಇಲ್ಲಿ ಸಾಮಾನ್ಯ ದೃಶ್ಯ.

Untitled Design (27)

ಇಲ್ಲಿನ ಮತ್ತೊಂದು ರೋಮಾಂಚಕ ವಿಭಾಗವೆಂದರೆ ಬ್ರಿಟನ್ನಿನ ಇತಿಹಾಸ ಪ್ರಸಿದ್ಧ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರ ಕೃತಕ ಹಲ್ಲುಗಳ ಸೆಟ್ ! ಎರಡನೇ ಮಹಾಯುದ್ಧದ ಕರಾಳ ದಿನಗಳಲ್ಲಿ, ರೇಡಿಯೋ ಮೈಕ್ರೊಫೋನ್ ಮುಂದೆ ನಿಂತು ಇಡೀ ಜಗತ್ತನ್ನೇ ಎಚ್ಚರಿಸುವಂತೆ 'ವಿ ಶಾಲ್ ಫೈಟ್ ಆನ್ ದ ಬೀಚಸ್, ವಿ ಶಾಲ್ ನೆವರ್ ಸರೆಂಡರ್' ಎಂದು ಗುಡುಗಿದ ಚರ್ಚಿಲ್ ಅವರ ಗಡುಸಾದ ಉಚ್ಚಾರಣೆಗೆ ಶಕ್ತಿ ತುಂಬಿದ್ದೇ ಈ ಹಲ್ಲಿನ ಸೆಟ್. ಚರ್ಚಿಲ್ ಅವರ ಸ್ವಾಭಾವಿಕ ಮಾತು ಕೊಂಚ ತೊದಲು ಆಗಿರುತ್ತಿದ್ದ ಕಾರಣ, ಅವರ ದಂತವೈದ್ಯರು ಈ ಸೆಟ್‌ ಅನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಿದ್ದರು. ಬ್ರಿಟಿಷ್ ಸಾಮ್ರಾಜ್ಯವನ್ನು ಹಿಟ್ಲರ್‌ನಿಂದ ಕಾಪಾಡಿದ ಕೀರ್ತಿಯಲ್ಲಿ ಈ ಹಲ್ಲಿನ ಸೆಟ್‌ಗೂ ಸಿಂಹಪಾಲು ಸಲ್ಲಬೇಕು ಎಂದು ಇಲ್ಲಿನ ಗಾಜಿನ ಪೆಟ್ಟಿಗೆಯ ಮುಂದೆ ನಿಂತಾಗ ನಮಗೆ ನಗು ಉಕ್ಕಿ ಬರದಿರದು.

ಹಂಟರ್ ಕೇವಲ ಮನುಷ್ಯರನ್ನು ಮಾತ್ರ ಬಿಡಲಿಲ್ಲ, ಪ್ರಾಣಿ ಸಾಮ್ರಾಜ್ಯದ ಮೇಲೂ ತನ್ನ ಸರ್ಜಿಕಲ್ ಚಾಕುವನ್ನು ಧಾರಾಳವಾಗಿ ಪ್ರಯೋಗಿಸಿದ್ದ. ಜಿರಾಫೆಯ ಉದ್ದನೆಯ ಕುತ್ತಿಗೆಯ ರಕ್ತನಾಳಗಳು, ತಿಮಿಂಗಿಲದ ದೈತ್ಯ ಹೃದಯ, ನಾಯಿಯ ಕಣ್ಣುಗಳು ಮತ್ತು ಕಾಗೆಯ ಹೊಟ್ಟೆಯೊಳಗಿನ ಕಲ್ಲುಗಳನ್ನು ಸಹ ಬಿಡದೇ ಭರಣಿಗಳಲ್ಲಿ ಕೂರಿಸಿದ್ದಾನೆ. ಒಮ್ಮೆ ಕೋಳಿ ಮೊಟ್ಟೆಯೊಡೆದು ಮರಿ ಹೊರಬರುವ ಪ್ರಕ್ರಿಯೆಯನ್ನು ಹಂತ ಹಂತವಾಗಿ ನೋಡಲು ನೂರಾರು ಮೊಟ್ಟೆಗಳನ್ನು ದಿನಕ್ಕೊಂದರಂತೆ ಒಡೆದು, ಒಳಗಿನ ಭ್ರೂಣವನ್ನು ಸಂರಕ್ಷಿಸಿಟ್ಟಿದ್ದ. ಅವನ ಈ ನಿರಂತರ ಹುಚ್ಚಾಟವನ್ನು ನೋಡಿದ ಅಂದಿನ ಕಾಲದ ಲಂಡನ್ ನಿವಾಸಿಗಳು, 'ಈ ಡಾಕ್ಟರ್ ದೇವರ ಸೃಷ್ಟಿಯನ್ನೇ ಮರುಪರಿಶೀಲನೆ ಮಾಡುತ್ತಿದ್ದಾನೆ' ಎಂದು ನಂಬಿದ್ದರು.

ಮ್ಯೂಸಿಯಂನ ಮುಂದಿನ ಕೋಣೆಗೆ ಹೋದರೆ ಹಳೆಯ ಕಾಲದ ಶಸ್ತ್ರಚಿಕಿತ್ಸಾ ಉಪಕರಣಗಳು ಯಾರನ್ನಾದರೂ ಅಕ್ಷರಶಃ ದಂಗುಬಡಿಸುತ್ತವೆ. ಆಧುನಿಕ ದಿನಗಳಂತೆ ಸೂಕ್ಷ್ಮ ಲೇಸರ್ ಕಿರಣಗಳಾಗಲೀ, ಪ್ಲಾಸ್ಟಿಕ್ ಚೀಲಗಳಾಗಲೀ, ನೋವು ತಿಳಿಯದಂತೆ ಮಾಡುವ ಇಂಜೆಕ್ಷನ್‌ಗಳಾಗಲೀ ಇಲ್ಲದ ಕಾಲವದು. ಅಲ್ಲಿಟ್ಟಿರುವ ಭಾರಿ ಗಾತ್ರದ ಹರಿತವಾದ ಗರಗಸಗಳು, ತುಕ್ಕುಹಿಡಿಯದ ಕಬ್ಬಿಣದ ಬೃಹತ್ ಇಕ್ಕಳಗಳು, ಮೂಳೆ ಕತ್ತರಿಸುವ ಕೊಡಲಿಗಳನ್ನು ನೋಡಿದರೆ, ಇದು ಆಸ್ಪತ್ರೆಯ ಸಲಕರಣೆಗಳೋ ಅಥವಾ ಹಳ್ಳಿಯ ಮರಗೆಲಸದ ಬಡಗಿಯ ಪೆಟ್ಟಿಗೆಯೋ ಎಂಬ ಸಂಶಯ ಬಾರದೆ ಇರದು. ರೋಗಿಯ ಕೈ-ಕಾಲುಗಳನ್ನು ಮರದ ತುಂಡಿನಂತೆ ಕತ್ತರಿಸುತ್ತಿದ್ದ ಉಪಕರಣಗಳಿವು!

ಅನಸ್ತೇಷಿಯಾ (ಅರಿವಳಿಕೆ) ಇನ್ನೂ ಹುಟ್ಟಿರದ ಆ ಹದಿನೆಂಟನೆಯ ಮತ್ತು ಹತ್ತೊಂಬತ್ತನೆಯ ಶತಮಾನದಲ್ಲಿ ಸರ್ಜರಿ ಮಾಡಿಸಿಕೊಳ್ಳುವುದೆಂದರೆ ನೇರವಾಗಿ ಯಮಲೋಕದ ಬಾಗಿಲು ತಟ್ಟಿದಂತೆಯೇ ಸರಿ. ಆಸ್ಪತ್ರೆಯ ಮಂಚಕ್ಕೆ ರೋಗಿಯನ್ನು ಗಟ್ಟಿಯಾದ ಹಗ್ಗಗಳಿಂದ ಕಟ್ಟಿಹಾಕಿ, ನಾಲ್ಕೈದು ಜನ ಬಲಶಾಲಿಗಳು ಆತನನ್ನು ಅದುಮಿ ಹಿಡಿಯುತ್ತಿದ್ದರು. ಆ ಕಾಲದಲ್ಲಿ ಸರ್ಜನ್‌ಗಳ ಪ್ರತಿಭೆಯನ್ನು ಅಳೆಯುತ್ತಿದ್ದದ್ದು ಅವರ ಸೂಕ್ಷ್ಮತೆಯಿಂದಲ್ಲ, ಬದಲಿಗೆ ಅವರ ‘ವೇಗ’ದಿಂದ! ಯಾರು ಕೇವಲ ಒಂದೆರಡು ನಿಮಿಷಗಳಲ್ಲಿ ಕಾಲು ಅಥವಾ ಕೈಯನ್ನು ಗರಗಸದಿಂದ ಕತ್ತರಿಸಿ, ಹೊಲಿಗೆ ಹಾಕಿ ಮುಗಿಸುತ್ತಿದ್ದರೋ ಅವರೇ ಅಂದಿನ 'ಸೂಪರ್‌ಸ್ಟಾರ್ ವೈದ್ಯ'ರು. ಆ ಗರಗಸಗಳನ್ನು ನೋಡುತ್ತಿದ್ದಂತೆಯೇ ನಮ್ಮ ಕೈ-ಕಾಲುಗಳು ತಣ್ಣಗಾಗಿ, ಹೊಟ್ಟೆಯೊಳಗೆ ಸಣ್ಣದೊಂದು ನಡುಕ ಹುಟ್ಟುತ್ತಿತ್ತು.

ಜಾನ್ ಹಂಟರ್ ಕೇವಲ ಕತ್ತರಿಸುವುದರಲ್ಲಿ ಮಾತ್ರ ನಿಸ್ಸೀಮರಾಗಿರಲಿಲ್ಲ, ವೈದ್ಯಕೀಯ ಪ್ರಯೋಗಗಳಿಗಾಗಿ ಸ್ವತಃ ತನ್ನ ದೇಹವನ್ನೇ ಬಲಿಪಶು ಮಾಡಿಕೊಳ್ಳುವ ಹುಚ್ಚು ಧೈರ್ಯವೂ ಅವರಿಗಿತ್ತು. ಲೈಂಗಿಕ ರೋಗಗಳಾದ ಸಿಫಿಲಿಸ್ ಮತ್ತು ಗೊನೊರಿಯಾ ಒಂದೇ ಮೂಲದಿಂದ ಬರುತ್ತವೆಯೇ ಎಂದು ಪರೀಕ್ಷಿಸಲು, ರೋಗಿಯೊಬ್ಬನ ಕೀವನ್ನು ತೆಗೆದುಕೊಂಡು ಸ್ವತಃ ತನ್ನ ಗುಪ್ತಾಂಗಕ್ಕೆ ಚುಚ್ಚಿಕೊಂಡು ಪರೀಕ್ಷೆ ಮಾಡಿಕೊಂಡಿದ್ದ! ಈ ಪ್ರಯೋಗದಿಂದಾಗಿ ಆತ ವರ್ಷಗಳ ಕಾಲ ತೀವ್ರ ಅನಾರೋಗ್ಯಕ್ಕೆ ಒಳಗಾದ. ಇಂಥ ಹುಚ್ಚುತನದ, ಜೀವದ ಹಂಗಿಲ್ಲದ ಪ್ರಯೋಗಗಳೇ ಅಂತಿಮವಾಗಿ ಇಂದಿನ ಆಧುನಿಕ ರೋಗನಿರೋಧಕ ಶಾಸ್ತ್ರಕ್ಕೆ (Immunology) ಅಡಿಪಾಯ ಹಾಕಿದವು ಎನ್ನುವುದು ಇತಿಹಾಸದ ವ್ಯಂಗ್ಯ.

ಮ್ಯೂಸಿಯಂನಲ್ಲಿ ಸಂರಕ್ಷಿಸಿಡಲಾದ ಬ್ಲಾಡರ್ ಸ್ಟೋನ್ಸ್ ಅಥವಾ ಮೂತ್ರಕೋಶದ ಕಲ್ಲುಗಳ ಸಂಗ್ರಹವಂತೂ ಕಣ್ಣು ಕುಕ್ಕುವಂತಿದೆ. ಇಂದಿನ ದಿನಗಳಲ್ಲಿ ಸಣ್ಣ ಕಲ್ಲಾದರೆ ಸಾಕು ಜನ ಕಿರುಚಾಡುತ್ತಾರೆ. ಆದರೆ ಇಲ್ಲಿ ಕ್ರಿಕೆಟ್ ಚೆಂಡಿನ ಗಾತ್ರದ, ಗಟ್ಟಿಯಾದ ಕಲ್ಲುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಅಂದಿನ ಕಾಲದಲ್ಲಿ ಅಂಥ ಬೃಹತ್ ಕಲ್ಲುಗಳನ್ನು ಯಾವುದೇ ಮಂಪರು ಮದ್ದಿಲ್ಲದೇ, ಕೇವಲ ಬರಿಗೈ ಮತ್ತು ಇಕ್ಕಳಗಳಿಂದ ಹೊರತೆಗೆದ ಆ ಸರ್ಜನ್‌ಗಳ ಧೈರ್ಯ ಹಾಗೂ ಆ ನರಕಯಾತನೆಯನ್ನು ಸಹಿಸಿಕೊಂಡು ಬದುಕಿದ ಆ ರೋಗಿಗಳ ಪುಣ್ಯವನ್ನು ನೆನೆದರೆ ಎಂಥವರಿಗೂ ಕೈಮುಗಿಯಬೇಕು ಎನಿಸುತ್ತದೆ.

ಇಲ್ಲಿನ ಮತ್ತೊಂದು ಆಸಕ್ತಿಕರ ವಸ್ತು ಎಂದರೆ ಜೋಸೆಫ್ ಲಿಸ್ಟರ್ ಅವರ ಕಾರ್ಬೋಲಿಕ್ ಆಸಿಡ್ ಸ್ಪ್ರೇಯರ್. ಹತ್ತೊಂಬತ್ತನೆಯ ಶತಮಾನದವರೆಗೂ ವೈದ್ಯರು ಕೈತೊಳೆಯದೆ, ರಕ್ತ ಮೆತ್ತಿದ ಕೊಳಕು ಕೋಟುಗಳನ್ನು ಹಾಕಿಕೊಂಡೇ ಒಂದಾದ ಮೇಲೊಂದರಂತೆ ಆಪರೇಷನ್ ಮಾಡುತ್ತಿದ್ದರು. ಕೋಟಿನ ಮೇಲಿನ ರಕ್ತದ ಕಲೆಗಳು ಅವರ ಅನುಭವದ ಸಂಕೇತವೆಂದು ಬೀಗುತ್ತಿದ್ದರು. ಪರಿಣಾಮವಾಗಿ, ಹೆಚ್ಚಿನ ರೋಗಿಗಳು ಸೋಂಕಿನಿಂದಲೇ ಸಾಯುತ್ತಿದ್ದರು. ನಂತರ ಬಂದ ಲಿಸ್ಟರ್, ಜೀವಾಣುಗಳನ್ನು ಕೊಲ್ಲಲು ಕಾರ್ಬೋಲಿಕ್ ಆಮ್ಲವನ್ನು ಗಾಳಿಯಲ್ಲಿ ಸಿಂಪಡಿಸುವ ಯಂತ್ರವನ್ನು ತಂದರು. ವೈದ್ಯರು ಕೈತೊಳೆಯುವ ಅಭ್ಯಾಸ ಕಲಿಯಲು ಮನುಕುಲ ಎಷ್ಟು ಶತಮಾನಗಳನ್ನು ತೆಗೆದುಕೊಂಡಿತು ಎಂಬುದನ್ನು ಈ ಯಂತ್ರ ಸದ್ದಿಲ್ಲದೆ ವಿವರಿಸುತ್ತದೆ.

Untitled Design (26)

ಹಂಟೇರಿಯನ್ ಮ್ಯೂಸಿಯಂ ಕೇವಲ ಹಳೆಯ ಕಥೆಗಳಿಗಷ್ಟೇ ಸೀಮಿತವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಇದು ಭಾರಿ ನವೀಕರಣಗೊಂಡು ಅತ್ಯಂತ ಆಧುನಿಕ ರೂಪವನ್ನು ಪಡೆದುಕೊಂಡಿದೆ. ಹಿಂದೆ ಕತ್ತಲೆಯ ನೆಲಮಾಳಿಗೆಯಂತೆ ಕಾಣುತ್ತಿದ್ದ ಈ ಕಟ್ಟಡ, ಈಗ ಅತ್ಯಾಧುನಿಕ ಬೆಳಕಿನ ವ್ಯವಸ್ಥೆ ಮತ್ತು ಅತ್ಯಾಕರ್ಷಕ ಗಾಜಿನ ವಿನ್ಯಾಸಗಳೊಂದಿಗೆ ಕಂಗೊಳಿಸುತ್ತಿದೆ. ಆದರೆ ಎಷ್ಟೇ ಆಧುನಿಕವಾದರೂ, ಅಲ್ಲಿರುವ ಸಾವಿರಾರು ಹಳೆಯ ಜಾರ್‌ಗಳು ಮತ್ತು ಅಸ್ಥಿಪಂಜರಗಳು ಮಾತ್ರ ತಮ್ಮ ಹಳೆಯ ನಿಗೂಢತೆಯನ್ನು ಕಿಂಚಿತ್ತೂ ಬಿಟ್ಟುಕೊಟ್ಟಿಲ್ಲ. ಇತಿಹಾಸ ಮತ್ತು ವಿಜ್ಞಾನ ಇಲ್ಲಿ ಒಟ್ಟಾಗಿ ಹೆಜ್ಜೆ ಹಾಕುತ್ತವೆ.

ವಿಶೇಷವೆಂದರೆ, ಇತ್ತೀಚಿನ ನವೀಕರಣದ ನಂತರ ಮ್ಯೂಸಿಯಂ ಆಡಳಿತ ಮಂಡಳಿಯು ಚಾರ್ಲ್ಸ್ ಬೈರ್ನ್‌ನ ಅಸ್ಥಿಪಂಜರವನ್ನು ಸಾರ್ವಜನಿಕ ಪ್ರದರ್ಶನದಿಂದ ಹಿಂಪಡೆದು, ಕೇವಲ ವೈದ್ಯಕೀಯ ಸಂಶೋಧಕರಿಗೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಿದೆ. ಮನುಷ್ಯನೊಬ್ಬನ ಅಂತಿಮ ಇಚ್ಛೆಯನ್ನು ಗೌರವಿಸಬೇಕೆಂಬ ನೈತಿಕ ಎಚ್ಚರ ಕೊನೆಗೂ ಸುಮಾರು ಇನ್ನೂರು ವರ್ಷಗಳ ನಂತರ ಬ್ರಿಟಿಷರಿಗೆ ಬಂದಿದೆ. ಆದರೂ, ಆ ದೈತ್ಯನ ಕಥೆ ಮತ್ತು ಹಂಟರ್‌ನ ಜಿದ್ದಿನ ಇತಿಹಾಸ ಇಂದಿಗೂ ಮ್ಯೂಸಿಯಂನ ಮೂಲೆ ಮೂಲೆಯಲ್ಲೂ ಪಿಸುಗುಡುತ್ತಲೇ ಇರುತ್ತದೆ. ಮ್ಯೂಸಿಯಂನ ಕಾರಿಡಾರ್‌ಗಳಲ್ಲಿ ನಡೆಯುವಾಗ ಹಲವು ಸಂದರ್ಶಕರ ಮುಖಭಾವಗಳನ್ನು ನೋಡುವುದೇ ಒಂದು ದೊಡ್ಡ ತಮಾಷೆ. ಕೆಲವರು ವಿಜ್ಞಾನದ ವಿದ್ಯಾರ್ಥಿಗಳಂತೆ ಗಂಭೀರವಾಗಿ ನೋಟ್ಸ್ ಮಾಡಿಕೊಳ್ಳುತ್ತಿದ್ದರೆ, ಇನ್ನು ಕೆಲವರು ಪ್ರೇಮಿಗಳ ಜೋಡಿಗಳು ಭಯದಿಂದ ಪರಸ್ಪರರ ಕೈ ಹಿಡಿದುಕೊಂಡು, ಕಣ್ಣುಗಳನ್ನು ಅರ್ಧ ಮುಚ್ಚಿಕೊಂಡು ಜಾರ್‌ಗಳನ್ನು ನೋಡುತ್ತಿರುತ್ತಾರೆ. ಸಣ್ಣ ಮಕ್ಕಳಂತೂ ಅಸ್ಥಿಪಂಜರಗಳನ್ನು ನೋಡಿ ಕಿರುಚಾಡುತ್ತಾ, ತಾಯಿಯ ಸೆರಗಿನ ಹಿಂದೆ ಅಡಗಿಕೊಳ್ಳುವ ದೃಶ್ಯಗಳು ಇಲ್ಲಿ ನಿತ್ಯವೂ ಕಂಡುಬರುತ್ತವೆ. ಇದು ನಿಜಕ್ಕೂ ಒಂದು ಶೈಕ್ಷಣಿಕ ಹಾರರ್ ಚಿತ್ರಮಂದಿರದಂತೆ ಭಾಸವಾಗುತ್ತದೆ.

ಈ ಮ್ಯೂಸಿಯಂ ನೀಡುವ ಅತ್ಯಂತ ದೊಡ್ಡ ಕೊಡುಗೆ ಎಂದರೆ, ಇಂದಿನ ಆಧುನಿಕ ವೈದ್ಯಕೀಯ ಜಗತ್ತಿನ ಬಗ್ಗೆ ನಮ್ಮಲ್ಲಿ ಹುಟ್ಟುವ ಅಪಾರ ಕೃತಜ್ಞತಾ ಭಾವ. ನಾವು ಬದುಕುತ್ತಿರುವ ಈ ಕಾಲದಲ್ಲಿ ಎಂಆರ್‌ಐ ಸ್ಕ್ಯಾನ್ ಇದೆ, ನೋವಿಲ್ಲದ ಆಪರೇಷನ್ ಇದೆ, ಪ್ಯಾರಸಿಟಮಾಲ್ ಮಾತ್ರೆ ಇದೆ ಮತ್ತು ಆಸ್ಪತ್ರೆಗಳಲ್ಲಿ ಹಿತವಾದ ಎಸಿ ಸೌಲಭ್ಯವಿದೆ. ಹಂಟರ್ ಕಾಲದ ಆ ಕ್ರೂರ ಗರಗಸಗಳು ಮತ್ತು ಕೊರೆಯುವ ಉಪಕರಣಗಳನ್ನು ನೋಡಿದ ಪ್ರತಿಯೊಬ್ಬ ಸಂದರ್ಶಕನೂ, 'ಅಪ್ಪಾ, ನಾನು ಹದಿನೆಂಟನೆಯ ಶತಮಾನದಲ್ಲಿ ಹುಟ್ಟಲಿಲ್ಲವಲ್ಲ' ಎಂದು ದೇವರಿಗೆ ನೂರು ಬಾರಿ ಕೈಮುಗಿಯುತ್ತಾನೆ.

ಜಾನ್ ಹಂಟರ್ ನ ಈ ಸಂಗ್ರಹವನ್ನು ಬ್ರಿಟಿಷ್ ಸರಕಾರ 1799ರಲ್ಲಿ ಅವನ ಮರಣದ ನಂತರ ಬರೋಬ್ಬರಿ ಹದಿನೈದು ಸಾವಿರ ಪೌಂಡ್‌ಗಳಿಗೆ ಖರೀದಿಸಿತು. ಅಂದಿನ ಕಾಲಕ್ಕೆ ಅದೊಂದು ಅಸಾಧಾರಣ ಮೊತ್ತ. ನಂತರ ಅದನ್ನು ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ಗೆ ಹಸ್ತಾಂತರಿಸಲಾಯಿತು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಜರ್ಮನಿಯ ಬಾಂಬ್ ದಾಳಿಗೆ ಈ ಮ್ಯೂಸಿಯಂನ ಕಟ್ಟಡ ತುತ್ತಾಗಿ, ಹಂಟರ್ ಸಂಗ್ರಹಿಸಿದ್ದ ಸಾವಿರಾರು ಅಪರೂಪದ ಮಾದರಿಗಳು ಸುಟ್ಟು ಬೂದಿಯಾದವು. ಆದರೂ ಉಳಿದುಕೊಂಡ ಮಾದರಿಗಳೇ ಇಂದಿಗೂ ಜಗತ್ತಿನ ಜನರನ್ನು ಬೆರಗುಗೊಳಿಸಲು ಸಾಕ್ಷಿಯಾಗಿ ನಿಂತಿವೆ. ಮ್ಯೂಸಿಯಂನಿಂದ ಹೊರಬರುವ ಹೊತ್ತಿಗೆ ನಮ್ಮ ಮನಸಿನಲ್ಲಿ ಜಾನ್ ಹಂಟರ್ ಬಗ್ಗೆ ಒಂದು ರೀತಿಯ ವಿಚಿತ್ರ ಗೌರವ ಮೂಡುತ್ತದೆ. ಆತ ಹುಚ್ಚನಿರಬಹುದು, ಶವಗಳ್ಳರ ಸ್ನೇಹಿತನಾಗಿರಬಹುದು, ಇಲ್ಲವೇ ವಿಲಕ್ಷಣ ಗೀಳಿನ ಸಂಗ್ರಹಕಾರನಾಗಿರಬಹುದು. ಆದರೆ ಆತನ ಆ ಅತಿಯಾದ ಕುತೂಹಲ ಮತ್ತು ಹಟವೇ ಇಲ್ಲದಿದ್ದರೆ ಆಧುನಿಕ ಶಸ್ತ್ರಚಿಕಿತ್ಸಾ ಶಾಸ್ತ್ರ ಇಷ್ಟು ವೇಗವಾಗಿ ಬೆಳೆಯುತ್ತಿರಲಿಲ್ಲ. ಮನುಷ್ಯನ ದೇಹದ ರಚನೆಯನ್ನು ಪ್ರತಿಯೊಂದು ಪದರದಲ್ಲೂ ಅರಿತುಕೊಳ್ಳಲು ಆತ ಪಟ್ಟ ಶ್ರಮ ನಿಜಕ್ಕೂ ಅಸಾಧಾರಣವಾದುದು.

ಲಂಡನ್ನಿನ ಹಂಟೇರಿಯನ್ ಮ್ಯೂಸಿಯಂ ಎಂಬುದು ಕೇವಲ ಸತ್ತ ವಸ್ತುಗಳ ಗೋರಿಯಲ್ಲ. ಅದು ಮಾನವನ ಅಂಜಿಕೆಯಿಲ್ಲದ ಜ್ಞಾನದಾಹಕ್ಕೆ, ಚಿಕಿತ್ಸೆಯ ವಿಕಾಸಕ್ಕೆ ಮತ್ತು ವೈಜ್ಞಾನಿಕ ಅನ್ವೇಷಣೆಗೆ ಹಿಡಿದ ಒಂದು ದೈತ್ಯ ಕನ್ನಡಿ. ಕಲೆ, ಹಾಸ್ಯ, ಸಣ್ಣ ಮಟ್ಟದ ಜುಗುಪ್ಸೆ ಮತ್ತು ಬೆರಗುಗಳು ಇಲ್ಲಿ ಒಂದೇ ಸೂರಿನಡಿ ಮೇಳೈಸಿವೆ. ಇದು ಕೇವಲ ವೈದ್ಯರಿಗೆ ಮಾತ್ರವಲ್ಲ, ಮನುಷ್ಯನ ದೇಹದ ರಹಸ್ಯಗಳನ್ನು ಅರಿಯಲು ಬಯಸುವ ಪ್ರತಿಯೊಬ್ಬ ಜಿಜ್ಞಾಸುವಿಗೂ ಒಂದು ಅಚ್ಚರಿಯ ಲೋಕ. ನೀವು ಗಟ್ಟಿ ಗುಂಡಿಗೆಯವರಾಗಿದ್ದು, ಲಂಡನ್ ಪ್ರವಾಸದ ವೇಳೆಯಲ್ಲಿ ಮಾಮೂಲಿ ಬಿಗ್ ಬೆನ್ ಮತ್ತು ಲಂಡನ್ ಐ ನೋಡಿ ಬೇಸರವಾಗಿದ್ದರೆ, ಈ ‘ವಿಚಿತ್ರಗಳ ಗೂಡಿಗೆ’ ಖಂಡಿತವಾಗಿ ಭೇಟಿ ನೀಡಿ. ಆದರೆ ಒಂದು ಸಣ್ಣ ಮುನ್ನೆಚ್ಚರಿಕೆ - ಈ ಮ್ಯೂಸಿಯಂ ನೋಡಲು ಹೋಗುವ ಮುನ್ನ ಅಥವಾ ನೋಡಿದ ತಕ್ಷಣವೇ ಯಾವುದೇ ಕಾರಣಕ್ಕೂ ಭರ್ಜರಿಯಾದ ಮಟನ್ ಬಿರಿಯಾನಿಯಾಗಲಿ ಅಥವಾ ಮಾಂಸಾಹಾರದ ಊಟವನ್ನಾಗಲಿ ಪ್ಲಾನ್ ಮಾಡಬೇಡಿ! ಏಕೆಂದರೆ ಅಲ್ಲಿನ ಗಾಜಿನ ಭರಣಿಗಳು ನಿಮ್ಮ ಊಟದ ತಟ್ಟೆಯಲ್ಲಿ ನೆನಪಿಗೆ ಬಂದರೆ, ಅದಕ್ಕೆ ಆ ಜಾನ್ ಹಂಟರ್ ಹೊಣೆಯಲ್ಲ!

ಮ್ಯೂಸಿಯಂನ ಪ್ರವೇಶ ಶುಲ್ಕವಿಲ್ಲದ ಮುಕ್ತ ನೀತಿಯನ್ನು ನೋಡಿದರೆ ಬ್ರಿಟಿಷರ ಜಾಣತನ ಅರ್ಥವಾಗುತ್ತದೆ. ಇಂಥ ಜಾಗಕ್ಕೆ ಟಿಕೆಟ್ ಇಟ್ಟರೆ ಜನ ಒಳಗೇ ಬರುವುದಿಲ್ಲ ಎಂಬುದು ಅವರಿಗೆ ಚೆನ್ನಾಗಿ ತಿಳಿದಿರಬೇಕು. ಆದರೆ ಒಮ್ಮೆ ಒಳಹೊಕ್ಕ ಸಂದರ್ಶಕರಿಗೆ ಕಾದಿರುವ ಆಘಾತವೇ ಬೇರೆ. ಅಲ್ಲಿನ ಗಿಫ್ಟ್ ಶಾಪ್‌ನಲ್ಲಿ ಮ್ಯೂಸಿಯಂ ಸಿಬ್ಬಂದಿ ಮಾರಾಟಕ್ಕಿಟ್ಟಿರುವ ಸ್ಮರಣಿಕೆಗಳನ್ನು ನೋಡಿದರೆ ನಗು ತಡೆಯಲಾಗದು. ಮುದ್ದಾದ ಟೆಡ್ಡಿ ಬೇರ್‌ಗಳ ಬದಲಿಗೆ ಮಾನವನ ಹೃದಯದ ಆಕಾರದ ಕೀಚೈನ್‌ಗಳು, ಮಿದುಳಿನ ಚಿತ್ರವಿರುವ ಕಾಫಿ ಮಗ್‌ಗಳು ಮತ್ತು ಅಸ್ಥಿಪಂಜರದ ರೇಖಾಚಿತ್ರವಿರುವ ಟೀ ಶರ್ಟ್‌ಗಳು ಅಲ್ಲಿ ರಾರಾಜಿಸುತ್ತವೆ. ವಿಜ್ಞಾನದ ಭಯಾನಕತೆಯನ್ನು ಕೂಡ ಅತ್ಯಂತ ಚತುರ ವ್ಯಾಪಾರವನ್ನಾಗಿ ಪರಿವರ್ತಿಸಿರುವ ಬ್ರಿಟಿಷ್ ಕಲೆಯಿದು.

Untitled Design (28)

ಇಲ್ಲಿನ ಹಲ್ಲಿನ ಚಿಕಿತ್ಸೆಯ ಹಳೆಯ ವಿಭಾಗವಂತೂ ದಂತವೈದ್ಯರ ಬಳಿ ಹೋಗಲು ಹೆದರುವವರಿಗೆ ಸಾಕ್ಷಾತ್ ನರಕ ದರ್ಶನ ಮಾಡಿಸುತ್ತದೆ. ಇಂದಿನ ದಿನಗಳಲ್ಲಿ ಸಣ್ಣ ಹಲ್ಲು ಕೀಳುವುದಕ್ಕೂ ಮುನ್ನ ಹತ್ತಾರು ಹನಿ ಮಂಪರು ಮದ್ದು ಹಾಕಿ, ನೋವಾಗದಂತೆ ನೋಡಿಕೊಳ್ಳುವ ವೈದ್ಯರಿದ್ದಾರೆ. ಆದರೆ ಅಂದು ಹಲ್ಲು ಕೀಳುವುದೆಂದರೆ ಕಬ್ಬಿಣದ ಇಕ್ಕಳ ಹಿಡಿದು ಕುಸ್ತಿ ಪಂದ್ಯವಾಡಿದಂತೆ! ಹಳ್ಳಿಯ ಕಮ್ಮಾರನ ಅಂಗಡಿಯಲ್ಲಿ ಕುದುರೆಯ ಲಾಳ ಹೊಡೆಯಲು ಬಳಸುವಂಥ ದೊಡ್ಡ ಹಾರೆಯಂಥ ಉಪಕರಣಗಳನ್ನು ರೋಗಿಯ ಬಾಯೊಳಗೆ ತುರುಕಿ, ಹಲ್ಲನ್ನು ಬುಡಸಮೇತ ಕಿತ್ತು ಹಾಕುತ್ತಿದ್ದ ಆ ಕಾಲದ ಚಿತ್ರಣಗಳನ್ನು ನೋಡಿದಾಗ, ಇಂದಿನ ಡೆಂಟಿಸ್ಟ್‌ಗಳ ಕ್ಲಿನಿಕ್ ಸಾಕ್ಷಾತ್ ಸ್ವರ್ಗದಂತೆ ಕಂಗೊಳಿಸುತ್ತದೆ.

ಜಾನ್ ಹಂಟರ್ ನ ಅಣ್ಣ ವಿಲಿಯಂ ಹಂಟರ್ ಕೂಡ ಇದೇ ರಂಗದಲ್ಲಿದ್ದ ಪ್ರಸಿದ್ಧ ವೈದ್ಯ. ಇಬ್ಬರೂ ಅಣ್ಣ-ತಮ್ಮಂದಿರ ನಡುವೆ 'ಯಾರಿಗೆ ಹೆಚ್ಚು ಶವಗಳು ಸಿಗುತ್ತವೆ ಮತ್ತು ಯಾರು ಹೆಚ್ಚು ವಿಚಿತ್ರ ಮಾದರಿಗಳನ್ನು ಶೇಖರಿಸುತ್ತಾರೆ' ಎಂಬ ವಿಷಯಕ್ಕೆ ದೊಡ್ಡ ಶೀತಲ ಸಮರವೇ ನಡೆದಿತ್ತು. ಇಬ್ಬರೂ ಪ್ರತ್ಯೇಕವಾಗಿ ಶವಗಳನ್ನು ಖರೀದಿಸುತ್ತಾ, ಪರಸ್ಪರ ಪೈಪೋಟಿ ನಡೆಸುತ್ತಿದ್ದರು. ಒಮ್ಮೆ ವಿಲಿಯಂ ಹಂಟರ್ ಲಂಡನ್‌ನ ಶ್ರೀಮಂತ ಮಹಿಳೆಯರ ಹೆರಿಗೆಯ ವಿವರಗಳನ್ನು ದಾಖಲಿಸುತ್ತಿದ್ದರೆ, ಜಾನ್ ಮಾತ್ರ ರಸ್ತೆಬದಿಯ ಕಸದ ಗುಂಡಿಯಲ್ಲಿ ಬಿದ್ದಿದ್ದ ಪ್ರಾಣಿಗಳ ಮೃತದೇಹಗಳನ್ನು ಹೆಕ್ಕಿ ತರುತ್ತಿದ್ದ. ಈ ಇಬ್ಬರು ಅಣ್ಣ-ತಮ್ಮಂದಿರ ಜಗಳಗಳು ಕೇವಲ ಮನೆಯ ಗಡಿಯೊಳಗೆ ಉಳಿಯದೇ, ಅಂದಿನ ಕಾಲದ ವೈದ್ಯಕೀಯ ಪತ್ರಿಕೆಗಳಲ್ಲಿ ಲೇಖನಗಳ ರೂಪದಲ್ಲಿ ರಾದ್ಧಾಂತವೆಬ್ಬಿಸುತ್ತಿದ್ದವು.

ಇಲ್ಲಿ ಪ್ರದರ್ಶಿಸಲಾಗಿರುವ ಕಣ್ಣಿನ ರೋಗಶಾಸ್ತ್ರದ ವಿಭಾಗವಂತೂ ಸಂದರ್ಶಕರ ಧೈರ್ಯಕ್ಕೆ ಅಗ್ನಿಪರೀಕ್ಷೆ ಒಡ್ಡುತ್ತದೆ. ಗಾಜಿನ ಸಣ್ಣ ಸಣ್ಣ ಕುಪ್ಪಿಗಳಲ್ಲಿ ಸಂರಕ್ಷಿಸಿಡಲಾದ ನೂರಾರು ಮಾನವ ಕಣ್ಣುಗುಡ್ಡೆಗಳು—ಕೆಲವು ನೀಲಿ, ಕೆಲವು ಕಂದು, ಇನ್ನು ಕೆಲವು ವಿಚಿತ್ರ ಕಾಯಿಲೆಗಳಿಂದ ಊದಿಕೊಂಡಿರುವ ಕಣ್ಣುಗಳು—ನೀವು ಆ ಕೋಣೆಯಲ್ಲಿ ಎತ್ತ ಸಾಗಿದರೂ ನಿಮ್ಮನ್ನೇ ಹಿಂಬಾಲಿಸಿ ನೋಡುತ್ತಿರುವ ಭ್ರಮೆ ಮೂಡಿಸುತ್ತವೆ. ಆ ಕೋಣೆಯಲ್ಲಿ ಹೆಜ್ಜೆ ಹಾಕುವಾಗ ಯಾರಿಗಾದರೂ ಬೆನ್ನಿನ ಮೇಲೆ ಸಣ್ಣ ನಡುಕ ಹುಟ್ಟುವುದು ಖಚಿತ. ಹಾರರ್ ಸಿನಿಮಾಗಳ ನಿರ್ದೇಶಕರು ಹೊಸ ದೃಶ್ಯಗಳ ಕಲ್ಪನೆಗಾಗಿ ಈ ಮ್ಯೂಸಿಯಂಗೆ ಬಂದು ಒಂದು ಸುತ್ತು ಹಾಕಿ ಹೋದರೆ, ಖಂಡಿತವಾಗಿಯೂ ನಾಲ್ಕಾರು ಭಯಾನಕ ಚಿತ್ರಕಥೆಗಳು ಹೊಳೆಯುವುದರಲ್ಲಿ ಸಂಶಯವೇ ಇಲ್ಲ.

ಹಂಟೇರಿಯನ್ ಮ್ಯೂಸಿಯಂನ ಬೃಹತ್ ಬಾಗಿಲು ದಾಟಿ ಹೊರಬಂದು ಲಂಡನ್‌ನ ಲವಲವಿಕೆಯ ಬೀದಿಗೆ ಮುಖಮಾಡಿದಾಗ, ನಮ್ಮ ದೇಹದ ಮೇಲಿನ ಚರ್ಮ, ಒಳಗಿರುವ ಮೂಳೆಗಳು ಮತ್ತು ಎದೆಯೊಳಗೆ ಸದ್ದಿಲ್ಲದೆ ಮಿಡಿಯುತ್ತಿರುವ ಹೃದಯದ ಬಗ್ಗೆ ಅಪಾರವಾದ ಗೌರವ ಮೂಡುತ್ತದೆ. ಇವೆಲ್ಲವೂ ಒಳಗಡೆ ಎಷ್ಟು ಅಚ್ಚುಕಟ್ಟಾಗಿ, ಯಾವುದೇ ತೊಂದರೆಯಿಲ್ಲದೆ ಕೆಲಸ ಮಾಡುತ್ತಿವೆ ಎಂಬುದೇ ಒಂದು ನಿತ್ಯ ವಿಸ್ಮಯ. ನಮ್ಮ ದೇಹದ ಒಳಗಿನ ಸೃಷ್ಟಿಯನ್ನು, ಅದರ ಸಕಲ ವಿಚಿತ್ರಗಳ ಸಮೇತ ಕಣ್ಣೆದುರು ನಿಲ್ಲಿಸಿ, ಮನುಷ್ಯನಿಗೆ ತನ್ನದೇ ಮಿತಿ ಮತ್ತು ಜ್ವರದಂಥ ಅಸ್ಥಿರತೆಯನ್ನು ನೆನಪಿಸಿಕೊಡುವ ಈ ಜಾಗ, ಲಂಡನ್ ನಗರದ ಅತ್ಯಂತ ವಿಲಕ್ಷಣ ಹಾಗೂ ಮರೆಯಲಾಗದ ಸಾಹಸಯಾತ್ರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?