Tuesday, June 30, 2026
Tuesday, June 30, 2026

ಪ್ರವಾಸಿ ತಾಣಗಳಿಗೆ ಮಾರಕವಾದ 'ಬಾಟಲೀಪುತ್ರ'ರು!

ವಿದೇಶಗಳಲ್ಲಿ ಕುಡಿಯುವವರು ಶಿಸ್ತಿನಿಂದ ಇರುತ್ತಾರೆ ಎಂಬ ಮಾತಿದೆ. ಆದರೆ ಭಾರತೀಯ ಮೂಲದವರು ಅಥವಾ ನಮ್ಮ ದೇಶದ ಪ್ರವಾಸಿಗರು ಅಲ್ಲಿಗೆ ಹೋದಾಗಲೂ ಇದೇ ರೀತಿ ವರ್ತಿಸಿ, ಇಡೀ ದೇಶಕ್ಕೆ ಕೆಟ್ಟ ಹೆಸರು ತರುತ್ತಾರೆ. ವಿದೇಶಗಳಲ್ಲಿ ಭಾರತೀಯರ ಬಗ್ಗೆ ಇರುವ ಕೆಟ್ಟ ಅಭಿಪ್ರಾಯಕ್ಕೆ ಇಂಥ 'ಶಿಸ್ತುಹೀನ' ವರ್ತನೆಗಳೇ ಮುಖ್ಯ ಕಾರಣ. ಕುಡಿದು ಬಾಟಲಿ ಒಡೆಯುವುದು ಕೇವಲ ಗಾಜನ್ನು ಒಡೆದಂತೆ ಅಲ್ಲ, ನಮ್ಮ ಸಂಸ್ಕೃತಿ ಮತ್ತು ಘನತೆಯನ್ನು ಒಡೆದು ಹಾಕಿದಂತೆ. ಕುಡಿಯುವುದು ಖುಷಿಗಾಗಿ ಇರಲಿ, ವಿಕೃತಿಗಾಗಿ ಅಲ್ಲ. ನೀವು ಕುಡಿದ ಬಾಟಲಿಯು ಮತ್ತೊಬ್ಬರ ರಕ್ತಕ್ಕೆ ಕಾರಣವಾಗಬಾರದು.

ಪ್ರವಾಸ ಎನ್ನುವುದು ಮನಸ್ಸಿನ ಮುದಕ್ಕೆ, ಹೊಸ ಸಂಸ್ಕೃತಿಯ ಅನ್ವೇಷಣೆಗೆ ಮತ್ತು ಜ್ಞಾನಾರ್ಜನೆಗೆ ಇರುವ ಒಂದು ದಾರಿ. ಅದು ಕೇವಲ ಮೋಜು-ಮಸ್ತಿಯಲ್ಲ, ಅದು ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಒಂದು ಕಿಟಕಿ. ಆದರೆ ಇಂದು ಆ ಕಿಟಕಿಯ ಮೇಲೆ ಕಸದ ರಾಶಿ ಬಿದ್ದಿದೆ. ಭಾರತವು 'ಅತಿಥಿ ದೇವೋ ಭವ' ಎಂದು ಜಗತ್ತಿಗೆ ಸಾರಿದ ದೇಶ. ಆದರೆ ದುರಂತವೆಂದರೆ, ನಾವು ಅತಿಥಿಗಳಾಗಿ ಹೋದಾಗ 'ದೇವೋ ಭವ' ಆಗುವ ಬದಲು 'ದೆವ್ವೋ ಭವ' ಎಂಬಂತೆ ವರ್ತಿಸುತ್ತಿದ್ದೇವೆ. ಅನೇಕರು ಪ್ರವಾಸ ಹೋಗುತ್ತಾರೆ. ಪ್ರವಾಸಕ್ಕೆ ಹೋದಾಗ ಮದ್ಯಪಾನ ಮಾಡುವುದು ವೈಯಕ್ತಿಕ ಆಯ್ಕೆ ಇರಬಹುದು. ಆದರೆ, ಆ ಅಮಲು ತಲೆಗೇರಿದ ನಂತರ ಕೈಯಲ್ಲಿರುವ ಬಾಟಲಿಯನ್ನು ನೆಲಕ್ಕೆ ಬಡಿದು ಒಡೆದು ಹಾಕುವ ವರ್ತನೆಯಿದೆಯಲ್ಲ, ಅದು ಅಪ್ಪಟ ಅನಾಗರೀಕತೆ. ಇದು ಕೇವಲ ಮೋಜಲ್ಲ, ಅದು ಒಂದು ಬಗೆಯ 'ಸಾಂಸ್ಕೃತಿಕ ರೋಗ'.

ಇದನ್ನೂ ಓದಿ: ದೇಶ ಸುತ್ತುವವನಿಗೆ ದಾರಿಗೊಂದು ಪಾಠ

ನಮ್ಮ ಪ್ರವಾಸಿ ತಾಣಗಳು ಹೆಚ್ಚಾಗಿ ಬೆಟ್ಟ-ಗುಡ್ಡಗಳು, ನದಿ ತೀರಗಳು ಅಥವಾ ಸಮುದ್ರ ತೀರಗಳಾಗಿರುತ್ತವೆ. ಅಲ್ಲಿ ಈ ಗಾಜಿನ ಚೂರುಗಳನ್ನು ಎಸೆದಾಗ ಸಂಭವಿಸುವ ಅನಾಹುತಗಳು ಅಪಾರ. ಅರಣ್ಯ ಪ್ರದೇಶಗಳಲ್ಲಿ ಕುಡಿದು ಬಾಟಲಿ ಒಡೆಯುವುದರಿಂದ ಆನೆ, ಜಿಂಕೆಗಳಂಥ ಪ್ರಾಣಿಗಳ ಪಾದಕ್ಕೆ ಗಾಜಿನ ಚೂರುಗಳು ಚುಚ್ಚಿ ಅವು ಸೋಂಕಿನಿಂದ (Infection) ಸಾವನ್ನಪ್ಪಿದ ನಿದರ್ಶನಗಳು ಸಾಕಷ್ಟಿವೆ. ಅದೇ ದಾರಿಯಲ್ಲಿ ಮುಂದೆ ಬರುವ ಮಕ್ಕಳು ಅಥವಾ ಇತರ ಪ್ರವಾಸಿಗರ ಕಾಲಿಗೆ ಈ ಗಾಜು ತಗುಲಿ ಗಂಭೀರ ಗಾಯಗಳಾಗುತ್ತವೆ. ಗಾಜು ಮಣ್ಣಿನಲ್ಲಿ ಕರಗಲು ಸಾವಿರಾರು ವರ್ಷ ಬೇಕು. ಹೀಗೆ ಬಾಟಲಿ ಒಡೆಯುವ ಮೂಲಕ ನಾವು ಆ ಸುಂದರ ತಾಣವನ್ನು ಶಾಶ್ವತವಾಗಿ 'ಅಪಾಯಕಾರಿ ವಲಯ'ವನ್ನಾಗಿ ಮಾಡುತ್ತಿದ್ದೇವೆ. ಕೆಲವರು 'ನಾನು ಹಣ ಕೊಟ್ಟು ಬಾಟಲಿ ಖರೀದಿಸಿದ್ದೇನೆ, ಅದು ನನ್ನ ಇಷ್ಟ' ಎಂದು ವಾದಿಸುತ್ತಾರೆ. ಆದರೆ ಅವರು ಮರೆಯುವ ವಿಷಯವೇನೆಂದರೆ, ಅವರು ಖರೀದಿಸಿದ್ದು ಒಳಗಿರುವ ದ್ರವವನ್ನೇ ಹೊರತು ಆ ಜಾಗವನ್ನಲ್ಲ. ಸಾರ್ವಜನಿಕ ಸ್ಥಳಗಳು ಅಥವಾ ಪ್ರವಾಸಿ ತಾಣಗಳು ಎಲ್ಲರಿಗೂ ಸೇರಿದ್ದು. ಅಲ್ಲಿ ಗಲೀಜು ಮಾಡುವ ಹಕ್ಕು ಯಾರಿಗೂ ಇಲ್ಲ.

ವಿದೇಶಗಳಲ್ಲಿ ಕುಡಿಯುವವರು ಶಿಸ್ತಿನಿಂದ ಇರುತ್ತಾರೆ ಎಂಬ ಮಾತಿದೆ. ಆದರೆ ಭಾರತೀಯ ಮೂಲದವರು ಅಥವಾ ನಮ್ಮ ದೇಶದ ಪ್ರವಾಸಿಗರು ಅಲ್ಲಿಗೆ ಹೋದಾಗಲೂ ಇದೇ ರೀತಿ ವರ್ತಿಸಿ, ಇಡೀ ದೇಶಕ್ಕೆ ಕೆಟ್ಟ ಹೆಸರು ತರುತ್ತಾರೆ. ವಿದೇಶಗಳಲ್ಲಿ ಭಾರತೀಯರ ಬಗ್ಗೆ ಇರುವ ಕೆಟ್ಟ ಅಭಿಪ್ರಾಯಕ್ಕೆ ಇಂಥ 'ಶಿಸ್ತುಹೀನ' ವರ್ತನೆಗಳೇ ಮುಖ್ಯ ಕಾರಣ. ಕುಡಿದು ಬಾಟಲಿ ಒಡೆಯುವುದು ಕೇವಲ ಗಾಜನ್ನು ಒಡೆದಂತೆ ಅಲ್ಲ, ನಮ್ಮ ಸಂಸ್ಕೃತಿ ಮತ್ತು ಘನತೆಯನ್ನು ಒಡೆದು ಹಾಕಿದಂತೆ. ಕುಡಿಯುವುದು ಖುಷಿಗಾಗಿ ಇರಲಿ, ವಿಕೃತಿಗಾಗಿ ಅಲ್ಲ. ನೀವು ಕುಡಿದ ಬಾಟಲಿಯು ಮತ್ತೊಬ್ಬರ ರಕ್ತಕ್ಕೆ ಕಾರಣವಾಗಬಾರದು. ನಾವು ಪ್ರವಾಸಕ್ಕೆ ಹೋಗುವುದು ನೆನಪುಗಳನ್ನು ಸಂಗ್ರಹಿಸಲು ಹೊರತು, ಅವಶೇಷಗಳನ್ನು ಸೃಷ್ಟಿಸಲು ಅಲ್ಲ. ಸುಸಂಸ್ಕೃತ ಸಮಾಜದ ಲಕ್ಷಣವೆಂದರೆ ತಾನು ಹೋದ ಜಾಗವನ್ನು ಬಂದಾಗ ಇದ್ದದ್ದಕ್ಕಿಂತ ಹೆಚ್ಚು ಸುಂದರವಾಗಿ ಬಿಟ್ಟು ಬರುವುದು. 'ಬಾಟಲಿಪುತ್ರ'ರು ಈ ಸಣ್ಣ ಸತ್ಯವನ್ನು ಅರಿತರೆ ನಮ್ಮ ಪ್ರವಾಸಿ ತಾಣಗಳು ನಿಜಕ್ಕೂ ಸ್ವರ್ಗವಾಗಬಲ್ಲವು.

ಕರ್ನಾಟಕದ ಯಾವ ಪ್ರವಾಸಿ ತಾಣವೂ ಈ 'ಬಾಟಲಿ ಪ್ರದೇಶ'ಗಳಿಂದ ಮುಕ್ತವಾಗಿಲ್ಲ. ಸಣ್ಣ-ಪುಟ್ಟ ಕೆರೆ, ತೊರೆ, ಝರಿ, ಜಲಪಾತಗಳ ಸುತ್ತಮುತ್ತಲ ಪ್ರದೇಶಗಳೂ ಒಡೆದ ಬಾಟಲಿಗಳ 'ಡೇಂಜರಸ್ ಸ್ಪಾಟ್'ಗಳಾಗಿವೆ. ಕಾರಿನಲ್ಲಿ ಅಥವಾ ವಾಹನಗಳಲ್ಲಿ ಸಂಚರಿಸುವ ಪ್ರವಾಸಿಗರಿಗೆ ಬಾಟಲಿಗಳನ್ನು ಹೊರಗೆ ಎಸೆಯದಿದ್ದರೆ 'ಕಿಕ್' ಏರುವುದಿಲ್ಲ. ಕರ್ನಾಟಕದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಅಥವಾ ಬಂಡೀಪುರ, ನಾಗರಹೊಳೆ ಮುಂತಾದ ಪ್ರದೇಶಗಳಿಗೆ ಪ್ರವಾಸ ಹೋಗುವವರಂತೂ ಕಾರಿನ ಕಿಟಕಿಯಿಂದ ಬಾಟಲಿಗಳನ್ನು ಹೊರಕ್ಕೆ ಎಸೆಯುವುದು ಸಾಮಾನ್ಯ. ಆನೆಗಳ ಪಾದಗಳು ನೋಡಲು ಗಟ್ಟಿಯಾಗಿ ಕಂಡರೂ, ಅವುಗಳ ಅಡಿಭಾಗ (Sole) ಅತ್ಯಂತ ಸಂವೇದನಾಶೀಲವಾಗಿರುತ್ತದೆ. ಆನೆಯ ಪಾದದ ಕೆಳಗೆ ದಪ್ಪನೆಯ ಕೊಬ್ಬಿನ ಪದರವಿದ್ದು, ಅದು ಆನೆಯ ಭಾರವನ್ನು ಸಮತೋಲನಗೊಳಿಸಲು ಮತ್ತು ನಡೆಯುವಾಗ 'ಶಾಕ್ ಅಬ್ಸಾರ್ಬರ್' ಆಗಿ ಕೆಲಸ ಮಾಡುತ್ತದೆ. ಪ್ರವಾಸಿಗರು ಕುಡಿದು ಒಡೆದು ಹಾಕಿದ ಗಾಜಿನ ಬಾಟಲಿಗಳ ಚೂರುಗಳು ಕಾಡಿನ ಹಾದಿಯ ಮಣ್ಣಿನಲ್ಲಿ ಹೂತುಹೋಗಿರುತ್ತವೆ.

Untitled design (65)

ಆನೆಗಳು ನಡೆದಾಗ, ಅವುಗಳ ಟನ್‌ಗಟ್ಟಲೆ ತೂಕದ ಒತ್ತಡಕ್ಕೆ ಈ ಚೂಪಾದ ಗಾಜಿನ ಚೂರುಗಳು ನೇರವಾಗಿ ಪಾದದ ಮೃದುವಾದ ಭಾಗಕ್ಕೆ ನುಗ್ಗುತ್ತವೆ. ಪ್ರಕೃತಿಯಲ್ಲಿ ಪ್ರಾಣಿಗಳಿಗೆ ಗಾಯವಾದಾಗ ಅವುಗಳಿಗೆ ಇರುವ ಏಕೈಕ ಚಿಕಿತ್ಸೆ ಎಂದರೆ ತಮ್ಮ ನಾಲಗೆಯಿಂದ ಗಾಯವನ್ನು ನೆಕ್ಕುವುದು. ಲಾಲಾರಸದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತವೆ. ಆದರೆ ಆನೆಗಳ ದೇಹರಚನೆಯೇ ಹಾಗಿದೆ—ಅವುಗಳಿಗೆ ತಮ್ಮ ಪಾದದ ಅಡಿಯನ್ನು ನೆಕ್ಕಲು ಸಾಧ್ಯವೇ ಇಲ್ಲ. ಹಕ್ಕಿಗಳು ಅಥವಾ ಸಣ್ಣ ಪ್ರಾಣಿಗಳು ತಮ್ಮ ಗಾಯವನ್ನು ಸ್ವಚ್ಛ ಮಾಡಿಕೊಳ್ಳಬಲ್ಲವು, ಆದರೆ ಆನೆಗಳಿಗೆ ಇದು ಅಸಾಧ್ಯ. ಒಮ್ಮೆ ಪಾದದೊಳಗೆ ನುಗ್ಗಿದ ಗಾಜು ಅಲ್ಲೇ ಉಳಿದುಬಿಡುತ್ತದೆ. ಗಾಜು ಪಾದದ ಒಳಗಿದ್ದೇ ಆನೆಗಳು ನಡೆಯಬೇಕಾದಾಗ, ಪ್ರತಿ ಹೆಜ್ಜೆಗೂ ಆ ಗಾಜು ಇನ್ನೂ ಆಳಕ್ಕೆ ನುಗ್ಗುತ್ತಾ ಹೋಗುತ್ತದೆ.

ಇದರಿಂದ ಗಾಯದ ಹಾದಿ ದೊಡ್ಡದಾಗಿ, ಅಲ್ಲಿಗೆ ಮಣ್ಣು ಮತ್ತು ಕ್ರಿಮಿಗಳು ಸೇರಿಕೊಳ್ಳುತ್ತವೆ. ಕಾಲಕ್ರಮೇಣ ಆ ಗಾಯವು 'ಸೆಪ್ಟಿಕ್' (Septicemia) ಆಗಿ ಬದಲಾಗುತ್ತದೆ. ಸೆಪ್ಟಿಕ್ ಆದಾಗ ಕಾಲಿನಲ್ಲಿ ಅತಿಯಾದ ಬಾವು ಬರುತ್ತದೆ. ನೋವಿನ ತೀವ್ರತೆಯಿಂದ ಆನೆಗೆ ಸರಿಯಾಗಿ ನಡೆಯಲು ಸಾಧ್ಯವಾಗುವುದಿಲ್ಲ. ಕಾಡಿನ ಆನೆಗಳು ದಿನಕ್ಕೆ ನೂರಾರು ಕಿಲೋಮೀಟರ್ ನಡೆಯಲೇಬೇಕು. ಕಾಲು ನೋವಿನಿಂದಾಗಿ ಅವುಗಳಿಗೆ ಆಹಾರ ಮತ್ತು ನೀರು ಹುಡುಕಿಕೊಂಡು ಹೋಗಲು ಸಾಧ್ಯವಾಗದೆ, ನಿಂತಲ್ಲೇ ನಿಂತು ಅಶಕ್ತಗೊಂಡು ಸಾವನ್ನಪ್ಪುತ್ತವೆ. ಒಬ್ಬ ಪ್ರವಾಸಿಗ ಕೇವಲ ಎರಡು ಸೆಕೆಂಡಿನ ಮೋಜಿಗೆ ಒಡೆದ ಬಾಟಲಿ, ಒಂದು ಜೀವವನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂಬ ಸಣ್ಣ ತಿಳಿವಳಿಕೆ ಕೂಡ ಆ ಪ್ರವಾಸಿಗನಿಗಿರುವುದಿಲ್ಲ.

ಯಾರೋ ಒಬ್ಬ ಪ್ರವಾಸಿಗ 'ನನ್ನ ಮೋಜು' ಎಂದು ಎಸೆದ ಬಾಟಲಿ, ಕಾಡಿನ ದೈತ್ಯ ಜೀವಿಯನ್ನು ತಿಂಗಳುಗಟ್ಟಲೆ ನರಳಿಸಿ ಕೊಲ್ಲುತ್ತದೆ. ಗಾಜು ಮಣ್ಣಿನಲ್ಲಿ ಕರಗುವ ವಸ್ತುವಲ್ಲ. ಇಂದು ಅವಿವೇಕಿ ಪ್ರವಾಸಿಗನೊಬ್ಬ ಎಸೆದ ಬಾಟಲಿ ಹತ್ತು ವರ್ಷಗಳ ನಂತರವೂ ಅಲ್ಲಿ ಪ್ರಾಣಿ ಬಲಿಗಾಗಿ ಕಾಯುತ್ತಿರುತ್ತದೆ. ಕಾಡು ಲಕ್ಷಾಂತರ ಪ್ರಾಣಿಗಳ ಆವಾಸಸ್ಥಾನ. ನಾವು ಅಲ್ಲಿಗೆ ಅತಿಥಿಗಳಾಗಿ ಹೋಗುತ್ತೇವೆಯೇ ಹೊರತು ಅಲ್ಲಿನ ಜೀವ ವೈವಿಧ್ಯವನ್ನು ನಾಶಮಾಡಲು ಅಲ್ಲ. ಕಾಡಿನ ಹಾದಿಯಲ್ಲಿ ಬಾಟಲಿ ಒಡೆಯುವ ಮುನ್ನ, ಆ ಒಂದು ಕ್ಷಣದ ವಿಕೃತಿ ಒಂದು ಮೂಕ ಜೀವಿಯ ದಾರುಣ ಅಂತ್ಯಕ್ಕೆ ಕಾರಣವಾಗಬಹುದು ಎಂಬ ಸಣ್ಣ ತಿಳಿವಳಿಕೆ ಇರುವುದಿಲ್ಲ. ಪ್ರಕೃತಿಯನ್ನು ಪ್ರೀತಿಸದಿದ್ದರೆ ಪರವಾಗಿಲ್ಲ, ಆದರೆ ಅದನ್ನು ಹಿಂಸಿಸುವ ಹಕ್ಕು ನಮಗಿಲ್ಲ. ಆನೆಗಳ ಸಮಾಧಿಯ ಮೇಲೆ ನಮ್ಮ ಮೋಜಿನ ಅರಮನೆ ಕಟ್ಟಿಕೊಳ್ಳುವುದು ಅದೆಂಥ ವಿಕೃತಿ?

ಕಳೆದ ಐದು ವರ್ಷಗಳ ಅವಧಿಯಲ್ಲಿ ಕೊಡಗಿನಲ್ಲೊಂದೇ ಆರು ಆನೆಗಳು ಕಾಲಿಗೆ ಗಾಜು ಸಿಕ್ಕಿ ನರಳಿ ಸತ್ತಿದ್ದು ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಯಾಗಿದ್ದನ್ನು ಸ್ಮರಿಸಬಹುದು.

ಇನ್ನು ನದಿತೀರ ಅಥವಾ ಜಲಪಾತಗಳಿಗೆ ಹೋದಾಗ ನೀರಿನೊಳಗೆ ಬಾಟಲಿ ಎಸೆಯುವುದು ಮತ್ತೊಂದು ದೊಡ್ಡ ಸಮಸ್ಯೆ. ಇತ್ತೀಚಿನ ದಿನಗಳಲ್ಲಿ ಈ ಜಲಮೂಲಗಳು ‘ಗಾಜಿನ ಗುಂಡಿ’ಗಳಾಗಿ ಪರಿವರ್ತನೆಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಪ್ರವಾಸಿಗರು ಮೋಜಿನ ಅಮಲಿನಲ್ಲಿ ನೀರಿನೊಳಗೆ ಎಸೆಯುವ ಮದ್ಯದ ಬಾಟಲಿಗಳು ಸೃಷ್ಟಿಸುವ ಅನಾಹುತಗಳು ಒಂದೆರಡಲ್ಲ. ನದಿ ಅಥವಾ ಸಮುದ್ರ ತೀರಕ್ಕೆ ಹೋದಾಗ ಸಹಜವಾಗಿಯೇ ಪ್ರವಾಸಿಗರು, ಅದರಲ್ಲೂ ಮಕ್ಕಳು ನೀರಿನಲ್ಲಿ ಆಟವಾಡಲು ಬಯಸುತ್ತಾರೆ. ನೀರಿನ ಮೇಲ್ಮೈ ಶಾಂತವಾಗಿ ಕಂಡರೂ, ಅಡಿಯಲ್ಲಿ ಬಿದ್ದಿರುವ ಗಾಜಿನ ಚೂರುಗಳು ಯಾರಿಗೂ ಕಾಣಿಸುವುದಿಲ್ಲ. ನೀರಿನಲ್ಲಿ ಗಾಜಿನ ಚೂರುಗಳು ಹೆಚ್ಚು ಹರಿತವಾಗುತ್ತವೆ. ಮೋಜಿನ ಭರಾಟೆಯಲ್ಲಿ ಓಡುವಾಗ ಅಥವಾ ಈಜುವಾಗ ಕಾಲು ಅಥವಾ ಕೈಗಳಿಗೆ ಈ ಗಾಜು ತಗುಲಿದರೆ, ನೀರಿನ ಒತ್ತಡದಿಂದಾಗಿ ಗಾಯವು ಬಹಳ ಆಳವಾಗುತ್ತದೆ. ಒಮ್ಮೆ ಗಾಯವಾದರೆ ಆ ಸುಂದರ ಕ್ಷಣಗಳು ಭಯಾನಕ ನೆನಪುಗಳಾಗಿ ಬದಲಾಗುತ್ತವೆ. ನದಿ ತೀರದಂಥ ದೂರದ ಪ್ರದೇಶಗಳಲ್ಲಿ ತಕ್ಷಣದ ವೈದ್ಯಕೀಯ ಚಿಕಿತ್ಸೆ ಸಿಗುವುದು ಕಷ್ಟ. ಇದರಿಂದಾಗಿ ಅತಿಯಾದ ರಕ್ತಸ್ರಾವವಾಗಿ ಪ್ರಾಣಾಪಾಯವೂ ಸಂಭವಿಸಬಹುದು.

ನದಿ ಅಥವಾ ಸಮುದ್ರವು ಕೇವಲ ನಮಗೆ ಮೋಜು ಮಾಡುವ ಜಾಗವಲ್ಲ, ಅದು ಕೋಟ್ಯಂತರ ಜೀವಿಗಳ ಮನೆ. ನೀರಿನೊಳಗೆ ಎಸೆಯುವ ಗಾಜು ಅಲ್ಲಿನ ಜೀವವೈವಿಧ್ಯಕ್ಕೆ ಮಾರಕವಾಗುತ್ತದೆ. ನೀರಿನ ಅಡಿಯಲ್ಲಿ ಬಿದ್ದಿರುವ ಸಣ್ಣ ಗಾಜಿನ ಚೂರುಗಳು ಬೆಳಕಿಗೆ ಹೊಳೆಯುತ್ತವೆ. ಇದನ್ನು ಆಹಾರವೆಂದು ತಪ್ಪಾಗಿ ಭಾವಿಸುವ ಮೀನುಗಳು ಅಥವಾ ಆಮೆಗಳು ಅವುಗಳನ್ನು ನುಂಗುತ್ತವೆ. ಇದು ಅವುಗಳ ಜೀರ್ಣಾಂಗವ್ಯೂಹವನ್ನು ಸೀಳಿ ಹಾಕಿ, ಆಂತರಿಕ ರಕ್ತಸ್ರಾವದಿಂದ ಅವು ಸಾವನ್ನಪ್ಪುವಂತೆ ಮಾಡುತ್ತದೆ. ಆಮೆಗಳಂಥ ಜೀವಿಗಳು ಮೊಟ್ಟೆ ಇಡಲು ದಡಕ್ಕೆ ಬರುತ್ತವೆ. ದಡದಲ್ಲಿ ಹರಡಿರುವ ಗಾಜಿನ ಚೂರುಗಳು ಅವುಗಳ ಮೃದುವಾದ ದೇಹಕ್ಕೆ ಗಾಯ ಮಾಡಿ, ಅವುಗಳ ವಂಶಾಭಿವೃದ್ಧಿಗೂ ಅಡ್ಡಿಪಡಿಸುತ್ತವೆ. ಪ್ಲಾಸ್ಟಿಕ್‌ಗಿಂತಲೂ ಗಾಜು ಹೆಚ್ಚು ಅಪಾಯಕಾರಿ ಏಕೆಂದರೆ ಅದು ಸಾವಿರಾರು ವರ್ಷಗಳ ಕಾಲ ಮಣ್ಣಿನಲ್ಲಿ ಅಥವಾ ನೀರಿನಲ್ಲಿ ಹಾಗೆಯೇ ಇರುತ್ತದೆ. ಅದು ನೈಸರ್ಗಿಕವಾಗಿ ಕರಗುವುದಿಲ್ಲ. ನಾವು ಇಂದು ಎಸೆಯುವ ಒಂದು ಬಾಟಲಿ, ಮುಂದಿನ ಹತ್ತಾರು ತಲೆಮಾರುಗಳ ಪ್ರವಾಸಿಗರಿಗೆ ಮತ್ತು ಜಲಚರಗಳಿಗೆ ಅಪಾಯವನ್ನು ಕಾಯ್ದಿರಿಸಿದಂತೆ.

ನಮ್ಮಲ್ಲಿ 'ಪೈಸಾ ವಸೂಲ್' ಎಂಬ ತಪ್ಪು ಕಲ್ಪನೆ ಇದೆ. ನಾವು ಹಣ ಕೊಟ್ಟು ಪ್ರವಾಸ ಬಂದಿದ್ದೇವೆ ಎಂದರೆ ಆ ಪ್ರಕೃತಿಯನ್ನು ಹಾಳು ಮಾಡುವ ಅಧಿಕಾರ ನಮಗಿದೆ ಎಂದು ಭಾವಿಸುತ್ತೇವೆ. ಕಾಡಿನಲ್ಲಿ ಜೋರಾಗಿ ಮ್ಯೂಸಿಕ್ ಹಚ್ಚಿ ಡ್ಯಾನ್ಸ್ ಮಾಡುವುದು, ಮೋಜು-ಮಸ್ತಿ ಮಾಡುವುದು ಈ 'ಪೈಸಾ ವಸೂಲ್' ಮೆಂಟಾಲಿಟಿ ಭಾಗ. 'ನಾನು ಸಾವಿರಾರು ರುಪಾಯಿ ಖರ್ಚು ಮಾಡಿ ಇಲ್ಲಿಗೆ ಬಂದಿದ್ದೇನೆ, ಹಾಗಾಗಿ ನಾನು ಹೇಗೆ ಬೇಕಾದರೂ ವರ್ತಿಸಬಹುದು' ಎನ್ನುವ ಅಹಂಕಾರ ಅನೇಕ ಪ್ರವಾಸಿಗರಲ್ಲಿ ಮನೆಮಾಡಿದೆ. ಹೊಟೇಲ್ ರೂಮಿನಲ್ಲಿ ಎಸಿ ಫುಲ್ ಹಾಕಿ ಕಿಟಕಿ ತೆಗೆಯುವುದು, ನೀರಿನ ನಲ್ಲಿಗಳನ್ನು ಅನಗತ್ಯವಾಗಿ ಬಿಡುವುದು ಅಥವಾ ಪ್ರವಾಸಿ ತಾಣಗಳಲ್ಲಿ ಕಸ ಎಸೆಯುವುದು—ಇವೆಲ್ಲವೂ ಈ 'ಪೈಸಾ ವಸೂಲ್' ಮನಸ್ಥಿತಿಯ ಫಲ. ಹಣ ನೀಡಿದ್ದೇವೆ ಎಂದರೆ ನಾವು ಸೇವೆಯನ್ನು ಖರೀದಿಸಿದ್ದೇವೆಯೇ ಹೊರತು ಪ್ರಕೃತಿಯನ್ನು ನಾಶಮಾಡುವ ಹಕ್ಕನ್ನಲ್ಲ ಎಂಬ ಸತ್ಯ ನಮಗೆ ಮರೆತುಹೋಗಿದೆ.

ಪ್ರಕೃತಿಯನ್ನು ಸವಿಯುವುದು ಎಂದರೆ ಅದರ ಸೌಂದರ್ಯವನ್ನು ಕಣ್ಣಲ್ಲಿ ತುಂಬಿಕೊಳ್ಳುವುದು, ಅಲ್ಲಿನ ಶುದ್ಧ ಗಾಳಿಯನ್ನು ಆಸ್ವಾದಿಸುವುದು ಮತ್ತು ಮನಸಿನ ಶಾಂತಿಯನ್ನು ಪಡೆಯುವುದು. ಆದರೆ, ಕಾಡಿನ ಮಧ್ಯೆ ದೊಡ್ಡದಾಗಿ ಮ್ಯೂಸಿಕ್ ಹಚ್ಚುವುದು, ಪ್ರಾಣಿಗಳ ಮೇಲೆ ಕಲ್ಲು ಎಸೆಯುವುದು ಅಥವಾ ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿಗಳನ್ನು ಎಸೆದು ಬರುವುದು ಪ್ರಕೃತಿಯ 'ಹತ್ಯೆ'ಗೆ ಸಮಾನ. ನಾವು ಸವಿಯಲು ಹೋಗುವ ಜಾಗವನ್ನು ನಮ್ಮ ನಂತರ ಬರುವವರು ಸವಿಯಲು ಅಯೋಗ್ಯವಾಗುವಂತೆ ಮಾಡುವುದು ಅಪ್ಪಟ ಸ್ವಾರ್ಥ. ಪೈಸಾ ವಸೂಲ್ ಹೆಸರಿನಲ್ಲಿ ನಾವು ಮಾಡುವ ಸಣ್ಣ ತಪ್ಪುಗಳೂ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತಿವೆ. ಅತಿಯಾದ ನೀರಿನ ಬಳಕೆ ಮತ್ತು ವಿದ್ಯುತ್ ವ್ಯರ್ಥ ಮಾಡುವುದು ಪ್ರಕೃತಿಯ ಮೇಲಿನ ಹೊರೆ ಹೆಚ್ಚಿಸುತ್ತದೆ. 'ನಾನು ಟ್ಯಾಕ್ಸ್ ಕಟ್ಟುತ್ತೇನೆ, ಕ್ಲೀನ್ ಮಾಡುವುದು ಸರ್ಕಾರದ ಕೆಲಸ' ಎಂಬ ಹಾರಿಕೆ ಉತ್ತರದೊಂದಿಗೆ ಕಸ ಎಸೆಯುವುದು ನಮ್ಮ ಜವಾಬ್ದಾರಿಯ ಶೂನ್ಯತೆಯನ್ನು ತೋರಿಸುತ್ತದೆ. ಪೈಸಾ ವಸೂಲ್ ಎನ್ನುವುದು ನಾವು ಪಡೆಯುವ 'ಅನುಭವ'ದಲ್ಲಿ ಇರಬೇಕೇ ಹೊರತು ನಾವು ಮಾಡುವ 'ಅನಾಹುತ'ದಲ್ಲಿ ಅಲ್ಲ. ಪ್ರಕೃತಿ ನಮ್ಮ ಆಸ್ತಿಯಲ್ಲ, ಅದು ನಾವು ಮುಂದಿನ ಪೀಳಿಗೆಯಿಂದ ಪಡೆದ ಸಾಲ. ಸಾಲವಾಗಿ ಪಡೆದದ್ದನ್ನು ನಾವು ಅಷ್ಟೇ ಸುಂದರವಾಗಿ ಮರಳಿಸಬೇಕಾದ್ದು ನಮ್ಮ ಧರ್ಮ. ಇಂಥ ಸಾಮಾನ್ಯ ಸಂಗತಿಯೂ ನಮ್ಮ ಪ್ರವಾಸಿಗರಿಗೆ ತಿಳಿಯುತ್ತಿಲ್ಲ.

ಇಂಥ ಮನಸ್ಥಿತಿಯ ಜನ ಹೊಟೇಲಿಗೆ ಹೋದಾಗಲೂ ಇದೇ ರೀತಿ ವರ್ತಿಸುತ್ತಾರೆ. ಹೊಟೇಲ್ ಎನ್ನುವುದು ಪ್ರವಾಸಿಗರಿಗೆ ಮನೆಯಿಂದ ದೂರವಿರುವ ಮತ್ತೊಂದು ಮನೆ. ಆದರೆ ಅನೇಕ ಪ್ರವಾಸಿಗರು ಹೊಟೇಲ್ ರೂಮಿನ ಬಾಗಿಲು ದಾಟುತ್ತಿದ್ದಂತೆ ತಮ್ಮ ಮನೆಯಲ್ಲಿ ಪಾಲಿಸುವ ಕನಿಷ್ಠ ಸೌಜನ್ಯವನ್ನೂ ಮರೆತುಬಿಡುತ್ತಾರೆ. ಅದರಲ್ಲೂ ಮದ್ಯಪಾನ ಮಾಡಿದ ನಂತರ ಹೊಟೇಲ್ ರೂಮಿನ ಕಾರ್ಪೆಟ್ ಮೇಲೆ ಮದ್ಯ ಚೆಲ್ಲುವುದು, ಗಾಜಿನ ಬಾಟಲಿಗಳನ್ನು ಅಲ್ಲೇ ಒಡೆದು ಹಾಕುವುದು, ಮೈ ಒರೆಸಿಕೊಳ್ಳುವ ಟವೆಲ್‌ನಲ್ಲಿ ನೆಲ ಮತ್ತು ಬೂಟುಗಳನ್ನು ಒರೆಸುವುದು, ವಾಂತಿ ಮಾಡುವುದು ಒಂದು ಬಗೆಯ 'ವಿಕೃತ ದರ್ಪ'ವಾಗಿ ಮಾರ್ಪಟ್ಟಿದೆ. 'ನಾನು ಹಣ ಕೊಟ್ಟಿದ್ದೇನೆ, ಇಲ್ಲಿನ ಕೊಳೆಯನ್ನು ಸ್ವಚ್ಛ ಮಾಡುವುದು ಅವರ ಕೆಲಸ' ಎಂಬ ಮಾತು ಅತ್ಯಂತ ಅಸಹ್ಯಕರ ಮತ್ತು ಅಮಾನವೀಯ. ಹಣವು ನಮಗೆ ಸೌಲಭ್ಯಗಳನ್ನು ನೀಡುತ್ತದೆಯೇ ಹೊರತು ಇನ್ನೊಬ್ಬರ ಶ್ರಮವನ್ನು ಅಪಮಾನಿಸುವ ಅಧಿಕಾರವನ್ನಲ್ಲ. ಹೊಟೇಲ್‌ನ ಹೌಸ್‌ಕೀಪಿಂಗ್ ಸಿಬ್ಬಂದಿಯೂ ಮನುಷ್ಯರೇ. ಕಾರ್ಪೆಟ್ ಮೇಲೆ ಚೆಲ್ಲಿದ ಮದ್ಯದ ವಾಸನೆಯನ್ನು ಹೋಗಲಾಡಿಸಲು ಅಥವಾ ಗಾಜಿನ ಚೂರುಗಳನ್ನು ಆಯಲು ಅವರು ಪಡುವ ಕಷ್ಟವನ್ನು ಯೋಚಿಸದಷ್ಟು ನಮ್ಮ ಮನುಷ್ಯತ್ವ ಮರಗಟ್ಟಿದೆ. ಒಬ್ಬ ವ್ಯಕ್ತಿಯ ಸಂಸ್ಕಾರವು ಅವನು ತನ್ನ ಸಮಾನರೊಂದಿಗೆ ಹೇಗೆ ವರ್ತಿಸುತ್ತಾನೆ ಎನ್ನುವುದಕ್ಕಿಂತ, ತನಗಿಂತ ಆರ್ಥಿಕವಾಗಿ ಹಿಂದುಳಿದ ನೌಕರರೊಂದಿಗೆ ಹೇಗೆ ವರ್ತಿಸುತ್ತಾನೆ ಎಂಬುದರ ಮೇಲೆ ನಿರ್ಧರಿಸಲಾಗುತ್ತದೆ.

ಹೊಟೇಲ್ ರೂಮುಗಳಲ್ಲಿ ನಾವು ಹೇಗೆ ವರ್ತಿಸುತ್ತೇವೆ ಎಂಬುದು ನಮ್ಮ ಸಮಾಜದ ಮುಖವಾಡ ಕಳಚಿದಾಗ ಕಾಣುವ 'ನೈಜ ವ್ಯಕ್ತಿತ್ವ'. ಮನೆಯಲ್ಲಿ ತಟ್ಟೆಯನ್ನೂ ಎತ್ತಿಡದ ವ್ಯಕ್ತಿ, ಹೊಟೇಲ್‌ನಲ್ಲಿ ಗಲೀಜು ಮಾಡಿ 'ನಾನು ಹಣ ತೆತ್ತಿದ್ದೇನೆ' ಎನ್ನುವುದು ಅವನ ಬೌದ್ಧಿಕ ದಾರಿದ್ರ್ಯವನ್ನು ತೋರಿಸುತ್ತದೆ. ನೀವು ಕಾರ್ಪೆಟ್ ಮೇಲೆ ಮದ್ಯ ಚೆಲ್ಲಿದಾಗ ಅಥವಾ ಬಾಟಲಿ ಒಡೆದಾಗ, ಅದು ಕೇವಲ ಆ ರೂಮಿನ ಅಂದವನ್ನು ಕೆಡಿಸುವುದಿಲ್ಲ, ಬದಲಾಗಿ ನಿಮ್ಮ ಸಂಸ್ಕಾರದ ದಿವಾಳಿತನವನ್ನು ಜಗತ್ತಿಗೆ ಸಾರಿದಂತೆ.

ಪ್ರತಿಯೊಂದು ವೃತ್ತಿಗೂ ಅದರದ್ದೇ ಆದ ಗೌರವವಿದೆ. ಕ್ಲೀನಿಂಗ್ ಮಾಡುವುದು ಹೌಸ್‌ಕೀಪಿಂಗ್ ಸಿಬ್ಬಂದಿಯ ಕೆಲಸವಾಗಿರಬಹುದು, ಆದರೆ ಅದನ್ನು ಲಘುವಾಗಿ ಕಾಣುವುದು ನಮ್ಮ ಕರ್ತವ್ಯವಲ್ಲ. ಇಂಥ ವರ್ತನೆಗಳಿಂದಾಗಿಯೇ ಅಂತಾರಾಷ್ಟ್ರೀಯ ಹೊಟೇಲ್‌ಗಳಲ್ಲಿ 'ಭಾರತೀಯ ಪ್ರವಾಸಿಗರು ಎಂದರೆ ಗಲೀಜು ಮಾಡುವವರು' ಎಂಬ ಹಣೆಪಟ್ಟಿ ಅಂಟಿಕೊಂಡಿದೆ.

ಇದು ಕೇವಲ ಒಬ್ಬ ವ್ಯಕ್ತಿಯ ಅವಮಾನವಲ್ಲ, ಇಡೀ ದೇಶದ ಘನತೆಗೆ ತಗುಲಿದ ಪೆಟ್ಟು. ನಾಗರಿಕ ಪ್ರಜ್ಞೆ ಎಂದರೆ ನಾವು ಬಳಸುವ ಸಾರ್ವಜನಿಕ ಅಥವಾ ಇತರರಿಗೆ ಸೇರಿದ ಆಸ್ತಿಯನ್ನು ಜವಾಬ್ದಾರಿಯಿಂದ ನಿರ್ವಹಿಸುವುದು. ಹೊಟೇಲ್ ರೂಮಿನ ಕಾರ್ಪೆಟ್, ಪೀಠೋಪಕರಣಗಳು ಮತ್ತು ಅಲ್ಲಿನ ವಸ್ತುಗಳು ಮುಂದಿನ ಅತಿಥಿಗಳಿಗೂ ಲಭ್ಯವಾಗಬೇಕು. ಬಾಟಲಿ ಒಡೆದು ಅಲ್ಲಿನ ವ್ಯವಸ್ಥೆಯನ್ನು ಹಾಳು ಮಾಡುವುದು ದುಷ್ಟತನ. ಹಣ ಕೊಟ್ಟಿದ್ದೇವೆ ಎಂಬ ಕಾರಣಕ್ಕೆ ಅಶಿಸ್ತನ್ನು ಮೆರೆಯುವುದು ಸುಸಂಸ್ಕೃತ ಸಮಾಜದ ಲಕ್ಷಣವಲ್ಲ. ಮೋಜು ಮಾಡಿ, ಆದರೆ ಆ ಮೋಜು ಇನ್ನೊಬ್ಬರ ಶ್ರಮವನ್ನು ಅತಿಕ್ರಮಿಸಬಾರದು. ಹೋಟೆಲ್ ರೂಮಿನಿಂದ ನೀವು ಹೊರಬಂದಾಗ ಆ ರೂಮ್ ಹೇಗಿರಬೇಕು ಎಂದರೆ, ನೀವು ಅಲ್ಲಿ ಉಳಿದುಕೊಂಡಿದ್ದಿರಿ ಎನ್ನುವುದಕ್ಕಿಂತ ಒಬ್ಬ 'ಸಂಸ್ಕಾರವಂತ' ವ್ಯಕ್ತಿ ಅಲ್ಲಿ ತಂಗಿದ್ದ ಎನ್ನುವ ಗುರುತು ಅಲ್ಲಿರಬೇಕು.

ಬೇಜವಾಬ್ದಾರಿ ಮನಸ್ಥಿತಿಯ ಪ್ರವಾಸಿಗರೇ ನಮ್ಮ ಪ್ರವಾಸೋದ್ಯಮಕ್ಕೆ ಅಪಾಯಕಾರಿಗಳು!

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?