Thursday, June 25, 2026
Thursday, June 25, 2026

ದೇಶ ಸುತ್ತುವವನಿಗೆ ದಾರಿಗೊಂದು ಪಾಠ

ಸ್ವಿಟ್ಜರ್‌ಲ್ಯಾಂಡ್‌ನ ಪ್ರಾಣಿ ದಯಾ ಕಾನೂನುಗಳು ಜಗತ್ತಿನಲ್ಲೇ ಅತ್ಯಂತ ಕಠಿಣವಾಗಿವೆ. ನೀವು ಮನೆಯಲ್ಲಿ ಒಂದೇ ಒಂದು 'ಗಿನಿ ಪಿಗ್' ಸಾಕುವುದು ಕಾನೂನುಬಾಹಿರ. ಯಾಕೆಂದರೆ ಇವು ಅತ್ಯಂತ ಸಾಮಾಜಿಕ ಪ್ರಾಣಿಗಳು, ಅವು ಒಬ್ಬಂಟಿಯಾಗಿದ್ದರೆ ಖಿನ್ನತೆಗೆ ಒಳಗಾಗುತ್ತವೆ ಎಂದು ನಂಬಲಾಗಿದೆ. ಹಾಗಾಗಿ ನೀವು ಅವುಗಳನ್ನು ಜೋಡಿಯಾಗಿಯೇ ಸಾಕಬೇಕು. ಒಂದು ವೇಳೆ ಒಂದು ಗಿನಿ ಪಿಗ್ ಸತ್ತುಹೋದರೆ, ಇನ್ನೊಂದಕ್ಕೆ ತಕ್ಷಣವೇ ಸಾಂಗತ್ಯ ನೀಡಲು ಬಾಡಿಗೆಗೆ ನೀಡುವ ಸಂಸ್ಥೆಗಳೂ ಅಲ್ಲಿವೆ!

ವಿಶ್ವ ಪರ್ಯಟನೆಯ ವಿಚಿತ್ರ ನಿಯಮಾವಳಿಗಳು

ಪ್ರತಿ ದೇಶವೂ ಒಂದು ಮುಚ್ಚಿಟ್ಟ ಕವಿತೆಯಂತೆ. ಭೂಪಟದ ಮೇಲೆ ನಾವು ನೋಡುವ ಆ ಕೆಂಪು-ನೀಲಿ ಗೆರೆಗಳು ಮನುಷ್ಯನ ನಂಬಿಕೆಗಳ, ಆಚರಣೆಗಳ ಮತ್ತು ಸ್ಮೃತಿಗಳ ಬೇಲಿಗಳು. ಆದರೆ ಈ ಬೇಲಿಯನ್ನು ದಾಟಿ ಇನ್ನೊಂದು ಮಣ್ಣಿಗೆ ಕಾಲಿಟ್ಟಾಗ, ನಾವು ಕೇವಲ ಪ್ರವಾಸಿಯಾಗುವುದಿಲ್ಲ. ನಮ್ಮೊಳಗೇ ಒಂದು ಹೊಸ ಜನ್ಮ ತಾಳುತ್ತೇವೆ. ಒಂದು ದೇಶದಿಂದ ಇನ್ನೊಂದಕ್ಕೆ ಹಾರಿದಾಗ ಮೊದಲು ತಾಕುವುದು ಅಲ್ಲಿನ ಗಾಳಿಯ ವಾಸನೆ. ವಿಮಾನ ನಿಲ್ದಾಣದ ಗಾಜಿನ ಗೋಡೆಗಳ ಆಚೆ ಅನಾಮಧೇಯ ಭಾಷೆಯೊಂದು ಅಲೆಅಲೆಯಾಗಿ ಕೇಳಿಬರುತ್ತಿರುವಾಗ, ನಮಗೆ ನಮ್ಮದೇ ಮಾತೃಭಾಷೆ ಒಂದು ಹಳೆಯ ಬೆಚ್ಚಗಿನ ಹೊದಿಕೆಯಂತೆ ನೆನಪಾಗುತ್ತದೆ. ಅಲ್ಲಿನ ಲಿಪಿಗಳು ಗೋಡೆಯ ಮೇಲಿನ ಚಿತ್ರಲಿಪಿಗಳಂತೆ ಕಂಡರೂ, ಆ ಅಕ್ಷರಗಳ ನಡುವೆ ಅಲ್ಲಿನ ಜನರ ನೂರಾರು ವರ್ಷಗಳ ಕನಸುಗಳು ಅಡಗಿರುತ್ತವೆ.

ಒಂದು ದೇಶದ ರುಚಿ ಆ ದೇಶದ ಇತಿಹಾಸವನ್ನು ಹೇಳುತ್ತದೆ. ನಮಗೆ ಅಪರಿಚಿತವಾದ ಸಾಂಬಾರ ಪದಾರ್ಥಗಳ ಘಮಲು, ಅವರು ತಟ್ಟೆ ಹರಡುವ ರೀತಿ, ಅನ್ನದ ಅಥವಾ ರೊಟ್ಟಿಯ ಬಣ್ಣ - ಇವೆಲ್ಲವೂ ಒಂದು ಸಂಸ್ಕೃತಿಯ ಹಸ್ತಾಕ್ಷರಗಳು. ನಾವು ಹೊಸ ರುಚಿಯನ್ನು ಸವಿಯುವಾಗ, ನಮ್ಮ ನಾಲಗೆಯ ಮೇಲೆ ಆ ದೇಶದ ಮಣ್ಣಿನ ಗುಣವನ್ನೇ ಆಸ್ವಾದಿಸುತ್ತಿರುತ್ತೇವೆ. ಇನ್ನು ಉಡುಗೆ-ತೊಡುಗೆಗಳು ಮನುಷ್ಯನ ವ್ಯಕ್ತಿತ್ವದ ಹೊರಕವಚವಷ್ಟೇ ಅಲ್ಲ; ಅವು ಆ ಹವಾಮಾನಕ್ಕೆ ನೀಡಿದ ಒಂದು ಕಾವ್ಯಾತ್ಮಕ ಪ್ರತಿಕ್ರಿಯೆ. ಬಣ್ಣ ಬಣ್ಣದ ಬಟ್ಟೆಗಳ ನಡುವೆ ಓಡಾಡುವ ಜನರನ್ನು ನೋಡಿದಾಗ, ಪ್ರತಿಯೊಂದು ಮಡಿಕೆಯೂ ಒಂದೊಂದು ಕಥೆಯನ್ನು ಬಿಚ್ಚಿಡುತ್ತದೆ.

ಇದನ್ನೂ ಓದಿ: ರೀಜನರೇಟಿವ್ ಟೂರಿಸಂ: ವೀಕ್ಷಕರಿಂದ ರಕ್ಷಕರಾಗುವ ಹೊಸ ಪರಿ

ಆದರೆ ನಿಜವಾದ ವಿಸ್ಮಯವಿರುವುದು ಅಲ್ಲಿನ ಕಾನೂನು ಮತ್ತು ಸಾಮಾಜಿಕ ಶಿಸ್ತುಗಳಲ್ಲಿ. ನಾವು ನಮ್ಮೂರಿನಲ್ಲಿ ಅತ್ಯಂತ ಸಹಜವೆಂದು ಭಾವಿಸುವ ಸಣ್ಣ ವಿಷಯವೂ ಅಲ್ಲಿ ದೊಡ್ಡ ಅಪರಾಧವಾಗಿರಬಹುದು ಅಥವಾ ಅಚ್ಚರಿಯ ಸಂಗತಿಯಾಗಿರಬಹುದು. ಉದಾಹರಣೆಗೆ, ಸಿಂಗಾಪುರದಲ್ಲಿ ಚೂಯಿಂಗ್ ಗಮ್ ಅಗಿಯುವುದು ನಿಷೇಧಿತವಾಗಿದ್ದರೆ, ಇನ್ನು ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಸಾರ್ವಜನಿಕವಾಗಿ ಶಬ್ದ ಮಾಡುತ್ತಾ ಆಹಾರ ಸೇವಿಸುವುದು ಅಸಭ್ಯ ವರ್ತನೆ ಎನಿಸಿಕೊಳ್ಳುತ್ತದೆ. ಆದರೆ ಜಪಾನ್‌ನಂಥ ದೇಶಗಳಲ್ಲಿ ನೂಡಲ್ಸ್ ತಿನ್ನುವಾಗ ಶಬ್ದ ಮಾಡುವುದು ಆ ಆಹಾರ ರುಚಿಯಾಗಿದೆ ಎಂಬ ಮೆಚ್ಚುಗೆಯ ಸಂಕೇತ. ಇಂಥ ವ್ಯತಿರಿಕ್ತ ನಂಬಿಕೆಗಳು ನಮಗೆ 'ಕಲ್ಚರಲ್ ಶಾಕ್' ಅಥವಾ ಸಾಂಸ್ಕೃತಿಕ ಆಘಾತವನ್ನು ನೀಡುತ್ತವೆ. ಆಯಾ ದೇಶದ ಸಂಚಾರ ನಿಯಮಗಳು, ಬೀದಿಯಲ್ಲಿ ಸಿಗುವ ಮುಗುಳ್ನಗೆ, ಹಿರಿಯರಿಗೆ ನೀಡುವ ಗೌರವ ಅಥವಾ ಸಮಯದ ಬಗೆಗಿನ ಅವರ ನಿಷ್ಠೆ - ಇವೆಲ್ಲವೂ ನಮ್ಮನ್ನು ಆಶ್ಚರ್ಯದ ಕಡಲಲ್ಲಿ ತೇಲಿಸುತ್ತವೆ. ಗಡಿಗಳೆಂದರೆ ಕೇವಲ ತಡೆಗೋಡೆಗಳಲ್ಲ, ಅವು ಮನುಷ್ಯ ತನ್ನನ್ನು ತಾನು ಕಂಡುಕೊಳ್ಳಲು ಸೃಷ್ಟಿಸಿಕೊಂಡ ಕನ್ನಡಿಗಳು. ಒಂದು ದೇಶವನ್ನು ದಾಟಿ ಇನ್ನೊಂದು ದೇಶಕ್ಕೆ ಹೋದಾಗ, ನಾವು ಜಗತ್ತನ್ನು ಮಾತ್ರವಲ್ಲ, ನಮ್ಮನ್ನು ನಾವು ಹೊಸ ಬೆಳಕಿನಲ್ಲಿ ನೋಡತೊಡಗುತ್ತೇವೆ. ಪರಕೀಯ ಮಣ್ಣಿನಲ್ಲಿ ನಿಂತು ನಮ್ಮ ಮಣ್ಣಿನ ಗುಣವನ್ನು ನೆನೆಯುವುದೇ ಒಂದು ಅದ್ಭುತ ಅನುಭವ. ಕೊನೆಗೆ ಉಳಿಯುವುದು ದೇಶಗಳ ಭಿನ್ನತೆಯಲ್ಲ, ಬದಲಾಗಿ ಅಷ್ಟು ಭಿನ್ನತೆಗಳ ನಡುವೆಯೂ ಎಲ್ಲೋ ಒಂದೆಡೆ ಬೆಸೆಯುವ ಮನುಷ್ಯ ಸಹಜ ಪ್ರೀತಿಯ ಎಳೆ ಮಾತ್ರ.

Untitled design (1)

ಆಚಾರ-ವಿಚಾರಗಳ ವಿಷಯಕ್ಕೆ ಬಂದರೆ, ಅತಿಥಿ ಸತ್ಕಾರದ ರೀತಿಗಳೂ ದೇಶದಿಂದ ದೇಶಕ್ಕೆ ಬದಲಾಗುತ್ತವೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಕಾಫಿ ನೀಡುವ ಪದ್ಧತಿಗೂ ಅದರದ್ದೇ ಆದ ಶಿಸ್ತಿದೆ. ಕಪ್ ಅನ್ನು ಲಘುವಾಗಿ ಅಲ್ಲಾಡಿಸದಿದ್ದರೆ ಅವರು ಮತ್ತೆ ಮತ್ತೆ ಕಾಫಿ ಸುರಿಯುತ್ತಲೇ ಇರುತ್ತಾರೆ. ಇನ್ನು ಭೂತಾನ್‌ನಂಥ ದೇಶಗಳಲ್ಲಿ ಜನರ ಜೀವನಶೈಲಿ ಎಷ್ಟು ಸರಳವೆಂದರೆ, ಅಲ್ಲಿ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಬಂಧವೇ ಆಚಾರದ ಮೂಲವಾಗಿದೆ. ಅಲ್ಲಿನ 'ಒಟ್ಟು ರಾಷ್ಟ್ರೀಯ ಸಂತೋಷ' (GNH) ಎಂಬ ಪರಿಕಲ್ಪನೆಯೇ ಜಗತ್ತಿಗೆ ಒಂದು ದೊಡ್ಡ ವಿಸ್ಮಯ. ಕಾನೂನು ನಿಯಮಗಳ ವಿಚಾರದಲ್ಲಂತೂ ಕೆಲವು ದೇಶಗಳು ವಿಚಿತ್ರ ಎನಿಸುವಷ್ಟು ಕಟ್ಟುನಿಟ್ಟಾಗಿವೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ರಾತ್ರಿ ಹತ್ತು ಗಂಟೆಯ ನಂತರ ಅಪಾರ್ಟ್‌ಮೆಂಟ್‌ಗಳಲ್ಲಿ ಟಾಯ್ಲೆಟ್ ಫ್ಲಶ್ ಮಾಡುವುದು ಶಬ್ದ ಮಾಲಿನ್ಯದ ಅಡಿಯಲ್ಲಿ ಬರುತ್ತದೆ ಎಂಬ ನಿಯಮವಿದೆ. ಹಾಗೆಯೇ ಇಟಲಿಯ ಕೆಲವು ನಗರಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದು ದಂಡಾರ್ಹ ಅಪರಾಧ. ಇಂಥ ನಿಯಮಗಳು ಪ್ರವಾಸಿಗರಿಗೆ ಮೊದಮೊದಲು ಕಿರಿಕಿರಿ ಎನಿಸಿದರೂ, ಅಲ್ಲಿನ ವ್ಯವಸ್ಥೆ ಮತ್ತು ಶಿಸ್ತನ್ನು ಕಾಪಾಡುವಲ್ಲಿ ಇವುಗಳ ಪಾತ್ರ ದೊಡ್ಡದಿದೆ.

ಸಂವಹನದಲ್ಲೂ ವಿಭಿನ್ನತೆಗಳಿವೆ. ನಾವು ತಲೆಯಾಡಿಸುವ ರೀತಿ, ಕೈ ಸನ್ನೆಗಳು ಒಂದೊಂದು ಕಡೆ ಒಂದೊಂದು ಅರ್ಥ ನೀಡುತ್ತವೆ. ಬಲ್ಗೇರಿಯಾದಲ್ಲಿ ತಲೆಯನ್ನು ಅಡ್ಡಕ್ಕೆ ಆಡಿಸಿದರೆ 'ಹೌದು' ಎಂದು, ನೇರಕ್ಕೆ ಆಡಿಸಿದರೆ 'ಇಲ್ಲ' ಎಂಬ ಅರ್ಥವಿದೆ. ಇದು ನಮಗೆ ಪೂರ್ಣವಾಗಿ ವಿರುದ್ಧವಾದದ್ದು! ಇಂಥ ಸಣ್ಣ ಸಂಗತಿಗಳು ವಿದೇಶಿ ಪ್ರವಾಸದಲ್ಲಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಅಥವಾ ನಗೆಪಾಟಲಿಗೀಡು ಮಾಡಬಹುದು. ಆದರೆ ಇವೇ ಸಂಸ್ಕೃತಿಯ ವೈವಿಧ್ಯವನ್ನು ಎತ್ತಿ ಹಿಡಿಯುತ್ತವೆ. ಆಹಾರ ಪದ್ಧತಿಯಂತೂ ಆಯಾ ದೇಶದ ಹವಾಮಾನ ಮತ್ತು ಲಭ್ಯತೆಗೆ ತಕ್ಕಂತೆ ರೂಪಿತವಾಗಿರುತ್ತದೆ. ನಾವು ಪವಿತ್ರವೆಂದು ಭಾವಿಸುವ ಪ್ರಾಣಿಗಳು ಅಥವಾ ಸಸ್ಯಗಳು ಬೇರೆಡೆ ಆಹಾರವಾಗಿರಬಹುದು. ಚೀನಾ ಅಥವಾ ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿನ ಬೀದಿ ಆಹಾರಗಳು ಭಾರತೀಯರಿಗೆ ನಿಜಕ್ಕೂ ಆಘಾತಕಾರಿ ಎನಿಸಬಹುದು. ಅಪ್ಪಟ ಸಸ್ಯಾಹಾರಿಯಾಗಿರುವವರಿಗೆ ಇದು ದೊಡ್ಡ ಸವಾಲೇ ಸರಿ.

ಪ್ರತಿ ದೇಶದ ಇತಿಹಾಸವೂ ಅಲ್ಲಿನ ವರ್ತಮಾನದ ಮೇಲೆ ಪ್ರಭಾವ ಬೀರಿರುತ್ತದೆ. ಜರ್ಮನಿಯ ಶಿಸ್ತು, ಜಪಾನ್‌ನ ವಿನಯಶೀಲತೆ ಅಥವಾ ಅಮೆರಿಕದ ಮುಕ್ತ ಮನೋಭಾವ—ಇವೆಲ್ಲವೂ ಅಲ್ಲಿನ ಐತಿಹಾಸಿಕ ಏರಿಳಿತಗಳಿಂದ ಬಂದವುಗಳು. ನಾವು ಒಂದು ಹೊಸ ದೇಶಕ್ಕೆ ಹೋದಾಗ ಕೇವಲ ಅಲ್ಲಿನ ಸ್ಥಳಗಳನ್ನು ನೋಡುವುದಲ್ಲ, ಅಲ್ಲಿನ ಜನರ ನಾಡಿಮಿಡಿತವನ್ನು ಅರಿಯಲು ಪ್ರಯತ್ನಿಸಬೇಕು. ಆಗ ಮಾತ್ರ ಅಲ್ಲಿನ 'ವಿಚಿತ್ರ'ವೆನಿಸುವ ಸಂಗತಿಗಳ ಹಿಂದಿನ ತರ್ಕ ನಮಗೆ ಅರ್ಥವಾಗುತ್ತದೆ. ಪ್ರಪಂಚವು ಅನ್ವೇಷಣೆಗೆ ತೆರೆದಿಟ್ಟ ದೊಡ್ಡ ಪುಸ್ತಕವಿದ್ದಂತೆ. ಪ್ರವಾಸ ಎಂಬುದು ಕೇವಲ ಮೋಜಲ್ಲ, ಅದು ನಮ್ಮ ಅರಿವಿನ ವಿಸ್ತರಣೆ. ಅಲ್ಲಿನ ವಿಚಿತ್ರ ಸಂಪ್ರದಾಯಗಳು, ಕಠಿಣ ಕಾನೂನುಗಳು ನಮಗೆ ಪಾಠ ಕಲಿಸುತ್ತವೆ. ಕಲ್ಚರಲ್ ಶಾಕ್ ಅನುಭವಿಸಿದಾಗಲೇ ನಮ್ಮ ಸಂಸ್ಕೃತಿಯ ಬಗ್ಗೆ ನಮಗೆ ಹೆಚ್ಚು ಹೆಮ್ಮೆ ಎನಿಸಲು ಅಥವಾ ಇತರರ ಸಂಸ್ಕೃತಿಯನ್ನು ಗೌರವಿಸಲು ಸಾಧ್ಯವಾಗುತ್ತದೆ. ವೈವಿಧ್ಯವೇ ಈ ಭೂಮಿಯ ಜೀವಸೆಲೆ.

ಕೆಲ ವರ್ಷಗಳ ಹಿಂದೆ ನಾನು ಫಿನ್‌ಲೆಂಡ್ ಪಕ್ಕದ ದೇಶವಾದ ಎಸ್ತೋನಿಯಾ ರಾಜಧಾನಿ ಟ್ಯಾಲಿನ್‌ಗೆ ಹೋಗಿದ್ದೆ. ನಮ್ಮ ದೇಶದಲ್ಲಿ ಬಸ್ಸು ಅಥವಾ ರೈಲು ಹತ್ತುವ ಮೊದಲು ‘ಸ್ವಲ್ಪ ಸೈಡ್ ಕೊಡಿ ಸಾರ್’ ಎಂದು ಜನರ ನಡುವೆ ನುಗ್ಗಿ, ಅವರ ಹೆಗಲ ಮೇಲೆ ಕೈ ಹಾಕಿ ಮಾತನಾಡುವುದು ನಮಗೆ ಅಭ್ಯಾಸ. ಆದರೆ ಅದೇ ಅಭ್ಯಾಸವನ್ನು ಇಟ್ಟುಕೊಂಡು ನೀವು ಎಸ್ತೋನಿಯಾಕ್ಕೆ ಹೋದರೆ, ಅಲ್ಲಿನ ಜನರಿಗೆ ನೀವು ಯಾವುದೋ ಬೇರೆ ಗ್ರಹದಿಂದ ಬಂದ ವಿಚಿತ್ರ ಪ್ರಾಣಿಯಂತೆ ಕಾಣುತ್ತೀರಿ! ಎಸ್ತೋನಿಯಾದಲ್ಲಿ 'ಪರ್ಸನಲ್ ಸ್ಪೇಸ್' ಅಥವಾ ವೈಯಕ್ತಿಕ ಅಂತರ ಎಂಬುದು ಕೇವಲ ಒಂದು ಶಿಷ್ಟಾಚಾರವಲ್ಲ, ಅದು ಅವರ ಜೀವನದ ಒಂದು ಅವಿಭಾಜ್ಯ ಅಂಗ. ಎಸ್ತೋನಿಯಾದಲ್ಲಿ ಬಸ್ ನಿಲ್ದಾಣದಲ್ಲಿ ಜನ ನಿಂತಿರುವುದನ್ನು ನೋಡಿದರೆ ನಮಗೆ ಆಶ್ಚರ್ಯವಾಗುತ್ತದೆ. ಒಬ್ಬ ವ್ಯಕ್ತಿ ನಿಂತ ಜಾಗದಿಂದ ಇನ್ನೊಬ್ಬ ವ್ಯಕ್ತಿ ನಿಂತ ಜಾಗಕ್ಕೆ ಕನಿಷ್ಠ ಒಂದು ಕ್ರಿಕೆಟ್ ಪಿಚ್ ಅಂತರವಿರುತ್ತದೆ. ಇದನ್ನು ನೋಡಿದಾಗ 'ಇವರು ಬಸ್ಸಿಗಾಗಿ ಕಾಯುತ್ತಿದ್ದಾರೋ ಅಥವಾ ಒಬ್ಬರಿಗೊಬ್ಬರು ಜಗಳವಾಡಿ ದೂರ ನಿಂತಿದ್ದಾರೋ?' ಎಂಬ ಅನುಮಾನ ಕಾಡುವುದು ಸಹಜ. ಆದರೆ ವಾಸ್ತವವೆಂದರೆ, ಅಲ್ಲಿನವರಿಗೆ ಅಷ್ಟು ದೂರವಿರುವುದೇ ನೆಮ್ಮದಿ. ಅಪ್ಪಿತಪ್ಪಿ ನೀವು ಅವರ ಹತ್ತಿರ ಹೋಗಿ ನಿಂತರೆ, ಅವರು ತಮ್ಮ 'ಗಂಟು ಕಿತ್ತು ಪರಾರಿಯಾಗಲು ಬಂದಿರಬಹುದು' ಎಂಬಂತೆ ಗಾಬರಿಯಿಂದ ನಿಮ್ಮನ್ನು ನೋಡುತ್ತಾರೆ. ಅವರ ಪಾಲಿಗೆ ಹತ್ತಿರ ಬರುವುದು ಎಂದರೆ ಅವರ ಖಾಸಗಿ ಬದುಕಿನ ಮೇಲೆ ಯುದ್ಧ ಸಾರಿದಂತೆ!

ನಮ್ಮ ಮಾರುಕಟ್ಟೆಗಳಲ್ಲಿ ಹಣ್ಣು-ತರಕಾರಿ ಮಾರುವವರ ಕೂಗಾಟ, ವಾಹನಗಳ ಹಾರ್ನ್ ಸದ್ದು, ಪಕ್ಕದ ಮನೆಯವರ ಜತೆಗಿನ ಹರಟೆ - ಇವೆಲ್ಲದರ ನಡುವೆ ಬೆಳೆದ ನಮಗೆ ಎಸ್ತೋನಿಯಾದ ಬೀದಿಗಳು ಸ್ಮಶಾನ ಮೌನವಾಗಿ ಕಾಣಿಸುತ್ತವೆ. ಅಲ್ಲಿನ ಜನರಿಗೆ 'ಮಾತೇ ಮುತ್ತು' ಎಂಬ ಗಾದೆಗಿಂತ 'ಮೌನವೇ ಬಂಗಾರ' ಎಂಬ ಮಾತು ಹೆಚ್ಚು ಪ್ರಿಯ. ಒಬ್ಬ ವ್ಯಕ್ತಿಯನ್ನು ಮಾತನಾಡಿಸದೆ ಇರುವುದೇ ಅವನಿಗೆ ಕೊಡುವ ಅತಿ ದೊಡ್ಡ ಗೌರವ ಎಂದು ಅವರು ಭಾವಿಸುತ್ತಾರೆ. ಅಲ್ಲಿನ ಕೆಫೆ ಅಥವಾ ರೆಸ್ಟೋರೆಂಟ್‌ಗಳಿಗೆ ಹೋದರೆ, ಜನರು ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದರೂ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡುವುದಿಲ್ಲ. ಕಣ್ಣಿಗೆ ಕಣ್ಣಿಟ್ಟು ನೋಡುವುದು ಅಲ್ಲಿ ದೊಡ್ಡ ಅಶಿಸ್ತು. ನೀವು ಯಾರನ್ನಾದರೂ ನೋಡಿ ಮುಗುಳ್ನಕ್ಕರೆ, ಅವರು 'ನನಗೆ ಇವರು ಪರಿಚಯವೇ ಇಲ್ಲವಲ್ಲ, ಯಾಕೆ ನಗುತ್ತಿದ್ದಾರೆ?' ಎಂದು ಆತಂಕಕ್ಕೊಳಗಾಗಬಹುದು.

ಎಸ್ತೋನಿಯಾದ ಈ ಅದ್ಭುತ ನಿಶ್ಶಬ್ದದ ನಡುವೆ, ನಮ್ಮ ದೇಶದ ಸಾಮಾನ್ಯ ಸನ್ನಿವೇಶಗಳೂ ಹೇಗೆ ತಮಾಷೆಯಾಗಿ ಬದಲಾಗುತ್ತವೆ ಎಂದರೆ... ಆ ಮೌನದ ವಾತಾವರಣದಲ್ಲಿ ನೀವು ಜೋರಾಗಿ ಒಂದೇ ಒಂದು ಸಲ ಸೀನಿದರೆ ಸಾಕು, ಅದು ಅವರಿಗೆ ಯಾವುದೋ ದೊಡ್ಡ ಪಟಾಕಿ ಸಿಡಿದಂತೆ ಭಾಸವಾಗುತ್ತದೆ. ಇಡೀ ರಸ್ತೆಯಲ್ಲಿರುವವರು ಒಮ್ಮೆಲೆ ತಿರುಗಿ ನೋಡುತ್ತಾರೆ. ಅವರ ದೃಷ್ಟಿಯಲ್ಲಿ ನೀವು ಆ ಕ್ಷಣದ 'ಶಬ್ದ ಮಾಲಿನ್ಯಗಾರ'ನಂತೆ ಕಾಣುತ್ತೀರಿ! ನಿಮ್ಮ ಮೊಬೈಲ್ ಏನಾದರೂ ಫುಲ್ ವಾಲ್ಯೂಮ್‌ನಲ್ಲಿ ರಿಂಗ್ ಆಯಿತೆಂದರೆ, ಅದು ಅಲ್ಲಿನ ಶಾಂತ ಕಣಿವೆಯಲ್ಲಿ ಕೇಳಿಸುವ ಭೂಕಂಪದ ಸದ್ದಿನಂತೆ ಇರುತ್ತದೆ. ನಮ್ಮ ಭಾರತದ ಲವಲವಿಕೆ, ಮಾತುಗಾರಿಕೆ ಮತ್ತು ಜನರ ನಡುವಿನ ಆತ್ಮೀಯತೆ ಒಂದೆಡೆಯಾದರೆ, ಎಸ್ತೋನಿಯನ್ನರ ಈ ಶಿಸ್ತಿನ ಮೌನ ಮತ್ತು ಅಂತರ ಇನ್ನೊಂದೆಡೆ. ನಮ್ಮಲ್ಲಿ ಹತ್ತಿರ ಬರುವುದು ಪ್ರೀತಿಯ ಸಂಕೇತವಾದರೆ, ಅವರಲ್ಲಿ ದೂರವಿರುವುದು ಗೌರವದ ಸಂಕೇತ. ಎಸ್ತೋನಿಯಾಕ್ಕೆ ಹೋದ ಪ್ರವಾಸಿಗರಿಗೆ ಆರಂಭದಲ್ಲಿ ಇದು ವಿಚಿತ್ರವೆನಿಸಿದರೂ, ಹೋದ ಕೆಲವೇ ದಿನಗಳಲ್ಲಿ ಆ ಮೌನದ ಸೌಂದರ್ಯ ಅರ್ಥವಾಗತೊಡಗುತ್ತದೆ. ಜನಜಂಗುಳಿಯ ನಡುವೆಯೂ ಮನುಷ್ಯ ಹೇಗೆ ತನ್ನದೇ ಆದ ಒಂದು ಶಾಂತ ಲೋಕವನ್ನು ಸೃಷ್ಟಿಸಿಕೊಳ್ಳಬಹುದು ಎಂಬುದಕ್ಕೆ ಎಸ್ತೋನಿಯಾ ಒಂದು ಅತ್ಯುತ್ತಮ ಉದಾಹರಣೆ.

Untitled design

ಸ್ವಿಟ್ಜರ್‌ಲ್ಯಾಂಡ್ ಎಂದ ಕೂಡಲೇ ನಮಗೆ ನೆನಪಾಗುವುದು ಮಂಜಿನ ಪರ್ವತಗಳು, ರುಚಿಕರವಾದ ಚಾಕೊಲೆಟ್ ಮತ್ತು ಕೈಗಡಿಯಾರಗಳು. ಆದರೆ ಈ ಸುಂದರ ದೇಶದ ಪ್ರಕೃತಿಯ ಆಚೆಗಿನ ಅವರ ಜೀವನ ಪದ್ಧತಿ ಮತ್ತು ಕೆಲವು ಸಂಪ್ರದಾಯಗಳು ಜಗತ್ತಿನ ಇತರ ಭಾಗಗಳಿಗಿಂತ ಬಹಳ ಭಿನ್ನವಾಗಿವೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಭಾನುವಾರವನ್ನು ಅತ್ಯಂತ ಪವಿತ್ರವಾದ ವಿರಾಮದ ದಿನವೆಂದು ಪರಿಗಣಿಸಲಾಗುತ್ತದೆ. ಅಂದು ಸಾರ್ವಜನಿಕವಾಗಿ ಯಾವುದೇ ಸದ್ದನ್ನು ಮಾಡುವುದು ಕಾನೂನುಬಾಹಿರ ಮತ್ತು ಅಲಿಖಿತ ನಿಯಮದಂತೆ ಪಾಲಿಸಲಾಗುತ್ತದೆ. ಭಾನುವಾರ ನೀವು ವಾಷಿಂಗ್ ಮೆಷಿನ್ ಬಳಸುವಂತಿಲ್ಲ, ಹುಲ್ಲು ಕತ್ತರಿಸುವ ಯಂತ್ರ (Lawn mower) ಚಾಲನೆ ಮಾಡುವಂತಿಲ್ಲ, ಅಥವಾ ಮನೆಯ ಗೋಡೆಗೆ ಮೊಳೆ ಹೊಡೆಯುವಂತಿಲ್ಲ. ನೆರೆಹೊರೆಯವರ ಶಾಂತಿಗೆ ಭಂಗ ಬರಬಾರದು ಎಂಬುದು ಇವರ ಉದ್ದೇಶ. ಮೌನವಾಗಿರುವುದು ಇಲ್ಲಿನ ಜನರ ಜೀವನದ ದೊಡ್ಡ ಮೌಲ್ಯ.

ಹಿಂದಿನ ಕಾಲದಲ್ಲಿ ಯುರೋಪಿನಲ್ಲಿ ಬಟ್ಟೆಯನ್ನು ಹೊರಗೆ ಒಣಗಿಸುವುದು ಎಂದರೆ 'ಅವರ ಮನೆಯಲ್ಲಿ ಡ್ರೈಯರ್ ಕೊಳ್ಳಲು ಹಣವಿಲ್ಲ' ಅಥವಾ 'ಅವರು ಹಿಂದುಳಿದವರು' ಎಂಬ ಮುಜುಗರದ ಭಾವನೆ ಇತ್ತು. ಈ ಸಾಮಾಜಿಕ ಒತ್ತಡ ಕೂಡ ಈ ನಿಯಮ ಇಷ್ಟು ಕಟ್ಟುನಿಟ್ಟಾಗಿ ಪಾಲನೆಯಾಗಲು ಒಂದು ಕಾರಣ. ನಮಗೆ ನಮ್ಮ ಮನೆಯ ಬಾಲ್ಕನಿಯಲ್ಲಿ ಬಟ್ಟೆ ಒಣಗಿಸುವುದು ನಮ್ಮ ಹಕ್ಕು ಎನ್ನಿಸಬಹುದು. ಆದರೆ ಯುರೋಪಿಯನ್ನರಿಗೆ ತಮ್ಮ ನಗರದ ಒಟ್ಟಾರೆ ಶಿಸ್ತು ಮತ್ತು ಸೌಂದರ್ಯ ಕಾಪಾಡುವುದು ತಮ್ಮ ಕರ್ತವ್ಯ ಎನ್ನಿಸುತ್ತದೆ. ಒಂದು ವೇಳೆ ನೀವು ಯುರೋಪಿನಲ್ಲಿ ಮನೆ ಬಾಡಿಗೆಗೆ ಪಡೆದರೆ, ಮೊದಲು ನಿಮ್ಮ ಬಾಲ್ಕನಿ ನಿಯಮಗಳನ್ನು ಓದಿಕೊಳ್ಳುವುದು ಉತ್ತಮ, ಇಲ್ಲದಿದ್ದರೆ ನೆರೆಹೊರೆಯವರಿಂದ 'ಕಂಪ್ಲೇಂಟ್' ಬರುವುದು ಖಚಿತ!

ಸ್ವಿಟ್ಜರ್‌ಲ್ಯಾಂಡ್‌ನ ಪ್ರತಿಯೊಂದು ಮನೆಯಲ್ಲೂ ಅಥವಾ ಅಪಾರ್ಟ್‌ಮೆಂಟ್ ಕಟ್ಟಡಗಳಲ್ಲಿ ಕಡ್ಡಾಯವಾಗಿ 'ಬಂಕರ್' (Bunkers) ಇರಲೇಬೇಕು ಎಂಬ ನಿಯಮವಿದೆ. 1960ರ ದಶಕದಿಂದಲೂ ಈ ನಿಯಮ ಜಾರಿಯಲ್ಲಿದೆ. ಅಕಸ್ಮಾತ್ ಜಗತ್ತಿನಲ್ಲಿ ಪರಮಾಣು ಯುದ್ಧ ಸಂಭವಿಸಿದರೆ, ಇಡೀ ದೇಶದ ಜನಸಂಖ್ಯೆಗೆ ರಕ್ಷಣೆ ನೀಡುವಷ್ಟು ಬಂಕರ್‌ಗಳು ಅಲ್ಲಿ ಸಿದ್ಧವಾಗಿವೆ. ಈ ಬಂಕರ್‌ಗಳನ್ನು ಜನರು ಈಗ ಹೆಚ್ಚಾಗಿ ವೈನ್ ಸಂಗ್ರಹಿಸಲು ಅಥವಾ ಹಳೆಯ ವಸ್ತುಗಳನ್ನು ಇಡಲು ಬಳಸುತ್ತಾರಾದರೂ, ಅವು ಸದಾ ಯುದ್ಧಕ್ಕೆ ಸಿದ್ಧವಾದ ಸ್ಥಿತಿಯಲ್ಲಿರಬೇಕು.

ಸ್ವಿಟ್ಜರ್‌ಲ್ಯಾಂಡ್‌ನ ಪ್ರಾಣಿ ದಯಾ ಕಾನೂನುಗಳು ಜಗತ್ತಿನಲ್ಲೇ ಅತ್ಯಂತ ಕಠಿಣವಾಗಿವೆ. ನೀವು ಮನೆಯಲ್ಲಿ ಒಂದೇ ಒಂದು 'ಗಿನಿ ಪಿಗ್' ಸಾಕುವುದು ಕಾನೂನುಬಾಹಿರ. ಯಾಕೆಂದರೆ ಇವು ಅತ್ಯಂತ ಸಾಮಾಜಿಕ ಪ್ರಾಣಿಗಳು, ಅವು ಒಬ್ಬಂಟಿಯಾಗಿದ್ದರೆ ಖಿನ್ನತೆಗೆ ಒಳಗಾಗುತ್ತವೆ ಎಂದು ನಂಬಲಾಗಿದೆ. ಹಾಗಾಗಿ ನೀವು ಅವುಗಳನ್ನು ಜೋಡಿಯಾಗಿಯೇ ಸಾಕಬೇಕು. ಒಂದು ವೇಳೆ ಒಂದು ಗಿನಿ ಪಿಗ್ ಸತ್ತುಹೋದರೆ, ಇನ್ನೊಂದಕ್ಕೆ ತಕ್ಷಣವೇ ಸಾಂಗತ್ಯ ನೀಡಲು ಬಾಡಿಗೆಗೆ ನೀಡುವ ಸಂಸ್ಥೆಗಳೂ ಅಲ್ಲಿವೆ! ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಯಾವುದೇ ಹೊಸ ಕಾನೂನು ಬರಬೇಕೆಂದರೆ ಅಥವಾ ಸಣ್ಣ ಬದಲಾವಣೆ ಆಗಬೇಕೆಂದರೂ ಜನರ ಅಭಿಪ್ರಾಯ ಕೇಳಲಾಗುತ್ತದೆ. ವರ್ಷಕ್ಕೆ ಹಲವು ಬಾರಿ ಅಲ್ಲಿನ ನಾಗರಿಕರು ಮತದಾನ ಮಾಡುತ್ತಾರೆ. ಕೇವಲ ಪ್ರಧಾನಿಯನ್ನು ಆರಿಸುವುದಕ್ಕಲ್ಲ, ಬದಲಿಗೆ 'ನಮ್ಮ ಊರಿನಲ್ಲಿ ರಸ್ತೆ ಹೀಗೆ ಇರಬೇಕಾ?' ಅಥವಾ 'ತೆರಿಗೆ ಏರಿಸಬೇಕಾ?' ಎಂಬ ಸಣ್ಣ ವಿಷಯಗಳಿಗೂ ಜನರೇ ನಿರ್ಧರಿಸುತ್ತಾರೆ. ಜನರೇ ಇಲ್ಲಿ ನಿಜವಾದ ಸರ್ವೋಚ್ಚ ಅಧಿಕಾರವನ್ನು ಹೊಂದಿರುತ್ತಾರೆ.

ಇನ್ನು ಕಸದ ವಿಲೇವಾರಿಯನ್ನಂತೂ ಒಂದು ಕಾಯಕದಂತೆ, ಒಂದು ಜವಾಬ್ದಾರಿಯಂತೆ ಅಲ್ಲಿನ ಜನ ಪಾಲಿಸುತ್ತಾರೆ. ಸ್ವಿಟ್ಜರ್‌ಲ್ಯಾಂಡ್ ಎಂದರೆ ಕೇವಲ ಹಿಮಭರಿತ ಪರ್ವತಗಳಲ್ಲ ಅಥವಾ ಚಾಕೊಲೆಟ್‌ಗಳ ಮಧುರ ಲೋಕವಲ್ಲ; ಅದು ಶಿಸ್ತಿನ ಪರಾಕಾಷ್ಠೆ. ಅಲ್ಲಿನ ಸುಂದರ ಬೀದಿಗಳ ಹಿಂದೆ ಕಣ್ಣಿಗೆ ಕಾಣದ ಒಂದು ಕಠಿಣ ವ್ಯವಸ್ಥೆಯಿದೆ. ಆ ವ್ಯವಸ್ಥೆಯ ಪ್ರಮುಖ ಅಂಗವೇ 'ಪೇ ಆಸ್ ಯೂ ಥ್ರೋ' (Pay-as-you-throw) ಎನ್ನುವ ಕಸದ ವಿಲೇವಾರಿ ನೀತಿ. ಇಲ್ಲಿ ನೀವು ನಿಮ್ಮ ಮನೆಯ ಕಸವನ್ನು ಅತ್ತ ಇತ್ತ ಎಸೆಯುವಂತಿಲ್ಲ ಅಥವಾ ಸಾಮಾನ್ಯ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಕಸದ ಗಾಡಿಗೆ ಹಾಕುವಂತಿಲ್ಲ. ಪ್ರತಿ ನಗರವೂ ತನ್ನದೇ ಆದ ಅಧಿಕೃತ ಕಸದ ಚೀಲಗಳನ್ನು (Official Bin Bags) ಹೊಂದಿರುತ್ತದೆ. ಇವುಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಅಥವಾ ಕಿರಾಣಿ ಅಂಗಡಿಗಳಲ್ಲಿ ಹಣ ಕೊಟ್ಟು ಖರೀದಿಸಬೇಕು. ಈ ಚೀಲಗಳ ಬೆಲೆ ಸಾಮಾನ್ಯ ಚೀಲಗಳಿಗಿಂತ ಹತ್ತಾರು ಪಟ್ಟು ಹೆಚ್ಚಿರುತ್ತದೆ. ನೀವು ಆ ಚೀಲಕ್ಕೆ ನೀಡುವ ಹಣವೇ ವಾಸ್ತವದಲ್ಲಿ ನೀವು ಸರಕಾರಕ್ಕೆ ಪಾವತಿಸುವ 'ಕಸದ ತೆರಿಗೆ'.

ಅಂದರೆ, ನೀವು ಎಷ್ಟು ಹೆಚ್ಚು ಕಸ ಮಾಡುತ್ತೀರೋ, ಅಷ್ಟು ಹೆಚ್ಚು ಹಣವನ್ನು ಚೀಲಗಳ ರೂಪದಲ್ಲಿ ವ್ಯಯಿಸಬೇಕಾಗುತ್ತದೆ. ಕಸದ ಚೀಲಗಳು ದುಬಾರಿಯಾದಾಗ ಜನರು ಸಹಜವಾಗಿಯೇ ಕಸವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ. ಇದು ಗ್ರಾಹಕರಲ್ಲಿ ಅನಗತ್ಯ ಪ್ಯಾಕೇಜಿಂಗ್ ಇರುವ ವಸ್ತುಗಳನ್ನು ಖರೀದಿಸದಂತೆ ಪ್ರೇರೇಪಿಸುತ್ತದೆ. ಒಂದು ವೇಳೆ ಯಾರಾದರೂ ಹಣ ಉಳಿಸಲು ಸಾಮಾನ್ಯ ಚೀಲದಲ್ಲಿ ಕಸ ಹಾಕಿ ಬೀದಿಗೆ ಎಸೆದರೆ, ಅಲ್ಲಿನ 'ಕಸದ ಪೊಲೀಸರು' (Trash Police) ಆ ಚೀಲವನ್ನು ಜಾಲಾಡಿ, ಅದರೊಳಗಿರುವ ಹಳೆಯ ಬಿಲ್ ಅಥವಾ ವಿಳಾಸದ ಚೀಟಿಗಳನ್ನು ಹುಡುಕಿ ತಪ್ಪಿತಸ್ಥರನ್ನು ಪತ್ತೆಹಚ್ಚುತ್ತಾರೆ. ಅಂಥವರಿಗೆ ವಿಧಿಸುವ ದಂಡದ ಮೊತ್ತ ಬಹಳ ದೊಡ್ಡದಾಗಿರುತ್ತದೆ. ಒಂದು ದೇಶದ ಸೌಂದರ್ಯ ಕೇವಲ ಪ್ರಕೃತಿಯಲ್ಲಿಲ್ಲ, ಅದು ಅಲ್ಲಿನ ಜನರು ಪಾಲಿಸುವ ಕಾನೂನಿನಲ್ಲಿದೆ ಎಂಬುದಕ್ಕೆ ಇದು ಸಾಕ್ಷಿ.

ನಾನು ಉಜ್ಬೇಕಿಸ್ತಾನದ ರಾಜಧಾನಿ ತಾಷ್ಕೆಂಟ್‌ಗೆ ಹೋದಾಗ ಅಲ್ಲಿನ ಕೆಲವು ವಿಚಿತ್ರ ಎನ್ನಿಸುವ ಕಾನೂನುಗಳು ಮತ್ತು ಕಟ್ಟುನಿಟ್ಟಾದ ನಿಯಮಗಳು ಅಚ್ಚರಿ ಮೂಡಿಸಿದ್ದವು. ನೀವು ಅಲ್ಲಿಗೆ ಹೋದಾಗ, ಪ್ರತಿ ದಿನವೂ ನೀವು ಎಲ್ಲಿದ್ದೀರಿ ಎಂಬ ಬಗ್ಗೆ ಅಧಿಕೃತ ದಾಖಲೆ ಇರಬೇಕು. ನೀವು ಹೊಟೇಲ್ ಅಥವಾ ಹಾಸ್ಟೆಲ್‌ನಲ್ಲಿ ಉಳಿದುಕೊಂಡಾಗ, ಅವರು ನಿಮಗೆ ಒಂದು ಪುಟ್ಟ ಕಾಗದದ ಚೀಟಿ (Registration Slip) ನೀಡುತ್ತಾರೆ. ನೀವು ದೇಶ ಬಿಟ್ಟು ಹೊರಬರುವಾಗ ವಿಮಾನ ನಿಲ್ದಾಣದಲ್ಲಿ ಈ ಎಲ್ಲ ಚೀಟಿಗಳನ್ನು ತೋರಿಸಬೇಕಾಗಬಹುದು. ಒಂದು ದಿನದ ಚೀಟಿ ಮಿಸ್ ಆದರೂ ನೀವು ದೊಡ್ಡ ಮೊತ್ತದ ದಂಡ ತೆರಬೇಕಾಗುತ್ತದೆ ಅಥವಾ ವಿಚಾರಣೆಗೆ ಒಳಗಾಗಬೇಕಾಗುತ್ತದೆ. ಈ ಕಟ್ಟುನಿಟ್ಟಾದ ಕ್ರಮವು ಪ್ರವಾಸಿಗರ ಸುರಕ್ಷತೆ ಮತ್ತು ದೇಶದ ಭದ್ರತೆಯ ದೃಷ್ಟಿಯಿಂದ ಜಾರಿಯಲ್ಲಿದೆ. ಯಾರು ಎಲ್ಲಿಗೆ ಹೋಗುತ್ತಿದ್ದಾರೆ ಮತ್ತು ಎಷ್ಟು ದಿನ ಉಳಿಯುತ್ತಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಸರಕಾರದ ಬಳಿ ಇರಬೇಕೆಂಬುದು ಇದರ ಉದ್ದೇಶ. ಡಿಜಿಟಲ್ ಯುಗದಲ್ಲೂ ಈ ಕಾಗದದ ಚೀಟಿಗಳ ಮಹತ್ವ ಅಲ್ಲಿ ಕುಂದಿಲ್ಲ. ತಾಷ್ಕೆಂಟ್‌ನ ಮಾರುಕಟ್ಟೆಗಳಲ್ಲಿ ಸುತ್ತಾಡುವಾಗ ಅಥವಾ ಮೆಟ್ರೋದಲ್ಲಿ ಪ್ರಯಾಣಿಸುವಾಗ ಈ ನಿಯಮಗಳು ನಮಗೆ ಸ್ವಲ್ಪ ಕಿರಿಕಿರಿ ಅನಿಸಿದರೂ, ದೇಶ ಬಿಟ್ಟು ವಿಮಾನ ಹತ್ತುವಾಗ ಆ ಚೀಟಿಗಳ ಕಂತೆ ನಮ್ಮ ಕೈಲಿದ್ದರೆ ಸಿಗುವ ನೆಮ್ಮದಿಯೇ ಬೇರೆ. ಒಂದು ದೇಶದ ಸಾರ್ವಭೌಮತ್ವ ಮತ್ತು ಭದ್ರತೆಯು ಇಂಥ ಸಣ್ಣ ಕಾಗದದ ತುಣುಕುಗಳಲ್ಲಿ ಅಡಗಿರುತ್ತದೆ ಎಂಬುದು ನಿಜಕ್ಕೂ ಅಚ್ಚರಿಯ ಸಂಗತಿ.

ತಾಷ್ಕೆಂಟ್‌ನ ಮೆಟ್ರೋ ನಿಲ್ದಾಣಗಳು ಜಗತ್ತಿನಲ್ಲೇ ಅತ್ಯಂತ ಸುಂದರವಾದ ನಿಲ್ದಾಣಗಳಲ್ಲಿ ಒಂದಾಗಿವೆ. ಆದರೆ 2018ರವರೆಗೆ ಇಲ್ಲಿ ಫೊಟೋ ತೆಗೆಯುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು. ಈ ಮೆಟ್ರೋ ನಿಲ್ದಾಣಗಳನ್ನು ಪರಮಾಣು ಬಾಂಬ್ ದಾಳಿಯ ಸಮಯದಲ್ಲಿ ಆಶ್ರಯ ತಾಣಗಳನ್ನಾಗಿ (Nuclear Shelters) ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಇವುಗಳನ್ನು 'ರಹಸ್ಯ ಮಿಲಿಟರಿ ತಾಣ'ಗಳೆಂದು ಪರಿಗಣಿಸಲಾಗಿತ್ತು. ಈಗ ಕಾನೂನು ಸ್ವಲ್ಪ ಸಡಿಲಿಕೆಯಾಗಿದ್ದರೂ, ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಇಂದಿಗೂ ಕ್ಯಾಮೆರಾ ಬಳಕೆಗೆ ಕಟ್ಟುನಿಟ್ಟಾದ ನಿರ್ಬಂಧಗಳಿವೆ. ಉಜ್ಬೇಕಿಸ್ತಾನ್‌ನ ಕಸ್ಟಮ್ಸ್ ಕಾನೂನುಗಳು ಔಷಧಿಗಳ ವಿಷಯದಲ್ಲಿ ಬಹಳ ಕಟ್ಟುನಿಟ್ಟು. ಭಾರತದಲ್ಲಿ ಅಥವಾ ಇತರ ದೇಶಗಳಲ್ಲಿ ಸಾಮಾನ್ಯ ಎನ್ನಿಸುವ ಕೆಲವು ನೋವು ನಿವಾರಕಗಳು ಅಥವಾ ನಿದ್ರೆ ಬರುವ ಮಾತ್ರೆಗಳು (ಉದಾಹರಣೆಗೆ Codeine ಹೊಂದಿರುವ ಔಷಧಿಗಳು) ಉಜ್ಬೇಕಿಸ್ತಾನ್‌ನಲ್ಲಿ 'ಮಾದಕ ದ್ರವ್ಯ'ಗಳ ಪಟ್ಟಿಗೆ ಸೇರುತ್ತವೆ. ನಿಮ್ಮ ಹತ್ತಿರ ವೈದ್ಯರ ಚೀಟಿ (Prescription) ಇಲ್ಲದೇ ಇಂಥ ಮಾತ್ರೆಗಳು ಕಂಡುಬಂದರೆ ನೀವು ದೊಡ್ಡ ಸಂಕಷ್ಟಕ್ಕೆ ಸಿಲುಕಬಹುದು.

ನಾನು ಕಳೆದ ವರ್ಷ ಸೆಶೆಲ್ಸ್ (Seychelles)ಗೆ ಹೋಗಿದ್ದೆ. ಒಬ್ಬ ಪ್ರವಾಸಿಯಾಗಿ ಅಲ್ಲಿಗೆ ಕಾಲಿಟ್ಟಾಗ, ಅಲ್ಲಿನ ಭೌಗೋಳಿಕ ಸೌಂದರ್ಯಕ್ಕಿಂತಲೂ ಹೆಚ್ಚಾಗಿ ಅಲ್ಲಿನ ಜೀವನಶೈಲಿ ಮತ್ತು ಸಂಸ್ಕೃತಿ ನಮಗೆ ಒಂದು ರೀತಿಯ 'ಸಾಂಸ್ಕೃತಿಕ ಆಘಾತ' (Cultural Shock) ನೀಡುತ್ತದೆ. ನಮ್ಮ ಬೆಂಗಳೂರಿನಂಥ ನಗರಗಳಲ್ಲಿ ನಾವು ಸದಾ ಗಡಿಯಾರದ ಮುಳ್ಳಿನಂತೆ ಓಡುತ್ತಿರುತ್ತೇವೆ. ಆದರೆ ಸೆಶೆಲ್ಸ್‌ನಲ್ಲಿ ಬದುಕು ಅತ್ಯಂತ ನಿಧಾನ. ಇದನ್ನು ಅಲ್ಲಿನವರು 'Island Time' ಎನ್ನುತ್ತಾರೆ. ನೀವು ರೆಸ್ಟೋರೆಂಟ್‌ನಲ್ಲಿ ಆಹಾರ ಆರ್ಡರ್ ಮಾಡಿದರೆ ಅದು ನಿಮ್ಮ ಮೇಜಿಗೆ ಬರಲು ಒಂದು ಗಂಟೆಯೂ ಆಗಬಹುದು. ಅಲ್ಲಿ ಯಾರೂ ಅವಸರ ಮಾಡುವುದಿಲ್ಲ. ಕೆಲಸಕ್ಕಿಂತ ಹೆಚ್ಚಾಗಿ ಜೀವನವನ್ನು ಸವಿಯುವುದಕ್ಕೆ ಅಲ್ಲಿ ಆದ್ಯತೆ. ಹೊಟೇಲ್ ಸಿಬ್ಬಂದಿಯಿಂದ ಹಿಡಿದು ಸರಕಾರಿ ಕೆಲಸದವರೆಗೆ ಎಲ್ಲವೂ ನಮ್ಮ ನಿರೀಕ್ಷೆಗಿಂತ ತುಂಬಾ ನಿಧಾನವಾಗಿ ಸಾಗುತ್ತದೆ. ವಾರದ ದಿನಗಳಲ್ಲಿ ಸಂಜೆ ಆರು ಗಂಟೆಯ ನಂತರ ಇಡೀ ದ್ವೀಪವೇ ನಿದ್ರೆಗೆ ಜಾರಿದಂತೆ ಭಾಸವಾಗುತ್ತದೆ. ಅಂಗಡಿಗಳು ಮುಚ್ಚಿರುತ್ತವೆ ಮತ್ತು ಬೀದಿಗಳು ಖಾಲಿಯಾಗಿರುತ್ತವೆ. ಸದಾ ಸದ್ದುಗದ್ದಲದ ನಡುವೆ ಇರುವ ನಮಗೆ ಈ ಮೌನ ಅಚ್ಚರಿ ಮೂಡಿಸುತ್ತದೆ. ಆದರೆ ವಾರಾಂತ್ಯ ಬಂತೆಂದರೆ ಅದೇ ಜನರು ಸಮುದ್ರ ತೀರದಲ್ಲಿ ಸಂಗೀತ ಮತ್ತು ಬಾರ್ಬೆಕ್ಯೂ ಪಾರ್ಟಿಗಳೊಂದಿಗೆ ಸಂಭ್ರಮಿಸುವುದನ್ನು ನೋಡಿದಾಗ ಅವರ ಜೀವನದ ಎರಡು ಮುಖಗಳು ಪರಿಚಯವಾಗುತ್ತವೆ.

ನಾನು ಮೊದಲ ಬಾರಿಗೆ ಐಸ್ಲ್ಯಾಂಡ್ ಗೆ ಹೋದಾಗ, ಅದು ಅಗ್ನಿ ಮತ್ತು ಹಿಮದ ನಾಡು (Land of Fire and Ice) ಮಾತ್ರವಲ್ಲ, ವಿಚಿತ್ರ ಮತ್ತು ಕುತೂಹಲಕಾರಿ ನಿಯಮಗಳ ನಾಡು ಕೂಡ ಹೌದು ಇಂದು ಅನಿಸಿತು. ಐಸ್‌ಲ್ಯಾಂಡ್‌ನಲ್ಲಿ ನಮ್ಮ ಮಕ್ಕಳಿಗೆ ಹೆಸರಿಡಲೂ ಸರಕಾರದ ಅನುಮತಿ ಬೇಕು! ಎಂಬ ಸಂಗತಿ ಕೇಳಿ ಆಶ್ಚರ್ಯವಾಗಿತ್ತು. ಕಾರಣ ಅಲ್ಲಿ ಮಗುವಿಗೆ ಹೆಸರಿಡುವುದು ಕೇವಲ ಪೋಷಕರ ಆಯ್ಕೆಯಲ್ಲ, ಅದು ಆ ದೇಶದ ಭಾಷಾ ಪರಂಪರೆಯ ಒಂದು ಭಾಗ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಮಗುವಿಗೆ ಹೆಸರಿಡುವುದು ತಂದೆ-ತಾಯಿಯರ ಹಕ್ಕು ಮತ್ತು ಸಂಭ್ರಮ. ಆದರೆ ಐಸ್‌ಲ್ಯಾಂಡ್‌ನಲ್ಲಿ ಈ ಸಂಭ್ರಮಕ್ಕೆ ಒಂದು ಸಾಂಸ್ಕೃತಿಕ ಚೌಕಟ್ಟಿದೆ. ಅಲ್ಲಿ 'ಐಸ್‌ಲ್ಯಾಂಡಿಕ್ ನೇಮಿಂಗ್ ಕಮಿಟಿ' ಅಥವಾ ಸ್ಥಳೀಯವಾಗಿ 'ಮನ್ನಾಫೆನ್ಸ್‌ನೆಫಂಡ್' ಎಂದು ಕರೆಯಲ್ಪಡುವ ಅಧಿಕೃತ ಸಮಿತಿಯ ಅನುಮತಿ ಇಲ್ಲದೆ ಯಾವುದೇ ಹೆಸರನ್ನು ಅಧಿಕೃತವಾಗಿ ನೋಂದಾಯಿಸುವಂತಿಲ್ಲ. ಐಸ್‌ಲ್ಯಾಂಡಿಕ್ ಭಾಷೆಯು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಈ ಭಾಷೆಯ ವ್ಯಾಕರಣ ಅತ್ಯಂತ ಜಟಿಲವಾದುದು ಮತ್ತು ವಿಶಿಷ್ಟವಾದುದು.

ಮಗುವಿನ ಹೆಸರು ಐಸ್‌ಲ್ಯಾಂಡಿಕ್ ಭಾಷೆಯ ವ್ಯಾಕರಣದ ನಿಯಮಗಳಿಗೆ ಹೊಂದಿಕೆಯಾಗಬೇಕು ಎಂಬುದು ಈ ಸಮಿತಿಯ ಮೊದಲ ಷರತ್ತು. ಅನ್ಯಭಾಷೆಯ ಪ್ರಭಾವದಿಂದ ಅಥವಾ ಆಧುನಿಕತೆಯ ಭರಾಟೆಯಲ್ಲಿ ತಮ್ಮ ಮೂಲ ಭಾಷೆಯ ಸೌಂದರ್ಯಕ್ಕೆ ಧಕ್ಕೆಯಾಗಬಾರದು ಎಂಬುದು ಈ ನಿಯಮದ ಹಿಂದಿರುವ ಮುಖ್ಯ ಉದ್ದೇಶ. ಸರಕಾರವು ಸುಮಾರು 1800 ಗಂಡು ಮಕ್ಕಳ ಮತ್ತು 1800 ಹೆಣ್ಣು ಮಕ್ಕಳ ಹೆಸರಿನ ಅಧಿಕೃತ ಪಟ್ಟಿಯನ್ನು ಹೊಂದಿದೆ. ಪೋಷಕರು ಈ ಪಟ್ಟಿಯಿಂದಲೇ ಹೆಸರನ್ನು ಆರಿಸಿಕೊಳ್ಳಬೇಕು. ಒಂದು ವೇಳೆ ಪೋಷಕರಿಗೆ ಈ ಪಟ್ಟಿಯಲ್ಲಿಲ್ಲದ ಹೊಸ ಹೆಸರನ್ನು ಇಡಬೇಕೆಂದಿದ್ದರೆ, ಅವರು ಮೊದಲು ಸಮಿತಿಗೆ ಅರ್ಜಿ ಸಲ್ಲಿಸಬೇಕು. ಆ ಹೆಸರು ಭಾಷಾ ನಿಯಮಗಳಿಗೆ ಬದ್ಧವಾಗಿರಬೇಕು ಮತ್ತು ಐಸ್‌ಲ್ಯಾಂಡಿಕ್ ಅಕ್ಷರಮಾಲೆಯಲ್ಲಿರುವ ಅಕ್ಷರಗಳನ್ನೇ ಹೊಂದಿರಬೇಕು. ಮುಖ್ಯವಾಗಿ, ಆ ಹೆಸರು ಮಗು ಬೆಳೆದು ದೊಡ್ಡವನಾದ ಮೇಲೆ ಸಮಾಜದಲ್ಲಿ ಮುಜುಗರ ಅಥವಾ ಅವಮಾನ ಉಂಟುಮಾಡುವಂತಿರಬಾರದು. ಪೋಷಕರು ಭಾವೋದ್ರೇಕದಲ್ಲಿ ವಿಚಿತ್ರ ಹೆಸರಿಟ್ಟು ಮಗುವಿನ ಭವಿಷ್ಯವನ್ನು ಸಂಕಷ್ಟಕ್ಕೆ ದೂಡಬಾರದು ಎಂಬ ಕಾಳಜಿ ಇಲ್ಲಿ ಎದ್ದು ಕಾಣುತ್ತದೆ.

Untitled design (2)

ರಾಜಧಾನಿ ರೇಕ್ಯಾವಿಕ್‌ನಲ್ಲಿ ನಾಯಿಗಳಿಗಿಂತ ಬೆಕ್ಕುಗಳೇ ಯಾಕೆ ಸಾರ್ವಭೌಮರು ಎಂದು ನನ್ನ ಸ್ನೇಹಿತರು ಹೇಳಿದಾಗ ನನಗೆ ಆಶ್ಚರ್ಯವಾಗಿತ್ತು. ಅದಕ್ಕೆ ಕಾರಣವನ್ನು ಅವರೇ ವಿವರಿಸಿದರು. ವಿಶ್ವದ ಅತ್ಯಂತ ಶಾಂತ ಮತ್ತು ಸುಂದರ ನಗರಗಳಲ್ಲಿ ಒಂದಾದ ರೇಕ್ಯಾವಿಕ್‌ನಲ್ಲಿ ಸುಮಾರು ಆರು ದಶಕಗಳ ಕಾಲ (1924-1984) ನಾಯಿಗಳನ್ನು ಸಾಕುವುದನ್ನು ಕಾನೂನುಬಾಹಿರ ಎಂದು ಘೋಷಿಸಲಾಗಿತ್ತು. ನಾಯಿಯನ್ನು ಸಾಕುಪ್ರಾಣಿಯಾಗಿ ಮನೆಯಲ್ಲಿಟ್ಟುಕೊಳ್ಳುವುದು ಅಲ್ಲಿ ಶಿಕ್ಷಾರ್ಹ ಅಪರಾಧವಾಗಿತ್ತು. ಈ ಕಟ್ಟುನಿಟ್ಟಾದ ನಿಯಮದ ಹಿಂದೆ ಯಾವುದೇ ಕ್ರೌರ್ಯವಿರಲಿಲ್ಲ, ಬದಲಾಗಿ ಸಾರ್ವಜನಿಕ ಆರೋಗ್ಯದ ಭೀತಿಯಿತ್ತು. ಆ ಸಮಯದಲ್ಲಿ ನಾಯಿಗಳಿಂದ 'ಎಕಿನೊಕೊಕೊಸಿಸ್' ಎಂಬ ಅಪಾಯಕಾರಿ ಕಾಯಿಲೆ ಹರಡುತ್ತಿತ್ತು. ಇದು ನಾಯಿಗಳಿಂದ ಮನುಷ್ಯರಿಗೆ ಹರಡುವ ಒಂದು ರೀತಿಯ ಪರಾವಲಂಬಿ ಹುಳುಗಳ ಸೋಂಕು. ನಗರ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಈ ಕಾಯಿಲೆ ಸಾಂಕ್ರಾಮಿಕವಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ನಗರ ಸಭೆಯು ನಾಯಿ ಸಾಕಣೆಯನ್ನೇ ಸಂಪೂರ್ಣವಾಗಿ ನಿಷೇಧಿಸಿತು. ನಾಯಿಗಳ ಮೇಲೆ ನಿಷೇಧವಿದ್ದ ಆ 60 ವರ್ಷಗಳಲ್ಲಿ, ಐಸ್‌ಲ್ಯಾಂಡ್ ನಿವಾಸಿಗಳು ಬೆಕ್ಕುಗಳನ್ನು ಅಪ್ಪಿಕೊಂಡರು. ಯಾವುದೇ ಅಡೆತಡೆಯಿಲ್ಲದೆ ಬೆಕ್ಕುಗಳು ನಗರದ ಮೂಲೆ ಮೂಲೆಯಲ್ಲೂ ಮನೆಮಾಡಿದವು. ಇಂದಿಗೂ ರೇಕ್ಯಾವಿಕ್‌ನ ಬೀದಿಗಳಲ್ಲಿ ಬೆಕ್ಕುಗಳು ರಾಜಾರೋಷವಾಗಿ ಓಡಾಡುವುದನ್ನು ಕಾಣಬಹುದು. 1984ರಲ್ಲಿ ನಾಯಿಗಳ ಮೇಲಿನ ನಿಷೇಧ ಸಡಿಲಿಕೆಯಾಯಿತಾದರೂ, ಇಂದಿಗೂ ನಾಯಿ ಸಾಕಲು ಅಲ್ಲಿ ಹರಸಾಹಸ ಪಡಬೇಕು.

ಇದನ್ನೂ ಓದಿ: ಫಿಲಿಪ್ಪೈನ್ಸ್ ನ ಪಗಸಂಜನ್ ಫಾಲ್ಸ್ ಪಯಣ

1987 ರವರೆಗೆ ಐಸ್‌ಲ್ಯಾಂಡ್‌ನಲ್ಲಿ ಪ್ರತಿ ಗುರುವಾರ ಟಿವಿ ಪ್ರಸಾರವನ್ನು ನಿಲ್ಲಿಸಲಾಗುತ್ತಿತ್ತು. ಅಷ್ಟೇ ಅಲ್ಲ, ಜುಲೈ ತಿಂಗಳು ಪೂರ್ತಿ ಟಿವಿಯಲ್ಲಿ ಯಾವುದೇ ಕಾರ್ಯಕ್ರಮಗಳು ಬರುತ್ತಿರಲಿಲ್ಲ. ಕಾರಣ ಜನರು ಪರಸ್ಪರ ಮಾತುಕತೆ ನಡೆಸಲಿ, ಪುಸ್ತಕ ಓದಲಿ ಮತ್ತು ಹೊರಗೆ ಹೋಗಿ ಪ್ರಕೃತಿಯನ್ನು ಸವಿಯಲಿ ಎಂಬುದು ಇದರ ಉದ್ದೇಶವಾಗಿತ್ತು. ಈಗ 24 ಗಂಟೆ ಟಿವಿ ಲಭ್ಯವಿದ್ದರೂ, ಹಿರಿಯ ತಲೆಮಾರಿನವರು ಇಂದಿಗೂ ಆ ದಿನಗಳನ್ನು ಮೆಲುಕು ಹಾಕುತ್ತಾರೆ.

ಈ ಜಗತ್ತು ಅದೆಷ್ಟು ವೈವಿಧ್ಯಮಯ ಎಂದರೆ, ನಕ್ಷೆಯ ಮೇಲೆ ನಾವು ಗುರುತಿಸುವ ಸಣ್ಣ ಚುಕ್ಕೆಯಂತಿರುವ ದೇಶವೂ ತನ್ನೊಳಗೆ ಒಂದು ಬ್ರಹ್ಮಾಂಡವನ್ನೇ ಅಡಗಿಸಿಕೊಂಡಿರುತ್ತದೆ. ತಾಷ್ಕೆಂಟ್‌ನ ಕಾಗದದ ಚೀಟಿಯಿಂದ ಐಸ್‌ಲ್ಯಾಂಡ್‌ನ ಟಿವಿ ವಿರಾಮದವರೆಗೆ—ಪ್ರತಿಯೊಂದು ನಿಯಮವೂ ಆ ಮಣ್ಣಿನ ಗುಣವನ್ನು ಸಾರುತ್ತದೆ. ಯಾವ ದೇಶವೂ ನೋಡಲೇಬಾರದಷ್ಟು ನೀರಸವಾಗಿರುವುದಿಲ್ಲ; ಏಕೆಂದರೆ ಪ್ರತಿಯೊಂದು ದೇಶಕ್ಕೂ ತನ್ನದೇ ಆದ 'ಆತ್ಮ' ಇರುತ್ತದೆ. ಒಂದು ದೇಶದ ಸೌಂದರ್ಯ ಕೇವಲ ಅಲ್ಲಿನ ಪರ್ವತಗಳಲ್ಲೋ ಅಥವಾ ಅರಮನೆಗಳಲ್ಲೋ ಇರುವುದಿಲ್ಲ, ಬದಲಾಗಿ ಅಲ್ಲಿನ ಜನರು ಕಟ್ಟಿಕೊಂಡ ವಿಚಿತ್ರ ಎನ್ನಿಸುವ ಸಂಪ್ರದಾಯಗಳಲ್ಲಿ, ಅವರು ಭಾಷೆಯನ್ನು ಪ್ರೀತಿಸುವ ರೀತಿಯಲ್ಲಿ ಮತ್ತು ಕಸವನ್ನೂ ಒಂದು ಶಿಸ್ತಿನ ಭಾಗವಾಗಿ ನೋಡುವ ಅವರ ದೃಷ್ಟಿಕೋನದಲ್ಲಿ ಇರುತ್ತದೆ. ಪ್ರತಿ ದೇಶವೂ ನಮಗೊಂದು ಹೊಸ ಪಾಠ ಕಲಿಸುತ್ತದೆ, ನಮ್ಮೊಳಗಿನ ಪೂರ್ವಗ್ರಹಗಳನ್ನು ಕಳಚುತ್ತದೆ. ಈ ವೈವಿಧ್ಯವೇ ಈ ಜಗತ್ತನ್ನು ಅನ್ವೇಷಿಸಲು ಯೋಗ್ಯವಾದ ಜಾಗವನ್ನಾಗಿ ಮಾಡಿದೆ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?