ಛಲ, ಸಾಹಸವೇ ಆಕೆಯ ಇಂಧನ: ಡೆರ್ವ್ಲಾ ಮರ್ಫಿ ಎಂಬ ಅದಮ್ಯ ಚೇತನ
ಮರ್ಫಿ ದಟ್ಟವಾದ ಹಿಮದ ನಡುವೆ, ರಸ್ತೆಗಳೇ ಕಾಣದ ಸ್ಥಿತಿಯಲ್ಲಿ ಸೈಕಲ್ ತುಳಿಯಲಾರಂಭಿಸಿದಳು. ಪ್ರಯಾಣದ ಆರಂಭದಲ್ಲಿ ಡೆರ್ವ್ಲಾ ತನ್ನ ಮನೆಯವರಿಗೆ ಮತ್ತು ಸ್ನೇಹಿತರಿಗೆ ನಿಯಮಿತವಾಗಿ ಪತ್ರಗಳನ್ನು ಬರೆಯುತ್ತಿದ್ದಳು. ಆದರೆ ಯುಗೊಸ್ಲಾವಿಯಾವನ್ನು ತಲುಪುವಷ್ಟರಲ್ಲಿ ಪರಿಸ್ಥಿತಿ ಬದಲಾಯಿತು. ಭೀಕರ ಚಳಿಯಿಂದಾಗಿ ಅಂಚೆ ವ್ಯವಸ್ಥೆಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ದಾರಿಯಲ್ಲಿ ಅವಳು ಎದುರಿಸುತ್ತಿದ್ದ ಅನುಭವಗಳು ಎಷ್ಟು ಗಾಢವಾಗಿದ್ದವು ಎಂದರೆ, ಅವುಗಳನ್ನು ಕೇವಲ ಸಣ್ಣ ಪತ್ರಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಅವಳು ಪತ್ರಗಳ ಬದಲು ಪ್ರತಿದಿನದ ಘಟನೆಗಳನ್ನು ಒಂದು ದಿನಚರಿಯಲ್ಲಿ ದಾಖಲಿಸಲು ನಿರ್ಧರಿಸಿದಳು.
ಮೌನ ಸವಾರಿಯ ಮಹಾಯಾತ್ರೆ: ಐರ್ಲೆಂಡ್‌ನಿಂದ ಭಾರತಕ್ಕೆ ಸೈಕಲ್ ಪಯಣ
63 ವರ್ಷಗಳ ಹಿಂದೆ, ಐರ್ಲೆಂಡ್ ನಿಂದ ಭಾರತಕ್ಕೆ ಏಕಾಂಗಿಯಾಗಿ ಸೈಕಲ್ ನಲ್ಲಿ ಬಂದ ಮಹಿಳೆಯ ಸಾಹಸಗಾಥೆ !
ಇತ್ತೀಚೆಗೆ ನಾನು ಜಿನಿವಾ ವಿಮಾನ ನಿಲ್ದಾಣದಲ್ಲಿ Full Tilt: Ireland to India with a Bicycle ಎಂಬ ಪುಸ್ತಕ ಖರೀದಿಸಿದೆ. ಹತ್ತು ತಾಸುಗಳ ವಿಮಾನ ಪಯಣದಲ್ಲಿ ಈ ಪುಸ್ತಕವನ್ನು ಓದಿ ಮುಗಿಸಬಹುದು ಎಂದುಕೊಂಡೆ. ಅದರಲ್ಲೂ ಆ ಕೃತಿಯನ್ನು ಬರೆದವಳು ಒಬ್ಬ ಮಹಿಳೆ ಎಂಬುದು ಗೊತ್ತಾದಾಗ, ಆ ಪುಸ್ತಕವನ್ನು ಓದಲೇಬೇಕು ಎಂದು ನಿರ್ಧರಿಸಿದೆ. ಅದಕ್ಕಿಂತ ಹೆಚ್ಚಾಗಿ ಆ ಮಹಿಳೆ ಐರ್ಲೆಂಡ್ ನಿಂದ ಭಾರತಕ್ಕೆ ಸೈಕಲಿನಲ್ಲಿ ಪ್ರಯಾಣ ಮಾಡಿದ್ದು ಸುಮಾರು ಅರವತ್ಮೂರು ವರ್ಷಗಳ ಹಿಂದೆ ಎಂಬ ಸಂಗತಿಯನ್ನು ಬೆನ್ನುಡಿಯಲ್ಲಿ ಓದಿದಾಗ, ಆ ಕೃತಿಯನ್ನು ಖರೀದಿಸದೇ ಇರಲು ಮನಸಾಗಲೇ ಇಲ್ಲ.
ಈ ಲೋಕದಲ್ಲಿ ಎರಡು ಥರದ ಮನುಷ್ಯರಿದ್ದಾರೆ. ಒಬ್ಬರು, ಬೆಳಗ್ಗೆ ಎದ್ದ ತಕ್ಷಣ ಪೇಪರ್ ಓದಿ, ಕಾಫಿ ಕುಡಿದು, ಸಂಜೆ ಆಫೀಸಿನಿಂದ ಬಂದು ಹೆಂಡತಿ-ಮಕ್ಕಳ ಜತೆ ಹರಟೆ ಹೊಡೆದು ಮಲಗುವವರು. ಇವರ ಬದುಕು ಒಂದು ಸಿದ್ಧ ಮಾದರಿಯ ಹಳಿ ಮೇಲೆ ಓಡುವ ರೈಲಿನಂತೆ. ಆದರೆ ಇನ್ನೊಂದು ಜಾತಿಯ ಮನುಷ್ಯರಿದ್ದಾರೆ. ಅವರಿಗೆ ಹಳಿಗಳೇ ಇಷ್ಟವಾಗುವುದಿಲ್ಲ. ಅವರಿಗೆ ಬೇಕಿರುವುದು ಕಾಡು-ಮೇಡು, ಅನಾಮಧೇಯ ರಸ್ತೆಗಳು, ಅಪರಿಚಿತ ಊರು ಮತ್ತು ಅನಿಶ್ಚಿತತೆಯ ಅಮಲು! ಈ ಎರಡನೆಯ ಜಾತಿಗೆ ಸೇರಿದ ಅಪ್ಪಟ ಸಾಹಸಿ ಹೆಣ್ಣು ಮಗಳ ಹೆಸರು ಡೆರ್ವ್ಲಾ ಮರ್ಫಿ.
ಇದನ್ನೂ ಓದಿ: ಗೂಗಲ್ ಮ್ಯಾಪ್‌ಗೆ ಸಿಗದ ರಹಸ್ಯ ತಾಣಗಳು: ಇತಿಹಾಸದ ಮೌನ ಸಾಕ್ಷಿಗಳು
ಈಕೆಯ ಬಗ್ಗೆ ಮತ್ತು ಬಾಲ್ಯ ಜೀವನದ ಬಗ್ಗೆ ಹೇಳಬೇಕು. ಡೆರ್ವ್ಲಾ ಜನಿಸಿದ್ದು ಐರ್ಲೆಂಡ್‌ನ ಕೌಂಟಿ ವಾಟರ್‌ಫೋರ್ಡ್‌ನ ಲಿಸ್ಮೋರ್‌ನಲ್ಲಿ. ಆಕೆಯ ತಂದೆ ಅಲ್ಲಿ ಲೈಬ್ರರಿಯನ್ ಆಗಿದ್ದರು. ಆಕೆಗೆ ಕೇವಲ ಒಂದು ವರ್ಷ ವಯಸ್ಸಿದ್ದಾಗ, ತಾಯಿ ತೀವ್ರವಾದ 'ರುಮಟಾಯ್ಡ್ ಆರ್ಥ್ರೈಟಿಸ್' (ಸಂದಿವಾತ) ಕಾಯಿಲೆಗೆ ತುತ್ತಾದರು. ಈ ಕಾರಣದಿಂದ ಡೆರ್ವ್ಲಾ ಅವರಿಗೆ ಯಾವುದೇ ಒಡಹುಟ್ಟಿದವರಿರಲಿಲ್ಲ, ಏಕೈಕ ಪುತ್ರಿಯಾಗಿ ಬೆಳೆದಳು. ತನ್ನ ಹತ್ತನೆಯ ವರ್ಷದ ಹುಟ್ಟುಹಬ್ಬದಂದು ಆಕೆಗೆ ಸಿಕ್ಕ ಉಡುಗೊರೆಗಳು ಅವಳ ಬದುಕನ್ನೇ ಬದಲಿಸಿದವು. ತಂದೆ-ತಾಯಿಯಿಂದ ಒಂದು ಹಳೆಯ ಸೈಕಲ್ ಮತ್ತು ತಾತನಿಂದ ಒಂದು ಹಳೆಯ ಭೂಪಟ (ಅಟ್ಲಾಸ್) ಸಿಕ್ಕಿತು. ಒಂದು ದಿನ ಲಿಸ್ಮೋರ್ ಹತ್ತಿರದ ಕಡಿದಾದ ಗುಡ್ಡವೊಂದನ್ನು ಸೈಕಲ್‌ನಲ್ಲಿ ಹತ್ತುತ್ತಿದ್ದಾಗ, ಡೆರ್ವ್ಲಾ ಅವರಿಗೆ ಒಂದು ಆಲೋಚನೆ ಬಂದಿತು - 'ಇದೇ ರೀತಿ ನಾನು ಸೈಕಲ್ ತುಳಿಯುತ್ತಾ ಹೋದರೆ, ಒಂದು ದಿನ ನಾನು ಭಾರತವನ್ನು ತಲುಪಬಹುದಲ್ಲ?'

ಹತ್ತು ವರ್ಷದ ಬಾಲಕಿಯ ಆ ಪುಟ್ಟ ಆಲೋಚನೆಯೇ ಮುಂದೆ 'ಫುಲ್ ಟಿಲ್ಟ್' ಕೃತಿಯಾಗಿ ಜನ್ಮತಾಳಿತು. ಇದು ಕೇವಲ ಒಂದು ಪ್ರವಾಸ ಕಥನವಲ್ಲ. ಅದು ಅದಮ್ಯ ಸಾಹಸ, ಅಚಲ ವಿಶ್ವಾಸ ಮತ್ತು ಮನುಷ್ಯನ ಇಚ್ಛಾಶಕ್ತಿಯ ಜ್ವಲಂತ ಸಾಕ್ಷಿ. ಇಂದಿನ ಸುರಕ್ಷಿತ ಕಾಲದಲ್ಲೂ ವಿದೇಶ ಪ್ರಯಾಣಕ್ಕೆ ಮನೆಯವರು ಸಾವಿರ ಬಾರಿ ಯೋಚಿಸುವಾಗ, ಅಂದಿನ ಕಾಲದ ಆಕೆಯ ನಿರ್ಧಾರ ನಿಜಕ್ಕೂ ರೋಮಾಂಚನಕಾರಿ.
ಅವಳ ಕನಸು ದೊಡ್ಡದಿದ್ದರೂ, ಜವಾಬ್ದಾರಿಗಳು ಅಷ್ಟೇ ಕಠಿಣವಾಗಿದ್ದವು. ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಆಕೆ ಶಾಲೆಯನ್ನು ಬಿಡಬೇಕಾಯಿತು. ಕಾರಣ, ವಿಕಲಚೇತನಳಾಗಿದ್ದ ತನ್ನ ತಾಯಿಯ ಸಂಪೂರ್ಣ ಆರೈಕೆಯನ್ನು ಮಾಡಬೇಕಿತ್ತು. ಅಂದಿನಿಂದ ಸುಮಾರು ಹದಿನಾರು ವರ್ಷಗಳ ಕಾಲ ಆಕೆ ಮನೆಯ ಜವಾಬ್ದಾರಿಯಲ್ಲೇ ಕಳೆಯಬೇಕಾಯಿತು. ಆದರೂ, ಬಿಡುವು ಸಿಕ್ಕಾಗಲೆಲ್ಲ ವೇಲ್ಸ್, ಬೆಲ್ಜಿಯಂ, ಜರ್ಮನಿ ಮತ್ತು ಸ್ಪೇನ್‌ಗೆ ಸಣ್ಣ ಸಣ್ಣ ಪ್ರವಾಸಗಳನ್ನು ಮಾಡುತ್ತಿದ್ದಳು. ಪ್ರತಿ ಸಲ ಸೈಕಲ್ಲನ್ನೇರಿದಾಗ ಐರ್ಲೆಂಡ್ ನಿಂದ ಭಾರತಕ್ಕೆ ಹೋಗುವ ತನ್ನ ಕನಸಿನ ಮೊಟ್ಟೆಗೆ ಕಾವು ಕೊಡುತ್ತಲೇ ಇದ್ದಳು.
ಈ ಮಧ್ಯೆ, ಅವಳ ವೈಯಕ್ತಿಕ ಬದುಕಿನಲ್ಲಿ ಒಂದಾದ ನಂತರ ಒಂದು ದುರಂತಗಳು ಸಂಭವಿಸಿದವು. 1958ರಿಂದ 1962ರ ನಡುವಿನ ಅವಧಿ ಅವಳ ಜೀವನದ ಅತ್ಯಂತ ನೋವಿನ ಹಂತವಾಗಿತ್ತು. ಅವಳ ಪ್ರಿಯಕರ ಗಾಡ್ಫ್ರೆ ವಿದೇಶದಲ್ಲಿ ಮರಣಹೊಂದಿದ. ನಂತರ 1961ರಲ್ಲಿ ತಂದೆ ಮತ್ತು ಅದರ ಮುಂದಿನ ವರ್ಷ ತಾಯಿ ನಿಧನರಾದರು.
ತಾಯಿಯ ನಿಧನದ ನಂತರ ಡೆರ್ವ್ಲಾ ದಶಕಗಳಿಂದ ಹೊತ್ತಿದ್ದ ಕೌಟುಂಬಿಕ ಜವಾಬ್ದಾರಿಯಿಂದ ಮುಕ್ತಳಾದಳು. ಆ ಸಮಯದಲ್ಲಿ ಅವಳು ಹೇಳಿದ ಮಾತುಗಳು ಅತ್ಯಂತ ಮಾರ್ಮಿಕವಾಗಿವೆ - 'ನನ್ನ ಯೌವನದ ಬಡತನ ಮತ್ತು ಕಷ್ಟಗಳು ಇಂಥ ಸಾಹಸಮಯ ಪ್ರಯಾಣಕ್ಕೆ ಒಂದು ಒಳ್ಳೆಯ ತರಬೇತಿಯಾಗಿದ್ದವು. ಭೌತಿಕ ಸುಖ ಮತ್ತು ಆಸ್ತಿಪಾಸ್ತಿಗಳನ್ನೇ ಯಶಸ್ಸು ಅಥವಾ ಭದ್ರತೆ ಎಂದು ತಪ್ಪಾಗಿ ಭಾವಿಸಬಾರದು ಎಂಬುದು ನನಗೆ ಬಾಲ್ಯದಲ್ಲೇ ಮನವರಿಕೆಯಾಗಿತ್ತು.’ ಡೆರ್ವ್ಲಾಗೆ ಬಾಲ್ಯದ ಸರಣಿ ಕಷ್ಟಗಳು, ಸವಾಲುಗಳು, ಬಡತನಗಳೇ ಅಂಥ ಒಂದು ತರಬೇತಿಯನ್ನು ನೀಡಿದ್ದವು. ಮನೆಯಲ್ಲಿ ರೋಗಿ ತಾಯಿಯನ್ನು ಸಾಕುವುದು ಆಕೆಗೆ 'ಸಹನೆ'ಯನ್ನು ಕಲಿಸಿತು. ಬಡತನವು ಅವಳಿಗೆ 'ಕಡಿಮೆ ಸೌಲಭ್ಯ'ದಲ್ಲಿ ಬದುಕುವುದು ಹೇಗೆ ಎಂದು ಕಲಿಸಿತು. ಹಾಗಾಗಿಯೇ ಅವಳು ಸೈಕಲ್ ಮೇಲೆ ಅನಾಮಧೇಯ ದೇಶಗಳ ಮೂಲಕ ಭಾರತಕ್ಕೆ ಬರುವಾಗ ಅವಳಿಗೆ ಯಾವುದೇ ಸೌಲಭ್ಯಗಳ ಕೊರತೆ ಕಾಡಲಿಲ್ಲ. ಅವರ ಮೆದುಳು ಆಗಲೇ 'ಸ್ಟೆರೈಲ್' ಆಗಿತ್ತು - ಕೇವಲ ಗುರಿಯತ್ತ ಗಮನ ಹರಿಸುವ ಶಕ್ತಿ ಅವಳಿಗೆ ಸಿದ್ಧಿಸಿತ್ತು.

ಆಕೆಗೆ ಅಕ್ಷರಶಃ ತನ್ನದೆನ್ನುವುದೇನೂ ಇರಲಿಲ್ಲ. ಅದರೆ ಅವಳ ಬಳಿ ಇದ್ದ ಬಹು ದೊಡ್ಡ ಆಸ್ತಿಯೆಂದರೆ ಧೈರ್ಯ, ಹುಚ್ಚು ಸಾಹಸ ಮನೋಭಾವ ಮತ್ತು ಅಂದುಕೊಂಡಿದ್ದನ್ನು ಈಡೇರಿಸಲೇಬೇಕೆಂಬ ಛಲ. 1963ರಲ್ಲಿ ಡೆರ್ವ್ಲಾ ಮರ್ಫಿ ತನ್ನ ಕನಸಿನ ಸುದೀರ್ಘ ಸೈಕಲ್ ಪ್ರವಾಸವನ್ನು ಆರಂಭಿಸಲು ನಿರ್ಧರಿಸಿದಳು. ಅವಳ ಸೈಕಲ್ ಹೆಸರು 'ರೋಸಿನಾಂಟೆ' (ಡಾನ್ ಕ್ವಿಕ್ಸೋಟ್‌ನ ಕುದುರೆಯ ಹೆಸರು). ಅವಳು ಪ್ರೀತಿಯಿಂದ ಅದನ್ನು 'ರೋಜ್' ಎಂದು ಕರೆಯುತ್ತಿದ್ದಳು. ಒಮ್ಮೆ ಕಲ್ಪನೆ ಮಾಡಿಕೊಳ್ಳಿ. ಸುಮಾರು ಅರವತ್ಮೂರು ವರ್ಷಗಳ ಹಿಂದೆ. ಆಗಿನ್ನೂ ಇಂಟರ್ ನೆಟ್ ಇರಲಿಲ್ಲ, ಗೂಗಲ್ ಮ್ಯಾಪ್ ಇರಲಿಲ್ಲ, ಕೈಯಲ್ಲಿ ಐಫೋನ್ ಇರಲಿಲ್ಲ, ಹೋಗಲಿ ದಾರಿಯಲ್ಲಿ ಎಲ್ಲಾದರೂ ಸಂಕಷ್ಟವಾದರೆ ನೆರವಿಗೆ ಬರುವ ಒಬ್ಬ ಫ್ರೆಂಡ್ ಕೂಡ ಇರಲಿಲ್ಲ. ಅಂಥ ಕಾಲದಲ್ಲಿ, ಮೂವತ್ತೆರಡರ ಹರೆಯದ ಈ ಚೆಲುವೆ ತನ್ನ ಸೈಕಲ್ ಏರಿ ಭಾರತದ ಕಡೆಗೆ ಹೊರಟಳು ಅಂದರೆ ಅದು ಕೇವಲ ಪ್ರವಾಸವಲ್ಲ, ಅದು ಅಪ್ಪಟ ಹುಚ್ಚು ಸಾಹಸ!
ಆ ವರ್ಷ ಯುರೋಪ್ ಪಾಲಿಗೆ ಕೇವಲ ಚಳಿಗಾಲವಾಗಿರಲಿಲ್ಲ, ಅದು ಅಕ್ಷರಶಃ ಒಂದು 'ಹಿಮಯುಗ'ದಂತೆ ಭಾಸವಾಗಿತ್ತು. ಇದನ್ನು ಇತಿಹಾಸದಲ್ಲಿ 'ದ ಬಿಗ್ ಫ್ರೀಜ್ ಆಫ್ 1963' ಎಂದು ಕರೆಯಲಾಗುತ್ತದೆ. ಡೆರ್ವ್ಲಾ ಮರ್ಫಿ ತನ್ನ ಸೈಕಲ್ ಪಯಣ ಆರಂಭಿಸಿದಾಗಲೇ ಪ್ರಕೃತಿ ಅವಳಿಗೆ ಅತಿ ದೊಡ್ಡ ಸವಾಲನ್ನು ಒಡ್ಡಿತ್ತು. ಆ ಸಮಯದಲ್ಲಿ ಯುರೋಪಿನಾದ್ಯಂತ ಉಷ್ಣಾಂಶವು ಶೂನ್ಯಕ್ಕಿಂತ ಸುಮಾರು 20 ಡಿಗ್ರಿಗೂ ಕೆಳಕ್ಕೆ ಕುಸಿದಿತ್ತು. ನದಿಗಳು ಮಂಜುಗಡ್ಡೆಗಳಾಗಿ ಮಾರ್ಪಟ್ಟಿದ್ದವು ಮತ್ತು ಸಮುದ್ರದ ತೀರಗಳು ಕೂಡ ಹೆಪ್ಪುಗಟ್ಟಿದ್ದವು. ಇಂಥ ಪರಿಸ್ಥಿತಿಯಲ್ಲಿ ಸೈಕಲ್ ತುಳಿಯುವುದು ಎಂದರೆ ಮೈ ಜುಂ ಎನ್ನುವ ಸಾಹಸ. ಮರ್ಫಿ ಯುಗೊಸ್ಲಾವಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಮೂಲಕ ಭಾರತವನ್ನು ತಲುಪಲು ನಿರ್ಧರಿಸಿದಳು.
ಮರ್ಫಿ ದಟ್ಟವಾದ ಹಿಮದ ನಡುವೆ, ರಸ್ತೆಗಳೇ ಕಾಣದ ಸ್ಥಿತಿಯಲ್ಲಿ ಸೈಕಲ್ ತುಳಿಯಲಾರಂಭಿಸಿದಳು. ಪ್ರಯಾಣದ ಆರಂಭದಲ್ಲಿ ಡೆರ್ವ್ಲಾ ತನ್ನ ಮನೆಯವರಿಗೆ ಮತ್ತು ಸ್ನೇಹಿತರಿಗೆ ನಿಯಮಿತವಾಗಿ ಪತ್ರಗಳನ್ನು ಬರೆಯುತ್ತಿದ್ದಳು. ಆದರೆ ಯುಗೊಸ್ಲಾವಿಯಾವನ್ನು ತಲುಪುವಷ್ಟರಲ್ಲಿ ಪರಿಸ್ಥಿತಿ ಬದಲಾಯಿತು. ಭೀಕರ ಚಳಿಯಿಂದಾಗಿ ಅಂಚೆ ವ್ಯವಸ್ಥೆಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ದಾರಿಯಲ್ಲಿ ಅವಳು ಎದುರಿಸುತ್ತಿದ್ದ ಅನುಭವಗಳು ಎಷ್ಟು ಗಾಢವಾಗಿದ್ದವು ಎಂದರೆ, ಅವುಗಳನ್ನು ಕೇವಲ ಸಣ್ಣ ಪತ್ರಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಅವಳು ಪತ್ರಗಳ ಬದಲು ಪ್ರತಿದಿನದ ಘಟನೆಗಳನ್ನು ಒಂದು ದಿನಚರಿಯಲ್ಲಿ ದಾಖಲಿಸಲು ನಿರ್ಧರಿಸಿದಳು. ಇದೇ ದಿನಚರಿಯು ಮುಂದೆ ಅವಳ ಐತಿಹಾಸಿಕ ಕೃತಿ 'ಫುಲ್ ಟಿಲ್ಟ್' ರೂಪ ಪಡೆಯಲು ಅಡಿಪಾಯವಾಯಿತು.
ಡೆರ್ವ್ಲಾ ಮರ್ಫಿ ಪ್ರಯಾಣವು ಕೇವಲ ಸುಂದರ ರಸ್ತೆಗಳ ಪ್ರವಾಸವಾಗಿರಲಿಲ್ಲ. ಅದು ಪ್ರಾಣಾಪಾಯದ ನಡುವೆ ಬದುಕಿ ಉಳಿಯುವ ಅನಿವಾರ್ಯತೆಯೂ ಆಗಿತ್ತು. ವಿಶೇಷವಾಗಿ ಇರಾನ್‌ನಲ್ಲಿ ಎದುರಿಸಿದ ಘಟನೆಗಳು ಆಕೆಯ ಅದಮ್ಯ ಧೈರ್ಯಕ್ಕೆ ಸಾಕ್ಷಿ. ಡೆರ್ವ್ಲಾ ಸೈಕಲ್ ಮೇಲೆ ಏಕಾಂಗಿಯಾಗಿ ಸಾಗುವಾಗ ಪ್ರಾಣರಕ್ಷಣೆಗಾಗಿ ತನ್ನ ಜತೆ ಒಂದು ಪಿಸ್ತೂಲನ್ನು ಇಟ್ಟುಕೊಂಡಿದ್ದಳು. ಇರಾನ್‌ನ ನಿರ್ಜನ ಪ್ರದೇಶವೊಂದರಲ್ಲಿ ಸಾಗುತ್ತಿದ್ದಾಗ ಕಳ್ಳರ ಗುಂಪೊಂದು ಅವಳನ್ನು ಸುತ್ತುವರಿಯಿತು. ಆ ಸಂದರ್ಭದಲ್ಲಿ ಗಲಿಬಿಲಿಗೊಳ್ಳದ ಡೆರ್ವ್ಲಾ, ತಕ್ಷಣವೇ ಪಿಸ್ತೂಲನ್ನು ಹೊರತೆಗೆದು ಗಾಳಿಯಲ್ಲಿ ಗುಂಡು ಹಾರಿಸಿ ಕಳ್ಳರನ್ನು ಚದುರಿಸಿದಳು. ಸಾಧಾರಣ ಮಹಿಳೆಯಾಗಿದ್ದರೆ ಅಂದು ಭಯಭೀತರಾಗುತ್ತಿದ್ದರು, ಆದರೆ ಅವಳಲ್ಲಿದ್ದ ಧೈರ್ಯ ಮತ್ತು ಸ್ಥಿತಪ್ರಜ್ಞತೆ ಅವಳನ್ನು ಅಪಾಯದಿಂದ ಪಾರುಮಾಡಿತು.
ಅತ್ಯಂತ ಆಘಾತಕಾರಿ ಘಟನೆ ಸಂಭವಿಸಿದ್ದು ಒಂದು ಪೊಲೀಸ್ ಸ್ಟೇಷನ್‌ನಲ್ಲಿ. ರಕ್ಷಣೆಯ ಭರವಸೆ ನೀಡಬೇಕಿದ್ದ ಪೊಲೀಸ್ ಅಧಿಕಾರಿಯೇ ಅವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ. ಅಂಥ ಸಂದರ್ಭದಲ್ಲಿ ಡೆರ್ವ್ಲಾ ಎದೆಗುಂದದೇ, ಅತ್ಯಂತ ಕಠಿಣವಾದ ಮತ್ತು ಅನಿವಾರ್ಯವಾದ ದೈಹಿಕ ಹೋರಾಟದ ತಂತ್ರಗಳನ್ನು ಬಳಸಿ ಅವನಿಂದ ತಪ್ಪಿಸಿಕೊಂಡಳು. ಆ ಕ್ಷಣದಲ್ಲಿ ಅವಳು ತೋರಿಸಿದ ಸಮಯಪ್ರಜ್ಞೆ ಮತ್ತು ವೀರಾವೇಶವು ಒಬ್ಬ ಸೈನಿಕನ ಸಾಹಸಕ್ಕಿಂತಲೂ ಮಿಗಿಲಾದುದು.
ಡೆರ್ವ್ಲಾ ಮರ್ಫಿ ಪ್ರಯಾಣದ ಅತ್ಯಂತ ಕಠಿಣ ಮತ್ತು ಭಾವನಾತ್ಮಕ ಹಂತವೆಂದರೆ ಅದು ಅಫ್ಘಾನಿಸ್ತಾನ. ಇಲ್ಲಿ ಆಕೆ ದೈಹಿಕವಾಗಿ ಜರ್ಜರಿತಳಾದರೂ, ಮಾನಸಿಕವಾಗಿ ಆ ದೇಶದ ಜನರ ಪ್ರೀತಿಗೆ ಸೋತುಹೋದಳು. ಅಫ್ಘಾನಿಸ್ತಾನದ ಕುಗ್ರಾಮವೊಂದರಲ್ಲಿ ಪ್ರಯಾಣಿಸುತ್ತಿದ್ದಾಗ, ಅಚಾನಕ್ಕಾಗಿ ರೈಫಲ್‌ನ ಹಿಂಭಾಗದ ಭಾಗ ಆಕೆಯ ಎದೆಗೆ ಬಲವಾಗಿ ಅಪ್ಪಳಿಸಿತು. ಈ ಭೀಕರ ಏಟಿನಿಂದಾಗಿ ಅವರ ಮೂರು ಪಕ್ಕೆಲುಬುಗಳು ಮುರಿದುಹೋದವು. ಯಾವುದೇ ಸಾಮಾನ್ಯ ವ್ಯಕ್ತಿಯಾಗಿದ್ದರೆ ಅಂಥ ಅಸಹನೀಯ ನೋವಿನಲ್ಲಿ ಪ್ರಯಾಣವನ್ನು ಅಲ್ಲಿಗೇ ನಿಲ್ಲಿಸಿ ವಾಪಸ್ ಹೋಗುತ್ತಿದ್ದರು. ಆದರೆ ಮರ್ಫಿ ವಿಭಿನ್ನವಾಗಿ ಯೋಚಿಸಿದಳು. 'ನೋವು ಶರೀರಕ್ಕೆ ಮಾತ್ರ, ಮನಸ್ಸಿಗಲ್ಲ' ಎಂದು ಯೋಚಿಸಿದವಳೇ ಕೆಲ ದಿನ ವಿಶ್ರಾಂತಿ ಪಡೆದು ಪಯಣ ಮುಂದುವರಿಸಿದಳು.

ವೀಸಾ ಅಧಿಕಾರಿಗಳು ಒಬ್ಬ ಮಹಿಳೆ ಏಕಾಂಗಿಯಾಗಿ ಅಫ್ಘಾನಿಸ್ತಾನದಲ್ಲಿ ಪ್ರಯಾಣಿಸುವುದು ಅತ್ಯಂತ ಅಪಾಯಕಾರಿ ಎಂದು ವಾದಿಸಿದಾಗ, ಮರ್ಫಿ ಅದನ್ನು ತಕ್ಷಣವೇ ಪ್ರಶ್ನಿಸಿದಳು - 'ಯುರೋಪಿನ ದೊಡ್ಡ ನಗರಗಳಲ್ಲಿ ಕೊಲೆಗಳು ಮತ್ತು ಅಪರಾಧಗಳು ದಿನನಿತ್ಯ ನಡೆಯುತ್ತವೆ. ಹಾಗಿರುವಾಗ, ಅಫ್ಘಾನಿಸ್ತಾನದಂಥ ಪ್ರದೇಶಗಳಲ್ಲಿ ಒಬ್ಬ ಮಹಿಳೆ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎನ್ನುವುದು ಕೇವಲ ನಿಮ್ಮ ಭ್ರಮೆಯಷ್ಟೆ' ಎಂದು ವಾದಿಸಿದಳು. ಪಾಶ್ಚಿಮಾತ್ಯ ಜಗತ್ತು ಬೇರೆ ದೇಶಗಳ ಬಗ್ಗೆ ಹೊಂದಿರುವ 'ಪೂರ್ವಗ್ರಹ ಪೀಡಿತ' ಆಲೋಚನೆಗಳನ್ನು ಆಕೆ ಅಂದೇ ಮೆಟ್ಟಿ ನಿಂತಿದ್ದಳು. ಅಧಿಕಾರಿಗಳು ಅವಳಿಗೆ ಕಾಬೂಲ್‌ಗೆ ಉಚಿತ ಸಾರಿಗೆ ಸೌಲಭ್ಯವನ್ನು ನೀಡಲು ಮುಂದೆ ಬಂದಾಗ, ಮರ್ಫಿ ತಿರಸ್ಕರಿಸಿದಳು. 'ನಾನು ಆರ್ಥಿಕ ಸಂಕಷ್ಟದಿಂದಾಗಿ ಅಥವಾ ಹಣವಿಲ್ಲ ಎಂಬ ಕಾರಣಕ್ಕೆ ಸೈಕಲ್ ತುಳಿಯುತ್ತಿಲ್ಲ. ನನಗೆ ಸೈಕಲ್ ತುಳಿಯುವುದು ಇಷ್ಟ, ಅದಕ್ಕಾಗಿ ನಾನು ಈ ಹಾದಿಯನ್ನು ಆರಿಸಿಕೊಂಡಿದ್ದೇನೆ' ಎಂದು ಅಭಿಮಾನದಿಂದ ಹೇಳಿದಳು. ಒಂದು ಕೆಲಸವನ್ನು ಕೇವಲ ಇಷ್ಟಪಟ್ಟು ಮಾಡುವುದು ಮತ್ತು ಅನಿವಾರ್ಯತೆಗಾಗಿ ಮಾಡುವುದರ ನಡುವಿನ ವ್ಯತ್ಯಾಸವನ್ನು ಆಕೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಳು.
ಮರ್ಫಿ ಪ್ರಯಾಣದ ಮುಖ್ಯ ಅಂಶ ಅಂದ್ರೆ ಅದು ಮನುಷ್ಯ ಸಂಬಂಧಗಳ ಮೇಲಿನ ಅಚಲ ನಂಬಿಕೆ. ಅಫ್ಘಾನಿಸ್ತಾನದ ಬೆಟ್ಟಗುಡ್ಡಗಳಲ್ಲಿ ಸಂಭವಿಸಿದ ಆ 'ಕೋಚಿ' ಬುಡಕಟ್ಟಿನ ವ್ಯಕ್ತಿಯ ಪ್ರಸಂಗವು ಕೇವಲ ಒಂದು ಘಟನೆಯಲ್ಲ, ಅದು ಮಾನವೀಯತೆಯ ಪರಮೋಚ್ಚ ಶಿಖರ. ಮರ್ಫಿ ಮುಂಜಾನೆ ಐದೂವರೆಯಿಂದ ಸೈಕಲ್ ತುಳಿದು ಸುಸ್ತಾಗಿ ಬೆಟ್ಟದ ತಪ್ಪಲಿನಲ್ಲಿ ಮಲಗಿದ್ದಳು. ಪ್ರಖರವಾದ ಬಿಸಿಲು ಅವಳ ಮೇಲೆ ಬೀಳುತ್ತಿತ್ತು. ಆದರೆ ಆಕೆ ಎಚ್ಚರವಾದಾಗ ಕಂಡ ದೃಶ್ಯ ಅದ್ಭುತವಾಗಿತ್ತು - ಆಕೆ ಒಂದು ಟೆಂಟ್‌ನ ಒಳಗಿದ್ದಳು! ಆ ಪ್ರದೇಶದ 'ಕೋಚಿ' (ಅಲೆಮಾರಿ) ಬುಡಕಟ್ಟಿನ ವೃದ್ಧ ವ್ಯಕ್ತಿಯೊಬ್ಬ, ಈ ವಿದೇಶಿ ಮಹಿಳೆ ಬಿರು ಬಿಸಿಲಿನಲ್ಲಿ ಮಲಗಿರುವುದನ್ನು ಕಂಡು ಮನಕರಗಿ, ಆಕೆ ಎಚ್ಚರವಾಗದಂತೆ ಅತ್ಯಂತ ನಿಶ್ಶಬ್ದವಾಗಿ ಮೇಕೆ ಕೂದಲಿನಿಂದ ಮಾಡಿದ ಟೆಂಟ್ ಅನ್ನು ಆಕೆಯ ಮೇಲೆ ನಿರ್ಮಿಸಿದ್ದ. ಆ ವ್ಯಕ್ತಿಗೆ ಆಕೆಯಿಂದ ಯಾವುದೇ ಹಣ ಅಥವಾ ಪ್ರಶಂಸೆಯ ನಿರೀಕ್ಷೆ ಇರಲಿಲ್ಲ. ಕೇವಲ ಒಬ್ಬ ವ್ಯಕ್ತಿ ಕಷ್ಟದಲ್ಲಿದ್ದಾನೆ ಎಂದು ಸಹಾಯ ಮಾಡುವ ಆ ಹಳ್ಳಿ ಜನರ ಭಾವನೆ ಮರ್ಫಿಯನ್ನು ಬೆರಗುಗೊಳಿಸಿತು.
ಮರ್ಫಿ ಅಫ್ಘಾನಿಸ್ತಾನದ ಜನರ ಬಗ್ಗೆ ಹೊಂದಿದ್ದ ಗೌರವಕ್ಕೆ ಕಾರಣ ಅವರ ಪ್ರಾಮಾಣಿಕತೆ. ಪಾಶ್ಚಿಮಾತ್ಯ ಜಗತ್ತು ಅಫ್ಘಾನಿಸ್ತಾನವನ್ನು 'ಭಯಾನಕ' ಎಂದು ಬಿಂಬಿಸಿದರೆ, ಮರ್ಫಿ ಅಲ್ಲಿನ ಜನರ ದಯಾಳು ಗುಣ ಮತ್ತು ಆತಿಥ್ಯವನ್ನು ಜಗತ್ತಿಗೆ ತೋರಿಸಿದಳು. 'ಭಾಷೆ ತಿಳಿಯದಿದ್ದರೂ ಭಾವನೆಗಳ ಮೂಲಕ ಸಂವಹನ ನಡೆಸುವ ಕಲೆ ಅವರಿಗೆ ಗೊತ್ತು' ಎಂದು ಆಕೆ ಹೊಗಳಿದ್ದಾಳೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಒಬ್ಬ ಅಪರಿಚಿತನಿಗೆ ನೆರಳು ನೀಡುವುದು, ಆಹಾರ ಹಂಚಿಕೊಳ್ಳುವುದು ಅಲ್ಲಿನ ಸಂಸ್ಕೃತಿಯ ಭಾಗವಾಗಿತ್ತು.
'ಫುಲ್ ಟಿಲ್ಟ್' ಕೃತಿಯಲ್ಲಿ ಆಕೆ ಬೆಳಕನ್ನು ಒಂದು ಭೌತಿಕ ಅಂಶವಾಗಿ ನೋಡದೇ, ಅದನ್ನು ಆಧ್ಯಾತ್ಮಿಕ ಮತ್ತು ಸಕಾರಾತ್ಮಕ ಅನುಭವವಾಗಿ ಗಮನಿಸುತ್ತಾಳೆ. ನಾವು ಸಾಮಾನ್ಯವಾಗಿ ಬೆಳಕನ್ನು ವಸ್ತುಗಳನ್ನು ಗುರುತಿಸಲು ಅಥವಾ ದಾರಿ ಕಾಣಲು ಬಳಸುವ ಒಂದು ಸಾಧನವೆಂದು ಭಾವಿಸುತ್ತೇವೆ. ಆದರೆ ಮರ್ಫಿಗೆ ಪರ್ಷಿಯನ್ ಪರ್ವತಗಳ ಮೇಲೆ ಬಿದ್ದ ಆ ತೀವ್ರವಾದ ನೀಲಿ ಆಕಾಶದ ಬೆಳಕು 'ಸಕಾರಾತ್ಮಕ ಶಕ್ತಿ' ಆಗಿ ಕಂಡಿತು. ಅಲ್ಲಿನ ಶುದ್ಧ ಗಾಳಿ ಮತ್ತು ಮಾಲಿನ್ಯರಹಿತ ವಾತಾವರಣದಲ್ಲಿ ಬೆಳಕು ಎಷ್ಟು ಸ್ಪಷ್ಟವಾಗಿತ್ತೆಂದರೆ, ಅದು ಪ್ರತಿಯೊಂದು ರೇಖೆ, ವಕ್ರತೆ ಮತ್ತು ಕೋನಗಳನ್ನು ಎದ್ದು ಕಾಣುವಂತೆ ಮಾಡುತ್ತಿತ್ತು. ಮರ್ಫಿ ಇದನ್ನು 'ಬೆಳಕಿನ ವಿಶಿಷ್ಟ ಪಾವಿತ್ರ್ಯ' (Unique purity of light) ಎಂದು ಕರೆದಿದ್ದಾಳೆ. ಬೆಳಕು ಹರಿದು ಬಂದಾಗ ಅಲ್ಲಿನ ಬೆಟ್ಟಗುಡ್ಡಗಳ ಬಣ್ಣಗಳು ಕೇವಲ ಬಣ್ಣಗಳಾಗಿ ಉಳಿಯದೇ, ಒಂದೊಂದು ಬಣ್ಣವೂ ತನ್ನದೇ ಆದ ಜೀವಂತಿಕೆಯನ್ನು ಪಡೆದುಕೊಳ್ಳುತ್ತವೆ ಎಂದು ಆಕೆ ವರ್ಣಿಸಿದ್ದಾಳೆ. ನೀಲಿ, ಕೆಂಪು ಅಥವಾ ಬೂದು ಬಣ್ಣದ ಪ್ರತಿಯೊಂದು ಛಾಯೆಯೂ ತನ್ನ ಅಸ್ತಿತ್ವವನ್ನು ಗಟ್ಟಿಯಾಗಿ ಸಾರುತ್ತಿತ್ತು. ಸೈಕಲ್ ಮೇಲೆ ಮೌನವಾಗಿ ಸಾಗುತ್ತಿದ್ದ ಆಕೆಗೆ ಪ್ರಕೃತಿಯ ಈ ಬಣ್ಣಗಳ ಹಬ್ಬವು ಒಂದು ಅದ್ಭುತ ಧ್ಯಾನದಂತೆ ಭಾಸವಾಯಿತಂತೆ.

ಮರ್ಫಿ ಪ್ರಯಾಣವು ಕೇವಲ ಭೂಪಟದ ಮೇಲಿನ ಮೈಲುಗಳ ಲೆಕ್ಕಾಚಾರವಾಗಿರಲಿಲ್ಲ. ಅದು ಅವಳ ಅಂತರಂಗದ ಶೋಧನೆಯೂ ಆಗಿತ್ತು. ಏಕಾಂಗಿಯಾಗಿ ಸೈಕಲ್ ತುಳಿಯುವುದು ಒಬ್ಬ ಮನುಷ್ಯನನ್ನು ಮೌನಕ್ಕೆ ಮತ್ತು ಆತ್ಮಾವಲೋಕನಕ್ಕೆ ತಳ್ಳುತ್ತದೆ. ಆಕೆ ಈ ಏಕಾಂತವನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸಿದ್ದಳು. ಸೈಕಲ್ ಸವಾರಿಯಲ್ಲಿ ಯಾವುದೇ ಇಂಜಿನ್ ಸದ್ದಿರದ ಕಾರಣ, ಆಕೆಗೆ ತನ್ನ ಉಸಿರಾಟ ಮತ್ತು ಆಲೋಚನೆಗಳ ಸದ್ದು ಸ್ಪಷ್ಟವಾಗಿ ಕೇಳಿಸುತ್ತಿತ್ತು. ಹಗಲಿಡೀ ಸೈಕಲ್ ತುಳಿಯುವಾಗ ಬಾಹ್ಯ ಪ್ರಪಂಚದ ಅಡೆತಡೆಗಳಿಗಿಂತ ಹೆಚ್ಚಾಗಿ ತನ್ನ ಮನಸ್ಸಿನ ಶಕ್ತಿಯನ್ನು ಕೇಂದ್ರೀಕರಿಸುತ್ತಿದ್ದಳು. 'ರಸ್ತೆಯ ಮೇಲಿನ ಕಲ್ಲು-ಮುಳ್ಳುಗಳಿಗಿಂತ ಮನಸಿನ ಆತಂಕಗಳನ್ನು ದಾಟುವುದು ದೊಡ್ಡ ಸಾಹಸ. ಈ ಏಕಾಂತವೇ ನನಗೆ ಪ್ರಕೃತಿಯನ್ನು ಮತ್ತು ಮನುಷ್ಯ ಸಂಬಂಧಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ದಾರಿ ಮಾಡಿಕೊಟ್ಟಿತು' ಎನ್ನುವಾಗ ಈ ಕೃತಿಯ ಅಂತರಂಗ ತೆರೆದುಕೊಳ್ಳುತ್ತಾ ಹೋಗುತ್ತದೆ. ಆಕೆಯ ಗಮನವು ರಸ್ತೆಯ ಮುಂದಿನ ಹತ್ತು ಅಡಿ ಮತ್ತು ಮನಸಿನ ಶಾಂತಿಯ ಮೇಲಿರುತ್ತಿತ್ತು. ಅಪಾಯಗಳು ಎದುರಾದಾಗ ಗಾಬರಿಯಾಗದೇ ನಿರ್ಧಾರ ತೆಗೆದುಕೊಳ್ಳಲು ಈ ಅಂತರಂಗದ ಏಕಾಗ್ರತೆಯೇ ಕಾರಣವಾಗಿತ್ತು ಎಂದು ಆಕೆ ಬರೆಯುತ್ತಾಳೆ. ಈ ಅದ್ಭುತವಾದ ಆತ್ಮಪ್ರಜ್ಞೆ (Self-awareness) ಯೇ ಅವಳನ್ನು ಐರ್ಲೆಂಡ್‌ನಿಂದ ಭಾರತದವರೆಗೆ ಯಾವುದೇ ತೊಂದರೆಯಿಲ್ಲದೆ ಕರೆತಂದಿತು.
ಮರ್ಫಿ ಸೈಕಲ್ ಸವಾರಿಯಲ್ಲಿ ಯಾವುದೇ ಪ್ರದರ್ಶನ ಇರಲಿಲ್ಲ. ಅಲ್ಲಿ ಇದ್ದದ್ದು ಕೇವಲ ಅಚಲವಾದ ಶಿಸ್ತು ಮತ್ತು ಗುರಿ. ಆಕೆಗೆ ಪ್ರಯಾಣವೆಂದರೆ ಕೇವಲ ಮೋಜಿನ ಸಂಗತಿಯಾಗಿರಲಿಲ್ಲ. ಅಲ್ಲಿ ಅನಗತ್ಯ ಮಾತುಗಳಿಗೆ ಅಥವಾ ಮನೋರಂಜನೆಗೆ ಜಾಗವಿರಲಿಲ್ಲ. ಅಂದಿನ ಕಾಲದಲ್ಲಿ ಇಂದಿನಂತೆ ರಸ್ತೆಯ ಬದಿಯಲ್ಲಿ ನಿಂತು ಸೆಲ್ಫಿ ತೆಗೆಯುವ ಅಥವಾ 'ವೈಬ್ಸ್' ಪ್ರದರ್ಶಿಸುವ ಗೀಳು ಇರಲಿಲ್ಲ. ಅವಳ ಸಂಪೂರ್ಣ ಗಮನ ರಸ್ತೆಯ ಸ್ಥಿತಿ, ಸೈಕಲ್‌ನ ಚಲನೆ ಮತ್ತು ಮುಂದಿನ ನಿಲ್ದಾಣದ ಮೇಲಿರುತ್ತಿತ್ತು. ಆಕೆಗೆ ಪ್ರಕೃತಿಯೇ ಪರಮಾತ್ಮವಾಗಿತ್ತು. ಬೆಳಗಿನ ಸೂರ್ಯನ ಬೆಳಕು ದಾರಿಯನ್ನು ತೋರಿಸುವುದರ ಜತೆಗೆ ಮನಸಿಗೆ ಶಕ್ತಿಯನ್ನು ನೀಡುತ್ತಿತ್ತು. ರಸ್ತೆ ಎಷ್ಟು ಕಠಿಣವಾಗಿದ್ದರೂ, ಹವಾಮಾನ ಎಷ್ಟೇ ವೈಪರೀತ್ಯದಿಂದ ಕೂಡಿದ್ದರೂ, ಕಣ್ಣುಗಳು ಮಾತ್ರ ಭಾರತದ ಭೂಪಟದ ಮೇಲಿದ್ದ ಗುರಿಯನ್ನೇ ನೋಡುತ್ತಿದ್ದವು. ಈ ಮನೋಭಾವವೇ ಆಕೆಗೆ ಸಾವಿರಾರು ಮೈಲುಗಳ ಕಠಿಣ ಹಾದಿಯನ್ನು ಏಕಾಂಗಿಯಾಗಿ ಕ್ರಮಿಸಲು ಸಾಧ್ಯವಾಗಿಸಿತು. ಆಕೆಗೆ ಸೈಕಲ್ ತುಳಿಯುವುದು ಪ್ರಯಾಸ ಅಥವಾ ಪ್ರವಾಸವಾಗಿರದೇ, ಅದೊಂದು ಆತ್ಮಶೋಧನೆಯಾಗಿತ್ತು.
ನಮ್ಮ ಪೋಷಕರು ನಮ್ಮನ್ನು ಸುರಕ್ಷಿತವಾಗಿಡಲು ಬಯಸುತ್ತಾರೆ, ಆದರೆ ಆ ಪ್ರಕ್ರಿಯೆಯಲ್ಲಿ ನಾವು ಜಗತ್ತನ್ನು ನೋಡುವ ಕಣ್ಣುಗಳನ್ನೇ ಕಳೆದುಕೊಳ್ಳುತ್ತಿದ್ದೇವೆ. ಒಬ್ಬ ವ್ಯಕ್ತಿ ಸೈಕಲ್ ಮೇಲೆ ಜಗತ್ತು ಸುತ್ತುತ್ತೇನೆ ಎಂದರೆ ಅದು ಸಮಾಜದ ಚೌಕಟ್ಟನ್ನು ಮುರಿಯುವ ಕೆಲಸ. ಹೀಗಾಗಿ ಅದನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ನಾವು ಅನಾಮಧೇಯ ದೇಶಗಳು ಅಥವಾ ಸಂಸ್ಕೃತಿಗಳ ಬಗ್ಗೆ ಕೇಳಿದಾಗ ಅಥವಾ ಓದಿದಾಗ ನಮಗೆ ಮೊದಲು ಕಾಡುವುದು ಭಯ. ಆದರೆ ಮರ್ಫಿ ಈ ಭಯವನ್ನು ಪ್ರೀತಿಯಾಗಿ ಬದಲಿಸುತ್ತಾಳೆ. ಇರಾನ್‌ನ ಕಳ್ಳರನ್ನು ಅಥವಾ ಅಫ್ಘಾನಿಸ್ತಾನದ ಕಠಿಣ ಪರಿಸ್ಥಿತಿಗಳನ್ನು ಮರ್ಫಿ ಎದುರಿಸಿದ್ದು ನಿಜ. ಆದರೆ, ಆಕೆ ನೆನಪಿಟ್ಟುಕೊಳ್ಳುವುದು ಮತ್ತು ನಮಗೆ ದಾಟಿಸುವುದು ಆ ಕರಾಳ ಘಟನೆಗಳನ್ನಲ್ಲ, ಬದಲಿಗೆ ತನಗಾಗಿ ಸದ್ದಿಲ್ಲದೆ ಟೆಂಟ್ ಹಾಕಿದ ಆ ಅಪರಿಚಿತ ಮುದುಕನ ದಯೆಯನ್ನು. ಜಗತ್ತಿನಲ್ಲಿ ನಮಗೆ ಕೇಡು ಬಯಸುವವರಿಗಿಂತ, ನಾವು ಯಾರೆಂದು ತಿಳಿಯದಿದ್ದರೂ ಸಹಾಯ ಹಸ್ತ ಚಾಚುವ 'ಉದಾತ್ತ ಹೃದಯಿ'ಗಳ ಸಂಖ್ಯೆ ಹೆಚ್ಚು ಎನ್ನುವುದನ್ನು ಈ ಕೃತಿ ಸಾಬೀತುಪಡಿಸುತ್ತದೆ.
ಡೆರ್ವ್ಲಾ ಮರ್ಫಿ ವೈಯಕ್ತಿಕ ಬದುಕು ಆಕೆಯ ಸಾಹಸಮಯ ಪ್ರವಾಸಗಳಿಗಿಂತಲೂ ಕಡಿಮೆ ಇರಲಿಲ್ಲ. ಆಕೆ ಎಂದಿಗೂ ಮದುವೆಯಾಗಲಿಲ್ಲ. 1968ರಲ್ಲಿ ಆಕೆ ಏಕೈಕ ಪುತ್ರಿ ರೇಚಲ್ ಗೆ ಜನ್ಮ ನೀಡಿದಳು. (ತಂದೆ 'ಐರಿಷ್ ಟೈಮ್ಸ್' ಪತ್ರಕರ್ತ ಟೆರೆನ್ಸ್ ಡಿ ವೆರೆ ವೈಟ್). ಆ ದಿನಗಳಲ್ಲಿ ಐರ್ಲೆಂಡ್‌ನಲ್ಲಿ ಮದುವೆಯಾಗದೇ ಮಗುವನ್ನು ಹೊಂದುವುದು ಮತ್ತು ಒಬ್ಬಂಟಿಯಾಗಿ ಮಗುವನ್ನು ಬೆಳೆಸುವುದು ಅತ್ಯಂತ 'ಧೈರ್ಯದ ಆಯ್ಕೆ' ಆಗಿತ್ತು. ಆದರೆ ಮರ್ಫಿಗೆ ಈ ಬಗ್ಗೆ ಯಾವುದೇ ಮುಜುಗರ ಅಥವಾ ಆತಂಕವಿರಲಿಲ್ಲ. ಮರ್ಫಿ ತನ್ನ ಹುಟ್ಟೂರಾದ ಲಿಸ್ಮೋರ್‌ನಲ್ಲಿ ಐದು ನಾಯಿಗಳು ಮತ್ತು ಮೂರು ಬೆಕ್ಕುಗಳ ಜತೆಗೆ ವಾಸಿಸುತ್ತಿದ್ದಳು. ಪ್ರಾಣಿ ಪ್ರೇಮಿಯಾಗಿದ್ದ ಆಕೆ ಸುಸ್ಥಿರ ಪ್ರಯಾಣವನ್ನು (Sustainable Travel) ಉತ್ತೇಜಿಸುವ ಬ್ರಿಟಿಷ್ ಚಾರಿಟಿ 'ಸಸ್ಟ್ರಾನ್ಸ್' ಮತ್ತು ಲಿಸ್ಮೋರ್ ಇಮ್ರಾಮಾ ಪ್ರವಾಸ ಸಾಹಿತ್ಯ ಉತ್ಸವದ ಪೋಷಕಿಯಾಗಿದ್ದಳು. ಆಕೆ ಮನೆಯಲ್ಲಿ ಟಿವಿ ಇರಲಿಲ್ಲ. ಬಿಬಿಸಿ ವರ್ಲ್ಡ್ ಸರ್ವಿಸ್ ರೇಡಿಯೋ ಮೂಲಕ ಜಗತ್ತನ್ನು ಅರಿತುಕೊಳ್ಳುತ್ತಿದ್ದಳು. ಪ್ರವಾಸ, ಓದು ಮತ್ತು ಬರಹ ಬಿಟ್ಟು ಆಕೆ ಬೇರೇನನ್ನೂ ಮಾಡಲಿಲ್ಲ. 'ಫುಲ್ ಟಿಲ್ಟ್' ಸೇರಿದಂತೆ ಪ್ರವಾಸಕ್ಕೆ ಸಂಬಂಧಿಸಿದ ಇಪ್ಪತ್ತಾರು ಕೃತಿಗಳನ್ನು ಬರೆದಳು. ಸೈಕಲ್ ಒಂದೇ ಅಲ್ಲ, ಕತ್ತೆ, ಕುದುರೆ ಮತ್ತು ಕಾಲ್ನಡಿಗೆಯಲ್ಲಿ ನಡೆಸಿದ ಪ್ರಯಾಣಗಳ ಬಗ್ಗೆಯೂ ಆಕೆ ಬರೆದಿದ್ದಾಳೆ.
ಮರ್ಫಿ ಬದುಕು ನಮಗೆ ಕಲಿಸುವ ಅತಿ ದೊಡ್ಡ ಪಾಠವೆಂದರೆ 'ಕನಿಷ್ಠವಾದ' (Minimalism). ಹೆಚ್ಚು ಸೌಲಭ್ಯಗಳಿಲ್ಲದೇ ಜೀವನವನ್ನು ಪೂರ್ಣವಾಗಿ ಆಸ್ವಾದಿಸುವುದು ಹೇಗೆ ಎಂಬುದನ್ನು ಆಕೆಯ ಬದುಕು ಕಲಿಸುತ್ತದೆ. ಭಾಷೆಯ ಹಂಗಿಲ್ಲದ ಮನುಷ್ಯತ್ವದ ಸಂಬಂಧಗಳು ಇಂದಿಗೂ ನಮಗೆ ಸ್ಫೂರ್ತಿ. ಇಂದಿನ ಗೂಗಲ್ ಮ್ಯಾಪ್ ಜಗತ್ತಿನಲ್ಲಿ ಕಾಣದ ಹಳೆಯ ಪ್ರಪಂಚದ ಸಂಸ್ಕೃತಿಗಳು ಇಲ್ಲಿವೆ. ಟರ್ಕಿ ಮತ್ತು ಇರಾನ್‌ನ ಹಳ್ಳಿಗಳ ಜೀವನ ಕ್ರಮವನ್ನು ಆಕೆ ಅದ್ಭುತವಾಗಿ ದಾಖಲಿಸಿದ್ದಾಳೆ. ಈ ಪುಸ್ತಕ ಕೇವಲ ಬೈಸಿಕಲ್ ಸವಾರರಿಗಾಗಿ ಮಾತ್ರವಲ್ಲ, ಇದು ಪ್ರತಿಯೊಬ್ಬ ವ್ಯಕ್ತಿಯೂ ಓದಬೇಕಾದ ಕೃತಿ. ಜಗತ್ತು ವಿಶಾಲವಾಗಿದೆ, ನಮ್ಮ ಆತಂಕಗಳು ಮಾತ್ರ ಚಿಕ್ಕದಾಗಿರಬೇಕು. 'ಫುಲ್ ಟಿಲ್ಟ್' ಓದುವುದು ಎಂದರೆ ಕೇವಲ ಒಬ್ಬಳ ಪ್ರಯಾಣವನ್ನು ಓದುವುದಲ್ಲ, ನಮ್ಮೊಳಗಿನ ಸಾಹಸಿಯನ್ನು ಎಚ್ಚರಿಸುವುದು. ಆಕೆಯ ಬರಹಗಳು ಆ ಕಾಲದ ಮೌಲ್ಯಗಳನ್ನು ಮತ್ತು ಸಾಹಸ ಪ್ರವೃತ್ತಿಯನ್ನು ಇಂದಿಗೂ ಜೀವಂತವಾಗಿಟ್ಟಿವೆ. ಓದುಗರಲ್ಲಿ 'ನಾನು ಕೂಡ ಜಗತ್ತನ್ನು ಗೆಲ್ಲಬಲ್ಲೆ' ಎಂಬ ವಿಶ್ವಾಸವನ್ನು ಮೂಡಿಸುತ್ತದೆ.

ಡೆರ್ವ್ಲಾ ಮರ್ಫಿ ಕರ್ನಾಟಕಕ್ಕೂ ಬಂದಿದ್ದಳು!
1970ರ ದಶಕದ ಆರಂಭದಲ್ಲಿ, ತನ್ನ ಐದು ವರ್ಷದ ಪುಟ್ಟ ಮಗಳು ರೇಚಲ್ ಜತೆಗೆ ಡೆರ್ವ್ಲಾ ಮರ್ಫಿ ಮಡಿಕೇರಿಗೆ ಬಂದಿದ್ದಳು. ಈ ಅನುಭವವನ್ನು On a Shoestring to Coorg : An Experience of Southern India ಎಂಬ ಪುಸ್ತಕದಲ್ಲಿ ಬರೆದಿದ್ದಾಳೆ.
ಮರ್ಫಿ ಕೊಡಗನ್ನು ಕೇವಲ ಒಬ್ಬ ಪ್ರವಾಸಿಯಾಗಿ ನೋಡದೇ, ಅಲ್ಲಿನ ಜನರ ಜೀವನಶೈಲಿ, ಸಂಪ್ರದಾಯ ಮತ್ತು ವಿಶಿಷ್ಟ ಸಂಸ್ಕೃತಿಯನ್ನು ಆಳವಾಗಿ ಅಭ್ಯಾಸ ಮಾಡಿ ದಾಖಲಿಸಿದ್ದಾಳೆ. ಕೊಡವರ ಆತಿಥ್ಯ, ಅವರ ವೀರ ಪರಂಪರೆ ಮತ್ತು ಪ್ರಕೃತಿಯೊಂದಿಗಿನ ಅವರ ಅವಿನಾಭಾವ ಸಂಬಂಧವನ್ನು ಆಕೆ ಈ ಪುಸ್ತಕದಲ್ಲಿ ಅದ್ಭುತವಾಗಿ ವರ್ಣಿಸಿದ್ದಾಳೆ. ಕೊಡಗಿನ ಕಾಫಿ ತೋಟಗಳು ಮತ್ತು ಅಲ್ಲಿನ ಜನರ ಸರಳತೆ ಅವಳನ್ನು ಮಂತ್ರಮುಗ್ಧಳನ್ನಾಗಿಸಿತ್ತು.
ಪುಸ್ತಕದ ಶೀರ್ಷಿಕೆಯಲ್ಲಿರುವ 'ಶೂಸ್ಟ್ರಿಂಗ್' (Shoestring) ಎಂದರೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಅಥವಾ ಬಡತನದ ಸೌಲಭ್ಯಗಳಲ್ಲಿ ನಡೆಸಿದ ಪ್ರಯಾಣ ಎಂದರ್ಥ. ಐದು ವರ್ಷದ ಮಗುವನ್ನು ಕರೆದುಕೊಂಡು, ಯಾವುದೇ ಐಷಾರಾಮಿ ಸೌಲಭ್ಯಗಳಿಲ್ಲದೇ ಬಸ್‌ಗಳಲ್ಲಿ, ಕಾಲ್ನಡಿಗೆಯಲ್ಲಿ ಕೊಡಗಿನ ಕುಗ್ರಾಮಗಳನ್ನು ಸುತ್ತಿದ್ದು ಅವಳ ಧೈರ್ಯಕ್ಕೆ ಸಾಕ್ಷಿ. ಮಕ್ಕಳು ಹೇಗೆ ಭಾಷೆ ಮತ್ತು ಸಂಸ್ಕೃತಿಯ ಅಡೆತಡೆಗಳನ್ನು ಮೀರಿ ಜನರೊಂದಿಗೆ ಬೆರೆಯುತ್ತಾರೆ ಎಂಬುದನ್ನು ಇಲ್ಲಿ ವಿವರಿಸಿದ್ದಾಳೆ.
ಕೊಡಗಿನ ಹಸಿರು ಸಿರಿಯನ್ನು 'ದಕ್ಷಿಣದ ಸ್ಕಾಟ್ಲೆಂಡ್’ ಎಂದು ಆಕೆ ಬಣ್ಣಿಸಿದ್ದಾಳೆ. ಅಲ್ಲಿನ ಮಳೆ, ಕಾಡು ಮತ್ತು ಬೆಟ್ಟಗಳ ಸಾಲು ಅವಳಿಗೆ ತನ್ನ ಹುಟ್ಟೂರಾದ ಐರ್ಲೆಂಡ್ ಅನ್ನು ನೆನಪಿಸುತ್ತಿತ್ತು. ಈ ಪುಸ್ತಕವು ಕೇವಲ ಒಂದು ಪ್ರವಾಸ ಕಥನವಲ್ಲ, ಬದಲಾಗಿ ಕೊಡಗಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ಒಬ್ಬ ಸೂಕ್ಷ್ಮ ಲೇಖಕಿಯ ಕಣ್ಣಿನಿಂದ ನೋಡಿದ ದಾಖಲೆಯಾಗಿದೆ.