ಕೆ. ರಾಧಾಕೃಷ್ಣ ಹೊಳ್ಳ

ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ

ನಿರ್ದೇಶಕರು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ.

ಕರ್ನಾಟಕ ರಾಜ್ಯ ಬಜೆಟ್‌ 2026–27ರಲ್ಲಿ ಸಾರಿಗೆ, ಮೋಟಾರು ವಾಹನ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಸರಕಾರ ನೀಡಿರುವ ಒತ್ತು ಗಮನಾರ್ಹವಾಗಿದೆ. ಈ ಕ್ಷೇತ್ರಗಳಿಗೆ ನೇರವಾಗಿ ತೆರಿಗೆ ವಿನಾಯಿತಿ ಅಥವಾ ವಿಶೇಷ ಸಬ್ಸಿಡಿ ನೀಡದಿದ್ದರೂ, ವಿವಿಧ ಯೋಜನೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಮೂಲಕ ಉತ್ತಮ ಪ್ರೋತ್ಸಾಹ ನೀಡುವ ಪ್ರಯತ್ನ ಬಜೆಟ್‌ನಲ್ಲಿ ಕಾಣುತ್ತದೆ. ಅಳುವ ಮಗುವಿಗೆ ಹೊಟ್ಟೆತುಂಬ ಹಾಲು ಕೊಟ್ಟಂತೆಯೇ, ಅಗತ್ಯವಿರುವ ಕಡೆ ಸರಕಾರ ನೆರವು ನೀಡಿರುವುದು ಗಮನಿಸಬಹುದು.

ಸಾರಿಗೆ ಕ್ಷೇತ್ರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದರ ಜತೆಗೆ ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಹಾಗೂ ರಸ್ತೆ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆ ರಾಜ್ಯದಲ್ಲಿ ಮಹತ್ತರ ಪರಿಣಾಮ ಬೀರಿದೆ. ಇದುವರೆಗೆ ಸುಮಾರು 684 ಕೋಟಿ ಪ್ರಯಾಣಗಳು ದಾಖಲಾಗಿದ್ದು, ಯೋಜನೆಗೆ ಜನಮನ್ನಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2026–27ನೇ ಸಾಲಿಗೆ 5,300 ಕೋಟಿ ರು.ಮೀಸಲಿಡಲಾಗಿದೆ. ಇದು ಸಾರ್ವಜನಿಕ ಸಾರಿಗೆ ಬಳಕೆಯನ್ನು ಹೆಚ್ಚಿಸುವುದರ ಜತೆಗೆ ಮಹಿಳೆಯರ ಆರ್ಥಿಕ ಸ್ವಾವಲಂಬನೆಯನ್ನು ಬಲಪಡಿಸುವ ಕ್ರಮವಾಗಿದೆ.

ಇದನ್ನೂ ಓದಿ: ಕೇಂದ್ರ ಅಯವ್ಯಯದಲ್ಲಿ ಜೈವಿಕ ಪ್ರವಾಸೋದ್ಯಮದಕ್ಕೆ ಸಿಕ್ಕಿದೆ ಹೆಚ್ಚಿನ ಅವಕಾಶ

ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಗಳ ಬಹುಕಾಲದ ಬೇಡಿಕೆಯಾಗಿದ್ದ ವೇತನ ಪರಿಷ್ಕರಣೆ ಬಾಕಿಯನ್ನು ಪಾವತಿಸಲು ಸರಕಾರ ಮುಂದಾಗಿರುವುದು ಮತ್ತೊಂದು ಮಹತ್ವದ ಘೋಷಣೆ. 01 ಜನವರಿ 2021ರಿಂದ 28 ಫೆಬ್ರವರಿ 2023ರವರೆಗೆ ಇರುವ ವೇತನ ಬಾಕಿ ಪಾವತಿಸಲು 1,271 ಕೋಟಿ ರು. ಒದಗಿಸಲಾಗಿದೆ. ಜತೆಗೆ 01 ಏಪ್ರಿಲ್ 2025ರಿಂದ ಹೊಸ ವೇತನ ಪರಿಷ್ಕರಣೆ ಜಾರಿಗೆ ತರಲು ಸರಕಾರ ನಿರ್ಧರಿಸಿದೆ. ಇದು ಸಾರಿಗೆ ನಿಗಮಗಳ ಸಿಬ್ಬಂದಿಗಳ ಮನೋಬಲವನ್ನು ಹೆಚ್ಚಿಸುವ ಕ್ರಮವಾಗಿದೆ.

ಸಾರ್ವಜನಿಕ ಸಾರಿಗೆ ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ ಹೊಸ ಬಸ್ಸುಗಳ ಖರೀದಿಗೂ ಸರಕಾರ ಒತ್ತು ನೀಡಿದೆ. ಕಳೆದ ಮೂರು ವರ್ಷಗಳಲ್ಲಿ 6,596 ಬಸ್ಸುಗಳು ನಿಗಮಗಳಿಗೆ ಸೇರಿಸಲಾಗಿದ್ದು, 2026–27ರಲ್ಲಿ ಇನ್ನೂ 1,000 ಡೀಸೆಲ್ ಬಸ್ಸುಗಳನ್ನು ಸೇರಿಸುವ ಯೋಜನೆ ರೂಪಿಸಲಾಗಿದೆ. ಇದರ ಜತೆಗೆ ವಿಶ್ವಬ್ಯಾಂಕ್ ನೆರವಿನೊಂದಿಗೆ 2,000 ಕೋಟಿ ರು. ವೆಚ್ಚದ ಕರ್ನಾಟಕ ಎಲೆಕ್ಟ್ರಿಕ್‌ ಬಸ್‌ ಪ್ರೋಗ್ರಾಂ (KEBP) ಜಾರಿಗೆ ತರಲಾಗಿದ್ದು, ಅದರಡಿ 4,000 ಎಲೆಕ್ಟ್ರಿಕ್ ಬಸ್ಸುಗಳನ್ನು ರಸ್ತೆಗಿಳಿಸುವ ಯೋಜನೆ ರೂಪಿಸಲಾಗಿದೆ. ಇದು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯತ್ತ ಸಾಗುವ ಮಹತ್ವದ ಹೆಜ್ಜೆಯಾಗಿದೆ.

Untitled design (1)

ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಪಘಾತ ಹೆಚ್ಚಾಗಿ ಸಂಭವಿಸುವ ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಲು ಐಐಟಿ ಮದ್ರಾಸ್ ಮತ್ತು ಎನ್‌ಐಸಿ ಸಹಯೋಗದಲ್ಲಿ ಆಧುನಿಕ ತಂತ್ರಾಂಶ ಅಭಿವೃದ್ಧಿಪಡಿಸುವ ಯೋಜನೆ ಕೂಡ ಘೋಷಿಸಲಾಗಿದೆ. ಅಲ್ಲದೆ ಸಾರಿಗೆ ಇಲಾಖೆಯ ಕಟ್ಟಡಗಳ ಮೇಲ್ಛಾವಣಿಯಲ್ಲಿ ರೂಫ್‌ಟಾಪ್ ಸೌರಶಕ್ತಿ ಘಟಕಗಳನ್ನು ಅಳವಡಿಸುವ ಯೋಜನೆ ಮೂಲಕ ಪರ್ಯಾಯ ಶಕ್ತಿ ಬಳಕೆಯತ್ತ ಗಮನ ಹರಿಸಲಾಗಿದೆ.

ಸಾರಿಗೆ ಮೂಲಸೌಕರ್ಯ ವೃದ್ಧಿಗೂ ಸರಕಾರ ಗಮನಹರಿಸಿದೆ. ತುಮಕೂರಿನಲ್ಲಿ ಸೀಜಿಂಗ್ ಯಾರ್ಡ್ ನಿರ್ಮಾಣ, ಚಿಕ್ಕಮಗಳೂರು ಹಾಗೂ ತುಮಕೂರಿನಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳು, ರಾಮದುರ್ಗ, ಹೊನ್ನಾಳಿ ಮತ್ತು ಗದಗದಲ್ಲಿ ಹೊಸ ಬಸ್ ನಿಲ್ದಾಣಗಳು, ಹಾಗೂ ತರೀಕೆರೆಯಲ್ಲಿ ಬಸ್ ಡಿಪೋ ನಿರ್ಮಾಣ ಮಾಡುವ ಯೋಜನೆಗಳನ್ನು ಘೋಷಿಸಲಾಗಿದೆ.

ಮೋಟಾರು ವಾಹನ ಕ್ಷೇತ್ರದಲ್ಲಿಯೂ ಚೇತರಿಕೆಯ ಲಕ್ಷಣಗಳು ಕಾಣಿಸುತ್ತಿವೆ. ದ್ವಿಚಕ್ರ ವಾಹನಗಳ ಮಾರಾಟದಲ್ಲಿ 13 ಶೇಕಡಾ ಮತ್ತು ಕಾರುಗಳ ಮಾರಾಟದಲ್ಲಿ 4 ಶೇಕಡಾ ಏರಿಕೆ ಕಂಡುಬಂದಿದೆ. 2025–26ರಲ್ಲಿ ಫೆಬ್ರವರಿ ಅಂತ್ಯದವರೆಗೆ ₹11,630 ಕೋಟಿ ಮೋಟಾರು ವಾಹನ ತೆರಿಗೆ ಸಂಗ್ರಹವಾಗಿದ್ದು, ಇದು ಕಳೆದ ವರ್ಷಕ್ಕಿಂತ 8.5 ಶೇಕಡಾ ಹೆಚ್ಚಳವಾಗಿದೆ. 2026–27ನೇ ಸಾಲಿಗೆ ಸಾರಿಗೆ ಇಲಾಖೆಗೆ ₹15,500 ಕೋಟಿ ತೆರಿಗೆ ಸಂಗ್ರಹ ಗುರಿ ನಿಗದಿಪಡಿಸಲಾಗಿದೆ.

ಹೆಚ್ಚಿನ ತೆರಿಗೆ ಇಲ್ಲಾ, ಹೆಚ್ಚಿನ ಸೆಸ್ಸ್ ವಿಧಿಸದೆ ಸಾಂತ್ವನದ ಆಯವ್ಯಯ ಅಂತ ಹೇಳಬಹುದು.

ಇದಲ್ಲದೆ ಕೈಗಾರಿಕೆ ಮತ್ತು ಸಾರಿಗೆ ವಲಯಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ Liquefied Natural Gas (LNG) ಮೇಲಿನ ಕರ್ನಾಟಕ ಮಾರಾಟ ತೆರಿಗೆಯನ್ನು 14.34 ಶೇಕಡಿಯಿಂದ 5 ಶೇಕಡಕ್ಕೆ ಇಳಿಸುವ ಪ್ರಸ್ತಾವನೆ ಮಾಡಲಾಗಿದೆ.

ಇದರ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರಕ್ಕೂ ಸರ್ಕಾರ ವಿಶೇಷ ಗಮನ ನೀಡಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್ ಆವರಣದಲ್ಲಿ ಉನ್ನತ ಮಟ್ಟದ ಜಾಗತಿಕ ಸಮ್ಮೇಳನಗಳು, ಶೃಂಗಸಭೆಗಳು ಹಾಗೂ ಪ್ರದರ್ಶನಗಳನ್ನು (MICE) ಆಯೋಜಿಸಲು ಅಂತಾರಾಷ್ಟ್ರೀಯ ಮಟ್ಟದ ಸಮಾವೇಶ ಕೇಂದ್ರವನ್ನು PPP ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಘೋಷಿಸಲಾಗಿದೆ.

ಕರಾವಳಿ ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ರೂಪಿಸಲಾಗುತ್ತಿದೆ. ಇದರಡಿ Sea Plane, Heli Taxi, Joy Ride ಮತ್ತು River Cruise ಸೇವೆಗಳನ್ನು ಪ್ರೋತ್ಸಾಹಿಸಿ ಪ್ರವಾಸಿ ತಾಣಗಳಿಗೆ ಸಂಪರ್ಕವನ್ನು ಹೆಚ್ಚಿಸಲಾಗುತ್ತದೆ.

ಪ್ರವಾಸಿಗಳಿಗೆ ಉತ್ತಮ ಅನುಭವ ನೀಡಲು ಟ್ಯಾಕ್ಸಿ ಹಾಗೂ ಆಟೋ ಚಾಲಕರು ಮತ್ತು ಭದ್ರತಾ ಸಿಬ್ಬಂದಿಗೆ ಸಾಫ್ಟ್‌ ಸ್ಕಿಲ್ಸ್‌ ತರಬೇತಿ ನೀಡಲು 1 ಕೋಟಿ ರು. ಅನುದಾನ ನೀಡಲಾಗಿದೆ. ಜತೆಗೆ ಆಯ್ದ ವಿಶ್ವವಿದ್ಯಾಲಯಗಳಲ್ಲಿ ಟೂರಿಸ್ಟ್‌ ಗೈಡ್‌ ಗಳಿಗೆ ಡಿಪ್ಲೊಮಾ ಕೋರ್ಸ್ ಆರಂಭಿಸಿ ಪರಿಣಿತ ಮಾರ್ಗದರ್ಶಕರನ್ನು ರೂಪಿಸುವ ಯೋಜನೆ ಕೂಡ ಘೋಷಿಸಲಾಗಿದೆ.

ಐತಿಹಾಸಿಕ ತಾಣಗಳಾದ ಗದಗ – ಕಪ್ಪತಗುಡ್ಡ – ಲಕ್ಕುಂಡಿ ಪ್ರದೇಶವನ್ನು ಪ್ರವಾಸೋದ್ಯಮ ಸರ್ಕ್ಯೂಟ್ ಆಗಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ – ಸೀತಾಳಯ್ಯನಗಿರಿ – ಕೈಮರ ಮಾರ್ಗದಲ್ಲಿ Ropeway ಯೋಜನೆ PPP ಮಾದರಿಯಲ್ಲಿ ನಿರ್ಮಿಸಲಾಗುತ್ತದೆ.

ರಾಜ್ಯದ ಸಂರಕ್ಷಿತ ಮತ್ತು ಅಸುರಕ್ಷಿತ ಸ್ಮಾರಕಗಳ ರಕ್ಷಣೆಗೆ 1,000 “ಸ್ಮಾರಕ ಮಿತ್ರರು”ರನ್ನು ಗುರುತಿಸಿ ತರಬೇತಿ ನೀಡುವ ಯೋಜನೆಯೂ ರೂಪಿಸಲಾಗಿದೆ. ಜೊತೆಗೆ ಅಂಜನಾದ್ರಿ ಬೆಟ್ಟವನ್ನು ವಿಶ್ವ ಮಟ್ಟದ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ₹100 ಕೋಟಿ ವೆಚ್ಚದ ಯೋಜನೆ ಕೈಗೊಳ್ಳಲಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಅನುಮತಿ ಹಾಗೂ UNESCO ಸಹಮತಿ ಪಡೆದು ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುತ್ತದೆ. Ropeway ನಿರ್ಮಾಣಕ್ಕೆ ₹7 ಕೋಟಿ ಅನುದಾನ ಮಂಜೂರು ಮಾಡುವ ಪ್ರಸ್ತಾವನೆ ಕೂಡ ಇದೆ.

ಒಟ್ಟಿನಲ್ಲಿ ಈ ಬಜೆಟ್‌ನಲ್ಲಿ ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ನೇರವಾಗಿ ತೆರಿಗೆ ವಿನಾಯಿತಿ ನೀಡದಿದ್ದರೂ, ಮೂಲಸೌಕರ್ಯ ಅಭಿವೃದ್ಧಿ, ಪರಿಸರ ಸ್ನೇಹಿ ಯೋಜನೆಗಳು ಮತ್ತು ಸಾರ್ವಜನಿಕ ಸಾರಿಗೆ ಬಲಪಡಿಸುವ ಮೂಲಕ ಉತ್ತೇಜನ ನೀಡುವ ಪ್ರಯತ್ನ ಕಂಡುಬರುತ್ತದೆ. ಘೋಷಿತ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೆ ಬಂದಾಗ ಮಾತ್ರ ಜನರಿಗೆ ನಿಜವಾದ ಪ್ರಯೋಜನ ದೊರೆಯಲಿದೆ.