ಪ್ರವಾಸೋದ್ಯಮದ ಮೂಲಕ ಪ್ರಾದೇಶಿಕ ಆರ್ಥಿಕ ಸ್ವಾತಂತ್ರ್ಯದ ಹೊಸ ಪರಿಕಲ್ಪನೆ
ಕರ್ನಾಟಕದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರಕಾರವು ಸುಮಾರು ₹718 ಕೋಟಿ ಮೌಲ್ಯದ ಹೊಸ ಪ್ರವಾಸೋದ್ಯಮ ಯೋಜನೆಗಳನ್ನು ಘೋಷಿಸಿದೆ. ಕರಾವಳಿ ಕರ್ನಾಟಕವನ್ನು ʻಸಿಲಿಕಾನ್ ಬೀಚ್ ಕೋಸ್ಟ್ ಆಫ್ ಇಂಡಿಯಾʼ ಆಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ಕರಾವಳಿ, ಇಕೋ-ಟೂರಿಸಂ, ಹೆರಿಟೇಜ್ ಮತ್ತು ಸಾಹಸ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಮಂಗಳೂರು, ಉಡುಪಿ, ಕಾರವಾರ, ಜೋಗ, ಹಂಪಿ, ಮೈಸೂರು ಸೇರಿದಂತೆ ಹಲವು ತಾಣಗಳ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
- ಕೆ. ರಾಧಾಕೃಷ್ಣ ಹೊಳ್ಳ
ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ (KSTOA)
ನಿರ್ದೇಶಕರು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿ (FKCCI)
ಜಾಗತಿಕ ಆರ್ಥಿಕ ಅನಿಶ್ಚಿತತೆ, ಯುದ್ಧಗಳು ಮತ್ತು ಉತ್ಪಾದನಾ ವಲಯದ ಏರಿಳಿತಗಳ ನಡುವೆಯೂ, ಪ್ರವಾಸೋದ್ಯಮವು ಉದ್ಯೋಗ, ಹೂಡಿಕೆ ಮತ್ತು ಪ್ರಾದೇಶಿಕ ಅಭಿವೃದ್ಧಿಯ ಪ್ರಮುಖ ಸಾಧನವಾಗಿ ಹೊರಹೊಮ್ಮುತ್ತಿದೆ. ಇದೇ ಕಾರಣಕ್ಕೆ ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ, ಆಂಧ್ರಪ್ರದೇಶ, ಗೋವಾ ಮತ್ತು ಪುದುಚೇರಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪ್ರವಾಸೋದ್ಯಮವನ್ನು ತಮ್ಮ ಆರ್ಥಿಕ ನೀತಿಯ ಕೇಂದ್ರಬಿಂದುವಾಗಿಸಿಕೊಂಡು ಹೊಸ ದಿಕ್ಕಿನತ್ತ ಸಾಗುತ್ತಿವೆ.
ದೇಶದ ಜಿಡಿಪಿಗೆ ಸುಮಾರು 7-8% ಕೊಡುಗೆ ನೀಡುವ ಪ್ರವಾಸೋದ್ಯಮ ಕ್ಷೇತ್ರವು ನೇರ ಮತ್ತು ಪರೋಕ್ಷವಾಗಿ 8 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ. ಮುಂದಿನ ದಶಕದಲ್ಲಿ ಸೇವಾ ವಲಯ ಆಧಾರಿತ ಆರ್ಥಿಕತೆಯಲ್ಲಿ ದಕ್ಷಿಣ ಭಾರತವು ಪ್ರಮುಖ ಪಾತ್ರ ವಹಿಸುವ ಎಲ್ಲ ಸಾಧ್ಯತೆಗಳಿವೆ.
ಇದನ್ನೂ ಓದಿ: ಪ್ರವಾಸೋದ್ಯಮಕ್ಕೆ ಪ್ರವಾಸೋದ್ಯಮವೇ ವೈರಿ ಆದಾಗ...!
ಕರ್ನಾಟಕದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರಕಾರವು ಸುಮಾರು ₹718 ಕೋಟಿ ಮೌಲ್ಯದ ಹೊಸ ಪ್ರವಾಸೋದ್ಯಮ ಯೋಜನೆಗಳನ್ನು ಘೋಷಿಸಿದೆ. ಕರಾವಳಿ ಕರ್ನಾಟಕವನ್ನು ʻಸಿಲಿಕಾನ್ ಬೀಚ್ ಕೋಸ್ಟ್ ಆಫ್ ಇಂಡಿಯಾʼ ಆಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ಕರಾವಳಿ, ಇಕೋ-ಟೂರಿಸಂ, ಹೆರಿಟೇಜ್ ಮತ್ತು ಸಾಹಸ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಮಂಗಳೂರು, ಉಡುಪಿ, ಕಾರವಾರ, ಜೋಗ, ಹಂಪಿ, ಮೈಸೂರು ಸೇರಿದಂತೆ ಹಲವು ತಾಣಗಳ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
ತಮಿಳುನಾಡು ಸರಕಾರವು ಸುಮಾರು 22 ಕೋಟಿ ಮೌಲ್ಯದ ಹೂಡಿಕೆ ಯೋಜನೆಗಳನ್ನು ರೂಪಿಸಿದೆ. ಚೆನ್ನೈ, ಮಹಾಬಲಿಪುರಂ, ರಾಮೇಶ್ವರಂ, ಕನ್ಯಾಕುಮಾರಿ, ನೀಲಗಿರಿ ಮತ್ತು ಮಧುರೈ ಪ್ರದೇಶಗಳನ್ನು ಜಾಗತಿಕ ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ರಾಜ್ಯವು 2036ರ ವೇಳೆಗೆ 1.5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯತ್ತ ಸಾಗುತ್ತಿದೆ.
ತೆಲಂಗಾಣ ಸರಕಾರವು 2026-27ರ ಬಜೆಟ್‌ನಲ್ಲಿ 1,224 ಕೋಟಿ ರು. ಮೀಸಲಿಟ್ಟಿದ್ದು, 2030ರ ವೇಳೆಗೆ 15 ಕೋಟಿ ರು. ಖಾಸಗಿ ಹೂಡಿಕೆ ಆಕರ್ಷಿಸುವ ಗುರಿ ಹೊಂದಿದೆ. ಹೈದರಾಬಾದ್ ಅನ್ನು ಅಂತಾರಾಷ್ಟ್ರೀಯ MICE, ವೈದ್ಯಕೀಯ ಮತ್ತು ನಗರ ಪ್ರವಾಸೋದ್ಯಮದ ಕೇಂದ್ರವನ್ನಾಗಿ ರೂಪಿಸಲಾಗುತ್ತಿದೆ.

ಕೇರಳ ಸರಕಾರವು ಸುಮಾರು 320 ಕೋಟಿ ರು. ಅನುದಾನದೊಂದಿಗೆ ಸುಸ್ಥಿರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಬ್ಯಾಕ್‌ವಾಟರ್, ಆಯುರ್ವೇದ, ವೆಲ್‌ನೆಸ್ ಮತ್ತು ಗ್ರಾಮೀಣ ಪ್ರವಾಸೋದ್ಯಮದ ಮೂಲಕ ʼದೇವರ ನಾಡುʼ ಬ್ರ್ಯಾಂಡ್ ಅನ್ನು ಮತ್ತಷ್ಟು ಬಲಪಡಿಸುತ್ತಿದೆ.
ಗೋವಾ ಸರಕಾರವು ಸುಮಾರು 385 ಕೋಟಿ ರು. ಮೀಸಲಿಟ್ಟು ಬೀಚ್, ಕ್ರೂಸ್ ಮತ್ತು ನೈಟ್ ಎಕಾನಮಿ ಆಧಾರಿತ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುತ್ತಿದೆ. ಪುದುಚೇರಿ ಸರಕಾರವು ಸುಮಾರು 72 ಕೋಟಿ ರು.ಅನುದಾನದೊಂದಿಗೆ ಫ್ರೆಂಚ್ ಪರಂಪರೆ ಮತ್ತು ಕರಾವಳಿ ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತಿದೆ.
ಆಂಧ್ರಪ್ರದೇಶವು 974 ಕಿಮೀ. ಉದ್ದದ ಕರಾವಳಿ ಪ್ರದೇಶವನ್ನು ಆಧರಿಸಿ ವಿಶಾಖಪಟ್ಟಣಂ, ತಿರುಪತಿ ಮತ್ತು ಅಮರಾವತಿಯನ್ನು ಜಾಗತಿಕ ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ರೂಪಿಸಲು ಸಾವಿರಾರು ಕೋಟಿ ರುಪಾಯಿಗಳ ಯೋಜನೆಗಳನ್ನು ಕೈಗೊಂಡಿದೆ.
ಈ ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ವಾರ್ಷಿಕ ಬಜೆಟ್ ಗಾತ್ರ ಸುಮಾರು 20 ಲಕ್ಷ ಕೋಟಿ ಮೀರಿದ್ದು, ಪ್ರವಾಸೋದ್ಯಮ, ಮೂಲಸೌಕರ್ಯ ಮತ್ತು ಸೇವಾ ವಲಯಕ್ಕೆ ಲಕ್ಷಾಂತರ ಕೋಟಿ ರುಪಾಯಿಗಳ ಹೂಡಿಕೆ ಅವಕಾಶಗಳು ಸೃಷ್ಟಿಯಾಗುತ್ತಿವೆ. ರಸ್ತೆ, ವಿಮಾನ ನಿಲ್ದಾಣ, ಬಂದರು, ಹೊಟೇಲ್, ಹೋಂಸ್ಟೇ, ಸಾರಿಗೆ, ಕೃಷಿ, ಮೀನುಗಾರಿಕೆ, ಕರಕುಶಲ ಮತ್ತು ಸಣ್ಣ ಉದ್ಯಮಗಳಿಗೆ ಈ ಬೆಳವಣಿಗೆ ಹೊಸ ಜೀವ ತುಂಬುತ್ತಿದೆ.
ಇಂದು ದಕ್ಷಿಣ ಭಾರತದ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆ ಆರಂಭವಾಗಿದೆ. ಆದರೆ ಈ ಸ್ಪರ್ಧೆಯ ಅಂತಿಮ ಗುರಿ ಒಂದೇ – ಪ್ರವಾಸೋದ್ಯಮದ ಮೂಲಕ ಪ್ರಾದೇಶಿಕ ಆರ್ಥಿಕ ಸ್ವಾತಂತ್ರ್ಯ ಸಾಧಿಸುವುದು. ಮುಂದಿನ ಹತ್ತು ವರ್ಷಗಳಲ್ಲಿ ದಕ್ಷಿಣ ಭಾರತವು ಏಷ್ಯಾದ ಅತ್ಯಂತ ಶಕ್ತಿಶಾಲಿ ಪ್ರವಾಸೋದ್ಯಮ ಮತ್ತು ಸೇವಾ ಆರ್ಥಿಕ ವಲಯವಾಗಿ ಹೊರಹೊಮ್ಮುವ ಎಲ್ಲ ಸಾಧ್ಯತೆಗಳಿವೆ. ವಿಶ್ವದ ಅನೇಕ ರಾಷ್ಟ್ರಗಳಂತೆ, ಭಾರತದಲ್ಲಿಯೂ ಪ್ರವಾಸೋದ್ಯಮವು ಉದ್ಯೋಗ, ಹೂಡಿಕೆ ಮತ್ತು ಸಮೃದ್ಧಿಯ ಹೊಸ ಅಧ್ಯಾಯವನ್ನು ಬರೆಯಲಿದ್ದು, ದಕ್ಷಿಣ ಭಾರತವು ಅದರ ಮುಂಚೂಣಿಯಲ್ಲಿರಲಿದೆ.
ʻಬಲಿಷ್ಠ ರಾಜ್ಯಗಳು – ಬಲಿಷ್ಠ ದಕ್ಷಿಣ ಭಾರತ – ಬಲಿಷ್ಠ ಭಾರತʼ ಎಂಬ ಪರಿಕಲ್ಪನೆಗೆ ಪ್ರವಾಸೋದ್ಯಮವೇ ಹೊಸ ಶಕ್ತಿಯಾಗಲಿದೆ.