Monday, April 6, 2026
Monday, April 6, 2026

ತುಂಗಾತೀರದಿಂದ ಮುಂಬೈ ಕಡಲತೀರದವರೆಗೆ ಕಾವ್ಯಯಾನ

ದುರದೃಷ್ಟವಶಾತ್ ಶೂಟಿಂಗ್ ವೇಳೆ ಪ್ರವಾಸಿ ತಾಣಗಳನ್ನು ನೋಡುವ ಅವಕಾಶ ನನಗೆ ಲಭಿಸಿಲ್ಲ. ಆದರೆ 'ಖತರ್ನಾಕ್' ಸಿನಿಮಾ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ಚಿತ್ರೀಕರಣ ನಡೆದಿತ್ತು. ಆಗ ದುರ್ಗದ ಪರಿಸರದಲ್ಲಿ ಸುತ್ತಾಡಿದ್ದೆ.

  • ಶಶಿಕರ ಪಾತೂರು

ಕಾವ್ಯ ದಿಟ್ಟ ಪಾತ್ರ ನಿರ್ವಹಣೆಯ ಮೂಲಕ ಸುದ್ದಿಯಾದವರು. ‘141’ ಎಂಬ ಚಿತ್ರದಲ್ಲಿ ವಿದೇಶೀ ಮಹಿಳೆಯನ್ನು ಪ್ರೀತಿಸುವ ಹುಡುಗಿಯಾಗಿ ಕಾಣಿಸಿದ ಕಾವ್ಯಾ ಬಳಿಕ ಭೋಜ್ ಪುರಿ ಸಿನಿಮಾಗಳಲ್ಲೂ ನಟಿಸಿದರು. ಉಡುಪಿಯಲ್ಲಿ ಹುಟ್ಟಿ, ತೀರ್ಥಹಳ್ಳಿಯಲ್ಲಿ ಬೆಳೆದು, ಮುಂಬೈನಲ್ಲಿ ಕಲಿತು ಮತ್ತೆ ಕನ್ನಡಕ್ಕೆ ಮರಳಿದ್ದಾರೆ. ಪ್ರಸ್ತುತ 'ಮ್ಯಾರೇಜ್ ಪಾರ್ಟಿ' ಎನ್ನುವ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಕಾವ್ಯ ತಮ್ಮ ಪ್ರವಾಸಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಮೊದ‌ಮೊದಲ ಪ್ರವಾಸ ಅಂದಾಗ ನಿಮಗೆ ನೆನಪಾಗುವುದೇನು?

-ನನ್ನ ಸ್ಕೂಲ್, ಕಾಲೇಜ್ ಎಲ್ಲ ಮುಂಬೈನಲ್ಲೇ ನಡೆಯಿತು. ಆ‌ ಸಂದರ್ಭದಲ್ಲಿ ಲೋನಾವಾಲದ ವಾಟರ್ ಪಾರ್ಕ್ ಗೆ ಹೋಗಿದ್ದೆವು. ಬೆಂಗಳೂರಿಗೆ ಬಂದ ಮೇಲೆ ವಂಡರ್ ಲಾಗೂ ಹೋಗಿದ್ದೇನೆ. ಆದರೆ ನಮ್ಮ ಮಲೆನಾಡಿನ ಪ್ರಾಕೃತಿಕ ಮಳೆಯಷ್ಟು ಖುಷಿಯನ್ನು ಯಾವ ವಾಟರ್ ಪಾರ್ಕ್ ಗಳೂ ನೀಡಿಲ್ಲ.

ಇದನ್ನೂ ಓದಿ: ಲವ್‌ ಮಾಕ್ಟೇಲ್‌ಗಾಗಿ ಊರೂರು ತಿರುಗಿದ ಡಾರ್ಲಿಂಗ್‌

ಮುಂಬೈ ಅಂದೊಡನೆ ನಿಮಗೆ ನೆನಪಾಗುವುದೇನು?

-ಮುಂಬೈ ಪ್ರವಾಸ ಅಂದರೆ ಬೀಚ್ ನೆನಪಾಗಲೇಬೇಕು. ಆದರೆ ನನಗೆ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದೊಂದಿಗೆ ಭಾವನಾತ್ಮಕ ಅನುಬಂಧವಿದೆ‌. ಮದುವೆಯ ಮೊದಲ ಪತ್ರಿಕೆಯನ್ನು ಕೂಡ ಗಣೇಶನಿಗೆ ಕೊಟ್ಟು ಆಶೀರ್ವಾದ ಬೇಡಿದ್ದೆ. ಅದೇನೋ ಗೊತ್ತಿಲ್ಲ‌, ದಾದರ್ ನಲ್ಲಿರುವ ಆ ಗಣೇಶನ ಮುಂದೆ ಪ್ರಾರ್ಥಿಸಬೇಕಾದರೆ ಪ್ರತಿ ಬಾರಿಯೂ ನನಗೆ ಕಣ್ಣೀರು ಬಂದು ಬಿಡುತ್ತದೆ.

Untitled design (68)

ನೀವು ಬೆಳೆದಿರುವುದೇ ಒಂದು ಪ್ರವಾಸಿ ತಾಣದಲ್ಲಿ. ಆ ಬಗ್ಗೆ ಹೇಳಿ.

-ಹೌದು. ತೀರ್ಥಹಳ್ಳಿಯ ನಮ್ಮ ಮನೆ ತುಂಗಾ‌ನದಿಯ ತೀರದಲ್ಲೇ ಇರುವ ಕಾರಣ ನೀರು, ಹಸಿರು ಸಿರಿಯ ಸೊಬಗಿನೊಂದಿಗೆ ಬೆಳೆದೆ. ಅಲ್ಲಿ ಚಿಬ್ಬಲಗುಡ್ಡದ ಸಿದ್ಧಿವಿನಾಯಕ ದೇವಾಲಯವಿದೆ. ಶೃಂಗೇರಿಯಂತೆ ಇಲ್ಲಿಯೂ ಮೀನುಗಳಿಗೆ ಆಹಾರ ನೀಡುವುದನ್ನು ಕಾಣಬಹುದಾಗಿದೆ. ಕುಪ್ಪಳಿಯ ಕವಿಶೈಲ ಇತರ ಪ್ರವಾಸಿಗಳಂತೆ ನಮಗೂ ಮೆಚ್ಚಿನ ತಾಣ. ನಾನು ನಮ್ಮೂರಿಂದ ಕೊಲ್ಲೂರಿನ ಕೊಡಚಾದ್ರಿಯ ತನಕವೂ ಸುತ್ತಾಡಿದ್ದೇನೆ.

ಈ ಪ್ರವಾಸಗಳಲ್ಲಿ ನಿಮಗೆ ಮರೆಯಲಾಗದ ಅನುಭವ ಸಿಕ್ಕಿದ್ದೆಲ್ಲಿ?

-ಅಂಥದೊಂದು ಅನುಭವ ನೀಡಿದ್ದು ಕೂಡ ಕೊಡಚಾದ್ರಿ ಬೆಟ್ಟವೇ ಎಂದು ಹೇಳಬಹುದು. ಕೊಲ್ಲೂರು ಕ್ಷೇತ್ರದ ಹಿಂಬದಿಯಲ್ಲಿರುವ ಕೊಡಚಾದ್ರಿ ಬೆಟ್ಟ ಹತ್ತುವುದೇ ಒಂದು ಸಾಹಸ. ನಾನು ಹೋಗಿದ್ದು ಅಕ್ಕಪಕ್ಕದ ಮನೆಯ ಮಕ್ಕಳೊಡನೆ. ಬೆಟ್ಟದ ಮೇಲ್ಗಡೆ ಸರ್ವಜ್ಞ ಪೀಠವಿದೆ. ಗಣಪತಿ ಗುಹೆಯ ತನಕ ಪ್ರವೇಶ ಇದೆ. ಆದರೆ ಚಿತ್ರಮೂಲ ಗುಹೆಗೆ ಪ್ರವೇಶ ನಿಷೇಧಿಸಲಾಗಿದೆ. ನಾವು ಆ ದಾರಿಯಲ್ಲಿ ಮುಂದೆ ಸಾಗಿದಾಗ ಮಣ್ಣಿನ ದಾರಿಯಲ್ಲಿ ಕಾಡುಕೋಣದ ಹೆಜ್ಜೆ‌ಗುರುತು ಕಾಣಿಸಿತ್ತು. ಭಯಗೊಂಡ ನಾನು ಮಕ್ಕಳೊಂದಿಗೆ ಅಲ್ಲಿಂದ ವಾಪಾಸು ಓಡಿ ಬಂದಿದ್ದೆ. ಓಡುವ ಭರದಲ್ಲಿ ಪ್ರಪಾತದ ದಾರಿಯಲ್ಲಿ ಉರುಳಿ ಬಿದ್ದಿದ್ದರೆ ಏನಾಗುತ್ತಿತ್ತು ಎಂದು‌ ಊಹಿಸಿಕೊಂಡರೆ ಈಗಲೂ ಭಯವಾಗುತ್ತದೆ.

ಪುಣ್ಯಕ್ಷೇತ್ರಗಳ ಪ್ರಾಕೃತಿಕ ಸೌಂದರ್ಯದ ಬಗ್ಗೆ ಏನು ಹೇಳುತ್ತೀರಿ?

-ಆ ಕ್ಷೇತ್ರಗಳು ಅಂಥ ಪ್ರಾಕೃತಿಕ ಸೌಂದರ್ಯದಲ್ಲಿರುವುದರಿಂದಲೇ ಬಹುಶಃ ಪುಣ್ಯಕ್ಷೇತ್ರಗಳಾಗಿ ಗುರುತಿಸಲ್ಪಡುತ್ತಿರಬೇಕು! ನನ್ನ ಗಂಡನ ಮನೆ ಕೇರಳದ ಮಂಜೇಶ್ವರದಲ್ಲಿದೆ. ಇಲ್ಲಿನ ಮದನಂತೇಶ್ವರ ದೇವಾಲಯ ಸೇರಿದಂತೆ ತಿರುವನಂತಪುರದ ಅನಂತೇಶ್ವರನ ಸನ್ನಿಧಿ ತನಕ ದರ್ಶನ ಮಾಡಿದ್ದೇವೆ. ಎಲ್ಲೆಡೆಯೂ ಕೊಳ, ನದಿ ಮುಂತಾದವೇ ಪ್ರಮುಖ‌ ಆಕರ್ಷಣೆಗಳು. ಕುಂಬ್ಳೆಯ ದೇಗುಲದಲ್ಲಿನ ಮೊಸಳೆಯ ಬಗ್ಗೆ ನೀವು ಕೇಳಿರಬಹುದು. ಅದನ್ನೂ ನೋಡಿದ್ದೇನೆ.

Untitled design (69)

ನಿಮ್ಮ ಮಧುಚಂದ್ರದ ದಿನಗಳನ್ನು ಕಳೆದಿದ್ದೆಲ್ಲಿ?

-ನಾವು ರಾಜ್ಯದೊಳಗೆ ತುಂಬ ಕಡೆಗಳಲ್ಲಿ ಸುತ್ತಾಡಿದ್ದೆವು. ಮಡಿಕೇರಿಯ ಅಬ್ಬಿ ಫಾಲ್ಸ್, ರಾಜಾಸೀಟ್ ಉದ್ಯಾನವನಗಳಿಗೆ ಹೋಗಿದ್ದೆವು. ಮಲ್ಪೆ ಬಂದರಿನಿಂದ ಬೋಟ್ ಮೂಲಕ ಸೈಂಟ್ ಮೇರೀಸ್ ದ್ವೀಪಕ್ಕೆ‌ ಹೋದಾಗ ವಿದೇಶಕ್ಕೆ ಹೋದ ಅನುಭವವಾಗಿತ್ತು. ಅಲ್ಲಿನ ಮರಳು, ಕಲ್ಲುಗಳು ಎಲ್ಲವೂ ವಿಭಿನ್ನವಾಗಿತ್ತು. ಅದೇ ರೀತಿ ಗೋವಾ‌ಗೆ ಹೋದಾಗ ಪತಿಯೊಂದಿಗೆ ದೂಧ್ ಸಾಗರ್ ಜಲಪಾತ ನೋಡಿದ್ದು ಕೂಡ ಸ್ಮರಣೀಯವಾಗಿತ್ತು.

ಚಿತ್ರೀಕರಣ ಸಂದರ್ಭದಲ್ಲಿ ನಿಮ್ಮ ಗಮನ ಸೆಳೆದ ಲೊಕೇಶನ್ಸ್ ಯಾವುದು?

-ದುರದೃಷ್ಟವಶಾತ್ ಶೂಟಿಂಗ್ ವೇಳೆ ಪ್ರವಾಸಿ ತಾಣಗಳನ್ನು ನೋಡುವ ಅವಕಾಶ ನನಗೆ ಲಭಿಸಿಲ್ಲ. ಆದರೆ 'ಖತರ್ನಾಕ್' ಸಿನಿಮಾ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ಚಿತ್ರೀಕರಣ ನಡೆದಿತ್ತು. ಆಗ ದುರ್ಗದ ಪರಿಸರದಲ್ಲಿ ಸುತ್ತಾಡಿದ್ದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat