Saturday, September 19, 2026
Saturday, September 19, 2026

ಕಬಿನಿ ರಿವರ್ ಲಾಡ್ಜ್ ನಾಗರಹೊಳೆ ವನ್ಯಜೀವಿಗಳ ಅದ್ಭುತ ಲೋಕ

ಕಾಡಿನ ಮಧ್ಯೆ ಇರೋ ರೆಸಾರ್ಟ್‌ಗಳು ಬೇರೆ, ಆದರೆ 'ಕಬಿನಿ ರಿವರ್ ಲಾಡ್ಜ್' ಅನುಭವವೇ ಬೇರೆ! ಭಾರತದ ಅತ್ಯುತ್ತಮ ಜಂಗಲ್ ಅನುಭವಗಳಿಗೆ ಇದು ಹೆಸರಾಗಿದೆ.

ಕಾಡಿನ ಮಧ್ಯೆ ಇರೋ ರೆಸಾರ್ಟ್‌ಗಳು ಬೇರೆ, ಆದರೆ 'ಕಬಿನಿ ರಿವರ್ ಲಾಡ್ಜ್' ಅನುಭವವೇ ಬೇರೆ! ಭಾರತದ ಅತ್ಯುತ್ತಮ ಜಂಗಲ್ ಅನುಭವಗಳಿಗೆ ಇದು ಹೆಸರಾಗಿದೆ. ಕರ್ನಾಟಕದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಕ್ಷಿಣದಂಚಿನಲ್ಲಿರುವ ಈ ಸುಂದರ ಜಾಗ ಕೇವಲ ಉಳಿದುಕೊಳ್ಳುವ ಜಾಗವಲ್ಲ, ಭಾರತದ ಅತ್ಯಂತ ಶ್ರೀಮಂತ ವನ್ಯಜೀವಿ ಧಾಮದೊಳಗೆ ಕೊಂಡೊಯ್ಯುವ ಒಂದು ರೋಮಾಂಚನಕಾರಿ ಪ್ರಯಾಣ. ನೀವು ವನ್ಯಜೀವಿ ಪ್ರೇಮಿಯಾಗಿರಲಿ, ಫೊಟೋಗ್ರಫರ್ ಆಗಿರಲಿ, ಅಥವಾ ಸಿಟಿ ಲೈಫ್‌ನಿಂದ ಸ್ವಲ್ಪ ರಿಲ್ಯಾಕ್ಸ್ ಆಗಲು ಬಯಸುವವರಾಗಿರಲಿ, ಕಬಿನಿ ರಿವರ್ ಲಾಡ್ಜ್ ನಿಮಗೆ ಸಾಹಸ, ಇತಿಹಾಸ ಮತ್ತು ಹಾಯಾದ ಅದ್ಭುತ ಅನುಭವ ನೀಡುತ್ತದೆ. ಭಾರತದಲ್ಲೇ ಇರುವ ನಂಬರ್‌ ಒನ್‌ ಜಂಗಲ್‌ ಲಾಡ್ಜ್‌ ಯಾವುದು ಎಂದು ಕೇಳಿದರೆ ನಿಸ್ಸಂದೇಹವಾಗಿ ಕಬಿನಿ ಹೆಸರು ಕೇಳಿಬರುತ್ತದೆ. ಅಷ್ಟೇ ಅಲ್ಲ, ಅತಿ ಹೆಚ್ಚು ಡಿಮ್ಯಾಂಡ್‌ ಇರುವ ತಾಣವೂ ಹೌದು.

ಇತಿಹಾಸವಿರುವ ಹೆಮ್ಮೆಯ ತಾಣ

Untitled design (76)

ಇದು ಭಾರತದ ನಂ.1 ವನ್ಯಜೀವಿ ಲಾಡ್ಜ್ ಆಗಿ ಬೆಳೆಯುವುದಕ್ಕೂ ಮುಂಚೆ, ಮೈಸೂರು ಮಹಾರಾಜರ ಬೇಟೆಯ ವಿಶ್ರಾಂತಿ ಧಾಮವಾಗಿತ್ತು. ಇಂದು ಈ ವಸಾಹತುಶಾಹಿ ಶೈಲಿಯ ಎಸ್ಟೇಟ್, ತನ್ನ ಹಳೆಯ ಕಾಲದ ಅಂದವನ್ನು ಹಾಗೇ ಉಳಿಸಿಕೊಂಡು ಅತ್ಯುತ್ತಮ ಇಕೋ-ಟೂರಿಸಮ್ ತಾಣವಾಗಿ ಬದಲಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿರುವ ಈ ಲಾಡ್ಜ್ ಅನ್ನು ಬ್ರಿಟಿಷ್ 'ಟಾಟ್ಲರ್ ಟ್ರಾವೆಲ್ ಗೈಡ್' ಜಗತ್ತಿನ ಟಾಪ್ 5 ವನ್ಯಜೀವಿ ರೆಸಾರ್ಟ್‌ಗಳಲ್ಲಿ ಒಂದೆಂದು ಗುರುತಿಸಿತ್ತು. ಇದು ಇಲ್ಲಿನ ಅದ್ಭುತ ಲೊಕೇಷನ್ ಮತ್ತು ಅಪ್ಪಟ ವನ್ಯಜೀವಿ ಅನುಭವಕ್ಕೆ ಸಿಕ್ಕಿದ ದೊಡ್ಡ ಪ್ರಮಾಣಪತ್ರ.

ಆನೆಗಳ ನಾಡಿನ ನಡುವೆ

Untitled design (75)

ಕಬಿನಿ ರಿವರ್ ಲಾಡ್ಜ್‌ನ ದೊಡ್ಡ ಪ್ಲಸ್ ಪಾಯಿಂಟ್ ಅಂದರೆ ಇದರ ಲೊಕೇಷನ್. ಕಬಿನಿ ನದಿ ತೀರದಲ್ಲಿದ್ದು, ನೇರವಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ (ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ) ಹೊಂದಿಕೊಂಡಿದೆ. ಈ ಪ್ರದೇಶದಲ್ಲಿ ಏನೇನು ಕಾಣಬಹುದು ಗೊತ್ತಾ?

  • ಕಾಡಾನೆಗಳ ದೊಡ್ಡ ಹಿಂಡುಗಳು
  • ರಾಯಲ್ ಬೆಂಗಾಲ್ ಟೈಗರ್ (ಹುಲಿ)
  • ಭಾರತೀಯ ಚಿರತೆಗಳು
  • ಕರಡಿಗಳು
  • ಕಾಡುಕೋಣಗಳು (ಗೌರ್)
  • ಜಿಂಕೆಗಳು ಮತ್ತು ಕಾಡುಹಂದಿಗಳು
  • ಮೊಸಳೆಗಳು
  • 300ಕ್ಕೂ ಹೆಚ್ಚು ವಿಧದ ಪಕ್ಷಿಗಳು

ಬೇಸಗೆಯಲ್ಲಿ, ಅದರಲ್ಲೂ ಮಾರ್ಚ್‌ನಿಂದ ಮೇ ವರೆಗೆ ಕಾಡಿನೊಳಗಿನ ನೀರಿನ ಮೂಲಗಳು ಬತ್ತಿಹೋಗುವುದರಿಂದ, ಪ್ರಾಣಿಗಳು ಕಬಿನಿ ನದಿಯ ಕಡೆಗೆ ಬರುತ್ತವೆ. ಆಗ ಅಪಾರ ಸಂಖ್ಯೆಯ ಕಾಡಾನೆಗಳನ್ನು ಒಂದೇ ಕಡೆ ಕಣ್ಣುತುಂಬಿಕೊಳ್ಳಬಹುದು.

ರೂಮ್ಸ್ ಮತ್ತು ಕಾಟೇಜ್‌ಗಳು

ಕಬಿನಿ ರಿವರ್ ಲಾಡ್ಜ್‌ನಲ್ಲಿ ಎಲ್ಲರ ಬಜೆಟ್‌ಗೆ ತಕ್ಕಂತೆ ವಾಸಿಸಲು ವ್ಯವಸ್ಥೆಯಿದೆ. ಮುಖ್ಯವಾಗಿ ಮೂರು ವಿಧದ ರೂಮ್‌ಗಳಿವೆ:

  1. ಮಹಾರಾಜ ಕಾಟೇಜ್

ಇದು ಅತ್ಯಂತ ಐಷಾರಾಮಿ ಕೊಠಡಿ. ಸುತ್ತಲೂ ಹಸಿರಿನ ನಡುವೆ ವಿಶಾಲವಾದ ಹೆರಿಟೇಜ್ ಕಾಟೇಜ್‌ಗಳು ಇರುತ್ತವೆ. ಜೋಡಿಗಳು, ಕುಟುಂಬದವರು ಮತ್ತು ಐಷಾರಾಮಿ ಅನುಭವ ಬಯಸುವವರಿಗೆ ಇದು ಬೆಸ್ಟ್.

  • ತಂಗಲು ರೂಮ್
  • ಮಧ್ಯಾಹ್ನದ ಊಟ
  • ರಾತ್ರಿ ಊಟ
  • ಉಪಾಹಾರ
  • ಎರಡು ಜೀಪ್ ಸಫಾರಿ
  • ತೆಪ್ಪದ ಸವಾರಿ
  • ಅರಣ್ಯ ಪ್ರವೇಶ ಶುಲ್ಕ ಮತ್ತು ಜಿಎಸ್‌ಟಿ (GST)

    2. ವೈಸರಾಯ್ ರೂಮ್ಸ್

ಉತ್ತರ ಮತ್ತು ಪೂರ್ವ ಬಂಗಲೆಗಳಲ್ಲಿರುವ ಈ ಹಳೆಯ ಕಾಲದ ಐಷಾರಾಮಿ ರೂಮ್‌ಗಳು ಮಾಡರ್ನ್ ಸೌಲಭ್ಯಗಳನ್ನೂ ಹೊಂದಿವೆ.

  • ತಂಗಲು ರೂಮ್
  • ಎಲ್ಲ ಊಟಗಳು
  • ಒಂದು ಬೋಟ್ ಸಫಾರಿ ಅಥವಾ ಬಸ್ ಸಫಾರಿ
  • ಒಂದು ಜೀಪ್ ಸಫಾರಿ
  • ತೆಪ್ಪದ ಸವಾರಿ, ಅರಣ್ಯ ಪ್ರವೇಶ ಶುಲ್ಕ ಹಾಗೂ ಜಿಎಸ್‌ಟಿ

    3. ಕಬಿನಿ ಟೆಂಟೆಡ್ ಕಾಟೇಜ್‌ಗಳು

ಪ್ರಕೃತಿ ಹತ್ತಿರದಿಂದಲೇ ಅನುಭವಿಸಬೇಕು ಎನ್ನುವವರಿಗೆ ಇದು ಸೂಕ್ತವಾದ 'ಗ್ಲಾಂಡಿಂಗ್' ಅನುಭವ ನೀಡುತ್ತದೆ.

  • ತಂಗಲು ಟೆಂಟ್ ರೂಮ್
  • ಎಲ್ಲ ಊಟಗಳು
  • ಒಂದು ಬೋಟ್ ಸಫಾರಿ ಅಥವಾ ಬಸ್ ಸಫಾರಿ
  • ಒಂದು ಜೀಪ್ ಸಫಾರಿ
  • ಅರಣ್ಯ ಪ್ರವೇಶ ಶುಲ್ಕ ಮತ್ತು ಜಿಎಸ್‌ಟಿ

ಬೆಲೆಗಳು ಒಬ್ಬರಿಗೆ, ಇಬ್ಬರು ಒಟ್ಟಿಗೆ ಇರುವುದರ ಮೇಲೆ (Twin-sharing) ನಿಂತಿರುತ್ತವೆ. ಸೀಸನ್ ಹಾಗೂ ಪ್ಯಾಕೇಜ್‌ಗೆ ತಕ್ಕಂತೆ ಸಾಮಾನ್ಯವಾಗಿ ರು.12,000 ದಿಂದ ಆರಂಭವಾಗುತ್ತದೆ.

ವನ್ಯಜೀವಿ ಸಫಾರಿ: ಇಲ್ಲಿನ ಮೇನ್ ಹೈಲೈಟ್!

Untitled design (77)

  • ಜೀಪ್ ಸಫಾರಿ: ಇಲ್ಲಿನ ಓಪನ್ ಜೀಪ್ ಸಫಾರಿ ಬಹಳ ಫೇಮಸ್. ಜತೆಗೆ ಅನುಭವಿ ನ್ಯಾಚುರಲಿಸ್ಟ್‌ಗಳು ಇರುತ್ತಾರೆ. ಹುಲಿ, ಚಿರತೆ, ಆನೆಗಳ ಹುಡುಕಾಟದಲ್ಲಿ ಕಾಡಿನೊಳಗೆ ಹೋಗುವ ಮಜವೇ ಬೇರೆ.
  • ಬೋಟ್ ಸಫಾರಿ: ಕಬಿನಿ ನದಿಯ ನೀರಿನಲ್ಲಿ ಸೈಲೆಂಟ್ ಆಗಿ ಬೋಟ್‌ನಲ್ಲಿ ಹೋಗುವುದೇ ಒಂದು ರೋಮಾಂಚನ. ದಡದಲ್ಲಿ ಬಿಸಿಲು ಕಾಯಿಸಿಕೊಳ್ಳುವ ಮೊಸಳೆಗಳು, ನೀರು ಕುಡಿಯುವ ಆನೆಗಳು, ಮೀನು ಹಿಡಿಯುವ ಹದ್ದುಗಳು ಮತ್ತು ನೀರುನಾಯಿಗಳನ್ನು ಇಲ್ಲಿ ನೋಡಬಹುದು. ಫೊಟೋಗ್ರಫರ್‌ಗಳಿಗಂತೂ ಇದು ಸ್ವರ್ಗವಿದ್ದಂತೆ.
  • ತೆಪ್ಪದ ಸವಾರಿ: ಬಿದಿರಿನಿಂದ ಮಾಡಿ ಎಮ್ಮೆ ಚರ್ಮದಿಂದ ಮುಚ್ಚಿರುವ ಈ ದುಂಡನೆಯ ಸಾಂಪ್ರದಾಯಿಕ ತೆಪ್ಪದಲ್ಲಿ ಕುಳಿತು ನದಿಯಲ್ಲಿ ಸಾಗುವುದು ಶಾಂತಿ ನೀಡುತ್ತದೆ.

ಕಬಿನಿಯಲ್ಲಿ ಒಂದು ದಿನ ಹೇಗಿರುತ್ತದೆ?

ಇಲ್ಲಿನ ದಿನಚರಿ ಕಾಡಿನ ಲಯಕ್ಕೆ ತಕ್ಕಂತೆ ಸಾಗುತ್ತದೆ. ಬೆಳಗ್ಗೆ ಸೂರ್ಯ ಮೂಡುವ ಮುನ್ನವೇ ಎದ್ದು, ಕಾಫಿ-ಚಹಾ ಕುಡಿದು ಮಾರ್ನಿಂಗ್ ಸಫಾರಿಗೆ ಹೊರಡಬೇಕು. ಆ ಸಮಯದಲ್ಲಿ ಪ್ರಾಣಿಗಳ ಚಲನವಲನ ಹೆಚ್ಚು.

ಬೆಳಗ್ಗೆ ಸಫಾರಿ ಮುಗಿಸಿ ಬಂದು ಬಿಸಿ ಬಿಸಿ ಉಪಾಹಾರ ಸವಿಯಬಹುದು. ಮಧ್ಯಾಹ್ನ ಸ್ವಲ್ಪ ವಿಶ್ರಾಂತಿ ಪಡೆದು, ರೆಸಾರ್ಟ್ ಸುತ್ತಲೂ ಓಡಾಡಬಹುದು ಅಥವಾ ಪಕ್ಷಿಗಳನ್ನು ವೀಕ್ಷಿಸಬಹುದು. ಸಂಜೆ ತಣ್ಣನೆಯ ಗಾಳಿಯಲ್ಲಿ ಮತ್ತೊಂದು ಸಫಾರಿ ಇರುತ್ತದೆ. ಸಂಜೆ ವೇಳೆ ಕ್ಯಾಂಪ್‌ಫೈರ್ ಬಳಿ ಕುಳಿತು ಅತಿಥಿಗಳು ತಾವು ಕಂಡ ಪ್ರಾಣಿಗಳ ಕಥೆಗಳನ್ನು ಹಂಚಿಕೊಳ್ಳಬಹುದು. ನಂತರ ರಾತ್ರಿ ಊಟ ಹಾಗೂ ವನ್ಯಜೀವಿ ಸಾಕ್ಷ್ಯಚಿತ್ರಗಳನ್ನು ನೋಡುವ ಅವಕಾಶವಿರುತ್ತದೆ.

ಊಟದ ಅನುಭವ

ಇಲ್ಲಿನ ಊಟದ ವ್ಯವಸ್ಥೆ ಎಲ್ಲರೂ ಒಟ್ಟಿಗೆ ಕೂತು ಮಾತನಾಡುವಂತೆ ಮಾಡುತ್ತದೆ. ನದಿಯ ಕಡೆ ಮುಖ ಮಾಡಿರುವ 'ಗೋಲ್ ಘರ್' (Gol Ghar) ಎಂಬ ಸುಂದರವಾದ ಗುಮ್ಮಟದ ಆಕಾರದ ಡೈನಿಂಗ್ ಹಾಲ್‌ನಲ್ಲಿ ಬುಫೆ ಊಟ ಸಿಗುತ್ತದೆ.

  • ದಕ್ಷಿಣ ಭಾರತದ ಖಾದ್ಯಗಳು
  • ಉತ್ತರ ಭಾರತದ ಸ್ಪೆಷಲ್ಸ್
  • ಚೈನೀಸ್ ಮತ್ತು ಕಾಂಟಿನೆಂಟಲ್ ಫುಡ್
  • ಹಣ್ಣುಗಳು, ಸ್ವೀಟ್ಸ್ ಹಾಗೂ ಕಾಫಿ-ಚಹಾ ಲಭ್ಯವಿರುತ್ತದೆ.

ರೆಸಾರ್ಟ್‌ನಲ್ಲಿರುವ ಸೌಲಭ್ಯಗಳು

ಕಾಡಿನ ಮಧ್ಯೆಯಿದ್ದರೂ ಇಲ್ಲಿ ಎಲ್ಲಾ ಮಾಡರ್ನ್ ಸೌಲಭ್ಯಗಳಿವೆ:

  • ಈಜುಕೊಳ
  • ಬಾರ್ ಸೌಲಭ್ಯ
  • ಆಯುರ್ವೇದ ಮಸಾಜ್ ಹಾಗೂ ಚಿಕಿತ್ಸೆ
  • ಕಾನ್ಫರೆನ್ಸ್ ಹಾಲ್ ಹಾಗೂ ಕಾಮನ್ ವೈ-ಫೈ
  • ಬಾಲಕನಿ ಇರುವ ಎಸಿ ರೂಮ್‌ಗಳು
  • ವನ್ಯಜೀವಿ ಡಾಕ್ಯುಮೆಂಟರಿ ತೋರಿಸುವ ಆಡಿಯೋ-ವಿಶುಯಲ್ ಹಾಲ್

ಭೇಟಿ ನೀಡಲು ಸೂಕ್ತ ಸಮಯ

  • ಮಾರ್ಚ್‌ನಿಂದ ಮೇ: ವನ್ಯಜೀವಿಗಳನ್ನು ನೋಡಲು ಇದು ಬೆಸ್ಟ್ ಸೀಸನ್! ನೀರು ಕಡಿಮೆಯಾಗುವುದರಿಂದ ಪ್ರಾಣಿಗಳು ನದಿ ಬಳಿ ಬರುತ್ತವೆ, ಹುಲಿ ಅಥವಾ ಆನೆ ಕಾಣುವ ಚಾನ್ಸಸ್ ಜಾಸ್ತಿ.
  • ಅಕ್ಟೋಬರ್‌ನಿಂದ ಫೆಬ್ರವರಿ: ಹವಾಮಾನ ತುಂಬಾನೇ ಚೆನ್ನಾಗಿರುತ್ತದೆ. ಕಾಡು ಹಸಿರಿನಿಂದ ಕೂಡಿರುತ್ತದೆ. ಪಕ್ಷಿ ಪ್ರೇಮಿಗಳಿಗೆ ಮತ್ತು ಫೋಟೋಗ್ರಫಿ ಮಾಡಲು ಇದು ಸೂಕ್ತ ಸಮಯ.
  • ಜುಲೈನಿಂದ ಸೆಪ್ಟೆಂಬರ್: ಕಾಡೆಲ್ಲಾ ಹಸಿರು ಮಯವಾಗಿ ನಳನಳಿಸುತ್ತಿರುತ್ತದೆ. ಪ್ರಶಾಂತ ವಾತಾವರಣ ಬಯಸುವವರಿಗೆ ಇದು ಹೇಳಿ ಮಾಡಿಸಿದ ಜಾಗ.

ಪ್ರತಿಯೊಬ್ಬರಿಗೂ ಇಷ್ಟವಾಗುವ ತಾಣ

ವನ್ಯಜೀವಿ ಫೊಟೋಗ್ರಫರ್‌ಗಳು, ಪಕ್ಷಿ ವೀಕ್ಷಕರು, ಕುಟುಂಬದವರು, ಹನಿಮೂನ್ ಜೋಡಿಗಳು ಮತ್ತು ಬೆಂಗಳೂರು-ಮೈಸೂರಿನಿಂದ ವೀಕೆಂಡ್ ಟ್ರಿಪ್ ಬರುವವರಿಗೆ ಕಬಿನಿ ಬೆಸ್ಟ್ ಚಾಯ್ಸ್.

ತಲುಪುವುದು ಹೇಗೆ?

ಕಬಿನಿ ರಿವರ್ ಲಾಡ್ಜ್ ಕರ್ನಾಟಕದ ಎಚ್.ಡಿ.ಕೋಟೆ ಹತ್ತಿರದಲ್ಲಿದೆ.

  • ಬೆಂಗಳೂರಿನಿಂದ: ಸುಮಾರು 220 ಕಿಮೀ.
  • ಮೈಸೂರಿನಿಂದ: ಸುಮಾರು 60 ಕಿಮೀ.
  • ಹತ್ತಿರದ ವಿಮಾನ ನಿಲ್ದಾಣ ಮೈಸೂರು ಹಾಗೂ ಬೆಂಗಳೂರು. ರಸ್ತೆ ಮಾರ್gವಾಗಿ ಸಾಗುವಾಗ ಸಿಗುವ ಗ್ರಾಮೀಣ ಕರ್ನಾಟಕದ ಹಸಿರು ದೃಶ್ಯಗಳು ನಿಮ್ಮ ಪ್ರಯಾಣವನ್ನು ಮರೆಯಲಾಗದಂತೆ ಮಾಡುತ್ತದೆ.

ಕಬಿನಿ ರಿವರ್ ಲಾಡ್ಜ್ ಕೇವಲ ಐಷಾರಾಮಿ ರೆಸಾರ್ಟ್ ಅಲ್ಲ; ಇದು ಕಾಡಿನೊಂದಿಗೆ ಬೆರೆಯುವ ಒಂದು ಸುಂದರ ಅನುಭವ. ಇತಿಹಾಸವಿರುವ ಈ ತಾಣದಲ್ಲಿ ಸಫಾರಿ ಮಾಡುವುದು, ನದಿಯಲ್ಲಿ ತೆಪ್ಪದ ಸವಾರಿ ಮಾಡುವುದು ನಿಮ್ಮ ಜೀವನದ ಮರೆಯಲಾಗದ ನೆನಪಾಗುವುದರಲ್ಲಿ ಸಂಶಯವಿಲ್ಲ. ನಿಮ್ಮ ಬಕೆಟ್ ಲಿಸ್ಟ್‌ನಲ್ಲಿ ಈ ಜಾಗ ಖಂಡಿತ ಇರಲೇಬೇಕು!

ಆಂಧ್ರ ರಾಜ್ಯಪಾಲರ ಭೇಟಿ

ಹಿರಿಯ ರಾಜಕಾರಣಿಗಳು, ಗಣ್ಯರು ಮತ್ತು ತಾರೆಯರ ನೆಚ್ಚಿನ ತಾಣವಾಗಿರುವ ಕಬಿನಿ ರಿವರ್ ಲಾಡ್ಜ್‌ಗೆ ದೇಶದ ವಿವಿಧ ಭಾಗಗಳಿಂದ ವಿಐಪಿಗಳು ಆಗಾಗ ಭೇಟಿ ನೀಡುತ್ತಿರುತ್ತಾರೆ. ಇತ್ತೀಚೆಗೆ ಆಂಧ್ರಪ್ರದೇಶದ ರಾಜ್ಯಪಾಲರಾದ ಸೈಯದ್‌ ಅಬ್ದುಲ್‌ ನಝೀರ್‌ ಸಹ ಈ ಸುಂದರ ರೆಸಾರ್ಟ್‌ಗೆ ಭೇಟಿ ನೀಡಿ, ಇಲ್ಲಿನ ವನ್ಯಜೀವಿ ಸಫಾರಿಯನ್ನು ಆನಂದಿಸಿ ಉತ್ತಮ ಸಮಯವನ್ನು ಕಳೆದಿದ್ದಾರೆ. ದಟ್ಟ ಕಾಡಿನ ನಿಸರ್ಗ ಸೌಂದರ್ಯ, ರೋಮಾಂಚಕಾರಿ ಜಂಗಲ್ ಸಫಾರಿಗಳು ಮತ್ತು ರಾಜಮನೆತನದ ಆತಿಥ್ಯವು ಎಲ್ಲ ವಿಐಪಿಗಳಿಗೆ ಹಾಗೂ ಪ್ರವಾಸಿಗರಿಗೆ ಅತ್ಯಂತ ಇಷ್ಟವಾಗಿದ್ದು, ಪ್ರತಿಯೊಬ್ಬರೂ ಈ ಜಾಗವನ್ನು ಮತ್ತೆ ಮತ್ತೆ ಭೇಟಿ ನೀಡಲು ಬಯಸುತ್ತಾರೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಉತ್ತರ ಕರ್ನಾಟಕದ ರಂಗನತಿಟ್ಟು...

Read Previous

ಉತ್ತರ ಕರ್ನಾಟಕದ ರಂಗನತಿಟ್ಟು...

ಭಾರತದಲ್ಲಿ ನೀವು ನೋಡಲೇಬೇಕಿರುವ 8 ಮ್ಯಾಂಗ್ರೋವ್‌ ಕಾಡುಗಳು..

Read Next

ಭಾರತದಲ್ಲಿ ನೀವು ನೋಡಲೇಬೇಕಿರುವ 8 ಮ್ಯಾಂಗ್ರೋವ್‌ ಕಾಡುಗಳು..