Wednesday, March 11, 2026
Wednesday, March 11, 2026

ಶಾಲ್ಮಲಾ ತೀರದ ಸಹಸ್ರಲಿಂಗಗಳು

ಇತಿಹಾಸಕಾರರ ಪ್ರಕಾರ, ನದಿಪಾತ್ರದಲ್ಲಿನ ಈ ಶಿವಲಿಂಗಗಳನ್ನು 1678-1718ರ ಅವಧಿಯಲ್ಲಿ ವಿಜಯನಗರ ಸಾಮ್ರಾಜ್ಯದ ದೊರೆ ಸದಾಶಿವ ರಾಯರು ಸ್ಥಾಪಿಸಿದ್ದರು ಎನ್ನಲಾಗಿದೆ. ಶಾಲ್ಮಲಾ ನದಿ ಪಾತ್ರದಲ್ಲಿ ಶಿವ, ವಿಷ್ಣು, ಬ್ರಹ್ಮ, ಲಕ್ಷ್ಮಿ, ರಾಮ ಮತ್ತು ಹನುಮಾನ್ ಜತೆಗೆ ಹಸು ಮತ್ತು ಕಪ್ಪೆಗಳಂಥ ಪ್ರಾಣಿಗಳೂ ಸೇರಿ ವಿವಿಧ ಹಿಂದೂ ಪೌರಾಣಿಕ ಚಿತ್ರಣಗಳಿವೆ. ಇಲ್ಲಿರುವ ಶಿವ ಲಿಂಗಗಳು ಸುಮಾರು 500 ವರ್ಷಗಳಷ್ಟು ಹಳೆಯವು ಎಂದು ಅಂದಾಜಿಸಲಾಗಿದೆ. ಜೈವಿಕ ವಿಜ್ಞಾನಿಗಳು ಮತ್ತು ಪರಿಸರವಾದಿಗಳು, ಶಾಲ್ಮಲಾ ನದಿ ಮತ್ತು ಅದರ ದಡಗಳನ್ನು ʻಜೀವವೈವಿಧ್ಯ ನಿಧಿಯ ಮನೆʼ ಎಂದು ಪರಿಗಣಿಸಿದ್ದಾರೆ.

- ವಿದ್ಯಾ.ವಿ. ಹಾಲಭಾವಿ

ಉತ್ತರಕನ್ನಡ ಜಿಲ್ಲೆಯಲ್ಲಿ ಪುಣ್ಯಕ್ಷೇತ್ರಗಳಿಗೆ ಬರವೇ ಇಲ್ಲ. ಅವುಗಳ ಪೈಕಿ ಶಿರಸಿಯ ಹತ್ತಿರದ ಸಹಸ್ರಲಿಂಗ ಕ್ಷೇತ್ರ ಅತ್ಯಂತ ವಿಶಿಷ್ಟವಾದುದು.‌ ಶಿರಸಿ ಪಟ್ಟಣದ ಭೈರುಂಬೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಈ ಕ್ಷೇತ್ರ ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಹೊಂದಿದೆ.

ಇಲ್ಲಿನ ಸಾವಿರಾರು ಶಿವಲಿಂಗಗಳಿಗೆ ಗುಡಿ ಗೋಪುರಗಳಿಲ್ಲ. ಗಂಟೆ ಜಾಗಟೆಗಳ ಸದ್ದಿಲ್ಲ. ಅರ್ಚಕ, ಪೂಜಾರಿ ಅಥವಾ ಸ್ವಾಮಿಗಳ ಸಾನಿಧ್ಯವಂತೂ ಇಲ್ಲವೇ ಇಲ್ಲ. ಬಯಲೇ ಆಲಯ! ಆದರೆ, ಲಿಂಗರೂಪಿಯಾದ ಶಿವನಿಗೆ ನಿತ್ಯವೂ ಜಲಾಭಿಷೇಕವಾಗುತ್ತದೆ. ಪ್ರಕೃತಿಯೇ ಈ ಲಿಂಗಗಳಿಗೆ ಅಭಿಷೇಕ ಮಾಡುತ್ತದೆ. ಇದು ಹೇಗೆ ಸಾಧ್ಯ ಅಂತೀರಾ? ಅಲ್ಲಿ ಹಚ್ಚ ಹಸುರಿನ ಸುಂದರ ಕಾನನದ ನಡುವೆ ಶಾಲ್ಮಲಾ ಎಂಬ ನದಿ ಹರಿಯುತ್ತಿದೆ. ಶಾಲ್ಮಲಾ ನದಿ, ಹೆಸರೇ ಸೂಚಿಸುವಂತೆ ಸಾಹಿತ್ಯದ ಸೌಂದರ್ಯ ಮತ್ತು ಮಾಂತ್ರಿಕತೆಯನ್ನು ಹುಟ್ಟುಹಾಕುತ್ತದೆ. ಈ ಪುಟ್ಟ ನದಿಯು ಪಶ್ಚಿಮಕ್ಕೆ ಹರಿಯುವ ಬೇಡ್ತಿ ನದಿಯ (ಇದನ್ನು ಗಂಗವಲ್ಲಿ ಎಂದೂ ಕರೆಯುತ್ತಾರೆ) ಉಪನದಿಯಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿದೆ.

New Project (64)

ಶಾಲ್ಮಲಾ ನದಿ ಪಾತ್ರದ ತೆರೆದ ಬಂಡೆಗಳಲ್ಲಿ ಮತ್ತು ಅದರ ದಡದಲ್ಲಿ ಸಾವಿರಾರು ಶಿವಲಿಂಗಗಳನ್ನು ಕೆತ್ತಲಾಗಿದೆ. ಅದಕ್ಕಾಗಿ ಈ ಸ್ಥಳವನ್ನು ʻಸಹಸ್ರಲಿಂಗʼ ಎಂದು ಕರೆಯಲಾಗಿದೆ. ಸಹಸ್ರಲಿಂಗ ಎಂದರೆ ಸಾವಿರ ಲಿಂಗಗಳು ಎಂದರ್ಥ. 'ಲಿಂಗ' ಶಿವನ ಆರಾಧನೆಯ ಸಂಕೇತವಾಗಿದೆ. ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಲಿಂಗಗಳ ಸುತ್ತಲೂ ಬಂಡೆಗಳಿಂದ ಕೆತ್ತಿದ ಅನೇಕ ಸಣ್ಣ ನಂದಿಗಳೂ (ಗೂಳಿಗಳು) ಇವೆ. ಮೂಲತಃ ಪ್ರತಿಯೊಂದು ಲಿಂಗಕ್ಕೂ ಎದುರಾಗಿ ನಂದಿ ಇದ್ದವು ಎಂದು ನಂಬಲಾಗಿದೆ. ಆದರೆ ಈಗ ಹಲವಾರು ನಂದಿಗಳು ಹಾನಿಗೊಳಗಾಗಿವೆ ಮತ್ತು ಕೆಲವು ಕಾಣೆಯಾಗಿವೆ.

ಶಾಲ್ಮಲಾ ನದಿ ಒಟ್ಟು 290 ಕಿಮೀ ಉದ್ದಕ್ಕೂ ಹರಿಯುತ್ತದೆ. ಈ ನದಿಯ ಒಳಗೂ ಸಾಕಷ್ಟು ಲಿಂಗಗಳಿವೆ. ಇಲ್ಲಿ ಮೇಲ್ಗಡೆ 8 ಕಿಮೀ ಹಾಗೂ ಕೆಳಗಡೆ 8 ಕಿಮೀ‌ ಸ್ಥಳಾವಕಾಶದಲ್ಲಿ ಸಹಸ್ರಲಿಂಗಗಳು ವ್ಯಾಪಿಸಿವೆ. ಆದರೆ, ಇತ್ತೀಚೆಗೆ ವಿವಿಧ ಕಾರಣಗಳಿಂದ ಈ ಕ್ಷೇತ್ರದಲ್ಲಿ ಕಾಣಸಿಗುತ್ತಿದ್ದ ಶಿವಲಿಂಗಗಳು ಕಡಿಮೆಯಾಗುತ್ತಿವೆ. ಮಳೆಗಾಲದಲ್ಲಿ ರಭಸವಾಗಿ ಹರಿಯುವ ನದಿಯು ಹಲವು ಬಂಡೆಕಲ್ಲುಗಳನ್ನು ಕೊಚ್ಚಿಕೊಂಡು ಸಾಗಿದ್ದರಿಂದ ಹಾಗೂ ನೀರಿನ ರಭಸಕ್ಕೆ ಸವೆದು ಹೋಗಿರುವುದರಿಂದ ಇಲ್ಲಿನ ಲಿಂಗಗಳು ಕಣ್ಮರೆಯಾಗುತ್ತಿವೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರೂ ಕಲ್ಲುಗಳನ್ನು ಒಡೆದು ಹಾಕಿರುವ ದೂರುಗಳಿವೆ. ಇನ್ನು ಸಣ್ಣ ಸಣ್ಣ ಲಿಂಗಗಳನ್ನು ಕೆಲವರು ಕದ್ದೊಯ್ದಿರುವುದಾಗಿಯೂ ಅಲ್ಲಿನ ಜನರು ಹೇಳುತ್ತಾರೆ.

New Project (65)

ಇತಿಹಾಸಕಾರರ ಪ್ರಕಾರ, ನದಿಪಾತ್ರದಲ್ಲಿನ ಈ ಶಿವಲಿಂಗಗಳನ್ನು 1678-1718ರ ಅವಧಿಯಲ್ಲಿ ವಿಜಯನಗರ ಸಾಮ್ರಾಜ್ಯದ ದೊರೆ ಸದಾಶಿವ ರಾಯ (ಇವರನ್ನು ಶಿರಸಿಯ ರಾಜ ಎಂದೂ ಕರೆಯಲಾಗುತ್ತಿತ್ತು) ಸ್ಥಾಪಿಸಿದ್ದರು ಎನ್ನಲಾಗಿದೆ. ರಾಜರು ಈ ಸಹಸ್ರಲಿಂಗಗಳನ್ನು ಸೃಷ್ಟಿಸಲು ಆದೇಶಿಸಿದ್ದರು ಎಂದು ಹೇಳುವ ಕಥೆಯೊಂದು ಸ್ಥಳೀಯವಾಗಿ ಪ್ರಚಲಿತದಲ್ಲಿದೆ.

ಆ ನದಿ ಪಾತ್ರದಲ್ಲಿ ಶಿವ, ವಿಷ್ಣು, ಬ್ರಹ್ಮ, ಲಕ್ಷ್ಮಿ, ರಾಮ ಮತ್ತು ಹನುಮಾನ್ ಜತೆಗೆ ಹಸು ಮತ್ತು ಕಪ್ಪೆಗಳಂಥ ಪ್ರಾಣಿಗಳೂ ಸೇರಿ ವಿವಿಧ ಹಿಂದೂ ಪೌರಾಣಿಕ ಚಿತ್ರಣಗಳಿವೆ. ಇಲ್ಲಿರುವ ಶಿವ ಲಿಂಗಗಳು ಸುಮಾರು 500 ವರ್ಷಗಳಷ್ಟು ಹಳೆಯವು ಎಂದು ಅಂದಾಜಿಸಲಾಗಿದೆ.

ಜೈವಿಕ ವಿಜ್ಞಾನಿಗಳು ಮತ್ತು ಪರಿಸರವಾದಿಗಳು, ಶಾಲ್ಮಲಾ ನದಿ ಮತ್ತು ಅದರ ದಡಗಳನ್ನು ʻಜೀವವೈವಿಧ್ಯ ನಿಧಿಯ ಮನೆʼ ಎಂದು ಪರಿಗಣಿಸಿದ್ದಾರೆ. ಸಹಸ್ರಲಿಂಗ ಕ್ಷೇತ್ರದಲ್ಲಿರುವ ಶಾಲ್ಮಲಾ ನದಿಯನ್ನು ಅನಾದಿ ಕಾಲದಿಂದಲೂ ಪೂಜಿಸಲಾಗುತ್ತಿದೆ. ಈ ಪ್ರದೇಶದ ಹಚ್ಚ ಹಸಿರಿನ ಕಾಡು, ವಿವಿಧ ಜಾತಿಯ ಸಸ್ಯ ಮತ್ತು ಪ್ರಾಣಿಗಳನ್ನು ಒಳಗೊಂಡಿದೆ. ವಿಶೇಷವಾಗಿ ಔಷಧೀಯ ಗಿಡಮೂಲಿಕೆಗಳು ಮತ್ತು ಸಸ್ಯಗಳು ಈ ಸ್ಥಳದಲ್ಲಿ ಹೇರಳವಾಗಿ ಸಿಗುತ್ತವೆ.

New Project (66)

ಇದು ಶಿವನು ಹಸಿರಿನ ವನಸಿರಿಯ ನಡುವೆ ಇರುವ ಅತ್ಯಂತ ರಮಣೀಯ ಸ್ಥಳವಾಗಿದೆ. ಇಲ್ಲಿನ ತೂಗು ಸೇತುವೆಯ ಮೇಲೆ ನಡೆದಾಡುತ್ತಾ, ಸುತ್ತಲೂ ಪ್ರಕೃತಿ ಮಾತೆಯ ಪ್ರಶಾಂತತೆಯನ್ನು, ಅದರ ವೈಭವವನ್ನು ಅನುಭವಿಸಬಹುದು. ಪ್ರತಿವರ್ಷ ಮಹಾ ಶಿವರಾತ್ರಿಯ ಸಂದರ್ಭದಲ್ಲಿ, ದೇಶದ ವಿವಿಧ ಭಾಗಗಳಿಂದ ಭಕ್ತರು ಶಿವನ ಪೂಜೆಗಾಗಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆಕಾರ ಮತ್ತು ಗಾತ್ರದಲ್ಲಿ ವಿಭಿನ್ನವಾಗಿರುವ ಲಿಂಗಗಳು ನದಿ ನೀರಿನೊಂದಿಗೆ ಸಂವಹನ ನಡೆಸುವುದರಿಂದ ಈ ಸ್ಥಳವು ಅತೀಂದ್ರಿಯ ಮತ್ತು ಸೌಂದರ್ಯದ ದೃಷ್ಟಿಯಿಂದ ಆಹ್ಲಾದಕರವಾಗಿರುತ್ತದೆ. ನೀರಿನ ಮಟ್ಟ ಕಡಿಮೆ ಇರುವ ಸಮಯದಲ್ಲಿ ಅಂದರೆ ಬೇಸಗೆಯಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ. ಆಗ ಕೆತ್ತನೆಗಳನ್ನು ಸ್ಪಷ್ಟವಾಗಿ ವೀಕ್ಷಿಸಬಹುದು. ಛಾಯಾಗ್ರಹಣಕ್ಕೆ ಇದು ಅತ್ಯಂತ ಸೂಕ್ತ ಸ್ಥಳವಾಗಿರುವುದರಿಂದ ಯುವಜನತೆಯ ʻಹಾಟ್‌ ಸ್ಪಾಟ್ʼಎನಿಸಿಕೊಂಡಿದೆ. ನೀರಿನ ಮಟ್ಟವು ಹೆಚ್ಚಿರುವಾಗ ಲಿಂಗಗಳು ನೀರಿನಲ್ಲಿ ಮುಳುಗಿರುತ್ತವೆ.

ದಾರಿ ಹೇಗೆ?

ಈ ಕ್ಷೇತ್ರವು ಶಿರಸಿ ಪಟ್ಟಣದಿಂದ ಸುಮಾರು 14 ಕಿಮೀ ದೂರದಲ್ಲಿದೆ. ನೀವು ಶಿರಸಿ ಯಲ್ಲಾಪುರ ರಸ್ತೆಯಲ್ಲಿ 12.5 ಕಿಮೀ ಪಯಣಿಸಬೇಕು. ಹುಲಗೋಳ ಪಟ್ಟಣಕ್ಕಿಂತ ಸ್ವಲ್ಪ ಮೊದಲು ಎಡಗಡೆ ತಿರುಗಿ ಕಾಡಿನ ಸೊಬಗನ್ನು ಸವಿಯುತ್ತಾ 1.5 ಕಿಮೀ ಮುಂದೆ ಸಾಗಿದರೆ ಸಹಸ್ರಲಿಂಗಗಳನ್ನು ಕಣ್ತುಂಬಿಕೊಳ್ಳಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..