- ನಿಕಿತಾ ಪವನ್ ಹುಯಿಲಗೋಳ್

‘ಇತಿಹಾಸವನ್ನು ಓದಬಹುದು, ಕೇಳಬಹುದು; ಆದರೆ ಅದನ್ನು ಅನುಭವಿಸಬೇಕೆಂದರೆ ಹಂಪಿಗೆ ಹೋಗಲೇಬೇಕು’. ಈ ಮಾತು ನಮ್ಮ ಹಂಪಿ ಪ್ರವಾಸದ ನಂತರ ಅಕ್ಷರಶಃ ಸತ್ಯವೆನಿಸಿತು. ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ, ಇಂದು ಕಲ್ಲಿನ ಅವಶೇಷಗಳ ನಗರವಾಗಿದೆ. ಆದರೂ ಅದರ ಪ್ರತಿ ಕಲ್ಲಿನಲ್ಲೂ ಒಂದು ಕಥೆ ಅಡಗಿದೆ. ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಈ ನೆಲ, ಕೇವಲ ಪುರಾತನ ಸ್ಮಾರಕಗಳ ಸಂಕಿರ್ಣವಾಗಿಲ್ಲ; ಅದು ಕನ್ನಡಿಗರ ವೈಭವ, ಸಂಸ್ಕೃತಿ ಮತ್ತು ಕಲಾತ್ಮಕತೆಯ ಜೀವಂತ ಪ್ರತೀಕವಾಗಿದೆ.

ಹಂಪಿಯ ನೆಲವನ್ನು ಸ್ಪರ್ಶಿಸಿದ ಕ್ಷಣದಿಂದಲೇ ನಾವು ಇಂದಿನ ಜಗತ್ತಿನಿಂದ ಸುಮಾರು ಐನೂರು ವರ್ಷಗಳ ಹಿಂದಿನ ವಿಜಯನಗರ ಸಾಮ್ರಾಜ್ಯದ ಕಾಲಘಟ್ಟಕ್ಕೆ ಕಾಲಿಟ್ಟ ಅನುಭವವಾಯಿತು. ಎಲ್ಲೆಡೆ ಬೃಹತ್ ಬಂಡೆಗಳು, ಆಕಾಶದೆತ್ತರಕ್ಕೆ ಚಾಚಿದ ಗೋಪುರಗಳು, ಸೂಕ್ಷ್ಮ ಕೆತ್ತನೆಗಳಿಂದ ಅಲಂಕೃತ ದೇವಾಲಯಗಳು, ನಿಶ್ಶಬ್ದವಾಗಿ ನಿಂತಿರುವ ಮಂಟಪಗಳು – ಇವೆಲ್ಲವೂ ವೈಭವದ ಕಥೆಯನ್ನು ಹೇಳುತ್ತಿದ್ದವು.

ಇದನ್ನೂ ಓದಿ: ಹೊನ್ನಾವರ ಪ್ರವಾಸ

ಆ ವೈಭವದ ಮೊದಲ ಸಾಕ್ಷಿಯಾಗಿ ನಮ್ಮನ್ನು ಬರಮಾಡಿಕೊಂಡಿದ್ದು ವಿರೂಪಾಕ್ಷ ದೇವಸ್ಥಾನ. ತುಂಗಭದ್ರೆಯ ತೀರದಲ್ಲಿರುವ ಈ ದೇವಾಲಯವು ಶತಮಾನಗಳ ಇತಿಹಾಸವನ್ನು ತನ್ನೊಳಗೆ ಹೊತ್ತಿದೆ. ಎತ್ತರದ ಗೋಪುರವನ್ನು ನೋಡುತ್ತಾ ನಿಂತಾಗ, ಅಂದಿನ ಶಿಲ್ಪಿಗಳು ಕಲ್ಲಿನಲ್ಲಿ ಜೀವ ತುಂಬಿದ್ದ ರೀತಿ ಆಶ್ಚರ್ಯ ಮೂಡಿಸಿತು. ದೇವಸ್ಥಾನದ ಪಕ್ಕದಲ್ಲಿರುವ ಪುರಾತನ ಪುಷ್ಕರಣಿಯಲ್ಲಿನ ನೀರಿನಲ್ಲಿ ಪ್ರತಿಬಿಂಬಿಸುವ ಗೋಪುರದ ನೋಟ ಮನಸಿನಲ್ಲಿ ಅಚ್ಚಳಿಯದ ಚಿತ್ರವಾಗಿ ಉಳಿಯಿತು.

Untitled design (22)

ಹಂಪಿಯ ಶಿಲ್ಪಕಲೆ ಎಂದರೆ ಕೇವಲ ಸೌಂದರ್ಯವಲ್ಲ; ಅದು ಭಕ್ತಿ ಮತ್ತು ಶಕ್ತಿಯ ಸಂಕೇತವೂ ಹೌದು. ಒಂದೇ ಬಂಡೆಯಲ್ಲಿ ಕೆತ್ತಲ್ಪಟ್ಟಿರುವ ಕಡಲೆಕಾಳು ಗಣೇಶ ಹಾಗೂ ಉಗ್ರ ನರಸಿಂಹನ ಮೂರ್ತಿಗಳನ್ನು ಕಂಡಾಗ, ಶಿಲ್ಪಿಗಳ ಕೈಚಳಕದ ಮುಂದೆ ಮಾತುಗಳು ಸಾಲುವುದಿಲ್ಲ. ಶತಮಾನಗಳ ಕಾಲ ಪ್ರಕೃತಿಯ ಹೊಡೆತಗಳನ್ನು ಎದುರಿಸುತ್ತಾ ಇಂದಿಗೂ ಅಷ್ಟೇ ಭವ್ಯವಾಗಿ ನಿಂತಿರುವ ಈ ಶಿಲ್ಪಗಳು ಇತಿಹಾಸದ ಮೌನ ಸಾಕ್ಷಿಗಳಾಗಿವೆ.

ಹಂಪಿಯ ಹೆಸರು ಕೇಳಿದಾಗ ಮೊದಲು ನೆನಪಾಗುವುದು ವಿಠ್ಠಲ ದೇವಸ್ಥಾನ ಮತ್ತು ಅಲ್ಲಿರುವ ವಿಶ್ವವಿಖ್ಯಾತ ಕಲ್ಲಿನ ರಥ. ಚಿತ್ರಗಳಲ್ಲಿ ನೋಡಿದ ಈ ರಥವನ್ನು ಕಣ್ಣಾರೆ ಕಂಡ ಕ್ಷಣದ ಅನುಭವವನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ. ಪ್ರತಿಯೊಂದು ಚಕ್ರ, ಪ್ರತಿಯೊಂದು ಕೆತ್ತನೆ ಶಿಲ್ಪಕಲೆಯ ಪರಾಕಾಷ್ಠೆಯನ್ನು ಸಾರುತ್ತದೆ. ಈ ರಥದ ಮುಂದೆ ನಿಂತಾಗ, ಕಾಲವೇ ಕ್ಷಣಕಾಲ ನಿಂತಂತೆ ಭಾಸವಾಗುತ್ತದೆ.

ಹಂಪಿಯ ಸೌಂದರ್ಯ ಬೃಹತ್ ಬಂಡೆಗಳ ನಡುವೆ ಹರಡಿರುವ ಪ್ರಕೃತಿ, ವಿಶಾಲವಾದ ಕಲ್ಲಿನ ಬೀದಿಗಳು, ದೂರದವರೆಗೆ ಕಾಣುವ ದೇವಾಲಯಗಳ ಗೋಪುರಗಳು, ಅಲ್ಲಲ್ಲಿ ಕೇಳಿಬರುವ ಗಂಟೆಗಳ ನಾದ ಎಲ್ಲದರಲ್ಲೂ ತುಂಬಿದೆ. ಇವೆಲ್ಲವೂ ಸೇರಿ ನೋಡುಗರ ಮನಸಿಗೆ ವಿಶಿಷ್ಟ ನೆಮ್ಮದಿ ನೀಡುತ್ತವೆ. ಇಲ್ಲಿ ಪ್ರತಿ ಹೆಜ್ಜೆಯೂ ಇತಿಹಾಸದ ಪುಟಗಳನ್ನು ತಿರುಗಿಸುತ್ತಾ ಸಾಗಿದ ಅನುಭವ ನೀಡುತ್ತದೆ.

Untitled design (21)

ಪ್ರವಾಸವೆಂದರೆ ಕೇವಲ ಹೊಸ ಸ್ಥಳಗಳನ್ನು ನೋಡುವುದಲ್ಲ; ಆ ಸ್ಥಳದ ಆತ್ಮವನ್ನು ಅರಿಯುವುದೂ ಹೌದು. ಹಂಪಿ ನಮಗೆ ಅದನ್ನೇ ಕಲಿಸಿತು. ಸಾವಿರಾರು ಪ್ರವಾಸಿಗರು ಪ್ರತಿದಿನ ಇಲ್ಲಿಗೆ ಬರುತ್ತಾರೆ. ಆದರೆ ಹಂಪಿ ಪ್ರತಿಯೊಬ್ಬರಿಗೂ ವಿಭಿನ್ನ ಅನುಭವವನ್ನು ನೀಡುತ್ತದೆ. ಇತಿಹಾಸ ಆಸಕ್ತರಿಗೆ ಇದು ಸಂಶೋಧನೆಯ ನೆಲ. ಛಾಯಾಗ್ರಾಹಕರಿಗೆ ಪ್ರಕೃತಿ ಮತ್ತು ವಾಸ್ತುಶಿಲ್ಪದ ಅಪರೂಪದ ಸಂಗಮ. ಸಾಮಾನ್ಯ ಪ್ರವಾಸಿಗೆ ಇದು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ತಾಣ.

ಹಂಪಿಯನ್ನು ಕಂಡು ಮನೆಗೆ ಹಿಂದಿರುಗುವಾಗ ಕ್ಯಾಮೆರಾದಲ್ಲಿ ಅನೇಕ ಚಿತ್ರಗಳಿದ್ದವು. ಆದರೆ ಮನಸಿನಲ್ಲಿ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮತ್ತು ಅದನ್ನು ಉಳಿಸಿಕೊಳ್ಳಬೇಕೆಂಬ ಹೊಣೆಗಾರಿಕೆಯ ಭಾವನೆ ಉಳಿದಿತ್ತು. ಹಂಪಿ ಕೇವಲ ಪ್ರವಾಸಿ ತಾಣವಲ್ಲ; ಅದು ಕಲ್ಲಿನಲ್ಲಿ ಕೆತ್ತಿದ ಕನ್ನಡದ ಇತಿಹಾಸ ಮತ್ತು ಜೀವಂತ ಪರಂಪರೆ.