ಕೆಎಸ್‌ಟಿಡಿಸಿ ವತಿಯಿಂದ ಅಂಬಾರಿ ಹತ್ತಿ ಬೆಂಗಳೂರು ಸುತ್ತುವ ಅವಕಾಶ
ಅಂಬಾರಿ ಡಬಲ್ ಡೆಕ್ಕರ್ ಬಸ್ ಪ್ರವಾಸಕ್ಕೆಂದೇ ವಿಶೇಷವಾಗಿ ರೂಪುಗೊಂಡ ಬಸ್. ಮೇಲಾಗಿ ನಗರ ಸಂಚಾರಕ್ಕೆಂದೇ ನಿರ್ಮಾಣವಾಗಿದೆ. ಲಂಡನ್ ಪ್ರವಾಸದಲ್ಲಿ ಜನರು ಮೆಚ್ಚಿಕೊಂಡಿದ್ದ ʻಬಿಗ್ ಬಸ್ʼ ಮಾದರಿಯಲ್ಲಿ ಇವುಗಳನ್ನು ರೂಪಿಸಲಾಗಿದೆ. ಈ ಪ್ರವಾಸಿ ಬ್ರ್ಯಾಂಡ್ ಬಸ್‌ಗೆ ಮೈಸೂರಿನ ಬ್ರ್ಯಾಂಡ್ ಅಂಬಾರಿಯ ಹೆಸರನ್ನು ಇಡಲಾಗಿದೆ. 25 ಅಡಿ ಎತ್ತರ ಇದ್ದು ಮೇಲಿನ ಡೆಕ್ಕರ್ ಓಪನ್ ಟಾಪ್ ಹೊಂದಿದೆ. ಮೇಲಿನ ಡೆಕ್ಕರ್‌ನಲ್ಲಿ 20 ಮತ್ತು ಕೆಳಗಿನ ಡೆಕ್ಕರ್‌ನಲ್ಲಿ 20 ಆಸನಗಳು ಇದ್ದು, ಒಟ್ಟು 40 ಪ್ರಯಾಣಿಕರು ಆರಾಮವಾಗಿ ಪ್ರವಾಸ ಹೋಗಬಹುದು. ಗುಲಾಬಿ ಬಣ್ಣದ ಬಸ್ ಇದಾಗಿದ್ದು ಲುಕ್ ಮಾತ್ರ ಐಷಾರಾಮಿಯಾಗಿದೆ.
ಎಲ್ಲೆಡೆಯೂ ಓಡಾಡಿಯಾಯ್ತು. ಆದರೆ ನೆಲೆ ಕಂಡುಕೊಂಡಿರುವ ಊರನ್ನೇ ಸರಿಯಾಗಿ ಓಡಾಡಿ ನೋಡಲಿಲ್ಲ. ಹೀಗೊಂದು ಬೇಸರ ನಿಮ್ಮ ಮನದಲ್ಲಿ ಮನೆ ಮಾಡಿದ್ದರೆ, ಇದು ನಿಮಗಾಗಿ ಕೆಎಸ್‌ಟಿಡಿಸಿ ನೀಡುತ್ತಿರುವ ಸದಾವಕಾಶ. ರಾಜ್ಯಾದ್ಯಂತ ಪ್ರವಾಸಿಗರನ್ನು ಸುತ್ತಿಸುತ್ತಿರುವ, ಹೊರರಾಜ್ಯಗಳಿಗೂ ಪ್ರವಾಸಿಗರನ್ನು ಕರೆದೊಯ್ಯುವ ಪ್ರವಾಸ ಕೆಎಸ್‌ಟಿಡಿಸಿ ರಾಜಧಾನಿ ಪ್ರವಾಸಕ್ಕೆ ಒಂದು ಸುಂದರ ಅವಕಾಶ ನೀಡಿದೆ. ಅದೇ ಡಬಲ್ ಡೆಕ್ಕರ್ ಅಂಬಾರಿ!
ಬೆಂಗಳೂರು ಬ್ಯುಸಿ ಸಿಟಿ. ಯಾವಾಗ ಎಲ್ಲಿ ಟ್ರಾಫಿಕ್ ಇರುತ್ತೋ ಯಾರಿಗೂ ತಿಳಿಯದು. ಇನ್ನೂ ಗೂಗಲ್ ಗುರುವನ್ನು ನಂಬಿ ಪೂರ್ತಿ ಪ್ರವಾಸ ಪ್ಲಾನ್ ಮಾಡೋಕೆ ಸಾಧ್ಯವೇ? ಬೈಕ್ ಅಥವಾ ಕಾರ್ ಹತ್ತಿ ಸುತ್ತುವುದು ಟ್ರಾಫಿಕ್‌ನಲ್ಲಿ ಬೇಸರ ತರಿಸುವ ಸಂಗತಿ. ಕುಟುಂಬ ಸಮೇತ ಪ್ರವಾಸಕ್ಕೆ ಇದು ಅಷ್ಟಾಗಿ ಸೂಟ್ ಆಗದು. ಹಾಗಾಗಿ ಈ ಎಲ್ಲಾ ಗೊಂದಲಗಳನ್ನು ಬದಿಗಿಟ್ಟು, ಅಂಬಾರಿ ಸವಾರಿ ಆಯ್ಕೆ ಮಾಡಿಕೊಳ್ಳಿ.
ಇದನ್ನೂ ಓದಿ: ಧರ್ಮಸ್ಥಳ, ಕುಕ್ಕೆಗೆ ಕೆಎಸ್‌ಟಿಡಿಸಿ ಬಜೆಟ್ ಫ್ರೆಂಡ್ಲಿ ಟೂರ್
ಇದು ಡಬಲ್ ಡೆಕ್ಕರ್ ಅಂಬಾರಿ. ನಿಲ್ಲುವ ಆಸೆ ಇದ್ದರೆ ಮೇಲೆ, ಕುಳಿತುಕೊಳ್ಳುವ ಆಸೆ ಇದ್ದರೆ ಕೆಳಗಿನ ಡೆಕ್ಕರ್ ಆಯ್ಕೆ ಮಾಡಿಕೊಂಡು ಜುಮ್ ಅಂತ ಪ್ರವಾಸ ಮಾಡಬಹುದು. ಓಪನ್ ಟಾಪ್‌ನಲ್ಲಿ ಪ್ರವಾಸ ಮಾಡುವುದು ಥ್ರಿಲ್ಫುಲ್ ಸಂಗತಿ. ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿಕೊಂಡು ಹೊರಟರಾಯಿತು. ಪ್ಯಾಕೇಜ್‌ನಲ್ಲಿ ಪ್ರವಾಸ ತೋರಿಸಲಿರುವ ಪ್ರದೇಶಗಳ ಪಟ್ಟಿಯೂ ಇರುತ್ತದೆ.
ಇದು ಮೈಸೂರಿನಿಂದ ಬಂದ ಅಂಬಾರಿ
ಕೆಎಸ್‌ಟಿಡಿಸಿಯ ಈ ಅಂಬಾರಿ ಬಸ್‌ಗಳ ಮೊದಲ ಓಡಾಟ ಕರ್ನಾಟಕದಲ್ಲಿ ಆರಂಭವಾಗಿದ್ದು 2025ರಲ್ಲಿ. ಅದೂ ವಿಶ್ವ ವಿಖ್ಯಾತ ಮೈಸೂರು ದಸರಾ ಸಮಯದಲ್ಲಿ. ದಸರಾ ಸಮಯದಲ್ಲಿ ದೀಪದ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ಮೈಸೂರನ್ನು ಸುತ್ತಿಸಲು ಕೆಎಸ್‌ಟಿಡಿಸಿ ಅಂಬಾರಿ ಪ್ರವಾಸ ಪ್ಯಾಕೇಜ್ ಹೊರತಂದು ಸಾಕಷ್ಟು ಸುದ್ದಿಯಾಗಿತ್ತು. ಒಂದು ಗಂಟೆಯ ಪ್ರವಾಸದಲ್ಲಿ ಮೈಸೂರಿನ ಪ್ರಮುಖ ತಾಣಗಳನ್ನು ಸುತ್ತಿಸಿ ಜನರ ಮೆಚ್ಚುಗೆ ಪಡೆದಿತ್ತು. ಅಂಬಾರಿ ಅಂದಿನಿಂದಲೇ ಪ್ರವಾಸ ಪ್ರಿಯರ ಆಕರ್ಷಣೆಯ ಕೇಂದ್ರಬಿಂದು. ಅಲ್ಲಿಂದ ಬೆಂಗಳೂರಿಗೆ ಪದಾರ್ಪಣೆ ಮಾಡಿದೆ.

ಗುಲಾಬಿ ಬಣ್ಣದ ಟ್ರಾವೆಲ್ ಬಸ್
ಅಂಬಾರಿ ಡಬಲ್ ಡೆಕ್ಕರ್ ಬಸ್ ಪ್ರವಾಸಕ್ಕೆಂದೇ ವಿಶೇಷವಾಗಿ ರೂಪುಗೊಂಡ ಬಸ್. ಮೇಲಾಗಿ ನಗರ ಸಂಚಾರಕ್ಕೆಂದೇ ನಿರ್ಮಾಣವಾಗಿದೆ. ಲಂಡನ್ ಪ್ರವಾಸದಲ್ಲಿ ಜನರು ಮೆಚ್ಚಿಕೊಂಡಿದ್ದ ʻಬಿಗ್ ಬಸ್ʼ ಮಾದರಿಯಲ್ಲಿ ಇವುಗಳನ್ನು ರೂಪಿಸಲಾಗಿದೆ. ಈ ಪ್ರವಾಸಿ ಬ್ರ್ಯಾಂಡ್ ಬಸ್‌ಗೆ ಮೈಸೂರಿನ ಬ್ರ್ಯಾಂಡ್ ಅಂಬಾರಿಯ ಹೆಸರನ್ನು ಇಡಲಾಗಿದೆ. 25 ಅಡಿ ಎತ್ತರ ಇದ್ದು ಮೇಲಿನ ಡೆಕ್ಕರ್ ಓಪನ್ ಟಾಪ್ ಹೊಂದಿದೆ. ಮೇಲಿನ ಡೆಕ್ಕರ್‌ನಲ್ಲಿ 20 ಮತ್ತು ಕೆಳಗಿನ ಡೆಕ್ಕರ್‌ನಲ್ಲಿ 20 ಆಸನಗಳು ಇದ್ದು, ಒಟ್ಟು 40 ಪ್ರಯಾಣಿಕರು ಆರಾಮವಾಗಿ ಪ್ರವಾಸ ಹೋಗಬಹುದು. ಗುಲಾಬಿ ಬಣ್ಣದ ಬಸ್ ಇದಾಗಿದ್ದು ಲುಕ್ ಮಾತ್ರ ಐಷಾರಾಮಿಯಾಗಿದೆ.
ಫೊಟೋಗ್ರಫರ್‌ಗಳ ನೆಚ್ಚಿನ ಬಸ್
ಈ ಬಸ್‌ಗಳ ಪ್ರಯಾಣ ಸುಖಕರ ಮತ್ತು ಐಷಾರಾಮಿಯಾಗಿರುವುದು ನಿಜ. ಆದರ ಜತೆಗೆ ಇದು ಫೊಟೋಗ್ರಫರ್‌ಗಳ ನೆಚ್ಚಿನ ಬಸ್ ಆಗಿಯೂ ಗುರುತಿಸಿಕೊಂಡಿದೆ. 25 ಅಡಿಗಳಷ್ಟು ಎತ್ತರದ ಮತ್ತು ಓಪನ್ ಟಾಪ್ ಡಬಲ್ ಡೆಕ್ಕರ್ ಬಸ್ ಇದಙಗಿರುವುದರಿಂದ, ಮೇಲಿನ ಡೆಕ್ಕರ್‌ನಲ್ಲಿ ನಿಂತು ಟೂರ್ ಮಧ್ಯೆ ಕಾಣಲು ಸಿಗುವ ಪ್ರವಾಸಿ ತಾಣಗಳನ್ನು ಈಸಿಯಾಗಿ ಮತ್ತು ಅದ್ಭುತವಾಗಿ ಸೆರೆಹಿಡಿಯಬಹುದು. ಮೊಟೋ ವ್ಲಾಗಿಂಗ್ ಫೀಲ್ ಇಲ್ಲಿ ಸಿಗುತ್ತದೆ. ಹೀಗೆ ಇನ್ಸ್ಟಾ ಇನ್ಫೂಯೆನ್ಸರ್‌ಗಳು ತೆಗೆದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಅವುಗಳಲ್ಲಿ ವಿಧಾನ ಸೌಧ, ಕಬ್ಬನ್ ಪಾರ್ಕ್, ಕಂಠೀರವ ಸ್ಟೇಡಿಯಂ, ವಿಶ್ವೇಶ್ವರಯ್ಯ ಮ್ಯೂಸಿಯಂ, ಚಿನ್ನಸ್ವಾಮಿ ಕ್ರೀಡಾಂಗಣ, ಹೈಕೋರ್ಟ್ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ.
ನೀವೂ ಇದನ್ನು ಪ್ರಯತ್ನಿಸಲು ಬಯಸಿದರೆ ಗಿಂಬಲ್ ಸಹಿತ ಒಂದು ಗೋಪ್ರೋ ಹಿಡಿದು ಅಂಬಾರಿ ಪ್ರವಾಸ ಮಾಡಿ. ಅದ್ಭುತ ಲ್ಯಾಂಡ್‌ಸ್ಕೇಪ್‌ನೊಂದಿಗೆ ವಿಡಿಯೋಗಳನ್ನು ಸೆರೆಯಾಗುತ್ತವೆ. ವಿಶೇಷವೆಂದರೆ ಹೀಗೆ ವಿಡಿಯೋಗ್ರಫೆ ಮಾಡಲು ನೀವು ಇಲ್ಲಿ ಹೆಚ್ಚುವರಿ ಸುಂಕ ತೆರುವ ಅಗತ್ಯವೂ ಇಲ್ಲಿ. ಇದು ಉಚಿತ ಅವಕಾಶ. ಇನ್ಯಾಕೆ ತಡ? ಹಾಯ್ ಗಯ್ಸ್ ಎನ್ನಿ ಒಂದು ವಿಡಿಯೋ ಮಾಡಿಕೊಂಡು ಹರಿಬಿಡಿ.

ಎಲ್ಲಿಂದ ಆರಂಭ ನಂತರ ಎಲ್ಲಿಗೆ
ಡಬಲ್ ಡೆಕ್ಕರ್ ಅಂಬಾರೊ ಬಸ್ ಸಂಚಾರವು ರವೀಂದ್ರ ಕಲಾಕ್ಷೇತ್ರದಿಂದ ಪ್ರಾರಂಭವಾಗುತ್ತದೆ. ಕಾರ್ಪೊರೇಷನ್ ಸರ್ಕಲ್ ಮತ್ತು ಹಡ್ಸನ್ ಸರ್ಕಲ್ ಮೂಲಕ ಕಸ್ತೂರಬಾ ರಸ್ತೆ, ವಿಟ್ಟಲ್ ಮಲ್ಯ ರಸ್ತೆ, ಯುಬಿ ಸಿಟಿ, ಸರಕಾರಿ ಮ್ಯೂಸಿಯಂ ಮಾರ್ಗವಾಗಿ ಸಾಗಿ ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯವನ್ನು ತಲುಪುತ್ತದೆ. ಅಲ್ಲಿಂದ ಅನಿಲ್ ಕುಂಬಳೆ ಸಿರಬ್ ಪಾರ್ಕ್ ರಸ್ತೆ, ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಜನರಲ್ ಪೋಸ್ಟ್ ಆಫೀಸ್ (GPO)ಗೆ ಹೊರಡುತ್ತದೆ. ಯುಟಿಲಿಟಿ ಬಿಲ್ಡಿಂಗ್, ಡಾ. ಬಿಆರ್ ಅಂಬೇಡ್ಕರ್ ರಸ್ತೆ, ಬಾರ್ ಕೌನ್ಸಿಲ್, ಹೈಕೋರ್ಟ್ ಮತ್ತು ವಿಧಾನಸೌಧವನ್ನೂ ಸಂಚಾರದಲ್ಲಿ ನೋಡಬಹುದು. ಅಲ್ಲಿಂದ ಮರಳಿ ರವೀಂದ್ರ ಕಲಾಕ್ಷೇತ್ರಕ್ಕೆ ಪ್ರವಾಸಿಗರನ್ನು ತಂದು ನಿಲುಗಡೆ ನೀಡಲಿದೆ. ಪ್ರತಿದಿನ ಒಟ್ಟು ಐದು ಟ್ರಿಪ್‌ಗಳ ವ್ಯವಸ್ಥೆಯನ್ನು ಕೆಎಸ್‌ಟಿಡಿಸಿ ಮಾಡಿಕೊಟ್ಟಿದೆ. ಬೆಳಗ್ಗೆ 5 ಮತ್ತು ಮಧ್ಯಾಹ್ನ 4 ಮತ್ತು ಸಂಜೆ 7 ಟ್ರಿಪ್‌ಗಳು ಇರಲಿವೆ.
ಬೆಂಗಳೂರು ಪ್ರವಾಸ ಮಾಡಲು ಬೆಳಗ್ಗೆ ಮತ್ತು ಸಂಜೆಯ ಸಮಯ ಅದ್ಭುತವಾಗಿರುತ್ತದೆ. ಕಾರಣ, ಆ ಸಮಯದಲ್ಲಿ ಬಿಸಿಲು ಕೊಂಚ ಕಡಿಮೆ ಇರುತ್ತದೆ. ಫೊಟೋ ಕ್ಲಿಕ್ಕಿಸಿಕೊಳ್ಳಲೂ ಇದು ಉತ್ತಮ ಸಮಯ. ಉಳಿದಂತೆ ಎಲ್ಲಾ ಸಮಯದಲ್ಲೂ ಅಂಬಾರಿ ಪ್ರವಾಸ ಆರಾಮದಾಯಕ ಮತ್ತು ಉತ್ತಮವಾಗಿರುತ್ತದೆ.
ಬೆಂಗಳೂರಿನಲ್ಲಿ ಎಲ್ಲೆಡೆಯೂ ಅಂಬಾರಿ ಬಸ್ ಓಡಾಟ ಕಷ್ಟಕರ. ಏಕೆಂದರೆ ಹಲವು ಕಡೆಗಳಲ್ಲಿ ಮರಗಳು, ಅಂಡರ್ ಪಾಸ್‌ಗಳಿಂದ ಅಡೆತಡೆಗಳಿವೆ. ಹಾಗಾಗಿ ಅವಕಾಶ ಇರುವ ಕಡೆಗಳಲ್ಲಿ ಡಬಲ್ ಡೆಕ್ಕರ್ ಅಂಬಾರಿ ಬಸ್ ಸಂಚಾರ ಮಾಡುತ್ತಿದೆ.
ವಿಧಾನಸೌಧ
ವಿಧಾನಸೌಧ, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿದೆ. ಕೆಂಗಲ್ ಹನುಮಂತಯ್ಯನವರು ದರ ನಿರ್ಮಾತೃ. ಕರ್ನಾಟಕದ ವಿಧಾನ ಸಭೆ ಮತ್ತು ವಿಧಾನ ಪರಿಷತ್‌ಗಳ ಶಾಸಕಾಂಗದ ಸ್ಥಳವಾಗಿದೆ. ನವ ದ್ರಾವಿಡ ವಾಸ್ತುಶಿಲ್ಪ ಶೈಲಿಯ ಈ ಕಟ್ಟಡದಲ್ಲಿ ಚಾಲುಕ್ಯ, ಹೊಯ್ಸಳ ಮತ್ತು ವಿಜಯನಗರ ಶೈಲಿಯ ವಾಸ್ತುಶಿಲ್ಪದ ಅಂಶಗಳನ್ನೂ ಕಾಣಬಹುದಾಗಿದೆ. ಸುಮಾರು 60 ಎಕರೆಗಳಷ್ಟು ವಿಸ್ತಾರವಾಗಿರುವ ವಿಧಾನಸೌಧವು ಭಾರತದ ಅತಿದೊಡ್ಡ ರಾಜ್ಯ ಶಾಸಕಾಂಗ ಮತ್ತು ಸಚಿವಾಲಯ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಟ್ಟಡದ ನಿರ್ಮಾಣದಲ್ಲಿ 5,000 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡಿದ್ದಾರೆ. ಅವರಲ್ಲಿ ಕೆಲವು ಕೈದಿಗಳೂ ಇದ್ದರು!

ಹೈಕೋರ್ಟ್
ವಿಧಾನಸೌಧದ ಎದುರಿಗೆ ಹೈಕೋರ್ಟ್ ಇದೆ. ಇದು ವಿಧಾನಸೌಧಕ್ಕಿಂತಲೂ ಹಳೆಯ ಕಟ್ಟಡ. ಇದಕ್ಕೆ ಅಠಾರಾ ಕಚೇರಿ ಎಂಬ ಹೆಸರೂ ಇದೆ. ಕಾರಣ, ಮೈಸೂರಿನ ಚಿಕ್ಕದೇವರಾಜ ಒಡೆಯರ್ ಅವರ ಕಾಲದಲ್ಲಿ 18 ಕಚೇರಿಗಳನ್ನು ಕಟ್ಟಿದ್ದರು. ಆ ಕಚೇರಿಗಳು ಈ ಹೈಕೋರ್ಟ್‌ನಲ್ಲಿದ್ದುದರಿಂದ ಇದಕ್ಕೆ ಆ ಹೆಸರು ಬಂದಿದೆ. 'ಗ್ರೀಕೋ-ರೋಮನ್' ಶೈಲಿಯಲ್ಲಿನ ಈ ಕಟ್ಟಡದ ನಿರ್ಮಾಣ ಆರಂಭಿಸಿದವರು ಅಂದಿನ ಮೈಸೂರಿನ ಕಮಿಷನರ್ ಆಗಿದ್ದ ಬೌರಿಂಗ್ ಎಂಬುವವರು. 1868ರಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ವಿಧಾನಸೌಧ ನಿರ್ಮಾಣಕ್ಕೂ ಮೊದಲು ಈ ಕಟ್ಟಡ ಮೈಸೂರು ಸರಕಾರ ಸಚಿವಾಲಯವಾಗಿತ್ತು ಎಂಬುದು ವಿಶೇಷ. ಇಂದಿಗೆ ಇದು ಕರ್ನಾಟಕದ ಹೈಕೋರ್ಟ್ ಆಗಿ ಕಾರ್ಯನಿರ್ವಹಿಸುತ್ತಿದೆ.
ಚಿನ್ನಸ್ವಾಮಿ ಕ್ರೀಡಾಂಗಣ
ಕರ್ನಾಟಕದಲ್ಲಿಇದು ಪ್ರಸಿದ್ಧ ಕ್ರಿಕೆಟ್ ಸ್ಟೇಡಿಯಂ. ಕ್ರಿಕೆಟ್ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಮತ್ತು ಬಿಸಿಸಿಐ ಅಧ್ಯಕ್ಷರಾಗಿದ್ದ ಮಂಗಳಂ ಜಗದೀಶನ್ ಚಿನ್ನಸ್ವಾಮಿ ಅವರ ಗೌರವಾರ್ಥವಾಗಿ ಅವರ ಹೆಸರನ್ನೇ ಇದಕ್ಕೆ ಇಡಲಾಗಿದೆ. ಇದಕ್ಕೂ ಮೊದಲು 'ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈದಾನ' ಎಂಬುದು ಇದರ ಹೆಸರಾಗಿತ್ತು. ಇದು ವಿಶ್ವದ ಮೊದಲ ಪರಿಸರ ಸ್ನೇಹಿ ಕ್ರೀಡಾಂಗಣ. ಮೇಲ್ಚಾವಣೆಯಲ್ಲಿ ಅಳವಡಿಸಲಾದ ಸೋಲಾರ್ ಪ್ಯಾನಲ್‌ಗಳಿಂದ ಕ್ರೀಡಾಂಗಣಕ್ಕೆ ಬೇಕಾದ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಅಂಬಾರಿ ಬಸ್ ಸಂಚಾರ ವೇಳಾಪಟ್ಟಿ
ಒಟ್ಟು ಮೂರು ಅಂಬಾರಿ ಬಸ್‌ಗಳು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವುಗಳ ಪ್ರವಾಸ ಆರಂಭದ ವೇಳಾಪಟ್ಟಿ ಹೀಗಿದೆ.
ಅಂಬಾರಿ -1
ಬೆಳಗ್ಗೆ - 9:30 ಗಂಟೆಗೆ
ಬೆಳಗ್ಗೆ - 11:00 ಗಂಟೆಗೆ
ಮಧ್ಯಾಹ್ನ - 12:30 ಗಂಟೆಗೆ
ಸಂಜೆ - 4:00 ಗಂಟೆಗೆ
ಸಂಜೆ - 5:30 ಗಂಟೆಗೆ
ಸಂಜೆ - 7:30 ಗಂಟೆಗೆ
ಅಂಬಾರಿ -2
ಬೆಳಗ್ಗೆ - 10:00 ಗಂಟೆಗೆ
ಬೆಳಗ್ಗೆ - 11:30 ಗಂಟೆಗೆ
ಮಧ್ಯಾಹ್ನ - 1:00 ಗಂಟೆಗೆ
ಸಂಜೆ - 4:30 ಗಂಟೆಗೆ
ಸಂಜೆ - 6:00 ಗಂಟೆಗೆ
ಅಂಬಾರಿ -3
ಬೆಳಗ್ಗೆ - 10:30 ಗಂಟೆಗೆ
ಮಧ್ಯಾಹ್ನ - 12:00 ಗಂಟೆಗೆ
ಮಧ್ಯಾಹ್ನ - 3:30 ಗಂಟೆಗೆ
ಸಂಜೆ - 5:00 ಗಂಟೆಗೆ
ಸಂಜೆ - 7:00 ಗಂಟೆಗೆ
ಹೈಲೈಟ್ಸ್
ಓಪನ್-ಟಾಪ್ ಡಬಲ್ ಡೆಕ್ಕರ್ ಮೇಲಿಂದ ವಿಹಂಗಮ ನೋಟಗಳನ್ನು ಕಾಣಬಹುದು.
ಒಂದೇ ರೌಂಡ್ ಟ್ರಿಪ್‌ನಲ್ಲಿ ಬೆಂಗಳೂರಿನ ಪ್ರಮುಖ ಆಕರ್ಷಣೆಗಳನ್ನು ಕಾಣಬಹುದು.
ಛಾಯಾಗ್ರಹಣ, ವಿಡಿಯೋಗ್ರಫಿಗೆ ಉತ್ತಮ ಅವಕಾಶ.
ಸುರಕ್ಷಿತ, ಆರಾಮಧಾಯಕ ಮತ್ತು ಮಾಹಿತಿಯುಕ್ತ ಪ್ರವಾಸ
ಬೆಳಗ್ಗೆ ಮತ್ತು ಸಂಜೆಯ ಪ್ರವಾಸಗಳು ಸುಂದರವಾಗಿರುತ್ತವೆ
ಸಂಪರ್ಕ:
Yogesh. MK
Manager (Tours)
Mob No: +91 960 6987 822 | Email ID: tour.manager@kstdc.co
Karnataka State Tourism Development Corporation Ltd. (KSTDC)
ಬುಕಿಂಗ್‌ಗಾಗಿ:
ಬಾಕ್ಸ್:
ಕೆಎಸ್‌ಟಿಡಿಸಿಯ ಈ ಸುಂದರ ಡಬಲ್ ಡೆಕ್ಕರ್ ಬಸ್‌ನಲ್ಲಿ ಪ್ರವಾಸ ಮಾಡಲು ಬಯಸುವವರು ವೆಬ್‌ಸೈಟ್ ಮೂಲಕ ಟಿಕೆಟ್ ಬುಕಿಂಗ್ ಮಾಡಬಹುದು. ನೇರವಾಗಿ ಬಸ್‌ನಲ್ಲೂ ಟಿಕೆಟ್ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ.