• ವಿನುತಾ ಹೆಗಡೆ ಶಿರಸಿ

ಪ್ರಕೃತಿಯ ಮಡಿಲಲ್ಲಿ, ಕಾಳಿ ನದಿಯ ತಟದಲ್ಲಿ ಹಕ್ಕಿಗಳ ಕಲರವವೇ ಒಂದು ಆನಂದ. ಅದರಲ್ಲೂ ವಿಶೇಷವಾಗಿ ವಿಶಿಷ್ಟ ಆಕಾರದ ಕೊಕ್ಕುಗಳನ್ನು ಹೊಂದಿರುವ 'ಹಾರ್ನ್‌ಬಿಲ್' (ಮಲಬಾರ್ ಪೈಡ್ ಹಾರ್ನ್‌ಬಿಲ್) ಪಕ್ಷಿಗಳಿಗೆ ದಾಂಡೇಲಿ ಪ್ರಶಸ್ತ ತಾಣ. ಈ ಪಕ್ಷಿಗಳ ಸಂರಕ್ಷಣೆ ಮತ್ತು ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಪ್ರತಿ ವರ್ಷ ಆಯೋಜಿಸುತ್ತಿರುವ 'ಹಾರ್ನ್‌ಬಿಲ್ ಹಬ್ಬ' ಇಂದು ನಾಡಿನಾದ್ಯಂತ ಗಮನ ಸೆಳೆಯುತ್ತಿದೆ.

ಹಳಿಯಾಳ ಅರಣ್ಯ ಇಲಾಖೆ ನಡೆಸಿದ ಈ ಉತ್ಸವ ನಿಜಕ್ಕೂ ಸ್ತುತ್ಯಾರ್ಹ.

ಹಿರಿಯ ರಾಜಕಾರಣಿ, ಸಚಿವ ಮತ್ತು ಹಳಿಯಾಳದ ಶಾಸಕರಾಗಿರುವ ಆರ್ ವಿ ದೇಶಪಾಂಡೆಯವರು ಹಾರ್ನಬಿಲ್ ಉತ್ಸವದಲ್ಲಿ ಭಾಗವಹಿಸಿದ್ದು ಮತ್ತು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು ಹಾರ್ನಬಿಲ್ ಹಬ್ಬಕ್ಕೆ ಚೈತ್ಯನ ನೀಡಿದೆ.

ಇದನ್ನೂ ಓದಿ: ಆಧುನಿಕ ಶ್ರವಣಕುಮಾರನ ಸಾಹಸಗಾಥೆ!

​ಯಾಕಾಗಿ ಈ ಹಬ್ಬ ?

​ಹಾರ್ನ್‌ಬಿಲ್ ಪಕ್ಷಿಗಳನ್ನು ಕನ್ನಡದಲ್ಲಿ 'ಧನೇಶ' ಪಕ್ಷಿಗಳು ಎಂದು ಕರೆಯಲಾಗುತ್ತದೆ. ಮಂಗಟ್ಟೆ ಹಕ್ಕಿ ಎಂದೂ ಆಡುಭಾಷೆಯಲ್ಲಿ ಕರೆಯುತ್ತಾರೆ. ದಾಂಡೇಲಿ ಮತ್ತು ಜೋಯಿಡಾ ಅರಣ್ಯ ಪ್ರದೇಶವು ಇವುಗಳ ನೆಚ್ಚಿನ ವಾಸಸ್ಥಾನ. ಈ ಪಕ್ಷಿಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು, ಅವುಗಳ ಆವಾಸಸ್ಥಾನವಾದ ಕಾಡನ್ನು ಉಳಿಸಲು ಮತ್ತು ಪಕ್ಷಿ ಪ್ರೇಮಿಗಳನ್ನು ಒಂದೆಡೆ ಸೇರಿಸಲು ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಈ ಹಬ್ಬವನ್ನು ಆಯೋಜಿಸುತ್ತಿವೆ.

Untitled design (10)

ಹಬ್ಬದಲ್ಲಿ ಏನೇನಿತ್ತು ?

​ದಾಂಡೇಲಿಯ ಹಾರ್ನ್‌ಬಿಲ್ ಹಬ್ಬವು ಕೇವಲ ಒಂದು ಪ್ರದರ್ಶನವಲ್ಲ, ಇದೊಂದು ಜ್ಞಾನದ ಹಬ್ಬ.​ ನಸುಕಿನ ವೇಳೆಯಲ್ಲಿ ತಜ್ಞರೊಂದಿಗೆ ಕಾಡಿನೊಳಗೆ ಹೋಗಿ ಹಾರ್ನ್‌ಬಿಲ್ ಸೇರಿದಂತೆ ನೂರಾರು ತಳಿಯ ಪಕ್ಷಿಗಳನ್ನು ವೀಕ್ಷಿಸುವ ಅವಕಾಶ. ಹಾಗಂತ ಬರೀ ಪಕ್ಷಿಗಳನ್ನು ನೋಡುವುದಷ್ಟೇ ಅಲ್ಲ. ಇಲ್ಲಿ ನುರಿತ ಛಾಯಾಗ್ರಾಹಕರು ಸೆರೆಹಿಡಿದ ಪಕ್ಷಿಗಳ ಅದ್ಭುತ ಚಿತ್ರಗಳ ಪ್ರದರ್ಶನ. ಸಂವಾದ ಮತ್ತು ಗೋಷ್ಠಿಗಳು. ಪರಿಸರ ತಜ್ಞರಿಂದ ಹಾರ್ನ್‌ಬಿಲ್ ಪಕ್ಷಿಗಳ ಜೀವನ ಚಕ್ರ ಮತ್ತು ಅವುಗಳ ಸಂರಕ್ಷಣೆಯ ಅನಿವಾರ್ಯತೆಯ ಬಗ್ಗೆ ಅರ್ಥಪೂರ್ಣ ಚರ್ಚೆಗಳು ನಡೆದವು. ಇದರ ಜತೆಗ​ ದಾಂಡೇಲಿ ಭಾಗದ ಬುಡಕಟ್ಟು ಜನರ (ಸಿದ್ದಿ ಮತ್ತು ಗೌಳಿ ಜನಾಂಗದ) ಜಾನಪದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾರ್ನ್ ಬಿಲ್ ಹಬ್ಬದ ಮುಖ್ಯ ಆಕರ್ಷಣೆಗಳಾಗಿದ್ದವು.

ಹಾರ್ನ್ ಬಿಲ್ ಹಬ್ಬದ ಮಹತ್ವ

ಹಾರ್ನ್‌ಬಿಲ್‌ಗಳನ್ನು 'ಕಾಡಿನ ರೈತರು' ಎಂದು ಕರೆಯಲಾಗುತ್ತದೆ. ಇವು ಹಣ್ಣುಗಳನ್ನು ತಿಂದು ಬೀಜಗಳನ್ನು ದೂರದ ಪ್ರದೇಶಗಳಲ್ಲಿ ಹರಡುವುದರಿಂದ ಕಾಡು ಬೆಳೆಯಲು ಸಹಾಯವಾಗುತ್ತದೆ. ಈ ಪಕ್ಷಿಗಳ ರಕ್ಷಣೆ ಎಂದರೆ ಕಾಡಿನ ರಕ್ಷಣೆ ಎಂದರ್ಥ.

ಈ ಹಬ್ಬದಿಂದಾಗಿ ದಾಂಡೇಲಿಯ ಹೋಮ್ ಸ್ಟೇಗಳು ಮತ್ತು ಸ್ಥಳೀಯ ಗೈಡ್ ಗಳಿಗೆ ಆರ್ಥಿಕ ನೆರವು ಸಿಗುತ್ತದೆ. ಕಾಡಿನ ಒತ್ತುವರಿ ಮತ್ತು ಮರಗಳ ನಾಶದಿಂದಾಗಿ ಈ ಪಕ್ಷಿಗಳು ನೆಲೆ ಕಳೆದುಕೊಳ್ಳುತ್ತಿವೆ. ಇಂಥ ಹಬ್ಬಗಳು ನಡೆಯುವುದರಿಂದ ಅದು ಜನರಲ್ಲಿ ಪರಿಸರ ಪ್ರೇಮವನ್ನು ಬಿತ್ತುವುದಕ್ಕೆ ಸಹಕಾರಿಯಾಗುತ್ತದೆ.

Untitled design (9)

​ನಾಗಾಲ್ಯಾಂಡ್‌ನ ಹಬ್ಬವು ಸಂಸ್ಕೃತಿಯ ಸಂಕೇತವಾದರೆ, ದಾಂಡೇಲಿಯ ಹಾರ್ನ್‌ಬಿಲ್ ಹಬ್ಬವು ಪರಿಸರ ಸಂರಕ್ಷಣೆಯ ಸಂಕೇತ. ಕಾಳಿ ನದಿಯ ತಂಪಾದ ಗಾಳಿ, ಹಸಿರು ವನಸಿರಿ ಮತ್ತು ಹಾರ್ನ್‌ಬಿಲ್‌ಗಳ ಹಾರಾಟವನ್ನು ಕಣ್ಣುಂಬಿಕೊಳ್ಳಲು ಈ ಹಬ್ಬ ಒಂದು ಸುಸಂದರ್ಭ. ನಮ್ಮ ನೆಲದ ಅಪರೂಪದ ಜೀವವೈವಿಧ್ಯವನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ.

​ನಾವು ದಾಂಡೇಲಿಯಲ್ಲಿ ಹಾರ್ನ್ ಬಿಲ್ ಹಬ್ಬ ಆಚರಿಸುವ ಮುಖ್ಯ ಉದ್ದೇಶವೆಂದರೆ ಹಾರ್ನ್ ಬಿಲ್ ಸಂರಕ್ಷಣೆಯ ಜಾಗೃತಿ. ಅದರ ಜತೆಗೆ ಇಲ್ಲಿನ ಸ್ಥಳೀಯ ಸಮುದಾಯಗಳ ಸಂಸ್ಕೃತಿ ಮತ್ತು ಕಲೆಗಳನ್ನು ಹೊರನಾಡಿನ ಜನತೆಗೆ ತೋರಿಸಿಕೊಡುವುದು ಹಬ್ಬದ ಉದ್ದೇಶವಾಗಿದೆ.
2018 ರಿಂದ ಪ್ರತಿ ವರ್ಷ ನಾವು ದಾಂಡೇಲಿಯಲ್ಲಿ ಹಾರ್ನ್ ಬಿಲ್ ಹಕ್ಕಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಕರ್ನಾಟಕ ರಾಜ್ಯಾದ್ಯಂತ ಪ್ರತಿ ವರ್ಷ ಅರಣ್ಯ ಇಲಾಖೆಯಿಂದ ಹಕ್ಕಿಗಳ ಹಬ್ಬವನ್ನು ಮಾಡುತ್ತಾರೆ, ಆದರೆ ವಿಶೇಷವಾಗಿ ಹಳಿಯಾಳದಲ್ಲಿ 'ಹಾರ್ನ್ ಬಿಲ್' ಎಂಬ ಒಂದೇ ಪ್ರಭೇದಕ್ಕೆ ಹೆಚ್ಚಿನ ಒತ್ತು ಕೊಟ್ಟು ನಾವು ಸಂಭ್ರಮಿಸುತ್ತಿದ್ದೇವೆ.
​ಇದಕ್ಕೆ ಯಾಕೆ ನಾವು ಒತ್ತು ಕೊಡುತ್ತಿದ್ದೇವೆ ಎಂದರೆ, ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬರುವ ಹಲವಾರು ಪ್ರವಾಸಿಗರು ಸಫಾರಿಗೆ ಹೋದಾಗ ಹುಲಿ ಅಥವಾ ಚಿರತೆ ಕಾಣದಿದ್ದಾಗ ನಿರಾಸೆಯಿಂದ ಹೊರಬರುತ್ತಾರೆ. ಅವರು ಕೇವಲ ದೊಡ್ಡ ಪ್ರಾಣಿಗಳ ಮೇಲೆ ಮಾತ್ರ ಒತ್ತು ಕೊಡುತ್ತಾರೆ. ನಮ್ಮ ಉದ್ದೇಶ ಏನಂದರೆ, ಒಂದು ಪರಿಸರ ಪೂರಕವಾದ ಪ್ರವಾಸೋದ್ಯಮದಲ್ಲಿ ಹಾರ್ನ್ ಬಿಲ್ ಹಕ್ಕಿಗಳು ಇರಬಹುದು, ಜೇಡಗಳು ಇರಬಹುದು ಅಥವಾ ಚಿಟ್ಟೆಗಳು ಇರಬಹುದು - ಇವೆಲ್ಲವನ್ನೂ ನೋಡಿ ಅವರು ಒಂದು ತೃಪ್ತಿಯಿಂದ ವಾಪಸ್ ಹೋಗಬೇಕು. ಈ ಉದ್ದೇಶದಿಂದ ಈ ಫೆಸ್ಟಿವಲ್ ಮಾಡುತ್ತಿದ್ದೇವೆ. ಭಾರತದಲ್ಲಿ ಒಟ್ಟು ಒಂಬತ್ತು ಪ್ರಭೇದದ ಹಾರ್ನ್ ಬಿಲ್‌ಗಳಿವೆ.
-ಡಾ. ಪ್ರಶಾಂತ ಕುಮಾರ ಕೆ.ಸಿ. , ಉಪ ಅರಣ್ಯ ಸಂರಕ್ಷಣಾಧಿಕಾರಿ.

ಪರಿಸರ ಸಂರಕ್ಷಣೆ ಕುರಿತು ಇಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳು ಅತ್ಯುತ್ತಮವಾಗಿವೆ. ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಮಾತ್ರವಲ್ಲದೆ, ನಾಗಾಲ್ಯಾಂಡ್‌ನಿಂದಲೂ ಅನೇಕರು ಆಗಮಿಸಿ ತಮ್ಮ ಸಂರಕ್ಷಣಾ ಪದ್ಧತಿಗಳನ್ನು ಹಂಚಿಕೊಂಡಿರುವುದು ವಿಶೇಷವಾಗಿತ್ತು. ನಾನು ಮೈಸೂರಿನಲ್ಲಿ ಸಾಕಷ್ಟು ಪಕ್ಷಿಗಳನ್ನು ನೋಡಿದ್ದೇನೆ, ಆದರೆ 'ಹಾರ್ನ್ ಬಿಲ್' ಎಂದ ಕೂಡಲೇ ನೆನಪಾಗುವುದೇ ದಾಂಡೇಲಿ. ಹಾಗಾಗಿ ಈ ಹಬ್ಬವನ್ನು ಮಿಸ್ ಮಾಡಿಕೊಳ್ಳಬಾರದೆಂದು ಮೊದಲೇ ಪ್ಲಾನ್ ಮಾಡಿಕೊಂಡು ಬಂದಿದ್ದೇನೆ.
​ಮುಂಜಾನೆ ಮಂಜಿನ ವಾತಾವರಣದಲ್ಲಿ ಕೈಗೊಂಡ ಸಫಾರಿ ಒಂದು ಅದ್ಭುತ ಅನುಭವ. ಚಹಾ ಕುಡಿಯುವ ಯೋಚನೆಯನ್ನೂ ಬದಿಗಿಟ್ಟು ಎಲ್ಲರೂ ಉತ್ಸಾಹದಿಂದ ಭಾಗವಹಿಸಿದ್ದೆವು. ​ಸಫಾರಿಯಲ್ಲಿ ಹಾರ್ನ್ ಬಿಲ್ ಮಾತ್ರವಲ್ಲದೆ, ಬಹಳ ಅಪರೂಪದ ಕರಡಿ ಕೂಡ ಕಂಡುಬಂದಿದ್ದು ಈ ಪ್ರವಾಸದ ದೊಡ್ಡ ಯಶಸ್ಸು.​"ಈ ರೀತಿಯ ಹಬ್ಬಗಳು ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ನಮಗೆ ಹೆಚ್ಚಿನ ಅರಿವು ಮೂಡಿಸುತ್ತವೆ. ಮುಂದಿನ ವರ್ಷವೂ ನಾನು ಈ ಹಬ್ಬದಲ್ಲಿ ಭಾಗಿಯಾಗಲು ಇಚ್ಛಿಸುತ್ತೇನೆ.
-ಪ್ರವಾಸಿ ಯುವತಿ ಕಾವ್ಯಾ ಮೈಸೂರು

ಹಾರ್ನ್‌ಬಿಲ್ ಉತ್ಸವಕ್ಕೆ ಬರುವ ಮುನ್ನವೇ 20ಕ್ಕೂ ಹೆಚ್ಚು ಹಾರ್ನ್‌ಬಿಲ್ ಹಕ್ಕಿಗಳು ಸ್ವಾಗತಿಸಿದವು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹಕ್ಕಿಗಳು ಹಾರಾಡುವುದನ್ನು ನೋಡಿ ತುಂಬಾ ಖುಷಿಯಾಯಿತು." ​ಹಕ್ಕಿಗಳ ಸಂರಕ್ಷಣೆಗಾಗಿ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಅವರು ಹಗಲಿರುಳು ಕೆಲಸ ಮಾಡಿ ಈ ಹಕ್ಕಿಗಳ ಸಂತತಿಯನ್ನು ಉಳಿಸಲು ಶ್ರಮಿಸುತ್ತಿದ್ದಾರೆ." ​ಹಾರ್ನ್‌ಬಿಲ್ ಹಕ್ಕಿಗಳು ಶಿಸ್ತುಬದ್ಧ ಜೀವನ ನಡೆಸುತ್ತವೆ. ಅವು ರಾತ್ರಿ ವೇಳೆ ಆಹಾರ ಸೇವಿಸುವುದಿಲ್ಲ, ತಮ್ಮ ಮರಿಗಳನ್ನು ಪ್ರೀತಿಯಿಂದ ಸಾಕಿ ಬೆಳೆಸುತ್ತವೆ ಮತ್ತು ಜೀವನದ ಪಾಠಗಳನ್ನು ಕಲಿಸುತ್ತವೆ. ಕಾಯಿಲೆ ಬಂದಾಗ ಆಹಾರ ತ್ಯಜಿಸಿ ಗುಣಮುಖವಾದ ಮೇಲೆ ಆಹಾರ ಸೇವಿಸುತ್ತವೆ. ಈ ಸಣ್ಣ ಪಾಠಗಳನ್ನು ಮನುಷ್ಯರು ಪಾಲಿಸಿದರೆ ನಮ್ಮ ಜೀವನವೂ ಸಮೃದ್ಧವಾಗಿ ಮತ್ತು ಸಂತೋಷವಾಗಿರಬಹುದು." ​ಈ ಹಕ್ಕಿಗಳ ಉತ್ಸವದಲ್ಲಿ ಭಾಗವಹಿಸಿ ಹಕ್ಕಿಗಳ ಬಗ್ಗೆ ಹೊಸ ವಿಷಯಗಳನ್ನು ತಿಳಿದುಕೊಂಡಿರುವುದು ತಮಗೆ ಬಹಳ ತೃಪ್ತಿ ತಂದಿದೆ .
- ಮೇಘಾ ಹುಬ್ಬಳ್ಳಿ

ಆದರ್ಶ ದಂಪತಿ ಹಕ್ಕಿಯ ವರ್ಣನೆ...

ರಾಜ ಗಾಂಭೀರ್ಯದ ಕೊಕ್ಕು: ಹಾರ್ನಬಿಲ್ ಪಕ್ಷಿಯ ಅತ್ಯಂತ ಆಕರ್ಷಕ ಭಾಗವೆಂದರೆ ಅದರ ಬೃಹತ್ ಮತ್ತು ಬಲಿಷ್ಠವಾದ ಕೊಕ್ಕು. ಉದ್ದನೆಯ, ಬಾಗಿದ ಈ ಕೊಕ್ಕಿನ ಮೇಲೆ 'ಕ್ಯಾಸ್ಕ್' ಎಂಬ ಕಿರೀಟದಂಥ ರಚನೆ ಇರುತ್ತದೆ. ಇದು ಪಕ್ಷಿಗೆ ಒಂದು ರೀತಿಯ ರಾಜವೈಭವದ ನೋಟವನ್ನು ನೀಡುತ್ತದೆ. ಇದು ನೋಡಲು ಭಾರವೆನಿಸಿದರೂ, ಒಳಭಾಗದಲ್ಲಿ ಟೊಳ್ಳಾಗಿದ್ದು ಪಕ್ಷಿಯ ಹಾರಾಟಕ್ಕೆ ಅಡ್ಡಿಯಾಗುವುದಿಲ್ಲ.

ಬಣ್ಣಗಳ ಚಿತ್ತಾರ:

ಹಾರ್ನಬಿಲ್‌ನ ಮೈಬಣ್ಣವು ಕಪ್ಪು ಮತ್ತು ಬಿಳಿಯ ಸುಂದರ ಸಂಯೋಜನೆಯಿಂದ ಕೂಡಿರುತ್ತದೆ. ಅದರಲ್ಲೂ 'ಗ್ರೇಟ್ ಇಂಡಿಯನ್ ಹಾರ್ನಬಿಲ್' ಪಕ್ಷಿಯ ಕುತ್ತಿಗೆಯ ಭಾಗವು ಹೊಳೆಯುವ ಹಳದಿ ಬಣ್ಣದಿಂದ ಮಿಂಚುತ್ತಿರುತ್ತದೆ. ಕಣ್ಣುಗಳ ಸುತ್ತಲಿನ ಕಪ್ಪು ಬಣ್ಣ ಮತ್ತು ರೆಕ್ಕೆಗಳ ತುದಿಯಲ್ಲಿರುವ ಬಿಳಿ ಪಟ್ಟಿಗಳು ಅದಕ್ಕೆ ವಿಶಿಷ್ಟ ಅಂದವನ್ನು ನೀಡುತ್ತವೆ.

Untitled design (11)

ಅರಣ್ಯದ ಕಾವಲುಗಾರ:

ದಟ್ಟವಾದ ಮಲೆನಾಡಿನ ಕಾಡುಗಳಲ್ಲಿ ಹಾರ್ನಬಿಲ್ ಹಾರುವಾಗ ಕೇಳಿಬರುವ ರೆಕ್ಕೆಗಳ ಶಬ್ದ ಆನೆಯ ಘೀಳಿನಷ್ಟೇ ಪ್ರಭಾವಶಾಲಿಯಾಗಿರುತ್ತದೆ. ಎತ್ತರದ ಮರಗಳ ಮೇಲೆ ಕುಳಿತು ಗಂಭೀರವಾಗಿ ಕಾಡನ್ನು ವೀಕ್ಷಿಸುವ ಇದರ ರೀತಿಗೆ ಮಾರುಹೋಗದವರೇ ಇಲ್ಲ.

ಪ್ರೀತಿ ಮತ್ತು ನಿಷ್ಠೆಯ ಸಂಕೇತ:

ಹಾರ್ನಬಿಲ್ ಪಕ್ಷಿಗಳು ತಮ್ಮ ಸಂಗಾತಿಯ ಬಗ್ಗೆ ತೋರುವ ನಿಷ್ಠೆ ಅದ್ಭುತ. ಮರಿ ಮಾಡುವ ಸಮಯದಲ್ಲಿ ಹೆಣ್ಣು ಹಾರ್ನಬಿಲ್ ಮರದ ಪೊಟರೆಯಲ್ಲಿ ತನ್ನನ್ನು ತಾನು ಬಂಧಿಸಿಕೊಳ್ಳುತ್ತದೆ. ಆಗ ಗಂಡು ಹಾರ್ನಬಿಲ್ ಹಗಲಿರುಳು ಆಹಾರವನ್ನು ತಂದುಕೊಟ್ಟು ಕುಟುಂಬವನ್ನು ರಕ್ಷಿಸುತ್ತದೆ. ಈ ಜೀವನಕ್ರಮವು ಪ್ರಕೃತಿಯಲ್ಲಿನ ಅತ್ಯಂತ ಸುಂದರವಾದ ಬಾಂಧವ್ಯಗಳಲ್ಲಿ ಒಂದಾಗಿದೆ.​

ಸಂಸ್ಕೃತಿಯ ಪ್ರತಿಬಿಂಬ:

ನಮ್ಮ ಭಾರತದ ನಾಗಾಲ್ಯಾಂಡ್‌ನಂತಹ ರಾಜ್ಯಗಳಲ್ಲಿ ಈ ಪಕ್ಷಿಯನ್ನು ಪವಿತ್ರವೆಂದು ಭಾವಿಸಲಾಗುತ್ತದೆ. ಇದರ ನೆನಪಿಗಾಗಿ ಪ್ರತಿ ವರ್ಷ 'ಹಾರ್ನಬಿಲ್ ಹಬ್ಬ'ವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.

​ಒಟ್ಟಾರೆಯಾಗಿ ಹೇಳುವುದಾದರೆ, ಹಾರ್ನಬಿಲ್ ಕೇವಲ ಒಂದು ಪಕ್ಷಿಯಲ್ಲ, ಅದು ಪ್ರಕೃತಿಯ ವೈವಿಧ್ಯತೆ ಮತ್ತು ಸೌಂದರ್ಯದ ಪ್ರತಿರೂಪ.

ಕಣ್ಣಂಚು ಒದ್ದೆಯಾಗಿಸಿದ ಕೌತುಕ

ಹಾರ್ನ್ ಬಿಲ್ ಹಬ್ಬಕ್ಕೆ ಅರ್ಥ ಮತ್ತು ಸಾರ್ಥಕತೆ ಒದಗಿಸಿದ್ದು ಪ್ರಶಾಂತ್ ಸಾಗರ ನಿರ್ದೇಶನದ ಕೌತುಕ ಎಂಬ ಕಿರುಚಿತ್ರ. ಹಾರ್ನ್ ಬಿಲ್ ಸಂರಕ್ಷೆಗಾಗಿ ಜಾಗೃತಿ ಮೂಡಿಸುವ ಈ ಕಿರುಚಿತ್ರ ಡಾಕ್ಯುಮೆಂಟರಿಯಂತಾಗದೆ ಭಾವುಕತೆ ಮೂಲಕ ಕಣ್ತೆರೆಸುವಲ್ಲಿ ಯಶಸ್ವಿಯಾಗಿದೆ.

​'ಕೌತುಕ' ಕಿರುಚಿತ್ರದ ಕ್ಲೈಮ್ಯಾಕ್ಸ್ ಪ್ರೇಕ್ಷಕರ ಕಣ್ಣನ್ನು ತೇವಗೊಳಿಸುವುದರ ಜೊತೆಗೆ ಮನುಷ್ಯತ್ವದ ಬಗ್ಗೆ ಹೊಸ ಭರವಸೆ ಮೂಡಿಸುತ್ತದೆ. ಕಾಡಿನ ನಡುವಿನ ಈ ಕಥೆ ಮನುಷ್ಯನ ಕ್ರೌರ್ಯ ಮತ್ತು ಮಗುವಿನ ಮುಗ್ಧತೆಯ ನಡುವಿನ ಸಂಘರ್ಷವನ್ನು ಬಿಂಬಿಸುತ್ತದೆ. ಈಗಾಗಲೇ ಯೂಟ್ಯೂಬ್ ನಲ್ಲೂ ಅಪಾರ ವೀಕ್ಷಣೆ ಮತ್ತು ಜನಮೆಚ್ಚುಗೆ ಪಡೆದಿರುವ ಕೌತುಕ ಚಿತ್ರವು ಈ ಬಾರಿ ಹಾರ್ನ್ ಬಿಲ್ ಹಬ್ಬದ ಪ್ರಮುಖಾಂಶ ಅಂದರೂ ತಪ್ಪಿಲ್ಲ.