• ಸ್ವಾಮಿನಾಥನ್

ಪ್ರಕೃತಿ ಮಾತೆ ತನ್ನೆಲ್ಲ ಸೌಂದರ್ಯವನ್ನು ಧಾರೆ ಎರೆದು ಸೃಷ್ಟಿಸಿದ ಜಿಲ್ಲೆಯೆಂದರೆ ಅದು ಉತ್ತರ ಕನ್ನಡ. ಇತ್ತೀಚೆಗೆ ನಾವು ಕೈಗೊಂಡ ಕರಾವಳಿ ಮತ್ತು ಮಲೆನಾಡಿನ ಸಮ್ಮಿಶ್ರ ಪ್ರವಾಸ ನಮ್ಮ ಮನಸಿನಲ್ಲಿ ಎಂದಿಗೂ ಮರೆಯದ ನೆನಪಾಗಿ ಉಳಿದಿದೆ. ಧಾರ್ಮಿಕ ಶ್ರದ್ಧೆ, ಸಾಹಸಮಯ ಜಲಕ್ರೀಡೆ, ಐತಿಹಾಸಿಕ ಕುರುಹುಗಳು ಮತ್ತು ನಿಸರ್ಗದ ಅದ್ಭುತಗಳ ಸಂಗಮವೇ ಈ ನಮ್ಮ ಯಾನ.

ಭಕ್ತಿ ಮತ್ತು ಭವ್ಯತೆ

ನಮ್ಮ ಪ್ರವಾಸದ ಮೊದಲ ನಿಲ್ದಾಣ ಜಗತ್ಪ್ರಸಿದ್ಧ ಮುರುಡೇಶ್ವರ ಬೀಚ್‌. ಅರಬ್ಬೀ ಸಮುದ್ರದ ದಂಡೆಯ ಮೇಲೆ ಕಂಗೊಳಿಸುವ ಪ್ರಪಂಚದ ಎರಡನೆಯ ಅತಿ ಎತ್ತರದ ಶಿವನ ಭವ್ಯ ಮೂರ್ತಿ ಮತ್ತು ರಾಜಗೋಪುರವನ್ನು ಕಣ್ಣುಂಬಿಕೊಳ್ಳುವುದೇ ಒಂದು ರೋಮಾಂಚನ.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಜೇನು ಕೃಷಿ ಹಾಗೂ ಪ್ರವಾಸೋದ್ಯಮದ ಹೊಸ ದಾರಿ

ಶರಾವತಿ ಹಿನ್ನೀರು

ಈ ಪ್ರವಾಸದ ಅತ್ಯಂತ ಅವಿಸ್ಮರಣೀಯ ಕ್ಷಣವೆಂದರೆ ಹೊನ್ನಾವರದ ಶರಾವತಿ ಹಿನ್ನೀರಿನಲ್ಲಿ ಮುಂಜಾವಿನ ಬೋಟಿಂಗ್. ಸೂರ್ಯೋದಯಕ್ಕೂ ಮುನ್ನ ತಣ್ಣನೆಯ ಗಾಳಿಗೆ ಮೈಯೊಡ್ಡಿ ದೋಣಿ ಹತ್ತಿದೆವು. ಮಂಜಿನ ಮುಸುಕಿನ ನಡುವೆ, ಹಕ್ಕಿಗಳ ಚಿಲಿಪಿಲಿಯ ಸದ್ದಿನ ನಡುವೆ ಸೂರ್ಯ ಮೂಡಿಬಂದಾಗ ಶರಾವತಿಯ ನೀರು ಚಿನ್ನದ ಬಣ್ಣಕ್ಕೆ ತಿರುಗಿತ್ತು. ಆ ಹೊಂಬೆಳಕಿನಲ್ಲಿ ಹಿನ್ನೀರಿನ ಪ್ರತಿಬಿಂಬವನ್ನು ನೋಡುತ್ತಾ ಸಾಗಿದ್ದು ನಮಗೆ ‘ಲೈಫ್ ಟೈಮ್ ಎಕ್ಸ್‌ಪೀರಿಯನ್ಸ್ʼ.

Untitled design (13)

ಮ್ಯಾಂಗ್ರೋವ್ ಅರಣ್ಯ

ಬೋಟ್‌ ಮುಂದಕ್ಕೆ ಸಾಗುತ್ತಿದ್ದಂತೆ ಸಮುದ್ರದ ಉಬ್ಬರವಿಳಿತ ತಡೆಯುವ ವಿಶಿಷ್ಟ ʼಮ್ಯಾಂಗ್ರೋವ್ ಅರಣ್ಯʼ. ಥೇಟ್‌ ಅಮೆಜಾನ್ ಕಾಡಿನಂಥ ಮಾಯಾಲೋಕದಲ್ಲಿ ಇರುವಂತೆ ಭಾಸವಾಯಿತು. ಇದರ ಪಕ್ಕದಲ್ಲೇ ಇರುವ ತೂಗು ಸೇತುವೆ ಮೇಲೆ ನಡೆಯುವಾಗ ಆದ ಅನುಭವ ವರ್ಣನಾತೀತ. ಈ ಸೇತುವೆ ಮೇಲೆ ನಿಂತಾಗ ನನಗೆ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿನ ಗೋಲ್ಡನ್ ಬ್ರಿಡ್ಜ್ ನೆನಪಾಯಿತು.

ಸ್ವಚ್ಛಂದ ಕಡಲತೀರ

ದೋಣಿ ಸವಾರಿ ಮುಗಿಸಿ ನಾವು ಭೇಟಿನೀಡಿದ್ದು ಕಡಲ ತೀರಗಳಿಗೆ. ಅಂತಾರಾಷ್ಟ್ರೀಯ ಮಟ್ಟದ 'ಬ್ಲೂ ಫ್ಲಾಗ್' ಮಾನ್ಯತೆ ಪಡೆದ ಹೊನ್ನಾವರದ ಇಕೋ ಬೀಚ್ ಮತ್ತು ಹೊನ್ನಾವರ ಬೀಚ್‌ಗಳ ಸ್ವಚ್ಛತೆ ನಮ್ಮನ್ನು ಬೆರಗುಗೊಳಿಸಿದವು. ಕಸದ ಕಣವೂ ಇಲ್ಲದ ಬಿಳಿ ಮರಳು, ಸಾಲು ಸಾಲು ಆಸನಗಳು ಮತ್ತು ವ್ಯವಸ್ಥಿತ ಪಾದಚಾರಿ ಮಾರ್ಗಗಳು ವಿದೇಶಿ ತೀರಗಳನ್ನು ನೆನಪಿಸುವಂತಿದ್ದವು.

ಕರಾವಳಿಯ ಪ್ರವಾಸವನ್ನು ಮತ್ತಷ್ಟು ಆನಂದದಾಯಕವಾಗಿಸಿದ್ದು ಅಲ್ಲಿನ ಸುಸಜ್ಜಿತ ಹೊಟೇಲ್‌ ಮತ್ತು ರೆಸಾರ್ಟ್‌ಗಳು. ಪ್ರವಾಸಿಗರಿಗೆ ನೆಮ್ಮದಿಯ ತಂಗುದಾಣಗಳ ಜತೆಗೆ ಉತ್ತರ ಕನ್ನಡದ ಸಾಂಪ್ರದಾಯಿಕ ಅಡುಗೆಗಳಾದ ನೀರು ದೋಸೆ, ತೊಡದೇವು ಹಲ್ವಾ ನಮ್ಮ ಜಿಹ್ವೆಯನ್ನು ತಣಿಸಿದವು.

Untitled design (14)

ಯಾಣ ಮನತಣಿಸಿದ ತಾಣ

ನಮ್ಮ ಪ್ರವಾಸದ ಮುಕುಟಪ್ರಾಯವಾಗಿದ್ದು ಮಲೆನಾಡಿನ ದಟ್ಟ ಅರಣ್ಯದ ನಡುವೆ ಇರುವ ಯಾಣ. ಅಲ್ಲಿಗೆ ತಲುಪಲು ದಟ್ಟ ಕಾಡಿನ ನಡುವೆ ಕೈಗೊಳ್ಳುವ ಟ್ರೆಕ್ಕಿಂಗ್ ನಮಗೆ ಪ್ರಕೃತಿಯೊಂದಿಗೆ ಒಂದಾಗುವ ಅವಕಾಶ ನೀಡಿತು. ನಿಗೂಢವಾಗಿ ನಿಂತಿರುವ ಭೈರವೇಶ್ವರ ಮತ್ತು ಮೋಹಿನಿ ಶಿಖರಗಳೆಂಬ ಎರಡು ದೈತ್ಯ ಕಪ್ಪು ಕಲ್ಲಿನ ಬೆಟ್ಟಗಳನ್ನು ಹತ್ತಿರದಿಂದ ನೋಡಿದಾಗ ಮೈ ರೋಮಾಂಚನಗೊಳ್ಳುತ್ತದೆ.

ಬೃಹತ್ ಭೈರವೇಶ್ವರ ಶಿಖರದ ಒಡಲಿನಲ್ಲಿರುವ ತೇವಯುತ, ಕತ್ತಲೆಯ ಗುಹೆಯೊಳಗೆ ಬರಿಗಾಲಿನಲ್ಲಿ ನಡೆಯುವಾಗ ಜಿನುಗುವ ನೀರಿನ ಹನಿಗಳು ಕಾಲ್ಬೆರಳುಗಳನ್ನು ಸೋಕುತ್ತವೆ. ಗುಹೆಯ ಮೇಲ್ಚಾವಣಿಯಿಂದ ಸೂರ್ಯನ ಕಿರಣಗಳು ಒಳಗೆ ಇಣುಕುವ ದೃಶ್ಯ ಮತ್ತು ಸುತ್ತಲಿನ ಕಡಿದಾದ ಕಣಿವೆಗಳ ಸೌಂದರ್ಯ ನಮ್ಮನ್ನು ಮೂಕವಿಸ್ಮಿತರನ್ನಾಗಿಸಿದವು. ಪುರಾಣ ಪ್ರಸಿದ್ಧ ಭಸ್ಮಾಸುರನ ಕಥೆಗೆ ಸಾಕ್ಷಿಯಾದ ಈ ಕಲ್ಲಿನ ಜಗತ್ತು ಪ್ರಕೃತಿಯ ಶ್ರೇಷ್ಠ ರಚನೆ.

ಈ ಪ್ರವಾಸ ನಮ್ಮನ್ನು ದೈನಂದಿನ ಜಂಜಾಟಗಳಿಂದ ದೂರ ಕರೆದೊಯ್ದು, ಮನಸಿಗೆ ಹೊಸ ಚೈತನ್ಯ ನೀಡಿದೆ. ಇತಿಹಾಸ, ಪುರಾಣ, ಧಾರ್ಮಿಕ ನಂಬಿಕೆಗಳು, ಪ್ರಕೃತಿ ಸೌಂದರ್ಯ, ಸಾಹಸ ಚಟುವಟಿಕೆಗಳ ಕಣಜದಂತಿರುವ ಈ ಪ್ರವಾಸ ಎಲ್ಲರಿಗೂ ಒಗ್ಗುವಂಥದ್ದು.

ದಾರಿ ಹೇಗೆ?

ಬೆಂಗಳೂರಿನಿಂದ ಹೊನ್ನಾವರಕ್ಕೆ ನೇರ ಬಸ್‌ ಮತ್ತು ರೈಲುಗಳು ಸಂಚರಿಸುತ್ತವೆ. ಹೊನ್ನಾವರ ತಲುಪಿ ಅಲ್ಲಿಂದ ಸ್ಥಳೀಯ ವಾಹನಗಳ ಮೂಲಕ ಪ್ರವಾಸ ಕೈಗೊಳ್ಳಬಹುದು.