Tuesday, November 3, 2026
Tuesday, November 3, 2026

ಕರಾವಳಿಯ ನವದೇವಿಯರು

ಕರಾವಳಿಯಲ್ಲಿ ನವರಾತ್ರಿ ಎಂದರೆ ದೇವಿಯ ಆರಾಧನೆಯ ಜತೆಗೆ ನೆಲದ ಐತಿಹ್ಯ, ಸಂಸ್ಕೃತಿ ಮತ್ತು ಭಕ್ತಿಯ ವೈಭವವೂ ಅನಾವರಣಗೊಳ್ಳುವ ಕಾಲ. ಮಾರ್ನೆಮಿಯ ಈ ಪವಿತ್ರ ದಿನಗಳಲ್ಲಿ ನವಶಕ್ತಿಯ ವಿವಿಧ ರೂಪಗಳನ್ನು ಆರಾಧಿಸುವ ಅನೇಕ ಶಕ್ತಿ ಕ್ಷೇತ್ರಗಳು ಭಕ್ತರನ್ನು ಸೆಳೆಯುತ್ತವೆ. ಈ ನವರಾತ್ರಿಯಲ್ಲಿ ಭೇಟಿ ನೀಡಬಹುದಾದ ಕರಾವಳಿಯ ಒಂಬತ್ತು ಪ್ರಸಿದ್ಧ ದೇವಿ ಕ್ಷೇತ್ರಗಳ ಪರಿಚಯ ಇಲ್ಲಿದೆ.

  • ಅಶ್ವಿನಿ ಸುನಿಲ್

ಶರತ್ಕಾಲದ ಪ್ರಥಮ ದಿನದಿಂದ ಪ್ರಾರಂಭಿಸಿ ಒಂಬತ್ತು ದಿನಗಳ ಕಾಲ ಆಚರಿಸುವ ಹಬ್ಬವನ್ನು ಶರನ್ನವರಾತ್ರಿ ಎಂದು ಕರೆಯುವುದು ವಾಡಿಕೆ. ಶರನ್ನವರಾತ್ರಿಯಲ್ಲಿ ಪ್ರಧಾನವಾಗಿ ಶಕ್ತಿ ದೇವತೆಯರನ್ನು ಆರಾಧಿಸಲಾಗುತ್ತದೆ. ಒಂಬತ್ತು ದಿನಗಳಲ್ಲಿ ದೇವಿಯ ಒಂಬತ್ತು ರೂಪಗಳನ್ನು ಆರಾಧಿಸುತ್ತಾರೆ. ಭಾರತದುದ್ದಕ್ಕೂ ನವರಾತ್ರಿಯನ್ನು ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ಅಷ್ಟೇ ಏಕೆ? ನಮ್ಮ ಕರ್ನಾಟಕದಲ್ಲಿಯೂ ನವರಾತ್ರಿಯ ಆಚರಣೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ. ಕರಾವಳಿಯಲ್ಲಿ ಮಾರ್ನೆಮಿ ಎಂದೇ ಕರೆಯಲಾಗುವ ನವರಾತ್ರಿಯ ಶುಭ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಒಂಬತ್ತು ಶಕ್ತಿ ದೇವಸ್ಥಾನಗಳಿವು.

ಇದನ್ನೂ ಓದಿ: ಶರಾವತಿಯ ಮಡಿಲಲ್ಲಿ ಸಿಗಂದೂರು ದೇವಿ

Untitled Design - 2026-11-03T145448.351

ಕಟೀಲು ದುರ್ಗಾಪರಮೇಶ್ವರಿ

ಮಂಗಳೂರಿನಿಂದ ಸುಮಾರು 25 ಕಿಮೀ. ದೂರದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಪವಿತ್ರವಾದ ನಂದಿನಿ ನದಿಯ ತೀರದಲ್ಲಿದೆ. ನವರಾತ್ರಿಯ ದಿನಗಳಲ್ಲಿ ದೇಗುಲವು ದೀಪಾಲಂಕಾರ ಕಂಗೊಳಿಸಿದರೆ, ದೇವಿಯು ಪ್ರತಿದಿನವೂ ವಿಶೇಷ ಅಲಂಕಾರದಿಂದ ಭಕ್ತಾದಿಗಳಿಗೆ ದರ್ಶನ ನೀಡುತ್ತಾಳೆ. ನವರಾತ್ರಿಯ ದಿನಗಳಲ್ಲಿ ವಿಶೇಷವಾಗಿ ರಂಗಪೂಜೆ, ವಾಹನ ಪೂಜೆ, ಅನ್ನದಾನ, ವಿಶೇಷ ಹೋಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ಲಲಿತ ಪಂಚಮಿಯಂದು ತಾಯಿಗೆ ಸಮರ್ಪಣೆಯಾದ ಸೀರೆಯನ್ನು ಮಹಿಳೆಯರಿಗೆ ಹಂಚಲಾಗುತ್ತದೆ. ವಿಜಯದಶಮಿಯಂದು ಮಕ್ಕಳಿಗೆ ವಿದ್ಯಾರಂಭ ಮಾಡಿಸಲು ಸಾವಿರಾರು ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ.

Untitled Design - 2026-11-03T145652.175

ಮಂಗಳೂರಿನ ಮಂಗಳಾ ದೇವಿ ದೇವಸ್ಥಾನ

ಮಂಗಳೂರು ನಗರಕ್ಕೆ ಹೆಸರು ಬರಲು ಕಾರಣವೇ ಇಲ್ಲಿನ ಮಂಗಳಾ ದೇವಿ ದೇವಸ್ಥಾನ ಎನ್ನುವ ನಂಬಿಕೆ ಇದೆ. ಸುಮಾರು 2000 ವರ್ಷಗಳ ಇತಿಹಾಸವಿರುವ ಈ ದೇವಾಲಯದಲ್ಲಿ ನವರಾತ್ರಿಯ 9 ದಿನಗಳಲ್ಲಿ ದೇವಿಯನ್ನು ನವ ರೂಪದಲ್ಲಿ ಅಲಂಕರಿಸಿ, ವಿಶೇಷ ಪೂಜೆ ನಡೆಸಲಾಗುತ್ತದೆ. ಪ್ರತಿದಿನವೂ ವೈಭವಯುತವಾಗಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಮೈಸೂರು ದಸರಾದಂತೆ ಮಂಗಳೂರಿನ ದಸರಾ ಕೂಡಾ ಪ್ರಸಿದ್ಧವಾಗಿದೆ. ವಿಶೇಷವಾಗಿ ಶೋಭಾ ಯಾತ್ರೆ, ಹುಲಿ ಕುಣಿತ ಮಂಗಳೂರು ದಸರಾದಲ್ಲಿ ಕಣ್ಮನ ಸೆಳೆಯುತ್ತವೆ.

ಪೊಳಲಿ ರಾಜಾರಾಜೇಶ್ವರಿ ದೇವಸ್ಥಾನ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿ ರಾಜಾರಾಜೇಶ್ವರಿ ದೇವಸ್ಥಾನವು ಮಂಗಳೂರಿನಿಂದ 20 ಕಿಮೀ. ದೂರದಲ್ಲಿದೆ. ಪಲ್ಗುಣಿ ನದಿಯ ದಡದಲ್ಲಿರುವ ಈ ದೇವಸ್ಥಾನದಲ್ಲಿ ದೇವಿಯ ವಿಗ್ರಹವು ಸಂಪೂರ್ಣವಾಗಿ ಜೇಡಿ ಮಣ್ಣಿನಿಂದ ಮಾಡಲ್ಪಟ್ಟಿರುವುದು ವಿಶೇಷ. ನವರಾತ್ರಿಯಲ್ಲಿ ನವ ಬಣ್ಣದ ಕಲ್ಪನೆಯೊಂದಿಗೆ ದೇವಿಗೆ ಒಂಬತ್ತು ದಿನವೂ ಒಂಬತ್ತು ಬಣ್ಣದ ಸೀರೆಯನ್ನು ಉಡಿಸಿ ವಿಶೇಷ ಅಲಂಕಾರ, ವಿಶೇಷ ಪೂಜೆ ನಡೆಸಲಾಗುತ್ತದೆ. ಜತೆಗೆ ಚಂಡಿಕಾ ಹೋಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡಾ ನಡೆಯುತ್ತದೆ. ನವರಾತ್ರಿಯ ಐದನೆಯ ದಿನದಂದು ದೇವಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಭಕ್ತರಿಗೆ ವಿತರಿಸಲಾಗುತ್ತದೆ.

Untitled Design - 2026-11-03T145936.647

ಕಡಿಯಾಳಿ ಮಹಿಷ ಮರ್ದಿನಿ ದೇವಸ್ಥಾನ

ಉಡುಪಿ ನಗರದ ಹೃದಯ ಭಾಗದಿಂದ ಕೇವಲ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಗಡಿಯಾಳಿಯ ಮಹಿಷಾ ಮರ್ದಿನಿ ದೇವಸ್ಥಾನವು ಸುಮಾರು ಒಂದೂವರೆ ಸಾವಿರ ವರ್ಷದ ಇತಿಹಾಸವನ್ನು ಹೊಂದಿದೆ. ಉಡುಪಿ ಕೃಷ್ಣನ ಆಸುಪಾಸಿನಲ್ಲಿ ಇರುವ ನಾಲ್ಕು ದೇವಿ ದೇವಸ್ಥಾನಗಳಲ್ಲಿ ಇದು ಕೂಡಾ ಒಂದು. ಅಂದಹಾಗೆ ಕಡಿಯಾಳಿಯ ದೇವಸ್ಥಾನಕ್ಕೂ ಉಡುಪಿಯ ಶ್ರೀ ಕೃಷ್ಣ ಮಠಕ್ಕೂ ವಿಶೇಷವಾದ ನಂಟಿದೆ. ದುಷ್ಟ ಸಂಹಾರ ಮಾಡಿ ಶಿಷ್ಟರಕ್ಷಣೆ ಮಾಡುವ ಮಹಿಷಾ ಮರ್ದಿನಿಗೆ ನವರಾತ್ರಿಯಲ್ಲಿ ಪ್ರತಿದಿನ ವಿಶೇಷ ಅಲಂಕಾರ, ವಿಶೇಷ ಪೂಜೆ , ಚಂಡಿಕಾಯಾಗ, ಅನ್ನಸಂತರ್ಪಣೆಗಳನ್ನು ನಡೆಸಲಾಗುತ್ತದೆ.

Untitled Design - 2026-11-03T145845.884

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ

ಕೊಡಚಾದ್ರಿ ಬೆಟ್ಟದ ತಪ್ಪಲಿನಲ್ಲಿ ಸೌಕರ್ಣಿಕಾ ನದಿಯ ದಡದಲ್ಲಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಆದಿ ಶಂಕರಚಾರ್ಯರಿಂದ ಪ್ರತಿಷ್ಠಾಪಿಸಲಾಗಿದೆ. ಕೊಲ್ಲೂರು ದೇವಸ್ಥಾನ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿದ್ದು ಉಡುಪಿಯಿಂದ 75 ಕಿಮೀ. ದೂರದಲ್ಲಿದೆ.

ನವರಾತ್ರಿಯ 9 ದಿನಗಳ ಕಾಲ ದೇವಿಗೆ ನವದುರ್ಗೆಯರ ಅಲಂಕಾರ ಮಾಡಲಾಗುತ್ತದೆ. ಮಹಾನವಮಿಯಂದು ದೇವಿಯನ್ನು ಪುಷ್ಪ ರಥದಲ್ಲಿ ಕುಳ್ಳಿರಿಸಿ ರಥೋತ್ಸವ ನಡೆಸಲಾಗುತ್ತದೆ. ವಿಜಯದಶಮಿಯಂದು ಪುಟ್ಟ ಮಕ್ಕಳಿಗೆ ಅಕ್ಷರಭ್ಯಾಸ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ. ಇಲ್ಲಿನ ಸರಸ್ವತಿ ಮಂಟಪದಲ್ಲಿ ಅಕ್ಷರಭ್ಯಾಸ ಕಾರ್ಯಕ್ರಮ ನಡೆಯುತ್ತದೆ.

ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನ

ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನವು ಉಡುಪಿಯಿಂದ ಸುಮಾರು 45 ಕಿಮೀ. ದೂರದಲ್ಲಿದೆ. ಶಾಂಭವಿ ನದಿಯ ದಡದಲ್ಲಿರುವ ಈ ದೇವಸ್ಥಾನದಲ್ಲಿ ಶ್ರೀ ದುರ್ಗಾಪರಮೇಶ್ವರಿಯು ಮಹಿಷಾಮರ್ದಿನಿಯ ರೂಪದಲ್ಲಿದ್ದು ತ್ರಿಶೂಲಧಾರಿಯಾಗಿ ಮಹಿಷನನ್ನು ಮರ್ದಿಸುವ ರೂಪದಲ್ಲಿ ಇದ್ದಾಳೆ. ಮುಂಡಾಸುರನನ್ನು ಶ್ರೀ ದುರ್ಗಾಪರಮೇಶ್ವರಿ ಸಂಹರಿಸಿದ ಪುಣ್ಯ ಕ್ಷೇತ್ರ ಮುಂಡ್ಕೂರು ಎಂದು ಪ್ರಸಿದ್ಧಿ ಪಡೆದಿದೆ.

Untitled Design - 2026-11-03T145420.640

ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ

ಮುಲ್ಕಿ ತಾಲೂಕಿನ ಬಪ್ಪನಾಡು ಗ್ರಾಮದಲ್ಲಿರುವ ಶಾಂಭವಿ ನದಿ ತೀರದಲ್ಲಿರುವ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನವು ಹಿಂದೂ ಮುಸ್ಲಿಂ ಸಾಮರಸ್ಯದ ಪ್ರತೀಕವಾಗಿದೆ. ಸಾಮಾನ್ಯವಾಗಿ ದೇವಿಯ ದೇವಸ್ಥಾನದಲ್ಲಿ ದೇವಿಯ ವಿಗ್ರಹವನ್ನು ಕೆತ್ತಲಾಗಿರುತ್ತದೆ. ಆದರೆ, ಇಲ್ಲಿ ದೇವಿಯು ಲಿಂಗ ಸ್ವರೂಪಿಯಾಗಿದ್ದಾಳೆ. ಅಂದರೆ ದೇವಿಯನ್ನು ಸಾಂಕೇತಿಕ ರೂಪದಲ್ಲಿ ಪೂಜಿಸಲಾಗುತ್ತಿದೆ. ಸುಮಾರು 800 ವರ್ಷಗಳ ಇತಿಹಾಸವಿರುವ ಈ ದೇವಸ್ಥಾನದಲ್ಲಿ ನವರಾತ್ರಿಯ ದಿನಗಳಲ್ಲಿ ದೇವಿಗೆ ಒಂಬತ್ತು ರೀತಿಯ ವಿಶೇಷ ಅಲಂಕಾರವನ್ನು ಮಾಡಲಾಗುತ್ತದೆ. ಭಕ್ತರು ದೇವರಿಗೆ ಹರಕೆ ಉಪಯೋಗದಲ್ಲಿ ಮಲ್ಲಿಗೆಯನ್ನು ಸಮರ್ಪಿಸುವುದು ಇಲ್ಲಿನ ವಿಶೇಷತೆ.

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ

ಉಡುಪಿ ಮಂಗಳೂರು ಹೆದ್ದಾರಿ ಬದಿಯಲ್ಲಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನವು ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿದೆ. ನವರಾತ್ರಿಯಲ್ಲಿ ದೇವಸ್ಥಾನವು ವಿಶೇಷ ವಿದ್ಯುತ್ ದೀಪ ಅಲಂಕಾರದಿಂದ ಕಂಗೊಳಿಸುತ್ತದೆ. ದೇವಿಗೆ ಕೂಡಾ ಪ್ರತಿದಿನವೂ ವಿಶೇಷವಾದ ಅಲಂಕಾರ ಮಾಡಲಾಗುತ್ತದೆ.

ಕುಂಜಾರು ದುರ್ಗಾ ಪರಮೇಶ್ವರಿ ದೇವಸ್ಥಾನ

ಉಡುಪಿಯಿಂದ ಸುಮಾರು 11 ಕಿಮೀ. ದೂರದಲ್ಲಿ ಇರುವ ಕುಂಜಾರು ಬೆಟ್ಟದಲ್ಲಿ ನೆಲೆಸಿದ್ದಾಳೆ ಶ್ರೀ ದುರ್ಗಾಪರಮೇಶ್ವರಿ ದೇವಿ. ಈ ಬೆಟ್ಟ ದೂರದಿಂದ ನೋಡಲು ಕುಂಜರ ಅಂದರೆ ಆನೆಯ ರೀತಿ ಕಾಣುವ ಕಾರಣ ಕುಂಜರುಗಿರಿ ಎನ್ನುವ ಹೆಸರು ಬಂತು ಎನ್ನುವ ಪ್ರತೀತಿ ಇದೆ. ದುಷ್ಟ ಸಂಹಾರ ಮಾಡುತ್ತಾ, ಶಿಷ್ಟರಕ್ಷಣೆ ಮಾಡುತ್ತೇನೆ ಎಂದು ಸಾರುತ್ತಿರುವ ಇಲ್ಲಿನ ದೇವಿಗೆ ಶರನ್ನವರಾತ್ರಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಕರಾವಳಿಯ ನವರಾತ್ರಿ ಆಚರಣೆಯ ಸೊಬಗು ಕೇವಲ ದೀಪಾಲಂಕಾರ, ವಿಶೇಷ ಪೂಜೆ, ಉತ್ಸವಗಳಲ್ಲಿಲ್ಲ. ಪ್ರತಿಯೊಂದು ಶಕ್ತಿ ಕ್ಷೇತ್ರವೂ ತನ್ನದೇ ಆದ ಐತಿಹ್ಯ, ಆಚರಣೆ ಮತ್ತು ನಂಬಿಕೆಯ ಮೂಲಕ ಇಲ್ಲಿನ ನೆಲದ ಸಂಸ್ಕೃತಿಯನ್ನು ಪರಿಚಯಿಸುತ್ತದೆ. ತಾಯಿಯನ್ನು ಬೇರೆ ಬೇರೆ ರೂಪದಲ್ಲಿ ಆರಾಧಿಸಿದರೂ ಭಕ್ತಿಯ ಭಾವ ಮಾತ್ರ ಒಂದೇ.

ಒಂಬತ್ತು ದಿನ, ಒಂಬತ್ತು ರೂಪ!

ನವರಾತ್ರಿಯಲ್ಲಿ ಆರಾಧಿಸುವ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ, ಶಕ್ತಿಯ ವಿಭಿನ್ನ ಆಯಾಮಗಳನ್ನು ಪ್ರತಿನಿಧಿಸುತ್ತಾರೆ. ವಿಶೇಷವೆಂದರೆ, ಒಂದೇ ಪರಾಶಕ್ತಿಯನ್ನು ಒಂಬತ್ತು ವಿಭಿನ್ನ ರೂಪಗಳಲ್ಲಿ ಆರಾಧಿಸುವ ಪರಂಪರೆ ಭಾರತದ ವಿವಿಧ ಭಾಗಗಳಲ್ಲಿ ವಿಭಿನ್ನ ಆಚರಣೆಗಳೊಂದಿಗೆ ಜೀವಂತವಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ