Monday, April 20, 2026
Monday, April 20, 2026

ಸಹಸ್ರಲಿಂಗಗಳಿಗೆ ಶಾಲ್ಮಲೆ ನದಿಯ ನಿತ್ಯಾಭಿಷೇಕ

ಚಂದ್ರಶೇಖರ ಪಾಟೀಲರ “ಹಸಿರು ಮುರಿವ ಎಲೆಗಳಲ್ಲಿ ಬಸಿರ ಬಯಕೆ ಒಸರುವವಳು; ತುಟಿ ಬಿರಿಯುವ ಹೂಗಳಲ್ಲಿ, ಬೆಂಕಿ ಹಾಡು ಉಸುರುವವಳು; ಸದಾ ತಪ್ತಕಾಮಿನಿ ನನ್ನ ಶಾಲ್ಮಲಾ” ಎಂಬ ಸಾಲುಗಳು ಶಾಲ್ಮಲಾ ನದಿಯ ಸಮೃದ್ಧಿಯ ಪ್ರತೀಕ. ಎಲ್ಲರ ಬಯಕೆಗಳನ್ನು ಈಡೇರಿಸುವ ಶಕ್ತಿ ಶಾಲ್ಮಲಾ ನದಿಗಿದೆ ಎಂಬುದು ಜನರ ಅಭಿಪ್ರಾಯ. ಆ ಅಭಿಪ್ರಾಯದಿಂದಲೇ ಇಲ್ಲಿ ಸಾವಿರಾರು ಲಿಂಗಗಳು ಹುಟ್ಟಿಕೊಂಡಿವೆ.

  • ಏಕತಾ ಭಟ್‌

ಈಶ್ವರನಿಗೆ ನದಿ, ತೊರೆ, ಕೆರೆ, ಕಲ್ಯಾಣಿಗಳಿಂದ ನೀರು ತಂದು ಅಭಿಷೇಕ ಮಾಡುವುದು ಸಾಮಾನ್ಯ. ಆದರೆ ನದಿಯೊಂದು ತಾನೇ ಈಶ್ವರಲಿಂಗಕ್ಕೆ ಅಭಿಷೇಕ ಮಾಡುವುದು ಅಪರೂಪ. ಅಂತಹ ಅಪರೂಪ ಕರ್ನಾಟಕದಲ್ಲಿ ಘಟಿಸುತ್ತದೆ. ಒಂದಲ್ಲ ಸಾವಿರಾರು ಈಶ್ವರ ಲಿಂಗಕ್ಕೆ ಅನುದಿನವೂ ಅಭಿಷೇಕ ಮಾಡುತ್ತಾಳೆ ಶಾಲ್ಮಲಾ. ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಶಾಲ್ಮಲಾ ನದಿಯಲ್ಲಿವೆ ಸಾವಿರಾರು ಲಿಂಗಗಳು. ಸಾವಿರಾರು ಲಿಂಗಗಳಿರುವ ಈ ತಾಣವೇ ಸಹಸ್ರಲಿಂಗ.

ಶಿರಸಿಯಿಂದ ಸುಮಾರು 15ಕಿ.ಮೀ. ದೂರದಲ್ಲಿರುವ ಈ ಜಾಗದಲ್ಲಿ ಬಹಳಷ್ಟು ಲಿಂಗಗಳನ್ನು ಅಲ್ಲಿ ನೋಡಬಹುದಾದ್ದರಿಂದ ಆ ಜಾಗವನ್ನೇ ಸಹಸ್ರಲಿಂಗವೆಂದು ಕರೆದರು. ಅಲ್ಲಿಂದ ಸುಮಾರು 10-12ಕಿ.ಮೀ. ವ್ಯಾಪ್ತಿಯವರೆಗೂ ಈ ಸಾವಿರಾರು ಲಿಂಗಗಳು ಹಬ್ಬಿವೆ.

ಇದನ್ನೂ ಓದಿ: ಶಾಂತಿ ಅಹಿಂಸೆಯ ನೆಲೆವೀಡು ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠ

ಸೋಂದೆ ದೊರೆಯ ಹರಕೆ:

ಶಾಲ್ಮಲಾ ನದಿಯಲ್ಲಿರುವ ಸಹಸ್ರಲಿಂಗದ ಉಗಮ ಹೇಗಾಯಿತೆಂಬುದಕ್ಕೆ ಒಬ್ಬೊಬ್ಬರದು ಒಂದೊಂದು ಅಭಿಪ್ರಾಯ. ಕೆಲವರ ಪ್ರಕಾರ ಸಾವಿರಾರು ಲಿಂಗಗಳು ಒಮ್ಮೆಲೆ ಕೆತ್ತಲ್ಪಟ್ಟಿವೆ, ಇನ್ನೂ ಕೆಲವರ ಪ್ರಕಾರ ಕಾಲಕ್ರಮೇಣ ಒಂದೊಂದಾಗಿಯೇ ಕೆತ್ತಲ್ಪಟ್ಟು ಸಾವಿರಾರು ಲಿಂಗಗಳಾಗಿವೆ.

Untitled design - 2026-04-18T155052.423

ಸೋಂದೆಯ ದೊರೆ ಇಮ್ಮಡಿ ಅರಸಪ್ಪ ನಾಯಕನಿಗೆ ಪುತ್ರ ಸಂತಾನವಿಲ್ಲದ ಕಾರಣ ಮುಂದಿನ ಉತ್ತರಾಧಿಕಾರಿ ಯಾರೆಂದು ಚಿಂತಾಕ್ರಾಂತನಾಗಿ ಸ್ವರ್ಣವಲ್ಲಿ ಮಠದ ಹಿರೇ ಚಂದ್ರಶೇಖರ ಸರಸ್ವತಿ ಸ್ವಾಮಿಗಳ ಬಳಿ ಹೋಗಿ ತನ್ನ ಸಮಸ್ಯೆಯನ್ನು ಹೇಳಿಕೊಂಡಾಗ ಅವರು ಒಂದು ಸಲಹೆಯನ್ನು ನೀಡಿದರು. ಪವಿತ್ರ ಶಾಲ್ಮಲಾ ನದಿಯ ದಂಡೆಯ ಮೇಲೆ ಪ್ರಾರ್ಥನೆ ಮಾಡಿ ಶಿವಲಿಂಗವನ್ನು ಕೆತ್ತಿಸುವ ಹರಕೆಯನ್ನು ಮಾಡಿಕೊಳ್ಳುವಂತೆ ಸೂಚಿಸಿದರು. ಹರಕೆ ಹೊತ್ತ ರಾಜನಿಗೆ ಪುತ್ರ ಸಂತಾನವಾಗುತ್ತದೆ. ಹೊತ್ತ ಹರಕೆಯಂತೆ ಶಿವಲಿಂಗವನ್ನು ಕೆತ್ತಲಾಗುತ್ತದೆ. ಮುಂದೆ ಕಾಲ ಕಾಲಕ್ಕೆ ಎದುರಾದ ಬೇರೆ ಬೇರೆ ಸಮಸ್ಯೆಗಳಿಗೆ ಹರಕೆ ಹೊತ್ತುಕೊಂಡು ದೊರೆಗಳಷ್ಟೆ ಅಲ್ಲದೇ ಸಾಮಾನ್ಯ ಜನರೂ ಲಿಂಗಗಳನ್ನು ಕೆತ್ತಿಸಲು, ಕೆತ್ತಲು ಆರಂಭಿಸಿದರು. ತತ್ಪರಿಣಾಮವಾಗಿ ಹರಕೆಯ ಪರಂಪರೆಯಿಂದಾಗಿ ಸಾವಿರಾರು ಲಿಂಗಗಳು ಈ ಪ್ರದೇಶದಲ್ಲಿ ಕೆತ್ತಲ್ಪಟ್ಟು ಸಹಸ್ರಲಿಂಗ ನಿರ್ಮಾಣವಾಯಿತು. ಹೀಗೆ ಪ್ರತಿ ಬಾರಿ ಲಿಂಗ ಕೆತ್ತಿಸಿದಾಗ ರಾಜರು ಕೆತ್ತಿಸಿದ ಶಾಸನಗಳು ಲಿಂಗದ ಬುಡದಲ್ಲಿವೆ.

ಇನ್ನೊಂದು ಕಥೆಯ ಪ್ರಕಾರ ಅರಸಪ್ಪ ನಾಯಕ ಪುತ್ರ ಸಂತಾನಕ್ಕಾಗಿ ಸ್ವರ್ಣವಲ್ಲಿ ಮಠದ ಗುರುಗಳ ಆದೇಶದ ಮೇಲೆ ಹರಕೆ ಹೊತ್ತು ಒಂದು ಲಿಂಗ ಕೆತ್ತಿಸಿದ ಬಳಿಕ ಮುಂದೆ ಆಳ್ವಿಕೆ ನಡೆಸಿದ ಸದಾಶಿವ ನಾಯಕ ಅಪಾರ ಶಿವಭಕ್ತನಾಗಿದ್ದು ಅಲ್ಲಿಯೇ ಸಾವಿರಾರು ಲಿಂಗಗಳನ್ನು ಕೆತ್ತಿಸಿದನಂತೆ. ಹೀಗೆ ಇಲ್ಲಿ ಸಾವಿರಾರು ಲಿಂಗಗಳು ನಿರ್ಮಾಣವಾದವಂತೆ.

Untitled design - 2026-04-18T155036.226

ಇಲ್ಲಿ ಕೆಲವು ಲಿಂಗಗಳ ಮುಂದೆ ನಂದಿಯನ್ನು ಕೆತ್ತಲಾಗಿದೆ. ದೊಡ್ಡ ನಂದಿಯೊಂದು ಬುಡದಲ್ಲೇ ಇದ್ದು ಪ್ರವಾಸಿಗರನ್ನು ಸೆಳೆಯುತ್ತಿದೆ. ಅಲ್ಲಲ್ಲಿ ಗಣೇಶ, ಆಂಜನೇಯ, ನಾಗ ಮತ್ತು ವನದೇವತೆಯ ವಿಗ್ರಹಗಳೂ ಇವೆ. ಮಳೆ, ಗಾಳಿ, ಕಾಲದ ಪ್ರಭಾವಕ್ಕೆ ಹಲವಾರು ಲಿಂಗಗಳು ಆಕಾರ ಕಳೆದುಕೊಂಡಿವೆ, ನೀರಿನಲ್ಲಿ ತೇಲಿ ಹೋಗಿವೆ, ನೆಲದಡಿಗೆ ಹುದುಗಿವೆ. ಆದರೂ ಸಹಸ್ರಲಿಂಗದಲ್ಲಿ ನಿಂತು ಸುತ್ತಲೂ ಕಣ್ಣು ಹಾಯಿಸಿದಷ್ಟು ದೂರಕ್ಕೂ ವಿಭಿನ್ನ ಆಕೃತಿ ಮತ್ತು ಗಾತ್ರದ ಲಿಂಗಗಳೇ ಕಾಣುತ್ತವೆ. ಬೇಸಿಗೆಯಲ್ಲಿ ನೀರಿಳಿದು ಬಹತೇಕ ಲಿಂಗಗಳು ಗೋಚರವಾದರೂ ಮಳೆಗಾಲದಲ್ಲಿ ನೀರಿನ ನಡುವೆ ನಿಂತಿರುವ ಲಿಂಗಗಳನ್ನು ನೋಡುವುದು ಒಂದು ಅದ್ಭುತ ಅನುಭವ.

ಭಕ್ತರ ಪ್ರಾರ್ಥನೆ:

ಇಲ್ಲಿಯೇ ಶಾಲ್ಮಲಾ ನದಿಗೆ ಅಡ್ಡಲಾಗಿ ತೂಗು ಸೇತುವೆಯನ್ನು ಸಹ ನಿರಮಿಸಲಾಗಿದ್ದು ಸೇತುವೆಯು ಒಮ್ಮೆಗೆ ಗರಿಷ್ಠ 25 ಜನರನ್ನು ಹೊರಬಲ್ಲದು. ಈ ತೂಗು ಸೇತುವೆಯ ಮೇಲೆ ನಿಂತು ನಿಸರ್ಗದ ಸೌಂದರ್ಯವನ್ನು ಸವಿಯುತ್ತದ್ದರೆ ಕಾಲ ಕಳೆದದ್ದೇ ತಿಳಿಯುವುದಿಲ್ಲ.

ಇಂದಿಗೂ ಇಲ್ಲಿಗೆ ಬಂದ ಭಕ್ತರು ಒಂದರಮೇಲೊಂದು ಕಲ್ಲುಗಳನ್ನು ನದಿಯ ತಟದಲ್ಲಿ ಜೋಡಿಸಿ ತಮ್ಮ ಇಷ್ಟಾರ್ಥಗಳು ಈಡೇರಲಿ ಎಂದು ಬೇಡಿಕೊಳ್ಳುತ್ತಾರೆ. ಕೆಲವರು ಬೇರೆಡೆಯಿಂದ ಶಿವ ಲಿಂಗವನ್ನು ಕೆತ್ತಿಸಿಕೊಂಡೋ, ಮಣ್ಣಿನಲ್ಲಿ ಮಾಡಿಕೊಂಡೋ ತಂದಿಟ್ಟು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಬೇಡಿದ್ದು ಸಿಗುತ್ತದೆಂಬ ನಂಬಿಕೆ ಜನರಲ್ಲಿದೆ.

ಮಾಹಿತಿ ಪೆಟ್ಟಿಗೆ:

*ಬೇಡಿಕೆಯನ್ನು ಈಡೇರಿಸುವ ಶಿವಲಿಂಗ

*ಸಾವಿರಾರು ಲಿಂಗಗಳು ಒಟ್ಟಿಗೆ ಸಿಗುವ ಜಾಗ

*ಇತಿಹಾಸ ಪ್ರಸಿದ್ಧಿ ಸ್ಥಳ

ದಾರಿ ಹೇಗೆ:

ಶಿರಸಿಯಿಂದ 15 ಕಿಮೀ ದೂರದಲ್ಲಿರುವ ಈ ಜಾಗಕ್ಕೆ ಕಾರ್‌ ಅಥವಾ ಬಾಡಿಗೆ ಗಾಡಿಯಲ್ಲಿ ಹೋಗಬಹುದು. ಯಲ್ಲಾಪುರಕ್ಕೆ ಹೋಗುವ ದಾರಿಯಲ್ಲಿ ಸಾಗಿ ಹುಲಗೋಲ್‌ ಬಳಿ ಡಿವಿಯಶನ್‌ ತೆಗೆದುಕೊಳ್ಳಬೇಕು

ಲೇಖಕರು: ಹವ್ಯಾಸಿ ಬರಹಗಾರರು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ