ಇಲ್ಲಿಂದಲೇ ಕೃಷದೇವರಾಯ ದಿಗ್ವಿಜಯ ಆರಂಭಿಸಿದ್ದ
ಕೃಷ್ಣದೇವರಾಯನ ಅಧಿಕಾರವನ್ನು ದಕ್ಷಿಣ ಕರ್ನಾಟಕದ ಅನೇಕ ಅರಸರು ಧಿಕ್ಕರಿಸಿದ್ದರು. ಆಗ ಕೃಷ್ಣದೇವರಾಯ ಅಪಾರ ಸೈನ್ಯದೊಡನೆ ಉಮ್ಮತ್ತೂರಿನ ಮೇಲೆ ಆಕ್ರಮಣ ಮಾಡಿದ. ಗಂಗರಾಜ ಸೋತು ಕ್ಷಮೆ ಯಾಚಿಸಿದ. ಮತ್ತೆ ಅದೇ ವರಸೆ ಮುಂದುವರೆಸಿದಾಗ ಕೃಷ್ಣದೇವರಾಯ ಸೆಪ್ಟೆಂಬರ್ 1512ರಲ್ಲಿ ಮತ್ತೆ ದಂಡೆತ್ತಿ ಬಂದ. ಗಂಗರಾಜ ತಪ್ಪಿಸಿಕೊಳ್ಳುವ ಭರದಲ್ಲಿ ಕಾವೇರಿ ನದಿಯಲ್ಲಿ ಬಿದ್ದು ಸತ್ತನು. ಉಮ್ಮತ್ತೂರು ಕೃಷ್ಣದೇವರಾಯನ ವಶವಾಯಿತು.
-ಡಾ. ಎಸ್. ಸುಧಾ
ಮೊನ್ನೆ ಮೊನ್ನೆಯವರೆಗೂ ನನಗೆ ಮೈಸೂರಿನ ಹತ್ತಿರ ಒಂದು ಐತಿಹಾಸಿಕ ನಿಧಿ ಇದೆ ಎನ್ನುವುದು ತಿಳಿದೇ ಇರಲಿಲ್ಲ. ಮೈಸೂರಿಗೆ 53 ಕಿಮೀ ದೂರದಲ್ಲಿರುವ ಉಮ್ಮತ್ತೂರು ಎನ್ನುವ ಗ್ರಾಮವೇ ಅದು. ಚಾಮರಾಜನಗರ ತಾಲೂಕಿಗೆ ಸೇರಿರುವ ಈ ಸ್ಥಳ ಅಲ್ಲಿಂದ ಕೇವಲ 27 ಕಿಮೀ ದೂರದಲ್ಲಿದೆ. ಹಿಂದೊಮ್ಮೆ ಇದು ಉಮ್ಮತ್ತೂರು ಸಂಸ್ಥಾನವಾಗಿ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿತ್ತು. ಕೃಷ್ಣದೇವರಾಯನು ತನ್ನ ದಿಗ್ವಿಜಯಗಳನ್ನು ಇಲ್ಲಿಂದಲೇ ಪ್ರಾರಂಭ ಮಾಡಿದನು. ಉಮ್ಮತ್ತೂರು ಸನಾತನ ಸಂಸ್ಕೃತಿಗೆ ಹೆಸರುವಾಸಿಯಾಗಿತ್ತು. ಇಲ್ಲಿ ಪುರಾತನ ದೇವಸ್ಥಾನಗಳಿವೆ. ಜೈನರ ಬಸದಿಗಳು ಇವೆ.
ಉಮ್ಮತ್ತೂರು ನಾಮ ಕಾರಣ
ಉಮ್ಮ ಎಂದರೆ ಚಿನ್ನ ಉಮ್ಮ ಹೊತ್ತ ಊರು ಎಂದರೆ 'ಚಿನ್ನವನ್ನು ಹೊತ್ತ ಊರು' ಎಂದರ್ಥ. ಈ ಸಂಸ್ಥಾನದ ಸ್ಥಾಪಕ ಹನುಮಪ್ಪ ಒಡೆಯ. ನಂತರ ಬಂದ ಗಂಗವಂಶದ ಗಂಗರಸ ಸ್ವತಂತ್ರವಾಗಿರಲು ಯೋಚಿಸಿದ. ಈ ಹೊತ್ತಿಗೆ ಉಮ್ಮತ್ತೂರು ರಾಜಕೀಯ, ವ್ಯಾಪಾರ ಮತ್ತು ಸಂಸ್ಕೃತಿಯಲ್ಲಿ ಪ್ರವರ್ಧಮಾನಕ್ಕೆ ಬಂದಿತ್ತು. ಕೇರಳ ಮತ್ತು ಕೊಯಮತ್ತೂರು ಕಡೆಗೂ ಪ್ರಭಾವ ಬೀರಿತ್ತು. ಗಂಗರಾಜ ವಿಜಯನಗರದಿಂದ ಬೇರೆಯಾಗಿರಲು ಯೋಚಿಸಿ ತನ್ನದೇ ನಾಣ್ಯಗಳನ್ನು ಟಂಕಿಸಲು ಪ್ರಾರಂಭ ಮಾಡಿದ. ಪ್ರಜೆಗಳ ಮೇಲೆ ತೆರಿಗೆಗಳನ್ನು ಹಾಕಿದ. ಕೃಷ್ಣದೇವರಾಯನ ಅಧಿಕಾರವನ್ನು ದಕ್ಷಿಣ ಕರ್ನಾಟಕದ ಅನೇಕ ಅರಸರು ಧಿಕ್ಕರಿಸಿದ್ದರು. ಆಗ ಕೃಷ್ಣದೇವರಾಯ ಅಪಾರ ಸೈನ್ಯದೊಡನೆ ಉಮ್ಮತ್ತೂರಿನ ಮೇಲೆ ಆಕ್ರಮಣ ಮಾಡಿದ. ಗಂಗರಾಜ ಸೋತು ಕ್ಷಮೆ ಯಾಚಿಸಿದ. ಮತ್ತೆ ಅದೇ ವರಸೆ ಮುಂದುವರೆಸಿದಾಗ ಕೃಷ್ಣದೇವರಾಯ ಸೆಪ್ಟೆಂಬರ್ 1512ರಲ್ಲಿ ಮತ್ತೆ ದಂಡೆತ್ತಿ ಬಂದ. ಗಂಗರಾಜ ತಪ್ಪಿಸಿಕೊಳ್ಳುವ ಭರದಲ್ಲಿ ಕಾವೇರಿ ನದಿಯಲ್ಲಿ ಬಿದ್ದು ಸತ್ತನು. ಉಮ್ಮತ್ತೂರು ಕೃಷ್ಣದೇವರಾಯನ ವಶವಾಯಿತು.

ಉಮ್ಮತ್ತೂರಿನಲ್ಲಿ ಭುಜಂಗೇಶ್ವರ ದೇವಾಲಯ, ಉರುಕಾತೇಶ್ವರಿ ದೇವಾಲಯ ಮತ್ತು ಶ್ರೀರಂಗನಾಥನ ದೇವಾಲಯಗಳು ಮುಖ್ಯವಾಗಿವೆ.
ಉರುಕಾತೇಶ್ವರಿ ದೇವಾಲಯ
ಈ ದೇವಾಲಯದಲ್ಲಿ ಪ್ರತಿ ತಿಂಗಳ ಮೊದಲ ಮಂಗಳವಾರ ಬಹಳ ವಿಶೇಷ. ಸುತ್ತಮುತ್ತಲಿನ ಗ್ರಾಮಗಳಿಂದ ಮತ್ತು ತಮಿಳುನಾಡಿನಿಂದ ಅನೇಕ ಭಕ್ತರು ಬರುತ್ತಾರೆ. ಮಡಿಲಕ್ಕಿಯನ್ನು ದೇವಿಗೆ ಅರ್ಪಿಸುತ್ತಾರೆ. ಇದಲ್ಲದೆ ಹಾಲರಿವೆ ಎನ್ನುವ ವಿಶೇಷ ದಿನವನ್ನು ವರ್ಷಕ್ಕೊಮ್ಮೆ ಇಲ್ಲಿ ಆಚರಿಸಿ, ದೇವಿಗೆ ಹಾಲನ್ನು ಸಮರ್ಪಿಸುತ್ತಾರೆ.
ಭುಜಂಗೇಶ್ವರ ದೇವಾಲಯ
ಇದು ಪುರಾತನ ದೇವಾಲಯವಾಗಿದ್ದು, ದೊಡ್ಡ ಪ್ರಾಕಾರ ಹೊಂದಿದೆ. ಗಿರಿಜಾ ಕಲ್ಯಾಣ ಬಹಳ ಸಂಭ್ರಮದಿಂದ ಇಲ್ಲಿ ನೆರವೇರುತ್ತಿತ್ತು ಎಂದು ನಮ್ಮ ಜತೆಗೆ ಬಂದಿದ್ದ ಅರ್ಚಕರು ತಿಳಿಸಿದರು.
ಶ್ರೀರಂಗನಾಥನ ದೇವಸ್ಥಾನ

ಇದು ನಮ್ಮನ್ನು ಬಹಳವಾಗಿ ಆಕರ್ಷಿಸಿತು. ಇತರ ದೇವಸ್ಥಾನಗಳಲ್ಲಿ ಇರುವಂತೆ ರಂಗನಾಥ ಇಲ್ಲಿಯೂ ಉದ್ದಕ್ಕೂ ಪವಡಿಸಿದ್ದಾನೆ. ವಿಶೇಷವೆಂದರೆ ಅವನ ಶಿರದ ಮೇಲೆ ಇರುವ ನಾಗನಿಗೆ ಏಳು ಹೆಡೆಗಳು. ಇನ್ನೂ ವಿಶೇಷವೆಂದರೆ ಎಡ ಭಾಗದ ಗುಡಿಯಲ್ಲಿರುವ ಕೃಷ್ಣ. ನೋಡಿದ ಕೂಡಲೇ ಅದು ಕೃಷ್ಣನ ವಿಗ್ರಹ ಎಂದು ತಿಳಿಯಲು ನನಗಂತೂ ಕಷ್ಟವಾಯಿತು. ಕೃಷ್ಣನ ಕೇಶ ಶೈಲಿ ಬೇರೆ ರೀತಿಯಲ್ಲಿದೆ. ಮುಖವೂ ಬೇರೆ ರೀತಿಯಲ್ಲಿದೆ. ಬಲಗೈನಲ್ಲಿ ಬೆಣ್ಣೆ ಉಂಡೆ ಇಟ್ಟುಕೊಂಡಿದ್ದಾನೆ. ಹುಲಿ ಉಗುರಿನ ಸರ ಹಾಕಿಕೊಂಡಿದ್ದಾನೆ. ಅರ್ಚಕರ ಪ್ರಕಾರ ಕೃಷ್ಣನ ಈ ವಿಗ್ರಹವನ್ನು ಒಡಿಶಾದಿಂದ ತಂದು ಸ್ಥಾಪಿಸಲಾಗಿದೆ. ಆದರೆ ಕೆಲವು ಇತಿಹಾಸಕಾರರು ಇದನ್ನು ಒಪ್ಪುವುದಿಲ್ಲ. ಒಟ್ಟಿನಲ್ಲಿ ಇಲ್ಲಿನ ಕೃಷ್ಣ ನನಗೆ ವಿಭಿನ್ನ ರೀತಿಯಲ್ಲಿ ತೋರಿದ. ಬಲಭಾಗದ ಗುಡಿಯಲ್ಲಿ ಲಕ್ಷ್ಮಿ ದೇವಿಯ ವಿಗ್ರಹವಿದೆ. ರಂಗನಾಥನ ದೇವಸ್ಥಾನವು ತ್ರಿಕೂಟಾಚಲ ಶೈಲಿಯಲ್ಲಿದೆ.
ದೇವಸ್ಥಾನಗಳ ಜತೆಗೆ ಉಮ್ಮತ್ತೂರಿನಲ್ಲಿ ಜೈನ ಬಸದಿಗಳೂ ಇವೆ. ಆದರೆ ನಾವು ಭೇಟಿ ಕೊಡಲು ಸಾಧ್ಯವಾಗಲಿಲ್ಲ. ಉಮ್ಮತ್ತೂರಿನಲ್ಲಿ ಪ್ರತಿ ವರ್ಷ ಅನೇಕ ಉತ್ಸವಗಳು ನಡೆಯುತ್ತಿತ್ತು. ಸಂಕ್ರಾಂತಿಯಲ್ಲಿ ಬಂಡಿ ಕಟ್ಟುವ ಉತ್ಸವ ಬಹಳ ವಿಶೇಷವಾಗಿತ್ತು. ಒಂಬತ್ತು ದೇವತೆಗಳನ್ನು ಬಂಡಿಗಳಲ್ಲಿ ಕೂರಿಸಿಕೊಂಡು ಹಬ್ಬದ ದಿನ ಸಂಜೆ ಮೆರವಣಿಗೆ ಮಾಡಲಾಗುತ್ತಿತ್ತು. ಸ್ಥಳೀಯ ಜಾನಪದ ಕಲೆಗಳು ನೃತ್ಯ ಪ್ರದರ್ಶನ ಮತ್ತು ತಾಳಮೇಳಗಳು ಇರುತ್ತಿದ್ದವು. ಕಡೆಯಲ್ಲಿ ಭುಜಂಗೇಶ್ವರನ ಬಂಡಿ ಇರುತ್ತಿತ್ತು. ಕಾರಣಾಂತರದಿಂದ ಈ ಉತ್ಸವ ಕೆಲವು ವರ್ಷಗಳಿಂದ ನಿಂತುಹೋಗಿದೆ. ಶಿವರಾತ್ರಿಯನ್ನು ವಿಶೇಷವಾಗಿ ಭುಜಂಗೇಶ್ವರ ದೇವಾಲಯದಲ್ಲಿ ಆಚರಿಸುತ್ತಿದ್ದರು. ಯುಗಾದಿಯ ದಿನ ಸಂಜೆ ಇಲ್ಲಿ ಪಂಚಾಂಗ ಶ್ರವಣ ಇರುತ್ತದೆ. ಭವ್ಯ ಇತಿಹಾಸವನ್ನು ನೆನಪಿಸುವ ಉಮ್ಮತ್ತೂರಿಗೆ ಭೇಟಿ ನೀಡಲು ಸಂತೋಷವಾಗುತ್ತದೆ. ನೀವು ಒಮ್ಮೆ ಭೇಟಿ ನೀಡಿ. ತಿಳಿಯಲು ಇನ್ನೂ ಅನೇಕ ವಿಷಯಗಳಿವೆ.