ಒಂದೇ ದಿನ ಹರಿ-ಹರರ ದರ್ಶನದ ಅಪೂರ್ವ ಅನುಭವ ನಮಗೆ ಸಿಗುವುದು ಗುಜರಾತಿನ ಸಮುದ್ರ ತೀರದ ಸುಂದರ ಮಾರ್ಗದಲ್ಲಿ. ಅಲ್ಲಿ ನೆಲೆಸಿರುವ ಪವಿತ್ರ ನಾಗೇಶ್ವರ ಜ್ಯೋತಿರ್ಲಿಂಗ ಎಂಬ ಪ್ರಮುಖ ಕ್ಷೇತ್ರದಲ್ಲಿ ನಮಗೆ ಈ ಹರಿ-ಹರರ ದರ್ಶನ ಸಿಗುತ್ತದೆ. ಈ ಕ್ಷೇತ್ರವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇದು ದ್ವಾರಕಾ ಮತ್ತು ಬೆಟ್ ದ್ವಾರಕಾ ನಡುವೆ ಇರುವುದರಿಂದ ಒಂದೇ ದಿನದಲ್ಲಿ ಶಿವ ಮತ್ತು ಶ್ರೀಕೃಷ್ಣರ ದರ್ಶನವನ್ನು ಮಾಡಿಕೊಳ್ಳಬಹುದು. ಆದರೆ, ನಾಗೇಶ್ವರ ಜ್ಯೋತಿರ್ಲಿಂಗ ಎಂದೇ ಹೇಳಲಾಗುವ ಇನ್ನೆರಡು ಸ್ಥಳಗಳಿವೆ. ಒಂದು ಉತ್ತರಾಖಂಡದ ಆಲ್ಮೋರಾ ಹತ್ತಿರ ಇರುವ ಜಾಗೇಶ್ವರ, ಮತ್ತೊಂದು ಮಹಾರಾಷ್ಟ್ರದ ಅವುನ್ದ್ ಊರಿನಲ್ಲಿನ ನಾಗನಾಥ ದೇವಾಲಯ. ಈ ಎಲ್ಲಾ ಪವಿತ್ರ ಕ್ಷೇತ್ರಗಳಲ್ಲಿ ನೆಲೆಸಿರುವುದು ಪರಶಿವ. ಹಾಗಾಗಿ ಯಾವುದನ್ನು ನೋಡಿದರೂ ಪರಶಿವನ ಅನುಗ್ರಹವಾಗುತ್ತದೆ. ಹಣಕಾಸು ಮತ್ತು ಸಮಯದ ಅನುಕೂಲವಿದ್ದವರು ಮೂರೂ ಕ್ಷೇತ್ರಗಳನ್ನು ಸಂದರ್ಶಿಸಬಹುದು. ಮೂರರಷ್ಟು ಪುಣ್ಯವನ್ನೂ ಪಡೆಯಬಹುದು.

ಇದನ್ನೂ ಓದಿ:ಶಿವ ಪಾರ್ವತಿಯರು ಪಗಡೆ ಆಡುವ ಸ್ಥಳ ಯಾವುದು ಗೊತ್ತೇ?

ನಾಗೇಶ್ವರನ ಜತೆಗೆ ನಾರಾಯಣನ ದರ್ಶನ

ಭಾರತದಲ್ಲಿ ದೇವಾಲಯ ಯಾತ್ರೆ ಎಂದರೆ ಕೇವಲ ಒಂದು ದೇವಸ್ಥಾನ ನೋಡಿಕೊಂಡು ಮರಳುವುದಲ್ಲ; ಸುತ್ತಮುತ್ತಲಿನ ಕ್ಷೇತ್ರಗಳನ್ನೂ ಅದರ ಜತೆಗೆ ನೋಡಿಕೊಂಡು ಬರುತ್ತಾರೆ. ಇದು ಆಧ್ಯಾತ್ಮಿಕ ಪ್ರವಾಸವಾಗಿದೆ. ವಾರಾಣಸಿಗೆ ಹೋದಾಗ ಕಾಲಭೈರವನ ದರ್ಶನ, ಕೇದಾರನಾಥಕ್ಕೆ ಹೋದಾಗ ಬದರಿನಾಥನ ದರ್ಶನ ಮಾಡುವಂತೆ, ನಾಗೇಶ್ವರ ಜ್ಯೋತಿರ್ಲಿಂಗ ದರ್ಶನಕ್ಕೆ ಹೋದವರು ದ್ವಾರಕಾಧೀಶ ಹಾಗೂ ಬೆಟ್ ದ್ವಾರಕಾ ಭೇಟಿ ನೀಡುವ ಪರಿಪಾಟ ಮೂಡಿ ಬಂದಿದೆ.

New Project (2)

ಆಧ್ಯಾತ್ಮಕ್ಕೇ ಇಲ್ಲಿ ಆದ್ಯತೆ

ನಾಗೇಶ್ವರ ದೇವಾಲಯವು ಅತಿ ಭವ್ಯ ಕಟ್ಟಡ ನಿರ್ಮಾಣಕ್ಕಿಂತಲೂ ಆಂತರಿಕ ಶಾಂತಿ ಮತ್ತು ಆಧ್ಯಾತ್ಮಿಕ ಶಕ್ತಿಗೆ ಹೆಚ್ಚು ಪ್ರಸಿದ್ಧವಾಗಿದೆ. ಈ ದೇವಾಲಯವನ್ನು ಮರಾಠ ರಾಣಿ ಅಹಲ್ಯಾಬಾಯಿ ಹೋಳ್ಕರ್ ಪುನರ್‌ನಿರ್ಮಾಣ ಮಾಡಿದ್ದರು. ಅವರು ಭಾರತದೆಲ್ಲೆಡೆ ಅನೇಕ ಪವಿತ್ರ ಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಿದ ಮಹಾನ್ ಧರ್ಮನಿಷ್ಠೆ.

ದೇವಾಲಯದ ಆವರಣಕ್ಕೆ ಹತ್ತಿರವಾದಾಗ, ಸುಮಾರು 82 ಅಡಿ ಎತ್ತರದ ಧ್ಯಾನಮಗ್ನ ಶಿವನ ಮೂರ್ತಿ ದೂರದಿಂದಲೇ ಕಣ್ಣಿಗೆ ಬೀಳುತ್ತದೆ. ಮುಕ್ತ ಆಕಾಶದಡಿ ಧ್ಯಾನಭಂಗಿಯಲ್ಲಿನ ಈ ಮೂರ್ತಿ ಭಕ್ತರಲ್ಲಿ ಶಾಂತಿ ಮತ್ತು ಭಕ್ತಿಭಾವವನ್ನು ಮೂಡಿಸುತ್ತದೆ. ನಾಗೇಶ್ವರನ ಗರ್ಭಗುಡಿಯು ಭೂಮಿಯ ಮಟ್ಟಕ್ಕಿಂತ ಸ್ವಲ್ಪ ಕೆಳಗಿದ್ದು, ಭಕ್ತರು ಕೆಲ ಹೆಜ್ಜೆಗಳು ಇಳಿದು ಶಿವಲಿಂಗದ ದರ್ಶನ ಪಡೆಯುತ್ತಾರೆ. ಇದು ವಿನಯ ಮತ್ತು ಸಮರ್ಪಣೆಯ ಸಂಕೇತವಾಗಿದೆ. ʻಓಂ ನಮಃ ಶಿವಾಯʼ ಎಂಬ ಜಪದ ನಾದ ದೇವಾಲಯದೊಳಗೆ ನಿರಂತರವಾಗಿ ಮೊಳಗುತ್ತಿರುತ್ತದೆ.

ಪುರಾಣಗಳ ಪ್ರಕಾರ

ಶಿವಪುರಾಣದ ಪ್ರಕಾರ, ಸುಪ್ರಿಯಾ ಎಂಬ ಭಕ್ತೆಯನ್ನು ದಾರುಕ ಎಂಬ ಅಸುರ ಬಂಧಿಸಿ ಕಾಡುತ್ತಿದ್ದನು. ಸಂಕಟದಲ್ಲಿದ್ದ ಸುಪ್ರಿಯಾ ಭಗವಾನ್ ಶಿವನನ್ನು ಭಕ್ತಿಯಿಂದ ಸ್ಮರಿಸಿದಳು. ಆ ಭಕ್ತಿಗೆ ಮರುಗಿದ ಶಿವನು ಪ್ರತ್ಯಕ್ಷವಾಗಿ ಅಸುರನನ್ನು ಸಂಹರಿಸಿ ಅಲ್ಲಿ ನಾಗೇಶ್ವರ ರೂಪದಲ್ಲಿ ನೆಲೆಸಿದನು ಎನ್ನಲಾಗಿದೆ. ʻನಾಗೇಶ್ವರʼ ಎಂಬ ಹೆಸರು ಸರ್ಪದ ಸಂಕೇತದೊಂದಿಗೆ ಸಂಯೋಜಿತವಾಗಿದ್ದು, ರಕ್ಷಣೆ ಮತ್ತು ಆತ್ಮಜಾಗೃತಿಯ ಪ್ರತೀಕವಾಗಿದೆ.

ಹತ್ತಿರದ ಪ್ರವಾಸಿ ತಾಣಗಳು

ದ್ವಾರಕಾಧೀಶ ದೇವಸ್ಥಾನ

ಪ್ರಸಿದ್ಧ ದ್ವಾರಕಾಧೀಶ ದೇವಸ್ಥಾನ, ಭಗವಾನ್ ವಿಷ್ಣುವಿನ ಚಾರ್ ಧಾಮ್ ಕ್ಷೇತ್ರಗಳಲ್ಲಿ ಒಂದು. ಐದು ಮಹಡಿಗಳ ಈ ದೇವಾಲಯವು 72 ಕಂಬಗಳ ಆಧಾರದಲ್ಲಿ ನಿರ್ಮಾಣವಾಗಿದೆ. ಇಲ್ಲಿ ಸಂಜೆ ಜರುಗುವ ಆರತಿ ಅತ್ಯಂತ ಮನಮೋಹಕವಾಗಿರುತ್ತದೆ.

ಬೆಟ್ ದ್ವಾರಕಾ

ಬೆಟ್ ದ್ವಾರಕಾ ಶ್ರೀಕೃಷ್ಣನ ಮೂಲ ನಿವಾಸವೆಂದು ನಂಬಲಾಗಿದೆ. ಇಲ್ಲಿಗೆ ಸಮುದ್ರದಲ್ಲಿ ದೋಣಿ ಪ್ರಯಾಣದ ಮೂಲಕ ಪ್ರಯಾಣ ಮಾಡಿಯೇ ತಲುಪಬೇಕು. ಆಧ್ಯಾತ್ಮದ ಜತೆಗೆ ಸಮುದ್ರ ವಿಹಾರದ ಕ್ಷಣಗಳನ್ನೂ ಕಟ್ಟಿಕೊಡುವ ಈ ಭೇಟಿ, ವಿಹಂಗಮ ನೋಟಗಳನ್ನು ಬಯಸುವ ಪ್ರಕೃತಿಪ್ರಿಯರಿಗೆ ಬಲು ಮುದ ನೀಡುತ್ತದೆ.

Untitled design (85)

ಶಿವರಾಜಪುರ ಬೀಚ್

ನಾಗೇಶ್ವರ ಜ್ಯೋತಿರ್ಲಿಂಗದಿಂದ ಸುಮಾರು 15 ಕಿಮೀ ದೂರದಲ್ಲಿ ಈ ಶಿವರಾಜಪುರ ಬೀಚ್ ಇದೆ. ಇದು ಸದಾ ಸ್ವಚ್ಛ ಮತ್ತು ಸುಂದರವಾಗಿರುವ ಕಡಲತೀರ. ಇಲ್ಲಿ ನೀರಿನ ಆಟಗಳು ಮತ್ತು ಸುಂದರ ಸೂರ್ಯಾಸ್ತದ ದೃಶ್ಯ ಅನುಭವಿಸಲು ಸಾಕಷ್ಟು ಜನರು ಬರುತ್ತಾರೆ.

ಗುಜರಾತಿನ ಈ ಪವಿತ್ರ ಕ್ಷೇತ್ರದಲ್ಲಿ ಶಿವನ ಧ್ಯಾನಶಕ್ತಿ ಮತ್ತು ಕೃಷ್ಣನ ದೈವಿಕ ಕೃಪೆ ಅಡಗಿದೆ. ಒಂದೇ ಯಾತ್ರೆಯಲ್ಲಿ ಇವುಗಳನ್ನು ಅನುಭವಿಸುವುದು ಭಕ್ತರಿಗೆ ಒಲಿಯುವ ಅಪೂರ್ವ ಅನುಭವ.

ದಾರಿ ಹೇಗೆ?

ಹತ್ತಿರದ ರೈಲು ನಿಲ್ದಾಣ – ದ್ವಾರಕಾ

ಹತ್ತಿರದ ವಿಮಾನ ನಿಲ್ದಾಣ – ಜಾಮ್ನಗರ ಅಥವಾ ರಾಜ್ಕೋಟ್

ಸ್ಥಳೀಯ ಸಾರಿಗೆ ವ್ಯವಸ್ಥೆ ಉತ್ತಮವಾಗಿದೆ.

ಭೇಟಿಗೆ ಉತ್ತಮ ಸಮಯ

ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಭೇಟಿ ನೀಡಲು ಅತ್ಯುತ್ತಮ ಕಾಲ. ಮಹಾಶಿವರಾತ್ರಿ ದಿನದಂದು ವಿಶೇಷ ಪೂಜೆಗಳು ನಡೆಯುತ್ತವೆ. ಆದರೆ, ಆಗ ಭಕ್ತರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ನಾಗೇಶ್ವರದಲ್ಲಿ ವಸತಿ ವ್ಯವಸ್ಥೆಗಳು ಸೀಮಿತವಾಗಿರುವುದರಿಂದ ದ್ವಾರಕಾದಲ್ಲಿ ತಂಗುವುದು ಉತ್ತಮ.