Thursday, March 26, 2026
Thursday, March 26, 2026

ಕೇಶವನ ದರ್ಶನಕ್ಕೆ ಸ್ವಾಗತ ಕೋರುವ ಮೀನುಗಳು

ರಿಷಬ್‌ ಶೆಟ್ಟಿ, ಜೂ. ಎನ್‌ಟಿಆರ್‌, ಪ್ರಶಾಂತ್‌ ನೀಲ್‌ ಭೇಟಿ ನೀಡಿದ ಗುಹೆಯಲ್ಲಿರುವ ದೇವಾಲಯದ ವಿಡಿಯೋ ವೈರಲ್‌ ಆಗಿತ್ತು. ಆ ಜಗದ ಬಗ್ಗೆ ಅನೇಕರಿಗೆ ಕುತೂಹಲ ಮೂಡಿತ್ತು. ಕಾಡು ದಾರಿ, ಬಟ್ಟ ಬಯಲು, ನೀರಿನೊಳಗೆ ಹೆಜ್ಜೆ ಇಟ್ಟು ಹೋಗಬೇಕಾದ ಗುಹೆ, ದೀಪದ ಬೆಳಕಿನಲ್ಲಿ ಕಾಣುವ ಕೇಶವನಾಥೇಶ್ವರ ವಿರಾಜಮಾನವಾಗಿರುವ ಮೂಡಗಲ್ಲು ದೇವಾಲಯ ಪುರಾಣ ಪ್ರಸಿದ್ಧವೂ ಹೌದು ಹಾಗೂ ಸುಂದರ ಪರಿಸರದ ಅನುಭವವೂ ಹೌದು.

  • ರವಿರಾಜ ಕೆಂದೂರ, ಹುಬ್ಬಳ್ಳಿ

ಪ್ರಕೃತಿಯ ವಿಸ್ಮಯಗಳನ್ನು ಯಾರಿಂದಲೂ ಊಹಿಸಲೂ ಸಾಧ್ಯವಿಲ್ಲ. ಕುಂದಾಪುರ ತಾಲೂಕಿನ ನಟ ರಿಷಬ್ ಶಟ್ಟಿ ಊರಾದ ಕೆರಾಡಿ ಗ್ರಾಮದಲ್ಲಿರುವ ಮೂಡುಗಲ್ಲು ಎಂಬ ಪ್ರದೇಶ ಕೂಡ ಇದಕ್ಕೊಂದು ಉದಾಹರಣೆ. ಕಾಡಿನ ಮಧ್ಯೆ ಡಾಂಬರು ಮಾಸಿರುವ ರಸ್ತೆ, ಜನರ ಸಂಚಾರವಿಲ್ಲದ ಮಾರ್ಗ, ಬೆರಳೆಣಿಕೆಯಷ್ಟು ಮನೆಗಳು ಇರುವ ಕಗ್ರಾಮದ ನಡುವೆಯೇ ಲಯಕರ್ತ ಕೇಶವನಾಥೇಶ್ವರ ವಿರಾಜಮಾನನಾಗಿದ್ದಾನೆ. ಇಲ್ಲಿ ದರ್ಶನ ಪಡೆಯುವುದೇ ಒಂದು ವಿಸ್ಮಯ ಮತ್ತು ಸಾಹಸ. ಗುಹೆಯೊಳಗೆ ಸುಮಾರು 50 ಅಡಿಗಳಷ್ಟು ವಿಶಾಲವಾದ ಜಾಗದಲ್ಲಿ ಶುದ್ಧವಾದ ನೀರು, ಆ ನೀರಿನಲ್ಲಿ ಬಗೆಬಗೆಯ ಮೀನುಗಳು ಹಾಗೂ ಹಾವುಗಳು. ಇದ್ಯಾವುದರ ಭಯವಿಲ್ಲದೆ ಹಲವಾರು ವರ್ಷಗಳಿಂದ ನೀರಿನಲ್ಲಿ ಸಾಗಿ ದೇವರಿಗೆ ಪೂಜೆ ಸಲ್ಲಿಸುತ್ತಿರುವ ಅರ್ಚಕರು. ಒಮ್ಮೆಲೆ ನೋಡಿದರೆ ಇದು ಭಯ ಹುಟ್ಟಿಸುವಂತಹ ಪ್ರದೇಶ. ಈ ಹಾವುಗಳು ಇದುವರೆಗೂ ಯಾರಿಗೂ ತೊಂದರೆ ಮಾಡಿಲ್ಲ ಎಂಬ ಅರ್ಚಕರ ನಂಬಿಕೆಯ ಮಾತು ಪ್ರತಿಯೊಬ್ಬರನ್ನು ಗುಹೆಯೊಳಗೆ ಹೋಗಲು ಪ್ರೇರೇಪಿಸುತ್ತದೆ. ಕತ್ತಲು ತುಂಬಿದ ಗುಹೆಯೊಳಗೆ ದೇವರ ದೀಪದ ಬೆಳಕು ಬಿಟ್ಟರೆ ಪರ್ಯಾಯ ಬೆಳಕಿನ ವ್ಯವಸ್ಥೆಯಿಲ್ಲ. ನೀರಿನಲ್ಲಿಯೇ ನಿಂತು ದೇವರ ದರ್ಶನ ಪಡೆಯುವಾಗ ದೈವಿಕ ಶಕ್ತಿಯ ಅನುಭವವಾಗುತ್ತದೆ. ತಮ್ಮ ತದೇಕಚಿತ್ತವನ್ನು ಪ್ರಶ್ನಿಸುವಂತೆ ಆಗಾಗ್ಗೆ ಕಾಲಿಗೆ ಮೀನುಗಳು ಬಂದು ಮುತ್ತಿಕ್ಕುವ ಅನುಭವ ಅದ್ಭುತ.

ಮಾಯವಾದ ಗೋವು

New Project (51)

ಇಲ್ಲಿನ ಅರ್ಚಕರು ಹೇಳುವ ಪ್ರಕಾರ, ಬಹಳ ಹಿಂದೆ ಇಲ್ಲಿನ ಭೂಮಾಲೀಕನೊಬ್ಬರ ಗದ್ದೆಗೆ ನಿಗೂಢ ಪ್ರಾಣಿ ದಾಳಿ ಮಾಡಿ ಬೆಳೆಗಳಿಗೆ ಹಾನಿ ಮಾಡುತ್ತಿತ್ತು. ಆ ಪ್ರಾಣಿಯನ್ನು ಹಿಡಿಯಬೇಕೆಂಬ ಉದ್ದೇಶದಿಂದ ಭೂಮಾಲೀಕರು ರಾತ್ರಿ ಹೊತ್ತು ತಮ್ಮ ಗದ್ದೆಯನ್ನು ಕಾಯುತ್ತಿದ್ದರು. ಆ ಸಂದರ್ಭದಲ್ಲಿ ಒಂದು ಗೋವು ಅವರ ಗದ್ದೆಯ ಕಡೆಗೆ ಬರುತ್ತಿರುವುದನ್ನು ಗಮನಿಸಿ ಅದನ್ನು ಬೆನ್ನತ್ತಿದರು. ಆ ಗೋವು ಇಲ್ಲಿರುವ ಗುಹೆಯೊಳಗೆ ಪ್ರವೇಶಿಸಿತು. ಭೂಮಾಲೀಕರು ಅದೇ ಸ್ಥಳಕ್ಕೆ ಬರುತ್ತಿದ್ದಂತೆಯೇ, ಆ ಹಸು ಇದ್ದಕ್ಕಿದ್ದಂತೆಯೇ ಮಾಯವಾಗಿದ್ದು ನೋಡುತ್ತಾರೆ.

ಕತ್ತಲಿನಿಂದ ಆವೃತ್ತವಾಗಿದ್ದ ಗುಹೆಯಿಂದ ಹೊರಬರಲು ತಿಳಿಯದೇ, ಭಗವಂತನ ಸ್ಮರಣೆ ಮಾಡಿದ ಸಂದರ್ಭದಲ್ಲಿ ಗುಹೆಯ ಹೊರಭಾಗದಿಂದ ಸಣ್ಣ ಜ್ಯೋತಿಯೊಂದು ಕಾಣಿಸಿದಾಗ ಅದನ್ನೇ ಅನುಸರಿಸಿ ಭೂಮಾಲೀಕ ಗುಹೆಯಿಂದ ಹೊರಬಂದರಂತೆ. ಇಂಥ ವಿಸ್ಮಯಕಾರಿ ಅನುಭವಿಂದ ಪುನೀತರಾದ ಆ ಭೂಮಾಲಿಕರು ಆ ಗದ್ದೆಯನ್ನು ಗುಹೆಯೊಳಗಿದ್ದ ಶ್ರೀ ಕೇಶವನಾಥನಿಗೆ ಉಂಬಳಿಕೊಟ್ಟರಂತೆ. ಈ ಆದ್ಭುತ ಗುಹೆಗೆ ಸಮಾನಾಂತರವಾಗಿ ಅಶ್ವತ್ಥಕಟ್ಟೆಯಿದ್ದು ರಾತ್ರಿ ವೇಳೆ ಅಶ್ವತ್ಥಕಟ್ಟೆಗೂ ಗುಹೆಗೆ ನೇರಾ ಬೆಳಕಿನ ರೇಖೆಗಳು ಹಾದುಹೋಗುವುದನ್ನು ಅಲ್ಲಿನ ಅರ್ಚಕರು ನೋಡಿದ್ದಾರಂತೆ.

ಪುರಾಣದ ಕಥೆ

ಹಿಂದೊಂದು ಮನ್ವಂತರದಲ್ಲಿ ಈ ಭೂಮಿಯಲ್ಲಿ ಪಶು ಪಕ್ಷಿಗಳು, ಮನುಷ್ಯರು ಜಲಚರಗಳು, ವೃಕ್ಷಗಳಲ್ಲಿ ವಂಶಾಭಿವೃದ್ಧಿಯಾಗದೆ, ಬ್ರಹ್ಮ ಸೃಷ್ಟಿಯು ಪದೇ ಪದೆ ಅಳಿದು ಹೋಗುತ್ತಿರುತ್ತದೆ. ಪ್ರಪಂಚವು ಅಲ್ಲೋಲ ಕಲ್ಲೋಲವಾಗುತ್ತದೆ. ಆಗ ದೇವತೆಗಳು, ಋಷಿಮುನಿಗಳು, ಸಿದ್ಧಪುರುಷರೆಲ್ಲರೂ ಸೇರಿ ದೇವಲೋಕದಲ್ಲಿ ಒಂದು ದೊಡ್ಡ ಸಭೆಯನ್ನು ಮಾಡುತ್ತಾರೆ. ನಾರದ ಮುನಿಗಳ ಸಲಹೆಯಂತೆ ಮಹಾವಿಷ್ಣುವಿನಲ್ಲಿ ಸಮಸ್ಯೆಗೆ ಪರಿಹಾರವನ್ನು ಸೂಚಿಸಬೇಕೆಂದು ಬೇಡಿಕೊಳ್ಳುತ್ತಾರೆ. ಆಗ ಭೂಮಿಯಲ್ಲಿ ಪುರುಷ ಶಕ್ತಿ ಕ್ಷೀಣವಾಗಿರುವುದರಿಂದ ಬ್ರಹ್ಮನ ಸೃಷ್ಟಿಯು ನಾಶವಾಗಿ ಹೋಗುತ್ತಿದೆ. ದಕ್ಷ ಯಜ್ಞದ ಸಂದರ್ಭದಲ್ಲಿ ದಾಕ್ಷಾಯಿಣಿಯನ್ನು ಕಳೆದುಕೊಂಡ ಶಿವನು ವಿರಹ ವೇದನೆಯನ್ನು ತಡೆಯಲಾರದೆ ಮಹಾ ವೈರಾಗ್ಯದಿಂದ ವಿಶ್ವಕ್ಕೆ ವಿಮುಖನಾಗಿ ತಪಸ್ಸಿಗೆ ಕುಳಿತಿದ್ದಾನೆ. ಶಿವನು ತಪಸ್ಸಿನಿಂದ ಎಚ್ಚೆತ್ತು ಪ್ರಪಂಚದಲ್ಲಿ ಆಸಕ್ತನಾದರೆ ಭೂಮಿಯಲ್ಲಿ ಪುರುಷ ಶಕ್ತಿಯು ವೃದ್ಧಿಯಾಗಿ ಬ್ರಹ್ಮನ ಸೃಷ್ಟಿ ಕಾರ್ಯವು ನಿರಂತರವಾಗಿ ನಡೆಯುವದೆಂದು ದೇವತೆಗಳಿಗೆ ಶ್ರೀಮನ್ನಾರಾಯಣನು ತಿಳಿಸಿದನು. ತಪಸ್ಸಿಗೆ ಕುಳಿತ ಶಿವನನ್ನು ಎಚ್ಚರಿಸುವುದು ಹೇಗೆಂದು ದೇವತೆಗಳು ಚಿಂತಿಸುತ್ತಿರಲು ಮನ್ಮಥನು ತನ್ನ ಪಂಚಶರಗಳನ್ನು ಶಿವನ ಮೇಲೆ ಪ್ರಯೋಗಿಸುವುದಾಗಿ ಹೇಳುತ್ತಾನೆ. ದೇವತೆಗಳೆಲ್ಲರೂ ಒಪ್ಪುವರು. ಮನ್ಮಥನ ಪಂಚ ಶರಗಳಿಂದ ಎಚ್ಚೆತ್ತ ಶಿವನು ಪರ್ವತರಾಜನ ಮಗಳು ಪಾರ್ವತಿ ದೇವಿಯ ವಿವಾಹವಾಗಿ ಕೈಲಾಸದಲ್ಲಿ ನೆಲೆಸಿದನು. ಒಂದು ದಿನ ಬೇಸರವನ್ನು ಕಳೆಯಲು ಶಿವನು ಪಾರ್ವತಿ ಸಮೇತವಾಗಿ ನಂದಿ ವಾಹನವನ್ನು ಏರಿಕೊಂಡು ಕೈಲಾಸದಿಂದ ಹೊರಟು ಆಕಾಶ ಮಾರ್ಗವಾಗಿ ಸಾಗುತ್ತಿದ್ದರು.

New Project (52)

ಶಿವನು ಭೂಮಿಯಲ್ಲಿ ನೆಲೆಯಾಗಬೇಕೆಂದು ಉದ್ದೇಶದಿಂದ ಒಂದು ಸುಂದರವಾದ ವನಪ್ರದೇಶವನ್ನು ಮನ್ಮಥನು ಸೃಷ್ಟಿಸಿ ಮರೆಯಲ್ಲಿ ಅಡಗಿಕೊಂಡು ನೋಡುತ್ತಿದ್ದನು. ಈ ಸುಂದರ ಪ್ರದೇಶವನ್ನು ಕಂಡು ಮನಸೋತು ಶಿವನು ಅಲ್ಲಿ ನಂದಿ ವಾಹನದಿಂದ ಇಳಿದು ಪಾರ್ವತಿ ಸಮೇತವಾಗಿ ವಿಹರಿಸುತ್ತಿರುತ್ತಾನೆ. ಅಲ್ಲಿ ತಪಸ್ಸಿಗೆ ಭಂಗ ಮಾಡಿದ ಮನ್ಮಥನು ಶಿವನ ದೃಷ್ಟಿಗೆ ಬಿದ್ದನು. ಕೋಪಗೊಂಡ ಶಿವನು ಉಗ್ರನಾಗಿ ತನ್ನ ಮೂರನೇ ಕಣ್ಣನ್ನು ತೆರೆದಾಗ ಮನ್ಮಥನು ಸುಟ್ಟು ಭಸ್ಮವಾದನು. ಪಾರ್ವತಿ ದೇವಿಯು ಶಿವನನ್ನು ಸಮಾಧಾನ ಪಡಿಸಿದಳು. ತದನಂತರ ಶಿವನು ಹತ್ತಿರದಲ್ಲೇ ಇದ್ದ ಪ್ರಶಾಂತವಾದ ಗುಹೆಯನ್ನು ಪ್ರವೇಶಿಸಿ ಧ್ಯಾನಕ್ಕೆ ಕುಳಿತನು. ಕೂಡಲೇ ಅಲ್ಲಿ ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ ನದಿಗಳು ಉದ್ಭವವಾದವು. ಭೂಮಿಯಲ್ಲಿ ಪುರುಷ ಶಕ್ತಿ ವೃದ್ಧಿಯಾಗಿ ಬ್ರಹ್ಮನ ಸೃಷ್ಟಿಯು ನಿರಂತರವಾಗಿ ನಡೆಯಿತು ಎನ್ನುವುದು ಪ್ರತೀತಿ.

ಇಂದ್ರಾದಿ ದೇವತೆಗಳು, ಋಷಿಮುನಿಗಳು ಸರ್ವೇಶ್ವರನ ದರ್ಶನಕ್ಕೆ ಭೂಲೋಕಕ್ಕೆ ಬರಬೇಕಾದ ಸ್ಥಿತಿಯು ನಿರ್ಮಾಣವಾಯಿತು. ಶಿವ ಪಾರ್ವತಿ ಇಲ್ಲದೆ ಕೈಲಾಸವು ಕಳಹೀನವಾಯಿತು. ಇಂದ್ರಾದಿ ದೇವತೆಗಳೆಲ್ಲರೂ ಒಟ್ಟಾಗಿ ಬಂದು ಶಿವನನ್ನು ಬೇಡಿಕೊಂಡರು. ಅವರ ಕಷ್ಟವನ್ನು ಅರಿತ ಶಿವನು, ʼನಾನು ಇನ್ನು ಮುಂದೆ ಭೂಲೋಕದಲ್ಲಿಯೂ ಕೈಲಾಸದಲ್ಲಿಯೂ ಇರುವನೆಂದುʼ ದೇವತೆಗಳಿಗೆ ಸಮಾಧಾನಪಡಿಸಿ ಕಳುಹಿಸಿದನು. ಯುಗಗಳು ಕಳೆದು ಮುಂದೆ ಕಲಿಯುಗವು ಹತ್ತಿರವಾದಾಗ ದೇವತೆಗಳಿಗೆ ಮತ್ತೆ ಚಿಂತೆ ಶುರುವಾಗುತ್ತದೆ. ಕಲಿಯುಗದಲ್ಲಿ ಮನುಷ್ಯರು ಎಷ್ಟೇ ಪುಣ್ಯಾತ್ಮರಾದರು ಸಹ ಅವರಲ್ಲಿ ಪಾಪಶೇಷವಿರುತ್ತದೆ. ಅವರೇನಾದರೂ ಈ ಗುಹೆಯಲ್ಲಿರುವ ಮೂಲ ಲಿಂಗವನ್ನು ಮುಟ್ಟಿ ಪೂಜೆ ಮಾಡಿ ಅಪವಿತ್ರವಾದರೆ ಬ್ರಹ್ಮಸೃಷ್ಟಿಯೇ ನಿಂತು ಹೋಗಬಹುದು ಅಥವಾ ಪ್ರಳಯವಾಗಬಹುದು. ಅದಕ್ಕಾಗಿ ಮೂಲಲಿಂಗವನ್ನು ಕಲ್ಲಿಂದ ಮರೆಮಾಡಿ ದೇವತೆಗಳು, ಋಷಿಮುನಿಗಳು ಮಾತ್ರ ಪೂಜೆ ಮಾಡುವ ಹಾಗೆ ಅದೃಶ್ಯವಾಗಿಸಿ ಗುಹೆಯೊಳಗೆ ಇನ್ನೊಂದು ಶಿವಲಿಂಗವನ್ನು ದೇವತೆಗಳು ಸ್ಥಾಪಿಸಿದರು. ಮೂಲ ಲಿಂಗವನ್ನು ಪೂಜಿಸಿದ ಫಲವೇ ಈ ಲಿಂಗವನ್ನು ಮುಟ್ಟಿ ಪೂಜಿಸಿದಾಗ ಸಿಗಲಿ ಎಂದು ಆಶೀರ್ವದಿಸಿದರು. ಮೂಲಲಿಂಗಕ್ಕೆ ಅಭಿಷೇಕವಾದ ಸಪ್ತ ನದಿಗಳ ತೀರ್ಥವೇ ದೇವತೆಗಳು ಸ್ಥಾಪಿಸಿದ ಶಿವಲಿಂಗಕ್ಕೆ ಅಭಿಷೇಕವಾಗುತ್ತದೆ. ಸೂರ್ಯಾಸ್ತಮಾನದ ಕಿರಣವು ಗುಹೆಯನ್ನು ಪ್ರವೇಶಿಸುತ್ತದೆ. ಇದು ಸೂರ್ಯನು ಶಿವನಿಗೆ ಆರತಿ ಬೆಳಗುವಂತೆ ಪ್ರಕೃತಿಯೇ ನಿರ್ಮಾಣ ಮಾಡಿಕೊಂಡಂತಿದೆ. ಗುಹೆಯಲ್ಲಿರುವ ಜಲವು ಸಪ್ತನದಿಗಳ ಪವಿತ್ರವಾದ ತೀರ್ಥವಾಗಿದೆ.

New Project (50)

ಸಹ್ಯಾದ್ರಿ ಬೆಟ್ಟದ ತುದಿಯಲ್ಲಿ ಪಶ್ಚಿಮಾಭಿಮುಖವಾಗಿ ಇರುವ ಗುಹೆಯಲ್ಲಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಶ್ರೀ ಕೇಶವನಾಥೇಶ್ವರ ದೇವರ ಸೇವೆಯನ್ನು ಮಾಡಿ, ತೀರ್ಥವನ್ನು ಸೇವಿಸುವವರು ಸಕಲ ಪಾಪಗಳಿಂದ ಮುಕ್ತರಾಗಿ ಮೋಕ್ಷವನ್ನು ಹೊಂದುತ್ತಾರೆ ಎನ್ನುವುದು ನಂಬಿಕೆ. ಒಟ್ಟಿನಲ್ಲಿ ಕೈಲಾಸಕ್ಕೆ ಸಮಾನವಾದ ಇನ್ನೊಂದು ಪುಣ್ಯಕ್ಷೇತ್ರವಾಗಿದೆ ಈ ಮೂಡಗಲ್ಲು.

ದಾರಿ ಹೇಗೆ?

ಉಡುಪಿಯಿಂದ 71 ಕಿ.ಮಿ ದೂರದಲ್ಲಿರುವ ಜಾಗವಿದು. ಬೆಂಗಳೂರಿನಿಂದ ರೈಲಿಗೆ ಹೋದರೂ ಉಡುಪಿ ಹತ್ತಿರದ ರೈಲು ನಿಲ್ದಾಣ. ಅಲ್ಲಿಂದ ಕುಂದಾಪುರ, ತಲ್ಲೂರ್‌, ನೇರಳಕಟ್ಟೆ, ಕೆರಾಡಿ ಮಾರ್ಗವಾಗಿ ಹೋಗಬೇಕು. ಮಂಗಳೂರು ಹತ್ತಿರದ ವಿಮಾನ ನಿಲ್ದಾಣ. ಅಲ್ಲಿಂದಲೂ ಬೈ ರೋಡ್‌ ಹೋಗಬೇಕು.

ಹೈಲೈಟ್ಸ್‌:

ದೇವಸ್ಥಾನದ ಇತಿಹಾಸ

ಗುಹೆಯಲ್ಲಿರುವ ಈಶ್ವರ

ನೀರಿನ ಮಧ್ಯೆ ಇರುವ ದೇವಾಲಯ

ಪುರಾಣ ಪ್ರಸಿದ್ಧ ಸ್ಥಾನ

ರಿಷಬ್‌ ಶೆಟ್ಟಿ ಊರಿನ ಸಮೀಪದ ತಾಣ

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ