ಪುದುಚೇರಿಯಲ್ಲಿ ಹಾಲ್ನೊರೆಯಂಥ ಜಲಪಾತಗಳು!
ತಮಿಳುನಾಡಿನ ಪುದುಚೇರಿ ಅಥವಾ ಪಾಂಡಿಚೇರಿಯಲ್ಲಿ ಅತ್ಯದ್ಭುತವಾದ ಜಲಪಾತಗಳಿವೆ
ತಮಿಳುನಾಡಿನ ಅದ್ಭುತ ಪಟ್ಟಣಗಳಲ್ಲಿ ಪುದುಚೇರಿ ಕೂಡ ಒಂದು. ಇದು ಭಾರತದ ಆಗ್ನೇಯ ಕರಾವಳಿಯಲ್ಲಿರುವ ಕೇಂದ್ರಾಡಳಿತ ಪ್ರದೇಶವಾಗಿದೆ. ಪುದುಚೇರಿ ಸಮೀಪದಲ್ಲಿ ಅನೇಕ ಮನಮೋಹಕ ಜಲಪಾತಗಳಿವೆ. ಅಲ್ಲಿನ ಪ್ರತಿ ಜಲಪಾತವೂ ವಿಶೇಷ. ಜಲಪಾತದ ಪ್ರಿಯರು ಮತ್ತು ಚಾರಣದಲ್ಲಿ ಆಸಕ್ತಿ ಇರುವ ಪ್ರವಾಸಿಗರು ಪುದುಚೇರಿಯ ಬಳಿ ಇರುವ ಫಾಲ್ಸ್‌ಗಳಿಗೆ ಒಮ್ಮೆ ಭೇಟಿಕೊಡಲೇಬೇಕು. ಅಂತಹ ಕೆಲವು ಫಾಲ್ಸ್‌ಗಳ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ.
ಕಿಲಿಯೂರ್ ಜಲಪಾತ
ತಮಿಳುನಾಡು ರಾಜ್ಯದ ಯೆರ್ಕಾಡ್ ಬಳಿ ಇರುವ ಕಿಲಿಯೂರ್ ಜಲಪಾತವು ಅತ್ಯದ್ಭುತವಾಗಿದೆ. ಇದು ಪಾಂಡಿಚೇರಿ ಸಮೀಪವಿರುವ ಅತಿ ಎತ್ತರದ ಜಲಪಾತವಾಗಿದೆ. ಇದು ಪಾಂಡಿಚೇರಿಯಿಂದ ಸರಿ ಸುಮಾರು 245 ಕಿಮೀ ದೂರದಲ್ಲಿದೆ. ಯೆರ್ಕಾಡ್ ಸರೋವರದ ನೀರಿನಿಂದ ರೂಪುಗೊಳ್ಳುವ ಈ ಜಲಪಾತವು 300 ಅಡಿ ಎತ್ತರದಿಂದ ಹಾಲ್ನೊರೆಯಂತೆ ಧುಮ್ಮಿಕ್ಕುತ್ತದೆ. ಈ ಜಲಪಾತವನ್ನು ವೀಕ್ಷಿಸಲು ಯಾವುದೇ ಪ್ರವೇಶ ಶುಲ್ಕವಿಲ್ಲ. ಜಲಪಾತದ ಭೇಟಿಯ ಸಮಯವು ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ . ಜಲಪಾತದ ವೀಕ್ಷಣೆಯನ್ನು ಕಣ್ತುಂಬಿಕೊಳ್ಳಲು ಜುಲೈನಿಂದ ಆಗಸ್ಟ್ ತಿಂಗಳ ನಡುವೆ ಭೇಟಿ ನೀಡುವುದು ಸೂಕ್ತ. ಪ್ರವಾಸಿಗರು ಬೋಟಿಂಗ್ ಮಾಡಬಹುದು ಮತ್ತು ಈಜಬಹುದು.

ಆಗಾಯ ಗಂಗೈ ಜಲಪಾತ
ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿರುವ ಈ ಆಗಾಯ ಗಂಗೈ ಜಲಪಾತವು ಪ್ರವಾಸಿಗರ ಮನಸೂರೆಗೊಲಿಸುತ್ತದೆ. ಈ ಜಲಪಾತವು 300 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಇದು ಪಾಂಡಿಚೇರಿಗೆ ಸಮೀಪದಲ್ಲಿರುವ ಮತ್ತೊಂದು ಜಲಪಾತವಾಗಿದ್ದು, ಸುಮಾರು 250 ಕಿ.ಮೀ ದೂರದಲ್ಲಿದೆ. ಜಲಪಾತದ ಹತ್ತಿರದಲ್ಲಿಯೇ ಅರಪಾಲೀಶ್ವರರ್ ದೇವಸ್ಥಾನವಿದೆ. ಈ ಬೆರಗುಗೊಳಿಸುವ ಜಲಪಾತವನ್ನು ನೋಡಲು 1200 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ.
ಈ ಜಲಪಾತವನ್ನು ವೀಕ್ಷಿಸಲು 10 ರೂಪಾಯಿ ಪ್ರವೇಶ ಶುಲ್ಕ ನೀಡಿ ಟಿಕೆಟ್ ಪಡೆಯಬೇಕು. ಪ್ರವೇಶ ಸಮಯವು ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ. ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜೂನ್‌ನಿಂದ ಆಗಸ್ಟ್ ತಿಂಗಳ ನಡುವೆ ಭೇಟಿ ನೀಡುವುದು ಹೆಚ್ಚು ಸೂಕ್ತ. ಪ್ರವಾಸಿಗರು ಸಾಹಸಮಯವಾದ ಚಾರಣ, ಈಜು, ಪಕ್ಷಿ ವೀಕ್ಷಣೆಯನ್ನು ಆನಂದಿಸಬಹುದು.

ತಲಕೋನ ಜಲಪಾತ
ಹೈದರಾಬಾದ್‌ನ ತಿರುಪತಿಯಲ್ಲಿರುವ ಈ ತಲಕೋನ ಜಲಪಾತವು ಪಾಂಡಿಚೇರಿ ಬಳಿಯಿರುವ ಜಲಪಾತವಾಗಿದೆ. ಇದು ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಪಾಂಡಿಚೇರಿಯಿಂದ ಸುಮಾರು 257 ಕಿಮೀ ದೂರದಲ್ಲಿದೆ. 270 ಅಡಿ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವು ಆಂಧ್ರಪ್ರದೇಶದ ಅತಿ ಎತ್ತರದ ಜಲಪಾತ ಎಂದು ಕರೆಸಿಕೊಂಡಿದೆ. ಈ ಜಲಪಾತವನ್ನು ವೀಕ್ಷಿಸಲು 3 ರೂಪಾಯಿ ನೀಡಿ ಟಿಕೆಟ್ ಪಡೆಯಬೇಕು. ಪ್ರವೇಶ ಸಮಯವು ಬೆಳಗ್ಗೆ 6 ಗಂಟೆಯಿಂದ ಸಂಜೆ 7:30 ಗಂಟೆಯವರೆಗೆ. ಸೆಪ್ಟೆಂಬರ್‌ನಿಂದ ಜನವರಿಯವರೆಗೆ ಪ್ರವಾಸಿಗರು ಫಾಲ್ಸ್‌ಗೆ ಭೇಟಿ ನೀಡುವುದು ಸೂಕ್ತ. ಟ್ರೆಕ್ಕಿಂಗ್, ಬೋಟಿಂಗ್ ಮತ್ತು ಈಜಿಗೆ ಅವಕಾಶವಿದೆ. ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಯನ್ನು ಎಂಜಾಯ್ ಮಾಡಬಹುದು.
