Monday, November 9, 2026
Monday, November 9, 2026

ಕೂರ್ಗ್‌ನವಳಾದರೂ ನೀಲಕುರಿಂಜಿ ನೋಡಲಾಗಲಿಲ್ಲ..

ತಾಯಿಯಾದ ನಂತರ ಪ್ರವಾಸ ಹೋಗುವ ವಿಧಾನವೇ ಬದಲಾಗಿಬಿಡುತ್ತದೆ. ಪ್ರವಾಸದ ಬಗ್ಗೆ ಚಿಂತಿಸುವಾಗ ಮೊದಲು ಕಣ್ಣ ಮುಂದೆ ಬರುವವನು ನನ್ನ ಮಗ. ಅವನಿಗೆ ಕಡಲ ತೀರಗಳಲ್ಲಿ ಕಾಲ ಕಳೆಯುವುದು ಬಹಳ ಇಷ್ಟವಾದ್ದರಿಂದ ಅವನಿಗಾಗಿ ಬೀಚ್‌ ಪ್ರವಾಸವನ್ನೇ ಹೆಚ್ಚಿಗೆ ಮಾಡುತ್ತೇವೆ. ಅದರಲ್ಲೂ ಮಾಲ್ಡೀವ್ಸ್ಗೆ ಹೋಗುತ್ತಲೇ ಇರುತ್ತೇವೆ. ಉಳಿದ ಕಡಲ ತೀರಗಳಂತೆ ಅಲ್ಲಿ ಆಳ ಹೆಚ್ಚಿರುವುದಿಲ್ಲ. ಬಿಳಿ ಮರಳಿನಲ್ಲಿ ಕುಳಿತು ಕಾಲ ಕಳೆಯುವುದು ಅವನಿಗಿಷ್ಟ ಎನ್ನುತ್ತಾರೆ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ.

ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಸಿನಿಮಾದ ಪ್ರಮುಖ ಭಾಗಗಳನ್ನು ಸ್ವಿಟ್ಜರ್‌ಲ್ಯಾಂಡ್‌ನ ಇಂಟರ್‌ಲೇಕನ್ ಮತ್ತು ಅದರ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಶೂಟ್ ಮಾಡಲಾಗಿದೆ. ಆ ಸಿನಿಮಾ ನೋಡಿದಾಗಿನಿಂದಲೂ ಸ್ವಿಟ್ಜರ್‌ಲ್ಯಾಂಡ್‌ ಪ್ರವಾಸ ಆಸೆ ಹುಟ್ಟಿಕೊಂಡಿತ್ತು. ಅದರಲ್ಲೂ ಸಿನಿಮಾದಲ್ಲಿ ಶಾರುಖ್ ಖಾನ್ ಪ್ರಪೋಸ್‌ ಮಾಡಿದ ಅದೇ ಜಾಗದಲ್ಲಿ, ಅದೇ ರೀತಿಯಲ್ಲಿ, ನನ್ನ ಪತಿ ನನಗೆ ರೋಸ್‌ ಕೊಟ್ಟು ಪ್ರಪೋಸ್‌ ಮಾಡಿದ್ದರು.ಆಗ ತಮಾಷೆಗಾಗಿ ರಿಕ್ರಿಯೇಟ್‌ ಮಾಡಿದ್ದ ಆ ಸನ್ನಿವೇಶ ಇಂದಿಗೂ ನನಗೆ ಖುಷಿ ಕೊಡುತ್ತದೆ ಎನ್ನುತ್ತಾರೆ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ. ಪ್ರವಾಸ ಪ್ರಿಯೆ ಶ್ವೇತಾ ಪ್ರವಾಸದ ಅನುಭವಗಳು ಓದುಗರಿಗಾಗಿ..

--

ಪ್ರವಾಸ ಸರಳವಾಗಿರಲಿ..

ಟ್ರಾವೆಲ್ ಅಂದರೆ ಜೀವನ. ಭೌತಿಕ ವಸ್ತುಗಳು ನನಗೆ ಅಷ್ಟಾಗಿ ಬಹುಮುಖ್ಯವೆನಿಸುವುದಿಲ್ಲ. ದೊಡ್ಡ ದೊಡ್ಡ ಕಾರುಗಳಲ್ಲಿ ಓಡಾಡೋದು, ಐಷಾರಾಮಿ ಜೀವನ ಶೈಲಿ ಇವೆಲ್ಲದಕ್ಕಿಂತ ಹೆಚ್ಚಿಗೆ ಸರಳವಾದ ಪ್ರವಾಸದ ಜೀವನ ನನಗೆ ಆಪ್ತವೆನಿಸುತ್ತದೆ. ಬದುಕು ಎನ್ನುವುದೇ ಒಂದು ಪಯಣ. ಆ ಪಯಣವನ್ನು ಸುಂದರವಾಗಿಸುವುದಕ್ಕೆ ನಿಮ್ಮ ಕಣ್ಣ ಮುಂದೆ ಅತ್ಯದ್ಭುತವಾದ ಪ್ರಪಂಚವಿದೆ. ಅದನ್ನು ನೋಡದಿರುವುದು ದಡ್ಡತನ.

ಇದನ್ನೂ ಓದಿ: ಸೈಕ್ಲಿಂಗ್‌ ಜರ್ನಿಗೆ ವಯಸ್ಸಿನ ಹಂಗಿಲ್ಲ

ವರ್ಷಕ್ಕೊಂದು ಫಾರಿನ್‌ ಟ್ರಿಪ್!

ಸಮಯ ಸಿಕ್ಕಾಗಲೆಲ್ಲ ಪ್ರವಾಸಕ್ಕೆ ಬ್ಯಾಗ್‌ ಪ್ಯಾಕ್‌ ಮಾಡಿಕೊಂಡುಬಿಡುತ್ತೇನೆ. ಮಗ ಇನ್ನೂ ಚಿಕ್ಕವನು. ಅವನ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಮಗನಿಗೆ ಬೇಸಗೆ ರಜೆ ಸಿಕ್ಕಾಗ ವರ್ಷಕ್ಕೊಂದು ವಿದೇಶ ಪ್ರವಾಸದ ಯೋಜನೆಯನ್ನು ಅನೇಕ ವರ್ಷಗಳಿಂದಲೇ ಜಾರಿಗೆ ತಂದಿದ್ದೇನೆ. ನಾನು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮದವಳು. ಹೆತ್ತವರು ಅಲ್ಲಿರುವುದರಿಂದ ತಿಂಗಳಿಗೆ ಒಂದೆರಡು ಬಾರಿ ಕೂರ್ಗ್‌ ಪ್ರಯಾಣ, ಅಲ್ಲಿನ ಬೆಟ್ಟಗುಡ್ಡಗಳು,ದೇವಾಲಯಗಳ ಭೇಟಿಯನ್ನು ಮಿಸ್‌ ಮಾಡುವುದಿಲ್ಲ. ಆದರೆ ಬೇಸರವೆಂದರೆ 12 ವರ್ಷಗಳಿಗೊಮ್ಮೆ ಕೋಟೆ ಬೆಟ್ಟದಲ್ಲಿ ಅರಳುವ ನೀಲಕುರಿಂಜಿ ಹೂವಿನ ಹಾಸನ್ನು ನೋಡುವ ಅವಕಾಶ ನನಗಿನ್ನೂ ಸಿಗಲಿಲ್ಲ.

Untitled design (12)

ರೀಲ್ಸ್‌ ನೋಡಿ ಮರುಳಾಗಬೇಡಿ

ಇತ್ತೀಚೆಗಷ್ಟೇ ಸ್ನೇಹಿತೆಯ ಜತೆಗೆ ರಾಜಸ್ಥಾನ ಪ್ರವಾಸ ಮಾಡಿ ಬಂದೆ. ಪ್ಯಾಕೇಜ್‌ ಟೂರ್‌ನಂತೆ ಡೆಸ್ಟಿನೇಷನ್‌ ಫಿಕ್ಸ್‌ ಮಾಡಿ ಹೋಗಿ ಬಂದಿರುವುದಲ್ಲ. ಅಲ್ಲಿ ಒಂದಷ್ಟು ದಿನಗಳ ಕಾಲ ಸ್ಥಳೀಯಳಂತೆ ಉಳಿದುಕೊಂಡು, ಅಲ್ಲಿನ ವಿಶೇಷತೆಗಳು, ಸ್ಥಳೀಯ ಆಹಾರ, ಸಂಪ್ರದಾಯಗಳ ಬಗ್ಗೆ ತಿಳಿದುಕೊಂಡೆ. ಇದರ ನಡುವೆ ರೀಲ್ಸ್‌ ನೋಡಿ ಜೈಸಲ್ಮೇರ್ನಲ್ಲಿ ಟೆಂಟ್‌ ಸ್ಟೇ ಬುಕ್‌ ಮಾಡಿಕೊಂಡಿದ್ದೆವು. ಆದರೆ ಎಕ್ಸಪೆಕ್ಟೇಷನ್ ವರ್ಸಸ್ ರಿಯಾಲಿಟಿ ಎಂಬಂತೆ ಅದು ಫೈವ್‌ ಸ್ಟಾರ್‌ ರೇಟಿಂಗ್‌ ಇದ್ದ ಟೆಂಟ್‌ ಸ್ಟೇ ಯಾದರೂ ಯಾವುದೇ ಸೌಲಭ್ಯಗಳೂ ಇಲ್ಲದೆ ನಾವು ಕಷ್ಟಪಡಬೇಕಾಯ್ತು. ನಂತರ ಬೇರೆ ಹೊಟೇಲ್‌ನಲ್ಲಿ ರೂಮ್‌ ಬುಕ್‌ ಮಾಡಿ ಅಲ್ಲಿಗೆ ಹೋಗಿದ್ದಾಯ್ತು.

ಕಣಿವೆನಾಡಿನಲ್ಲಿ..

ಬೆಸ್ಟ್‌ ಫ್ರೆಂಢ್‌ ಜತೆಗೆ ಪ್ರವಾಸ ಹೋಗುವ ಖುಷಿಯೇ ಬೇರೆ. 2024ರಲ್ಲಿ ಕಾಶ್ಮೀರಕ್ಕೆ ಅಂಥದೊಂದು ಪ್ರವಾಸ ಮಾಡಿದ್ದೆ. ಕಣಿವೆ ನಾಡು ಎಷ್ಟು ಸುಂದರವಾಗಿದೆಯೆಂದರೆ, ಸ್ವಿಟ್ಜರ್‌ಲ್ಯಾಂಡ್‌ ಸಹ ಕಾಶ್ಮೀರಮುಂದೆ ಸಪ್ಪೆಯೆನಿಸಿಬಿಟ್ಟಿತ್ತು. ಅಲ್ಲಿ ಶ್ರೀನಗರ,ಸೋನ್ಮಾರ್ಗ್‌ ಹಾಗೂ ಗುಲ್ಮಾರ್ಗ್‌ ಎಂಬ ಪ್ರದೇಶಗಳಿಗಷ್ಟೇ ಭೇಟಿ ನೀಡಲು ಸಮಯಾವಕಾಶವಿತ್ತು. ಅಲ್ಲಿ ಕುದುರೆ ಸವಾರಿ, ಪರ್ವತಾರೋಹಣ ಮಾತ್ರವಲ್ಲದೆ ಸಾಕಷ್ಟು ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಂಡ ಅನುಭವ ನನ್ನದಾಗಿತ್ತು.

ಅಮ್ಮನಾಗಿ ಪ್ರವಾಸ ಸುಲಭವಲ್ಲ..

ತಾಯಿಯಾದ ನಂತರ ಪ್ರವಾಸ ಹೋಗುವ ವಿಧಾನವೇ ಬದಲಾಗಿಬಿಡುತ್ತದೆ. ಪ್ರವಾಸದ ಬಗ್ಗೆ ಚಿಂತಿಸುವಾಗ ಮೊದಲು ಕಣ್ಣ ಮುಂದೆ ಬರುವವನು ನನ್ನ ಮಗ. ಅವನಿಗೆ ಕಡಲ ತೀರಗಳಲ್ಲಿ ಕಾಲ ಕಳೆಯುವುದು ಬಹಳ ಇಷ್ಟವಾದ್ದರಿಂದ ಅವನಿಗಾಗಿ ಬೀಚ್‌ ಪ್ರವಾಸವನ್ನೇ ಹೆಚ್ಚಿಗೆ ಮಾಡುತ್ತೇವೆ. ಅದರಲ್ಲೂ ಮಾಲ್ಡೀವ್ಸ್ಗೆ ಹೋಗುತ್ತಲೇ ಇರುತ್ತೇವೆ. ಉಳಿದ ಕಡಲ ತೀರಗಳಂತೆ ಅಲ್ಲಿ ಆಳ ಹೆಚ್ಚಿರುವುದಿಲ್ಲ. ಬಿಳಿ ಮರಳಿನಲ್ಲಿ ಕುಳಿತು ಕಾಲ ಕಳೆಯುವುದು ಅವನಿಗಿಷ್ಟ. ಇನ್ನು ಕಡಲ ತೀರಗಳ ನಾಡು ಎಂದು ಹೆಸರಾಗಿರುವ ಗೋವಾ ಕಡೆಗೂ ವರ್ಷಕ್ಕೊಮ್ಮೆ ಪ್ರವಾಸ ಹೋಗುತ್ತಿರುತ್ತೇವೆ.

ಥೈಲ್ಯಾಂಡ್‌ ನೀವು ಅಂದುಕೊಂಡಂತಿಲ್ಲ..

ಥೈಲ್ಯಾಂಡ್‌ ಪ್ರವಾಸ ಎಂದರೆ ಎಲ್ಲರೂ ನೋಡುವ ರೀತಿಯೇ ಬೇರೆ. ಆ ಕಾರಣದಿಂದ ಅನೇಕ ಬಾರಿ ಅಲ್ಲಿನ ಪ್ರವಾಸವನ್ನು ಮುಂದೂಡುತ್ತಲೇ ಬಂದೆ. ಆದರೆ ಅದೊಂದು ಸುಂದರ ನಗರ. ಫುಕೆಟ್, ಫಿಫಿ ಐಲ್ಯಾಂಡ್‌ ಸೇರಿದಂತೆ ಅನೇಕ ಪ್ರದೇಶಗಳನ್ನು ನೋಡಿ ಬಂದಿದ್ದೆ. ನಾನ್‌ ವೆಜ್‌ ಪ್ರೇಮಿಯಾದರೂ ಕೆಲವೊಂದು ದಿನಗಳಲ್ಲಿ ನಾನು ಸಸ್ಯಾಹಾರಿ. ಅಂಥ ದಿನಗಳಲ್ಲಿ ನನಗೆ ಅಲ್ಲಿ ಆಹಾರದ ಆಯ್ಕೆಗಾಗಿ ಕಷ್ಟಪಡಬೇಕಾಯ್ತು.

Untitled design (13)

ಟ್ರಾವೆಲ್‌ ಪಾರ್ಟ್ನರ್‌ ಜತೆಗಿರಬೇಕು..

ಬೆಸ್ಟ್ ಟ್ರಾವೆಲ್ ಪಾರ್ಟ್ನರ್ ಸಿಗದೆ ಹೋದರೆ, ಟ್ರಾವೆಲ್ ಲೈಫ್ ಕಂಪ್ಲೀಟ್ ಆಗುವುದಿಲ್ಲ. ಈ ವಿಚಾರದಲ್ಲಿ ನಾನು ಅದೃಷ್ಟವಂತೆ. ಯಾಕೆಂದರೆ ನನ್ನ ಟ್ರಾವೆಲ್‌ ಪಾರ್ಟ್ನರ್‌ ನನ್ನ ಪತಿ. ಅವರೂ ನನ್ನಂತೆಯೇ ಪ್ರವಾಸ ಪ್ರಿಯರು. ಮದುವೆಗೂ ಮುನ್ನ ಕೆಲಸದ ಒತ್ತಡದಿಂದ ಪ್ರವಾಸದ ಕಡೆಗೆ ಗಮನಕೊಡುವುದಕ್ಕಾಗಿರಲಿಲ್ಲ. ಆದರೆ ವಿವಾಹದ ನಂತರ ಬಿಡುವು ಮಾಡಿಕೊಂಡು ಪ್ರವಾಸ ಮಾಡುತ್ತೇವೆ. ಪ್ಲ್ಯಾನಿಂಗ್ ಮಾಡುವುದರಿಂದ ಹಿಡಿದು, ಪ್ರತಿಯೊಂದು ವಿಚಾರದಲ್ಲೂ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಮರೆಯಾದರೂ ಮನದಲ್ಲಿರುವ ಅಪರ್ಣಾ

ವೃತ್ತಿಗಾಗಿ ಅನೇಕ ಕಡೆಗಳಲ್ಲಿ ಪ್ರವಾಸ ಮಾಡಿದ್ದೇನೆ. ರಿಯಾಲಿಟಿ ಶೋಗಳ ನಿರೂಪಣೆಗಾಗಿ ಉತ್ತರ ಕರ್ನಾಟಕದ ಹಲವೆಡೆ ಸುತ್ತಾಡಿದ್ದೇನೆ. ಅಲ್ಲದೆ ನಟಿ, ನಿರೂಪಕಿ ಅಪರ್ಣಾ ಇಂದು ನಮ್ಮ ಜತೆಗಿಲ್ಲ. ಆದರೆ ಸಿಡ್ನಿ, ಮೆಲ್ಬೋರ್ನ್ ಸೇರಿದಂತೆ ಅನೇಕ ಕಡೆ ಕಾರ್ಯಕ್ರಮಗಳನ್ನು ನಡೆಸಿಕೊಡುವುದಕ್ಕಾಗಿ ನಾನು ಅವರೊಂದಿಗೆ ಸಾಕಷ್ಟು ಪ್ರವಾಸ ಮಾಡಿದ್ದೇನೆ. ಜತೆಯಾಗಿಯೇ ಪ್ರವಾಸ ಮಾಡಿರುವುದರಿಂದ ಅವರ ನೆನಪು ಪ್ರವಾಸದೊಂದಿಗೂ ಬೆಸೆದುಕೊಂಡಿದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್