ಸೀಮೋಲ್ಲಂಘನ - ಮಿತಿಗಳನ್ನು ಮೀರಿದವಳು
ಪ್ರವಾಸ ಎಂಬುದು ಗೋವಾ, ಥೈಲ್ಯಾಂಡ್, ಯುರೋಪ್ ಟ್ರಿಪ್ ನಂತವೇ ಆಗಿರಬೇಕೆಂದಿಲ್ಲ. ಅವು ತೀರ್ಥಕ್ಷೇತ್ರಗಳೂ ಆಗಿರಬಹುದು. ತನ್ನ ತವರು ಮನೆಯ ಅಂಗಳವೇ ಇರಬಹುದು. ಹೆಣ್ಣೊಂದು ತಾನಾಗೇ ಅಂಥ ಒಂದು ಅಭಿಲಾಷೆಯಿಟ್ಟಾಗ ಕುಟುಂದವರೆಲ್ಲರೂ ಮನಸ್ಸಾರೆ ಅನುಮತಿಸಿ. ಇದು ಕೇವಲ ಆಕೆಯ ಬಾಹ್ಯ ಸ್ವಾತಂತ್ರ್ಯದ ಬಗ್ಗೆ, ರಕ್ಷಣೆ ಬಗ್ಗೆ ಅಲ್ಲವೇ ಅಲ್ಲ. ಅದು ಆಕೆಯ ಮನಸ್ಸಿನ ನೆಮ್ಮದಿಯ ಕುರಿತೂ ಆಗಿರಬಹುದು. ಅವಳ ಒಳ ಮನಸ್ಸಿನ ಕೂಗಾಗಿರಬಹುದು.
- ಗಾಯತ್ರಿ ರಾಜ್
ಕಾದಂಬರಿಗಾರ್ತಿ, ಲೇಖಕರು, ಅಂಕಣಕಾರರು
"ಬಚೇಂದ್ರಿ ಪಾಲ್ - ವಿಶ್ವದ ಅತಿ ಎತ್ತರದ ಪರ್ವತವಾದ ಏವರೆಸ್ಟ್ ಶಿಖರವನ್ನು ಏರಿದ ಮೊದಲ ಭಾರತೀಯ ಮಹಿಳೆ ಎಂಬ ಗೌರವ ಪಡೆದವರಂತೆ.... ಭೇಷ್!!!! ಹೀಗಿರ್ಬೇಕಪ್ಪ!!". ಮಾವನವರು ಒಮ್ಮೆ ಮೆಚ್ಚಿದ್ದು ನೆನಪು.
"ಅನಮ್ ಹಾಶಿಮ್ ಬೈಕ್ ರೇಸಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ ಯುವತಿ. ಏನ್ ಬೈಕ್ ಓಡಿಸ್ತಾಳೆ ಗೊತ್ತಾ ಗುರು ? ಸೂಪರ್!?" ಮಗ ಒಮ್ಮೆ ಅವನ ಸ್ನೇಹಿತನೊಂದಿಗೆ ಯಾವುದೋ ರೀಲ್ಸ್ ತೋರಿಸುತ್ತಾ ಹುಬ್ಬು ಹಾರಿಸಿದ್ದ.
"ಶೀತಲ್ ಮಹಾಜನ್ ..ಅಂಟಾರ್ಟಿಕಾ ಮತ್ತು ಉತ್ತರ ಧ್ರುವದ ಮೇಲೆ ಸ್ಕೈಡೈವಿಂಗ್ ಮಾಡಿದ ಸಾಹಸಿ. ಪ್ರಪಂಚದ ಅತಿ ಕಠಿಣ ಹವಾಮಾನದಲ್ಲಿ ಹೆಜ್ಜೆ ಇಟ್ಟ ಮಹಿಳೆ. ಏನ್ ಗಟ್ಟಿಗಿತ್ತಿಯಪ್ಪಾ!!" ಮನೆಯವರ ಉದ್ಗಾರ.
ಇದನ್ನೂ ಓದಿ: ಒಂಟಿಯಾಗಿ ಅಥವಾ ಗುಂಪಿನಲ್ಲಿ ಒಟ್ಟಾರೆ ಪ್ರವಾಸಮಾಡಿ
ಹೀಗೆ ಮಹಿಳೆಯ ಸಾಧನೆಗಳ ಬಗ್ಗೆ ಮಾತನಾಡುವಾಗ, ನಾವು ಅವಳ ಗೆಲುವುಗಳನ್ನು ಮಾತ್ರ ಹೊಗಳುತ್ತೇವೆ. ದೊಡ್ಡ ದೊಡ್ಡ ಸಾಧನೆಗಳ ಕಥೆಗಳನ್ನು ಮಾತ್ರ ಕೇಳಿ ಕೊಂಡಾಡುತ್ತೇವೆ ಅಷ್ಟೇ. ಪರ್ವತ ಶಿಖರಗಳನ್ನು ಏರಿದ ಮಹಿಳೆಯರು, ಸಮುದ್ರಗಳನ್ನು ದಾಟಿದ ಸಾಹಸಿಗಳು, ಜಗತ್ತನ್ನು ಸುತ್ತಿದ ಅನ್ವೇಷಕರು... ಇಂಥವರ ಕಥೆಗಳು ನಮಗೆ ಹೆಮ್ಮೆಯನ್ನೂ ಪ್ರೇರಣೆಯನ್ನೂ ಕೊಡುತ್ತವೆ ಎಂಬುದರಲ್ಲಿ ಸಂಶಯವೇ ಇಲ್ಲ.

ಆದರೆ ಯೋಚಿಸಿ ನೋಡಿ, ಆ ಕಥೆಗಳ್ಯಾವೂ ಕೂಡ ಒಂದೇ ಒಂದು ದಿನದಲ್ಲಿ ಧುಥ್ ಅಂತ ಹುಟ್ಟಿದವುಗಳಲ್ಲ. ಅವುಗಳನ್ನು ಮಾತ್ರ ಗಮನಿಸದೇ ಹೋಗ್ತೀವಿ. ಇಂತಹ ಪ್ರತಿಯೊಂದು ಸಾಧನೆಯ ಹಿಂದೆ ಕುಟುಂಬದ ಪ್ರೋತ್ಸಾಹ, ಉತ್ತೇಜನ ಜತೆಗೆ ಅನೇಕ ನಿರಾಕರಣೆಗಳು, ಅನೇಕ ಅವಮಾನಗಳು, ಅನೇಕ ಅನುಮಾನಗಳು, “ಹೆಣ್ಣುಗಳಿಗೆ ಇದು ಸೂಕ್ತವಲ್ಲ” ಎಂಬ ಅನೇಕ ವಾಕ್ಯಗಳ ವಿರುದ್ಧದ ಹೋರಾಟವೂ ಇರುತ್ತದೆ.
ಏನೋ ಸಾಧನೆ ಮಾಡುವವರಿಗೆ ಮಾತ್ರ ಸಾಥ್ ಕೊಟ್ಟರೆ ಸಾಲದು, ಏನೂ ಸಾಧಿಸಲಾಗದ... ಸಂಪೂರ್ಣ ಸೋತುಹೋದ ಅಥವಾ ಏನೂ ಇಲ್ಲದೆ ಸುಮ್ಮನೇ ನನ್ನ ಮನಸ್ಸಿನ ನೆಮ್ಮದಿಗಾಗಿ ಎಂದು ಹೊರಗಡಿಯಿಡುವ ಹೆಣ್ಣು ಜೀವಗಳನ್ನೂ ಕೂಡ ಅಷ್ಟೇ ಆಸ್ಥೆಯಿಂದ ನೋಡಿಕೊಳ್ಳಬೇಕು ಅಂತ ಬಯೋಸೋದು ಹೂ ಮನಸ್ಸಿನ ಹಕ್ಕು.
ಯಾಕೆಂದರೆ ಮಹಿಳೆಯನ್ನ ನಮ್ಮ ಸಮಾಜದಲ್ಲಿ ನೋಡುವ ದೃಷ್ಟಿಕೋನವೇ ಬೇರೆ. ತಾಯಿಯೆಂದರೆ ಹೀಗಿರಬೇಕು, ಹೆಂಡತಿಯಾದವಳು ಹೀಗಿರಬೇಕು ಎಂದು ಅಲ್ಲೆಲ್ಲೋ ಅವಳು ಬಯಸಿದರೂ ಇಳಿಯಲಾರಾದಷ್ಟು ಮೇಲಕೆತ್ತಿ ಕೂರಿಸಿರೋ ಸಮಾಜ, ಒಂದೊಮ್ಮೆ ಅವಳಾಗೇ ಇಳಿದು ಬಂದರೂ "ಇವಳು ಬಿದ್ದವಳೇ" ಎಂದೇ ನೋಡುತ್ತದೆ.
ಇನ್ನೂ ಆಕೆಯ ಮನಸ್ಸನ್ನು ಬಹುತೇಕರು ಬಹಳ ಸರಳವಾಗಿ ನೋಡಲು ಅಭ್ಯಾಸ ಮಾಡಿಕೊಂಡಿರುತ್ತಾರೆ. ಅವಳಿಗೂ ಕೂಡ ಒಂದು ಬದಲಾವಣೆ ಬೇಕು ಅಂತಲೋ, ಕೆಲಸದ ಒತ್ತಡದಿಂದ ಒಂದು break ಬೇಕು ಅಂತಲೋ ಪ್ರವಾಸಕ್ಕೆ ಹೊರಟಳು ಅಂದುಕೊಳ್ಳಿ, ಬಹುತೇಕ ಕುಟುಂಬದಲ್ಲಿ ಅವಳ ಸುತ್ತಾ ಒಂದು ಸಂಧಾನ ಅಭಿಯಾನವೇ ಆರಂಭವಾಗಿಬಿಡುತ್ತದೆ.
“ಏ ಅದಕ್ಯಾಕೆ ಪ್ರವಾಸ ಹೋಗ್ತೀಯಾ? ಇಲ್ಲೇ ಸುತ್ತಾಡಿ ಬಾ” ಅಂತಲೋ,
“ಸ್ವಲ್ಪ ರಿಫ್ರೆಶ್ ಆಗಿ ಬಾ, ಸರಿ ಹೋಗ್ತೀಯ" ಅಂತಲೋ,
" ಗುಡಿಗೆ ಹೋಗಿ ಬಾ, ಮನಸ್ಸು ನಿರಾಳವಾಗುತ್ತೆ " ಎಂಬಂಥ ಮಾತಲ್ಲೇ ಸಮಾಧಾನಿಸುತ್ತಾ ಕಾಳಜಿಯ ಕರ್ತವ್ಯವನ್ನು ಸೀಮಿತಗೊಳಿಸುವುದನ್ನು ನಾವು ಕಾಣುತ್ತೇವೆ. ಇದು ಇಂದಿನ ಕಥೆಯಷ್ಟೇ ಅಲ್ಲ.
ಇತಿಹಾಸದಲ್ಲಿಯೂ ಕೂಡ ಮಹಿಳೆಯ ಮನಸ್ಸನ್ನು, ಅವಳ ಬೇಕು ಬೇಡಗಳನ್ನು ಸದಾ ನಿಯಂತ್ರಿಸುತ್ತಲೇ ಬಂದಿದೆ.
ಎಲ್ಲಿಗೆ ಹೋಗಬೇಕು?
ಎಷ್ಟು ಹೊತ್ತು ಹೊರಗಿರಬೇಕು?
ಯಾರ ಜೊತೆ ಇರಬೇಕು?
ಹೇಗೆ ಉಡುಬೇಕು?
ಹೇಗೆ ಕೂಡಬೇಕು?
ಎನ್ನುವಂಥ ಪ್ರಶ್ನೆಗಳು ಅವಳ ಸುತ್ತ ಗಡಿಯಾರದ ಮುಳ್ಳುಗಳಂತೆ ಸುತ್ತುತ್ತಾ ಅವಳನ್ನು ನಿಯಂತ್ರಿಸುವ ಗಡಿಗಳಾಗಿವೆ. ಅವುಗಳು ಢಾಳಾಗಿ ಗೋಚರಿಸುವುದಿಲ್ಲ. ಬದಲಿಗೆ ಅವು ”ಕಾಳಜಿ” ಎಂಬ ಹೆಸರಿನಲ್ಲಿ, “ಸಂಸ್ಕೃತಿ” ಎಂಬ ಸೋಗಿನಲ್ಲಿ, “ಸುರಕ್ಷತೆ” ಎಂಬ ಕೊಡೆಯಡಿಯಿಂದ ನುಸುಳಿ ಬರುತ್ತವೆ.
ಶಬ್ದ/ಅರ್ಥ ಏನೇ ಇದ್ದರೂ ಅಂತಿಮವಾಗಿ ಅವೂ ಕೂಡ ಅವಳ ಮೇಲೆ ಹೇರುವ ನಿಯಂತ್ರಣವೇ. ಈ ಹಿನ್ನೆಲೆಯಲ್ಲೇ ಮಹಿಳೆಯ ಪ್ರವಾಸವು ಕೂಡ ಅವಳ ಒಂದು ಪ್ರತಿರೋಧವಾಗುತ್ತದೆ., ಒಂದು ಎಕ್ಸ್ಟ್ರಾ ಕಂಫರ್ಟ್ ಲಿಸ್ಟ್ ಗೆ ಸೇರಿಕೊಳ್ಳುತ್ತದೆ.
“ಈ ವಾರಾಂತ್ಯ ನಾನು ಈ ಊರಿಗೆ ಹೋಗಿ ಬರುತ್ತೇನೆ” ಎಂದು ಹೇಳುವ ಧೈರ್ಯ.
“ನನಗೆ ನನ್ನ ಸಮಯ ಬೇಕು” ಎಂದು ಒಪ್ಪಿಕೊಳ್ಳುವ ಅವಳ ಪ್ರಾಮಾಣಿಕತೆ. "ಅವಳು ತುಂಬಾ ಅತಿ" ಎನಿಸಿಕೊಳ್ಳುವವರ ಪಟ್ಟಿಯಲ್ಲಿ ಅವಳನ್ನು ಸೇರಿಸಿಕೊಳ್ಳುತ್ತದೆ. ಅವಳಿಗಾಗಿ ಅವಳ ಬದುಕಿನ ಶೈಲಿಯ ಆಯ್ಕೆಯ ಹಕ್ಕು ಕೂಡ ಬಂಡಾಯವೆನಿಸಿಕೊಳ್ಳುತ್ತದೆ.
ಹೆಣ್ಣೊಂದು ಆರ್ಥಿಕವಾಗಿ ಸ್ವತಂತ್ರಳಾದ ಮೇಲೆ, ಸಮಾಜ ಸುಶಿಕ್ಷಿತವಾದ ಮೇಲೆ ಮಹಿಳೆಯರು ತಮ್ಮ ಬಯಕೆಯಂತೆ ಬದಕುತ್ತಿದ್ದಾರೆ ನಿಜ. ಆದರೂ ಹೆಣ್ಣಿನ ಆ ಸಾತಂತ್ರ್ಯದ ಬದುಕಿನ ಹಿಂದೆ ಆಕೆಯ ಒಂದು ಪ್ರತಿರೋಧದ ದನಿ, ಬಂಡಾಯದ ಕೂಗು ಇಲ್ಲವೇ ಬೇಡಿಕೆ ಇದ್ದೇ ಇರುತ್ತದೆ.
“ನಾನು ದಣಿದಿದ್ದೇನೆ” ಎಂದು ಹೇಳುವ ಧೈರ್ಯ.
“ನನಗೆ ಸ್ವಲ್ಪ ಏಕಾಂತ ಬೇಕು” ಎಂದು ಕೇಳುವ ದನಿ.
“ನನ್ನ ಮನಸ್ಸಿನ ಆರೋಗ್ಯವೂ ಮುಖ್ಯ” ಎಂದು ಒಪ್ಪಿಕೊಳ್ಳುವ ಹಕ್ಕುಗಳನ್ನು ಅನುಷ್ಠಾನಗೊಳಿಸುವ ಅನೇಕ ಪ್ರಕಾರಗಳ ಒಂದು ರೂಪವೇ ಪ್ರವಾಸ! ಇದು ಹೆಣ್ಣು/ಗಂಡು ಎಂದು ಬೇರೆ ಬೇರೆ ಇಲ್ಲ.
ತನಗೆ ಯಾವಾಗ ಬೇಕೋ ಆಗ ಸ್ನೇಹಿತರೊಡನೆಯೋ?/ ಒಬ್ಬನೋ ಬೈಕ್ ಸವಾರಿಯೋ.... ಟ್ರಿಪ್ಪೋ… ನಿತ್ಯದ ಒಂದು ಮೂಲೆ ಅಂಗಡಿಯ ಟೀ ಗೋ ಹೋಗುವ ಗಂಡಿನ ಆಸೆಯಂತೆ ಹೆಣ್ಣೂ ಕೂಡ ಅಷ್ಟೇ ಸಹಜವಾಗಿ ಬಯಸುವ ಹಂಬಲವಿದು.
ಇದು ಮನೆಯ ಕಡೆ ಜವಾಬ್ದಾರಿ ಇಲ್ಲದೆ ಇರೋ, ಕುಟುಂಬಕ್ಕೆ ಗೌರವ ಕೊಡದಿರುವ ಲಕ್ಷಣವಲ್ಲ. ಡೋಲಾಯಮಾನವಾಗಿರುವ ಅವಳ ಬದುಕನ್ನು ಸಮತೋಲನಗೊಳಿಸುವ ಪ್ರಯತ್ನವಾಗಿರುತ್ತದೆ ಅಷ್ಟೇ.
ಪ್ರವಾಸ ಎಂಬುದು ಗೋವಾ, ಥೈಲ್ಯಾಂಡ್, ಯುರೋಪ್ ಟ್ರಿಪ್ ನಂತವೇ ಆಗಿರಬೇಕೆಂದಿಲ್ಲ. ಅವು ತೀರ್ಥಕ್ಷೇತ್ರಗಳೂ ಆಗಿರಬಹುದು. ತನ್ನ ತವರು ಮನೆಯ ಅಂಗಳವೇ ಇರಬಹುದು. ಹೆಣ್ಣೊಂದು ತಾನಾಗೇ ಅಂಥ ಒಂದು ಅಭಿಲಾಷೆಯಿಟ್ಟಾಗ ಕುಟುಂದವರೆಲ್ಲರೂ ಮನಸ್ಸಾರೆ ಅನುಮತಿಸಿ.
ಇದು ಕೇವಲ ಆಕೆಯ ಬಾಹ್ಯ ಸ್ವಾತಂತ್ರ್ಯದ ಬಗ್ಗೆ, ರಕ್ಷಣೆ ಬಗ್ಗೆ ಅಲ್ಲವೇ ಅಲ್ಲ. ಅದು ಆಕೆಯ ಮನಸ್ಸಿನ ನೆಮ್ಮದಿಯ ಕುರಿತೂ ಆಗಿರಬಹುದು. ಅವಳ ಒಳ ಮನಸ್ಸಿನ ಕೂಗಾಗಿರಬಹುದು. ಯಾವುದೇ ಪ್ರವಾಸ ಹೆಣ್ಣು/ಗಂಡು ಭೇದವಿಲ್ಲದೆ ಆರ್ಥಿಕ ಸ್ವತಂತ್ರ, ತಾನಾಗೇ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ನಾಯಕತ್ವದ ಪಾತ್ರಗಳನ್ನು ಹೆಚ್ಚಿಸುವ ಪ್ರಮುಖ ಸಾಧನವಾಗಿದೆ.

ಇತ್ತೀಚಿನ ದಿನಗಳಲ್ಲಿ ಮಹಿಳೆಯ ಮನಸ್ಸು ಪುರುಷರಿಗಿಂತ ಒತ್ತಡದಡಿಯಲ್ಲಿ ಇರುತ್ತದೆ ಎಂದು ಅಧ್ಯಯನಗಳು ಧೃಡಪಡಿಸಿವೆ. ಪ್ರಕೃತಿದತ್ತ ವೈಜ್ಞಾನಿಕ ಕಾರಣಗಳ ಜತೆಗೆ ಅವಳು ಮಾಡಲೇ ಬೇಕಾದ ಕೆಲಸ, ಮನೆ, ಮಕ್ಕಳ ಜವಾಬ್ದಾರಿ, ಸಾಮಾಜಿಕ ನಿರೀಕ್ಷೆಗಳ ನಡುವೆ “ನಾನು” ಎಂಬ ಪದ ನಿಧಾನವಾಗಿ ಮಾಯವಾಗುತ್ತದೆ. ಆಗ ಅವಳನ್ನು ಅವಳು ಸಂಭಾಳಿಸಿಕೊಳ್ಳಲು, ಸೋತ ಮನಸ್ಸನ್ನು ಬದುಕಿನ ಅಳಿಗೆ ಪುನಃ ಹಚ್ಚಲು ಹವ್ಯಾಸ/ಪ್ರವಾಸ ಬೇಕಾಗಬಹುದು. ಬೇರೆ ಹವ್ಯಾಸಗಳಂತೆ ಪವಾಸ ಕೂಡ ತನ್ನನ್ನು ಮರಳಿ ಕಂಡುಕೊಳ್ಳುವ ಪ್ರಕ್ರಿಯೆಯಾಗುತ್ತದೆ.
ಸಮುದ್ರದ ಅಲೆಗಳನ್ನು ನೋಡುತ್ತ ಕುಳಿತುಕೊಳ್ಳುವ ಕ್ಷಣ, ಪರ್ವತದ ಮೌನದಲ್ಲಿ ಕಳೆಯುವ ಆ ಕಾಲ, ದೇವಸ್ಥಾನದ ಶಾಂತಿಯಲ್ಲಿ ಉಸಿರೆಳೆಯುವ ಘಳಿಗೆ ಯಾವುದೋ ಒಂದು. ಬದುಕಲ್ಲಿ ಎಲ್ಲರೂ ಅನುಭವಿಸುವ, ಅನುಭವಸಲು ಅರ್ಹವಾದ ಚಿಕ್ಕ ಪುಟ್ಟ ಕ್ಷಣಗಳಿಗೆ ತಾನೂ ಸಾಕ್ಷಿಯಾಗಬೇಕೆನ್ನಿಸ ಬಹುದು. ಆಗ " ಇದು ಯಾಕೆ? ಅದು ಬೇಕೇ? " ಅನ್ನುತ್ತಾ ಅವಳನ್ನು ಕಟ್ಟಿಹಾಕಬೇಡಿ. ಆಕೆಗೆ ಅವು ಆಕೆಯ ಪುನರುತ್ಥಾನ, ಮನಸ್ಸಿನ ಪುನರ್‌ಸ್ವೀಕರಣ ಸಹಾಯ ಮಾಡಬಲ್ಲವು. ಉತ್ತಮ ಮನಸ್ಸಿನ ಸ್ತ್ರೀ ಉತ್ತಮ ಕುಟುಂಬದ ನಿರ್ಮಾಣಕ್ಕೆ ನಾಂದಿಯಾಗಬಲ್ಲಳು.
ಸಮಾಜ ಮಹಿಳೆಯ ಸಾಧನೆಯನ್ನು ಎತ್ತರದಿಂದ ಅಳೆಯುತ್ತದೆ. ಚಪ್ಪಾಳೆ ತಟ್ಟುತ್ತದೆ. ಗೌರವಿಸುತ್ತದೆ ಒಪ್ಪಿಕೊಳ್ಳೋಣ. ಹಾಗಂತ ಏನೇ ಮಾಡಿದ್ರೂ ಹೆಸರು ಮಾಡುವಂಥದ್ದೇ ಸಾಧಿಸಬೇಕು ಅಂತ ಇಲ್ಲ. ಹುಟ್ಟಿದವೆಲ್ಲರೂ ಸಾಧನೆಯೇ ಮಾಡಬೇಕು ಅಂದರೆ ಚಪ್ಪಾಳೆ ತಟ್ಟೋರು ಯಾರು? " ಸಬ್ ಬನೇಗಾ ರಾಣಿ, ತೋ ಕೌನ್ ಬರೇಗಾ ಪಾನಿ? " ಅಲ್ವಾ? ಸಾಮಾನ್ಯರೇನು ಖುಷಿ ಪಡಲೇಬಾರದು ಅಂತಲೂ ನಿಯಮವೇನಿಲ್ಲವಲ್ಲ! ಮನಸ್ಸಿನ ಸಮಾಧಾನ ಎಲ್ಲರ ಹಕ್ಕು. ಒಬ್ಬರಿಗೆ ಊಟದಲ್ಲಿ, ಒಬ್ಬೊಬ್ಬರಿಗೆ ಬಟ್ಟೆಯಲ್ಲಿ, ಕೆಲವರಿಗೆ ಏರುವ ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿ, ಇನ್ನೂ ಕೆಲವರಿಗೆ ಕೂಡಿಟ್ಟ ಹಣ ಎಂಜಾಯ್ ಮಾಡುವುದರಲ್ಲಿ, ಇನ್ನೂ ಕೆಲವರಿಗೆ ತಮ್ಮ ಸ್ವಾತಂತ್ರ್ಯದಲ್ಲಿ ಅದು ಸಿಗಬಹುದು, ಇನ್ನೂ ಕೆಲವರಿಗೆ ಪ್ರವಾಸದಲ್ಲಿ, ಅವುಗಳು ಕಟ್ಟಿಕೊಡುವ ಅನುಭವಗಳಲ್ಲಿ, ತುಂಬಿಕೊಡುವ ನೆನಪಿನಲ್ಲಿರಬಹುದು.
ಮಹಿಳೆಯರ ಮಾನಸಿಕ ನೆಮ್ಮದಿಗೆ ಪ್ರವಾಸದ ಮದ್ದು ನೀಡಿ
ಹೀಗಿರುವಾಗ ಅವಳ ಒಂದು ದಿನ ಒಂಟಿಯಾಗಿ ದೂರದೇಶಕ್ಕೆ ಸುತ್ತಾಡಿ ಬರಲು ಹೊರಡುವ ಹೆಜ್ಜೆಯೋ, ಒಂದು ವಾರದ ಯಾನವೋ, ಅಥವಾ ಕೇವಲ ಒಂದು ಇಳಿ ಸಂಜೆ ನಗರದ ಬೀದಿಯಲ್ಲಿ ಸುತ್ತಿಬರುವ ಕ್ಷಣವೂ - ಇವುಗಳೆಲ್ಲ ಮಹಿಳೆಯ ಸ್ವಾಯತ್ತತೆಯ ಘೋಷಣೆಗಳಾದರೆ ಅಚ್ಚರಿಯೇನಿಲ್ಲ. ಸೀಮೆಗಳನ್ನು ಮೀರುವ ಹೆಜ್ಜೆಗಳ ಕಥೆಗಳು ಹುಟ್ಟುತ್ತವೆಯಷ್ಟೆ.
ಅವಳ ಈ ನಡೆ ಮನಸ್ಸಿನ ಗಡಿಗಳನ್ನು, ಸಾಮಾಜಿಕ ಗಡಿಗಳನ್ನು, ಸಂಸ್ಕೃತಿಯ ಹೆಸರಿನಲ್ಲಿ ಕಟ್ಟಿದ ಮಿತಿಗಳನ್ನು ಪ್ರಶ್ನಿಸುವುದಲ್ಲ. ಅವಳು ಜಗತ್ತಿನ ವಿರುದ್ಧ ಯಾವ ಯುದ್ಧವೂ ಮಾಡುತ್ತಿಲ್ಲ. ತನ್ನ ಜೀವನದ ಮೇಲೆ ಹಕ್ಕು ಸ್ಥಾಪಿಸುತ್ತಿದ್ದಾಳೆ!
ಕೊನೆಗೆ, ಆ ಹಕ್ಕನ್ನು ಅನುಭವಿಸುವ ಅವಳ ಪ್ರತಿಯೊಂದು ಯಾನವೂ ಎಷ್ಟು ಸಣ್ಣದಾದರೂ, ಪ್ರತಿರೋಧವೆನಿಸಿಕೊಂಡರೂ, ಮಹಿಳೆ ತನ್ನ ಆಯ್ಕೆಯನ್ನು ಉಳಿಸಿಕೊಳ್ಳಲು ತೆಗೆದುಕೊಳ್ಳುವ ಆ ಹೆಜ್ಜೆಯೇ ಸಮಾಜದ ಅತಿ ದೊಡ್ಡ ಬದಲಾವಣೆಯ ಆರಂಭವಾಗುತ್ತದೆ. ಅದುವೇ ಅವಳ ಸೀಮೋಲ್ಲಂಘನವೆನಿಸಿಕೊಳ್ಳುತ್ತದೆ ಅಷ್ಟೇ.