ಮಹಿಳೆಯರ ಮಾನಸಿಕ ನೆಮ್ಮದಿಗೆ ಪ್ರವಾಸದ ಮದ್ದು ನೀಡಿ
ಮಹಿಳೆಯರಿಗೆ ಮೀಸಲಿರುವ ಗುಂಪು ಪ್ರವಾಸ, ರಿಟ್ರೀಟ್‌ಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಗೊತ್ತಿಲ್ಲದ ಊರು, ಗೊತ್ತಿಲ್ಲದ ಜನರ ನಡುವಿನ ಪ್ರವಾಸಗಳು ಆಳವಾದ ಸಂಬಂಧದ ಸಂಪರ್ಕ ಸೇತುವೆಗಳಾಗಿ ಮಾರ್ಪಾಡುವುದರಲ್ಲಿ ಎರಡು ಮಾತಿಲ್ಲ. ಮಹಿಳೆಯರು ಒಟ್ಟಿಗೆ ಪ್ರಯಾಣಿಸುವಾಗ ತಮ್ಮ ವೃತ್ತಿ ಬದುಕಿನ ಹೋರಾಟದ ಕಥೆಗಳನ್ನು, ತಾಯ್ತನದ ಬೆಸುಗೆಗಳನ್ನು, ಸಂಬಂಧಗಳ ಕನವರಿಕೆಗಳನ್ನು, ಕನಸು-ಭಯಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಂಡು ಮನಸನ್ನು ಹಗುರಾಗಿಸಿಕೊಳ್ಳುತ್ತಾರೆ. ಇದು ಮಾನಸಿಕ ಆರೋಗ್ಯಕ್ಕೂ ಉತ್ತಮ ಮೆಡಿಸಿನ್.
- ಡಾ.ಶ್ವೇತಾ ಬಿಸಿ
ಸಹಾಯಕ ಪ್ರಾಧ್ಯಾಪಕಿ, ಲೇಖಕಿ, ಮನೋವಿಜ್ಞಾನಿ
ಮಾರ್ಚ್.8 ಅಂತಾರಾಷ್ಟ್ರೀಯ ಮಹಿಳಾ ದಿನ. ಇಡೀ ಪ್ರಪಂಚವೇ ಮಹಿಳೆಯರ ಶಕ್ತಿ, ಚೇತರಿಸಿಕೊಳ್ಳುವ ಗುಣ ಹಾಗೂ ಅವಳ ಸಾಧನೆಗಳನ್ನು ಈ ದಿನದಂದು ಎತ್ತಿಹಿಡಿದು ಸಂಭ್ರಮಿಸುತ್ತದೆ. ಮಹಿಳೆಯರ ಪ್ರಗತಿ ಮತ್ತು ಆಕೆ ಎದುರಿಸುವ ಸವಾಲುಗಳನ್ನು ಗುರುತಿಸಿ ಜಾಗೃತಿ ಮೂಡಿಸುವುದು ಈ ದಿನದ ಮಹತ್ವ. ನಮ್ಮೆಲ್ಲರ ಮಾತುಕತೆಗಳು ಮಹಿಳಾ ನಾಯಕತ್ವ, ಸಮಾನತೆ ಹಾಗೂ ಸಬಲೀಕರಣದ ಕುರಿತಾದವುಗಳೇ ಆಗಿರುತ್ತವೆ. ಈ ಹೊತ್ತಿನಲ್ಲಿ ನಮ್ಮ ಆದ್ಯತೆ ಬಯಸುವುದು ʻಮಹಿಳೆಯರ ಪ್ರವಾಸʼ.
ಇದನ್ನೂ ಓದಿ: ಪ್ರವಾಸದಲ್ಲಿ ಮಹಿಳೆಯರ ಮೈಮನ ಗಟ್ಟಿಯಾಗಿರಲಿ
ಎಷ್ಟೋ ಮಹಿಳೆಯರಿಗೆ ಪ್ರವಾಸ ಕೇವಲ ಒಂದು ವಿರಾಮವಲ್ಲ, ಅದು ಮಹಿಳೆ ತನ್ನ ಏಕಾಂತದ ಬಿಡುವನ್ನು, ಅಸ್ಮಿತೆಯನ್ನು ಜತೆಗೆ ಮಾನಸಿಕ ನೆಮ್ಮದಿಯನ್ನು ಮರುಪಡೆಯುವ ಸಂಗತಿ. ಸದಾ ಕುಟುಂಬದ ಆರೈಕೆ, ವೃತ್ತಿ, ಸಂಬಂಧ, ಸಾಮಾಜಿಕ ನಿರೀಕ್ಷೆಗಳನ್ನು ಸರಿದೂಗಿಸಲು ಹೆಣಗಾಡುವ ಹೆಣ್ಣಿಗೆ ಪ್ರವಾಸ, ತನ್ನನ್ನು ತಾನು ಭಾವನಾತ್ಮಕವಾಗಿ ಗುಣಪಡಿಸಿಕೊಳ್ಳಲು ಇರುವ ಶಕ್ತಿಯುತವಾದ ಒಡನಾಡಿ ಆಗಿರುತ್ತದೆ.
ತನಕೆ ಗೊತ್ತಿಲ್ಲದೆ ಹೆಣ್ಣು ಹೊರುವ ಭಾರಗಳು
ವಿಭಿನ್ನ ಸಂಸ್ಕೃತಿ-ಸಮಾಜಗಳ ನಡುವೆ ಹೆಣ್ಣು ತನಗೆ ಗೊತ್ತಿಲ್ಲದೆ ಕುಟುಂಬ ನಿರ್ವಹಣೆ, ಪೋಷಣೆ, ವೃತ್ತಿ ಹೀಗೆ ಅನೇಕ ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡು ಹೋರಾಡುತ್ತಿರುತ್ತಾಳೆ. ಆಧುನಿಕ ಮತ್ತು ಪ್ರಗತಿಶೀಲ ಸಮಾಜಗಳಲ್ಲೂ ಭಾವನಾತ್ಮಕ ಶ್ರಮದ ಹೊರೆ ಸದಾ ಮಹಿಳೆಯರ ಹೆಗಲೇರಿರುತ್ತದೆ. ಈ ನಿರಂತರ ಹೊರೆ ಆಕೆಯನ್ನು ಬಳಲಿಸಿರುತ್ತದೆ. ಮಹಿಳೆಯರ ಮಾನಸಿಕ ಆರೋಗ್ಯದ ಸವಾಲುಗಳು ಜಾಗತಿಕವಾಗಿ ಹೆಚ್ಚಾಗಿವೆ. ಹಾರ್ಮೋನ್‌ಗಳ ಬದಲಾವಣೆ, ವೃತ್ತಿಯ ಹೆಣಗಾಟಗಳು, ಸುರಕ್ಷತೆಯ ಕಾಳಜಿ, ಸಾಮಾಜಿಕ ನಿರೀಕ್ಷೆಗಳೆಲ್ಲ ಸೇರಿ ಆಕೆಯನ್ನು ಒತ್ತಡಕ್ಕೆ ದೂಡಿಬಿಟ್ಟಿವೆ. ಈ ಎಲ್ಲಾ ಒತ್ತಡದ ನಡುವೆ ಮಹಿಳೆಯ ಮೇಲೆ ತನ್ನ ಭಾವನೆಗಳನ್ನು ನಿಯಂತ್ರಿಸುತ್ತಾ ಸಮಾಧಾನವಾಗಿ ಇರಬೇಕೆಂಬ ಷರತ್ತು ಬದ್ಧ ನಿಯಮವೂ ಜಾರಿಯಲ್ಲಿದೆ. ಈ ನಿಯಮದ ಚಕ್ರ ತಡೆಯಲು ಸಾಧ್ಯವಾಗುವುದು ʻಪ್ರವಾಸಕ್ಕಷ್ಟೇʼ.

ಒತ್ತಡ ನಿವಾರಣೆಗೆ ಪ್ರವಾಸ ಒಳ್ಳೆ ಮದ್ದು
ರೈಲು ಅಥವಾ ಬಸ್ ಹತ್ತಿ ಕಿಟಕಿಯಾಚೆಗೆ ಬೆಟ್ಟ-ಗುಡ್ಡಗಳ ನಡುವೆ ಮುಳುಗುವ ಸೂರ್ಯನನ್ನು ನೋಡುತ್ತಾ ಹೊಸ ಊರಿನ ಹೊಸದಾರಿ ಹಿಡಿಯುತ್ತ ಸ್ವತಂತ್ರವಾಗಿ ಸಂಚರಿಸುವಾಗ ಮನಸು ಹಗುರಾಗುತ್ತದೆ. ʻಪ್ರವಾಸʼಕ್ಕೆ ನಮ್ಮ ಯೋಚನೆಗಳನ್ನು ಕುತೂಹಲಗಳನ್ನಾಗಿ ಬದಲಾಯಿಸುವ ಮಾಂತ್ರಿಕ ಶಕ್ತಿ ಇದೆ. ಸಮುದ್ರದ ದಂಡೆಯ ಮೇಲೆ, ಐತಿಹಾಸಿಕ ತಾಣದ ಬೇದಿಗಳಲ್ಲಿ ನಡೆದಾಡುತ್ತಾ, ಯಾವುದೋ ಕೆಫೆಯಲ್ಲಿ ಕುಳಿತು ಕಾಫಿ ಹೀರುತ್ತಾ ಅಲ್ಲಿನ ಸ್ಥಳೀಯ ಜೀವನವನ್ನು ಹತ್ತಿರದಿಂದ ನೋಡಬೇಕು. ಅದು ಮನಸನ್ನು ಹಗುರಾಗಿಸುತ್ತದೆ. ಅದಕ್ಕೆ ಒತ್ತಡವನ್ನು ಉಂಟುಮಾಡುವ ಹಾರ್ಮೋನ್‌ಗಳನ್ನು ಶಮನಗೊಳಿಸುವ ಶಕ್ತಿ ಇದೆ.
ವಾರಾಂತ್ಯಗಳಲ್ಲಿ ಓಡಾಡಿ ಬಂದರೂ ಸಾಕು
ಸಂಶೋಧನೆಗಳ ಪ್ರಕಾರ ಸುಂದರ ಪ್ರಕೃತಿಯನ್ನು ಆಸ್ವಾಧಿಸುವುದರಿಂದ ಮನಸು- ಮನಸ್ಥಿತಿ ಪ್ರಫುಲ್ಲಗೊಳ್ಳುತ್ತದೆ. ದಿನನಿತ್ಯದ ಬದುಕಿನ ಜಂಜಾಟಗಳಿಂದ ಹೊರಬಂದ ಹೆಣ್ಣು ಪರ್ವತ ಶ್ರೇಣಿ, ಕಾಡಿನ ಮೌನ ಅಥವಾ ಅನುರಣಿಸುವ ಸಮುದ್ರದ ಅಲೆಗಳನ್ನು ನೋಡಬೇಕು. ಇದರಿಂದ ಮನಃಶಾಂತಿ ಕಂಡುಕೊಳ್ಳಬಹುದು. ಇದಕ್ಕೆ ದೊಡ್ಡ ಪ್ರವಾಸವೇ ಆಗಬೇಕಿಲ್ಲ. ವಾರಾಂತ್ಯಗಳಲ್ಲಿ ಒಂದು ಪುಟ್ಟ ಪ್ರವಾಸ ಮಾಡಿದರೂ ಸಾಕು.
ಸೆಲ್ಫ್ ಕಾಂಫಿಡೆನ್ಸ್ ತುಂಬುವ ಸೋಲೋ ಟ್ರಿಪ್
ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಸೋಲೋ ಟ್ರಿಪ್ ಸಾಕಷ್ಟು ಸದ್ದು ಮಾಡುತ್ತಿದೆ. ಒಮ್ಮೆ ಭಯವೆನಿಸುತ್ತಿದ್ದ ಸಂಗತಿ ಇಂದು ಭರವಸೆ ಹಾಗೂ ಸ್ವತಂತ್ರದ ಸಂಕೇತವಾಗಿದೆ. ಈ ಪ್ರಯಾಣ ಮಹಿಳೆಯರಿಗೆ ರಾಜಿ ಮಾಡಿಕೊಳ್ಳದೆ ಎಲ್ಲದರಲ್ಲಿಯೂ ಸ್ವತಂತ್ರ ಆಯ್ಕೆಗೆ ಅವಕಾಶ ನೀಡುತ್ತಿದೆ. ಇದು ಮಹಿಳೆಯರಲ್ಲಿ ಧೈರ್ಯ-ಸ್ಥೈರ್ಯಗಳನ್ನು ರೂಢಿಸಿಕೊಳ್ಳಲೂ ಸಾಕಷ್ಟು ಸಹಾಯ ಮಾಡುತ್ತಿದೆ. ಇಂಥ ಪ್ರಯಾಣದಲ್ಲಿ ಪರಿಚಯವಿಲ್ಲದ ದಾರಿಯಲ್ಲಿ ಓಡಾಡುವುದು, ಭಾಷೆ, ಭಾವನೆಗಳ ಸವಾಲುಗಳನ್ನು ಎದುರಿಸಲು ಯೋಜನೆಗಳನ್ನು ಹಠಾತ್ತನೆ ರೂಪಿಸುವುದು ಬದುಕಿಗೆ ಭರವಸೆ ಹಾಗೂ ನೈಪುಣ್ಯತೆಯನ್ನು ಕಟ್ಟಿಕೊಡುತ್ತದೆ. ಇದರಿಂದ ಮಹಿಳೆಯರಿಗೆ ʻನಾನು ಇದನ್ನು ನಿಭಾಯಿಸಬಲ್ಲೆ, ನನ್ನನ್ನು ನಾನು ನಂಬಬಲ್ಲೇʼ ಎಂಬ ಆತ್ಮಸ್ಥೈರ್ಯ ತುಂಬುತ್ತದೆ.
ಅಪರಿಚಿತರ ನಡುವೆ ಹಗುರಾಗುವ ಪ್ರವಾಸ
ಮಹಿಳೆಯರಿಗೆ ಮೀಸಲಿರುವ ಗುಂಪು ಪ್ರವಾಸ, ರಿಟ್ರೀಟ್‌ಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಗೊತ್ತಿಲ್ಲದ ಊರು, ಗೊತ್ತಿಲ್ಲದ ಜನರ ನಡುವಿನ ಪ್ರವಾಸಗಳು ಆಳವಾದ ಸಂಬಂಧದ ಸಂಪರ್ಕ ಸೇತುವೆಗಳಾಗಿ ಮಾರ್ಪಾಡುವುದರಲ್ಲಿ ಎರಡು ಮಾತಿಲ್ಲ. ಮಹಿಳೆಯರು ಒಟ್ಟಿಗೆ ಪ್ರಯಾಣಿಸುವಾಗ ತಮ್ಮ ವೃತ್ತಿ ಬದುಕಿನ ಹೋರಾಟದ ಕಥೆಗಳನ್ನು, ತಾಯ್ತನದ ಬೆಸುಗೆಗಳನ್ನು, ಸಂಬಂಧಗಳ ಕನವರಿಕೆಗಳನ್ನು, ಕನಸು-ಭಯಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಂಡು ಮನಸನ್ನು ಹಗುರಾಗಿಸಿಕೊಳ್ಳುತ್ತಾರೆ. ಇದು ಮಾನಸಿಕ ಆರೋಗ್ಯಕ್ಕೂ ಉತ್ತಮ ಮೆಡಿಸಿನ್. ಅಪರಿಚಿತ ಪರಿಸರ ಜನರ ಮನಸು- ಮನಸಿನ ನಡುವಿನ ಗೋಡೆಗಳನ್ನು ಕಡಿಮೆ ಮಾಡುತ್ತದೆ. ಇಂಥ ಪ್ರವಾಸಗಳು ಮಹಿಳೆಯರ ಒಂಟಿತನವನ್ನೂ ನಿವಾರಿಸಲು ಸಹಕಾರಿಯಾಗುತ್ತವೆ.
ಜವಾಬ್ದಾರಿಗಳಿಂದ ಮುಕ್ತವಾಗಬಹುದು
ಹೊಸ ಜಾಗದಲ್ಲಿ ಹೆಣ್ಣು ಮೂಲತಃ ತಾಯಿಯಾಗಿಯೋ, ಸಹೋದ್ಯೋಗಿಯಾಗಿಯೋ ಇರಬೇಕಿಲ್ಲ. ಆಕೆ ತನ್ನಷ್ಟಕ್ಕೆ ತಾನೇ ಇದ್ದುಬಿಡಬಹುದು ಹೊಸ ರುಚಿಯೊಂದನ್ನು ಸವಿಯುತ್ತ, ಹೊಸ ಭಾಷೆ ಕಲಿಯುತ್ತ, ಕಲೆ ಸಂಸ್ಕೃತಿಗಳ ನಡುವೆ ತನ್ನನ್ನು ತಾನು ಸ್ವತಂತ್ರವಾಗಿಸಿಕೊಳ್ಳಬಹುದು. ಈ ಹೊಸ ಅನುಭವಗಳು ಅವಳ ಕುತೂಹಲ ಹಾಗೂ ಸೃಜನಶೀಲತೆಗಳನ್ನು ಬಡಿದೆಬ್ಬಿಸುತ್ತವೆ. ಹೆಗಲಿಗೇರಿರುವ ಎಲ್ಲಾ ಜವಾಬ್ದಾರಿಗಳಿಂದ ಮುಕ್ತರಾಗಿ, ಬಯಸಿದಂತೆ ಇದ್ದುಬಿಡುಬಹುದು.

ತಂತ್ರಜ್ಞಾನಗಳ ಹೊರೆಯಿಂದ ಮುಕ್ತರಾಗಬೇಕಿದೆ
ಆಧುನಿಕ ಮಹಿಳೆಯ ಬಹುದೊಡ್ಡ ಹೊರೆ ತಂತ್ರಜ್ಞಾನ. ಸದಾ ಇ-ಮೇಲ್, ಸಾಮಾಜಿಕ ಮಾಧ್ಯಮಗಳು, ಕುಟುಂಬ ಸದಸ್ಯರ ವಾಟ್ಸಪ್ ಗ್ರೂಪ್ ಚಾಟ್‌ಗಳ ನಡುವೆ ಕಳೆದು ಹೋಗಿರುವ ಹೆಣ್ಣು ಮಕ್ಕಳಿಗೆ ಹಲವು ವಿಷಯಗಳು ಬಾಧಿಸುತ್ತವೆ. ಪ್ರವಾಸ ಈ ತಂತ್ರಜ್ಞಾನದ ಹೊರೆಯನ್ನು ಖಂಡಿತವಾಗಿಯೂ ಕಡಿಮೆಗೊಳಿಸುತ್ತದೆ. ವಿಶಾಲವಾದ ಸಮುದ್ರಕ್ಕೆ ಮುಖ ಮಾಡಿ ನಿಂತು ಅಥವಾ ನಿಶಬ್ಧ ಕಾಡುಗಳ ನಡುವೆ ನಡೆದು ಹೋಗುವಾಗ ಮನಸಿಗೆ ನೆಮ್ಮದಿ ಭಾಸವಾಗುತ್ತದೆ. ಡಿಜಿಟಲ್ ಡಿಟಾಕ್ಸ್ ಮಾನಸಿಕ ನೆಮ್ಮದಿ ನೀಡುತ್ತದೆ.
ಇದನ್ನೂ ಓದಿ: ರಾಮೇಶ್ವರಂನ ಪವಿತ್ರ ಪರಿಸರದಲ್ಲಿ ಅಂತಾರಾಷ್ಟೀಯ ಮಹಿಳೆಯರ ದಿನ
ಪ್ರವಾಸ ಬಿಡುಗಡೆಯಲ್ಲ- ವಿಸ್ತರಣೆ
ಪ್ರವಾಸ ಎಂಬುದು ಎಲ್ಲಾ ಸಮಸ್ಯೆಗಳಿಗೂ ಪರಿಹಾರವಾಗದೇ ಹೋಗಬಹುದು. ಆದರೆ ಅದನ್ನು ಬಿಡುಗಡೆಗಿಂತ ವಿಸ್ತರಣೆಯ ದೃಷ್ಟಿಯಲ್ಲಿ ನೋಡಬೇಕಾಗುತ್ತದೆ. ಇದು ಎಲ್ಲಾ ಮಹಿಳೆಯರಿಗೆ ಒತ್ತಡಕ್ಕಿಂತ ಜಗತ್ತು ದೊಡ್ಡದಿದೆ ಎಂಬುದನ್ನು ನೆನಪಿಸುತ್ತದೆ. ನಮ್ಮ ಶಕ್ತಿ, ಕುತೂಹಲ ಮತ್ತು ಸಹಾನುಭೂತಿಯನ್ನು ಪೋಷಿಸುತ್ತದೆ.
ಒಟ್ಟಾರೆ ಈ ಬಾರಿ ಅಂತಾರಾಷ್ಟ್ರೀಯ ಮಹಿಳಾ ದಿನ ಮಹಿಳಾ ಸಬಲೀಕರಣದ ಜತೆಗೆ ಅವಳ ಮಾನಸಿಕ ಆರೋಗ್ಯಕ್ಕೂ ಒತ್ತುನೀಡಬೇಕು ಏನಂತೀರಿ?