Saturday, June 13, 2026
Saturday, June 13, 2026

ಬ್ಯಾನೆಂಬ ಬ್ಯಾನೆಗೆ ಪರಿಹಾರವೆಂತು?

ಪ್ರಕೃತಿಯಲ್ಲಿ ಅಪಾಯ ಎಂಬುದು ಸಹಜ. ಕಾಡಿಗೆ ಹೋಗುವುದು ಅಂದರೆ ಅದು ಜೂ ಅಲ್ಲ ಎಂಬ ಅರಿವು ಇರಬೇಕು. ವನ್ಯಜೀವಿ ಪ್ರದೇಶಕ್ಕೆ ಹೋಗುವವರು ನಿಯಮ ಪಾಲಿಸಬೇಕು. ಗುಂಪಿನಿಂದ ದೂರ ಹೋಗಬಾರದು. ರಾತ್ರಿ ಸಂಚಾರ ತಪ್ಪಿಸಬೇಕು. ಸ್ಥಳೀಯ ಗೈಡ್ ಕಡ್ಡಾಯವಾಗಬೇಕು. ಹಾಗೂ ಏನಾದರೂ ಅವಘಡ ಸಂಭವಿಸಿದರೆ ತಂತ್ರಜ್ಞಾನ ಬಳಸಿ ಟ್ರ್ಯಾಕಿಂಗ್ ವ್ಯವಸ್ಥೆ ಮಾಡಬಹುದು. ಸೆನ್ಸರ್‌ಗಳು, ಡ್ರೋನ್‌ಗಳು, ವಾಕಿ-ಟಾಕಿಗಳು, ಜಿಪಿಎಸ್ ಮಾನಿಟರಿಂಗ್ — ಇವೆಲ್ಲವೂ ಇಂದು ಲಭ್ಯ.

ಕಾಡು ಅಂದ್ರೆ ಅದು ಕೇವಲ ಮರಗಳ ಗುಂಪಲ್ಲ. ನಿಜಾರ್ಥದಲ್ಲಿ ಅದು ಪ್ರಾಣಿಗಳ ಮನೆ ಅಥವಾ ಪ್ರಾಣಿಗಳ ರಾಜ್ಯ. ಅಷ್ಟೇ ಅಲ್ಲ ಕಾಡು ಎಂಬುದು ಮನುಷ್ಯನಿಗೆ ಪ್ರಕೃತಿಯೊಡನೆ ಸಂಪರ್ಕ ಸಾಧಿಸುವ ಮಹತ್ವದ ದಾರಿಗಳಲ್ಲೊಂದು. ಇದು ಎಲ್ಲರಿಗಿಂತ ಮೊದಲು ಅರ್ಥವಾಗಬೇಕಿರುವುದು ಸರಕಾರಕ್ಕೆ ಮತ್ತು ಅರಣ್ಯ ಇಲಾಖೆಯನ್ನು ನಿರ್ವಹಿಸುತ್ತಿರುವವರಿಗೆ. ಏನಾದರೂ ಅವಘಡ ನಡೆದಾಕ್ಷಣ ನಿಷೇಧ ಅಥವಾ ನಿರ್ಬಂಧವೇ ಪರಿಹಾರ ಎಂದು ಸರಕಾರ ಭಾವಿಸಿದಂತಿದೆ. ರಾಜ್ಯ ಸರಕಾರ ಇದೀಗ- ವನ್ಯಜೀವಿಗಳ ಸಂಚಾರವಿರುವ ಎಲ್ಲಾ ಕಾಡು ಪ್ರದೇಶಗಳ ಟ್ರೆಕ್ಕಿಂಗ್ ಮತ್ತು ಇಕೋ-ಟೂರಿಸಂ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.

ಇದನ್ನೂ ಓದಿ: ಭೂಮಿಯ ಮೇಲೆ ಅತ್ಯಾಚಾರವೆಸಗದಿರಿ!

ಕಳೆದ ಸೆಪ್ಟೆಂಬರ್ ಅಕ್ಟೋಬರ್ ನಲ್ಲಿ ಮಾನವ-ವನ್ಯಜೀವಿ ಸಂಘರ್ಷವನ್ನೇ ಮುಂದಿಟ್ಟುಕೊಂಡು ಸಫಾರಿ ಬ್ಯಾನ್ ಮಾಡಿದ್ದ ಸರಕಾರ ಈಗ ಟ್ರೆಕ್ಕಿಂಗ್ ಮತ್ತು ಇಕೋ ಟೂರಿಸಂ ನಿಷೇಧಿಸುವ ಮೂರ್ಖತನದ ನಿರ್ಧಾರವನ್ನು ತೆಗೆದುಕೊಂಡಿದೆ.

ನಿಜ. ಚಾಮರಾಜನಗರದ ಮಲೈಮಹದೇಶ್ವರ ಬೆಟ್ಟ ಪ್ರದೇಶದ ಕಾಡಿನಲ್ಲಿ ಚಿರತೆಯ ದಾಳಿಗೆ 10 ವರ್ಷದ ಬಾಲಕ ಬಲಿಯಾದ ದುರ್ಘಟನೆ ಯಾರನ್ನಾದರೂ ಕಲುಕುವಂಥದ್ದೇ. ಆದರೆ ಈಗ ತೆಗೆದುಕೊಂಡಿರುವ ನಿರ್ಧಾರದಿಂದ ಹೋಗಿರುವ ಜೀವಕ್ಕೆ ನ್ಯಾಯ ದೊರಕುತ್ತದೆಯೇ? ಅಥವಾ ಈ ನಿರ್ಧಾರ ಮೃತ ಆತ್ಮಕ್ಕೆ ಶಾಂತಿ ದೊರಕಿಸುತ್ತದೆಯೇ? ಒಂದು ದುರಂತ ಸಂಭವಿಸಿದರೆ, ಸಂಪೂರ್ಣ ಪ್ರವಾಸೋದ್ಯಮ ವ್ಯವಸ್ಥೆಯನ್ನೇ ನಿಲ್ಲಿಸುವುದು ಪರಿಹಾರವೇ?

ಇದು ಕೇವಲ ಟ್ರೆಕ್ಕರ್‌ಗಳ ವಿಚಾರವಲ್ಲ. ಕರ್ನಾಟಕದ ಪಶ್ಚಿಮ ಘಟ್ಟಗಳು, ಕಾಳಿ, ಕುದುರೆಮುಖ, ಕಾವೇರಿ ಅಭಯಾರಣ್ಯ, ಬ್ರಹ್ಮಗಿರಿ, ಸಕ್ರೆಬೈಲ್ ಸುತ್ತಮುತ್ತಲಿನ ಅನೇಕ ಗ್ರಾಮಗಳು ಇಂದು ಇಕೋ ಟೂರಿಸಂ ಮೇಲೆ ಬದುಕು ಕಟ್ಟಿಕೊಂಡಿವೆ. ಗೈಡ್‌ಗಳು, ಹೋಮ್‌ಸ್ಟೇ ಮಾಲೀಕರು, ಜೀಪ್ ಚಾಲಕರು, ಸಣ್ಣ ಹೊಟೇಲ್‌ಗಳು, ಸ್ಥಳೀಯ ಯುವಕರು — ಇವರೆಲ್ಲರ ಜೀವನ ಇಕೋ ಟೂರಿಸಂ ಮೇಲೆ ಅವಲಂಬಿತವಾಗಿದೆ.

ಒಂದು ದುರ್ಘಟನೆಯ ನಂತರ ಎಲ್ಲವನ್ನೂ ಬಂದ್ ಮಾಡಿಬಿಡುವುದೇ ಪರಿಹಾರವೆಂದು ಸರಕಾರ ಅಂದುಕೊಂಡಿರೋದೇಕೆ? ಇದನ್ನು ದೂರದೃಷ್ಟಿಯ ಕ್ರಮ ಅನ್ನುತ್ತಾರೆಯೇ? ರಸ್ತೆ ಅಪಘಾತಗಳು ನಡೆದರೆ ಹೈವೇ ಬಂದ್ ಮಾಡುವುದಿಲ್ಲ. ಸಮುದ್ರದಲ್ಲಿ ಯಾರಾದರೂ ಮುಳುಗಿದರೆ ಬೀಚ್‌ಗಳನ್ನು ಮುಚ್ಚುವುದಿಲ್ಲ. ಹೀಗಿರುವಾಗ ಕಾಡಿನಲ್ಲಿ ಏನಾದರೂ ದುರ್ಘಟನೆ ನಡೆದಾಗ ಮಾತ್ರ ನಿಷೇಧ ಯಾಕೆ?

ಪ್ರಕೃತಿಯಲ್ಲಿ ಅಪಾಯ ಎಂಬುದು ಸಹಜ. ಕಾಡಿಗೆ ಹೋಗುವುದು ಅಂದರೆ ಅದು ಜೂ ಅಲ್ಲ ಎಂಬ ಅರಿವು ಇರಬೇಕು. ವನ್ಯಜೀವಿ ಪ್ರದೇಶಕ್ಕೆ ಹೋಗುವವರು ನಿಯಮ ಪಾಲಿಸಬೇಕು. ಗುಂಪಿನಿಂದ ದೂರ ಹೋಗಬಾರದು. ರಾತ್ರಿ ಸಂಚಾರ ತಪ್ಪಿಸಬೇಕು. ಸ್ಥಳೀಯ ಗೈಡ್ ಕಡ್ಡಾಯವಾಗಬೇಕು. ಹಾಗೂ ಏನಾದರೂ ಅವಘಡ ಸಂಭವಿಸಿದರೆ ತಂತ್ರಜ್ಞಾನ ಬಳಸಿ ಟ್ರ್ಯಾಕಿಂಗ್ ವ್ಯವಸ್ಥೆ ಮಾಡಬಹುದು. ಸೆನ್ಸರ್‌ಗಳು, ಡ್ರೋನ್‌ಗಳು, ವಾಕಿ-ಟಾಕಿಗಳು, ಜಿಪಿಎಸ್ ಮಾನಿಟರಿಂಗ್ — ಇವೆಲ್ಲವೂ ಇಂದು ಲಭ್ಯ. ಆದರೆ ನಮ್ಮ ಸರಕಾರಕ್ಕೆ ನಿಯಂತ್ರಣಕ್ಕಿಂತ ನಿಷೇಧವೇ ಸುಲಭದ ಮಾರ್ಗವಾಗಿ ಕಾಣುತ್ತಿದೆ.

ಇನ್ನೊಂದು ಮಾತು. ಜನರನ್ನು ಕಾಡಿನಿಂದ ದೂರ ಇಡುವುದರಿಂದ, ಮಾನವನ ಪ್ರಕೃತಿ ಪ್ರೇಮವನ್ನು ನಾಶಮಾಡಿದಂತಾಗುತ್ತದೆಯೇ ಹೊರತು, ಇನ್ಯಾವ ಲಾಭವೂ ಆಗುವುದಿಲ್ಲ. ಕಾಡಿನ ಬಗ್ಗೆ ಜನರಲ್ಲಿ ಭಯದ ಬದಲು ಪ್ರೀತಿ ಉಂಟುಮಾಡಬೇಕು. ಹಾಗೆ ಮಾಡಲು ಮನುಷ್ಯನಿಗೆ ಕಾಡನ್ನು ಹತ್ತಿರವಾಗಿಸಬೇಕು. ಪ್ರಕೃತಿಯನ್ನು ಅನುಭವಿಸಿದವನಿಗೆ ಮಾತ್ರ ಪ್ರಕೃತಿಯ ಬಗ್ಗೆ ಪ್ರೀತಿ ಕಾಳಜಿ ಮತ್ತು ಗೌರವ ಇರಲು ಸಾಧ್ಯ. ಪ್ರಕೃತಿ(ಕಾಡು) ಅಪಾಯದಲ್ಲಿದ್ದಾಗ ಆತನೇ ಕಾಪಾಡಲು ಮುಂದೆ ಬರುತ್ತಾನೆ. ಟ್ರೆಕ್ಕಿಂಗ್, ಬರ್ಡ್ ವಾಚಿಂಗ್, ನೈಸರ್ಗಿಕ ಪ್ರವಾಸ — ಇವೆಲ್ಲವೂ ಪರಿಸರ ಶಿಕ್ಷಣದ ಭಾಗ. ನಗರಗಳಲ್ಲಿ ಬೆಳೆದ ಯುವಕರಿಗೆ ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸುವ ಅವಕಾಶ ಕಡಿಮೆಯಾಗುತ್ತಿರುವ ಈ ಸಮಯದಲ್ಲಿ, ಇಂಥ ನಿಷೇಧಗಳು ಅವರನ್ನು ಇನ್ನಷ್ಟು ದೂರ ಮಾಡುತ್ತವೆ.

ಸರಕಾರ SOP ಗಳು, ಗೈಡ್‌ಲೈನ್‌ಗಳು, ನಿಯಂತ್ರಿತ ಪ್ರವೇಶ ವ್ಯವಸ್ಥೆಗಳನ್ನು ಬಲಪಡಿಸಬೇಕು. ಅಪಾಯಕಾರಿ ಪ್ರದೇಶಗಳನ್ನು ತಾತ್ಕಾಲಿಕವಾಗಿ ಮುಚ್ಚಬಹುದು. ಆದರೆ ಎಲ್ಲಾ ಟ್ರೆಕ್ಕಿಂಗ್ ಮಾರ್ಗಗಳು ಬಂದ್ ಎನ್ನುವ ಕ್ರಮ ಅತಿರೇಕದ ಪ್ರತಿಕ್ರಿಯೆ ಅಲ್ಲದೆ ಬೇರೇನೂ ಅಲ್ಲ. ಚಾರಣ ಮತ್ತು ಪ್ರಕೃತಿ ನಡುವೆ ಹೋಗಲೆಂದು ಬೇಸಗೆಯಲ್ಲಿ ಎಷ್ಟೊಂದು ಪ್ಲಾನ್ ಗಳಾಗಿರುತ್ತವೆ. ಇಂಥ ಸಂದರ್ಭದಲ್ಲಿ ನಿಷೇಧ ಹೇರುವುದು ಪ್ರವಾಸಿಗರ ಉತ್ಸಾಹಕ್ಕೆ ತಣ್ಣೀರೆರಚಿದ ಹಾಗೆ. ಮಾತ್ರವಲ್ಲ, ಪ್ರವಾಸಿಗರನ್ನು ನಂಬಿಕೊಂಡಿರುವ ಎಲ್ಲ ಉದ್ಯಮಗಳಿಗೆ ಭರಿಸಲಾಗದ ನಷ್ಟ. ಪ್ರವಾಸೋದ್ಯಮ ಕೇವಲ ಹವ್ಯಾಸವಲ್ಲ. ಅದು ಸಾವಿರಾರು ಕುಟುಂಬಗಳ ಆರ್ಥಿಕ ಚಕ್ರ. ಕರ್ನಾಟಕ ಇಂದು ಭಾರತದ ಪ್ರಮುಖ ಇಕೋ-ಟೂರಿಸಂ ರಾಜ್ಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇಂಥ ಸಮಯದಲ್ಲಿ ಭಯದ ಆಧಾರದ ಮೇಲೆ ತೆಗೆದುಕೊಳ್ಳುವ ನಿರ್ಧಾರಗಳು ರಾಜ್ಯದ ಪ್ರವಾಸೋದ್ಯಮದ ಭವಿಷ್ಯಕ್ಕೂ ಹೊಡೆತ ನೀಡಬಹುದು.

ಕಾಡುಗಳನ್ನು ಕಾಪಾಡಬೇಕು. ಜೀವಗಳನ್ನು ಕೂಡ ಕಾಪಾಡಬೇಕು. ಆದರೆ ಪರಿಹಾರ ಎಂದರೆ ಬಾಗಿಲು ಮುಚ್ಚುವುದಲ್ಲ; ಬಾಗಿಲಿನ ಮುಂದೆ ನಿಂತು ಅಭಯ ನೀಡುವುದು. ಪ್ರಕೃತಿಯನ್ನಾಗಲೀ ಕಾಡುಪ್ರಾಣಿಯನ್ನಾಗಲೀ ನಾವು ಪಳಗಿಸಲಾಗುವುದಿಲ್ಲ. ಆದರೆ ಮನುಷ್ಯನನ್ನು ಕಟ್ಟುನಿಟ್ಟಾದ ನಿಯಮಾವಳಿಗಳ ಮೂಲಕ ಪಳಗಿಸಬಹುದು. ಆ ಕೆಲಸ ಮಾಡುವುದರ ಬದಲು ತಾತ್ಕಾಲಿಕ ಅಥವಾ ಸಂಪೂರ್ಣ ನಿಷೇಧ ಹೇರುವುದು ಅಪ್ರಬುದ್ಧ ನಿರ್ಧಾರ ಎನಿಸಿಕೊಳ್ಳುತ್ತಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!